ಸತ್ತ ನೆನ್ನೆಯ ನೆನಪುಗಳು
ಎದೆಯಾಳದಲ್ಲೆಲ್ಲೋ ಗಿರಿಕಿ ಹೊಡೆದಂತಿದೆ
ವರ್ಷಗಳು ನಿಮಿಷಗಳುರುಳಿದಂತೆ
ಉರುಳುತಿವೆ
ಅದೆಂತಹದೋ ಅವ್ಯಕ್ತ ನೋವು
ಆವರಿಸಿ ಮರೆಯಾಗುತಿವೆ
ನಿರ್ಜೀವ ಶವವಾಗಿ ಹೋಗಿರುವ
ಮನದ ಮೂಲೆಯಲೆಲ್ಲೋ
ಸುಟ್ಟು-ಕರಕಲಾದ ಬರೀ ಬೇಡದ
ಮಾತುಗಳು ಗೋಚರಿಸಿ
ಅತಿರಿಕ್ತ ಭಾವ ನನ್ನೊಳಗೆ ಆವರಸಿ
ಬೆಂಬಿಡದೆ ಕೊಲ್ಲುತಿದೆ
ನೆನಪುಗಳಿಗೆ ಎಳ್ಳು-ನೀರು ಬಿಟ್ಟು
ನಂಬಿಕೆಗೆ ತಿಲಾಂಜಲಿಯಿಟ್ಟು
ಸಂಬಂಧಗಳ ಸಮಾಧಿ ಮೇಲೆ
ಹುಸಿ ನಗೆಯ ದಿರಿಸಿನೊಟ್ಟಿಗೆ
ಮಾತುಗಳ ಕಳಚಿಟ್ಟು
ಮೌನ ಧಾರಿಯಾಗಿ ನಡೆಯುತ್ತಿರುವೆ
ಗತಿಸಿದ-ಮನ ಗುಂಡಾಂತರಗೊಳಿಸಿದ
ಹಸಿ ಘಟನೆಗಳಿನ್ನು ಸ್ಮೃತಿ ಪಟದಲ್ಲಿ
ಬಿಸಿಯಾಗಿ ಕುಂತಿವೆ
ಗಿರಗಿಟ್ಲೆಯಂತೆ ನನ್ನನಾವರಿಸಿ
ಘಾಸಿಗೊಳಿಸುತ್ತಿವೆ
ದೂರದಲ್ಲೆಲ್ಲೋ ಜಡಿ-ಮಳೆಯಾಗಿರಬಹುದು
ಮಣ್ಣಿನ ವಾಸನೆ ಅಪ್ಪಳಿಸಿತೆಂದರೆ
ಅದೋ ಸಾವಿನ ವಾಸನೆ
ಅರಿಷಡ್ವರ್ಗಗಳ ತೊರೆದು
ಶೀನೋಣವೆಂದರೆ
ಕ್ಷೀಣ ಸ್ಥಿತಿಯಲ್ಲಿರುವುದು ಶ್ವಾಸ;
ಇನ್ನೂ ಬಂದಪ್ಪಳಿಸುತ್ತಿದೆ ದುರ್ನಾಥ
ಕಿವಿಯಲ್ಲಿ ಅಲೆಯಲೆಯಾಗಿ ಕೇಳಿಬರುತಿದೆ
ಅದೆಂತಹದೋ ಕರ್ಕಶ ದನಿಯಲ್ಲಿ
ಬೊಗಳುತ್ತಿದ್ದಳಾಕೆ ನನ್ನೆಡೆಗೆ
ಸಿಟ್ಟಿನಿಂದ…
ತೊಲಗೆಂಬ ಪದವು ಮಾತ್ರ
ಕೇಳಬರುತ್ತಿದೆ
ಅಂತ್ಯ ಸಂಸ್ಕಾರಮಾಡಿ ಮುಗಿಸಿದ
ಅದೆಷ್ಟೋ ಭಾವನೆಗಳಿನ್ನು
ಮರುಜನ್ಮ ಪಡೆಯುವ ಹುಮ್ಮಸ್ಸಿನಲ್ಲಿ
ಕಣ್ಣೀರನ್ನು ಮರೆಮಾಚಿವೆ
ಮನದ ತುಮುಲವ ಹತ್ತಿಕ್ಕಿ
ಆಸೆಗಳ ಮೂಟೆಕಟ್ಟಿ
ಅನಾಥ ಪ್ರಜ್ಞೆಯೋಳು ನಡೆವಾಗ
ತೊಡರುತ್ತಿದೆಯೇಕೋ ಕಾಲುಗಳು
ಎದೆ ಮೇಲೆ ಕಾರ್ಮೋಡವಿರಬೇಕು
ಸದ್ದಿಲ್ಲದೇ ಬಿಕ್ಕಳಿಸುತಿದೆ
ಮನವು ಅರಿವಿಲ್ಲದಂತೆ :
ಯಾರದೋ ಶವದ ಮುಂದೆ
ಗೋಗರೆಯುತ್ತಿದ್ದಾರೆ ಎಲ್ಲರು
ಎಲ್ಲವು ಅಸ್ಪಷ್ಟ
ಅದೋ ಆತ್ಮಗಳ ಆಕ್ರಂದನ
ತಲೆ ಚಿಟ್ಟಿಡಿಯುತಿದೆ
ಸತ್ತ ನನ್ನಾತ್ಮವವು ಚೀರುತಿದೆ
ಗೆದ್ದಲಿಡಿದ ಮನದ ಮುಂದೆ
ಮುರಿಯಲಾರದ ಸ್ಮಶಾನ ಮೌನ !!
-ರಶ್ಮಿ ಹೆಜ್ಜಾಜಿ
ಹೊಳೆಯುತ್ತಿಹ ಕಂಗಳು, ಹಣೆ ಮೇಲಿನ ಮುಂಗುರುಳು,
ಮುದ್ದು ಮುಖದ ಮೇಲಿಹವು ನಾನರಿಯದ ಭಾವವು,
ಏನುಂಟು ಏನಿಲ್ಲ ಏನೆಂದು ಹೇಳಲಿ.?
ನಗುವೆಂಬ ಒಡವೆಯದು, ಏಕಿಲ್ಲ ಮುಖದಲಿ..??
ಮುಖವೆಂಬುದು ಮನಸ್ಸಿನ ಪರಿವಿಡಿಯೆಂದು,
ನಿನ್ನ ಮೊಗವ ನೋಡಿಯೇ ಬರೆದಂತಿದೆ.
ನೂರೆಂಟು ಭಾವವನು ಒಟ್ಟಾಗಿ ಸೇರಿಸಿ,
ಮನಸ್ಸಿಂದು ಮುಖದೊಳಗೆ ಹೊರಸೂಸಿದೆ..
ರಂಗಾಗಿ ಕಾಣುತಿದೆ ಹಿಂದಿರುವ ಚಿತ್ತಾರ
ಮೇಲಿಂದ ತೂಗುತಿಹ ಹೂವಿನೊಡನೆ,
ರಂಗೇರಬೇಕಿದೆ ಆ ನಿನ್ನ ದುಂಡು ಮೊಗವು,
ತುಟಿಯಂಚಿಂದ ಬರುವ ನಸುನಗುವಿನೊಡನೆ…
-ನಾ"ನಲ್ಲ"
ನಿನ್ನರಿವಿಗೆ ಹಂಬಲಿಸಿ
ಆಲಿಸದೆ ಕಡೆಗಣಿಸುವ
ನೋಡದೆ ಕುರುಡಾಗುವ
ಅಡಿಗಡಿಗೆ ಮನದ
ಕೊರಡ್ ತೇಯ್ದು ನೋಡುವ
ಪರಿಗೆ ಸೋತು ಸೊರಗಿರುವೆ ಓ ಪ್ರಭುವೇ .
ಎನಿತು ನಿನ್ನ ಒಲಿಸಿಕೊಳ್ಳಲಿ
ಮನಕೆ ಸೋಲಿನಾ ಸೆಳಕು ತಾಕುತಿದೆ
ಚೂರು ನಿಲ್ಲದ ನಿರಾಸೆಯ
ಕಾವಳವೇ ಬಂದಪ್ಪುತ್ತಿದೆ ಎಂದು ಅರಳುವುದೋ
ನಿನ್ನರಿವಿನ ಪುಷ್ಪ ತಿಳಿಯದಾಗಿದೆ ಓ ಪ್ರಭುವೇ .
