ಶ್ರಾವಣ ಮಾಸಾ ಬಂತಂದ್ರ ಅತ್ತಿ ಮನ್ಯಾಗಿನ ಹೆಣ್ಣಮಕ್ಕಳಿಗೆ ಎನೊ ಒಂಥರಾ ಹುರಪಿರತದ,ಪಂಚಮಿ ಹಬ್ಬಕ್ಕ ತವರುಮನಿಗೆ ಹೋಗೊ ಸಂಭ್ರಮದಾಗ ಭಾಳ ಖುಷಿಲೆ ತನ್ನ ಕರಿಲಿಕ್ಕೆ ಬರೊ ಅಣ್ಣ ಅಥವ ತಮ್ಮನ ದಾರಿಕಾಯಕೊತ,
"ಪಂಚಮಿ ಹಬ್ಬಾ ಉಳದಾವ ದಿನ ನಾಕ,,,
ಅಣ್ಣಾ ಬರಲೇಯಿಲ್ಲಾ ಕರಿಯಾಕ……….." ಅಂತ ತನ್ನೊಳಗ ತಾನ ಹಾಡು ಹಾಡಕೊತ,ತವರುಮನ್ಯಾಗಿನ್ ಪಂಚಮಿ ಹಬ್ಬದ ಸಂಭ್ರಮನ ತನ್ನ ಗೆಳತ್ಯಾರಿಗೆ ಹೆಳ್ಕೊತಿರತಾಳ."
"ನನ್ನ ತವರಲ್ಲಿ ಪಂಚಮಿ ಭಾರಿ,.
ಮಣ ತೂಕದ ಬೆಲ್ಲಾ ಕೊಬ್ಬರಿ,.
ಅಳ್ಳು ಅವಲಕ್ಕಿ, ತಂಬಿಟ್ಟು ಸೂರಿ,,.
ನಾನು ತಿನುವಾಕಿ ಅಲ್ಲೇ ಮನಸಾರಿ…."
ಅತ್ತಿ ಮನ್ಯಾಗ ತುಪ್ಪಾ ಸಕ್ಕರಿಯೊಳಗ ಕೈ ತೊಳಕೊಳ್ಳೊ ಅಷ್ಟು ಸಮೄಧ್ಧಿ ಇದ್ರು ತವರು ಮನ್ಯಾಗಿನ ಎಣ್ಣಿ ಚಟ್ಣಿನ ಭಾಳ ರುಚಿ ಅನಿಸ್ತದ. ಹಿಂಗ ತವರಮನಿ ನೆನಿಸ್ಕೊತ,ಹಬ್ಬಕ್ಕ ಹೋಗೊ ಕನಸ ಕಾಣಕೊತ ದಿನಾ ಕಳಿತಿರತಾಳ.ನಮ್ಮ ಉತ್ತರ ಕರ್ನಾಟಕದ ಪಂಚಮಿ ಹಬ್ಬದ ಜಾನಪದ ಗೀತೆಗಳೊಳಗ ಖರೇ ಖರೇನ ಹೆಣ್ಣಮಕ್ಕಳು ಹೆಂಗ ತವರುಮನಿಗೆ ಬರಲಿಕ್ಕೆ ಕಾತರಸತಾರ,ಅಭಿಮಾನದಿಂದ ಹೆಂಗ್ ತವರನ್ನ ನೆನಿಸ್ಕೊತಾರ,ಆ ಕ್ಷಣದಾಗ ಅವರಲ್ಲಿರೊ ಅಂಥಾ ಸಹಜ ಸಮ್ಮಿಶ್ರ ಭಾವನೆಗಳ ನೈಜ ವರ್ಣನಾ ಇರತದ.
