ಕಾವ್ಯಧಾರೆ

ಪಂಜು ಕಾವ್ಯಧಾರೆ: ಪ್ರವೀಣಕುಮಾರ್. ಗೋಣಿ, ಈರಣ್ಣ ಬೆಂಗಾಲಿ, ಸುನೀತಾ ಕುಶಾಲನಗರ, ಕು.ಸ.ಮಧುಸೂದನ ನಾಯರ್

ನಾ   ಏನನ್ನಲಿ ?
ಬಿಕ್ಕಳಿಸಿ  ಹೊರಹಾಕಿದ
ದುಃಖದ  ಕುರುಹೇ
ಇರದಂತೆ  ಮಂದಹಾಸ
ಬೀರುವ ನಿನ್ನ  ಪರಿಗೆ  ನಾ  ಏನನ್ನಲಿ ?

ಹೆಡೆಬಿಚ್ಚಿ  ಕುಣಿವ
ನರಳಿಕೆಯ  ಬಚ್ಚಿಟ್ಟು
ಅರಳಿದಾ  ಸುಮದಂತೆ
ಕಂಗೋಲಿಸುವಾ ನಿನ್ನ  ಪರಿಗೆ  ನಾ  ಏನನ್ನಲಿ ?

ಅಲೆಯಾಗಿ  ಬರುವ
ವೇದನೆಗಳ ಒಳಗವಿತಿಟ್ಟು
ಶಾಂತ  ಸಾಗರದಂತೆ
ಸಹನೆಯ ಹೆಪ್ಪಾಗಿಸಿಕೊಂಡ ನಿನ್ನ  ಪರಿಗೆ  ನಾ ಏನನ್ನಲಿ ?
-ಪ್ರವೀಣಕುಮಾರ್. ಗೋಣಿ

 

 

 

 


 

ಜೀವ ಜಲ

ನೀರು ನಮಗೆ
ಜೀವನಾಧಾರ
ನೀರಿಗಿಲ್ಲ ಯಾವುದೇ
ಬಣ್ಣ, ಆಕಾರ

ಮಿತವಾಗಿ ಬಳಸಬೇಕು ಜಲ 
ನೀರಿಲ್ಲವೆಂದರೆ 
ಜೀವರಾಶಿಗಳು ವಿಲ ವಿಲ

ಬಾವಿ, ಕೆರೆ, ನದಿ, ಹಳ್ಳ ಕೊಳ್ಳಗಳೇ
ನಮ್ಮ ನೀರಿನ ಮೂಲಗಳು
ಮಲೀನವಾಗದಂತೆ
ನೋಡಿಕೊಳ್ಳಬೇಕು ಇವುಗಳು

ನೀರನು ಮಾಡಬಾರದು ವ್ಯರ್ಥ
ಹನಿ ಹನಿ ನೀರೂ
ನಮಗೆ ಬಹಳ ಮುಖ್ಯ

ಹರಿದು ವ್ಯರ್ಥವಾಗತ್ತಿದ್ದರೆ
ನೀರು
ನಳ ಬಂದ್ ಮಾಡಿ
ನೀರನ್ನು ಉಳಿಸಿದಕ್ಕೆ
ಹೆಮ್ಮೆಪಡಿ

-ಈರಣ್ಣ ಬೆಂಗಾಲಿ, 


ನದಿ

ಹರಿಯುವಿಕೆಯಷ್ಟೇ
ದೀರ್ಘ ಅರಿವು
ಸಮಾನ ಸ್ವೀಕಾರ
ಆತ್ಮಹತ್ಯೆಯನು
ನಿರಾಕರಿಸದೆ
ಮಲೀನ ಬಟ್ಟೆಯಲೂ
ತಟಸ್ಥೆ
ಸಮುದ್ರ ಬಾಯಿ ತೆರೆದು 
ನಾಲಗೆ ಚಾಚಿಕೊಂಡಿದೆ
ಹರಿಯುತ್ತಾ ನೀ ಧ್ಯಾನಸ್ಥೆ
ಅಳವನು ಮೀರಿದ ತಿಳಿವಿನಲೆ
ಸಮುದ್ರ ಸೇರಿದ ನಿನ್ನ
ಪ್ರತ್ಯೇಕಿಸಲಾಗೀತೇ ?
ಅದೂ ನಿನಗೆ ಗೊತ್ತಾಗಲ್ಲ
ಬಿಡು.

