ಕಥಾಲೋಕ

ನೈಸ್ ರೋಡ್ ಮತ್ತು ಹೈವೇ ಕಳ್ಳರು: ವೀರ್ ಸಂತೋಷ್


ಸುಮಾರು ವರ್ಷಗಳ ಹಿಂದಿನ ಮಾತು. ಹೈವೇಗಳೆಂದರೆ ಏನೋ ಕುತೂಹಲ. ರೈಲೆಂದರೂ ಅಷ್ಟೇ. ಹೊಳೆನರಸೀಪುರದಿಂದ ಮೈಸೂರಿಗೆ ಬಸ್ಸಿನಲ್ಲಿ ಬರುವಾಗ ಮಾರ್ಗ ಮಧ್ಯೆ ಹಳ್ಳಿಯೊಂದರಲ್ಲಿ SH88 ಎಂದು ದಪ್ಪಕ್ಷರಗಳಲ್ಲಿ ಬರೆದಿದ್ದ ಮೈಲಿಗಲ್ಲೊಂದನ್ನು ನೋಡಿ ಪುಳಕಗೊಂಡಿದ್ದೆ. ಮತ್ತೊಮ್ಮೆ ಹಾಸನದಿಂದ ಧರ್ಮಸ್ಥಳಕ್ಕೆ ಹೋಗುವಾಗ ಸಕಲೇಶಪುರದ ಬಾಳ್ಳುಪೇಟೆ ಬಳಿ NH48 ಎಂಬ ಬೋರ್ಡೊಂದನ್ನು ನೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಸಂಭ್ರಮಾಚರಣೆ ಮಾಡಿದ್ದೆ. 

ಮಾನವನ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ ಅಗಣಿತ ಹರಿಕಾರರಲ್ಲಿ ಹೆದ್ದಾರಿಗಳ ಪಾತ್ರ ದೊಡ್ಡದು. ವಿಮಾನ, ಕಾರು ಜನಸಾಮಾನ್ಯರ ಮನಸ್ಸಿಗೆ ಮತ್ತು ಜೇಬಿಗೆ ಹತ್ತಿರವಾಗುವವರೆಗೆ ಬಸ್ಸುಗಳದ್ದೇ ಕಾರುಬಾರು. ರೈಲು ಬಂದ ನಂತರ ತಕ್ಕಮಟ್ಟಿಗೆ ಬಸ್ಸುಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಬಸ್ಸುಗಳಿಗೆ ಬಸ್ಸೇ ಸಾಟಿ. ಹೆದ್ದಾರಿಗಳಲ್ಲಿ ಬಸ್ಸಲ್ಲದೇ ಲಾರಿ ಟೆಂಪೋ ಟಿಪ್ಪರ್ ಇತ್ಯಾದಿಗಳು ಇತ್ತೀಚಿಗೆ ಹೆಚ್ಚಾಗಿವೆ. ಇಂತಹದ್ದೇ ಒಂದು ಹೆದ್ದಾರಿಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ಕತೆ ಬರೆಯಬೇಕೆಂಬುದು ಬಹಳ ದಿನಗಳ ತುಮುಲಕ್ಕೆ ಪೂರಕವೆಂಬಂತೆ ಈಗ್ಗೆ ಸುಮಾರು ಆರು ತಿಂಗಳ ಹಿಂದೆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿದೆ. ಸತ್ಯಕ್ಕೆ ಹತ್ತಿರವಾದಂತೆ ಕಂಡರೂ ಕೆಲ ಕಾಲ್ಪನಿಕ ಅಂಶಗಳೊಡನೆ ನಿಮ್ಮ ಮುಂದಿಡುತ್ತಿದ್ದೇನೆ. ಸಮರ್ಪಿಸಿಕೊಳ್ಳಿ.

ಸಂಜೆ ಐದು ಘಂಟೆಯಾಗಿತ್ತು. ಫೋನನ್ನೇ ದಿಟ್ಟಿಸಿ ನೋಡುತ್ತ ಕುಳಿತ್ತಿದ್ದೆ. ಹತ್ತು ನಿಮಿಷಗಳುರುಳಿದರೂ ನಾನೆಣಿಸಿದ ಕರೆ ಬರಲಿಲ್ಲ. ನೋಡುನೋಡುತ್ತಿದ್ದಂತೆಯೇ ಸಮಯ ಐದೂವರೆಯಾಗಿ ಹೋಗಿತ್ತು. ದಿಗಿಲಾಗಿ ನಮ್ಮ ಆಫೀಸಿಗೆ ಕರೆಮಾಡಿ ನನ್ನನ್ನು ಕರೆದೊಯ್ಯಬೇಕಾಗಿದ್ದ ಕ್ಯಾಬ್ ಇನ್ನೂ ಬಂದಿಲ್ಲವೆಂದು ತಿಳಿಸಿದೆ. ಆ ಕಡೆಯಿಂದ ಹತ್ತು ನಿಮಿಷದಲ್ಲಿ ಬರುತ್ತದೆಂದು ಆಶ್ವಾಸನೆ ಸಿಕ್ಕ ಮೇಲೆ ನಿರುಮ್ಮಳನಾದೆ.
ಕಾಲೇಜಿನ ದಿನಗಳನ್ನು ಮೆಲುಕು ಹಾಕುತ್ತಾ ನಡುನಡುವೆ ಇನ್ನೂ ಬಾರದ ಕ್ಯಾಬನ್ನು ಶಪಿಸುತ್ತ ಕುಳಿತ್ತಿದ್ದೆ. ಕಷ್ಟಪಟ್ಟು ಸ್ನಾನ ಮಾಡಿ ಅಚ್ಚುಕಟ್ಟಾಗಿ ರೆಡಿಯಾಗಿ ಒಂದು ಗಂಟೆಯಿಂದ ಬೆದರುಗೊಂಬೆಯಂತೆ ಕುಳಿತ್ತಿದ್ದ ನನ್ನನ್ನು ನೋಡಿ ನನ್ನ ರೂಮ್ ಮೇಟ್ ಶೇಖರ್ ಕೇಳಿದ ನುವ್ವು ಈ ರೋಜು ಜಾಬ್ ಕಿ ಪೋಲೇದಾ? (ನೀನಿವತ್ತು ಕೆಲಸಕ್ಕೆ ಹೋಗಲ್ವಾ?). ನನ್ನ ಬಳಿ ಉತ್ತರವಿರಲಿಲ್ಲ. ಹಾಗೆ ನಕ್ಕು ಸುಮ್ಮನಾದೆ.
ಶೇಖರ್ ಬೆಂಗಳೂರಿಗೆ ಬಂದು ಆರು ವರ್ಷವಾದರೂ ಕನ್ನಡ ಕಲಿತಿರಲಿಲ್ಲ. ಅದರ ಅವಶ್ಯಕತೆಯಿಲ್ಲವೆಂಬುದು ಅವನ ವಾದವಾಗಿತ್ತು. ಅದರಲ್ಲಿ ಸತ್ಯವೂ ಇತ್ತು. ಯಾಕೆಂದರೆ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರೇ ಅಲ್ಪಸಂಖ್ಯಾತರು. ಬಂದ ಆರು ತಿಂಗಳಿನಲ್ಲೇ ಅಲ್ಪ ಸ್ವಲ್ಪ ತೆಲುಗು ಕಲಿತಿದ್ದೆ. ಬೆಂಗಳೂರಿನ ಮಹಿಮೆಯೇ ಅಂತಹದ್ದು. ಬಸ್ಸಿನಲ್ಲಿ ಕಂಡಕ್ಟರ್ ಕೂಡ ತಮಿಳು ಇಲ್ಲ ತೆಲುಗಿನಲ್ಲೇ ಟಿಕೆಟ್ ತಗೊಳಿ ಅನ್ನುತ್ತಾನೆ. ಇಂತಹವರ ನಡುವೆ ನನ್ನ ಕನ್ನಡ ಪ್ರೀತಿ ನನಗಷ್ಟೇ ಸೀಮಿತವೆಂದರಿತು ನಿಟ್ಟುಸಿರು ಬಿಟ್ಟೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನೆಂಬ ನನ್ನ ನಂಬಿಕೆ ಇಂದು ಜೀವಂತವಾಗಿಲ್ಲ.
ಇಂತಹದ್ದೊಂದು ಯೋಚನ ಲಹರಿಯಲ್ಲಿದ್ದಾಗಲೇ ಅವನ ಕರೆ ಬಂತು. ಒಂದೇ ಉಸಿರಿನಲ್ಲಿ ಇದೇನು ಸಾರ್ ಐದು ಗಂಟೆಗೆ ಬರಬೇಕಾದವರು ಈಗ ಬಂದಿದೀರ ಎಂದೆನ್ನುತ ಕೆಳಗಿಳಿದು ಬಂದು ಕ್ಯಾಬ್ ಹತ್ತಿ ಕುಳಿತೆ. ಸಾರಿ ಸರ್. ಆದು ದೊಮ್ಮಲೂರು ಫ್ಲೈಓವರ್ ಹತ್ತಿರ ಜಾಮ್ ಆಗಿಬಿಟ್ಟಿತ್ತು ಎಂದವನೇ ಸರ್ರನೇ ಗಾಡಿ ತಿರುಗಿಸಿದ.