ನಮ್ಮ ಕಡೆ ಮದವಿಯಾದ ಹೊಸದಾಗೆ ಅಷ್ಟ ಅಲ್ಲಾ ತಮ್ಮ ಮಕ್ಕಳು ದೊಡ್ಡವರಾಗಿ ಅಳಿಯಂದರು ಮತ್ತ ಸೊಸೆಯಂದ್ರು ಬಂದ್ರುನು ಪಂಚಮಿ ಹಬ್ಬಕ್ಕ ಮನಿ ಹೆಣ್ಣಮಕ್ಕಳನ್ನ ಕರೆಸೊ ಪಧ್ಧತಿ ಅದ. ಹಬ್ಬಕ್ಕ ಬಂದ ಮನಿ ಮಕ್ಕಳಿಗೆ ಹೊಸಾ ಸಿರಿ ಕೊಡಸಿ ಕೈ ತುಂಬ ಬಳಿ ಇಡಿಸಿ ಕಳಸತಾರ. ಕೈ ತುಂಬ ಇಟಕೊಂಡ ಬಣ್ಣದ ಬಳಿಗೊಳನ ಅತ್ತಿ ಮನ್ಯಾಗ ಎಲ್ಲಾರಗೂ ಭಾಳ ಖುಷಿಯಿಂದ ಪಂಚಮಿ ಬಳಿ ನೋಡ್ರಿ ಅಣ್ಣ ಕೊಡಸ್ಯಾನ ಅಂತ ಅಭಿಮಾನದಿಂದ ಹೇಳ್ಕೊಳತಾಳ. ಖರೆ ಅದ ಗಂಡ ಕೈ ತುಂಬ ಬಂಗಾರದ ಬಿಲ್ವಾರ ಕೊಡಸಿದ್ರುನು, ತವರಮನ್ಯಾಗ ಅಣ್ಣ ಕೊಡಸಿದ ಕಾಜಿನ ಚಿಕ್ಕಿ ಬಳಿ ಮುಂದ ಎನೇನು ಅಲ್ಲಾ. ಈ ಶ್ರಾವಣ ಮಾಸ ಬಂತಂದ್ರ ಸಾಕ ಸಂಭ್ರಮ ನ ಸಂಭ್ರಮ ಇರ್ತದ.೧೫ ದಿನಾ ಮುಂಚೆನ ಮನಿ ಸುಣ್ಣ ಬಣ್ಣ ಸಾರಸಲಿಕ್ಕೆ ಶುರು ಮಾಡತಾರ.ಹಾಸಿಗಿ,ಅರವಿ,ಎಲ್ಲಾ ನೀರಾಗ ಹಾಕಿ ಮನಿ ಎಲ್ಲಾ ಸ್ವಚ್ಛ ಮಾಡಕೊಂಡ ಹಬ್ಬದ ಫಳಾರದ ತಯಾರಿ ಮಾಡಲಿಕ್ಕೆ ಶುರು ಮಾಡತಾರ.ನಮ್ಮ ಹಳ್ಳಿಗಳೊಳಗ ಒಬ್ಬರಿಗೊಬ್ಬರು ಸಹಾಯ ಮಾಡ್ಕೊತ ಕೆಲಸಾ ಮಾಡತಾರ. ಹಬ್ಬದ ಫಳಾರ ಮಾಡೊಮುಂದನು ಅಷ್ಟ ಒಂದೊಂದಿನಾ ಒಬ್ಬೊಬ್ಬರ ಮನ್ಯಾಗ ಮಾಡೊದು. ಒಟ್ಟು ೫ ಥರದ ಉಂಡಿ ಅಗ್ಬೇಕು ಪಂಚಮಿ ಹಬ್ಬಕ್ಕ.ತಂಬಿಟ್ಟ ಉಂಡಿ,ಬೇಸನ ಉಂಡಿ,ಪುಠಾಣಿ ಶೇಂಗಾದ ಉಂಡಿ,ಅಂಟಿನ್ ಉಂಡಿ,ಅಳ್ಳ ಉಂಡಿ, ಮತ್ತ ಇವೆಲ್ಲಾದರ ಜೊಡಿ ಚಕ್ಕಲಿ,ಗಿಲಗಂಚಿ(ಕರಚಿಕಾಯಿ),ಶಂಕರಪೋಳೆ,ಖಾರದ ಶಂಕರಪೋಳೆ, ಭಾಳಷ್ಟ ಶೇಂಗಾ ಪುಠಾಣಿ,ಒಣಾಖೊಬ್ಬರಿ ಹಾಕಿ ಹಚ್ಚಿದ ಕುರು ಕುರು ಅವಲಕ್ಕಿ.
