ಅನಿ ಹನಿ

ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ


ದೊಡ್ಡಪ್ಪನ ಮನೆಯೊಳಗೆ ಕರ್ಫ್ಯೂ ವಿಧಿಸಿದಂತಿದ್ದ ವಾತಾವರಣ. ದೊಡ್ಡಮ್ಮ ಮತ್ತು ಅತ್ತಿಗೆಯರ ಸಂಭಾಷಣೆಯೆಲ್ಲಾ ಸನ್ನೆಯಲ್ಲೇ ಸಾಗುತ್ತಿತ್ತೇ ವಿನಃ ಸ್ವರ ಹೊರ ಬರುತ್ತಿರಲಿಲ್ಲ. ಅಣ್ಣಂದಿರು ಅಲ್ಲಲ್ಲಿ ತಮ್ಮ ಕೆಲಸದಲ್ಲಿ ತೊಡಗಿದಂತೆ ಕಂಡರೂ   ಅವರ ಗಮನವೆಲ್ಲಾ ಈಸೀಚೇರಿನಲ್ಲಿ ಕುಳಿತ ದೊಡ್ಡಪ್ಪನ ಕಡೆಯೇ ಇತ್ತು. ಅವರೊ ಇತ್ತಲಿನ ಪರಿವೆಯಿಲ್ಲದೆ  ಕೈಯನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಎತ್ತಲಾಗದೇ ಕೆಳಗೆ ಹಾಕುವುದು ಮಾಡುತ್ತ ಕುಳಿತಿದ್ದರು. ಕಣ್ಣಿನಲ್ಲಿ ಶೂನ್ಯ ಭಾವ. 

ಮನೆಯೆಲ್ಲಾ ಮೌನದಲ್ಲಿ ಮುಳುಗಿ ಯಾವುದೋ ಶೋಕವನ್ನು ನಿರೀಕ್ಷಿಸುವಂತೆ ಇತ್ತು. ನನ್ನ ಆಗಮನ ಎಲ್ಲರ ಮೊಗದಲ್ಲೂ ನಗೆರೇಖೆಯನ್ನು ಎಳೆದರೂ ಮೌನದ ಕಟ್ಟು ಇನ್ನೂ ಬಿಚ್ಚಿರಲಿಲ್ಲ. ಗೇಟಿನ ಹೊರಗೆ ನನಗಾಗೇ ಕಾಯುವಂತೆ ನಿಂತಿದ್ದ ಚಿಕ್ಕಣ್ಣ ದೊಡ್ಡಪ್ಪನ ಹೊಸ ಖಾಯಿಲೆಯ ವಿಷಯವನ್ನು ವಿವರಿಸಿ ನನ್ನ ಕೆಲಸ ಹಗುರ ಮಾಡಿದ್ದ. ಇದರ ಜೊತೆಗೆ  ಬೆಳಗ್ಗೆಯೇ ಬಂದ ದೊಡ್ಡತ್ತಿಗೆಯ ಮೆಸೇಜು ಕೂಡಾ ನಾನಿಲ್ಲಿಗೆ ಬರುವಂತೆ ಮಾಡಿತ್ತು ಎನ್ನುವುದು ಸದ್ಯದ ಮಟ್ಟಿಗೆ ಗುಟ್ಟಿನ ಸಂಗತಿ.