ಗಾಡಿ ಈಗ ಕುಂದಲಹಳ್ಳಿ ಸಿಗ್ನಲ್ ಬಳಿ ನಿಂತಿತ್ತು. ಅವನೇ ಮಾತಿಗೆಳೆದ. ಏನ್ ಓದಿದೀರ ಸಾರ್. ಯಾವೂರು ತೆಲುಗಿನಲ್ಲಿ ಕೇಳಿದ. ನಾನವನಿಗೆ ನನಗೆ ಕನ್ನಡ ಬರುತ್ತೆ ಕನ್ನಡದಲ್ಲೇ ಕೇಳಿ ಎಂದೆ. ಮುಂದಿನ ಇಪ್ಪತ್ತು ನಿಮಿಷ ಪರಸ್ಪರ ಪರಿಚಯ ಮಾಡಿಕೊಂಡೆವು. ಅವನ ಹೆಸರು ನಾಗೇಶ. ಊರು ನೆಲಮಂಗಲ. ಓದಿದ್ದು ಹತ್ತನೇ ಕ್ಲಾಸು. ನಂತರ ಯಾವದೋ ಸಣ್ಣ ವಿಷಯಕ್ಕೆ ಜಗಳವಾಗಿ ತಂದೆಯ ಕೊಲೆಯಾಗಿ ಹೋದ ಮೇಲೆ ಮನೆ ಜವಬ್ದಾರಿ ಹೆಚ್ಚಾದ ಮೇಲೆ ಓದಿಗೆ ತಿಲಾಂಜಲಿ ನೀಡಿ ದೊಡ್ಡಪ್ಪನ ಟ್ರಾವೆಲ್ಸ್ ನಲ್ಲಿ ಕಂಪನಿಗಳಿಗೆ ಕ್ಯಾಬ್ ಓಡಿಸುವ ಕೆಲಸ ಹಿಡಿದ. ಸುಮಾರು ಮೂರು ವರ್ಷ ಕ್ಯಾಬ್ ಓಡಿಸಿ ಬಂದ ಸಂಪಾದನೆಯಲ್ಲಿ ತಂಗಿ ಮದುವೆ ಮಾಡಿದ್ದಾನೆ. ಹೋದ ತಿಂಗಳು ಅವಳಿಗೊಂದು ಮಗುವಾಯಿತಂತೆ. ಖುಷಿಯಲ್ಲಿ ತಂಗಿಯನ್ನು ನೋಡಲು ಯಾರಿಗೂ ಹೇಳದೇ ಊರಿಗೆ ಹೋಗಿದ್ದ. ವಾಪಸ್ಸು ಬರುವಷ್ಟರಲ್ಲಿ ತಂದೆಯ ಕೊಲೆ ಮಾಡಿದವರೇ ದೊಡಪ್ಪನನ್ನು ಕೊಲೆ ಮಾಡಿದ್ದರು. ದುಃಖದಿಂದ ಅಂತ್ಯಸಂಸ್ಕಾರಕ್ಕೆ ಬಂದವನಿಗೆ ದೊಡ್ಡಪ್ಪನ ಮಗ ವಾಗೀಶ ವಿನಾಕಾರಣ ಬೈಯ್ದು ಗಾಡಿಯನ್ನು ವಾಪಸ್ಸು ಪಡೆದುಕೊಂಡನಂತೆ. ಎಷ್ಟೇ ಕಾಡಿಬೇಡಿದರೂ ದೊಡ್ಡಪ್ಪನನ್ನು ನೋಡಲು ಸಹ ಬಿಟ್ಟಿರಲಿಲ್ಲ.

ಒಂದು ತಿಂಗಳು ಕೆಲಸವಿಲ್ಲದೇ ನೆಲಮಂಗಲದ ಮನೆಗೆ ಹೋಗಿ ಅಡ್ಡಾಡಿಕೊಂಡಿದ್ದ. ಹೀಗೆ ಬಿಟ್ಟರೆ ಇವನು ಉದ್ಧಾರವಾಗುವುದಿಲ್ಲವೆಂದುಕೊಂಡ ತಂಗಿ ಅವಳ ಗಂಡನಿಗೆ ಹೇಳಿ ಒಂದು ಟಾಟಾ ಸುಮೋ ಕೊಡಿಸಿ ಮತ್ತೆ ಕೆಲಸಕ್ಕೆ ಸೇರಿಸಿದಳು. ಅಪ್ಪ ದೊಡ್ಡಪ್ಪ ಚಿಕ್ಕಪ್ಪಂದಿರೆಲ್ಲ ಮೊದಲು ಒಳ್ಳೆಯವರೇ ಆಗಿದ್ದರಂತೆ. ಆದರೆ ಯಾವಾಗ ಸರ್ಕಾರ ಇವರ ಜಮೀನುಗಳನ್ನೆಲ್ಲ ಹೈವೇ ಮಾಡಲು ವಶಪಡಿಸಿಕೊಳ್ಳಲು ಶುರುಮಾಡಿತೋ ಆಗ ಊರವರ ಜೊತೆ ಸೇರಿ ಕ್ರಾಂತಿ ಮಾಡಲು ಮಚ್ಚು ಲಾಂಗು ಹಿಡಿದರಂತೆ. ನೋಡು ನೋಡುತ್ತಿದ್ದಂತೆ ಊರಿಗೆ ಊರೇ ಸ್ಮಶಾನವಾಗಿಹೋಯಿತು. ಮಕ್ಕಳೆಲ್ಲ ಸ್ಲೇಟು ಬಳಪ ಬಿಟ್ಟು ಅಡ್ಡದಾರಿ ಹಿಡಿದರು. ಆದರೆ ಇವನು ಹಾಗಾಗಿರಲಿಲ್ಲ. ಮನೆಯ ಜವಾಬ್ದಾರಿ ಇವನನ್ನು ತಕ್ಕಮಟ್ಟಿಗೆ ಈ ತರಹದ ವಿಷಯಗಳಿಂದ ದೂರವಿಟ್ಟಿತ್ತು. 

ಇಷ್ಟು ಸಾಕೆನಿಸಿ ಮಾತು ನಿಲ್ಲಿಸಿದ. ಗ್ರಾಫೈಟ್ ಇಂಡಿಯಾ ಸಿಗ್ನಲ್ ನಲ್ಲಿ ಗಾಡಿ ನಿಂತಿತ್ತು. ಮೂರು ನಿಮಿಷದ ಸಿಗ್ನಲ್. ನಿಮ್ಮ ಮದುವೆ ಯಾವಾಗ ಸಾರ್ ಸಿಗರೇಟು ಹಚ್ಚುತ್ತಾ ನನ್ನನ್ನು ಕೇಳಿದ. ಈಗಷ್ಟೇ ಓದಿಯಾಗಿದೆ. ಇನ್ನೂ ನಾಲ್ಕೈದು ವರ್ಷ ಇಲ್ಲಾ. ನಿಮ್ಮದು ಯಾವಾಗ ಎಂದೆ. ನಮ್ಮನ್ನೆಲ್ಲಾ ಯಾರು ಮದುವೆಯಾಗುತ್ತಾರೆ ಸಾರ್. ಎಲ್ಲರಿಗೂ ಇಂಜಿನೀಯರ್ ಡಾಕ್ಟರ್ ಬೇಕು. ಹಣ ಇದ್ದರೆ ಎಂತಹವನಿಗಾದರೂ ಹೆಣ್ಣು ಕೊಡ್ತಾರೆ ಎಂದು ವಿಷಾದದಲ್ಲಿ ಹೇಳಿದ. ಹೀಗೆ ವಾದ ಮಾಡುತ್ತಿರುವಾಗ ಅವನ ಫೋನ್ ರಿಂಗಣಿಸಲಾರಂಬಿಸಿತು. ಭಾನುವಾರ ಬೇಡ. ಸೋಮವಾರ ಬೆಳಿಗ್ಗೆ ಎಂಪ್ಲಾಯ್ ಪಿಕಪ್ ಇದೆ. ಶನಿವಾರ ರಾತ್ರಿ ಹೋಗಿ ಒಂದ್ ಮೂರು ಗಂಟೆಗೆಲ್ಲಾ ವಾಪಸ್ಸು ಬಂದು ಬಿಡೋಣ. ಲೇಟಾದ್ರೆ ಈ ಪೊಲೀಸ್ ನನ್ಮಕ್ಳು ಕಾಟ ಹೀಗೇ ಏನೇನೋ ಹೇಳುವಷ್ಟರಲ್ಲಿ ಸಿಗ್ನಲ್ ಬಿಟ್ಟಿತು. ಕರೆ ಸ್ಥಗಿತಗೊಳಿಸಿದ.