ಇವೆಲ್ಲಾವನ್ನು ರಾಶಿಗಟ್ಟಲೆ ಮಾಡತಾರ,ಯಾಕಂದ್ರ ಅವನ್ನೆಲ್ಲಾ ಮನ್ಯಾಗ ತಿನ್ನೊಕಿಂತಾ ಹೆಚ್ಚಿಗಿ ಮಂದಿಗೆ ಹಂಚೊದ ಜಾಸ್ತಿ ಇರತದ.ಉಂಡಿ ಅವಲಕ್ಕಿ ಫಳಾರದ ಗಂಟಿನ ಜೋಡಿ, ಜೋಡ ಖಣಾ,ಉಡಿ ಅಕ್ಕಿ.ಅಡಕಿಬೆಟ್ಟಾ,ಉತ್ತತ್ತಿ ಖೊಬ್ಬರಿ ಬಟ್ಟಲಾ, ಅರಿಷಿಣಾ ಕುಂಕಮ ಇವಿಷ್ಟೆಲ್ಲಾ ಊರಿಂದ ಹಬ್ಬಕ್ಕ ಬಂದ ಹೆಣ್ಣಮಕ್ಕಳಿಗೆ,ಬ್ಯಾರೆ ಊರಾಗ ಇರೊ ಬೀಗರಿಗೆ, ಆಜುಬಾಜು ಮನಿಯವರಿಗೆ ಕೊಡೊ ಪಧ್ಧತಿ ಅದ.ಅಷ್ಟ ಅಲ್ಲಾ ಓಣ್ಯಾಗ ಹಣ್ಣು ಹಂಪಲಾ, ಕಾಯಿಪಲ್ಯಾ,ಮತ್ತ ಮಸರು ಮಾರಲಿಕ್ಕೆ ಬಂದ ಹೆಣ್ಣಮಕ್ಕಳು ಸುದ್ಧಾ ಅವ್ವಾರ ನಮಗ ಪಂಚಮಿ ಉಂಡಿ ಕೊಡ್ರಿ ಮತ್ತ ಅಂತ ಕೇಳಿ ಇಸ್ಕೊಂಡ ಹೊಗತಾರ.ಇನ್ನೊಂದ ಆಶ್ಚರ್ಯದ ಸಂಗತಿ ಅಂದ್ರ ನಮ್ಮ ಊರಾಗ ಪಂಚಮಿ ಹಬ್ಬವನ್ನ ಬರೆ ಹಿಂದುಗಳಷ್ಟ ಅಲ್ಲಾ ಮುಸ್ಲಿಮರು ಆಚರಸತಾರ.ಅವರು ಥರಾವರಿ ಉಂಡಿಗಳನ್ನ ಮಾಡಿ ತಮ್ಮ ತಮ್ಮ ಹೆಣ್ಣಮಕ್ಕಳಿಗೆ ಸಂಭಂದಿಕರಿಗೆ ಹಂಚತಾರ.ಊರಾಗಂತು ಹಬ್ಬದ ಹಿಂದಿನದಿನಾ ಬಳಿ ಅಂಗಡಿಗೋಳು ರಾತ್ರಿ ಬೆಳತನಕಾ ತಗದಿರತಾವ.
