ಪಂಜು-ವಿಶೇಷ

ಪಂಜುವಿಗೆ ಅಭಿನಂದನೆಗಳು: ಮಂಜು ಹಿಚ್ಕಡ


ಅದು ೨೦೧೩ನೇ ಇಸವಿ, ಆಗಷ್ಟ್- ಸೆಪ್ಟೆಂಬರ್ ತಿಂಗಳು. ಗೂಗಲನಲ್ಲಿ ಏನನ್ನೋ ಹುಡುಕುತಿದ್ದಾಗ ಪಂಜು ಎನ್ನುವ ಆನ್ ಲೈನ್ ಪತ್ರಿಕೆ ಕಣ್ಣಿಗೆ ಬಿತ್ತು. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನ್ನುವಂತಹ ಲೇಖನಗಳು, ಕತೆಗಳು, ಕವಿತೆಗಳು ಆ ಪತ್ರಿಕೆಯ ತುಂಬೆಲ್ಲಾ ತುಂಬಿದ್ದವು. ನನಗೆ ಪತ್ರಿಕೆಯನ್ನು ಓದುತ್ತಾ ಹೋದ ಹಾಗೆ ಆ ಪತ್ರಿಕೆಯಲ್ಲಿ ಆಸಕ್ತಿ ಬೆಳೆಯತೊಡಗಿತು. ನಾನು ಹೆಸರಿಗೆ ಕವಿ-ಲೇಖಕ-ಕತೆಗಾರ ಎಂದು ನನ್ನಷ್ಟಕ್ಕೆ ಹೇಳಿಕೊಂಡರೂ ಅದುವರೆಗೆ ನನ್ನ ಯಾವುದೇ ಲೇಖನಗಳಾಗಲಿ ಕತೆಗಳಾಗಲಿ, ಕವನಗಳಾಗಲಿ ನನ್ನ ಬ್ಲಾಗನ್ನು ಬಿಟ್ಟರೆ ಬೇರೆಲ್ಲು ಪ್ರಕಟವಾಗಿರಲಿಲ್ಲ. ಹಾಗಂತ ನಾನು ಪತ್ರಿಕೆಗಳಿಗೆ ನನ್ನ ಲೇಖನಗಳನ್ನು ಕಳಿಸಿಕೊಟ್ಟಿಲ್ಲವೆಂದಲ್ಲ. ಕಳಿಸಿಕೊಟ್ಟಿದ್ದೆ ಆದರೆ ಉತ್ತರವೂ ಇರಲಿಲ್ಲ, ಪ್ರಕಟವಾಗಲೂ ಇಲ್ಲ. ಪಂಜು ಪತ್ರಿಕೆಯನ್ನು ನೋಡಿದ ನನಗೆ ಆ ಪತ್ರಿಕೆಗೆ ಏಕೆ ಒಂದು ಕವಿತೆಯನ್ನು ಕಳಿಸಿ ನೋಡಬಾರದು ಎಂದು ಕಳಿಸಿದೆ. ಎರಡುವಾರ ಕಳೆದರೂ ಉತ್ತರ ಬರದಿದ್ದುದನ್ನು ನೋಡಿ ಪಂಜು ಕೂಡ ಇತರ ಪತ್ರಿಕೆಗಳಂತೆ ನನ್ನ ಕವಿತೆಯನ್ನು ತಿರಸ್ಕರಿಸಿರಬೇಕೆಂದು ಅದೇ ಕವಿತೆಯನ್ನು ನನ್ನ ಬ್ಲಾಗನಲ್ಲಿ ಅಪ್ ಡೇಟ್ ಮಾಡಿದೆ.

ನನ್ನ ಬ್ಲಾಗನಲ್ಲಿ ಅಪ್ ಡೇಟ್ ಮಾಡಿ ಒಂದೆರಡು ದಿನ ಕಳೆದಿರಬಹುದು. ಪಂಜು ಸಂಪಾದಕ ನಟರಾಜ್ ಅವರಿಂದ ನನ್ನ ಇನ್ ಬಾಕ್ಸಗೆ ಒಂದು ಸಂದೇಶ ಬಂತು. "ಬ್ರದರ್, ನೀವು ಚೆನ್ನಾಗಿ ಬರೆಯುತ್ತೀರಾ. ಪಂಜು ವಾರ ಪತ್ರಿಕೆಯಾದ್ದರಿಂದ ಇಲ್ಲಿ ಲೇಖನಗಳನ್ನು ಪ್ರಕಟಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ  ಪಂಜುವಿಗೆ ಲೇಖನಗಳನ್ನು ಕಳಿಸಿದ ಮೇಲೆ ಅದು ಪಂಜುವಿನಲ್ಲಿ ಪ್ರಕಟವಾಗುವವರೆಗೆ, ಅದನ್ನು ಬೇರೆ ಕಡೆ ಪ್ರಕಟಿಸಬೇಡಿ, ಇಂತಿ ನಿಮ್ಮ ನಟರಾಜು". 