ಸಿಗ್ನಲ್ ದಾಟಿದ ಮೇಲೆ ನಾನು ಮುಂದುವರೆಸಿದೆ. ಎಷ್ಟು ಸಿಗತ್ತೆ ಇಲ್ಲಿ. ಕ್ಯಾಬ್ ಬೇರೆ ಸ್ವಂತದ್ದು ಇಲ್ಲಾ ಸಾರ್. ಒಂದು ಮೂವತ್ತು ಸಾವಿರ ಆಗತ್ತೆ. ಅದರಲ್ಲಿ ಲೋನ್ ಕಟ್ಟಬೇಕು. ತಂಗಿ ಮನೆ ಕಟ್ಟಿಸುತ್ತಿದ್ದಾಳೆ ಅವಳಿಗೆ ಕೊಡಬೇಕು. ನಮ್ಮಮ್ಮ ಅದ್ಯಾವುದೋ ಚೀಟಿ ಹಾಕಿದಾರೆ. ಮತ್ತೆ ವೀಕೆಂಡ್ ಬಂದರೆ ಫ್ರೆಂಡ್ಸ್ ಎಲ್ಲಾ ಸೇರಿ ಪಾರ್ಟಿ ಮಾಡ್ತೀವಿ. ಎಷ್ಟು ಬಂದರೂ ಸಾಲೋದೇ ಇಲ್ಲಾ ಅಂದ. ಹತ್ತನೇ ಕ್ಲಾಸ್ ಪಾಸಾದ ಒಬ್ಬ ಕ್ಯಾಬ್ ಡ್ರೈವರ್ ಸಂಬಳ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದವರಿಗಿಂತ ಹೆಚ್ಚು. ನಿಮಗೆಷ್ಟು ಸಾರ್ ಎಂದ. ಕೇಳದವನಂತೆ ಸುಮ್ಮನೆ ಕೂತೆ.

ಕೊನೆಗೂ ಆಫೀಸ್ ತಲುಪಿದಾಗ ಏಳೂವರೆಯಾಗಿತ್ತು. ಇನ್ನೂ ಅರ್ಧ ಗಂಟೆಯಿತ್ತು. ಮತ್ತೇ ಹೇಗೆ ಬೇರೆ ಖರ್ಚೆಲ್ಲ? ಎಂದು ಹೊಸ ಮಾತಿಗೆ ಮುನ್ನುಡಿಯಿಟ್ಟೆ. ಆದಕ್ಕೇನು ಪ್ರಾಬ್ಲಂ ಇಲ್ಲಾ ಸಾರ್. ಓಊ೪೮ ಇದೆ ಎಂದ. ನನಗೇನೂ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಿಗೆ ಮುಂಚೆ ಏನೋ ಶನಿವಾರ ರಾತ್ರಿ, ಪೊಲೀಸು ಅಂತೆಲ್ಲಾ ಯಾರ ಹತ್ತಿರಾನೋ ಹೇಳುತ್ತಿದ್ದರಲ್ಲ ಏನದು? ಎಂದೆ. ಅಲ್ಲಿಗೆ ಬಂದೆ. ಕಾಫಿ ಕುಡಿತೀರಾ? ಎಂದವನೇ ನನ್ನ ಪ್ರತಿಕ್ರಿಯೆಯೆಗೂ ಕಾಯದೆ ಕ್ಯಾಂಟೀನ್ ಕಡೆಗೆ ಹೆಜ್ಜೆ ಹಾಕಿದ. ಕುತೂಹಲದಿಂದ ನಾನವನನ್ನು ಹಿಂಬಾಲಿಸಿದೆ. ಅಲ್ಲೇ ಅವನು ತಿಂಗಳಿಗೆ ತನ್ನ ಸಂಬಳದ ಜೊತೆಗೆ ಐವತ್ತು ಸಾವಿರ ಸಂಪಾದಿಸುವ ಅವನ ಪಾಲಿನ ಮಾಸ್ಟರ್ ಪ್ಲಾನ್ ಹೇಳಲು ಶುರುಮಾಡಿದ. 