ನಾಗರಚೌತಿ ದಿನಾ ಹೆಣ್ಣಮಕ್ಕಳು ಹಾಲು ಹಾಕೊ ದಿನಾ ಮುಂಝಾನೆ ಎಲ್ಲಾರ ಮನಿ ಅಂಗಳದಾಗ ಮನಿ ಕಡೆ ಒಳಗ ಮಾರಿ ಮಾಡಿದ್ದ ನಾಗಪ್ಪನ ದೊಡ್ಡ ರಂಗೋಲಿ ಹಾಕಿ ಬಣ್ಣಾ ತುಂಬಿರತಾರ. ಬಾಗಲ ಮ್ಯಾಲೆ ,ಕಟ್ಟಿಮ್ಯಾಲೆ ಹಿಂಗ ಎಲ್ಲಾ ಕಡೆ ಓಳಗ ಮಾರಿ ಮಾಡಿದ್ದ ನಾಗಪ್ಪನ ರಂಗೋಲಿ ಹಾಕಿರತಾರ.ಹೆಣ್ಣಮಕ್ಕಳೆಲ್ಲಾ ಹೊಸಾ ಸೀರಿ ಉಟಗೊಂಡು ಓಣ್ಯಾಗ ಆಜುಬಾಜುದವರೆಲ್ಲಾ ಕಲೆತು ನಾಗಪ್ಪನ ಕಟ್ಟಿಗೆ ಹೋಗಿ ಅಲ್ಲಿದ್ದ ಕಲ್ಲಿನ ನಾಗಪ್ಪಗ ಗೆಜ್ಜೆವಸ್ತ್ರ, ಹೂವು ಕ್ಯಾದಗಿ,ಕರಕಿ ಪತ್ರಿ, ಅರಿಷಿಣ ಕುಂಕುಮ ಮಂತ್ರಕ್ಷತೆಗಳಿಂದ ಪೂಜಾ ಮಾಡಿ, ಅಳ್ಳು-ಬೆಲ್ಲಾ,ನೆನಿಕಡಲಿ, ಹುರದಶೇಂಗಾ-ಒಣಖೊಬ್ಬರಿ, ಹುಣಸಿಕಾಯಿ-ಉಪ್ಪು, ಬೆಲ್ಲಾದ ನೀರು, ಹಾಲು ಎಲ್ಲಾನ್ನು ಭಕ್ತಿಯಿಂದ ನಾಗಪ್ಪಗ ಸಮರ್ಪಣಾ ಮಾಡಿ, ತಂಬಿಟ್ಟು ಅಳ್ಳು, ಎಳ್ಳಚಿಗಳಿ, ಎಲ್ಲಾ ನಾಗಪ್ಪಗ ನೈವೇದ್ಯಾ ಮಾಡಿ, ಆರತಿ ಬೆಳಗಿ ಬರತಾರ.ಚೌತಿ ದಿನಾ ಹಾಲ ಹಾಕಿ ಬಂದು ಮ್ಯಾಲೆ ಮನಿ ಬಾಗಲಿಗೆ ಆಜು ಬಾಜು ಅರಿಷಿಣದಲೆ ನಾಗಪ್ಪನ ಚಿತ್ರಾ ಬರದು ಪೂಜಾ ಮಾಡಿ ಒಳಗ ಹೋಗತಾರ.ಅವತ್ತ ಹೆಣ್ಣಮಕ್ಕಳೆಲ್ಲಾ ಉಪ್ಪಿಲ್ಲದ ಉಪವಾಸ ಮಾಡ್ತಾರ. ಮರುದಿನಾ ಪಂಚಮಿ ಗಂಡುಮಕ್ಕಳು ಹಾಲು ಹಾಕೊದಿವಸ, ಅವತ್ತ ಹೊರಗ ಮಾರಿ ಮಾಡಿದ್ದ ನಾಗಪ್ಪನ ರಂಗೋಲಿ ಹಾಕತಾರ. ಮನ್ಯಾಗನ ಮಣ್ಣಿಲೆ ನಾಗಪ್ಪನ್ನ ಮಾಡಿ ಪೂಜಾ ಮಾಡಿ ಹಾಲು ಹಾಕತಾರ. ಕುದಸಿದ ಕಡಬು, ನವಣಕ್ಕಿ ಪಾಯಸಾ ಮಾಡಿ ನಾಗಪ್ಪಗ ನೈವೇದ್ಯಾ ಮಾಡತಾರ.ಪಂಚಮಿ ಎಂಟ ದಿನಾ ಅಂತಿರಲಿಕ್ಕೆನಾ ಎಲ್ಲಾರ ಮನ್ಯಾಗ ಜೋಕಾಲಿ ಕಟ್ಟಲಿಕ್ಕೆ ಶುರು ಮಾಡಿರತಾರ. ಈ ಪಂಚಮಿ ಹಬ್ಬದಾಗ ಜೋಕಾಲಿ ಆಡೊದೊಂದ ಸಂಭ್ರಮನ ಇರ್ತದ.