ಪಂಜು ಕಾವ್ಯಧಾರೆ


ಹಿಂದೆಂದಿಗಿಂತಲೂ ಇಂದು ನಿನ್ನ ಅವಶ್ಯಕತೆ ಹೆಚ್ಚಿದೆ
ಇಂದೇ ಹೊರಟು ಬಿಡುವ ಹಠ ಇನ್ನೂ ನಿನ್ನಲ್ಲೇಕಿದೆ?

ಅಂದಿನ ಈ ನೋವು ಇಂದು ಶಮನಕ್ಕೆ ಕಾದಿದೆ
ಬಿಟ್ಟುಹೋಗುವ ಮಾತು ಮರೆತು ಒಮ್ಮೆ ಸಂತೈಸಿ ಬಿಡು

ಮುದುಡಿದ ಮೃದು ಮನಸಿಗೆ ಮುಲಾಮು ಲೇಪಿಸ ಬೇಕಿದೆ
ಉರಿ ಹೆಚ್ಚಿಸುವ ಅಗಲುವಿಕೆಯ ಮಾತನ್ನು ತೊರೆದು ಬಿಡು

ಕಳೆದುಕೊಳ್ಳುವ ಭೀತಿಗೆ ಮನಸು ದೃವಿಸಿ ಹೋಗಿದೆ
ಎಂದೂ ಅಗಲದೆ ಉಳಿವ ನಿನ್ನ ಆಣೆಗೆ ಬದ್ಧನಾಗಿ ಬಿಡು

ನನ್ನ ಬದುಕಿನ ಪುಸ್ತಕದಲ್ಲಿ ನಿನ್ನದೇ ‘ಸಿರಿ’ನಾಮವಿದೆ
ಎದೆಯೊಳಗಿನ ಅಕ್ಷರವ ಅಳಿಸುವ ಯತ್ನ ಬಿಟ್ಟು ಬಿಡು

‘ಸಿರಿ’

 

 

 

 



ಹೀಗೊಂದಿಷ್ಟು ಸಾಲುಗಳು!
1.
ಹೊಸ ಮ್ಯೂಸಿಯಮ್ಮಿನ ಗೋಡೆ ಮೇಲೆ 
ಯುದ್ಧದ ಹಳೆ ಕತ್ತಿ ಕತ್ತರಿಸಿಕೊಳ್ಳುವ ಕೊರಳುಗಳು 
ಮಾತ್ರ ವರ್ತಮಾನದವು!
2.
ಯಾವುದು ಸತ್ಯ?
ಸುಳ್ಳಲ್ಲ ಅನ್ನುವುದು ಮಾತ್ರವೊ
ಸತ್ಯ ಅನಿಸಿಕೊಂಡವು ಮಾತ್ರವೊ!
3.
ಎಷ್ಟು ತಟ್ಟಿದರೂ ಕದ ತೆಗೆಯಲೇ ಇಲ್ಲ
ತೆರೆದ ದಿನ ಇರುವುದಿಲ್ಲ ನಾನು
ಇದ್ದರೂ ನೀನು!
4.
ಒಂದು ಕಣ್ಣಿನ ಸೂಜಿಗೆ ದಾರ
ಪೋಣಿಸುವುದು ಎರಡು
ಕಣ್ಣುಗಳು!
5.
ಬೆತ್ತಲಿಗೆ ಬಣ್ಣವಿಲ್ಲ
ಕತ್ತಲಿನ ಹಾಗೆ ಅನ್ನೋದನ್ನ 
ನಾನು ಒಪ್ಪಲ್ಲ.
6.
ಎಲ್ಲ ವಸಂತಗಳೂ
ನನಗೇನೋ ಅನ್ನೋ ಭ್ರಮೆ ಕಳಚಿದ ದಿನ
ಕಡೆಯದಿನವಾಗಿರುತ್ತೆ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

 

 

 


ಹಾರುತಿರಲಿ ರಾಷ್ಟ್ರಧ್ವಜ

ದೇಶದ ಹಿರಿಮೆ,ಗರಿಮೆಯ
ಮೇರುಸ್ತರದಲ್ಲಿ  ಮೊಳಗುವ
ರಾಷ್ಟ್ರಪ್ರೇಮದ ಭಾವ ಮೀಟಿ
ದೇಶ ಭಕ್ತಿ ಸಾರುವ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ  ಏರಲಿ |

ಧೈರ್ಯ,ಪರಿತ್ಯಾಗ,ಬಲಿದಾನ
ಸತ್ಯ,ಶಾಂತಿ,ಶುಭ್ರತೆ,ಸಮೃದ್ಧಿ
ಸತ್ಯ ಮಾರ್ಗದ ಸಂಕೇತ ಸಾರುವ
ಅಖಂಡತೆ ಸಾರ್ವಭೌಮತ್ವದ ಪ್ರತೀಕ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ ಹಾರಾಡಲಿ |

ಸ್ವತಂತ್ರ ಭಾರತಕ್ಕಾಗಿ
ಪಣತೊಟ್ಟು,ಹೋರಾಡಿ
ರಕ್ತ ಚೆಲ್ಲಿ,ಪ್ರಾಣ ತೆತ್ತ
ಧೀರ,ವೀರ ಭಾರತೀಯರ
ತ್ಯಾಗ,ಬಲಿದಾನ ನೆನೆಯುವ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ  ಹಾರಲಿ |

ಏಕತೆಯ ದಿವ್ಯ ಮಂತ್ರ
ಒಮ್ಮತ ಭಾವದಿ
ಎಲ್ಲೆಲ್ಲೂ ಮೊಳಗಲಿ
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ ಹಾರುತಿರಲಿ |

ಜಾತಿ,ಮತ ಭೇದವಿಲ್ಲದೆ 
ಎಲ್ಲರ ಬದುಕು ಅರಳಲಿ
ಮಾನವತೆಯ ಬೆಳಕು 
ಬದುಕಿನಲ್ಲಿ ಹರಡಲಿ 
ಮನುಷ್ಯಪ್ರೇಮ ಬೆಳೆಯಲಿ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರದಲಿ ರಾರಾಜಿಸಲಿ |

ರಾಷ್ಟ್ರಭಕ್ತಿ,ಅಖಂಡತೆ,ಸುವ್ಯವಸ್ಥೆ
ಜಾತ್ಯಾತೀತತೆ, ಏಕತೆಯ
ರಾಷ್ಟ್ರಗೀತೆಗಳು ಮತ್ತೆ ಮತ್ತೆ ಕೇಳಲಿ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ ಏರಿ ಹಾರಲಿ |

ನಿಸ್ವಾರ್ಥ ದೇಶ ಪ್ರೇಮದಿ
ದಿಟ್ಟ ಹೆಜ್ಜೆ ಇಡುತ
ವೈರಿಗಳನ್ನು ಬಗ್ಗುಬಡಿದು
ಭಯೋತ್ಪಾದಕರ ಹಿಮ್ಮೆಟ್ಟಿಸುವ
ಧೈರ್ಯ,ಶೌರ್ಯ ತುಂಬುವ
ಭಾರತದ ತ್ರಿವರ್ಣ ಧ್ವಜ
ಅತಿ ಎತ್ತರ  ಹಾರುತಿರಲಿ  |

ಜ್ಞಾನ-ವಿಜ್ಞಾನದಲಿ
ಬಾಹ್ಯಾಕಾಶ ತಂತ್ರಜ್ಞಾನದಲಿ
ತಾಂತ್ರಿಕ ತಾತ್ವಿಕ ಏಳಿಗೆಯನು
ಸುವರ್ಣಾಕ್ಷರದಲಿ ದಾಖಲಿಸಿ
ವಿಶ್ವಶಾಂತಿ ಸಂದೇಶ ಸಾರಿವ 
ಭರತ ಪುಣ್ಯ ಭೂಮಿಯಲಿ
ಭವ್ಯ ಭಾರತದ ಕೀರ್ತಿ ಪತಾಕೆ
ಮುಗಿಲೆತ್ತರಕೆ  ಹಾರಲಿ |

ದೇಶ ಸೇವೆ, ರಾಷ್ಟ್ರ ಭಕ್ತಿ
ರಾಷ್ಟ್ರಸನ್ಮಾನ,ರಾಷ್ಟ್ರಗೌರವ
ರಾಷ್ಟ್ರಾಭಿಮಾನದ ತುಡಿತ         
ದಮನಿ ದಮನಿಯಲಿ ತುಂಬಿರಲಿ
ಪ್ರಜಾ ರಾಜ್ಯದ ಚೈತನ್ಯ ಚಿಲುಮೆ
ಭಾರತದ ತ್ರಿವರ್ಣ ಧ್ವಜ
ಏರಲಿ ಹಾರಲಿ ಏಕತೆ ಸಾರಲಿ |

ರಾಷ್ಟ್ರಪ್ರೇಮದ ಕಂಪು 
ಎಲ್ಲೆಡೆ ಪಸರಲಿ
ಭಾರತದ ತ್ರಿವರ್ಣ ಧ್ವಜ
ಮುಗಿಲೆತ್ತರಕೆ  ಹಾರುತಿರಲಿ |

ಪ್ರಕಾಶ ತದಡಿಕರ

 

 

 

 


1) ಕನಸು ..ಕನಸು
ನಿದ್ದೆಲಿ ಕಾಡೊ ಒಳ ಕನಸು ..
ಎಚ್ಚರದಲ್ಲಿ ಹೊರ ಕನಸು ..
ಮನಸೊಳಗಿಳಿಯೊ ಹುಸಿ ಕನಸು..
ಕನಸು …ಕನಸು ..
ಕನಸೊಳಗೊಂದು ತಿಳಿ ಕನಸು …
ನಿದ್ದೆಯ ತರಿಸದ ಗುರಿ ಕನಸು …
ಎಲ್ಲರ ಕಲ್ಪನೆ ಖುಷಿ ಕನಸು ….

ತಿರುಗೋ ಈ ಸಮಯಾ …
ಬದಲಾಗೊ ವಿಷಯಾ …
ಕನಸು ನನಸಿಗು ಕಾದಾಟ ..
ಯೊಚಿಸಿ ಚಿಂತಿಸಿ ಪರದಾಟ ..
ಕಣ್ಣು ಮುಚ್ಚಿ ನೋಡಿದರು,
ಗುರಿಯ ಕಡೆಗೆ ಕಣ್ಣೊಟ …
ಕನಸು …ಕನಸು ..
                                 
2) ರೆಕ್ಕೆ ಬಲಿತಿರೊ ಹಕ್ಕಿ ..
ಎಲ್ಲ ಮರೆತಾಗ..
ತಾಯಿ ಹಕ್ಕಿ ಕೂಗಾ …
ಕೇಳೊರು ಯಾರು??..
ಕೇಳುವವರಾರು!!!
ರೆಕ್ಕೆ ಬಲಿತಿರೊ ಹಕ್ಕೀ …..ಹಕ್ಕಿ

ಮನಸಿನ ಯಾತನೆ 
ಕಣ್ಣೀರ ರೂಪದಲಿ 
ಹೊರಬಂದಿದೆ ಇಂದು..
ಎಲ್ಲ ಕನಸನು ಕೊಂದು ..
ಎಲ್ಲ ಕನಸಾ ಕೊಂದು ..

ಬೀಸುವ ಗಾಳಿಗೆ ಆರೊದ ದೀಪ ..
ಅದರಲ್ಲಿ ಏನಿದೆ ಹಣತೆಯ ಲೋಪ ..
ತನ್ನನ್ನೆ ತಾ ಮರೆತು ಸಾಕಿದಳು ಅಂದು ..
ಬಚ್ಚಿಟ್ಟು ಕಣ್ಣೀರ ತನ್ನಲ್ಲೇ ನೊಂದು …
ತನ್ನಲ್ಲೆ ನೊಂದು …!!

3)
ಎಲ್ಲಿಗೋ ಸಾಗುತಿದೆ ಬದುಕಿನ ಪಯಣ …
ಹುಡುಕುತ್ತಾ ತಾಯಿ ಹೊಟ್ಟೆಯಿಂದ ಹೊರಬಂದ ಕಾರಣ …
ಬದುಕಿನ ವಾಸ್ತವತೆಗೆ ಸವೆಯುತಿರುವ ಕನಸುಗಳು ..
ಕವಿತೆ ನನ್ನದಾದರು ಇದು ಸಾವಿರಾರು ಜನರ ಬಾಳು ..!!

ಹಕ್ಕಿಗಳು ಹಾರುತಿವೆ ಕೊಡಲು 
ಬೀಳ್ಕೊಡುಗೆ ರವಿಗೆ ..
ನಮ್ಮ ನೆರಳೇ ನಮ್ಮನ್ನು ಬಿಟ್ಟು 
ಸರಿಯುತಿದೆ ಮರೆಗೆ ..
ಏಕಾಂಗಿಯಾಗಿ ಕಾಯುತಿಹೆನು ನನ್ನದೇ 
ಮನಸಿನ ಕರೆಗೆ ..
ಮಲಗುವ ಮುನ್ನ ಕಾಡುವ ಕನಸು ..
ಕನಸಲ್ಲಾದರೂ ಆಗುವುದೆ ನನಸು ..
ಮತ್ತೆ ರವಿ ಹುಟ್ಟುತ್ತಾನೆಂಬ ನಂಬಿಕೆ ..
ನಾಳೆಯ ಜೀವನ ಬೆಳಗಲು ಅವನಿಗೊಂದು ಸಣ್ಣ ಕೋರಿಕೆ ..
                                    
-ವೇಣುಗೋಪಾಲ್ ಹಸ್ರಾಳಿ 

 

 

 

 


ಕಿಟಕಿ-ಬಾಗಿಲು

ಮುಂಬಾಗಿಲು ಸದಾ 
ದಿಡ್ಡಿಯಾಗಿ ತೆರೆದೇ
ಇರುತ್ತದೆ.
ಬೆಳಕು ಕಂದಿದ ಮೇಲಷ್ಟೇ
ಮುಚ್ಚಿಕೊಳ್ಳುತ್ತದೆ.

ಬಾಗಿಲೆಡೆಗೆ ಮುಖವೂ
ತೋರಿಸಲು ಬಿಡುವಿಲ್ಲದವರು
ಒಳಗೆ ಗಡಿಬಿಡಿಯಲ್ಲಿರುತ್ತಾರೆ
ಅದಕ್ಕೇ ಬಾಗಿಲು ಸದಾ
ತೆರೆದೇ ಇರುತ್ತದೆ.

**      **                 

ಪುಣ್ಯಕ್ಕೆ ಪ್ರತೀ ಕೋಣೆಗಳಿಗೂ
ಪುಟ್ಟ ಪುಟ್ಟ ಕಿಟಕಿಗಳಿವೆ.
ಹೊರಕ್ಕೆ ನೋಡಲು ಹಾತೊರೆಯುವವರು
ಏನನ್ನೂ ನೋಡದೇ ಸಾಯುತ್ತಿದ್ದೇವೆ ಅಂತ
ಹಲುಬುತ್ತಾ ಶಾಪ ಹಾಕುವಂತಿಲ್ಲ.

ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆ
ಅಂತ ಖಾತ್ರಿ ಪಡಿಸಿಕೊಂಡ ಮೇಲೂ
ಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳು
ಬಿಗಿಯಲ್ಪಟ್ಟಿವೆ.

**                  **

ಬೆಟ್ಟ ಗುಡ್ಡ ಹಸಿರು
ದೂರದಲ್ಲಿ ಹರಿಯುವ
ತೊರೆಯ ಸದ್ದು
ಚಿತ್ರ ಬಿಡಿಸುತ್ತಾ ಓಡುವ
ಮುಗಿಲು
ಇಷ್ಟಿಷ್ಟೇ ಕಡಲಿಗಿಳಿಯುವ
ಹಗಲು.

ಅಂಗೈಯಷ್ಟಗಲ ಕಂಡರೂ
ಅನಂತ ಆಗಸದಗಲ
ಹಬ್ಬುತ್ತಿದೆ ಒಳಮನೆಯೊಳಗೂ
ಕಲ್ಪನೆಯ ಚಿತ್ತಾರ.

**               **

ಕಿಟಕಿ ಅರೆ ಮುಚ್ಚಿಕ್ಕೊಂಡೇ
ಇರುತ್ತದೆ.
ಆದರೂ ಬಿಗಿದ ಸರಳುಗಳ
ಎಡೆಯಿಂದ ಬೆಳಕು ನುಸುಳಿ
ಬರುತ್ತಲಿದೆ.

ಮುಂಬಾಗಿಲು ಸದಾ ತೆರೆದೇ
ಇರುತ್ತದೆ.
ಅಡ್ಡಕ್ಕೆ ಜೋಡಿಸಿದ ಪುಟ್ಟ
ಕಟ್ಟಳೆ ಕಾವಲಂತೆ 
ಕಾಯುತ್ತಿದೆ.
**         **
ತೋರಿದಂತೆ ತೋರಗೊಡುವ
ತೋರಿಕೆಯ ಬಾಗಿಲು
ಬಿಗಿದ ಕಿಟಕಿ ಸರಳುಗಳ ನಡುವೆಯೂ
ಉಯ್ಯಾಲೆ ಕಟ್ಟಿ ತೂಗಿ ಹೋಗುವ
ಕವಿತೆ ಸಾಲು.

ಕಿಟಕಿ-ಬಾಗಿಲುಗಳು
ಎಲ್ಲಾ ಕಡೆಗಳಲ್ಲೂ ಇವೆ.
ಕೆಲವೊಂದು ಕಡೆ ಪಾತ್ರಗಳು
ಅದಲು ಬದಲಾಗುತ್ತವೆ.

 -ಸ್ಮಿತಾ ಅಮೃತರಾಜ್. ಸಂಪಾಜೆ

 

 

 

 


ಶುಭ್ರವಾಗು ನನ್ನ ತೀರ

ನಾನು ಬಿದ್ದೆನೆಂದು ಆಲಾಪಿಸುತ್ತೇನೆ
ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ? 
ಎಂದು ದೂರುವುದಿಲ್ಲ

ನಾನು ಜಾರಿದ್ದು ಕೆಸರಿನ ಮೇಲೇ ಹೌದು
ಕೆಸರು ರಾಚಿದ್ದು ನೀನೆಂದು 
ಹೇಳುವ ಮನಸ್ಸಿಲ್ಲ

ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದೇನೆ
ನಾಲಿಗೆಗೆ ಭಯದ ಬರೆ ಎಳೆದದ್ದು ಯಾರೆಂದು 
ಕೂಗುವ ಪ್ರಮೇಯ ನನಗಿಲ್ಲ

ಅಯ್ಯಾ ಎಂದು ಅರವುತ್ತಲಿದ್ದೇನೆ 
ಅದು ನಮ್ಮ ಸಮ್ಮಾನಕ್ಕೆ ಕೋರಿದ್ದೆಂದು 
ನಿನ್ನೊಳಗೆ ಅರಿವಾಗಬೇಕು

ಹಿಂಡುವ ಹಸಿವೆನೆಡೆ ಎಗ್ಗಿಲ್ಲದ ನನಗೆ 
ವರ್ಣ ಹೀನತೆಯ ನಿಕೃಷ್ಟತೆ ಹೇರಿದ ನೆನಪು 
ನಿನ್ನಲ್ಲಿ ಮರುಕಳಿಸಬೇಕು

ನನ್ನ ನಾಲಿಗೆಯ ಭಾಷೆ ನಿನ್ನ ನೆರಳಿನ ಸನಿಹ 
ಇಲ್ಲವೆಂದರೂ ಪರಿಹಾಸ ಮಾಡದಿದ್ದರದೇ 
ನಮಗೆ ಪರಾಕು

ಎತ್ತದಿರಿ ಏರಿಸದಿರಿ ಮುಟ್ಟಿ ಮಣೆ ಹಾಕದಿರಿ 
ಸಕಲ ಸವಲತ್ತುಗಳಿಂದ ನನ್ನ ಉದ್ಧಾರದ 
ಕತೆ ಕಟ್ಟದಿದ್ದರೆ ಸಾಕು

ಬಂಧುವಾಗೆಂದು ಕೋರುವ ಕಾಮನೆಗಳಿಲ್ಲ
ಬರಿಯ ಗೆಳೆಯನೆಂದು ನನ್ನ ಸಾವರಿಸು; 
ಬಿಟ್ಟು ಧಿಮಾಕು 

ಕುಹಕತೆ ಬಿಟ್ಟರೆ ನಮ್ಮಗಾಯಕ್ಕೆ ಮುಲಾಮು 
ಅಸಡ್ಡೆಗಳ ತೊರೆದೊಗೆದರೆ 
ಇದೊ ನಿನಗೆ ಸಲಾಮು

ನಿನ್ನ ಹೃದಯ ವೈಶಾಲ್ಯತೆಯ ಕಟ್ಟುಕತೆಗಳ 
ಬಗೆದು ಒಗೆಯುತ್ತೀಯ 
ಶುಭ್ರವಾಗುತ್ತೀಯ ನನ್ನ ತೀರ ?
  
– ಅನಂತ ರಮೇಶ್

 

 

 

 


"ನನ್ನೆದೆಯ ಶಚೀತೀರ್ಥದಲ್ಲಿ"

ನನ್ನೆದೆಯ ಶಚೀತೀರ್ಥದಲ್ಲಿ ಹುಡಕುತಿರವೆ
ಶಾಕುಂತಲೆ ಉಂಗುರವನ್ನು ಸಿಗಬಹುದೇ ಗೆಳತಿ? 
ಈ ಹೃದಯ ಕೋಳದ ತಿಳಿ ನೀರಿನಲಿ
ನಿ ಇಟ್ಟು ಹೋದ ನೆನಪಿನ ಹೆಜ್ಜೆ ಗುರುತನ್ನು;
ನಂದನವನದ ಸುಂದರ ಕುಟಿರದಂಚಿನ ಕೋಳದಲಿ

ಮೈಮರೆತು ದೃಷ್ಟಿಸಿ ನೋಡುತ್ತ ಕುಳಿತಾಗಲೇ
ನಿನ್ನ ನಗೆಮುಗ ಅಲ್ಲಿ, ಕೋಳದ ಮಧ್ಯದಲ್ಲಿ
ನೀರಿನ ಅಲೆಗಳ ನೋಡಾಗ ಎಷ್ಟೊಂದು ಚಂದ
ರಿಂಗು ರಿಂಗಾಗಿ ಸುರುಳಿ ಸುತ್ತಿಬಿಡುವ ಕಂಪನ
ಕಾಳಿದಾಸನಿಗೂ ತಿಳಿಯಲಿಲ್ಲವಳ ಮನಸು

ಅಲ್ಲೆರೋ ನೆನೆಯುತಿಹರು ಪ್ರಿಯತಮನನ್ನು
ಮತ್ತೆಲ್ಲೋ ಅದರ ಸುಳಿವು ಬಿಕ್ಕಿಬಿಕ್ಕುವ ಸೇಳೆವು
'ಪ್ರೀತಿಸುವ ಪ್ರತಿ ಹೃದಯಕುಟಿರದಲಿ ಅದೆಷ್ಟೋ ಶಕುಂತಲೆಯರು ಇಟ್ಟ ನಿಟ್ಟುಸಿರು
ನೋವಾಗಿ, ನೆನಪಿನ ಅಲೆಯಾಗಿ ಚಿಮ್ಮುವುದು;

ಅವನ ನೆನಪು ಶಚೀತಿರ್ಥದ ಪಯಣದ ಜೊತೆ
ಅಲೆಗಳಲಿ ಕರಗಿತೆ ಉಂಗುರದ ಹೊಳಪು
ಅವನಿಗಾದರು ತಿಳಿಯಲಿಲ್ಲ ಇವಳೆನ್ನ ಒಲವೆಂದು
ಉಡುಗೋರೆಯ ಉಂಗುರವೇ ಶಾಪ ಅವಳಿಗಂದು
ಹೃದಯವನೆ ಸಾಕ್ಷಿಗಿಡಬೇಕಿತ್ತಲ್ಲಿ ಶಕುಂತಲೆ;

ಕೇಳಿಕೊ ಒಲವೇ ನಿನ್ನಂತರಂಗದಲಿ ನನ್ನ ನೆನಪಿದೆಯಾ?
ಈ ಪ್ರೇಮ ಫಕಿರನ ಕಿಂಚಿತ್ತೂ ನೆನಪು ಸುಳಿಯುವುದಿಲ್ಲವೇ?
ಸುಮ್ಮನೆ ನೆನಪು, ಭ್ರಮೆ ಎಂದು ಕುಳಿತುಳೊಳ್ಳಬೇಡ
ಶಕುಂತಲೆ ಶಾಪಕೆ ತುತ್ತು, ನಾ ಯಾವ ಪಾಪದ ಸ್ವತ್ತು?
ಅಲ್ಲಿ ನಾ ಇದ್ದರೆ, ಇಲ್ಲಿ ನನ್ನ ಪ್ರೀತಿ ನಿನಗಾಗಿ ಕಾಯುವುದು
ಅಲ್ಲಿ ನಾ ಇಲ್ಲವೆಂದರೆ ಹೇಳಿಬಿಡುವ, ಇಲ್ಲಿ ನಾನೆ ಇರುವುದಿಲ್ಲ…,

 -ಸಿದ್ದುಯಾದವ್ ಚಿರಿಬಿ…,


   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
shreedevi keremane
shreedevi keremane
7 years ago

Thank you Panju

ಆರನಕಟ್ಟೆ ರಂಗನಾಥ
ಆರನಕಟ್ಟೆ ರಂಗನಾಥ
7 years ago

ನಿನ್ನ ಹೃದಯ ವೈಶಾಲತೆಯ ಕಟ್ಟುಕತೆಗಳ ಒಗೆದೇ ಒಗೆಯುತ್ತೀಯ

ನೀರಿಳಿಸುವ ಸಾಲುಗಳು.ಮನದಟ್ಟಾಗಬೇಕಾದ ವಾಸ್ತವ.ಕಾವ್ಯ ಓದಿಸಿದ್ದಕ್ಕೆ thanks

3
0
Would love your thoughts, please comment.x
()
x