ಪಂಜು ಕಾವ್ಯಧಾರೆ ೨

‘ಮಂಗಳಮುಖಿ’

ನಮ್ಮೊಳಗೇ ನಾವೇ ಪರಿಚಿತರು
ಕೇಳಿ ಜಗದ ಮುಮ್ಮುಖ
ಲಿಂಗಮೌನಿಗಳೇ…
ರಕ್ಕಸರಸೋಮನದ ದಿಬ್ಬಣಗಳಗೂಡಿ
ಹೊರಳಾಡುವ ನಿಮ್ಮ ಅಪರಿಚಯ
ನಮ್ಮೊಡನೆ ವಿಧಿಯಿರಬಹುದೇ..?
ನಮ್ಮೊಳಗೆ ನಾವೇ
ಸಂಚಯ ಕೇಳಿರಿ ಒಮ್ಮುಖ ದನಿಗಳೆ..
ನಿಮ್ಮ ಅಸಹಿಷ್ಣುತೆಗೆ
ಸ್ವಕಲ್ಪಿತ ಚಕ್ರದೊಳಗೇ
ಲುಪ್ತಮೋಹದುನ್ನತಿಯೆಡೆಗೆ
ನಡೆದು ನೆಡೆದು ನಿಮ್ಮ ವಿರಚಿತ
ವಸಾಹತು ಬಿಂಧುವೊಂದಕೆ
ಕಟ್ಟಿಹಾಕುವ ದಟ್ಟ ದನಿಯೂ
ನಿಮ್ಮದೇ ಅಲ್ಲವೇ:
ತೃಪ್ತ ತೆರಪು ನಮಗಿಲ್ಲವೇ
ನಿಮ್ಮ ಸ್ಥಾಪಿತ ಗಡಿಯೊಳಗೆ?
ಅತೃಪ್ತ ತನವ ಎಲ್ಲಿಗೆ ದೂಕಲಿ ನಾವು?…
ನಿಮ್ಮ
ವಿಕೃತಿ ಹೂರಣದಲಿ
ಹುದುಗಿ ಹುದುಗಿ ಆನಂದಾಕೃತಿ
ಒಡಮೂಡುವುದೇ ನಮ್ಮಲಿ?…
ನಮ್ಮುಖವ ಕಂಡು ಒಬ್ಬೊಬ್ಬರಲ್ಲೂ
ಮುಖಗಂಟು ಎಂಟಾಗಿದೆ
ನೋಡಿಕೊಳ್ಳಿ ನಮ್ಮ ಭಿನ್ನಕಣ್ಣಕನ್ನಡಿಯಲ್ಲಿ ;
ನಲಿವೆಲ್ಲ ಅಂಗಾತವಾಗಿ ಮಸಣದಿಬ್ಬಣ
ಹೊರಟಾಗಿದೆ ದಿನ ದಿನವೂ,
ಗರ್ಭದುಃಖವು ಕೋಡಿಯೊಡೆದು
ನಿಮ್ಮ ಅಸಹ್ಯದ ಭಾವಬುವಿಯೊಳಗೆ
ನಿಂತು ನಲಿವಿನ ಬುಗ್ಗೆಯಾಗಿದೆ;ಮನದ
ಬೊಗಸೆಯಲಿ ಹಿಡಿದು ಕುಡಿಯಿರಿ
ಅಪಾರದರ್ಶಕ ಲಿಂಗಿಗಳೇ.
ಚಿಕ್ಕಜಾಜೂರು ಸತೀಶ


ಸತ್ಯ…ಅಷ್ಟೇ..!!

ಈ ಒಂಟಿ ಮನವು
ಸಂತೈಸಿ ಸಮಾಧಾನಿಸಿದ ಹೃದಯಗಳೆಷ್ಟೋ…
ಒಂದು ಹೃದಯಕ್ಕೂ
ಎನ್ನ ಮನದಾಳ ತುಡಿತ ಅರ್ಥವಾಗಲಿಲ್ಲವೇ…

ಅರ್ಥವಾಗದಿರುವುದೇ
ಒಳಿತು….
ಮತ್ತೊಂದು ಹೃದಯ ಗೂಡಿನೊಂದಿಗೆ ಹೇಗೋ
ಅರ್ಥೈಸಿಕೊಂಡು
ಬದುಕು ಜಟಕಾ ಬಂಡಿ
ಸಾಗಿದೆ ಅವರದು…