ಊರಾಗ ದೊಡ್ಡ ದೊಡ್ಡ ಗಿಡಕ್ಕ ಜೋಕಾಲಿ ಕಟ್ಟಿ ,ಮುಂದ ಟೊಂಗಿಗೆ ತಂಬಿಟ್ಟ ಉಂಡಿ ಕಟ್ಟಿರತಾರ. ಜೋಕಾಲಿ ಆಡೊವರು ಜೊರಾಗಿ ಜೀಕಿ ಜೀಕಿ ಬಾಯಿಲೆ ಉಂಡಿ ತಗೊಬೇಕಿರತದ. ಗಂಡು ಹುಡುಗುರು ಮತ್ತ ಹೆಣ್ಣಮಕ್ಕಳು ಒಬ್ಬರಿಗಿಂತಾ ಒಬ್ಬರು ಜಿದ್ದಿಗೆ ಬಿದ್ದ ಜೋಕಾಲಿ ಆಡತಿರತಾರ.ಎಲ್ಲಾ ವಯಸ್ಸಿನ ಗಂಡಸರು ಮತ್ತ ಹೆಂಗಸರು ಜೋಕಾಲಿ ಆಡಿ ಸಂತೋಷ ಪಡತಾರ.ಪಂಚಮಿ ಮರುದಿನಾ ಶಿರಿಯಾಳ ಶಷ್ಠಿ ಮಣ್ಣಿಂದ ಮಾಡಿದ ಪಾರ್ವತಿ ಪರಮೇಶ್ವರನ ಮೂರ್ತಿಗೆ ಪೂಜಾ ಮಾಡಿ,೫ ವರ್ಷದ ಒಳಗಿನ ಹೆಣ್ಣ ಮಕ್ಕಳು ಬಾಳೆಹಣ್ಣು,ಎಲಿ ಅಡಕಿ, ತಗೊಂಡ ಹೋಗಿ ಎಲ್ಲಾರ ಮನಿಗೆ ಬೀರಿಸಿ ಬರತಾರ,ಮತ್ತ ಹೊಸದಾಗೆ ಮದುವಿ ಆದ ಹೆಣ್ಣಮಕ್ಕಳು ಮಸರು ಬುತ್ತಿ,ಉಪ್ಪಿನಕಾಯಿ,ಕರಚಿಕಾಯಿನ ಎಲ್ಲಾರ ಮನಿಗು ಹೊಗಿ ಬೀರಿಸಿ ಬರತಾರ.
ಪಂಚಮಿ ಸಂಭ್ರಮ ಒಂದ ಅಲ್ಲಾ ಈ ಶ್ರಾವಣಮಾಸದಾಗ ಶುಕ್ರವಾರ ಮತ್ತ ಶನಿವಾರ ಗೌರಿಪೂಜಾ, ವರಮಹಾಲಕ್ಷ್ಮಿಪೂಜಾ, ಮಂಗಳಗೌರಿ, ಸೋಮವಾರ ಈಶ್ವರನ ಪೂಜಾ, ಬುಧಾ-ಬೄಹಸ್ಪತಿ ಪೂಜಾ, ರಾಘವೇಂದ್ರ ಸ್ವಾಮಿಗಳ ಆರಾಧನೆ, ರಕ್ಷಾಬಂಧನ, ಗೋಕುಲಾಷ್ಟಮಿ, ಅರಿಷಿಣ ಕುಂಕಮ, ಹೂ ವಿಳ್ಯಾ ಅಂತಹೇಳಿ ಇಡಿ ತಿಂಗಳ ಧಾರ್ಮಿಕ ಕಾರ್ಯಗಳನ್ನೊಳಗೊಂಡ ಮಂಗಳಕರವಾದ ವಾತಾವರಣ ಮನಸ್ಸಿಗೆ ನೆಮ್ಮದಿ ಮತ್ತ ಶಾಂತಿಯನ್ನ ಕೊಡತದ.ಶ್ರಾವಣ ಅನ್ನೊ ಪದದೊಳಗನ ಎನೊ ಒಂಥರಾ ಖುಷಿ ಅಡಗಿರತದ. ಹೊಸದಾಗಿ ಮದುವಿ ಆದವರಿಗಂತು ಶ್ರಾವಣಮಾಸ ಶುರು ಆತಂದ್ರ ಸಾಕ ಮನಸಿನಾಗ ಮಲ್ಲಿಗಿ ಹೂವು ಅರಳತಾವ. ಆಷಾಢದ ವಿರಹ ಮುಗಿಸಿ ತನ್ನ ಪ್ರೀತಿಯ ಪತಿಯ ಸಾನಿಧ್ಯದ ಸವಿಯನ್ನ ಅನುಭವಸ್ಲಿಕ್ಕೆ ಕಾತರದಿಂದ ಕಾಯತಿರತಾಳ.ಅತ್ತಿ ಮನ್ಯಾಗ ಇರೊ ಹೆಣ್ಣಮಕ್ಕಳಂತು ತವರುಮನಿಗೆ ಹೋಗೊಕನಸ ಕಾಣಕೋತ….