ಸಾಗುವ ಕಾಲದ ಯಾನದಲ್ಲಿ
ನಿನ್ನರಿವಿನ ಮರೆಯಾಗಿ
ಹತಾಶೆಯ ಚಕ್ರತೀರ್ಥವದು
ಕಂಗಳಲಿ ಹೆಪ್ಪಾಗಿ ವೇದನೆಯ
ಗಾಯವದು ಮಾಯದೆ ನೋವೆರೆಯುತ್ತಲಿದೆ
ಯಾವ ದಾರಿಯದು ನಿನ್ನ ತಲುಪುವುದು ?
ದಿಕ್ಕುತಪ್ಪಿದಂತಾಗಿ ಕಂಗೆಟ್ಟಿರುವೆ ಓ ಪ್ರಭುವೇ .
-ಪ್ರವೀಣಕುಮಾರ್ ಗೋಣಿ
ಕರೆಯಬೇಡ ಕೋಗಿಲೆ
ಕರೆಯಬೇಡ ಕೋಗಿಲೆ ನನ್ನ ನಲ್ಲೆಯ ಬಾರಲಾರದ ಮನದನ್ನೆಯಾ
ಕೊರಗಿ ಕೊರಗಿ ಸೋರಗುತಿರುವೆ, ಮನದ ಕದವ ಮುಚ್ಚಿ ಅಲ್ಲಿ
ನನ್ನ ನೋವ ಕಂಡ ಮೋಡಗಳೆ ಮಳೆಯಾಗಿ ಧರೆಗಿಳಿದು ದುಮ್ಮಿಕ್ಕಿಯಾವು
ದಮ್ಮಯ್ಯ ಕರೆಯದಿರು ನಿನ್ನ ಮಧುರ ಸ್ವರದಿ ಬಾರಲಾರದ ಮನದನ್ನೆಯಾ
ಪ್ರೀತಿ ತುಂಬಿದ ಹೃದಯ ಕೊಳದಲ್ಲಿ ಕ್ರೌರ್ಯದ ಅಲೆ ಝರಿಯಾಗಿ ಸುರಿಯುರಿಯುತಿದೆ
ಹಸಿರನೊತ್ತ ವಸುಂಧರೆಯ ಒಡಲಲಿ ಕೊಚ್ಚೆ ಹರಿದು ಮಲಿನವಾಗಿಸಿದೆ
ಅವಳದೇನು ತಪ್ಪಿಲ್ಲ ಕೋಗಿಲೆ, ಅವಳ ಅಹಂಕಾರದ ಪರಮಾವಧಿಯದು
ನನ್ನ ಬದುಕನ್ನು ಮುಗಿಸುವ ಹುನ್ನಾರಾದ ಒಳ ಸಂಚು ಮನದನ್ನೆಯದು
ಇರಲಿಬೀಡು ಅವಳಿಷ್ಟದಂತೆ ಹೃದಯದೊಲವು, ಬದುಕಿನ ಪಯಣದ ದಾರಿಯಲ್ಲಿ
ನೋವುಗಳ ವರವಾಗಿ ನೀಡಿ ಹೋಗಿಹಳು, ಎಷ್ಟಾದರು ನಾ ಬಡಪ್ರೇಮಿ ಜೋಗಿಯಲ್ಲವೇ.
-ಸಿದ್ದುಯಾದವ್ ಚಿರಿಬಿ
ಅಂತಃಕರಣದ ಗೆಳತಿಗೆ
ಹಂಬಲವ ಹುದುಗಿಸಿಟ್ಟು
ಮಾತಿಗೆ ಮಾತು ಕೊಡಬಾರದೆನಿಸಿದೆ
ಸೈರಿಸಲಾಗದ ಕಣ್ಣೀರಿಗೆ
ನಡುವಿನ ಬಿಂದು
ಧ್ಯಾನಿಸಲೆ ಎನಲು
ಕುಲುಮೆ ನಂದಿಹೋಗಬಹುದು
ಸುಳಿವಿರಬಹುದೇ ನಿನಗೆ
ಈ ಸೂತಕದ ಪರಿಭಾಷೆಯಲ್ಲಿ
ಚೂರೆಂದರು ಮಾರೆಂದರು ದೂರ ಸನಿಹವಲ್ಲ
ಬೇಡಿಕೊಳ್ಳುವೆ ನಿನಗೆ
ಎದೆಯಗೂಡಲ್ಲಿ ಪರಮಾಣು ಸಿಡಿಯುತ್ತಿದೆ
ಬೊಗಸೆಯೊಡ್ಡಬೇಡ
ಕಾವಳದ ಮುಸುಕಿನಲ್ಲಿ
ಕರುಳ ನೆರಿಗೆಯಂತೆ ನೀಳುವ
ಅಲೆಮಾರಿ ಪಾದವು ದಿಕ್ಕೆಟ್ಟು ನಿಂತಿರಲು
ಮುಖವಾಡಗಳ ತೊಡಿಸದಿರು
ಕೈ ನರಗಳು ಉಬ್ಬಿ ಅಂಗಲಾಚುವಾಗ
ರೈಲು ಬಂಡಿಯ ಬಿಸಿಯುಸಿರು
ಯಾರ ಮೂಗಿಗಾದರು ಬಡಿದಿರಬಹುದೆ !
