ಪಂಜು ಕಾವ್ಯಧಾರೆ ೨

ಅಮ್ಮ ಎಂದರೆ…….


ನಡೆದ ದಾರಿಯಲಿ
ಎಷ್ಟೊಂದು ಹೆಜ್ಜೆಗಳು
ಅಲ್ಲೆಲ್ಲೋ ದೂರದಲ್ಲಿ
ಸಣ್ಣ- ದೊಡ್ಡ
ಹೆಜ್ಜೆಗಳಿವೆ; ಒಂದು ನನ್ನದು
ಮತ್ತೊಂದು ಈಗ ಮೃದುಪಾದವೂರುವ
ನನ್ನಮ್ಮನದು!

ಅಮ್ಮ ರೊಟ್ಟಿ ಬಡಿವಾಗ
ಒಲೆ ಉರಿಯ ಝಳದ ಮುಂದೆ
ಲೆಕ್ಕವಿಲ್ಲದಷ್ಟು ತಿನ್ನುತ್ತಿದ್ದೆವು
ಈಗ ರೊಟ್ಟ ಬಡಿಲಾರದ ಅಮ್ಮನಿಗೆ
ಶೆಟ್ಟರಂಗಡಿಯಿಂದ ಲೆಕ್ಕ ಮಾಡಿ
ರೊಟ್ಟಿ ತಂದಿತ್ತರೆ ಮಾತಾಡದ ಅಮ್ಮ ನಗುತ್ತಿದ್ದಾಳೆ!


ಉಡಿಸಿ
ಉಣಿಸಿ
ಖುಷಿ ಪಟ್ಟ ಅಮ್ಮ
ಇದೀಗ
ಕೈ ತುತ್ತಿಗೆ
ಬಾಯ್ತೆರೆಯುತ್ತಿದ್ದಾಳೆ!


ಕೈ ಹಿಡಿದು
ನಡೆ- ನುಡಿ
ಕಲಿಸಿದ ಅಮ್ಮನ
ಹೆಜ್ಜೆಗಳು ಈಗೀಗ
ನೆಲ
ಕಂಡೇ ನಡುಗುತಿವೆ!


ಬಂದದ್ ಬರಲಿ
ಬಿಡಪ್ಪಾ
ಅಲ್ಲಾ
ಇದ್ದಾನೆ
ಅನ್ನುತ್ತಿದ್ದ ಅಮ್ಮ
ಹೆದರುತ್ತಲೇ
ಮುಲುಕುತ್ತಿದ್ದಾಳೆ!

-ಸಂತೆಬೆನ್ನೂರು ಫೈಜ್ನಟ್ರಾಜ್

 

 

 

 


1. ಹುಚ್ಚು ಮನ
ಇದುರಿಗೆ ಕಡಲು ಇದ್ದರೂ
ಬೇಕು ಅದಕ್ಕೆ ಸಣ್ಣ ಒರತೆ.
ಕಾರಣ ಒರತೆ ನಮ್ಮದು
ಬೊಗಸೆಯಲ್ಲಿ ತುಂಬಿ
ನೀಗಬಹುದು ದಾಹ.
ಕಡಲನ್ನು ರಮಿಸಬಹುದು
ಒರತೆಯಲ್ಲೂ ಮುಳುಗಬಹುದು
ನಮ್ಮ ಮನಸ್ಸಿಗೆ ತಕ್ಕಂತೆ!

2. ಬಟ್ಟೆ ರೇಶಿಮೆ,
ಬಿಸಾಕಲಾರೆ
ಎಂದು ತೇಪೆ ಹಾಕುತ್ತೇವೆ.
ಆದರದು ಬಳಸಲಾಗುವುದಿಲ್ಲ,
ಸಂಬಂಧಗಳೂ ಹಾಗೇನೇ
ಬಿಡಲಾರೆ ಎಂದು ನಿಭಾಯಿಸುತ್ತೇವೆ,
ಅದು ಇರುವಿಕೆ
ಬದುಕಲ್ಲ!

3. ಅಡ್ಡ ದಾರಿ ಹಿಡಿಯಲು
ಬೇಕಿರುವುದು ಅವಕಾಶಗಳಲ್ಲ,
ಕಡಿವಾಣವಿಲ್ಲದ ಮನಸ್ಸು,
ಬೇಲಿಯಿಲ್ಲದ ಯೋಚನೆಗಳು….
ಆದರೆ ದಾರಿ ಅಡ್ಡದ್ದೋ, ಸರಿಯೋ..
ಇದರ ನಿರ್ಣಯವೂ,,,
ಮನಸ್ಸಿಗೆ ತಕ್ಕಂತೆ!

4. ನೆನ್ನೆ ಬೇಕು ಬೇಕೆಂದು
ಹಪಹಪಿಸಿದ್ದು
ಇವತ್ತು ಕಿರಿಕಿರಿ ಆಗಬಲ್ಲದು.
ಇವತ್ತು ಮುದ ನೀಡಿದ್ದು
ನಾಳೆ ಬೇಡವೆನಿಸಬಹುದು.
ಇಷ್ಟು ಚಂಚಲವಾದರೆ
ಬದುಕಿಗೆ ಅಡಿಪಾಯ ಏನು?

