ನಾನು ಕವಿತೆ ಬರೆಯುವುದಿಲ್ಲ…
ನಾನು ಕವಿತೆ ಬರೆಯುವುದಿಲ್ಲ…
ನನ್ನೊಳಗಿನ ಬನಿಗೆ ದನಿಯಾಗಬೇಕೆಂಬ
ಇರಾದೆ ನನಗಿಲ್ಲ.
ಕೇವಲ ನನ್ನೊಳಗಿನ ಮಿಸುಗನ್ನು
ನಸುಗುನ್ನಿಯನ್ನು ಅಕ್ಷರವಾಗಿಸುತ್ತೇನೆ.
ಒಮ್ಮೊಮ್ಮೆ ಅಕ್ಷರಗಳು ಮಾತಾಡುತ್ತವೆ,
ಕೆಲವೊಮ್ಮೆ ಹಾಡುತ್ತವೆ,
ಮತ್ತೊಮ್ಮೆ-ಮಗದೊಮ್ಮೆ ಕಾಡುತ್ತವೆ.
ದುಂಬಾಲು ಬಿದ್ದು ಮುದ್ದು ಮಾಡಿಸಿಕೊಳ್ಳುತ್ತದೆ.
ಆಗ್ಗಾಗೆ ಮುಗಿಬಿದ್ದು ಮರುಬರೆಸಿಕೊಳ್ಳುತ್ತದೆ.
ಬರೆವಾಗ ತನ್ಮಯಗೊಳಿಸಿ ಮೈಮರೆಸುತ್ತದೆ.
ಲಲ್ಲೆಗರೆಯುತ್ತವೆ. ಚೆಲ್ಲುಬಡಿಯುತ್ತವೆ
ಎಲ್ಲೆಂದರಲ್ಲಿ ನನ್ನೊಳಗೆ ರಾರಾಜಿಸುತ್ತದೆ.
ನನ್ನ ಸೊಂಟಕ್ಕೆ ತುಂಟಮಗುವಾಗಿ,
ಪಂಟುಹೊಡೆಯುವ ಲಂಪಟನಾಗಿ,
ಉಪಟಳಿಸುವ ಸುಂಟರಗಾಳಿಯಂತೆ
ನನ್ನ ಸುತ್ತಲೆ ತಿರುಗುತ್ತವೆ !
ಕನಸಲ್ಲಿ ಕಾಡುತ್ತವೆ ಥೇಟ್ ನನ್ನ ಪ್ರೇಮಿಯಂತೆ !
ಮಡಿಲಲ್ಲಿ ಆಡುತ್ತವೆ ಮೊಲೆಗೂಸಂತೆ !
ಹಕ್ಕುಚಲಾಯಿಸುವಾಗ ಗಂಡನೇ ಆಗಿಬಿಡುತ್ತದೆ.
ಕಾಂತಸಮ್ಮಿತವಾಗಿಯೂ ಒಮ್ಮೊಮ್ಮೆ…
ನನ್ನೊಳಗ ಬಯಲಲ್ಲಿ ದೊಂದಿಯಾಗಿ ಉರಿದು,
ನನ್ನೊಡಲ ನೂರು ರಸರಾಗಗಳ ಕರೆದು
ಕಡೆಗೆ
ಮಿಥುನೋತ್ತರ ಶಾಂತಮೈಯಂತೆ
ಸಣ್ಣಗುರಿವ ನಂದಾದೀಪದಂತೆ
ನನ್ನ ಭ್ರೂ ಮಧ್ಯದಲಿ ಬೆಳಕಾಗಿ ವಿರಮಿಸುತ್ತದೆ.
-ಉಷಾನರಸಿಂಹನ್,
ಗೆರೆಗಳು
ಮೊಗದ ಮೇಲೆ
ಮೂಡುವ ಗೆರೆಗಳು
ನನ್ನವೇ ಅಲ್ಲದಿದ್ದರೂ ನನ್ನವು
ಎಂಬುದು ನಿಜ.
