ಪಂಜು ಕಾವ್ಯಧಾರೆ

ಅವ್ವ

ಸಂತಸದಿ ಹೊತ್ತವಳು
ನೋವೆಲ್ಲ ನುಂಗುತಲಿ
ಕನಸಲ್ಲೆ ಕಳೆಯುವಳು
ನವಮಾಸ ತುದಿವರೆಗು

ಮರುಜನ್ಮ ಪಡೆದವಳು
ಶಿಶುಕೈಗೆ ಜಾರುತಲಿ
ನೋವಲ್ಲು ನಕ್ಕವಳು
ಅಳುವಿನ ಕರೆಕೇಳಿ

ಕೈಹಿಡಿದು ನಡೆಸುವಳು
ಅಂಬೆಗಾಲು ತೊಡರಿರಲು
ಹಸಿಯದಿರು ಉಣಿಸುವಳು
ಕಾಳಜಿಗೂ ತವರಾಗಿ

ಒಂದೇಟು ನೀಡುವಳು
ತೊದಲಲ್ಲಿ ಪದತಪ್ಪಿರಲು
ರಮಿಸುತ್ತ ಮುದ್ದಿಸುವಳು
ಕಣ್ಣೀರು ಸುರಿಸುತಲಿ

ಆಸೆಗಳ ಹೊತ್ತವಳು
ಹೊಸಜೀವ ಚಿಗುರಿರಲು
ಅವಳೆನ್ನ ಹೆತ್ತವಳು
ಮುಡಿಪಿಡುವೆ ಕೇಳದಿರು

ಮಂಜು ಹೆಗಡೆ



ಇಚ್ಛಾಶಕ್ತಿ

ಬೆಟ್ಟದಮೇಲಿನ ತುದಿಯಲ್ಲಿ
ಒಡಲನೋವನ್ನಿಟ್ಟು
ಬಿಟ್ಟು ಬರಲು ಮನಸಿಲ್ಲ
ಒಲವ ಹಾದಿಯಲಿ ನಡೆವಾಗ ಜಾರಿದರೂ ಬೀಳಲಾರೆನು
ಬದುಕಿ ಬಾಳಿ ಮುನ್ನಡೆಯುವ
ಗಟ್ಟಿ ಹೆಜ್ಜೆಯನ್ನಿಟ್ಟು
ಬೆಟ್ಟ ಹತ್ತಿದೆ

ಅವರಿವರ ಮಾತಿಗೊಂದಿಷ್ಟು
ಕನ್ನ ಹಾಕಿ
ನನ್ನ ಮಾರ್ಗವ ನಾ ತೆರೆದಿಟ್ಟುಕೊಂಡು
ಗೆಜ್ಜೆಯದನಿಯಲಿ
ಮೆಲ್ಲಗಾದರೂ ಮುಳ್ಳಾದರೂ 
ನಡೆದು ದಡ ಸೇರುವ 
ಭಂಡ ಹೃದಯದೊಂದಿಗೆ 
ಕಾಳಗಕ್ಕಿಳಿದು ಕಾಲ್ಕಿತ್ತು ಬಿಟ್ಟೆ
ಎತ್ತರವ ಲೆಕ್ಕಿಸದೆ

ಹತ್ತಿರವಿರುವ
ಹರೆಯದ ಹಸಿವನ್ನು ಉದರದಿ
ಕಟ್ಟಿಕೊಂಡು ಗಟ್ಟಿಗೊಳಿಸಿ
ಮುಷ್ಠಿಯನ್ನೊಮ್ಮೆ ಬಿಗಿಗೊಳಿಸಿ
ದೃಷ್ಠಿಯಿಟ್ಟೆಡೆಗೆ 
ದಿಟ್ಟ ಜಿಗಿತ
ಪರ್ವತದ ತುದಿಯಲ್ಲಿ
ಪ್ರವರ್ಧಮಾನಕ್ಕೆ ಬಂದ ಬುದ್ದನಂತೆ ಸ್ಥಾಪಿತವಾಗಿ ಹೋದೆ
ಬರಲಿ ಬಂದದ್ದೆಲ್ಲವನ್ನು
ಬುಟ್ಟಿಯೊಳಗೆ 
ಬದ್ರವಾಗಿಟ್ಟುಕೊಳ್ಳುವೆ.

-ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ.

Suresh L R

 

 

 

 

 


ಅರಸುತ್ತ  ಅವಳ ಕವಿತೆಯ ಸಾಲುಗಳಲ್ಲಿ

ಒಂದು
ಇದ್ದಾಗ  ಇರದಂತೆ
ಇಲ್ಲದಾಗ  ಇಲ್ಲೇ ಇದ್ದಂತೆ
ಕಡು ಬೇಸಿಗೆ ಕಳೆದ ಮೇಲೂ
ಕಾಡುವ ಧಗೆಯಂತೆ
ತೀರಿಹೋದ ಚಳಿಗಾಲಕೂ
ಕಂಬಳಿಯೊಂದ ಕೋರಿದಂತೆ
ಮುಗಿದರೂ ಮಳೆ
ನಿಲ್ಲದೆ
ಮಾಡಿನಿಂದುದುರುವ ಹನಿಗಳಂತೆ
ಇದ್ದವಳು  
ಹಾಗೇ ಇದ್ದು ಬಿಡು
ನೀನಿಲ್ಲಿ ನೆಲೆಸ ಬರಬೇಡ
ನಕ್ಕ ಹಾಗೆ ಬುದ್ದ ನಾವು ನಗಲಾಗುವುದಿಲ್ಲ
ಹಾಗೆ ನಕ್ಕರೂ ನಾವೇನು ಬುದ್ದರಾಗಿ ಬಿಡುವುದಿಲ್ಲ
ಕಳೆದುಕೊಂಡ ಕನಸುಗಳಿಗೆ ಸುಂಕ 
ತೆತ್ತವರ್ಯಾರೆಂಬ ಜಿಜ್ಞಾಸೆ ಬೇಡ
ನರಕದಲ್ಲಿ ನಿಂತು ಸ್ವರ್ಗವನೇಕೆ ಹುಡುಕೋಣ?
ಇಷ್ಟಾದರು ಉಳಿದುಹೋದ ಎಮ್ಮ ಹಂಬಲಗಳಿಗೆ
ಅರ್ಥ ಹೇಳಲಾಗದ ಹಮ್ಮುಗಳಿಗೆ
ವಿರಾಮವೊಂದ  ಇಡೋಣ.
======

ಎರಡು
ನಿನ್ನ ಕವಿತೆಗಳು ಮಾತ್ರ ನಿಜ  ಎನಿಸುತಿದೆ
ಅದರೊಳಗೆ ನಿನ್ನ ಹುಡುಕ ಹೊರಟ ನನ್ನ
ಪ್ರಯತ್ನ ವ್ಯರ್ಥವೆನಿಸುತಿದೆ.
ಇರಬೇಕೆಂದೇನು ಇಲ್ಲ ಕವಿ
ತನ್ನ ಕವಿತೆಯೊಳಗೆ ಅಡಗಿ
ಗೊತ್ತಿದ್ದರೂ ನಿಲ್ಲಿಸಲಿಲ್ಲ  ಅರಸುವುದ ನಿನ್ನ
ಕವಿತೆಗಳ ಸಾಲುಗಳ ನಡುವೆ. 
ಕವಿತೆಯೊಳಗಿರದೆ
ಕವಿತೆಯಾಚೆಯೂ ಸಿಗದೆ ಕಾಡುವ ನಿನ್ನ ಕಾಣಲೇಬೇಕಿದೆ
ನನ್ನುಳಿವಿಗಾಗಿ!

ಯಾವ ಕವಿತೆಯ  ಯಾವ ಸಾಲಿನಲ್ಲಿಹೆ
ಯಾವ ಕವಿತೆಯ ಯಾವ ಚರಣದಲ್ಲಡಗಿರುವೆ
ಯಾವ ಸೂರ್ಯೋದಯದ ಬೆಳಗಲ್ಲಿ
ಯಾವ ಸೂರ್ಯಾಸ್ತದ ಸಂಭ್ರಮದ ಕ್ಷಣಗಳಲ್ಲಿ
ಯಾವ ಹಕ್ಕಿ ಹಾಡಿನಲ್ಲಿ
ಯಾವ ನದಿಯ ಜಾಡಿನಲ್ಲಿ
ಯಾವ ಕಣಿವೆಯ ಪ್ರಪಾತದಲ್ಲಿ
ಯಾವ ಶಿಖರದ ಮುಕುಟದಲ್ಲಿ
ಯಾವ ಊರಿನ
ಯಾರ  ಅಂಗಳದ
ಯಾರ  ಎದೆಗೂಡೊಳಗೆ
ಅವಿತು
ಯಾವ ಹೊಸಕವಿತೆಯ
ಹೊಸೆಯುತ್ತಿಹೆ.
ನಾ ಹೀಗೆ ಕಾಯುತಿಹೆ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

Madhusudan Nair

 

 

 

 

 


(೧) ಕಿಟಕಿ ಗೂಡಿಲ್ಲದ 
ಆಸೆಗಳ ಅರಮನೆಯಲ್ಲಿ 
ಕಹಿ ನೆನಪ ಬೀಸಣಿಗೆಯು
ಸಿಕ್ಕಿತು !!

(೨) ಕಸವಾಗಿ ಬಿದ್ದಿರುವ 
ಎಲ್ಲ ನೆನಪುಗಳನ್ನ
ಆತ್ಮ ಸ್ಥೈರ್ಯದ ಮೊರದಿಂದ
ಹೊರ ಹಾಕಬೇಕು !!

(೩) ಪೆಟ್ಟಿಗೆಯಲಿ ಬಚ್ಚಿಟ್ಟು
ಬೀಗ ಆಕಿದ್ದಾಯ್ತು 
ಇನ್ನು ಕಾಡುವುದಿಲ್ಲ 
ನೆನಪುಗಳು !!

(೪) ಸೆಲ್ಲಿನಲ್ಲಿದ ಖೈದಿಯ
ಸುತ್ತ – ಮುತ್ತ
ನೆನಪುಗಳು ನುಸಿಳಿ
ಕೊಲ್ಲುತಿದ್ದವು !!

(೫) ಯಾರದೋ ಗೋರಿಯ 
ಮುಂದೆ ಬಿಕ್ಕಳಿಸಿ
ಅಳುತ್ತಿದ್ದ ಆತನಿಗೆ
ನೆನಪಿನ ನಶೆಯು 
ಹುಚ್ಚನನ್ನಾಗಿಸಿತು !!

(೬) ನಿನ್ನನು ನೆನೆದಾಗ
ಬ್ಲಾಕ್ ಅಂಡ್ ವೈಟ್ ಲೈಫ್
ಕಲರ್ ಫುಲ್ ಆಗಿ ಬದಲಾಗಿ
ನವಿಲಾಗಿ ಕುಣಿದ ಮನದಿ
ನೆನಪುಗಳ ಗಿರಿಗಿಟ್ಲೆ !!

(೭) ಗಾಢ ರಾತ್ರಿಯಲಿ
ಗಾಢ ನಿದ್ದೆಯಲಿ 
ನುಸುಳುತಿದೆ ಭೂಮಿಗೆ
ಚಂದ್ರನ ಮೂಲಕ
ಸೂರ್ಯನ ನೆನಪು !!

(೮) ಸ್ನೇಹದ ಗೋಡೆ ಮೇಲೆ 
ನೆನೆಪೆಂಬ ಬೆರಣಿಯ
ನೆನಪಿಲ್ಲದ ಹಾಗೆ
ಸುಟ್ಟು ಹಾಕುತ್ತಿರುವೆ 
ಆ ಬೆಂಕಿಯಲ್ಲೂ
ಕಾಣುತಿದೆ ತಾತ್ಸಾರ !!

(೯) ತಲೆ ಕೆಳಗಾಗಿ ನಿಂತರೂ
ನೆನಪಿನ ಭ್ರಾಂತಿ 
ನಿಲ್ಲುವ ಮುನ್ಸೂಚನೆ 
ಇಲ್ಲಾ !!

(೧೦) ಮನದ ಸ್ಮೃತಿ ಪಟದಲ್ಲಿ
ಸದಾ ನೆನಪಿನ
ಚಿತ್ರಗಳ ಮೆರವಣಿಗೆ !!

-ರಶ್ಮಿ ಹೆಜ್ಜಾಜಿ

Rashmi Hejjaji

 

 

 

 

 


ಸಿಗದೆ ಓಡುವ
ಮರೀಚಿಕೆಯ ಹಿಡಿಯುವ
ಯತ್ನದಿ ಸೋತಿದೆ ಮನವು
ಬಿರು ಬೇಸಿಗೆಯಲಿ
ದಣಿದು ಬಾಯಾರಿ
ಕಾವ್ಯ ಕಟ್ಟದಾಗಿದೆ ಭಾವವು

ಹಸಿರ ಬೇಡಿರಲು
ಎಲ್ಲಾ ಒಣಗಿ ನಿಂತ ಮರಗಳು
ಹಾಡುವುದೆಂತು ಹಾಡನು
ಕಂಬನಿ ಇಂಗಿದ ಕಂಗಳಲಿ
ಕನಸನೆಂತು ಕಾಣಲಿ
ಹೇಗೆ ಹೇಳಲೆನ್ನ ಪಾಡನು

ದಾರಿಹೋಕರು ಬಂದು
ಕಡ್ಡಿಗೀರಿ ಹೋದರಿಂದು
ಸುಟ್ಟ ಬೂದಿ ಈ ಬದುಕು
ಯಾರದೋ ಮರ್ಜಿಗಾಗಿ
ಇನ್ಯಾರದೋ ಮೆಚ್ಚುಗೆಗಾಗಿ
ಬಾಳಬೇಕಿದೆ ಸಹಿಸಿ ಕೆಡುಕು

ಬತ್ತದಿರಲಿ ಭಾವದೊರತೆ
ಸುತ್ತ ತೋರಲಿ ಅದರ ಘನತೆ
ಬದುಕು ಕಲಸುಮೇಲೋಗರ
ಉಡುಕಬಾರದು ಸಿಗದ ಉತ್ತರ

-ಅಮು ಭಾವಜೀವಿ


ನಿಮ್ಮಿಷ್ಟದಂತೆ
ಹೋಗತ್ತ ಎಂದರೆ
ಹೋಗೇ ಬಿಡುವುದೆ?
ಬಾರದೂರಿನ ದಾರಿಗೆ
ಅಗಣಿತ ನಕ್ಷತ್ರಗಳ ಅರಮನೆಗೆ
ನೋಡದಿರು ಎಂದರೆ 
ತಿರುಗಿತಿರುಗಿ ಕಾಡುವುದೆ
ನನಗೂ ತಿಳಿಯ(ಸ)ದೆ
ಸುಳಿವೂ ನೀಡದೆ
ಅಲ್ಲಾ,
ಇರುವುದಾದರೂ ಎಲ್ಲಿ ನೀ?
ಕರೆದರು ತಿರುಗದ
ನುಡಿದರು ಮಿಡಿಯದ
ನೀ ಕಲ್ಲಂತೂ ಅಲ್ಲ
ಕಂಬನಿಗು ಕರಗದ
ಹಂಬಲಿಸಿದರು ಅರಿಯದ
ನೀ ಬಂಡೆಯೂ ಅಲ್ಲ
ಕೋಟಿ ಜೀವರಾಶಿಗಳ
ಕಕ್ಕುಲಾತಿ ಇದೆ ನಿನಗೆ
ನನಗದು ಗೊತ್ತು
ಹುಡುಕಿದರು ಸಿಗದ
ನೀ ದೇವರಂತೂ ಅಲ್ಲ 
ಕಾಯ್ದರು ಬರದ 
ಚೈತನ್ಯದ
ಉಸಿರೆ
ಅಣುಕ್ಷಣವೂ ಜೊತೆಗಿದ್ದು
ಹೇಳಕೇಳದೆ
ಹೊರಟು ಹೋಗುವ
ನೆನಪೆ
ಹೇಳು,
ನೀ ಇರುವುದಾರು ಎಲ್ಲಿ?