5. ಇಂದು ಸ್ನೇಹಿತರ ದಿನವಂತೆ

ಇರುವಂತಹವರ ಬಿಟ್ಟು
ಇಲ್ಲವಾದವರ, ದೂರ ಸರಿದಂತಹ
ಜನರನ್ನೆಕೋ ನೆನೆವುದು ಮನ
ಕಳೆದುಹೋದುದಕ್ಕೆ ಮೌಲ್ಯ ಹೆಚ್ಚು
ಅದನ್ನೇ ನೆನೆದು ಮನ ಪೆಚ್ಚು!

-ಸಹನಾ ಪ್ರಸಾದ್‌

 

 

 

 


ಹಾಯ್ಕುಗಳು

(೧)
ಸತ್ಯ ಮರೆತು
ಸರ್ಕಲ್ಗಿಟ್ಟ ಹೆಸರು
ಗಾಂಧೀ ಸರ್ಕಲ್..!!

(೨)
ಕಛೇರಿ ಸತ್ಯ
ಗೋಡೆಮೇಲೆ ನಗುವ
ಗಾಂಧೀಗೆ ಗೊತ್ತು..!!

(೩)
ಸ್ವಾತಂತ್ರಕ್ಕಾಗಿ
ಹೋರಾಡಿದ್ರು ಗಾಂಧಿ
ಅತಂತ್ರಕಲ್ಲ..!!

(೪)
ಬರಿಮೈ ಗಾಂಧಿ,
ಬರಿಗೈಲಿ ಹೋದವ
ಮಹಾತ್ಮ ನೀನೆ..!!

(೫)
ನೆನಪಿರಲಿ
ಗೋಡೆ ಮೇಲಿನ ಗಾಂಧಿ
ಮರೆತ ಮಂದಿ..!!

೬)
ಗಾಂಧಿ ತಾತನ
ಊರುಗೋಲು ಇಂದೆಕೋ
ಸುಮ್ಮನಾಗಿದೆ ||

೭)
ಹೊಲಿಯಬೇಕು
ಹರಕು ಬಾಯಿಗಳ
ತುಟಿಗಳನು ||

೮)
ಜೊಳ್ಳು ಅಕ್ಷರ
ಜನರೆಡೆಗೆ ತೂರೆ
ಧೂಳು ಎಂದರು ||

೯)
ದುಡಿವರೆಲ್ಲ
ರವಿಯಾಧಿ ನಿತ್ಯವೂ
ಪ್ರಶಸ್ತಿಗಲ್ಲ ||

೧೦)
ಕೆಸರಿನ ಕೈ
ಸದ್ದು ಮದ್ದಿಲ್ದೆ ಗೆದ್ದು
ಹೆಸರಾಯಿತು ||

-ವೆಂಕಟೇಶ ಚಾಗಿ‌

 

 

 

 


ಹನಿಗವನಗಳು

ಸಮಸ್ಯೆಯ ಚಕ್ರ

ಮೂರ್ಖತನದ ಪರಮಾವಧಿ
ಯಾವುದು?
ನಾವಿರುವ ಕಂಬಿಯ ಮೇಲೆ
ರೈಲು ಬರುತ್ತಿದ್ದು
ತಪ್ಪಿಸಿಕೊಳ್ಳುವುದಕ್ಕಾಗಿ
ಅದೇ ಹಳಿಯ
ಮೇಲೆ ಓಡುವುದು!

ಲವ್ ಮ್ಯಾರೇಜ್

ಹೌದು ಅವಳು
ಪ್ರೀತಿಸಿಯೇ
ಮದುವೆಯಾಗಿದ್ದು,
ಪ್ರೀತಿಸಿದ್ದು ಅವನನ್ನು,
ಮದುವೆಯಾದದ್ದು
ಬೇರೊಬ್ಬನನ್ನು!

ಕಾಯುವಿಕೆ

ಅವನು ಅವಳಿಗಾಗಿ
ಕಾದು-ಕಾದು
ದಿನಗಳು
ಉರುಳಿದವು,
ವರ್ಷಗಳು ಉರುಳಿದರು ಅವಳು ಬರಲಿಲ್ಲ,
ಕೊನೆಗೆ ಅವನ ಬದುಕೇ ಉರುಳಿತು
ಆದರೂ ಅವಳು ಬರಲಿಲ್ಲ!

ಬರ

ಅವನಿಗೆ ಅವಳನ್ನು
ಕಂಡು ಮಾತನಾಡಲು
ಅದೆಷ್ಟೋ ಕಾತುರ,
ಅವಳು ಎದುರು ಬಂದಾಗ
ಅವನ ಮಾತಿಗೆ ಬರುತ್ತೆ ಬರ!

ನೆನಪುಗಳು

ಏಕಾಂಗಿಯ ಜೀವನ
ಇಲ್ಲವೇ ಇಲ್ಲ
ನೆನಪುಗಳು ಸದಾ
ಜೊತೆಯಾಗಿ
ಇರುತ್ತಾವಲ್ಲ!

ಸಂಯಮ

ಜೀವನದ
ಸುಗಮ
ಹಾದಿಗೆ
ಬೇಕು
ಸಂಯಮದ
ಮಂತ್ರ

ಸಾವು

ಬದುಕಿನ ಸುದೀರ್ಘ ಪಯಣಕ್ಕೆ
ಅಲ್ಪವಿರಾಮ ಎಂಬುದೇ ಇಲ್ಲ
ಏನಿದ್ದರೂ ಪೂರ್ಣ ವಿರಾಮ!

-ಈರಣ್ಣ ಬೆಂಗಾಲಿ, ರಾಯಚೂರು

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x