ಇರಲಿ…, ಅವರ
ಬದುಕು ಬಂಗಾರವಾಗಿ ಹೂವಿನಂತೆ ಸುಗಂಧ ಬೀರುತ್ತಿರಲಿ…
ಅವರಂತೆ ನನ್ನದು ಆಗಲಿ ನನ್ನಂತೆ ಅವರದಾಗೋದು ಕಿಂಚಿತ್ ಇಷ್ಟವಿಲ್ಲ…!

ಯಾಕೋ ಜಿಗುಪ್ಸೆ…
ಈ ಒಂಟಿ ಮನಕೆ
ಜಂಟಿಯಾಗಿ ಬರುವ ಹೃದಯ,
ಅದೆಷ್ಟು ಮನಗಳನ್ನು ಬದಿಗೊತ್ತಿ ಬರುತ್ತಿರುವಳೋ…

ಇರಲಿ ಬಾ,
ಆ ಯಾವ ಹೃದಯ
ನೆನಪು ಹತ್ತಿರ ಸುಳಿಯದು
ಅಷ್ಟು ಹೇಳಬಲ್ಲೆ…,
ಕಮರಿದ ಪ್ರೀತಿಯನ್ನು ಹೂವಾಗಿ ಅರಳಿಸುವೆ
ಕಹಿಯಾದ ಜೀವನ
ಸಿಹಿ ಜೇನಾಗಿಸುವೆ…!!

ಅದ್ಯಾವ ಋಣಾನುಬಂಧವೋ
ನನ್ನ-ನಿನ್ನ ಬಂಧ
ತನು-ಮನ ಬಯಸಿದಷ್ಟೆ ಪೂರೈಸುವೆ ಮನದಾಸೆಗಳನ
ನಿನ್ನ ನಿರೀಕ್ಷೆಯಷ್ಟೆ ಸತ್ಯ…!!
ಸತ್ಯ…ಅಷ್ಟೇ!!

ಯಲ್ಲಪ್ಪ ಎಮ್ ಮರ್ಚೇಡ್


ಹಚ್ಚು ಬಾ ಹಣತೆಯೊಂದನು…..
ಕತ್ತಲು…
ಮುತ್ತಿಹುದು ಸುತ್ತಲು,
ನೆರೆಯಾಗಿ ಹೊರೆಯಾಗಿ
ಮಾರುತದ ತೆರೆಯಾಗಿ…
ಹಚ್ಚು ಬಾ ಹಣತೆಯೊಂದನು..
ಕಳೆಯೆ ಮುತ್ತಿದ ಕತ್ತಲು.

ತಮವು…
ಅರಳಿದಂತೆ ಸುಮವು,
ಬೆಳೆಯುತಿದೆ ಸೆಳೆಯುತಿದೆ
ನುಂಗುವಂತೆ ಭ್ರಮವು…
ಹಚ್ಚು ಬಾ ಹಣತೆಯೊಂದನು..
ಕಳೆಯೆ ತಮದ ಭ್ರಮವು.

ಭ್ರಷ್ಟವು…
ಕಾಣುತಿದೆ ಸ್ಪಷ್ಟವು,
ದುಷ್ಟ ಮನಗಳಲಿ ಪುಷ್ಟವಾಗಿ
ಅಂಟಿಕೊಂಡ ಅನಿಷ್ಟವಾಗಿ…
ಹಚ್ಚು ಬಾ ಹಣತೆಯೊಂದನು..
ಸುಡಲಿ ಭ್ರಷ್ಟದ ಬತ್ತಿಯು‌

ವೈರವು..
ಬೇರು ಬಿಟ್ಟಿದೆ ಎಲ್ಲೆಲ್ಲೂ,
ಮನದ ಮನೆಯಲೂ ಎದೆಯ ಸುಧೆಯಲು
ಅಡಗಿ ಕುಳಿತಿಹುದು ಕಾಣದೇ..
ಹಚ್ಚು ಬಾ ಹಣತೆಯೊಂದನು…
ಓಡಿಹೋಗಲಿ ವೈರವು.

-ಸರೋಜ ಪ್ರಶಾಂತಸ್ವಾಮಿ.


ಕಣ್ಣುಗಳು ನನ್ನದಲ್ಲ

ನಾನು ನಿನ್ನನ್ನು ನೋಡಿದ್ದೇನೆ
ಆದ್ರೆ ಕಣ್ಣುಗಳು ನನ್ನದಲ್ಲ

ದಶರಥನ ಮಹೋನ್ನತ ಯೋಚನೆಗಳಲ್ಲಿ
ಮಂಥರೆಯ ಮೋಸದಲಿ
ಊರ್ಮಿಳೆಯ ಉದಾಸೀನತೆಯಲ್ಲಿ
ಲಕ್ಷ್ಮಣನ ನೆರಳಿನಲ್ಲಿ
ಹನುಮಾನನ ಸೇವೆಯಲಿ
ರಾವಣನ ಶೌರ್ಯದಲ್ಲಿ
ಜೊತೆಗೆ ನಿನ್ನ ನಂಬಿ ಬಂದ ಹೆಣ್ಣು
ಅದೇ ಸೀತೆಯ ಕಂಬನಿಯಲ್ಲಿ

ನಿನ್ನನ್ನು ನಾ ಮತ್ತೆ ನೋಡುತಿದ್ದೇನೆ
ಮತ್ತೆ ನೋಡು ಕಣ್ಣುಗಳು ನನ್ನದಲ್ಲ

ಧರ್ಮದ ಚದರಿನಲ್ಲಿ
ಜನ್ಮ ಭೂಮಿಯ ಹಂಗಿನಲಿ
ರಾಜಕೀಯದ ದಾಳದಲಿ
ಕೋರ್ಟುಗಳ ವಿವಾದಗಳಲಿ
ದಾನಿಗಳ ದಾನದಲಿ
ಮೌಢ್ಯದ ಹಾದಿಯಲ್ಲಿ
ಮಾಧ್ಯಮದ ಗದ್ದಲದಲ್ಲಿ

ನಿನ್ನ ಸೃಷ್ಟಿದ ವಾಲ್ಮೀಕಿ
ಕಡತಗಳ ಹಿಡಿದು
ಇನ್ನೂ ಹೊರಗೆ ನಿಂತಿದ್ದಾನೆ
ಅವನ್ನು ವಿಚಾರಿಸು
ನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು?

ಸಾವು ನೋವುಗಳ ಮೇಲೆ ಹಿಡಿತ
ತಪ್ಪಿರುವಾಗ ದೇವರಾಗುವ
ಬದಲು ವೈದ್ಯನಾಗು
ಮಂದಿರ ಮಂದಿರವಾಗಿಯೇ ಉಳಿಯುತ್ತದೆ

ಆಗ ಮಾತ್ರ ನೀನು ನನ್ನ
ಅವನ ಇವನ ಮತ್ತೊಬ್ಬನ
ಕಣ್ಣಿಗೆ ಕಾಣುವೆ
ಕ್ಷಮಿಸು
ನಿನಗೆ ಸಾದ್ಯವಾದರೆ
ರಾಮರಾಜ್ಯ ಬೇಕಿದೆ ನಮಗೆ
ಕೊಟ್ಟು ಬಿಡು

-ಜಹಾನ್ ಆರಾ


ತಿಮಿರಚ್ಛೇದ

ಬತ್ತುತ್ತಿದೆ ಜ್ಞಾನದ ದಾಹ
ಸ್ಥಿಮಿತ ಕಳೆದ ತಿಳಿವು,
ಕುದಾರಿ ಹಿಡಿದಿದೆ, ಬೀರುತಿದೆ
ಕುಹಕ ನಗು ಅಹಂಭಾವ

ವರತೆಗೆ ಉಕ್ಕುವ ಹಂಬಲ
ಕಡೆ ಉಸಿರು ಹಿಡಿದ ಮತ್ಸ್ಯ
ಹಸಿದು ಕುಳಿತ ಹಕ್ಕಿ
ಯಾರಿಗಿಲ್ಲ ಸಾವು?

ಹಸಿ ಹಸಿ ಮೈಗೆ ಬೇಕು
ಬಿಸಿ ಉಸಿರ ತಾಪ,
ಸಮಯಕ್ಕೆ ಜೀವವಿಲ್ಲ
ಪಾಪ ಇಲ್ಲ ಇಲ್ಲಿ ಚೂರೂ ಆಸೆ, ಭಾವ

ಬಿಟ್ಟು ನಡೆದರೆ ನಾನು
ಕವಲಿಲ್ಲ ದಾರಿ ಇದೆ
ಸತ್ಬುದ್ಧಿ ಆಳಿದರೆ
ಅರಿವು ಸಮೃದ್ಧಿ…… ತಿಮಿರಚ್ಛೇದ
-ವರದೇಂದ್ರ ಮಸ್ಕಿ


ಬಿಟ್ಟರೂ ಬಿಡದ ಈ ಮಾಯೆ’

ಚಿಂತೆ ಚಿಂತನೆಗಳ ಕಮ್ಮಟ
ಈ ಮನಸೆಂಬೋ ಮರ್ಕಟ.
ಇವನ ಒಡನಾಟ ತರುವುದು
ಬರೀ ಪೀಕಲಾಟ…

ಬಡವ ನೀ ಮಡಗಿದ್ಹಂಗಿರು ಎನ್ನುವ,
ಮತ್ತೊಮ್ಮೆ ಅರಸನಾಗಿ ಮಾಡುವ…
ಬೆಂಬಿಡದೆ ಬೆನ್ನೇರಿ, ಕಾಡಿ
ಆಸೆಗಳ ಚಿಗುರಿಸಿ, ನಕ್ಷತ್ರಗಳ ಎಣಿಸುತ್ತ,
ನಾವೇ ನಕ್ಷತ್ರಗಳಾಗುವವರೆಗೂ ಬಿಡಲೊಲ್ಲನು..
ಈ ಮಾಯಾವಿ ಮನವೆಂಬ ಮರ್ಕಟ…

ಕೆಲವೊಮ್ಮೆ ನೋವ ಮೆಟ್ಟಿ ನಿಲುವ
ಛಲವ ನೀವ,
ಮಗದೊಮ್ಮೆ ಬರೀ ದುಮ್ಮಾನವ..
ಮಲಗಲೂ ಬಿಡದೆ, ಓಲೈಸಿ,
ಲಂಗು ಲಗಾಮಿಲ್ಲದ
ಕನಸಿನ ಕುದುರೆಯೇರಿಸಿ, ವೈಭೋಗದ ನಡುವೆ ಓಲಾಡಿಸುವ,
ಕ್ಷಣದಲಿ ಬಿಕಾರಿಯಾಗಿಸಿ,ನರಳಿಸುವ
ಈ ಮರುಳ, ಕಳ್ಳ…

ತಣ್ಣಗಿನ ತಲೆಯ ವಿಚಾರಗಳ
ಇರುವೆ ಗೂಡಾಗಿಸಿ,
ಕೆರೆದು, ಪರಚಿ, ನುಣ್ಣಗೆ ಮಾಡಿ
ತಮಾಷೆ ನೋಡುವ ಖದೀಮನಿವನು..
ಒಂದೊಮ್ಮೆ ಸೋತು ಕೈ ಚೆಲ್ಲಿದರೆ,
ಮುಗಿದೇ ಹೋಯಿತು..
ಜೀವಂತ ಹಿಂಡಿ ಹಿಪ್ಪೆ ಮಾಡಿ,
ದೇವದಾಸನನ್ನಾಗಿ ಮಾಡಬಲ್ಲ….

ಕೊನೆಗೂ ಅರಿತೆ ಅವನ ಜಾಲ,
ಅದು ಸುಲಭದ ಮಾತಲ್ಲ,
ಹಿಡಿದು ಕಟ್ಟಿ ಹಾಕಿ,
ನಿನ್ನ ಮಾಯೆಯೊಳಗೆ ನಾನಿಲ್ಲ ಎನಲು,
ಮುದುರಿಕೊಂಡ ಬಾಲ.
ಅಂತೂ ನನ್ನ ಜೀವ ನಿರುಮ್ಮಳ..

-ಕಮಲ ಬೆಲಗೂರ್.