ಸುನೀತಾ ಕುಶಾಲನಗರ

 

 

 

 


ಕವಿತೆಯಂತವಳು ಕವಿತೆಯಾದಾಗ!

1.
ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದು 
ಹಳೆಯ ಮನೆಯೊಳಗೆ ಕೂತು
ಬರೆಯುತ್ತಾಳೆ
ಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದು
ತನ್ನ ಒಂಟಿತನದ ಕಣ್ಣೀರಿನಿಂದವನು ತೊಳೆದುಒಣಗಿಸಿ
ತನ್ನ ಲೋಕದಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿ
ಕಟ್ಟುತ್ತಾಳೆ
ಕವಿತೆಯ ಹಾರ
ತನ್ನ 
ಅವಮಾನ
ಅಸಹಾಯಕತೆ
ಹತಾಶೆಗಳ ಪೋಣಿಸಿ!
ಓದುತ್ತೇನೆ
ತಲೆದೂಗುತ್ತೇನೆ
ಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿ
ನಕ್ಕು ನಕ್ಕೇ ದು:ಖ ಮರೆಸಿ
ಮರುಳು ಮಾಡುವವಳ ಬದುಕುವ ಕಲೆಗಾರಿಕೆಯನ್ನು!
ಅವಳಿಗೂ ಬದುಕೆಂಬುದಿದೆ ಕವಿತೆಯ
ಹೊರತಾಗಿಯೂ
ಎಂಬುದು ನೆನಪಾದಾಗೆಲ್ಲ
ನಾನು ಕಣ್ಣೀರಾಗುತ್ತೇನೆ.
===================
2
ಕಂಡೆ:
ಶಬುದಗಳ ಒಡನಾಟದೊಳಗೆ ತಾನೇ ಒಂದು
ಹೊಸ ಶಬುದವಾದವಳ 
ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂ
ಗಾಯದ ಗುರುತು
ಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲ
ಬಹಳಷ್ಟು ಸಾರಿ ಗಾಜಿನ ತುಂಡುಗಳು
ಕಭ್ಭಿಣದ ಮೊಳೆಗಳು!
ಹಾಗೆ ಮೆಲ್ಲಗವಳ ಪಾದಗಳನೆತ್ತಿ ನನ್ನ
ತೊಡೆಯ ಮೇಲಿಟ್ಟುಕೊಂಡು ಸವರಬೇಕು
ಮಾಯದ ಮುಲಾಮೆಂದು ಕೊಂಡಾಗೆಲ್ಲ
ಅವಳ ಮುಖ ಮಾತ್ರ ಕಾಣುತ್ತದೆ
ಪಾದಗಳನದೆಲ್ಲಿ ಬಿಟ್ಟು ಬರುತ್ತಾಳೋ!
==========
3
ಅವಳ ಮಲ್ಲಿಗೆಯ ಪಾದಗಳ
ಮುಂದೆ ಮಂಡಿಯೂರಿ ಕೂತು
ನಿವೇಧನೆ ಮಾಡಿಕೊಳ್ಳಬೇಕು:
ನಿನ್ನ ಕರುಣಾಳು ಕಂಗಳಿಂದ ನನ್ನನ್ನೊಮ್ಮೆ ನೋಡು
ನಿನ್ನ ಅಭಯಹಸ್ತದಿಂದ ನನ್ನ ತಲೆಯನ್ನೊಮ್ಮೆ ನೇವರಿಸು!
ನಿನ್ನ ಮಧುರಕಂಠದಿಂದೊಮ್ಮೆ ನನ್ನ ಹೆಸರನುಸಿರಿಸು
ನಿನ್ನ ಕಾಣುವವರೆಗೂ ಕಂಡಿರಲಿಲ್ಲ
ನನ್ನೊಳಗಿನ ನಾನು
ತಗೋ ನಿನ್ನಾಯುಧಗಳಿಂದೆನ್ನ
ಅಹಂಕಾರದ ರೆಕ್ಕೆ ಕತ್ತರಿಸು
ನನ್ನ ವಿಷದ ಹಲ್ಲುಗಳನ್ನು ಕಿತ್ತು ಹಾಕು
ನನ್ನೆಲ್ಲ ಪಾಪಗಳನ್ನೂ ಮನ್ನಿಸು
ಸಾದ್ಯವಾದರೆ ನನ್ನ
ಪ್ರೀತಿಸು!
ಕು.ಸ.ಮಧುಸೂದನ ನಾಯರ್

 

 

 

 

 



                     

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *