ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ


೧) ಹೊಸ ವರ್ಷ
ಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು ಪ್ರತಿಜ್ಞೆ ಗೈದ.ಕಳೆದ ವರ್ಷದ ಮುಗಿದು ಹೋದ ಡೈರಿಯನ್ನು ಕೊನೆಯ ಬಾರಿ ಅವಲೋಕನ ಮಾಡಿದಾಗ ಈ ವರ್ಷಕ್ಕೆ ಮಾಡಿದ್ದ ಪ್ರತಿಜ್ಞೆಯೇ ಆ ಡೈರಿಯಲ್ಲೂ ಇತ್ತು.

೨) ಸಂಭ್ರಮ
ಆ ಊರಿನಲ್ಲಿ ಹೊಸ ವರ್ಷದ ಸಂಭ್ರಮ ಎಲ್ಲೆಡೆಯೂ ತುಂಬಿತ್ತು. ಪಟಾಕಿಗಳ ಸದ್ದು ಜೋರಾಗಿಯೇ ಇತ್ತು. ಜನರು ತಮ್ಮ ತಮ್ಮ ನಡುವೆ ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದರು. ಮೋಜು ಮಸ್ತಿಯಲ್ಲೇ ತೇಲಾಡಿದ ಊರಿನ ಜನ ಅದೊಂದು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು. ಜನರ ಈ ಗದ್ದಲಕ್ಕೆ ಹಕ್ಕಿ ಪಕ್ಷಿಗಳು ಗೂಡುಸೇರಿದ್ದವು. ಪ್ರಾಣಿಗಳು ಹೆದರಿ ಮೌನವಾಗಿದ್ದವು. ಗಾಳಿ ಸ್ಥಬ್ದವಾಗಿತ್ತು. ಗಿಡಮರಗಳು ಕಲ್ಲಾಗಿದ್ದವು. ಆದರೆ ದಿನಗಳು ಉರುಳಿ ಯುಗಾದಿ ಹತ್ತಿರವಾಗುತ್ತಿದ್ದಂತೆ ಹಕ್ಕಿಪಕ್ಷಿಗಳಮೌನ ದೂರಾಗಿತ್ತು. ಗಾಳಿ ತಂಪಾಯಿತು. ಗಿಡಮರಗಳು ಚಿಗುರಿದವು.ಆಗ ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮೌನವಾಗಿ ಹರಡಿತ್ತು.

೩) ನಿರ್ಧಾರ
ಅವನು ಪದವೀಧರ. ಓದು ಮುಗಿಸಿ ಕೆಲಸಕ್ಕಾಗಿ ಅಲೆದಾಡಿ ಸುಸ್ತಾಗುತ್ತಿದ್ದ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ  ಕೆಲಸಮಾಡಿ ಖರ್ಚಿಗಾಗುವಷ್ಟು ಹಣ ಸಂಪಾದಿಸುತ್ತಿದ್ದ. ಜೀವನಕ್ಕೆ ಒಂದು ನಿರ್ದಿಷ್ಟ ದಿಕ್ಕು ದೆಸೆ ಕಾಣದೇ ಚಿಂತೆಗೀಡಾಗಿದ್ದ. ಉದ್ಯೋಗಕ್ಕಾಗಿ ಬರೆಯುವ ಪರೀಕ್ಷೆಗಳಲ್ಲಿ ಪದೇ ಪದೇ ಅನುತ್ತೀರ್ಣನಾಗುತ್ತಿದ್ದ. ಅಂದು ಹೊಸ ವರ್ಷ . ಅವನು ಒಂದು ಅಚಲವಾದ ನಿರ್ಧಾರ ತೆಗೆದುಕೊಂಡ. ಎಷ್ಟೇ ಕಷ್ಟವಾದರೂ ಓದಿ ತನ್ನ ಗುರಿ ಸಾಧಿಸುವ ದೃಢವಾದ ನಿರ್ಧಾರ ಕೈಗೊಂಡ. ಅದರಂತೆಯೇ ನಡೆದ.ಹೊಸ ವರ್ಷಕ್ಕೆ ಅವನು ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ನಂತರ ಬಂದ ಹೊಸ ವರ್ಷದ ದಿನದಂದು ಅವನು ಒಂದು ಉನ್ನತ ಹುದ್ದೆಯನ್ನು ಹೊಂದಿದ್ದ.

೪) ಸಾಲ
ಹೊಸ ವರ್ಷದ ಸಂಭ್ರಮಕ್ಕಾಗಿ ಅವನು ಸಕಲ ಸಿದ್ಧತೆಗಳನ್ನು ಮಾಡಿಕೊಂಡ. ಅದ್ದೂರಿಯಾಗಿ ಹೊಸ ವರ್ಷವನ್ನು  ಬರಮಾಡಿಕೊಳ್ಳಬೇಕೆಂದು ನಿರ್ಧರಿಸಿ ತಾನು ಬಡವನಾದರೂ ಸಾಲ ಮಾಡಿ ತನ್ನ ಗೆಳೆಯರೊಂದಿಗೆ ಬಂಧುಗಳೊಂದಿಗೆ ಅಧಿಕ ವೆಚ್ಚದಲ್ಲಿ ಸಂಭ್ರಮವನ್ನು ಆಚರಿಸಿದ. ಆದರೆ ಒಂದು ದಿನದ ಖುಷಿಗಾಗಿ ಮಾಡಿದ್ದ ಅವನ ಸಾಲ ಇಡೀ ವರ್ಷ ಅವನನ್ನು ಬಾಧಿಸಿತು. ದುಂದುವೆಚ್ಚದ ಪರಿಣಾಮವಾಗಿ ಆ ವರ್ಷ ಪೂರ್ತಿ ಸಾಲಗಾರನಾಗಿಯೇ ಜೀವನ ಸಾಗಿಸಬೇಕಾಯಿತು.


೫) ಸಾಧನೆ
ತರಗತಿಯಲ್ಲಿ ಗುರುಗಳು ಮಕ್ಕಳಿಗೆ ಪ್ರತಿ ಹೊಸ ವರ್ಷಕ್ಕೆ ಒಂದು ಸದಭಿರುಚಿಯ ಹವ್ಯಾಸವನ್ನು ರೂಢಿಸಿಕೊಳ್ಳಲು ತಿಳಿಸಿದರು. ವರ್ಷದ ಪೂರ್ತಿ ಅವರು ಹಾಕಿಕೊಂಡ ಹವ್ಯಾಸದ ಬಗ್ಗೆ ಗುರುಗಳು ಗಮನ ಹರಿಸಿದರು. ಕೆಲವು ವಿದ್ಯಾರ್ಥಿಗಳಿಗೆ ಹವ್ಯಾಸವು ರೂಢಿಗತವಾಯಿತು. ಗುರುಗಳ ಮಾತಿನಂತೆ ಉನ್ನತ ವ್ಯಾಸಂಗಕ್ಕೆ ಹೋದರೂ ಹೊಸ ವರ್ಷಕ್ಕೆ ಹಮ್ಮಿಕೊಳ್ಳುವ ಸದಭಿರುಚಿಯ ಹವ್ಯಾಸವನ್ನು ಮುಂದುವರಿಸಿಕೊಂಡು ಹೋದರು. ಇದೇ ಹವ್ಯಾಸಗಳು ಮಕ್ಕಳನ್ನು ಅವರ ಜೀವನದಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ದವು. ಗುರುಗಳ ಹೊಸ ವರ್ಷಕೆ ಹೊಸ ಹವ್ಯಾಸ ವಿದ್ಯಾರ್ಥಿಗಳ ಜೀವನವನ್ನು ಸಾಕಾರಗೊಳಿಸಿತ್ತು.

ವೆಂಕಟೇಶ ಚಾಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x