ಕಡಲಮುತ್ತು

ಭಾವದಲೆಯ ಹೊತ್ತು ತರುವ ನಾವಿಕನಂತೆ
ಹಾಲ್ನೊರೆಯ ತೆರದಿ ದಡಕ್ಕೆ ಅಪ್ಪಳಿಸಿದಂತೆ
ನೆನಪುಗಳು ಮನದಾಳಕ್ಕೆ ಬಡಿಯುತಿವೆ
ಝಲಕುಗಳು ಸುಗಂಧವ ಪಸರಿಸುತಿವೆ

ಕಾಣದಿರುವೆ ನಿನ್ನೊಲವ ರೀತಿಯನು
ಅಂದುಕೊಂಡಿರುವೆ ಕಡಲಿಗೆ ಸೂರ್ಯಾಸ್ತದಂತೆ
ಮರಳಿನಲ್ಲಿ ಕಾದು ಕುಳಿತಿರುವೆ
ಕಡಲ ಮುತ್ತಿನೊಳಗೆ ನೀ ಅವಿತಿರುವೆ

ಅಕ್ಕರೆಯ ಸವಿನುಡಿಗಳಿಗೆ ಮನಸೋತೆನಲ್ಲ
ಭಾವನೆಗಳ ಗರಿಬಿಚ್ಚಿ ಕುಣಿದು ನರ್ತಿಸಿದೆನಲ್ಲ
ಸೂರ್ಯರಶ್ಮಿಯ ತೆರದಿ ಒಡಲೊಳಗೆ ನೀ ಬಂದೆ ನಲ್ಲ
ಸ್ಪಟಿಕದ ಹೊಳಪಿನಂತೆ ಹೃದಯ ಬೆಳಗಲು ನೀ ಹೊಕ್ಕೆ ನಲ್ಲ

ಅಂತ್ಯ ಗೋಚರಿಸದ ಶರಧಿಯಂತೆ
ಅಂತರವಿಲ್ಲದ ನೀರಿನ ಕಣದಂತೆ
ಅನವರತ ಬೆರೆವೆವು ಹಾಲ್ಜೇನಿನಂತೆ
ನಮ್ಮೀ ಪ್ರೇಮವು ಮಥಿಸಿದ ಸಾಗರದಂತೆ

ನೋವು ನಲಿವುಗಳ ಜೊತೆ ಬಂಧಿಯಾದೆವು ನಾವ್
ಬದುಕ ಬೆನ್ನೇರಿ ಹೊತ್ತು ಪ್ರೀತಿಯ ಕಾವ್
ಪ್ರಕೃತಿಯೊಂದಿಗೆ ಬಾಳು ಅವಿಸ್ಮರಣೀಯ
‘ ನಂಬಿಕೆಯೇ ಜೀವನ ‘ ಮಂತ್ರವೊಂದೇ ಆದರಣೀಯ .

