ಸುಡುಗಾಡಿನ ಹಾಡು
ಹಾಸಿದ ಹಾಸಿಗೆಯಲಿ
ಮುಳ್ಳಿನ ಸಸಿಗಳ ಉದ್ಭವ
ಹಾಕಿಕೊಂಡು ತಿರುಗಾಡುವ ಚಪ್ಪಲಿಯಲಿ
ಏನೋ ಚುಚ್ಚುತಿರುವ ಅನುಭವ
ಮಣ್ಣಲ್ಲಿ ಸಸಿಗಳು ಹುಟ್ಟುವುದೇಕೊ…
ಯಾರ್ಯಾರ ಕಾಲಲ್ಲೊ
ತುಳಿತಕ್ಕೊಳಗಾಗುವುದೇಕೋ…
ಏನೂ ತಿಳಿಯದ ಗೊಂದಲ.
ಹುಟ್ಟು ತಿಳಯುತ್ತಿದ್ದಂತೇ
ವಿಷಗೊಬ್ಬರದ ಮಜ್ಜನವೇಕಿಲ್ಲೋ…
ಬದುಕು ತಿಳಿಯುತ್ತಿದ್ದಂತೇ
ತಕ್ಷಣ ಕಿತ್ತುಹಾಕಿಬಿಡುವ ಸಾಹಸವೇಕಿಲ್ಲೋ…
ಏನೂ ತಿಳಿಯದ ಗೊಂದಲ.
ಎಲ್ಲವೂ ಸುಡುಗಾಡು
ಎಲ್ಲರಲ್ಲೂ ಸುಡುಗಾಡಿನ ಹಾಡು
ಯಾವುದನ್ನು ನಂಬಿ
ಯಾವ ಹಾಡ ಹಾಡಲಿ ನಾ…
ಏನೂ ತಿಳಿಯದ ಗೊಂದಲ.
– ಶ್ರೀಮಂತ ರಾಜೇಶ್ವರಿ ಯನಗುಂಟಿ
ಚಂದುಳ್ಳಿ ಚೆಲುವೀ ನಮ್ಮ ಉತ್ತರ ಕರ್ನಾಟಕದಾಕಿ
ಏನ್ ಚಂದ ಕಾಣಿಸ್ತಿ ನೀ ಹುಡುಗಿ ಉತ್ತರ ಕರ್ನಾಟಕದಾಕಿ,
ಇಳಕಲ್ ಸೀರೆ ಹುಟ್ಟು ಭಾಳ ಚಂದ ಕಾಣಾಕಿ ||ಪ||
ಚಂಡು ಹೂ ಮಲ್ಲಿಗೆ ಮುಡಿದು ಸುವಾಸನೆಯ ಪರಿಮಳ ಬೀರಿದಾಕಿ,
ನೋಟದಲ್ಲೇ ಎಲ್ಲರ ಸೆಳೆದು ನಗುವ ಚೆಲ್ಲಾಕಿ ||ಪ||
ಹಾದಿ ಬೀದಿಲಿ ಎಲ್ಲ ನೋಡೋರ ದೃಷ್ಟಿ ಗೊಂಬಿ ಆದಾಕಿ,
ಆಡಿಸ್ಯಾಡೊ ಮಾವಂದಿರ ಬಾಯಲ್ಲಿ ಸಣ್ಣ ಸೊಸೆಯಾಂಗ ಕಂಡಾಕಿ ||ಪ||
ಹಣೆಯ ಮೇಲೆ ದುಂಡನೆ ಕುಂಕುಮ ಬೊಟ್ಟು ಇಟ್ಟುಕೊಂಡಾಕಿ,
ವಾಲೆ, ಜುಮುಕಿ ಮೂಗುತ್ತಿ ಹಾಕಿಕೊಂಡು ರೂಪವತಿಯಂತೆ ಕಾಣಸಾಕಿ ||ಪ||
ಉಢಾಳ ಹುಡುಗರ ಪ್ರೇಮಕ್ಕೆ ಕೆಂಪು ಗುಲಾಬಿ ಆದಾಕಿ,
ಓಣಿ ಮಂದಿಗೆಲ್ಲ ಈಕಿ ನೆಚ್ಚಿನ ಹುಡುಗಿಯಂತೆ ತೋರಾಕಿ ||ಪ||
ತುಂಬು ಸೆರಗ ಹೊದ್ದು ಹಿರಿಯರಿಗೆ ಗೌರವ ನೀಡಾಕಿ,
ವಾರಿಯ ಹುಡುಗೀರ ಕೂಡಾ ಸೇರಿ ಮಾತಿನ ಮಲ್ಲಿ ಆದಾಕಿ ||ಪ||
ಮನೆ ಮಂದಿಗೆಲ್ಲ ನೀ ಹುಡುಗಿ ಚೆಲುವ ಚೆಂದಾಕಿ,
ಏನೋ ಸ್ವಲ್ಪ ಬೈದರ ಅತ್ತು ರಂಪ ಮಾಡಾಕಿ ||ಪ||
ಸಂಜೆ ಹೊತ್ತು ಕುರಿ ಹಿಂಡಿನಲ್ಲಿ ದಿನಾ ಹೋಗಾಕಿ,
ಯಾರರ ಗಂಡಸರು ನೋಡಿದರ ನಾಚಿ ನೀರ ಆಗಾಕಿ ||ಪ||
ಭಾಳ ಭಾಳ ಚಂದದ ಹಾಡ ಹಾಡಿ ಮಕ್ಕಳನ ನಕ್ಕು ನಲಿಸಾಕಿ,
ಏನೋ ತಪ್ಪ ಆತಂದ್ರ ಸಾಲಿ ಹುಡುಗರ ಕೂಡಿ ಜಗಳ ಆಡಾಕಿ ||ಪ||
ಪುಟ್ಟ ಕೂಸು ಕಂದಮ್ಮಗಳ ಕಂಡ್ರ ಮುತ್ತಿನ ಮಳೆ ಸುರ್ಸಿ ಅಪ್ಪಿ ಮುದ್ದಾಡಕಿ,
ಮಳೆರಾಯಣ್ಣನ ನೆನೆದು ಮಳೆ ಸುರಿಸೊ ಎಂದು ರಾಗವಾಗಿ ಪದ ಹಾಡಾಕಿ ||ಪ||
ಹೊಲ ಗದ್ದೆಗೆ ಬಂದು ಅಪ್ಪ ಅವ್ವಗ ನೆರವಾಗಾಕಿ,
ತಾನು ಯಾರ್ಗು ಕಮ್ಮಿ ಇಲ್ಲ ಅಂತ ಗಂಡಸಿನಂಗ ದಿನಾ ದುಡಿಯಾಕಿ ||ಪ||
ಬೀರು ದೇವರಮನಿ
ಹಂಪಿಯ ಸ್ವಗತ
ಬಟ್ಟ ಬಯಲಲಿ ನಿಂತು
ಕೆಟ್ಟ ಕತ್ತಿಯ ಪೆಟ್ಟುಗಳಿಗೆ
ಸುಟ್ಟ ಮುಖಗಳ ನೋಟಕೆ
ಸಾಕ್ಷಿ ಆಗಿ ನಿಂತಿಹೆ ನಾನು
ಹೊಸ್ತಿಲಲಿ ಹಚ್ಚಿಟ್ಟ ಹಣತೆಗಳ
ಕಿಡಿಯಾಗಿ ಹೊತ್ತಿಸಿದ ಹುಂಬರ
ಹೃದಯಹೀನ ಕೃತ್ಯಕೆ
ಸಾಕ್ಷಿ ಆಗಿ ನಿಂತಿಹೆ ನಾನು
ಮೊನ್ನೆ ಮೊನ್ನೆ ಮೂಗುಮಟ್ಟ
ಮೃಷ್ಟಾನ್ನ ತಿಂದುಂಡು
ಮನೆಗೇ ಕನ್ನಇಟ್ಟ ಮಾತೃದ್ರೋಹಿ ಕೆಲಸಕೆ
ಸಾಕ್ಷಿ ಆಗಿ ನಿಂತಿಹೆ ನಾನು
ಹೊನ್ನ ಹಸಿರಿನ ಭೂಮಿ ಇಂದು
ಹಾಳು ಹಂಪೆಯೆಂದಾಯ್ತು
ಹೇಡಿ ಹುಂಬರು ದೋಚಿದ ಕೃತ್ಯಕೆ
ಸಾಕ್ಷಿ ಆಗಿ ನಿಂತಿಹೆ ನಾನು
ಎದುರು ನೋಡುತ್ತಿರುವೆ ಶತಮಾನಗಳಿಂದ
ಶ್ರೀ ಕೃಷ್ಣದೇವರಾಯರ ಬರವ
ಬೇಡುತ್ತಲಿರುವೆ ನಾನವರ ಹೃದಯಾಳದಿಂದ
ಮತ್ತೆ ಉದ್ಧರಿಸೋ ಹಿಡಿದೆನ್ನ ಕರವ
— ವಿದ್ಯಾ ನಾಯಕ್
ನೀನೊಂದು…
ನೀನೊಂದು ಅಳಲು
ಭಾವಗಳಲಿ