ಮೂಡಿ ಮಾಯವಾಗುವ
ಮುಗುಳಿನ ಗೆರೆಗಳು
ಕಣ್ಣ ಆಚೆ ಈಚೆ ಕಾಣುವ
ಸುಕ್ಕಿನ ಗೆರೆಗಳು
ಹಣೆಯ ಮೇಲೆ
ಬ್ರಹ್ಮ ಬರೆದು ಕಳಿಸಿದ ಗೆರೆಗಳು
ಚಿಂತೆಯ ಪ್ರಮಾಣಕ್ಕೆ
ತಕ್ಕುದಾದ ಚಿಂತನೆಯ ಗೆರೆಗಳು|
ಇವುಗಳನ್ನಿಳಿಸಿದವರಿಗೂ
ಅದನಲ್ಲಿಯೇ ಉಳಿಸಿದವರಿಗೂ
ಇದು ತಮ್ಮದೇ ಕೊಡುಗೆ-
ಯೆಂಬರಿವು ಇರಬಹುದು. ಏಕೆ?
ಇದ್ದೇ ಇರುತ್ತದೆ.
ಎಲ್ಲದರ ಕೊನೆಗೆ ಅಗೋ…
ಅಲ್ಲೊಂದು ಗೆರೆಯಿದೆ
ಕೆಳಗವನ ಹೆಸರೂ ಇದೆ
ಸಹಿ ಮಾಡಬೇಕಷ್ಟೇ ಅವನಲ್ಲಿ
ನಾ ಸಮಾಧಿಯಲ್ಲಿ
ಅಥವಾ ಹಿಡಿ ಬೂದಿಯಲ್ಲಿ||
-ತಲಕಾಡು ಶ್ರೀನಿಧಿ.
ಮಾಯಾವಿ ನೆರಳು
ಕವಿದ ಸಂಜೆಯ ಕತ್ತಲಲ್ಲಿ
ಮಸುಕಾಗಿ ಹಿಂಬಾಲಿಸಿದವಳು
ಬೆಳಕ ಕಂಡೊಡನೆ ತೀಕ್ಷ್ಣವಾಗಿ
ಬೆನ್ನ ಹಿಂದೆಯೇ ನಿಲ್ಲುವಳು
ಓಡಿದರು ದೂಡಿದರು ಜೊತೆಯಲ್ಲೆ ಇರುವಳು
ಯಾರದ್ದೋ ಮಾತ ಕಿವಿವೊಡ್ಡಿ ಕೇಳುವಳು
ಆದರೆ, ಕತ್ತಲ ಕಂಡರೆ ಮಾತ್ರ
ಮಗುವಂತೆ ಹೆದರಿ ಮರೆಯಾಗುವಳು
ಕೆಲವೊಮ್ಮೆ ಉದ್ದಾಗಿ, ಮತ್ತೊಮ್ಮೆ ಕುಬ್ಜಾಗಿ
ಬಳುಕುತ್ತ ನಡೆದುದಾರಿ ಸವೆಸುವಳು
ಬೆಳಕಿನ ದಿಕ್ಕು ಬದಲಾದರೆ ಸಾಕು
ಹಿಂದಕ್ಕೆ ಮುಂದಕ್ಕೆ ಅಕ್ಕ-ಪಕ್ಕಕೆ ಸರಿದು
ತನ್ನಇರುವ ತೋರುವಳು
ಬೆಳಕು ಬಂದೊಡನೆ ಬಂದುತಬ್ಬುವ ಇವಳು
ಕತ್ತಲಲಿ ಕೂತರೆ ನನ್ನೊಳಗೇ ಅಡಗಿ ಕೂರುವಳು
ಎಷ್ಟಾದರೂ, ಮಾಯಾವಿ – ನನ್ನ ನೆರಳು
-ಶ್ರೀರಂಗ. ಕೆ. ಆರ್
ಮೋಡಗಳ ಮಹಾಪೂರ…
ಹಾಗೇ ಹೋಗುತಿವೆ ನೋಡಿ ಮೋಡಗಳು
ಮಳೆಗಾಗಿ ಕಾಯ್ವ ಬೆಳೆಗೆ ಬೇಸರ ತರಿಸಿ
ರೈತನ ಚಿಂತೆ ಚಿತೆಯಲ್ಲಿರಿಸಿ!
ಒಮ್ಮೊಮ್ಮೆ ಹೆಚ್ಚೆಚ್ಚು ಸುರಿದು ಹರಿದು ಬಂದು
ಮಿಗ-ಖಗ ಮನುಜರ ಮಹಾಪೂರದಿ ಇರಿದಿರಿದು
ಕೊಂದು ಹೋಗುತ್ತವೆ,
ಹೋದರೆ ಹೋಳಿ ಹುಣ್ಣಿಮೆಯಂತೆ
ಅರಗಿಸಿಕೊಳ್ಳಲಾಗದ ಸಾವು-ನೋವಿನ ಆಕ್ರಂದನವ,
ನೆತ್ತಿಯ ಮೇಲೆ ನಿಂತು ನೋಡುತ್ತವೆ
ಏನು ಅರಿಯದ ಹಸುಳೆಯಂತೆ ಕಣ್ಣು ಪಿಳುಕಿಸದೆ
ಕೃಷಿಕರೊಳು ಸಂಚಿತ ಖುಷಿಯ ಅವರಿಂದ ಬಿಡಿಸಿ,
ನೋವು ಎಲೆ ಎಲೆಗೆ ಉಣಬಡಿಸಿ
ಏನೋ ಸಾಧಿಸಿದವರಂತೆ ಹೋಗುತ್ತವೆ!
ಆಂತರ್ಯದಿ ಸಂತಸಗೊಂಡು
ಹೇ! ಮೇಘಗಳೇ ಸಹಿಸಿಕೊಳ್ಳಿ
ಈ ನರರ ನಡತೆಯನ್ನ,
ಸುಮ್ಮನಿರದಿರಿ!
ಎಲ್ಲ ಕೇಳಿಸಿಕೊಂಡು ಸುಮ್ಮನಿರುವ ಗೋಡೆಗಳಂತೆ
ಕಾಲಕಾಲಕು ಹಾಗೇ ನಾಲ್ಕು ಹನಿಯ ಚೆಲ್ಲಿ ಹೋಗಿ
ಪ್ರಕೃತಿಯ ಕಡುಕೋಪಕ್ಕೆ ಕಾರಣವೂ ಇದೆ
ಮಾಡಬೇಕಿದೆ ಮನುಕುಲ ಪರಿಸರದ ಬಗೆಗೆ, ಚಿಂತನ-ಮಂಥನ!
-ಅಯ್ಯಪ್ಪಕಂಬಾರ
ಜೋಳಿಗೆ ಹಿಡಿದ ಜೋಡು
ಅಪ್ಪನ ಹಳೆಯ ಜೋಡಿನಲಿ
ಉಂಗುಷ್ಟಕ್ಕೆ ಅಂಟಿದ ದಬ್ಬಾಳಿಕೆಗಳು.
ಅಲ್ಲಿ ಕೂತು ಬೇಡಿದ ಕೈಗಳಲಿ
ಉಳಿದ ಅಳಿದ ರಾತ್ರಿಯ ಮೃಷ್ಟಾನ್ನ.
ತಿಂದು ತಂದ ಮುಷ್ಟಿಯಲಿ
ನಾಯಿಯ ಹಸಿವಿಗೂ ಸಮಪಾಲು.
ಹರಿದ ಅವ್ವನ ಸೆರಗು
ಮಳೆ ಬಂದಾಗ ಸೋರುವ ಸೂರಿಗೆ,
ಅಡ್ಡೆಹಾಕಿ ಕರುಳ ಬಳ್ಳಿಗಳಿಗೆ ಬೆಚ್ಚಗಿಡುವ ಛಲ .
ಎತ್ತಿನ ಹೆಗಲು, ಅಪ್ಪನ ಕೈ
ಜಿದ್ದಿಗೆ ಬಿದ್ದವರು.
ಹರಗಿದಂತೆ ಕಾಣುವ
ಕೈ ಗೆರೆಗಳ ಸವಕಳಿ.
ಎಷ್ಟು ಬೆವರು ಸುರಿಸಿದರೇನು
ನೀಡಿದ ಬಿಡಿಗಾಸು
ಮಾರೆಮ್ಮನ ಜಾತ್ರೆಯ,
ಸಾಲದ ಬಡ್ಡಿಗೆ ಪುಡಿಗಾಸು.
ಹಬ್ಬಕ್ಕೆಂದು ಧಣಿ ಒಲಿಸಿಕೊಟ್ಟ
ಕೆಂಪನೆಯ ಅಂಗಿಯಲಿ
ಒಮ್ಮೊಮ್ಮೆ ನನ್ನ ಇರುವಿಕೆ.
ಹರಿದು ಹೋಗುವ ಜೀವಕೆ
ಅವರ ಮನೆಯ ಮುಂದೆ
ಕುಳಿತ ಜಾಗ ಸಂಗಾತಿ .
ಅಲ್ಲಿ ಇಲ್ಲಿ ಅಲೆದಾಡಿ
ನೀಡಿಸಿಕೊಂಡ ಖಾರ,ಸಿಹಿಗಳಲಿ
ಹಬ್ಬದ ಸಂಭ್ರಮ
ಚೂರು ಪಾರು ನೆಕ್ಕುವ ಬೆಕ್ಕಿಗೂ ಚಲ್ಲಾಟ
ಹರಿದ ಕಚ್ಚೆಯ ಚುಂಗಲಿ ಕಟ್ಟಕೊಂಡ ಮಂಡಾಳು.
ಅಲ್ಲಲ್ಲಿ ಸೋರಿ
ಬೇಡುವ ಕೈಗೂ ತೂತಿನ ಸಾಬೀತು .
ಸವೆದ ಜೋಡಿಯ ಪಿನ್ನಿಗೆ
ತುಕ್ಕಿನ ಗೆಳತನ.
ಸವೆದ ದಾರಿಗಳಲಿ ಬರೀ ಕಹಿಗಳ ದಿಬ್ಬಣ.
ಸಮಾನತೆಯ ಬೇಡಿವೆ
ಜೋಳಿಗೆ ಹಿಡಿದ ಜೋಡು
-ಕೊಟ್ರೇಶ.ಬಿ ಬೆಳಗುರ್ಕಿ
ಕನಕಾಂಬರದ ಹುಡುಗಿ
ಮಲೆನಾಡ ಹೆದ್ದಾರಿಯ ಪಕ್ಕದ ಕಾಡಿನೊಳಗೊಂದು
ಪುಟ್ಟ ಗೂಡು
ಅದರೊಳಗೊಬ್ಬ
ಎದೆ ಚಿಗುರದ ಹುಡುಗಿ.
ಪ್ರತಿ ಮುಂಜಾನೆ ತನ್ನ ಹಿತ್ತಲಲಿ ಬೆಳೆದ
ಕನಕಾಂಬರ ಗಿಡಗಳಿಂದ ಹೂಬಿಡಿಸಿ ಮಾಲೆ ಕಟ್ಟುತ್ತಾಳೆ.
ಮನೆಗೆ ಅಕ್ಕಿಬೇಕು ಬೇಳೆ ಬೇಕು
ಮುಸ್ಸಂಜೆ ಹಚ್ಚಲು ದೇವರ ದೀಪಕ್ಕೆಎಣ್ಣೆ ಬೇಕು.
ಅವ್ವನ ಕಾಯಿಲೆ ಕಸಾಲೆಗೆ
ಮನೆದೇವರ ಹಬ್ಬಕ್ಕೆ ಬೆಲ್ಲದ ಪಾಯಸ ಮಾಡಲಾದರು ಕಾಸು ಬೇಕು.
ಅವಳದೆಷ್ಟು ಶ್ರದ್ದೆಯಿಂದ ತನ್ಮಯಳಾಗಿ
ಹೂ ಕಟ್ಟುತ್ತಾಳೆಂದರೆ ಕಟ್ಟಿದ್ದನ್ನು ತಾನೇ
ಮುಡಿದು ಮೆರೆದಂತೆ ಕಲ್ಪಿಸಿ ಸಂಭ್ರಮಿಸುತ್ತಾಳೆ.
ಕಟ್ಟಿ ಮುಗಿಸಿ
ಬಿಸಿಲೇರುವ ಮುಂಚೆಯೇ ಕರಿಟಾರು ರಸ್ತೆ
ಪಕ್ಕದ ಮರದ ನೆರಳಲ್ಲಿ ನಿಂತು ಎಡಬಲ ನೋಡುತ್ತಾ ನಿಲ್ಲುತ್ತಾಳೆ
ಬರಬಹುದಾದ ಕಾರು ಬಸ್ಸು ಲಾರಿಗಳಿಗಾಗಿ
ತನ್ನ ಹಾದು ಹೋಗುವ
ಪ್ರತಿ ಗಾಡಿಯವರಿಗೂ ಕಾಣುವಂತೆ
ಹೂಮಾಲೆಗಳನೆತ್ತಿ ಹಿಡಿಯುತ್ತಾಳೆ.
ಆಮೇಲೆ ಬಿಸಿಲೇರಿ ಗಾಡಿಗಳು ಕಡಿಮೆಯಾದಂತೆ
ಮನೆಗೆ ಹಿಂದಿರುಗುವಾಗ
ಉಳಿದ ಹೂಗಳನು
ಕಾಡು ಹಾದಿಯಮುರುಕಲು ಗುಡಿ
ದೇವರಿಗೆ ಮುಡಿಸಿ ಬೇಡುತ್ತಾಳೆ
ದೇವರೆ!
ನಾಳೆಯಾದರು ಈ ದಾರಿಯಲಿ ಬರುವವರಿಗೆಲ್ಲ
ಮೊಳ ಹೂ ಕೊಳ್ಳುವ ಹೂಮನಸು ಕೊಡು.
-ಕು ಸ ಮಧುಸೂದನ್
ನೆರೆ ಮತ್ತು ಫೀನಿಕ್ಸ್…..
ನಿರ್ಭಾವುಕನಾಗಿದ್ದ ಘಳಿಗೆಯದು
ಬಣ್ಣಗಳ ಚಿತ್ತಾರವಿದ್ದ ಪುರವಣಿಯ
ಮೂಲೆಯಲ್ಲೊಂದು ಜೊತೆ
ಎತ್ತುಗಳು ನೆರೆಯ ನೀರಿಗೆ
ಕೊಟ್ಟಿಗೆಯಲ್ಲೆ ಕಡೆ ಉಸಿರಿಟ್ಟ ಕಥನ..
ಇನ್ನೇನು ಬಂದಾನು ಒಡೆಯ ಬಿಡಿಸಾನು
ಕೊರಳ ಹಗ್ಗದ ಬಂಧ
ಕಾದಿದ್ದು ಮೂಗಿನ ಹೊಳ್ಳೆಯಲ್ಲಿ
ನೊರೆ ಒಸರಿದವರೆಗೂ….(೧)
ಒಡೆಯ ಸಮಾಧಿಯಾಗಿಹನು
ಬಿದ್ದ ಗೋಡೆಗಳ ನಡುವೆ…
ಹೊಲ ಗದ್ದೆಗಳಾಗಿದ್ದಕ್ಕೆ
ಖುಷಿಯೊ, ಗದ್ದೆ ಕೆರೆಯಾಗಿದ್ದ
ಖುದ್ಖುಷಿಯೊ ನೋಡದೆ
ಮಲಗಿದರು ಮನೆಯ ಮಂದಿ..
ಬದುಕಿಗೊಂದು ದಾರಿ,
ದಾರಿಯೇ ಕುಸಿದು ಪ್ರವಾಹದಿ
ಮುಳುಗಿ..ಅನಾಥವಾದ ಪರಿ (೨)
ನಡೆದಾನಾದರು ಎಲ್ಲಿ
ನೇಗಿಲ ಯೋಗಿ ?
ಎಲ್ಲಿದೆ ಗಾಡಿ, ನೆರೆಯಲ್ಲಿ
ಮರೆಯಾದ ನೊರೆಹಾಲಿನ ಗೋವು ??
ಎಲ್ಲಿನ ಪೈರು, ಕಳೆ ಕೀಳುವ ಕುಡುಗಲು ?
ಆದರು ಒಂದು ಆಶಾವಾದ..
ಫೀನಿಕ್ಸ್ ಹಕ್ಕಿಯ ಕತೆ ಈ ಯೋಗಿಗಾಗಿ
ನಿಜವಾದಂತೆ ಬಿತ್ತು ಕನಸು!!! (೩)
-ಡಾ.ಬಿ.ಸಿ.ಗಿರೀಶ್
ಕುಲದೀಪ
ಎದೆಗವುಚಿಕೊಳ್ಳುವ ಕರುಳ ಕುಡಿ
ಭಾವ ಬಿಂದುವಿನಿಂದ ಚಿತ್ರ ಬಿಡಿಸಿ
ನಾಲ್ಕೂ ದಿಕ್ಕಿನ ನಗುವನ್ನು ತುಂಬಿ
ಚಂದ್ರನ ತುದಿ ನಾಲಿಗೆಯನ್ನು
ತುಟಿಗಳ ಜೊತೆ ಬೆರಸಿಕೊಂಡು
ಮಂದಾರ ಬದುಕಿನ ಆನಂದದ ತೊಟ್ಟಿಲು
ನೇತ್ರಗಳಲ್ಲಿ ಬಂಧಿ.
ತೋಳ್ತೆಕ್ಕೆಯೇ ಸದಾ ಕಣ್ಣದಾರಿ
ಬಯಲನು ಕೊನರಿಸುವ ಶಕ್ತಿ
ಅಮ್ಮಳ ಮಡಿಲ ಕೂಸು
ಕತ್ತಲನು ಒಪ್ಪ ಮಾಡಿ
ಅಪ್ಪ ಅನ್ನೋ ಬೆಳಕನು ಬೀರಿ
ಸದಾ ಚಂದ್ರ ನಗು
ತುಟಿಗಳ ಹೊಸ್ತಿಲಲ್ಲಿ
ಸಿಟ್ಟು ಸೆಡವು ಅಸೂಯೆ
ಕತ್ತಲ ಮನೆಯೊಳಗೆ ಗಂಟು ಕಟ್ಟಿ
ನಿಲ್ಲಬೇಕು ಕೈ ಚಾಚಿ ಮಗುವಿನ ಮುಂದೆ
ಅದು ಮೋಡದ ದಾರಿ
ಮಳೆ ಹನಿಯ ಸಿಂಚನ
ಎಲ್ಲವನೂ ಕೊಟ್ಟ ಕನಸು
ಎದೆಯೊಳಗೆ ಬಿರಿದ ಮಲ್ಲಿಗೆ
ಕಂದನ ಮುಗ್ಧ ಕೇಕೆಯಲಿ
ಅರಳಿದ ನಕ್ಷತ್ರ,ನಿಹಾರಿಕೆಗಳು
ಸದಾ ಹೆಜ್ಜೆ ತುಳಿಯುತ
ತುಟಿಗೊಪ್ಪುವ ನಗು
ಪ್ರೀತಿಯ ನಗಾರಿ ಬಾರಿಸಿ
ತಮಟೆ ಶಬ್ದದಲಿ
ಮೂಡುವ ಬೆಳಕಿನ ಸ್ಪರ್ಶ
ಕುಲದೀಪವಾಗಿ
ಮನೆ ಬೆಳಗುತಿರಲು
ಜೀವನದ ಪಯಣದಲಿ
ಕೊನರಿದ ಎದೆಯ ಕನಸು
ಮೋಡ ಬಿರಿದ ಕಣ್ಣುಗಳಲ್ಲಿ
ಜಾರಿ ಬೀಳುವ ಚಂದ್ರ ಮಳೆ
ಬದುಕಿನ ಕನಸಿನುದ್ದಕ್ಕೂ
ಕಾಲು ಚಾಚಿದ ಸಿರಿ.
-ಬಿದಲೋಟಿ ರಂಗನಾಥ್
ದೀವಳಿಗೆ..
ಅಜ್ಞಾನದ ಕತ್ತಲೆ ಸರಿದು
ಸುಜ್ಞಾನದ ಬೆಳಕು ಹರಿದು
ಸ್ನೇಹ ಸಂಬಂಧದ ಸೇತುವೆ ಹುರಿಗೊಳುವ ಘಳಿಗೆಯಾಗಲೀ
ದೀವಳಿಗೆ..!
ಕಾಮ ಕ್ರೋಧದ ಕೊಳೆ ತೊಳೆದು
ನೀತಿ ನೇಮಗಳ ಬೆಳೆ ಬೆಳೆದು
ಶಾಂತಿ ನೆಮ್ಮದಿ ಫಸಲು ಕೊಯ್ಯುವ
ಘಳಿಗೆಯಾಗಲೀ ದೀವಳಿಗೆ..!
ಜಾತಿ ಮತಗಳ ಗೋಡೆ ಒಡೆದು
ಧರ್ಮಾಂಧತೆಯ ಪೀಡೆ ಸಿಗಿದು
ಭಾವೈಕ್ಯತೆಯ ಬತ್ತಿಯ ಹೊಸೆಯುವ
ಘಳಿಗೆಯಾಗಲೀ ದೀವಳಿಗೆ..!
ಎಡ ಬಲ ಪಂಥದ ಪರದೆ ಹರಿದು
ಸಮಬಲ ಚಿಂತನೆ ತೈಲ ಎರೆದು
ಮಾನವತೆಯ ಮಹತ್ವ ಸಾರುವ
ಘಳಿಗೆಯಾಗಲೀ ದೀವಳಿಗೆ..!
ನಾನು ನನ್ನದು ಸ್ವಾರ್ಥವ ಒಗೆದು
ಧ್ವೇಷಾಸೂಯೆ ಈರ್ಷೆ ತೊರೆದು
ಸರ್ವಜನಾಂಗದ ಶಾಂತಿಯ ಬಯಸುವ
ಘಳಿಗೆಯಾಗಲೀ ದೀವಳಿಗೆ..!
ಬಡ ಪಾರಿವಾಳ
ಕನಸು ಕಟ್ಟುತ್ತಾ ಸಾಗಿತ್ತು …
ಜಗದ ಜನರೊಳು ತಾನೊಂದಾಗಲು …
ಮನದ ನೋವನು ತಿಳಿಯಗೊಡದೇ
ಸಾಗುತ್ತಲಿತ್ತು ದಿನವೂ ನಗುವಿನೊಡನೆ …
ಅವರಿವರ ಮಾತ ನೋಡಿ ನಕ್ಕು
ತನಗನ್ನಿಸಿದ್ದು ಒದರಿ
ತಪ್ಪೆಂದವರಿಗೆ ತೊದಲಿ
ಮುನ್ನುಗ್ಗುತ್ತಿರಲು …
ಕೊಂಬೆ ರೆಂಬೆಗೆ ತಾಗಿ
ರೆಕ್ಕೆ ಪುಕ್ಕ ಉದುರಿದರೆ
ಲೆಕ್ಕ ಹಾಕದೆ ಸಾಗುತ್ತಲಿತ್ತು …
ನಾ ಕಾಣೆ ಯಾಕದು ಹೀಗೆ
ಸುಮ್ಮನಿರಲಾರದೇ ಸಾಗುತ್ತಲಿದೆ
ಸೋಲೊಪ್ಪದೇ ಎಗರುತಲಿದೆ ……
ತನ್ನತನವ ಎದಿರುಗೊಂಡು
ಒದ್ದಾಡುತ್ತಲಿತ್ತು ತನ್ನ ಗೂಡಿಗಾಗಿ …
ತನ್ನ ಸಾಕಿದವರಿಗೆ ನಂಬಿ ಬದುಕುವವರಿಗೆ
ಬೆಂಗಾವಲಾಗಲು ಬಯಸುತ್ತಿತ್ತು …
ಹೆಚ್ಚಾಗುವ ಹಂಬಲವ ಹತ್ತಿಕ್ಕಿ
ಸಾಗಾಟವ ನಡೆನಡೆಸಿ
ಹಾರುತ್ತಲಿತ್ತು… ಹಾರುತ್ತಲಿತ್ತು …
ಕೊನೆವರೆಗೆ ಸಿಗದ ಆಗಸಕೆ …
-ಗಾಯತ್ರಿ ಭಟ್
ಒಂದಕ್ಕಿಂತ ಒಂದು ಉತ್ತಮ ಕವಿತೆಗಳು. ಅಮೂಲ್ಯ ರತ್ನಗಳು ಹೆಕ್ಕಿ ಕೊಟ್ಟ ಪಂಜು ಬಳಗಕ್ಕೂ ಇವುಗಳನ್ನು ರಚಿಸಿದ ಕವಿಗಳಿಗೂ ಅಭಿಮಾನದ ವಂದನೆಗಳು ಜೊತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.
ಶ್ರೀಮತಿ ಉಷಾ ನರಸಿಂಹನ್ ಅವರ ಕವಿತೆ “ನಾನು ಕವಿತೆ ಬರೆಯುವುದಿಲ್ಲ” ಎಂಬುದು ಕವಿತೆಯ ಬಗೆಗಿನ ಅಪ್ಪಟ ಕವಿತೆಯಾಗಿದೆ. ಕವಿತೆಯನ್ನು ಕುರಿತು ಎಲ್ಲ ಕವಿಗಳೂ ಕವಿತೆ ಬರೆದಿದ್ದಾರೆ. ಆದರೆ ಇದು ತುಂಬ ಡಿಫರೆಂಟಾಗಿದೆ. ಮಾತ್ರವಲ್ಲ, ಸೃಜನಾತ್ಮಕವಾಗಿದೆ. ಬಳಸಿದ ರೂಪಕ ಪ್ರತಿಮೆಗಳು ನನಗೆ ಸಿ ಡೆ ಲಿವೀಸ್ ನ ಪೊಯ್ಟಿಕ್ ಇಮೇಜ್ ಪರಿಕಲ್ಪನೆಯನ್ನು ಆಯಾಚಿತವಾಗಿ ನೆನಪಿಸಿತು. ಲಿವೀಸ್ ಬದುಕಿದ್ದರೆ ಮತ್ತು ಆತನಿಗೆ ಈ ಕವಿತೆ ಗೊತ್ತಾಗಿದ್ದರೆ ತನ್ನ ಸಿದ್ಧಾಂತವನ್ನು ಇನ್ನಷ್ಟು ವಿಸ್ತರಿಸುತ್ತಿದ್ದ ಖಂಡಿತ.
ಸೃಜನಶೀಲವನ್ನು ಆಧರಿಸಿಯೇ ಅಲ್ಲವೇ: ಕಾವ್ಯ ಮೀಮಾಂಸೆ ರೂಪುಗೊಳ್ಳುವುದು. ಧನ್ಯವಾದಗಳು ಪಂಜು ಪತ್ರಿಕೆಗೆ ಮತ್ತು ಅಭಿನಂದನೆಗಳು ರಚಿಸಿದ ಉಷಾ ಮೇಡಂ ಅವರಿಗೆ.
ಹೆಚ್ಚೆನ್ಮನ್ಜುರಾಜ್ಮೈಸೂರು, ದೀಪಾವಳಿ 2019