"ನನ್ನ ತವರೂರು ಗೋಕುಲ ನಗರಾ,,,
ಮನಿ ಗಂಡಂದು ರಾಜ್ಯಾವತೀರಾ,,,,
ಹೇಂಗ ಆದೀತ., ಹೇಂಗ ಆದೀತ ಬಿಟ್ಟು ಇರಲಾಕ,,
ಅಣ್ಣ ಬರಲೇಯಿಲ್ಲಾ ಕರಿಯಾಕ…. " ಅಂತ ಹಾಡಕೊತ ತನ್ನನ್ನ ಕರಿಲಿಕ್ಕೆ ಬರೋವರ ಹಾದಿಕಾಯತಿರ್ತಾರ.
ಶ್ರಾವಣಮಾಸದಾಗ ವರಮಹಾಲಕ್ಷ್ಮಿ ಹಬ್ಬನು ಭಾಳ ವಿಜ್ರಂಭಣೆಯಿಂದ ಆಚರಸತಾರ.ಎಡಕ ಬಲಕ ಬಾಳಿಕಂಬದಿಂದ ಒಳಗೊಂಡ ವರಮಂಟಪದ ಒಳಗ ಬಣ್ಣ ಬಣ್ಣದ ನಾನಾಥರದ ಹೂವು ಮತ್ತ ಕರಕಿ ಪತ್ರಿ,ಕ್ಯಾದಗಿ,ಅರಿಷಿಣ ಕುಂಕುಮಗಳಿಂದ ಅಲಂಕಾರಮಾಡಿದ ವರಮಹಾಲಕ್ಷ್ಮಿನ್ನ ನೋಡಲಿಕ್ಕೆ ಎರಡು ಕಣ್ಣ ಸಾಲಂಗಿಲ್ಲಾ. ನಾವೆಲ್ಲಾ ಸಣ್ಣವರಿದ್ದಾಗ ತಿಂಗಳಿಡಿ ಪೂಜಾದ ಸಲವಾಗಿ ಕರಕಿ ಪತ್ರಿ,ತಗೊಂಡ ಬರೋದಂದ್ರ ನಮಗ ಭಾಳ ಖುಷಿ ತರತಿತ್ತು.ಎಲ್ಲಾ ಕಡೆ ಹುಡುಕಾಡಿ ಛೊಲೊ ಕರಕಿ ಪತ್ರಿ ಹರಕೊಂಡ ಬರತಿದ್ವಿ. ಈಗೆಲ್ಲಾ ಪ್ಯಾಟ್ಯಾಗ ರೊಕ್ಕಾ ಕೊಟ್ರ ಸಾಕು ಎಲ್ಲಾ ಪೂಜಾ ಸಾಮಗ್ರಿಗಳು ಸಿಗತಾವ ಹುಡುಕಾಡೊ ಪ್ರಶ್ನೆನ ಬರಂಗಿಲ್ಲಾ. ಪಂಚಭಕ್ಷ್ಯ ಪರಮಾನ್ನಗಳಿಂದ ನೈವೇದ್ಯಾ ಮಾಡಿ ಆರತಿ ಮಾಡಿದಮ್ಯಾಲೆ ಸಂಜಿಮುಂದ ಸಂಪತ್ತ ಶುಕ್ರವಾರದ ಹಾಡು ಹಾಡಿ ಮುತೈದೆಯರಿಗೆ ಅರಿಷಿಣ ಕುಂಕಮಾ,ಹೂವು ಕೊಟ್ಟು ಉಡಿತುಂಬಿ ಕಳಸತಾರ.