ಇರಲಿ ಬಿಡು
ಕುರುಹುಗಳಿರದ ತೋಟಿ ನಾನು
ನೀನು ಚಿಗುರಿಸಿದ ಬಳ್ಳಿಗೆ ಉಸಿರ ಬಸಿದವನು
ಹೇಳುವತನಕ ಮಾಡಿದ್ದ ಕರೆಗಳಿಗೆ
ಉತ್ತರವೇನಿದೆ ಇಲ್ಲಿ!
ಅಂತಃಕರಣದ ಮಾತುಗಳೆಲ್ಲವು
ಕಿಡಿಗೇಡಿಯ ಪಟ್ಟ ಹೊತ್ತಿರುವಾಗ
ಕಣ್ಣೆವೆಯ ಸಂದೇಶಗಳ
ಪುರುಸೊತ್ತಿಲ್ಲದೆ ತೊಡೆಯುವ
ಕರ ವಸ್ತ್ರವು ನೂಲಾಗಿರಲು ಸೋಜಿಗವೇನಿದೆ !
ಇಲ್ಲಿ
ಏಕಾಂತವೆ ಸುಧಾರಿಸಿಕೊಳ್ಳದೆ ಗೋಗರೆಯುವಾಗ
ಜೀವಂತ ಶವ ನಾನು
ಕನವರಿಕೆಗಳ ಕಲಾಯಿ ಬಳಿಯಲೆಂದು
ಹೃದಯವನ್ನೆ ಪರಿವಿರದೆ ಕುದಿಸುವ
ಒಲುಮೆಯ ಕುಲುಮೆಯಲ್ಲಿ ಕಡ
ಕೇಳಬೇಕಾಗಿದೆಯಷ್ಟೆ ಉರಿದುಕೊಳ್ಳಲು
ಗಳ ಗಳನೆ ಅಳುವ ಸಾಲುಗಳಿಗೆ
ನಟ್ಟಿರುಳ ಕನಸೆಲ್ಲಿ ಕಾಡುವುದೊ
ಇಳೆಯ ನಾಳದಲ್ಲಿ ಸುರಿದ
ಹಂಬಲದ ಸೋನೆ ಮಳೆಗೆ
ಹರಿದ ಪತ್ರಗಳ ಕಣ್ಣೀರ ಜಾಡಿನಲ್ಲಿ
ಇಳಿದ ಇರುಳಿನ ಪಿಸುಮಾತಿನ ಸಂಕಟ
ಎದೆ ಬಿಗಿದು ಅತ್ತು ಕರೆಯಲು
ತೀರಿಕೊಂಡ ತಿಂಗಳ ಬೆಳಕಿಗೆ
ಸಂಗಾತದ ಹೊಣೆಹೊತ್ತ ಅಲೆಮಾರಿ ನಾನು
ತಾಯಿಬೇರಿಗೆ ಇಳಿದಿರುವ ನಿನಗೆ
ಉಸಿರ ಹೊರತು
ಬಸಿಯಲೇನು ಉಳಿಯದಿರುವಾಗ
ಕಂಬನಿಗಳಿಗೆ ಹುಸಿಯ ನುಡಿಯದಿರು
ಉಸಿರಾಡುವ ಹೆಣ ಕ್ಕೆ ಉಸಿರುಣಿಸದಿರು
ಒಲವ ಹೆತ್ತವಳು ನೀನು
ಒಲವಿನ ಹೆಣ ಹೊತ್ತವನು ನಾನು
ಹೌದು ನಾನೀಗ ಉಸಿರಾಡುವ ಹೆಣ.
-ಆರನಕಟ್ಟೆ ರಂಗನಾಥ.
ಕವಿತೆಗಳಲ್ಲವೂ ಸೂಪರ್