-ಪರಿಮಳಾ ಗು. ಕಮತರ​

Parimala G Kamatar

 

 

 

 

 


ಕಾಂಕ್ರೀಟು ಮುಗಿದ ಮೇಲೆ…

ಇಷ್ಟು ಹೊತ್ತು ಹೀಗಿರಲಿಲ್ಲ
ಒಳಗೆ ತುಂಬಿದ ಎಲ್ಲವನ್ನೂ
ಕಲಸುತ್ತಾ, ಭೂಮಿಯಂತೆ
ತಾನೂ ಸುತ್ತುತ್ತಾ
ಹೊಸ ಸೃಷ್ಟಿಯ ಹೊರ ಚೆಲ್ಲುತ್ತಾ
ನಿಂತ ಮಿಕ್ಸರಿನ ಸದ್ದು
ಬೇರೆಯದೇ ಲೋಕವನ್ನು
ಸೃಷ್ಟಿಸಿದಂತಿತ್ತು….!
ನೂರಾರು ಜನಗಳು
ಅವರವರದೇ ದಾವಂತ
ಕೂಗಾಟ-ಕಿರುಚಾಟ,
ನೆಲದಿಂದ ಮುಗಿಲಿಗೆ
ಮಹಡಿ ಕಟ್ಟುತಿಹರು
ಕಾಂಕ್ರೀಟು ಬುಟ್ಟಿಯ ಎಸೆಯುತ್ತಾ;
ಎದೆಗಪ್ಪಿ ಹಿಡಿಯುತ್ತಾ….!
ಯಾವ ಶಾಲೆಯೂ ಕಲಿಸದ
ಪಾಠ ಕಲಿತವರಿವರು
ನಿಪುಣರು-ನಿಷ್ಣಾತರು
ಬಿಸಿಲ ಬೆಂಕಿಯಲಿ
ಅರಳಿದ ಕಪ್ಪು ಹೂಗಳು…!
ಮುಂಜಾನೆ ಶುರುವಿಟ್ಟು
ಮುಸ್ಸಂಜೆಗೆ ಕೊನೆಗೊಂಡು
ಕಾಂಕ್ರೀಟು ಮುಗಿದ ಮೇಲೆ
ಬರೀ ನೀರವತೆ….
ತೊಟ್ಟಿಕ್ಕುವ ಹನಿಗಳು,
ಕಳಚಿಟ್ಟ ರಬ್ಬರ್ ಬೂಟುಗಳು,
ಅಲ್ಲೆಲ್ಲೋ ಮೂಲೆಯಲ್ಲಿ
ತಾಯ ಎದೆಹಾಲಿಗಾಗಿ
ಹಂಬಲಿಸುತ್ತಿರುವ
ಹಸುಳೆಯ ನಿಟ್ಟುಸಿರು,
ಜಡ್ಡುಗಟ್ಟಿದ ಕೈಗಳಲ್ಲಿ
ಧಗಧಗನೆ ಉರಿವ ಗಾಯಗಳು…..
ಕಾಂಕ್ರೀಟು ಮುಗಿದ ಮೇಲೆ
ಬರೀ ಮೌನ…
ನೀರವತೆ…..!!
-ಸಚಿನ್ ಅಂಕೋಲಾ…

sachin naik

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ಧರಾಮ
ಹಿಪ್ಪರಗಿ ಸಿದ್ಧರಾಮ
8 years ago

ಕವನಗಳಲ್ಲಿಯ ಕಾವ್ಯಕಲ್ಪನೆ ಸೊಗಸಾಗಿದೆ. ಎಲ್ಲಾ ಕವಿಮಿತ್ರರಿಗೆ ಅಭಿನಂದನೆಗಳು…ಹಿಪ್ಪರಗಿ ಸಿದ್ಧರಾಮ

1
0
Would love your thoughts, please comment.x
()
x