ಈಗಿನ ಕಾಲಕ್ಕೆ ಅಪರೂಪವೆನಿಸುವ ಕೂಡು ಕುಟುಂಬ ದೊಡ್ಡಪ್ಪನದು. ಈಗಲೂ ಮನೆಯ ಆಡಳಿತದ ಕೀಲಿಕೈ ತಮ್ಮ ಕೈಯಲ್ಲಿಯೇ ಇರಿಸಿಕೊಂಡಿದ್ದ ದೊಡ್ಡಪ್ಪನಿಗೆ ಕಾಲೇಜಿಗೆ ಹೋಗುವ ಮಕ್ಕಳ ಅಪ್ಪಂದಿರಾಗಿದ್ದ ತಮ್ಮ ಮಕ್ಕಳು ವ್ಯವಹಾರ ಜ್ಞಾನವಿಲ್ಲದವರೆಂದೇ  ನಂಬಿಕೆ. ಸರಕಾರಿ ಕೆಲಸದಲ್ಲಿದ್ದು ನಿವೃತ್ತರಾದ ದೊಡ್ಡಪ್ಪ ತಮ್ಮ ಮನೆಯನ್ನೇ ಇನ್ನೂ ತಮ್ಮ ಆಫೀಸೆಂದು ತಿಳಿದು ಅದೇ ಮರ್ಜಿಯಲ್ಲಿ ಕಾರ್ಬಾರು ನಡೆಸುವ ಇಚ್ಚೆಯುಳ್ಳವರು. 

ಕೊಂಚ ಹುಡುಗಾಟದ ಹಾಸ್ಯ ಸ್ವಭಾವದ ಅಣ್ಣಂದಿರು, ಅವರಿಗೆ ಸರಿಯಾದ ನಗು ಮುಖದ ಅತ್ತಿಗೆಯಂದಿರು, ಹಿರಿಯರ ಗೆರೆ ಮೀರದ ಮಕ್ಕಳು ಮನೆಯನ್ನು ನಂದನವನ್ನಾಗಿ ಮಾಡಿತ್ತು. ಇತ್ತೀಚೆಗಷ್ಟೇ ದೊಡ್ಡಮ್ಮನ ಹಠಕ್ಕೆ ಮನೆಯ ಆಸ್ತಿಯೆಲ್ಲಾ ಪಾಲಾಗಿ ಅವರವರ ಹೆಸರಿಗೆ ಎಂದಾಗಿದ್ದರೂ  ಎಲ್ಲರೂ ಒಂದೇ ಮನೆಯಲ್ಲಿ ಒಗ್ಗಟ್ಟಿನಿಂದ ಬದುಕುವುದನ್ನೇ ಬಯಸಿದ್ದ ಕಾರಣ ದೊಡ್ಡಪ್ಪ ಮೊದಲಿನಂತೇ ಕೀಲಿ ಕೈ ಇಟ್ಟುಕೊಂಡು ಯಜಮಾನಿಕೆ ನಡೆಸಲೇನೂ ಅಡ್ಡಿ ಇರಲಿಲ್ಲ. ಇದು  ಅಣ್ಣ ಅತ್ತಿಗೆಯಂದಿರಿಗೆ ಮನೆಯ ಬಗ್ಗೆ ಚಿಂತೆ ಮಾಡದೇ  ನಿರಾತಂಕವಾಗಿ ತಮ್ಮ ಕೆಲಸಗಳಲ್ಲಿ ತೊಡಗಲು  ಸಹಕಾರಿಯಾಗಿತ್ತು. 

ದೊಡ್ಡಮ್ಮ ಪೂಜೆ, ಪುನಸ್ಕಾರ, ಧ್ಯಾನದಲ್ಲಿ ಮುಳುಗಿ ದೇವರ ಚಿಂತನೆ ಮಾಡುತ್ತಿದ್ದರೆ ದೊಡ್ಡಪ್ಪ ದಿನ ಬೆಳಗಾದರೆ ತಮ್ಮ  ದೇಹದ ಚಿಂತೆ ಮಾಡುತ್ತಿದ್ದರು. ಒಂದು ಸಣ್ಣ ಇರುವೆ ಕಚ್ಚಿದರೆ ಸಾಕು ಕೂಡಲೇ ಡಾಕ್ಟ್ರಿಗೆ ಫೋನ್ ಮಾಡಿ ’ಟೆಟಾನಸ್ ಇಂಜೆಕ್ಷನ್ ತೆಗೆದುಕೊಳ್ಳಬೇಕಾದೀತಾ’ ಎಂದು ಸಲಹೆ ಕೇಳುತ್ತಿದ್ದರು. ಮನೆಯಲ್ಲಿರುವ ಲ್ಯಾಂಡ್ ಫೋನಿನ ಹತ್ತಿರ ಇರುವ ಕುರ್ಚಿ ಅವರ ಸಿಂಹಾಸನವಾಗಿತ್ತು. ಅದರ ಹಿಂದೆ ದಪ್ಪ ರಟ್ಟಿನ ಮೇಲೆ ಪೆನ್ನಿನಲ್ಲಿ ಬರೆದ ’ ಶತ್ರುವನ್ನೂ, ಕಾಯಿಲೆಯನ್ನೂ ಬೆಳೆಯಲು ಬಿಡಬಾರದು’ ಎಂಬ ಶುಭಾಷಿತ ದೊಡ್ಡದಾಗಿ ಕಾಣುತ್ತಿತ್ತು.  ಯಾರೇ ಮನೆಗೆ ಫೋನ್ ಮಾಡಲಿ ಅವರ ’ಹೇಗಿದ್ದೀರಿ’ ಎಂಬ ಪ್ರಶ್ನೆಗೆ ’ಹೇಗೋ.. ಅಂತು ಇದ್ದೇನೆ ಅತ್ಲಾಗಿ..’ ಎಂಬ ಸಿದ್ದ ಉತ್ತರವಿರುತ್ತಿತ್ತು. ಕೂಡಲೇ ಆ ಕಡೆಯಿಂದ ’ಯಾಕೇ ಏನಾಯ್ತು’ ಎಂದು ಕೇಳಿದರೆ ಸಾಕು ಶುರು ಆಗುತ್ತಿತ್ತು ಅವರ ಕಥನ ಕುತೂಹಲ. 

ಹಗಲಿಡೀ ಕುರ್ಚಿಯಲ್ಲಿ ತೂಕಡಿಸುತ್ತಲೇ ಇರುವ ಅವರಿಗೆ ತಮಗೆ ರಾತ್ರೆ ಬಾರದಿರುವ ನಿದ್ರೆಯ ಬಗ್ಗೆ ಚಿಂತೆ. ಇದಕ್ಕೆ ಔಷದಕ್ಕಾಗಿ ಅವರು ಅಲೆಯದ ಡಾಕ್ಟರುಗಳ ಕ್ಲಿನಿಕ್ಕುಗಳಿರಲಿಲ್ಲ. ಮತ್ಯಾರೋ ಒಬ್ಬ ಡಾಕ್ಟರ್ ಹಗಲು ಆಕ್ಟಿವ್ ಆಗಿರಿ ನಿದ್ದೆ ಬಾರದಂತೆ ನೋಡಿಕೊಳ್ಳಿ  ಎಂದು ಹೇಳಿದ್ದು ಇವರಿಗೆ ಪಥ್ಯವಾಗದೇ ಡಾಕ್ಟರುಗಳ ಸಹವಾಸ ಬೇಡವೆಂದು ಪಂಡಿತರಲ್ಲಿಂದ ತಲೆಗೆ ಹಾಕಲು ಬಗೆ ಬಗೆಯ ನಿದ್ರೆಯ ಎಣ್ಣೆಗಳನ್ನು ತಂದಿಟ್ಟಿದ್ದರು. ಇದಾದ ಕೂಡಲೇ ತಮಗಿರುವ ಮೈ ಕೈ ನೋವುಗಳು, ಆಗಾಗ ಕಾಡುವ ಶೀತ ಜ್ವರಾದಿ ಉಪದ್ರಗಳು ಇವುಗಳ ಬಗೆಗೆ ಮಾತು ಮುಂದುವರಿಯುತ್ತಿತ್ತು. ಪತ್ರಿಕೆಯಲ್ಲಿ ಬರುವ  ಆರೋಗ್ಯವಾಣಿಗಳೆಂಬ  ಲೇಖನಮಾಲೆಯಿಂದಾಗಿ ಕಾಯಿಲೆಯ ಕುಲ ಗೋತ್ರಗಳನ್ನು ತಿಳಿದುಕೊಂಡು ಅವುಗಳನ್ನು ತಮ್ಮ ಮೆಲೆ ಆರೋಪಿಸಿಕೊಂಡು ಸ್ವಯಂ ವೈದ್ಯವನ್ನು ಮಾಡಿ ತೊಂದರೆ ಗೀಡಾಗುತ್ತಿದ್ದುದೂ ಇತ್ತು. ಇವರನ್ನು ಕಟ್ಟಿಕೊಂಡಾಗಿನಿಂದ ಈ ತರದ ಹುಚ್ಚಾಟಗಳನ್ನು ನೋಡಿ, ಅನುಭವಿಸಿದ ದೊಡ್ಡಮ್ಮ ಈಗೀಗ ಅವರ ಯಾವ ಮಾತಿಗೂ ಸೊಪ್ಪು ಹಾಕುತ್ತಿರಲಿಲ್ಲ. ಇದರಿಂದಾಗಿ ದೊಡ್ಡಪ್ಪ ತಮ್ಮ ಕಾಯಿಲೆಯ ಕಷ್ಟ ಸುಖಗಳನ್ನು ಫೋನಿನ ಮೂಲಕವೇ ದೊಡ್ಡದಾಗಿ ಹೇಳಿ ಮನೆಯವರೂ ತಿಳಿದುಕೊಳ್ಳುವಂತೆ ಮಾಡುತ್ತಿದ್ದರು.