-ಗಾಯತ್ರಿ ನಾರಾಯಣ ಅಡಿಗ


ನಮ್ಮ ಗಾಂಧೀಜಿ
ದೇಶಸೇವೆಗೆ ಒಲಿದು
ಸತ್ಯಕ್ಕೆ ಆಗ್ರಹಿಸಿ
ಅಹಿಂಸೆಯ ತುಡಿತದಲಿ
ಪಾರತಂತ್ರ್ಯಕ್ಕೆ ದಿಟ್ಟ
ಹೊಡೆತವನು ನೀಡಲ್ಕೆ
ಸತ್ಯಾಗ್ರಹದ ಸಬಲ ಅಸ್ತ್ರ ಕೊಟ್ಟು
ಸ್ವಾತಂತ್ರ್ಯ ಸಂಗ್ರಾಮದ
ಉತ್ಕಟ ಸಂಭಾವ್ಯತೆಗೆ
‘ಮಾಡು ಇಲ್ಲವೇ ಮಡಿ’
-ಎಂಬ ಘೋಷ ವಾಕ್ಯವಿತ್ತು
ವರ್ಣ-ಮತ-ಜಾತಿ-ಪಂಥ
ವಿದ್ವೇಷಕ್ಕೆ
ಸಾಮರಸ್ಯದ ಸಫಲ
ಬೋಧೆಯಿತ್ತು
ಸರ್ವೋದಯಕೆ ಸತತ
ಹಂಬಲವ ತೋರುತಲಿ
ದೀನರುದ್ಧಾರಕ್ಕೆ ಜೀವತೆತ್ತು
ಮೂಲ ಶಿಕ್ಷಣದ ಆಶಯದಿ
ನವರಾಷ್ಟ್ರ ನಿರ್ಮಾಣದ
ಮಹದಾಸೆ ಹೊತ್ತು
ಸ್ವಚ್ಛತೆಯ ಮಂತ್ರವನು
ಸಕಲರೆದೆಗಳಲಿ ಅನುರಣಿಸುತ
ರಾಷ್ಟ್ರದೈಕ್ಯತೆಗೆ ಪ್ರೇರಿಸುವ
ಛಲವ ತೊಟ್ಟು
ಸಮತೆಯಾದರ್ಶಕೆ ನಿರತ
ಯತ್ನವಗೈದು
ಸರಳತೆಯು ಮೈವೆತ್ತ
ಅಧಿಕಾರ ಲೋಭಕ್ಕೆ
ಬೆನ್ನು ಮಾಡುತ್ತ
ಸತ್ಯ ಸೇವೆಗೊಲಿದು
ತನ್ನ ಜೀವನವನೇ
ಸಂದೇಶವಾಗಿಸಿದ
ಧೀಮಂತ ನಾಯಕಗೆ
ಭಾರತದ ರಾಷ್ಟ್ರಪಿತನೆಂದೆಂಬ
ಅಭಿದಾನವೊದಗಿ
ವಿಶ್ವ ಮೆಚ್ಚಿದ
ಮೇರು ಮಹಾಮಹಿಮ
ನಮ್ಮ ಗಾಂಧೀಜಿ..

-ವೀಣಾ ಪಿ.


ಕನ್ನಡ, ನನ್ನ ಕನ್ನಡ

ನಿಜ ಹೇಳಲೇ ಗೆಳತಿ?
ಅರಿವಿರಲಿಲ್ಲ ನನಗೆ
ನನ್ನ ಭಾಷೆಯ ಸೊಗಡು!
ಇದೇ ರಾಜ್ಯದಲ್ಲಿ ಇದ್ದಾಗ
ದಿನಾ ಮಾತಾಡುವುದು ಇದೇ,
ನನ್ನದೇ ತಾನೆ, ಪಕ್ಕಕ್ಕಿಡು!

ಅನಿಸಿರಲಿಲ್ಲ ವಿಶೇಷವೆಂದು
ಗೊತ್ತಾಯಿತು ಹೋದಾಗ ಪರವೂರಿಗೆ
ಎಷ್ಟು ಸುಂದರ, ಸಿಹಿ ಈ ಭಾಷೆ!
ಹಿತ್ತಲ ಗಿಡ ಮದ್ದಲ್ಲ
ಮನೆಯಲ್ಲಿ ಮಾಡಿದ್ದು ರುಚಿಯಿಲ್ಲ
ಇತ್ತು ಪರಭಾಷೆ ಕಲಿಯಲು ಆಸೆ!

ಹಪಹಪಿಸಿತು ಮನ
ನನ್ನ ಭಾಷೆ ಕೇಳಲು ಅಲ್ಲಿ
ಆದರೆ ಸಿಗುವುದು ಕಷ್ಟ!
ಎಲ್ಲೋ ಒಂದು ಪದ ಬಿದ್ದರೆ ಕಿವಿ
ನಿಮಿರುವುದು, ಕುಣಿಯುವುದು ಮನ
ತುಂಬಾ ತುಂಬಾ ಇಷ್ಟ!!

ಬೇಕು ಬಾಳಿಗೆ ಮುದ ನೀಡುವ ನನ್ನ ಕನ್ನಡ
ಓದಬೇಕು, ಬರೆಯಬೇಕು, ಮಾತಾಡಬೇಕು
ರಕ್ಷಿಸಬೇಕು ಅವಳನ್ನು!
ಬೆಳೆಸಬೇಕು, ಉಳಿಸಬೇಕು
ನಾವು ಮನೆ ಮಕ್ಕಳು
ಪರಭಾಷಾ ಮೋಹ ಸಾಕಿನ್ನು!!

-ಸಹನಾ ಪ್ರಸಾದ್


ಕಲೆಗಾರ

ಅಗಸದಿ ಪ್ರತಿ ಕ್ಷಣವು ಚಿತ್ತಾರ ಬರೆವೆ ನೀನು
ಮುಂಜಾನೆ ಕೆಂಪು ಮಸ್ಸಂಜೆ ತಂಪು ಬಾನು
ಇರುಳಲ್ಲಿ ಹೊಳೆವ ತಾರೆಗಳ ಸಂತೆಯೇನು
ಪ್ರತಿ ರಾತ್ರಿ ಹೊಸ ರೂಪ ತಳೆವ ಚಂದಿರನು

ಚಿಲಿಪಿಲಿ ನಾದದೊಡನೆ ಸಂಗೀತ ಹಕ್ಕಿಗಳದು
ನರ್ತನವ ಮಾಡೋ ನವಿಲಂತ ಪಕ್ಸಿಗಳದು
ನಿಸರ್ಗವೆ ಕಲೆಗಾರರಿರುವ ಮೇಳವದು
ಇದ ವರ್ಣಿಸಲು ಪದಗಳು ಎಲ್ಲಿಹುದು

ಇಬ್ಬನಿಯ ಹನಿಗಳ ಮುತ್ತಂತೆ ಕೂರಿಸುವೆ
ನೂರಾರು ಬಣ್ಣದ ಪುಷ್ಪಗಳ ಅರಳಿಸುವೆ
ಪರಿಮಳವ ಚೆಲ್ಲಿ ದುಂಬಿಗಳ ಬಳಿ ತರುವೆ
ಗೂಡಲ್ಲಿ ಜೇನು ತುಂಬಿ ಬಾಳು ಸಿಹಿಯಾಗಿಸುವೆ

ಸೃಷ್ಟಿಕರ್ತ ನೀನು ನಿನ್ನ ಸೃಷ್ಟಿಯೇ ದೊಡ್ಡ ಕಲೆ
ನೀನೇ ಇಲ್ಲದಿರಲು ನನ್ನ ಬರಹಕ್ಕೆ ಏನು ಬೆಲೆ
ಅಕ್ಷರವು ನಿನ್ನದು ಪದ ಜೋಡಣೆ ನನ್ನದಷ್ಟೇ
ನಿನುಸುರವ ಕವನವನೆ ನಾನು ಬರೆವನಷ್ಟೇ

ಡಾ. ನ. ಸೀತಾರಾಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Manjunatha Guttedar
Manjunatha Guttedar
3 years ago

ಯಲ್ಲಪ್ಪ ಮರ್ಚೆಡ್ ರವರ ಸತ್ಯ ಅಷ್ಟೇ ಎಂಬ ಕವಿತೆ ತುಂಬಾ ಚೆನ್ನಾಗಿದೆ ಶ್ರೀಯುತರಿಗೆ ಅಭಿನಂದನೆಗಳು. 💐💐👍👍🙏

Manjunatha Guttedar
Manjunatha Guttedar
3 years ago

ನಮ್ಮ ಗಾಂಧೀಜಿ ಎಂಬ ಕವಿತೆಯನ್ನು ವೀಣಾ.ಪಿ ಯವರು ತುಂಬಾ ಸೊಗಸಾಗಿ ಹೆಣೆದಿದ್ದಾರೆ. ಅವರಿಗೆ ಅಭಿನಂದನೆಗಳು. 💐💐💐👍👍🙏

Manjunatha Guttedar
Manjunatha Guttedar
3 years ago

ಹಚ್ಚು ಬಾ ಹಣತೆಯೊಂದನು ಎಂಬ ಕವಿತೆಯನ್ನು ಸರೋಜ ಪ್ರಶಾಂತಸ್ವಾಮಿ ಯವರು ಬಹಳ ಸುಂದರವಾಗಿ ರಚಿಸಿದ್ದಾರೆ ಅವರಿಗೆ ಅಭಿನಂದನೆಗಳು. 💐💐💐👍👍

3
0
Would love your thoughts, please comment.x
()
x