ನೀನೊಂದು ಕೊಳಲು
ರಾಗಗಳಲಿ
ನೀನೊಂದು ಮೇಘ
ಕಣ್ಣೀರಲಿ
ನೀನೊಂದು ರಾಗ
ಕವನದಲಿ
ನೀನೊಂದು ಮನಸು
ಕರುಣೆಯಲಿ
ನೀನೊಂದು ಕನಸು
ಕಮರಿನಲಿ
ನೀನೊಂದು ನೋಟ
ನೋಟದಲಿ
ನೀನೊಂದು ಮಾಟ
ಚೆಲುವಿನಲಿ
ನೀನೊಂದು ಕವನ
ಪದಗಳಲಿ
ನೀನೊಂದು ದವನ
ವಾಸನೆಯಲಿ
ನೀನೊಂದು ಮೌನ
ಮನಸಿನಲಿ
ನೀನೊಂದು ಧ್ಯಾನ
ಕನಸಿನಲಿ
ನೀನೊಂದು ಆಸೆ
ಬವಣೆಯಲಿ
ನೀನೊಂದು ಭಾಷೆ
ಮಾತಿನಲಿ
ನೀನೊಂದು ದೇಹ
ಉಸಿರಾಟದಲಿ
ನೀನೊಂದು ದಾಹ
ಜಂಜಾಟದಲಿ
ನೀನೊಂದು ಕೃತಿ
ಬರವಣಿಗೆಯಲಿ
ನೀನೊಂದು ಸ್ಮತಿ
ಕನವರಿಕೆಯಲಿ
ನೀನೊಂದು ಮಗು
ಮನಸಿನಲಿ
ನೀನೊಂದು ನಗು
ನಲಿವಿನಲಿ
-ಕ.ಲ.ರಘು
ಆಕಾಶದಿಂದ ನಕ್ಷತ್ರಗಳ ತಂದು ನಿನ್ನ ಮಗ್ಗಲಲ್ಲಿ ಹರಡಬೇಕೆಂದಿದ್ದೆ
ನನ್ನೆದುರು ದಿಟ್ಟಿಸುವ ಕಣ್ಣುಗಳು
ಒಪ್ಪಲಿಲ್ಲ
ಮೋಡಗಳ ತಂದು ನಿನ್ನ
ಬೆರಳ ತುದಿಗೆ
ಅಂಟಿಸಬೇಕೆಂದಿದ್ದೆ
ಸನಿಹವೇ ಅನುರಾಗ ಬಿತ್ತುತ್ತಿದ್ದ ಅವು
ಒಪ್ಪಲಿಲ್ಲ; ಪ್ರತಿಯಾಗಿ ರಾಗದ ನದಿ ಹರಿಸಿದವು
ಜಗತ್ತಿನಲ್ಲಿ ಇರುವ ಹೂಗಳ ಪರಿಮಳ ತಂದು ನಿನ್ನಲ್ಲಿ
ತುಂಬಬೇಕೆಂದುಕೊಂಡಿದ್ದೆ
ಹೆರಳ ಪರಿಮಳ
ಅನುಮತಿಸಲಿಲ್ಲ
ಕನಸು ಆಲೋಚನೆಯ ತುಂಬಾ
ಸ್ನಾನದ ಪರಿಮಳ ಎದೆಯ ಬಿತ್ತಿತು
ಜಗತ್ತಿನ ಸುಂದರಿಯರ ಬಿಂಕ
ತಂದು ನಿನ್ನ ಎದೆಯಲ್ಲಿ ಬಿತ್ತಬೇಕು
ಅಂದುಕೊಂಡಿದ್ದೆ
ಒಂದು ನಗು ,ಕಣ್ಣೋಟ
ಸಹಮತಿಸಲಿಲ್ಲ
ಕಣ್ಣುಗಳು ಬೇರೆಡೆ ಹೋಗದಂತೆ
ನಿನ್ನೆದುರು ಬಂಧಿಯಾಗಿದ್ದೇನೆ
ಕವಿಯಾಗಿ ಕವಿತೆ ಎದುರು
ಸೋತು ಕುಳಿತಿದ್ದೇನೆ
– ನಾಗರಾಜ್ ಹರಪನಹಳ್ಳಿ. ( ಕಾರವಾರ)
ಕನಸ ಬೆನ್ನಟ್ಟಿದಾಗ ಇರುದೆಲ್ಲವೂ
ಎದೆಗೆ ಒದ್ದು ಪ್ರಶ್ನಿಸುತ್ತಿದೆ.
ಹೆಜ್ಜೆಯಿಡುವ ಬೀದಿಯಲ್ಲೆಲ್ಲ ಚುಂಬಕವಿದೆ.
ಸರಪಳಿಗಳು ರಕ್ತಜೀಜಾಸುರನ ಸಂತತಿಯಂತಾಗಿದೆ.
ಹೌದು, ಪಾದಗಳ ನಂಬಿಕೆಯಿಲ್ಲಿಲ್ಲ,
ರೆಕ್ಕೆಗಳಿಗೆ ರಾಕೇಟು ಕಟ್ಟಬೇಕಾಗಿದೆ.
ಗಡಿಯಾರದ ಕ್ಷಣ ಮುಳ್ಳುಗಳೂ
ಕಾಲಡಿಗೆ ಬಿದ್ದು ಹೆಜ್ಜೆತಪ್ಪಿಸುತ್ತಿದೆ.
ಟಿಕ್ ಟಿಕ್ ಶಬ್ದಗಳೊಂದಿಗೆ
ನಿರಂತರ ಹಂಗಿಸುವಿಕೆ ಶುರಹಚ್ಚಿಕೊಂಡಿದೆ.
ಕಿವಿಗಳ ಕಿತ್ತೆಸೆದು ರೆಕ್ಕೆಗಳಿಗೆ;
ಸೂಪರ್ ಸಾನಿಕ್ ಕಟ್ಟಲೇಬೇಕಿದೆ.
ಹೆಗಲಮೇಲಿನ ಕಟ್ಟು ಕೆಳಗಿಳಿಸಿದರೆ,
ಕಟ್ಟಿಕೊಂಡ ರೆಕ್ಕೆಗಳಿಗೂ ಅರ್ಥವಿಲ್ಲ.
ಕಟ್ಟುಗಳನ್ನು ಎದೆಚರ್ಮಕ್ಕೆ ಹೊಲಿದು
ಇತರೆ ಇತ್ಯಾದಿ ಶಕ್ತಿಗಳ ಜೋಡಿಸಿ
ರಾಕೇಟಿನ ವೇಗ ಹೆಚ್ಚಿಸಬೇಕಾಗಿದೆ.
ದೃಡವಾಗಿ ಚಲಿಸಬೇಕಷ್ಟೆ ಅಂಜದೇ.
ಅದೋ ಅಲ್ಲೇ ಇದೆ ಕನಸು
ತುಂಬಾ ದೂರವೇನಿಲ್ಲ, ಮೊಡಮುಸುಕಿ;
ಕೊಂಚ ಮಬ್ಬು ಮಬ್ಬಾಗಿದೆಯಷ್ಟೆ.
ಮಳೆ ಸುರಿದು ತಿಳಿಯಾದರೆ ಗೊಚರಿಸುತ್ತದೆ.
~ ಬಾಪು ಅಮ್ಮೆಂಬಳ
ಬರಿದಾಗಿಬಿಡಲಿ
ಬರಿದಾಗಿಬಿಡಲಿ ಈ ಭಾವದೊಡಲು;
ಕಂಬನಿಯ ಹನಿಯಾಗೋ,
ವೇದನೆಯ ದನಿಯಾಗೋ,
ಹೇಗಾದರೂ ಹೊರಹರಿದು ಬರಿದಾಗಿಬಿಡಲಿ.
ನೆನಪಿನ ನೆಪದಲ್ಲಿ
ಉಳಿದ ನೋವಿನ ನೆರಳು,
ಕನಸಿನ ಹೆಸರಲ್ಲಿ
ಸುಳಿವ ಆಸೆಯ ಮರುಳು,
ಹೃದಯದಲಿ ಒಲವಾಗಿ
ಹೊಕ್ಕ ಬಯಕೆಯ ಸರಳು,
ಎದೆ ಬಿರಿಯುವ ಮುನ್ನ
ಹೊರಹೋಗಿಬಿಡಲಿ,
ಬರಿದಾಗಿಬಿಡಲಿ.
ಫಲದ ಹೊಸಿಲಲಿ ಮಡಿದ
ವರುಷಗಳ ಜತನ,
ಬಿಗಿದ ಕೊರಳಲೆ ಮುಗಿದ
ಭಾವಗಳ ಕಥನ,
ಸೋತ ನಿರೀಕ್ಷೆಗಳಲಿ
ಇನ್ನೂ ಉಳಿದಿಹ ಪ್ರಾಣ,
ಕ್ಷಣಕ್ಷಣವು ಇರಿಯುತಲಿ
ಶಾಂತಿ ಕಳೆಯುವ ಬದಲು
ಬಾಳು ಬರಿದಾಗೇ ಇರಲಿ.
ಬರಿದಾಗಿಬಿಡಲಿ ಈ ಭಾವದೊಡಲು;
ಮತ್ತೆ ತುಂಬೆವೆನಿಲ್ಲಿ ಈ ಬಾರಿ ಎಚ್ಚರದಿ
ವಿರಹಕೆ ನಿಲುಕದ ಒಲವೊಂದನು,
ಸೋಲನ್ನೇ ಗೆಲುವಂತಹ ಬಲವೊಂದನು,
ಬರಿದಾಗಿ ಹೋಗದ ನಲಿವೊಂದನು,
ನನ್ನಲ್ಲೆ ಹುಟ್ಟಿ, ನನ್ನಲ್ಲೇ ಉಳಿದು
ಪರರಿಗೂ ನೀಡಬಲ್ಲ ನೆಮ್ಮದಿಯೊಂದನು….
–ವಿನಾಯಕ ಅರಳಸುರಳಿ,
"ಕೈಗೆಟುಕದ ಒಲವು"
ಒಲವಿನ ಹುಡುಗಿ ಕೈಕೊಟ್ಟ ಮೇಲೆ
ಇನ್ನೇನು ತಾನೇ ಉಳಕೊಂಡಿದೆ
ಆಗೋದೆಲ್ಲಾ ಆಯ್ತು ಅಳಬೇಡಾ ಪರಮೇಶಿ
ಮನೆಯಾಗೆ ತುಂಬಾ ಕ್ಯಾಮೆಯಿದೆ ||ಪ||
ದೂರದೂರಿನ ಬೆಟ್ಟ ನುಣ್ಣಗೆ ಕಾಣುತೈತೋ ಪರಮೇಶಿ
ಕಲ್ಲು ಮುಳ್ಳು ತುಂಬಿಕೊಂಡಿವೆ ಅಲ್ಲಿ ಏನಿದೆ ಪುಟಗೋಶಿ
ನಿಂಗದು ಬ್ಯಾಡದ ವಿಷಯ ಏ ಏ ಏ
ಸುಮ್ಮಕೇ ನಡೆಯೋಲೊ ಶಿಷ್ಯ
ಬ್ಯಾಗು ಹಿಡಿ ಸೀದಾ ನಡಿ
ಕಣ್ಣೊರೆಸಿ ಬಸ್ಸು ಹಿಡಿ
ನೀನಿಲ್ದೇ ಇದ್ದರೇ ಬದುಕೋದೆ ಇಲ್ಲ
ಅಂತಾಕೆ ಹೇಳಿದ್ದು ನಾಟಕ
ನಿನಗಿಂತ ಒಳ್ಳೇ ಹುಡಗಂದು ಸಿಕ್ಕಿದೇ
ಅವಳ ಕೈಲೀಗ ಜಾತಕ
ಕಿತ್ತೋದ ಪ್ರೀತಿಗೆ ಮುಕ್ಕಾದ ಮೂರ್ತಿಗೆ
ಬೆಲೆಕೊಟ್ಟು ಬಂದ ದಡ್ಡ ನೀನು
ನನಗಿಂತ ಒಳ್ಳೇ ಹುಡುಗಿ ಸಿಗುತಾಳೆ
ಅಂತಾ ಕೊನೆ ಹೇಳಿ ಹೋದಳೇನು
ಹಬ್ಬದ ಸಂಭ್ರಮ ಮನಿಯಾಗಿಲ್ಲ
ನೀ ಇಲ್ಲ ಅಂತಾ ಕೊರಗ್ಯಾರಲ್ಲ
ಕಬ್ಬಿಗೆ ಒಳ್ಳೇ ಬೆಲೆಯೇ ಇಲ್ಲ
ತೋಟಕ್ಕೆ ನೀರು ಬಿಡೋರಿಲ್ಲ
ದೊಡ್ಡೆಮ್ಮೇ ಮತ್ತೇ ಈದೈತಲ್ಲಾ
ಹಾಲು ತುಪ್ಪ ಉಣ್ಣೋರಿಲ್ಲಾ
ಅತ್ತೆಯ ಮಗಳಿಗೆ ನಿಂದೇ ಚಿಂತೆ
ಆಗಾಗ ಪತ್ರ ಬರಿತಾಳಂತೆ
ಅವಳದೇ ನಿಜವಾದ ಪ್ರೀತಿಕನೋ
ಮಾಯವಾಗಿ ಬೆನ್ನಟ್ಟಿ ಬಂದೆ ಏನು?
ಬ್ಯಾಗು ಹಿಡಿ ಸೀದಾ ನಡಿ
ಊರಕಡೇ ದಾರಿ ಹಿಡಿ ||ಪ||
ಇದ್ದಕ್ಕಿದ್ದಂತೆ ಏನೇನೋ ನೆನಸಿ
ಕಣ್ಣ ನೀರು ತರಿಸೋದ್ಯಾಕೋ
ಮೋಸದ ಪ್ರೀತಿ ಮತ್ಯಾಕ ನೆನಿತಿ
ಗಂಟೊಂದ ಕಟ್ಟಿ ಮಣ್ಣಾಗಾಕೋ
ಪ್ರೀತಿ ಪಹರೆಗೆ ಜಾತಿ ಬೇಲಿಯ
ಕಟ್ಟಿಹೋದಾ ಕಟುಕಿಯೋ
ಅಂತರಂಗದ ಒಲವಿಗಿಂದು
ಅಂತಸ್ತಿನ ಬೇಲಿಯೋ
ಮರೆತೋಗೋ ದುಷ್ಟ ಹುಡುಗೀನ
ನಿನಗೈತಿ ಬ್ಯಾರೆ ಬದುಕಿನ್ನ
ಒಡನಾಡಿ ಗೆಳೆಯಾರು ನೆನಿತಾರೋ
ಊರಿಗೆ ಬಾ ಅಂತ ಕರಿತಾರೋ
ತಂಗಿಗೆ ಗಂಡು ನೋಡ್ಯಾರಂತ
ಅಣ್ಣಂಗು ಗಟ್ಟಿ ಮಾಡ್ಯಾರಂತ
ಅತ್ತೆಯ ಮಗಳು ನಿಂಗಂತ
ಗೊತ್ತಾಗಿ ಕುಂತಾಳೋ ಕಾಯುತ್ತಾ
ಅಪ್ಪಯ್ಯ ನಿನ್ನೇ ನೆನಿತಾನ
ಅವ್ವಂಗು ನಿಂದೆ ಯೋಚನೆ
ಬ್ಯಾಗು ಹಿಡಿ ಸೀದಾ ನಡಿ
ಊರು ಕಡೇ ದಾರಿ ಹಿಡಿ
-ಉಶಿರು (ಶಿವು)
ಪುಟ್ಟ ಮಣ್ಣ ಹಣತೆಗಳೇ
ತನ್ನ ಪಾಡಿಗೆ ಉರಿವ
ಮೌನ ಸುಂದರಿಗಳೇ
ಬರಮಾಡಿಕೊಳ್ಳುವೆ
ಎದೆಯಂಗಳವನ್ನು ಬೆಳಗು ಬಾ
ಗಾಡ ಕತ್ತಲೆಯ ತೆರೆ ಸರಿಸಿ
ಎಡರುಗಲ್ಲುಗಳಿಂದ ಕಾಲ್ತೆಗೆಸಿ
ಸೊಡರನೂಡು ಬಾ
ಸಾರಿಸಿದ ನೆಲ, ಅಲ್ಲಿ ರಂಗವಲ್ಲಿ
ಸೆಗಣಿ ಉಂಡೆಗೆ ಚೆಂಡು ಹೂವಿನ ಕಳಸ
ಕತ್ತಲೆಗೆ ಕಸೂತಿಯ ನೇಯ್ಗೆ
ಉರಿವ ಪುಟ್ಟ ಮಣ್ಣ ಹಣತೆಗಳೇ
ಗಾಳಿಯ ದಾಳಿಗೆ ಬೆತ್ತಲಾಗದೆ
ಬತ್ತಿಯ ಅಂಚು ಕರಕಲಾಗಿ
ಪಿಕ ಪಿಕನೆ ಕುಣಿದು ಆರುವ ಮುನ್ನವೇ
ಮತ್ತಷ್ಟು ಧೈರ್ಯ ತೈಲ
ತುಂಬಿ ತುಂಬಿ
ಹೊಳಪು ವೈಯ್ಯಾರದ ಚಿತ್ತಾರಗಳೇ
ಕೊತ ಕೊತ ಕುದಿವ ಚಿತ್ತಗಳಲೆಲ್ಲಾ
ಸಹಬಾಳ್ವೆಯನು ಭದ್ರ ಮಾಡುಬಾ
ಹಣಸಿ ಹಗುರಾಗಿಸುವ ದೀವಟಿಗೆಗಳೇ
ಉರಿದು ಹೊತ್ತೊಯ್ಯಿರಿ ಮನದ
ಮಲಿನ ಮಾಲಿನ್ಯಗಳನೂ
ಭುವಿಯ ಬೆಳಗ ಬನ್ನಿ
ಸಂಸ್ಕೃತಿಯನೆತ್ತಿ ಹಿಡಿದು
ಬಾಳ ಕಂದೀಲು ಕಂದದಂತೆ
-ಸುನೀತಾ ಕುಶಾಲನಗರ,
ಗೂಡು ದೀಪದೊಳಗೆ ಬೆಳಕನ್ನಿಟ್ಟು ಬಿಟ್ಟೆ
ಕರಾಳರಾತ್ರಿಯೆದುರು ಜಿದ್ದಿಗೆ ಬೀಳಲೆಂದು
ಸಹಾಯಕ್ಕೆ ಪುಕ್ಕಲನೊಬ್ಬನ ಆಗಮನ
ಚಂದ್ರ ಬಂದದ್ದು ಕತ್ತಲ ಸೆರಗಿನ ನೆರಿಗೆ ಹಿಡಿದು.
ಕತ್ತಲಿನ ಜೊತೆಗಾರ ಚುಕ್ಕಿತಾರೆ ಬಳಗವಂತೆ ವ್ಯವಿಚಾರಿ ಮೋಡವಂತೆ
ಬಾಲಕ್ಕೆ ಬೆಂಕಿ ಹತ್ತಿಸಿಕೊಂಡು ಹಾರುವ ಧೂಮಕೇತು,
ಮಿಂಚುಹುಳವೊಂದು ನಿನ್ನೆಡೆ ಬರುವೆನೆಂದಾಗ
ಮೂತಿ ಸಿಡುಕಿಕೊಂಡಿದ್ದ ಗೂಡುದೀಪ ಫಳ್ಳೆಂದು ನಕ್ಕಿತು.
ಗೂಡು ದೀಪ ತನ್ನ ಮೈಗೆ ಬೆಂಕಿ ತಗಲಿಸಿಕೊಂಡಿದ್ದೇ
ಕತ್ತಲಿನೆದುರಿಗಿನ ಕೊನೆಯ ಹೋರಾಟ,
ಚಂದ್ರ ಚುಕ್ಕಿ ಅವಿತರೆ ಧೂಮಕೇತು ಕರಗಿಹೋಯ್ತು
ಜೊತೆಗುಳಿದದ್ದಲ್ಲಿ ಉಸಿರು ಬಿಗಿಹಿಡಿದುಕೊಂಡ ಮಿಂಚುಹುಳದ ಹಾರಾಟ.
ಆಕಾಶದ ತುಂಬೆಲ್ಲ ದಟ್ಟ ಕಾರ್ಮೋಡ
ತನ್ನ ಬಲಹೆಚ್ಚಿತೆಂದು ಕತ್ತಲು ನಕ್ಕಿತು,
ಮೆಲ್ಲಗೆ ಕಣ್ಣುಜ್ಜಿ ಇಣುಕುತಿರಲು ಸೂರ್ಯ
ಗೂಡುದೀಪದ ಮಂದಹಾಸದೆದುರು ಕತ್ತಲೇ ಸತ್ತಿತು.
-ನಾಗರಾಜ ಕಡಲು ಉಪ್ಪುಂದ