 ಮೊದಲೆಲ್ಲಾ ಸೊಸೆಯಂದಿರ ಮನೆಯಿಂದ ಬರುವ ಫೋನುಗಳನ್ನೂ ಇವರೇ ಮಾತನಾಡಿ ಅತ್ತಿಗೆ೦ii  ತವರಿನವರಿಗೆ ತಮ್ಮ ಮಗಳ ಸ್ವರ ಕೇಳುವ ಅವಕಾಶವೇ ಇಲ್ಲದಂತೆ ಮಾಡಿಬಿಡುತ್ತಿದ್ದರು. ಈಗ ಎಲ್ಲರ ಬಳಿಯೂ ಮೊಬೈಲ್ ಇದ್ದ ಕಾರಣ ಆ ಚಿಂತೆ ತಪ್ಪಿತ್ತು. ಈಗಂತೂ ಲ್ಯಾಂಡ್  ಫೋನಿನ ಕರೆ   ಅವರಿಗೆ ಮಾತ್ರ ಬರುತ್ತಿತ್ತು. ಅದೂ ಅವರಂತದ್ದೇ ಚಿಂತೆ ಹೊತ್ತ ಅವರ ಸರೀಕ ವಯಸ್ಸಿನ ಗೆಳೆಯರದ್ದು.. ಹೀಗಾಗಿ ಅವರಿಗೆ ಮನೆ ಮಂದಿಯೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚು ಫೋನಿನ ಸಂಭಾಷಣೆಯೇ ಪ್ರಿಯವಾಗಿತ್ತು ಎಂದರೂ ತಪ್ಪಲ್ಲ. 

ಆದರೆ ಏನೇ ಕಾಯಿಲೆಯಿದ್ದರೂ ತಟ್ಟೆಯ ಮುಂದೆ ಪದ್ಮಾಸನ ಹಾಕಿ ಕುಳಿತು ಸುರಿದು ಉಂಡು ಏಳುವಾಗ ದೊಡ್ಡಪ್ಪನ ಕಾಯಿಲೆ ಹೇಳ ಹೆಸರಿಲ್ಲದೆ ಮಾಯವಾಗುತ್ತಿತ್ತು.

ಆದರೆ ಈ ಸಲದ ಕಾಯಿಲೆ ಯಾಕೋ ಎಲ್ಲರಿಗೂ ಕೊಂಚ ಗಂಭೀರವೆನಿಸಿತ್ತು. ಈಗೊಂದು ವಾರದಿಂದ ಮಳೆಯ ವಾತಾವರಣ ಬೇರೆ. ಅದರಲ್ಲೂ ಮೊನ್ನೆ ಕತ್ತಿ ಹಿಡಿದು ಹೂವಿನ ತೋಟದಿಂದ ಬರುತ್ತಿದ್ದ ದೊಡ್ಡಪ್ಪನನ್ನು ಅತ್ತಿಗೆ ನೋಡಿದ್ದಳು. ಮರುದಿನದಿಂದ ತಮ್ಮ ಸಿಂಹಾಸನವೇರಿದ ದೊಡ್ಡಪ್ಪ ನಲ್ಲಿ ಹುರುಪು ಮಾಯವಾಗಿತ್ತು.  ಮ್ಲಾನವದನರಾಗಿದ್ದರು. ಮೊಮ್ಮಕ್ಕಳ ಹತ್ತಿರವೂ ಮಾತು ಕಡಿಮೆಯಾಗಿತ್ತು.ಒಂದೆರಡು ದಿನ ಇದು ಯಾರ ಗಮನಕ್ಕೆ ಬಾರದಿದ್ದರೂ ದೊಡ್ಡಮ್ಮನಿಗೆ ಏನೋ ಎಡವಟ್ಟಾಗಿದೆ ಎಂದು ಗೊತ್ತಾಗಿತ್ತು.  ಕೇಳಿದರೆ ಹೇಳುವ ಅಸಾಮಿಯಲ್ಲದ ಕಾರಣ ದೊಡ್ಡಮ್ಮ ಯಾರಾದರೂ ಫೋನ್ ಮಾಡಿದಾಗ ಹೇಳುತ್ತಾರೆ ಎಂದು ಕಾದು ಕುಳಿತಿದ್ದರು. ಒಂದೆರಡು ಸಲ ಫೋನ್ ಕೈಯಲ್ಲಿ ಹಿಡಿದಿದ್ದ ದೊಡ್ಡಪ್ಪನನ್ನು ಕಂಡಿದ್ದರೂ ಅವರ ಮಾತುಗಳನ್ನು ಕೇಳಿರಲಿಲ್ಲ.ಮನೆಯವರೊಂದಿಗೆ ಹೆಚ್ಚು ಮಾತನಾಡುವುದು ತಮ್ಮ ಘನಸ್ತಿಕೆಗೆ ಕಮ್ಮಿ ಎಂದುಕೊಂಡಿದ್ದ ದೊಡ್ಡಪ್ಪ ಅವರೊಂದಿಗೆ ಏನನ್ನೂ ಹಂಚಿಕೊಳ್ಳುತ್ತಿರಲಿಲ್ಲ.

ಹಾಗಾಗಿ ಅವರಿಗೆ ಆತ್ಮೀಯಳಾದ ನನಗೆ ಬುಲಾವ್ ಬಂದಿದ್ದು. ನನ್ನನ್ನು ಕಂಡೊಡನೆ ಅಲ್ಲಿಯವರೆಗೆ ಸೇವೆಯಲ್ಲಿ ತೊಡಗಿದ್ದ ಮೊಮ್ಮಕ್ಕಳು ಇನ್ನೇನಿದ್ದರೂ ನೀವುಂಟು ಅಜ್ಜ ಉಂಟು ಅನ್ನುವಂತೆ ಮಾಯವಾಗಿದ್ದರು. ದೊಡ್ಡಪ್ಪನ ಸುತ್ತ ಪತ್ರಿಕೆಗಳ ಆರೋಗ್ಯದ ಬಗೆಗಿನ ಲೇಖನಗಳು ಕುಳಿತಿದ್ದವು. ಅದರಲ್ಲಿ ಸಾಮಾನ್ಯ ಜ್ವರದಿಂದ ಹಿಡಿದು ಅಸಾಮಾನ್ಯ ಮೆದುಳು ಜ್ವರದವರೆಗಿನ ಬಗೆಗಳಿತ್ತು. ನನಗಂತೂ ಬಿ ಪಿ, ಶುಗರ್ ಯಾವುದೂ ಇಲ್ಲದೆ ಆರೋಗ್ಯದಿಂದ ಕಳೆ ಕಳೆಯಾಗಿ ಕಾಣುತ್ತಿರುವ ದೊಡ್ಡಪ್ಪನಿಗೆ ಈಗ ಹತ್ತಿದ ರೋಗವ್ಯಾವುದೆಂದು ತಿಳಿದುಕೊಳ್ಳಬೇಕಾದರೆ ಶೆರ್ಲಾಕ್ ಹೋಮಿನಂತೆ ಪತ್ತೇದಾರಿ ಕೆಲಸ ಮಾಡಬೇಕಾಯಿತು. ಕೊನೆಗೆ ಅವರ ಕಣ್ಣ ನೇರಕ್ಕಿರುವ ಆರ್ಟಿಕಲ್ಲಿನಲ್ಲಿ ಬರೆದಿರುವ ಕೀಲುನೋವಿಗೂ,  ದೊಡ್ಡಪ್ಪನ  ಕೆಳಗೂ ಮೇಲೂ ಸರಿಯುತ್ತಿರುವ ಕೈಗೂ  ಕೊಂಡಿ ಸಿಕ್ಕಿ ದೊಡ್ಡಪ್ಪನಿಗೆ ಕೈ ನೋವು ಎಂದು ನಿಶ್ಚಯಿಸಿದೆ. 

ಸ್ವಲ್ಪ ಹೊತ್ತು ಅವರೆದುರು ಕುಳಿತ ನನ್ನ ಕಡೆಗೂ ಕಣ್ಣೆತ್ತದೆ ತಮ್ಮ ಕೈಯ ಕಡೆಗೆ  ನೋಡುತ್ತಿದ್ದ ದೊಡ್ಡಪ್ಪ ಹೆಚ್ಚು ಹೊತ್ತು ಹಾಗೆ ಕೂಡಲಾಗದೇ ನನ್ನತ್ತ ನೋಟ ಬೀರಿದರು. ಅದನ್ನೇ ಕಾಯುತ್ತಿದ್ದ ನಾನು ’ದೊಡ್ಡಪ್ಪಾ ಏನು ಕೈ ನೋವು ಜೋರಿದೆಯಾ’ ಎಂದೆ. 

’ಹುಂ.. ಕಣಮ್ಮಾ.. ಏನು ನೋವೋ ಗೊತ್ತಾಗ್ತಿಲ್ಲ.. ಮಾತ್ರೆ ಮದ್ದು ಇಂಜೆಕ್ಷನ್ ಎಲ್ಲಾ ಆಯ್ತು. ಎಕ್ಸರೇ ಸ್ಕ್ಯಾನಿಂಗ್ ಕೂಡಾ ಮುಗೀತು.. ಈಗಿನ ಡಾಕ್ಟ್ರಿಗೆ ಏನು ಗೊತ್ತು ಹೇಳು.. ಎಲ್ಲಾ ಸರಿಯಾಗಿದೆ ಅಂತಾರೆ.. ಆದರೆ ನನಗೆ ಮಾತ್ರ ನೋವು ಗುಣ ಆಗ್ತಾ ಇಲ್ಲ’ ಎಂದರು. 
ನಾನೂ ಕೂಡ ಒಂದು ಕೈ ನೋಡಿಬಿಡೋಣ ಎಂದುಕೊಂಡೆ. 
’ದೊಡ್ಡಪ್ಪಾ ಕೈ ನೋವು ಇಡೀ ದಿನ ಇರುತ್ತಾ..’ 
’ಇಲ್ಲಮ್ಮಾ..’
’ಸಿಡಿಯುತ್ತಾ ಇರುತ್ತಾ..’
’ಉಹೂಂ .. ಇಲ್ಲಮ್ಮ.. ಆದರೂ ನೋವು..’ 
’ಏನಾದ್ರು ತೂಕದ್ದು ಎತ್ತಿ ಕೆಲ್ಸ ಮಾಡಿದ್ದೀರಾ..’ 
’ಹುಂ.. ಮೊನ್ನೆ  ಕತ್ತಿ ತೆಗೆದುಕೊಂಡು ಹೋಗಿ ನನ್ನ ರೂಮಿನ ಹಿಂದೆ ಇದ್ದ ಕಮ್ಯೂನಿಷ್ಟ್ ಗಿಡಗಳನ್ನು ಕಡಿದೆ..’ 
’ಅದೇ ದಿನದಿಂದ ನೋವಿದೆಯಾ ದೊಡ್ಡಪ್ಪಾ..’
’ಆ ದಿನ ಅಂತಲ್ಲ.. ಆದ್ರೆ ಮರುದಿನದಿಂದ ಯಾಕೋ ನೋವು ಶುರು ಆದಂತಾಯಿತು…ಕೈ ಎತ್ತಲಿಕ್ಕೇ ಕಷ್ಟ ಅನ್ನಿಸ್ತಿದೆ..’
ಹೌದಾ ದೊಡ್ಡಪ್ಪ.. ಗಿಡ ಕಡೀವಾಗ ಕೈಗೇನಾದರೂ ಅಕಸ್ಮಾತಾಗಿ ತಗಲಿತಾ? 
’ಇಲ್ಲಮ್ಮ..ಅಂತದ್ದೇನೂ ಆದ ಹಾಗೆ ನೆನಪಿಗೆ ಬರ್ತಾ ಇಲ್ಲ’ ಅಂದರು ದೊಡ್ಡಪ್ಪ.
 ’ಸರಿ .. ನಿಲ್ಲಿ ದೊಡ್ಡಪ್ಪಾ ಒಮ್ಮೆ ಅಲ್ಲೇನಾದರೂ ಸುಳಿವು ಸಿಗುತ್ತಾ ಅಂತ ನೋಡಿ ಬರ್ತೀನಿ’ ಎಂದು ಹೊರಟೆ. 
ಇವರು ಕತ್ತಿಯಲ್ಲಿ ಕಡಿದೆನೆಂದು ಹೇಳಿದ ಗೆಲ್ಲುಗಳು  ಉಗುರಿನಲ್ಲಿ ಚಿವುಟಿದ್ದರೂ ಮುರಿಯುವಂತಿದ್ದ ಎಳಸು.. ಬಿದ್ದಲ್ಲಿಗೇ ಬಾಡಿ ಕೊಳೆಯಲು ತೊಡಗಿದ್ದವು. 
 ಆದರೆ ಅಲ್ಲೇ ಹತ್ತಿರದಲ್ಲಿ..
 ಓಹ್.. ದೊಡ್ಡಪ್ಪನ ನೋವಿಗೆ  ಕಾರಣ ತಿಳಿಯಿತು..
 ಪರಿಹಾರವೂ ಸಿಕ್ಕಿತ್ತು..

ಸ್ವಲ್ಪ ಹೊತ್ತಿನಲ್ಲೇ ಮನೆಯ ಲ್ಯಾಂಡ್ ಫೋನ್ ರಿಂಗಣಿಸಿತು. ದೊಡ್ಡಪ್ಪ ತಮಗೆ  ನೋವಿತ್ತು ಎಂಬುದನ್ನೆ ಮರೆತವರಂತೆ ಅಷ್ಟು ಹೊತ್ತು ಕೆಳಗೇ ಬಿಟ್ಟಿದ್ದ ಕೈಯಲ್ಲಿ ರಿಸೀವರ್ ಎತ್ತಿದರು. ಎಂದಿನಂತೆ.. ’ಹೇಗೋ.. ಅಂತು ಇದ್ದೇನೆ ಅತ್ಲಾಗಿ..’ಎನ್ನುವ ಡೈಲಾಗಿನಿಂದ ಶುರು ಆದ ಮಾತು ಮುಗಿಯುವ ಲಕ್ಷಣ ಕಾಣಿಸಲೇ ಇಲ್ಲ..

 ಇತ್ತ ಅಣ್ಣ ಅತ್ತಿಗೆಯರು ಒಳಗೆ ನನ್ನ ಬಳಿ ’ಅಯ್ಯೋ.. ಲ್ಯಾಂಡ್ ಲೈನ್ ವೈರ್ ಕಟ್ ಆಗಿ ಡೆಡ್ ಆಗಿತ್ತಾ..ಅವರೂ ಹೇಳ್ಳಿಲ್ಲ ನಾವು ಅದನ್ನು ಯೂಸ್ ಮಾಡೋದೇ ಇಲ್ಲ ನೋಡು ಹಾಗಾಗಿ  ನಮಗದು ಗೊತ್ತೇ ಆಗಿಲ್ಲ.. ಅವರ ನೋವನ್ನು ನಲಿವನ್ನು ಹೊರ ಹಾಕಲು ಇರುವ ಒಂದೇ ಸಾಧನ ಈ ಲ್ಯಾಂಡ್ ಫೋನ್.. ಅದು ಸರಿಯಾಗುತ್ತಿದ್ದಂತೇ ಅವರೂ ಸರಿಯಾದರು’ ನನ್ನ ಕಡೆಗೆ ಮೆಚ್ಚುಗೆ ನೋಟ ಬೀರುತ್ತಿದ್ದರೆ, ನಾನು ಅಡುಗೆ ಮನೆಗೆ ನುಗ್ಗಿ ’ದೊಡ್ಡಮ್ಮಾ.. ದೊಡ್ಡಪ್ಪನ ಕೈ ನೋವು ಮಾಯ ಆಯ್ತು.. ಫೀಸ್ ಕೊಡು ಬೇಗ .. ಮಾವಿನ ಹಣ್ಣಿನ ರಸಾಯನ, ಹಲಸಿನ ಕಾಯಿ ದೋಸೆ’ ಎಂದು ಮಣೆ ಎಳೆದು ಪಟ್ಟಾಗಿ ಕೂತುಬಿಟ್ಟೆ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ

  1. dainandina jeevanavanna sookshmavaagi avalokisi naviraagi nage chimmisuvante niroopisuva nimma barahada shyly chenda..

  2. ಹವ್ಯಕರ ಮನೆಯ ವರ್ಣ ನೆ ಚೆನ್ನಾಗಿದೆ.. ನಾವೂ  ಆ ಕುಟುಂಬ ದೊಳಗಿದ್ದ ಅನುಭವ  ವಾಗುತ್ತದಲ್ಲಾ

  3. ಹಹಹ ಸೂಪರ್ ಅನಿತಕ್ಕಾ,
    ದೊಡ್ಡಪ್ಪನಿಗೆ ನೀವು ಅಲ್ಲಿರುವುದೇ ಒಂದು ಖುಷಿ, ಮತ್ತೆ ಟೆಲಿಪೋನ್ ಬೇರೆ ಸರಿಹೋಯ್ತು. ನಿಮ್ಮಿಂದ ಆರೋಗ್ಯವೇ ಸರಿಹೋಯ್ತು. 
    ನೀವು ಒಂದು ರೀತಿ ನಗೆಯ ಡಾಕ್ಟರ್ 

  4. ಹೆ ಹೆ.. ಯಾವ ನೋವಿಗೆ ಯಾವ ಮದ್ದೋ ! 🙂 ಕೊನೆಯವರೆಗೂ ಕುತೂಹಲ ಉಳಿಸಿಕೊಂಡೇ ಸಾಗಿದ್ದ ಕತೆಯ ಕೊನೆ ಮಾತ್ರ ಕಲ್ಪನೆಗೆ ಸಿಲುಕದ್ದು 🙂 ಸೂಪರ್..

    1. ಧನ್ಯವಾದಗಳು.. 'ದ' ಕ್ಕೆ ಒಂದು ಬಾಲ ಹೆಚ್ಚಾಗಿದ್ದು ನನಗೆ ನಿಮ್ಮೆಲ್ಲರ ಮೆಚ್ಚುಗೆ ನೋಡಿ ಕೊಂಬು ಬಂದಿದ್ದಕ್ಕೇನೋ 🙂 

Leave a Reply

Your email address will not be published. Required fields are marked *