ಮಂಗಳಗೌರಿ ಪೂಜಾನು ಅಷ್ಟ ವೈಭವದಿಂದ ಮಾಡತಾರ ಓಣ್ಯಾಗ ಎನರೆ ಹೊಸದಾಗಿ ಮದುವ್ಯಾದ ಒಂದನಾಲ್ಕ ಮಂದಿ ಹೆಣ್ಣಮಕ್ಕಳಿದ್ರ, ಒಂದೊಂದ ವಾರ ಒಬ್ಬೊಬ್ಬರ ಮನ್ಯಾಗ ದೊಡ್ಡ ಮಂಟಪಾ ಹಾಕಿ,ಹೂವಿನಹಾರಾ ಮತ್ತ ಬಣ್ಣ ಬಣ್ಣದ ರೇಷ್ಮಿ ಸೀರಿಗಳಿಂದ ಮಂಟಪಾನ ಅಲಂಕಾರ ಮಾಡಿ ನಡುವ ಮಂಗಳಗೌರಿನ್ನ ಪ್ರತಿಷ್ಠಾಪನಾ ಮಾಡಿ ಎಲ್ಲಾರು ಕಲೆತು ಸಾಮೂಹಿಕವಾಗಿ ಗೌರಿ ಪೂಜಾ ಮಾಡಿ ಸಂಜಿಮುಂದ ಎಲ್ಲಾರನು ಅರಿಷಿಣಾ ಕುಂಕಮಕ್ಕ ಕರೆದು ಹೂವೀಳ್ಯ ಮಾಡಿ ಹಿರಿಯರ ಆಶಿರ್ವಾದತಗೊತಾರ.
ಶ್ರಾವಣಮಾಸಾ ಅಂದ್ರ ಮನ್ಯಾಗ ಅಷ್ಟ ಅಲ್ಲಾ ಇಡಿ ಊರಾಗನ ಒಂಥರಾ ಮಂಗಳಕರವಾದ ವಾತಾವರಣ ಇರತದ.ಎಲ್ಲಾರ ಮನಿಬಾಗಲಿಗೆ ಹಸಿರು ಮಾವಿನ ತೋರಣಾ,ಮನ್ಯಾಗ ಪ್ರತಿ ದಿನಾ ನಡೆಯೊ ದೇವತಾ ಕಾರ್ಯಗಳು,ಊರಾಗ ದೇವಸ್ಥಾನಗಳೊಳಗ ನಡೆಯೊ ಪುರಾಣ ಪ್ರವಚನಗಳಿಂದ ಮನಸ್ಸಿಗೆ ಅಖಂಡ ಶಾಂತಿಯನ್ನ ಕೋಡತಾವ. ಜಿಟಿ ಜಿಟಿ ಮಳೆಗಾಲದಾಗ,ಎಲ್ಲಾ ಕಡೆ ಹಚ್ಚ ಹಸಿರಿನಿಂದ ಕಂಗೊಳಿಸೊ ಈ ಶ್ರಾವಣ ಸಂಭೄಧ್ಧಿಯ ಸಂಕೇತ ಆಗೇದ. ತಾಯಿ ವರಮಹಾಲಕ್ಷ್ಮಿ ಜಗತ್ತಿನ ಸಕಲ ಜೀವಕೋಟಿಗೆ ಆಯುರಾರೋಗ್ಯ,ಸುಖ-ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ. ಎಲ್ಲ ಓದುಗರಿಗೂ ಶ್ರಾವಣದ ಶುಭ ಹಾರೈಕೆಗಳು.
*****
ಸುಮ್ ಸುಮ್ ನಾ ಅಂಕಣದ ಈ
ಕತಿ "ಅನುಭವಿಸಿ" ಬರೆದ ಬರಹ.
ಗಟ್ಟಿತನದಿಂದ ಕೂಡಿದೆ.
ಲೇಖನ ಉತ್ತಮವಾಗಿದೆ ವಿಷಯ ವಸ್ತು ಅತ್ಯಂತ ಸೂಕ್ತ ಹಾಗೂ ಸಾಂಧರ್ಭಿಕವಾಗಿದೆ.