ಆ ಸಂದೇಶವನ್ನು ನೋಡಿ ಸ್ವಲ್ಪ ಬೇಸರವಾಯ್ತು. ಓಹೋ ತಪ್ಪು ಮಾಡಿದೆ. ಸ್ವಲ್ಪದಿನ ಕಾಯಬೇಕಿತ್ತು ಅನಿಸಿ ಆದ ತಪ್ಪಿಗಾಗಿ ಅವರಲ್ಲಿ ಕ್ಷಮೆ ಕೇಳಿದೆ. ಸ್ವಲ್ಪದಿನ ಕಳೆದ ಮೇಲೆ ಅವರಿಗೆ ಇನ್ನೊಂದು ಕವಿತೆ ಕಳಿಸಿದೆ. ಆ ಕವಿತೆ ಪಂಜುವಿನಲ್ಲಿ ಪ್ರಕಟಗೊಂಡಿತು. ಅದು ನನ್ನ ಮೊಟ್ಟ ಮೊದಲ ಕವನ ಒಂದು ಪತ್ರಿಕಯಲ್ಲಿ ಪ್ರಕಟವಾಗಿದ್ದು. ತದನಂತರ ಪಂಜುವಿನಲ್ಲಿ ಒಂದೆರಡು ಕವಿತೆಗಳು, ಕತೆಗಳು ಪ್ರಕಟಗೊಂಡಿದ್ದು ಇತಿಹಾಸ. ನನ್ನಂತ ಹೊಸ ಬರಹಗಾರರಿಗೆ ಹೀಗೆ ಪ್ರೋತ್ಸಾಹಿಸಿ ಇನ್ನಷ್ಟು ಹುರುಪು ತುಂಬುವಂತ ಪತ್ರಿಕೆ ಪಂಜು.

ಸೋಮವಾರ ಬಂತೆಂದರೆ ನಾನು ಬೆಳಿಗ್ಗೆ ಎದ್ದ ತಕ್ಷಣ ಮೊದಲು ನೋಡುವುದು ಪಂಜು ಮತ್ತು ಅದರಲ್ಲಿ ಪ್ರಕಟವಾಗುವ ಲೇಖನಗಳು. ಒಂದಕ್ಕಿಂತ ಒಂದು  ಅಭೂತ ಪೂರ್ವ ಲೇಖನಗಳು, ಕವಿತೆಗಳು, ಕತೆಗಳು, ಅಂಕಣ ಬರಹಗಳು. ಹಳೇ ಬೇರು ಹೊಸ ಚಿಗುರಿನಹಾಗೆ ಅನುಭವಿ ಲೇಖಕರಿಂದ ಮೂಡಿ ಬರುವ ಲೇಖನಗಳನ್ನು ಓದುವುದೆಂದರೆ ಅದೇನೋ ಸೊಗಸು. ಪಂಜು ಹೆಸರೇ ಹೇಳುವ ಹಾಗೆ, ಇದೊಂದು ಅಕ್ಷರಗಳ ದೀವಟಿಕೆ, ಕತ್ತಲಿನಲ್ಲಿ ಹುದುಗಿದ್ದ ಮನದ ಅಂಧಕಾರವನ್ನು ಅಕ್ಷರಗಳ ದೀವಟಿಕೆಯ ಮೂಲಕ ಬೆಳಕು ಚೆಲ್ಲುವಂತ ಪ್ರಯತ್ನ ನಟರಾಜು ಸೀಗೆಕೋಟೆ ಅವರದು. ಅದಾಗಲೇ ಎರಡನೆಯ ವರ್ಷದತ್ತ ಮುನ್ನಡೆಯುತ್ತಿರುವ ಪಂಜು ಅದಾಗಲೇ ಸಹಸ್ರಕ್ಕಿಂತ ಹೆಚ್ಚಿನ ಜನ ಪಂಜುವನ್ನು ವೀಕ್ಷಿಸಿದ್ದಾರೆ.

ಇಂದಿನ ಕಾಲದಲ್ಲಿ ಯಾವುದೇ ಜಾಹಿರಾತಿಲ್ಲದೇ, ಪುಕ್ಕಟ್ಟೆಯಾಗಿ ಪ್ರತಿವಾರ ಜನರಿಂದ ಜನರಿಗಾಗಿ ತೆರೆದಿರುವ ಪತ್ರಿಕೆಯಾದ ಪಂಜು ಅದಾಗಲೇ ೧೦೦ನೇ ಸಂಚಿಕೆಯತ್ತ ದಾಪುಗಾಲು ಹಾಕುತ್ತಿದೆ ಎನ್ನುವುದು ಒಂದು ಸಾಧನೆಯೇ ಸರಿ. ಆ  ಸಾಧನೆಯ ರೂವಾರಿಯಾದ ಸಹೋದರ ನಟರಾಜು ರವರಿಗೂ, ಪಂಜುವಿನ ಲೇಖಕರ ಬಳಗಕ್ಕೂ, ಓದುಗರ ಬಳಗಕ್ಕೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪತ್ರಿಕೆ ಸಹಸ್ರ-ಸಹಸ್ರ ಸಂಚಿಕೆಗಳನ್ನು ಹೊರತಂದು ಸದಾ ಜನರ ಮನದಲ್ಲಿ ಹಸಿರಾಗಿರಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳೊಂದಿಗೆ

-ಮಂಜು ಹಿಚ್ಕಡ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *