ಕಾಲ ಬದಲಿಸಿದ ಬದುಕು
ತಂಗಳು ತಡಿಯ ತಿಂದು
ಅರೆಬೆಂದದ್ದು ಬುತ್ತಿ
ಹೊತ್ತುಕೊಂಡು ಓಡುತ್ತಿತ್ತು ಜೀವ
ಸಮಯದ ಜೊತೆಗೆ
ಪೈಸೆ, ಪೈಸೆಯೂ ಕೂಡಿಟ್ಟು
ಜೋಪಾನ ಮಾಡಿತ್ತು ಭಾವ,
ವಾಸ್ತವದಲ್ಲಿ ನಿಲುಕದ ಬಣ್ಣದ ಕನಸುಗಳ ಭವಿಷ್ಯದ ಜೊತೆಗೆ!
ಕಣ್ಣಿಗೆ ಕಾಣದ ಜೀವಿಯ
ತಲ್ಲಣಕೆ ಬದುಕು ಬೀದಿಗೆ ಬಿತ್ತು
ವರ್ತಮಾನವೇ ಬುಡಮೇಲಾಯಿತು
ಕೈಗಳಿಗೆ ಕೆಲಸವಿಲ್ಲ ,
ಕಾಲುಗಳಿಗೆ ಹೋಗಲು
ದಾರಿಯೇ ಇಲ್ಲ !
ಹಗಲಿನಲ್ಲೂ ಮನೆಯಲ್ಲೇ ಕೊಳೆತವು
ದೇಹಗಳು,
ಆಂತಕದಿಂದ ದಿನ ದೂಡಿದವು
ಮನಸುಗಳು
ಕೆಲವರು ಊರು ಬಿಟ್ಟರು
ಹಲವರು ಜಗತ್ತೇ…… ಬಿಟ್ಟರು
ವಲಸೆ ಯುಗ ಪ್ರವಾಹದಂತೆ
ಹರಿಯಿತು ಗಡಿಗಡಿಗಳ ದಾಟಿ
ಸ್ತಬ್ದವಾದವು ಮಹಾನಗರಗಳು
ಅಮ್ಮನಾಗಿ, ಮಗಳಾಗಿ, ಅರ್ಧಾಂಗಿಯಾಗಿ
ಹೆಣ್ತನ ನಡೆಯಿತು ದಾರಿಗೆ ಊರುಗೋಲಾಗಿ
ವಲಸೆ ಭಾರತದ ಭಾಗವಾಗಿ.
ಮಾತು ಮೌನ ವಾಯಿತು
ಮುಖಕ್ಕೆ ಮಾಸ್ಕ್ ಆಭರಣವಾಯಿತು
ಹೊಲದ ದನಗಳು ನಮ್ಮ ಸ್ಥಿತಿ ನೋಡಿ
ಮುಸಿ ಮುಸಿ ನಕ್ಕವು !
ಅವುಗಳ ಬಾಯಿಗೆ ನಾವು ಕಟ್ಟುತ್ತಿದ್ದ
ಕುಕ್ಕೆ ನೆನಪಾಯಿತು
ಪ್ರಾಣಿ ಪಕ್ಷಿ ಜರಾಚರಗಳಿಗೆ
ನಮ್ಮಿಂದ ಸ್ವತಂತ್ರ ಸಿಕ್ಕು
ಮಾಲಿನ್ಯ ಮುಕ್ತ ವಾತಾವರಣ ದಕ್ಕಿತು !
ಹಸಿದ ಹೊಟ್ಟೆ, ಭರವಸೆಯೇ ಇಲ್ಲದ
ನಾಳೆಗಳು ದಿನಗೂಲಿಗಳಿಗೆ ಕೊಡುಗೆಯಾಗಿ ?
ಉಳ್ಳವರಿಗೆ ವರವಾಗಿ !
ಬಂಧನ ದಿನದ ಬೊಜ್ಜು ಕರಗಿಸುವುದೇ
ದೊಡ್ಡ ಸಮಸ್ಯೆಯಾಗಿ ಮಾನವನಿಗೆ
ಒದಗಿಬಂತು !!???
ಗಡಿಬಿಡಿಯಲ್ಲಿ ಮರೆತ ಬಂಧಗಳು
ಅನುಬಂಧದ ಹೂವಾಗಿ ಅಂಗಳದಲಿ
ಅರಳಿದವು .
ಸಂದಿಗ್ಧತೆಯಲ್ಲೂ ಒಟ್ಟಾಗಿ ಇರುವ
ಚೂರು ರೊಟ್ಟಿ ಹಂಚಿತಿನ್ನುವುದ ಕಲಿತೆವ
ಸೆರಗಂಚಲಿ ಗಂಟು ಹಾಕಿಟ್ಟ
ಪರಿಶ್ರಮ ಹೆಂಡದಂಗಡಿಯ ಪಾಲಾದರೂ
ಅವ್ವ ನಗುತ್ತಲೆ ಮಕ್ಕಳಿಗೆ
ಕೌದಿಯ ಹೊಚ್ಚಿ ನಾಳಿನ
ಸಂಘರ್ಷಕೆ ಅಣಿಯಾಗುವಳು …….
-ರೇಶ್ಮಾ ಗುಳೇದಗುಡ್ಡಾಕರ್
ಗತಿಯಾರಿನ್ನು
ಬದುಕಿನ ಬರ್ಬರತೆ ತಲ್ಲಣಿಸಿದೆ
ಆಸರೆಯು ಕಾಣದೆ ಪರಿತಪಿಸಿದೆ
ಸಂಸಾರಕಾಗಿ ದುಡಿದು ಗತಿಗೆಟ್ಟಿದೆ
ಹಸಿರೆಲೆಯು ನೋಡಿ ನಗುತಿದೆ!
ಹೆತ್ತ ಮಕ್ಕಳಿಂದು ತಳ್ಳಿಹರು ದೂರ
ಬದುಕ ಹೊರೆಯುವುದು ಘನ ಘೋರ
ತಲ್ಲಣಕೆ ನೊಂದಿದೆ ಮನ ಅಪಾರ
ಚಿಗುರೆಲೆಗೆ ತನ್ನದೇ ವಿಹಾರ!
ಕಾಯಕೆ ವಯಸ್ಸು ಕಾಯಕಕ್ಕಲ್ಲ
ಬಂಧುಗಳ ನಿರ್ಲಕ್ಷಕೆ ಬದುಕೇ ಸಲ್ಲ
ಹೊಟ್ಟೆಪಾಡಿಗೆ ಬೇಡುತಿಹಳಲ್ಲ
ಅವಳ ರಕ್ಷಣೆಯ ಪರಿ ದೇವರೆ ಬಲ್ಲ!
-ಕವಿತಾ ಸಾರಂಗಮಠ
ನೆನಪಿನೊಳು ನನ್ನಜ್ಜ
ನೆನಪಿರಬಹುದೇನೋ ನನಗೆ
ನನ್ನಜ್ಜ ಬೆಣಚುಕಲ್ಲು ತಿಕ್ಕಿ
ಕಿಡಿ ಹೊತ್ತಿಸಿ ಕೂಳು ಬೇಯಿಸಿ ತಿಂದದ್ದು.
ನೆನಪಿರಬಹುದೇನೋ ನನಗೆ
ನನ್ನಜ್ಜ ಬತ್ತಲ ಮೈಯ ಮುಚ್ಚಲು
ಸೊಪ್ಪು ಸದೆ ಉಟ್ಟು ನೆಡೆದು ಹೋದದ್ದು.
ನೆನಪಿರಬಹುದೇನೋ ನನಗೆ
ನನ್ನಜ್ಜ ಭೀಕರ ಮೌನ ಹೊತ್ತ
ಅಡವಿಯ ನಡುವೆ
ಕತ್ತಲ ಗುಹೆಯಲ್ಲಿ ಬಾಳ ತಳ್ಳಿದ್ದು
ನೆನಪಿರಬಹುದೇನೋ ನನಗೆ
ನನ್ನಜ್ಜ ಉದರ ಬೇಗೆಯ ನೀಗಲು
ತಾನೇ ಮಾಡಿದ್ದ ಉಳಿ ರೆಮ್ಕೆ ಇಕ್ಕಳಗಳಿಂದ
ಖಗಮಿಗಗಳ ಕೊಂದದ್ದು
ಗೆಡ್ಡೆ ಗೆಣಸುಗಳ ಹುಡುಕಿದ್ದು
ನೆನಪಿರಬಹುದೇನೋ ನನಗೆ
ನನ್ನಜ್ಜ ಗುಡುಗು ಸಿಡಿಲು
ಬಿಸಿಲು ಚಳಿಯ ಅಬ್ಬರಕ್ಕೆದರಿ
ನಾಗರೀಕತೆಯ ಬಾವಿಯೊಳು ಮುಳುಗಿದ್ದು
ನೆನಪಿರಬಹುದೇನೋ ನನಗೆ
ನನ್ನಜ್ಜ ಕರ್ಮದ ಹೆಸರಲಿ
ಕುಲಗೋತ್ರ ಜಾತಿಧರ್ಮದ
ಕೆಸರ ಮೆತ್ತಿಕೊಂಡು
‘ ಮಾನವ’ ನೆಂದು ಗರ್ವದಿಂದ ಮೆರೆಯುತ್ತಿರುವುದು
ಹೌದು, ನೆನಪಿರುವುದು ನನಗೆ
ನನ್ನಜ್ಜ ಕಾಲದ ಸುಳಿಯಲ್ಲಿ ಸಿಕ್ಕಿ
ವಪುವ ತೆಯ್ದು ಶುಭ್ರನಾಗಿ
ಪುನರ್ಜನ್ಮ ತಳೆದು
ಮನುಕುಲದ ದೀವಿಗೆ ಬೆಳಗುವನೆಂದು
ದಿಟ’ಮಾನವ’ನಾಗುವನೆಂದು.
-ಮಸಿಯಣ್ಣ ಆರನಕಟ್ಟೆ
ಮಬ್ಬು ಕತ್ತಲು ಕವಿದು
ಆಕಾಶದ ಬೋಗಣಿ ಖಾಲಿಯಾದಂತೆ
ಮಳೆ ಸುರಿದು ಅಹೋರಾತ್ರಿ
ನೆಲದ ಮೇಲೆಲ್ಲ ಜಲಪ್ರಳಯ
ನೀರದೇವಿ ಮಹಾಪೂರವಾಗಿ ಹರಿಯುತ್ತ
ಉಧೋ ಉಧೋ ಎನ್ನುತ್ತ
ಬೇನಾಮಿ ಅಲೆಗಳು ಕಳ್ಳಹೆಜ್ಜೆ ಇಟ್ಟುಕೊಂಡು
ರಾತ್ರೋರಾತ್ರಿ ಬಂದು ಧುಮ್ಮುಕ್ಕಿ
ದಾರಿ ಮಧ್ಯೆ ಸಿಕ್ಕ
ಹಳ್ಳಿ ಹೊಲ, ಮನೆಮಠ, ಆಸ್ತಿಪಾಸ್ತಿ
ಜನಜಾನುವಾರು,ವಸ್ತು ಒಡವೆ ವಗೈರೆ
ಎಲ್ಲವೂ ಜಲದೇವತೆಯ ಬಾಯಿಗೆ ಆಪೋಷಣ
ಸೂರ್ಯ ಉದಯದ ವೇಳೆಯ ರೊಟ್ಟಿ ಬಡಿಯುವ ಸದ್ದು
ಅಂಗಳ ಕಸಗೂಡಿಸುವ ಕರಕರ ಶಬ್ದ
ಕೋಳಿಕೂಗಿನ ಅಲಾರಾಮ್
ಪಕ್ಷಿಗಳ ಇಂಚರ, ಹಸುಕರುಗಳ ಮಾರ್ದನ
ಕೇಳುತ್ತಿಲ್ಲ ಯಾವುದೂ ಮೂರಾಬಟ್ಟೆ ಬದುಕಿನ
ಸ್ಮಶಾನ ಮೌನದ ನೀರವತೆಯಲ್ಲಿ
ಬದುಕು ಸ್ಥಳಾಂತರಗೊಂಡಿದೆ
ನಿರಾಶ್ರಿತ ಶಿಬಿರಗಳ ಮೂಲೆಮೂಲೆಗೆ
ಎಲ್ಲ ಕಳೆದುಕೊಂಡು ಅನ್ನಸಾರಿನ ತಟ್ಟೆ ಹಿಡಿದ
ಅಮಾಯಕ ಜೀವಗಳ ಕತ್ತಲೆಯ ಸ್ಥಿತಿಗೆ
ಪ್ಲ್ಯಾಷ್ ಲೈಟ್ ಬೀರುತ್ತಿವೆ
ಕ್ಯಾಮರಾ ಕಣ್ಣುಗಳು
ಟಿ ಆರ್ ಪಿ ಭೂತದ ಹಸಿವ ನೀಗಿಸಲು
ನೆರೆಪರಿಹಾರದ ಲಡ್ಡು ಬಾಯಿಗೆ ಬೀಳುವ ಖುಷಿಯಲ್ಲಿ
ದೊರೆಗಳು ಸಂಭ್ರಮಾಚರಣೆಯಲ್ಲಿ ನಿರತ
ಅಧಿಕಾರಿಗಳು ಪ್ರತಿಶತ ಲೆಕ್ಕಾಚಾರದಲ್ಲಿ
ಹೊಟ್ಟೆಯ ಮೇಲೆ ನೆರೆಯ ಬರೆ
ಕೊಚ್ಚಿ ಹೋದ ಬದುಕು ಮತ್ತೆ ಕಟ್ಟುವ ಚಿಂತೆ
ದುಃಖ ದಳ್ಳುರಿಯಾಗಿ ಎದೆಯಲ್ಲಿ ಭುಗಿಲೆದ್ದು
ತಲೆ ಮೇಲೆತ್ತಿ ಬೀರಿದರೆ ಶೂನ್ಯದೃಷ್ಟಿ
ನೆಲದ ಸೂತಕ ಈಗ ಆಕಾಶಕ್ಕೂ
ಸೂರ್ಯನ ಹೆಣ ತೇಲುತ್ತಿತ್ತು
ಊರ ತುಂಬ ನಿಂತ ನೆರೆನೀರಿನಲ್ಲಿ.
-ಲಕ್ಷ್ಮಿಕಾಂತ ಮಿರಜಕರ. ಶಿಗ್ಗಾಂವ.
ಡಾಂಬರೀಕರಣ
ಹರಕೆ ಹೊತ್ತು ಬಯಕೆ ಇಟ್ಟು
ಕನಸು ಕಟ್ಟಿ ನೀ ಬೇಡಿ ಬಂದ
ಪ್ರೀತಿಗೆ..
ಅರಿತು ಬೆರೆತು ಹೃದಯದಿಂದ
ನಿನಗಾಗೆ ಮಾಡಿದೆ ನನ್ನೊಲವಿನ
ಉದಾರೀಕರಣ..
ನನ್ನ ಹೃದಯ ನಿನಗೆ ಕೊಟ್ಟೆ
ನಿನ್ನ ಹೃದಯ ನನಗೆ ಕೊಟ್ಟು
ಮನದ ಖಾತೆಯಲ್ಲಿ ಮಾಡಿದ
ಪ್ರೀತಿ ಪ್ರೇಮದ ಹೂಡಿಕೆಯನ್ನು
ನೀ ಮಾಡಬೇಕಿತ್ತು
ಖಾಸಗೀಕರಣ..
ಜಗದ ಎದುರು ಅಂಜದೇನೆ
ನನ್ನ ಒಪ್ಪಿ ಅಪ್ಪಿ ನೀನು
ಈ ಪ್ರೇಮ ಬಂಧಕೆ
ಮದುವೆಯ ಬಂಧನದ ಅರ್ಥ ನೀಡಿ
ನಮ್ಮೊಲವ ಮಾಡಲಿಲ್ಲ ನೀ
ಜಾಗತೀಕರಣ..
ನಗುವ ತೊಟ್ಟು ಮನಸು ಕೊಟ್ಟು
ಬಯಸಿ ಬಂದೆ ನಿನ್ನ ನಾನು
ನನ್ನ ಮನದ ದಾರಿಯಿಂದ
ಮರೆಯಾಗಿ ಹೋದೆ ನೀನು
ನಿನ್ನ ಹೆಜ್ಜೆ ಗುರುತು ಕಾಣದಂತೆ
ನನ್ನ ಮನದ ಹಾದಿಗೆ ಮಾಡಬೇಕಿದೆ ನಾ
ಹೊಸ ಡಾಂಬರೀಕರಣ….
–ನಂದಾದೀಪ, ಮಂಡ್ಯ
ಸೂತ್ರದ ಗೊಂಬೆ…
ಆಡಿಸುವಾತ ಆತನಿರುವಾಗ
ನಮ್ಮದೇನಿದೆ ಇಲ್ಲಿ..??
ತನಗೆ ಬೇಕಂತೆ ಆಟವಾಡಿಸಿ
ನಗುತ್ತಾ ಕುಳಿತಿಹನಲ್ಲಿ
ಆತನ ನಗುವಿನಲ್ಲಿರುವ ಅರ್ಥವ
ಅರಿತವರಾರು ನಾಕಾಣೆ..
ನಗುತಲಿ ಆಡಿಸುವ ಆ ಸೂತ್ರಧಾರನು
ಸೂತ್ರದಗೊಂಬೆ ನಾವಾಗಿರುವಾಗ
ಆತ ಆಡಿಸಿದಂತೆ ನಾವಾಡದೆ
ನಮ್ಮದೆ ಪ್ರಪಂಚ ನಮ್ಮದೇ
ಕಾರುಬಾರು ಎನ್ನುತ್ತಾ ಮೆರೆದರೆ
ಒಂದು ದಿನ ಅವನು ಛಾಟಿ ಏಟ
ಕೊಟ್ಟು ಅಟ್ಟಹಾಸದಿ ನಗುತ್ತಿರುವವನ್ನು
ರಕ್ತ ಕಣ್ಣೀರು ಹರಿಸುತ್ತವಂತೆ ಮಾಡುತ್ತಾನವನು
ಅವನ ನಗುವಲ್ಲಿ ನಾನಾ ಅರ್ಥವಿದ್ದರೆ
ಅದ ಅರಿಯುವುದು ಬಹಳ ಕಷ್ಟ
ನಮ್ಮ ಮೂರ್ಖತನಕ್ಕೆ ಒಮ್ಮೆ ನಕ್ಕರೆ
ಮಗದೊಮ್ಮೆ ಮುಗ್ಧತನಕ್ಕೆ ನಸುನಗುತ್ತಾನೆ
ಸೂತ್ರವು ಅವನ ಕೈಯಲ್ಲಿದೆ
ಅದು ಹರಿದರೆ ನಮ್ಮ ಅಧಃಪತನ
ಅವನಿಚ್ಚೆಯಂತೆ ಆಗುವುದು
ಅನಂತರ ನಮ್ಮ ಬದುಕು
ಸೂತ್ರವಿಲ್ಲದ ಗಾಳಿಪಟದಂತೆ
ಆಗುವುದು ನಿಶ್ಚಿತ…..
-ಮಾಧವಿ ಹೆಬ್ಬಾರ್
ಗಝಲ್.
ಅಪರಿಚಿತನಾಗಿ ಮನೆಗೆ ಬಂದವ ನನ್ನ ಸಖಾ
ಚಿರಪರಿಚಿತನಾಗಿ ಮನದಲಿ ನಿಂದವ ನನ್ನ ಸಖಾ
ಎದೆಯಲಿ ಕಾಡುವ ಕನಸು ಬಿತ್ತಿದವ ನನ್ನ ಸಖಾ
ಮೊಗದಲಿ ಮಂದಹಾಸ ಅರಳಿಸಿದವ ನನ್ನ ಸಖಾ
ಆ ತಡರಾತ್ರಿ ಮಧು ಬಟ್ಟಲು ಹಿಡಿದು ಬಂದ ದೇವದಾಸ
ಮಡಿಲಲಿ ಮುಖವಿರಿಸಿ ಮಗುವಾಗಿ ಅತ್ತವ ನನ್ನ ಸಖಾ
ವೇದಾಂತಿಯಂತೆ ಮಾತಾಡಿ ಜೀವನ ಸತ್ಯಗಳು ಅರುಹಿದವನು
ಚೂರಾದ ಚಂದಿರ ಜೋಡಿಸಿ ಬೆಳದಿಂಗಳ ಹರಡಿದವ ನನ್ನ ಸಖಾ
ಬಂಜರು ಹೃದಯದಲಿ ಒಲವ ಹನಿಸಿ ಬಯಕೆ ಚಿಗುರಿಸಿದ
ಸೋತ ಕಂಗಳಲಿ ನಿರೀಕ್ಷೆಯ ಹಣತೆ ಹಚ್ಚಿದವ ನನ್ನ ಸಖಾ
ಮೈಗಾಯಗಳಿಗಳಿಗೆ ತುಟಿಯಿಂದ ಮುಲಾಮು ಸವರಿದಾತ
ವೇದನೆಯ ಕಡಲು ಕುಡಿದು ಹುಗುರಾಗಿಸಿದವ ನನ್ನ ಸಖಾ
ಸುಂದರ ದಾಸಿಯ ಮೇಲೆ ನಿರಂತರ ಶೋಷಣೆ ಅತ್ಯಾಚಾರ
ನರಕಕೂಪ ಮೆಟ್ಟಿ ನಿಂತು ಹಾರುವ ಛಲ ತುಂಬಿದವ ನನ್ನ ಸಖಾ
ಮಾರುಕಟ್ಟೆಯಲಿ ಮಾಂಸ ಕೊಳ್ಳವವರ ಸರತಿ ಬಲು ಜೋರು
ಜೀವಂತ ಶವಕೆ ಸಂಜೀವಿನಿ ಪ್ರಾಣವಾದವ ನನ್ನ ಸಖಾ
ಎರಡು ಆತ್ಮಗಳ ಮಿಲನ ಅನುಸಂಧಾನ ನಡೆಯುತಿದೆ “ಪೀರ’
ಕೆಂಪು ದೀಪದ ಮಹಫೀಲನಲಿ ಶಾಯರಿ ನಿವೇದಿಸಿದವ ನನ್ನ ಸಖಾ.
-ಅಶ್ಪಾಕ್ ಪೀರಜಾದೆ.
ನನ್ನದೊಂದು ದೂರಿದೆ ಅಮ್ಮ.
ರಪ ರಪನೇ ನಾಲ್ಕು ಚಂಬು ಗುಬ್ಬಚ್ಚಿ ಸ್ನಾನ ಮಾಡಿ
ಇನ್ನು ಹಾರದ ಕೂದಲನ್ನು ಹಿಂದಕ್ಕೆ ಸರಿಸಿ
ಮೇಲುಸಿರಿನಲ್ಲಿ ತುಳಸಿಕಟ್ಟೆ ಸುತ್ತುತ್ತಾ….
ಅರ್ಧ ಮಂತ್ರ ಕೇಳುವ ಹಾಗೆ
ಇನ್ನರ್ಧ ನೀನೆ ನುಂಗುವ ಹಾಗೆ ಮಂತ್ರ ಜಪಿಸುತಿದ್ದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ಮಂತ್ರವೆನ್ನೇಕೆ ಪೂರ್ತಿ ಪಠಿಸಲಿಲ್ಲ ನೀನು ಅಮ್ಮ.
ಕದ್ದು ಹಾಲು ಕುಡಿಯುತ್ತಿದ್ದ ಕರುವನ್ನು ಎಳೆದು ಕಟ್ಟಿ
ಬಿರಬಿರನೇ ಅರ್ಧ ಚಂಬು ಹಾಲು ಹಿಂಡು
ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಹಚ್ಚುತ್ತಾ
ಒಂದು ಖಾಫಿ ಲೋಟ ಅಪ್ಪನಿಗಾಗಿ
ಇನ್ನೊಂದು ಹಾಲಿನ ಲೋಟ ನನಗಾಗಿ ಕೊಟ್ಟ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ಕುಡಿಯುತ್ತಿದ್ದ ಕರುವನ್ನು ಏಕೆ ಹಿಡಿದು ಕಟ್ಟಿದೆ ಅಮ್ಮ.
ಶಾಲೆ ಮರೆತು ಆಡುತ್ತಿದ್ದ ನನ್ನನ್ನು ಬೀದಿಲಿ ಬಡಿದು
ಕಂಕುಳಲಲ್ಲಿ ನನ್ನನ್ನು ಬಚ್ಚಿಟ್ಟುಕೊಂಡು ಮಾಸ್ತಾರರಿಗೆ ಒಪ್ಪಿಸಿ
ಸಾಯಂಕಾಲ ನಾ ಬರುವ ದಾರಿಯನ್ನೇ ಕಾಯುತ್ತ
ಒಂದು ಅಂಗೈನಲ್ಲಿ ನನಗಿಷ್ಟವಾದ ಕೊಬ್ಬರಿ ಮೀಠಾಯಿ
ಇನ್ನೊಂದು ಅಂಗೈನಲ್ಲಿ ಬೆಳಗ್ಗಿನ ಗಾಯಕ್ಕೆ ಔಷಧ ಹಿಡಿದಿಟ್ಟುಕೊಂಡಿದ್ದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ಭಾನುವಾರ ವಿರಬಹುದೆಂದು ಆಡುತ್ತಿದ್ದ ನನ್ನನ್ನು ಏಕೆ ಹೊಡೆದೆ ಅಮ್ಮ.
ಅಪ್ಪನ ಮುಂದಿನ ಬೆಳೆಗಾಗಿ ಕತ್ತಲಿದ್ದ ಚಿನ್ನ ಗಿರವಿ ಇಟ್ಟು
ನೆರೆಹೊರೆಯವರಿಗೆ ಕಟ್ಟು ಕಾಣದ ಹಾಗೆ ಸೆರಗು ಬಳಸಿ
ಖಾಲಿ ಕಟ್ಟಿಗೆ ಕರಿ ಮಣಿದಾರ ಪೋಣಿಸುತ್ತಾ
ಒಂದು ಕಣ್ಣಲ್ಲಿ ಕಳೆದುಕೊಂಡ ತವರಿನ ಚಿನ್ನಕ್ಕೆ ನೀರು
ಇನ್ನೊಂದು ಕಣ್ಣಲ್ಲಿ ಬಡತನ ನೆನೆದು ಕಣ್ಣೀರುಡುತ್ತಿದ್ದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ನಿನ್ನ ಕತ್ತಲಿದ್ದ ಕಡೆ ಚಿನ್ನ ಗಿರವಿ ಇಡಲು ಯಾಕೆ ಕೊಟ್ಟೆ ಅಮ್ಮ.
ಅಪ್ಪನ ಶೇವಿಂಗ್ ಕಿಟ್, ಅಕ್ಕನ ಪೌಡರ್ ಡಬ್ಬ ಕದ್ದು ಸೂಟ್ಕೇಸ್ ನಲ್ಲಿಟ್ಟು
ನಿನ್ನ ಹುಂಡಿಗೆ ಹೊಡೆದ ಹಣವನ್ನೆಲ್ಲ ಬಟ್ಟೆ ಸುತ್ತಿ
ನನ್ನ ಜೊತೆ ಬಸ್ ಸ್ಟಾಂಡ್ ವರೆಗೆ ನೆಡೆದು ಬರುತ್ತಾ
ಒಂದು ಕೈನಲ್ಲಿ ನನ್ನ ಹಾಸ್ಟೆಲ್ ನ ಲಗೇಜ್ ಹಿಡಿದು
ಇನ್ನೊಂದು ಕೈನಲ್ಲಿ ನನ್ನ ಮುಖದ ಮೇಲಿನ ಬೆವರನ್ನು ಸೆರೆ ಸೆರಗಲ್ಲಿ ಹೊರೆಸಿದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ನಿನ್ನ ಮುಖದ ಮೇಲಿನ ಆಯಾಸ ಯಾಕೆ ಬಚ್ಚಿಟ್ಟೆ ಅಮ್ಮ
ನನ್ನ ಪ್ರೇಮ ವಿವಾಹಕ್ಕೆ ಪ್ರತಿರೋಧ ಒಡ್ಡದೆ
ಯಾವ ಕಣ್ಣ ದೃಷ್ಟಿ ಬೀಳದೆ ಇರಲಿ ಎಂದು ದೃಷ್ಟಿ ತೆಗೆದು
ಹರಿಶಿನ ಕುಂಕುಮ ನೀರು ಮಾಡಿ ಮನೆಯಾಚೆ ಚೆಲ್ಲುತ್ತಾ
ಸೊಸೆಗೆ ಮನೆ ಪರಿಚಯ ಮಾಡಿಕೊಡುತ್ತಾ ..
ಮನೆಯ ಹಿತ್ತಲಲ್ಲಿ ಮೌನವಾಗಿ ಕುಳಿತ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ತೊಟ್ಟಿಲಲ್ಲೇ ನಿನ್ನ ಅಣ್ಣನಿಗೆ ಮಾತು ಕೊಟ್ಟ ವಿಚಾರ ನನಗೇಕೆ ಹೇಳಲಿಲ್ಲ ನೀನು ಅಮ್ಮ
ನನ್ನ ಮಡದಿಯ ಚುಚ್ಚು ಮಾತುಗಳಿಗೆ ಕಿವಿ ಗೊಡದೆ
ಮನೆಯ ಗೋಡೆಯ ಸಂಧಿಗಳಲ್ಲಿ ಒಬ್ಬಂಟಿಗಳಾಗಿ ಬದುಕಿ
ಹಗಲಿದ ಗಂಡನ ಫೋಟೋವನ್ನೇ ಅಸಹಾಯಕಳಾಗಿ ನೋಡುತ್ತಾ
ನನ್ನೇಕೆ ಒಬ್ಬಂಟಿ ಮಾಡಿ ಹೋದೆ ಎಂದು ಶಪಿಸಿ
ಊರಾಚೆ ಹೊಲದ ಖಾನದ ಮರದಡಿ ಮಲಗಿ ಎದ್ದು ಬರುತ್ತಿದ್ದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ನಿನ್ನ ಕಷ್ಟಗಳಿಗೆ ನಾನಿಲ್ಲ ಎಂದು ನೀನೇಕೆ ಅಂದುಕೊಂಡೆ ಅಮ್ಮ
ಬಚ್ಚಲು ಮನೆಯಲ್ಲಿ ಆಯಾ ತಪ್ಪಿ ಜಾರಿ ಬಿದ್ದು ಕಾಲು ಮುರಿದು
ಹೇಗೋ ತೆವಳಿಕೊಂಡು ನಿನ್ನ ಕೋಣೆ ಸೇರಿ
ಮೊಮ್ಮಗಳ ಸಹಾಯದಿಂದ ಕಾಲಿಗೆ ಮುಲಾಮು ಹಾಕುತ್ತ
ಅಪ್ಪನಿಗೆ ಹೇಳಬೇಡೆಂದು ಮೊಮ್ಮಗಳ ಕೈನಲ್ಲಿ ಭಾಷೆ ಪಡೆದು
ಬೇಗ ಕರ್ಕೊಂಡು ಬಿಡೋ ನನ್ನ ಎಂದು ದೇವರಲ್ಲಿ ಬೇಡುತ್ತಿದ್ದ ನಿನ್ನ ಮೇಲೊಂದು
ನನ್ನದೊಂದು ದೂರಿದೆ ಅಮ್ಮ
ಕಾಲು ಮುರಿದ ವಿಚಾರ ನನ್ನ ಕಿವಿಗೇಕೆ ಮುಟ್ಟಿಸಲಿಲ್ಲ ನೀನು ಅಮ್ಮ
ಮಗಳು ಓಡೋಡಿ ಬಂದು …… “ಅಪ್ಪ , ಅಜ್ಜಿ ಮಾತನಾಡುತ್ತಿಲ್ಲ ” ಎಂದಾಗ
ತೊಡೆಯಲ್ಲಿದ್ದ ಲ್ಯಾಪ್ಟಾಪ್ ಬೀಸಾಡಿ ಓಡೋಡಿ ನಿನ್ನ ಬಳಿ ಬಂದು
ನಾಡಿ ಶೋಧನೆಗೆಂದು ನಿನ್ನ ಕೈ ಹಿಡಿಯುತ್ತಾ
ತಲೆಯನ್ನು ನನ್ನ ತೊಡೆಯ ಮೇಲಿಟ್ಟು
ಮಾತಾಡೇ ಕೊನೇ ಸಲ ಎಂದು ಅಂಗಲಾಚಿದರೂ ….. ಮೌನವಾಗಿದ್ದ ನಿನ್ನ ಮೇಲೆ
ನನ್ನದೊಂದು ದೂರಿದೆ ಅಮ್ಮ
ನನ್ನ ದೂರುಗಳಿಗೆ ಉತ್ತರಿಸದೆ ದೂರವಾದೆಯಾ ಅಮ್ಮ ?
–ದಯಾನಂದ
ಸಾಲು ಮರದ ತಿಮ್ಮಕ್ಕ
ಬಂಜೆ ಇವಳು ಎನುವ ಮಾತು
ಕಿವಿಗೆ ಬಿದ್ದರೂನು ಅವಳು
ಕೇಳದಂತೆ ತನ್ನ ಕಿವಿಯ ಮುಚ್ಚಿ ಕೊಂಡಳು
ಹಲವು ಬಗೆಯ ಗಿಡಗಳನ್ನು
ರಸ್ತೆ ಬದಿಯೆ ಪಾತಿ ಮಾಡಿ
ನೀರು ಹರಿಸಿ ಪ್ರೀತಿಯಿಂದ ನೆಟ್ಟು ಪೊರೆದಳು
ಸಾಲು ಸಾಲು ಸಸಿಯ ನೆಟ್ಟು
ಒಲವಿನಿಂದ ಪೊರೆಯುತಿರಲು
ಹಸಿರ ನಾಕ ಉದಿಸಿತಲ್ಲಿ ಹಲವು ಮಾಸಕೆ
ಸುಗ್ಗಿ ಕಾಲದಲ್ಲಿ ಮರದಿ
ಹಿಗ್ಗಿನಿಂದ ಹಣ್ಣುಗಳು
ತೂಗುತಿಹವು ಆಗಲೆಂದು ಪರರ ಕಷ್ಟಕೆ
ತಂಪು ನೆರಳ ಬದಿಗೆ ಚೆಲ್ಲಿ
ಕಂಪು ಹರಡೊ ಹೂವ ಸುರಿಸಿ
ಮರಗಳೆಲ್ಲ ಜನರ ದಣಿವ ನೀಗುತಿರುವವು
ಹೋಗಿ ಬರುವ ಜನರ ಕಂಡು
ತೂಗುತಿರುವ ಹಣ್ಣನಿತ್ತು
ಹೋಗಿಬನ್ನಿರೆಂದು ಮನದಿ ಹರಸುತಿರುವವು
ಶುದ್ಧ ಗಾಳಿ, ನೆರಳು ಕಂಡು
ಹಕ್ಕಿ, ದುಂಬಿ, ಅಳಿಲು, ಇರುವೆ
ಎಲ್ಲ ನೆಲೆಸಲಿಲ್ಲಿ ಬಳಗದೊಡನೆ ಬಂದವು
ಗೂಡು ಕಟ್ಟಿ, ಕಾಳು ಹೆಕ್ಕಿ
ಮರಿಗೆ ಗುಟುಕು ಕಾಳನಿಕ್ಕಿ
ನಲಿಯುತಿಹವು ಎಲ್ಲ ಸೇರಿ ಎಷ್ಟು ಚಂದವು
ಹುಟ್ಟು ಹಬ್ಬ, ಮದುವೆ ಮುಂಜಿ
ಏನೆ ಇರಲಿ ಗಿಡವ ನೀಡಿ
ಎಲ್ಲ ಕಡೆಗು ವರ್ಷಧಾರೆ ಜೋರು ಸುರಿಯಲಿ
ನಾಳೆಗಾಗಿ ನಮ್ಮ ಭೂಮಿ
ಹಸಿರು ಹೊದ್ದು ನಿತ್ಯ ನಗುತ
ಬಿಡದೆ ಸಕಲ ಜೀವರಾಶಿಯನ್ನು ಪೊರೆಯಲಿ
ಬುವಿಯ ಜನಕೆ ಬೇಕು ಎಂದು
ದಾರಿ ಬದಿಯೆ ಗಿಡವ ನೆಟ್ಟು
ನಾಕ ಕಟ್ಟಿ ಜನರ ಮನಸಿನಲ್ಲಿ ಉಳಿದಳು
ಮರಗಳೆನ್ನ ಮಕ್ಕಳೆಂದು
ಪ್ರೀತಿಯಿಂದ ಸಾಕಿ ಸಲುಹಿ
ಪದ್ಮ ಪದಕ ಪಡೆದು ನಿಜದಿ ತಾಯಿಯಾದಳು
ಹಸಿರ ಬುವಿಗೆ ಜೀವ ತೇದ
ಲೋಕದಲ್ಲಿ ಕೀರ್ತಿ ಪಡೆದ
ನಿಲುಕುವಂತ ತಾರೆ ಸಾಲು ಮರದ ತಿಮ್ಮಕ್ಕ
ಮಕ್ಕಳಿಲ್ಲ ಎಂಬ ಕೊರಗು
ಮರಗಳಿಂದ ಮರೆಯಿತಲ್ಲ
ಉಚಿತವಾಗಿ ಜನಕೆ ಗಿಡವ ಕೊಡುವ ಬಾರಕ್ಕ
-ಹಲವಾಗಲ ಶಂಭು
ಬೆವರಿನ ಜೋಳಿಗೆ ಬೆಳಗಿದ ಹಣತೆ!
ಬೆವರಿನ ಜೋಳಿಗೆ, ಬೆಳಗಿದ ಹಣತೆ
ಬೆಳಕಿನ ಓರಣ ದೀವಳಿಗೆ |
ಪಸರಿದ ಕತ್ತಲೆಯೊಳಗಡೆ ನುಸುಳಿ
ಝಳಪಿಸೋ ಕೆಚ್ಚು ಪ್ರತಿಗಳಿಗೆ ||
ಅರಳಿದ ಗೂಡಿಗೆ ಅರಳಿಯ ಕಟ್ಟಲು
ಪತಂಗಕೆ ಹೂವಿನ ಮಕರಂದವದು |
ಹೀರಿದ ಜೇನಿನಮಧು ನೆಕ್ಕದನಾಲಿಗೆ
ಉಲಿಯುತ ಕೋಗಿಲೆ ಮೆರೆಯುವದು ||
ಕಟ್ಟಿದ ಗೂಡು ಬಲಿಯುತ ಸಾಗಲು
ಎಳೆಎಳೆ ಬೆಳೆಯುವ ಬೆಳವಣಿಗೆ
ಬೀರುತ ದಾರಿ ತೋರುತ ಹಾಸಿಗೆ
ಪವಡಿಸೋ ಅರಳೆಯ ಸರಳತೆಗೆ
ಸ್ನೇಹದ ಕೊಂಡಿ ಪ್ರೀತಿಯ ಹಿಡಿದು
ತುಂಬಿತು ಹೃದಯಕೆ ಅನವರತ |
ನುರಿಯುತ ಹಿಂಡಿದ ಒಸರಿದ ಎಣ್ಣೆ
ಕುಲಕ್ಕಾಗದೇ ಬೀಜವೇ ಅಳಿಸುತ್ತ ||
ಹಿಂಜಿದ ಹತ್ತಿಯ ಭಂಜನವಾಗಿದೆ
ಬೀಜದ ತ್ಯಾಗವೇ ವಿಜಯದೆಡೆ |
ತೀಡಿದ ಹುರಿ ಅರಳಿಯ ಬತ್ತಿಯು
ತಾನುರಿಯಲು ಸಾಗಿತು ಬೆಳಕಿನೆಡೆ ||
ಜ್ಞಾನದ ದೀವಿಗೆ ದೊಂದಿಯ ರೂಪ
ಜ್ವಾಲೆಯ ಭುಗಿಲು ಶೋಧನಕೆ |
ಇಂಧನ ತನ್ನದೇ ಬಂಧನ ಮುಕ್ತಿಗೆ
ಕತ್ತಲೆ ಸೊರಗಿತು ರೋಧನಕೆ , ||
ತುಳಿಯುತ ಹಸಿದ ಮಣ್ಣಿನ ಹಣತೆ
ಒಣನುಡಿ ಧಾರ್ಢ್ಯತೆ ಜಿಗಿಟಾಗಿಸುತೆ |
ಬೆಂಕಿಗೆ ಬೆಂದು ಗಟ್ಟಿಯ ಬಿಗಿತನ
ಉಪಕಾರದಿ ಮುಟ್ಟುವ ಉಜ್ವಲತೆ ||
ನೂಲಿನ ಅರಿವೆಳೆ ಹಗ್ಗದುರಿಹೆಣೆ
ಬೆತ್ತಲೆ ಮೌಢ್ಯವ ಮುಚ್ಚುಲಿಕೆ |
ಮಿಂಟಿದ ರಾಗದ ತಿಳಿವಿನ ಕೊಳದಲಿ
ಬೆರಗಿನ ಹೂತೆರೆದರಳಲಿಕೆ ||
-ಮನೋಹರ ಜನ್ನು
“ಬೆವರಿನ ಜೋಳಿಗೆ ಬೆಳಗಿದ ಹಣತೆ” ತುಂಬಾ ಚೆನ್ನಾಗಿ ಮೂಡಿಬಂದಿದೆ ಪ್ರಿಯರೇ… ಧನ್ಯವಾದ ಸರ್ ಒಂದು ಉತ್ತಮ ಕವಿತೆ ಓದಲು ಕೊಟ್ಟಿದ್ದಕ್ಕೆ # ಮನೋಹರ್ ಜನ್ನು…