ನೆಲಮಂಗಲದಿಂದ ಸ್ವಲ್ಪ ಮುಂದೆ ಹಾಸನಕ್ಕೆ ಹೋಗುವ ರಸ್ತೆಯಲ್ಲಿ ಒಂದು ಚೆಕ್ ಪೋಸ್ಟ್ ಇದೆ. ದಿನಕ್ಕೆ ಹೆಚ್ಚುಕಮ್ಮಿಯೆಂದರೂ ಆರರಿಂದ ಏಳು ನೂರು ಗ್ಯಾಸ್ ಲಾರಿಗಳು ಆ ದಾರಿಯಲ್ಲಿ ಹೋಗುತ್ತವೆ. ಮಣಗಾತ್ರದ ಭಾರಹೊತ್ತು ಏದುಸಿರು ಬಿಡುತ್ತ ಮೆಲ್ಲಗೆ ಸಾಗುತ್ತಿರುತ್ತವೆ. ಕೊನೆಗೊಮ್ಮೆ ಸಾಕೆನಿಸಿ ಮಾರ್ಗಮಧ್ಯೆ ನಿಂತು ಬಿಡುತ್ತವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇವೆಲ್ಲ ಸರ್ವೇ ಸಾಮಾನ್ಯ. ಹಿಂದೊಮ್ಮೆ ನಾಲ್ಕೈದು ಕ್ಲಾಸಿನಲ್ಲಿದ್ದಾಗ ಧರ್ಮಸ್ಥಳಕ್ಕೆ ಹೋಗುವಾಗ ಗುಂಡ್ಯದಿಂದ ಸ್ವಲ್ಪ ಹಿಂದೆ ಸಾಲಾಗಿ ನಿಂತ ಲಾರಿಗಳ ದೃಶ್ಯ ಇನ್ನೂ ಕಣ್ಣಲ್ಲಿ ಜೀವಂತವಾಗಿದೆ. 

ನನಗೆ ಬುದ್ಧಿ ಬಂದ ಮೇಲೆ ಆ ಲಾರಿಗಳ ಚಾಲಕರ ಜೀವನ ಹೇಗಿರಬಹುದು, ಅವರಿಗೂ ಮನೆ ಹೆಂಡತಿ ಮಕ್ಕಳಿರಬಹುದಾ, ಅವರನ್ನೆಲ್ಲ ಬಿಟ್ಟು ಊರಿಂದೂರಿಗೆ ಹೀಗೆ ಕ್ಲೀನರ್ ಗಳ ಜೊತೆ ತಮ್ಮ ಜೀವನದ ಬಹುಪಾಲು ಸಮಯ ಹೇಗೆ ಕಳೆಯುತ್ತಾರೆ, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. ಒಮ್ಮೆ ಯಾವುದೋ ಪತ್ರಿಕೆಯಲ್ಲಿ ಲಾರಿ ಚಾಲಕರಲ್ಲಿ ಹಲವರು ಏಡ್ಸ್ ರೋಗಕ್ಕೆ ತುತ್ತಾಗಿದ್ದಾರೆಂಬ ಸಮೀಕ್ಷೆ ಓದಿ ಅವರ ಬದುಕಿನ ಒಂದು ಮುಖ ಮನವರಿಕೆಯಾಯಿತು. ಹಾಗೆಯೇ ಹೆದ್ದಾರಿಗಳ ಕರಾಳ ಮುಖದ ಪರಿಚಯ ಕೂಡ. ಚಲಿಸುವ ಕೆಂಪು ದೀಪದ ಏರಿಯಾಗಳೆಂದು ಕುಖ್ಯಾತಿ ಪಡೆದ ಕೆಲವು ಹೆದ್ದಾರಿಗಳ ಕತೆಯನ್ನು ಸುದ್ದಿ ವಾಹಿನಿಯೊಂದು ಬ್ರೇಕಿಂಗ್ ನೂಸ್ ನಲ್ಲಿ ಬಿತ್ತರಿಸಿತ್ತು. ಮರುದಿನ ಲಾರಿ ಚಾಲಕರಿಗೆ ಉಚಿತವಾಗಿ ನಿರೋಧ್ ಹಂಚಿದ್ದು ಬಿಸಿಬಿಸಿ ಸುದ್ದಿಯಾಗಿತ್ತು.

ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವವರಿಗೆ ಚಪ್ಪಾಳೆ ತಟ್ಟಿ, ಚಿನ್ನು, ಜಾನು ಕಾಸ್ ಕೊಡು ಮಾಮ ಎಂದು ನಲಿಯುತ್ತಾ ಕೆನ್ನೆಯನ್ನೋ ತೊಡೆಯನ್ನೋ ಮೆಲ್ಲಗೆ ಚಿವುಟಿ ಕಿರಿಕಿರಿ ಮಾಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಟಿಕೆಟ್ ಹಣದೊಂದಿಗೆ ಅಂತಹವರಿಗೆ ಕೊಡಲೂ ಸಹ ಚಿಲ್ಲರೆ ಇಟ್ಟುಕೊಂಡು ಹೋಗಬೇಕಾದ ಪಜೀತಿ. ಇಂತಹವರಲ್ಲಿ ಕೆಲವರು ಹಿಜಡಾಗಳೇ ಅಲ್ಲ ಎಂಬುದು ಕೆಲವರ ವಾದ. ಕಂಡಿರೋರು ಯಾರು?

ನಗರದಿಂದಾಚೆ ಹೈವೇಗಳ ಇಕ್ಕೆಲಗಳಲ್ಲಿ ಹಿಂದೊಮ್ಮೆ ಭತ್ತ ಕಬ್ಬು ಬೆಳೆಯುತ್ತಿದ್ದ ಜಾಗದಲ್ಲಿ ಈಗ ಪಾರ್ಥೇನಿಯಂ ಇತ್ಯಾದಿ ಗಿಡಗಂಟಿಗಳು ರಾಕ್ಷಸಗಾತ್ರದಲ್ಲಿ ಬೆಳೆದಿರುತ್ತವೆ. ರಾತ್ರಿ ಹೊತ್ತಿನಲ್ಲಿ ಗವ್ವೆನ್ನುವಷ್ಟು ಕತ್ತಲೆಯಲ್ಲಿ ಅವುಗಳ ನಡುವೆ ನಿತ್ಯ ಸುಮಂಗಲಿಯರು, ಲೈಂಗಿಕ ಅಲ್ಪ ಸಂಖ್ಯಾತರು, ಹಿಜಡಾಗಳು ಮತ್ತು ಅವರಂತೆ ವೇಷ ತೊಟ್ಟ ಗಂಡಸರು ರಸ್ತೆಯಲ್ಲಿ ಹಾದುಹೋಗುವ ಲಾರಿಗಳಿಗೆ ಟಾರ್ಚು ಲೈಟ್ ತೋರಿಸುತ್ತಾ ತಮ್ಮ ಇರುವಿಕೆಯನ್ನು ಹಾಗೂ ಗಿರಾಕಿಗಳನ್ನು ಸೆಳೆಯಲು ಹೊಂಚುಹಾಕಿ ಕುಳಿತಿರುತ್ತಾರೆ. ಅಲ್ಲಿ ಹೊಂಚು ಹಾಕಿ ಕುಳಿತು ಕಾಯುವ ಜನರಲ್ಲಿ ನಾಗೇಶ ಮತ್ತವನ ಫ್ರೆಂಡ್ಸ್ ಗ್ಯಾಂಗ್ ಕೂಡ ಒಂದು.
ಪಕ್ಕದಲ್ಲಿದ್ದವರೂ ಸಹ ಕಾಣದಷ್ಟು ಕತ್ತಲು. ಆಗೊಮ್ಮೆ ಈಗೊಮ್ಮೆ ಕಾರೋ ಇಲ್ಲ ಬಸ್ಸಿನ ಬೆಳಕು ಬಿಟ್ಟರೆ ಇದ್ದದ್ದು ಮಿಂಚುಳಗಳ ಮಂದ ಬೆಳಕು. ಉಸಿರಾಡುವ ಸದ್ದಿನೊಂದಿಗೆ ಜೀರುಂಡೆ ಜೀಯೆನ್ನುವ ಸದ್ದು ಸೇರಿ ನೀರವತೆ ಸ್ವಲ್ಪ ಮಟ್ಟಿಗೆ ತಗ್ಗಿದಂತಿತ್ತು. ಶ್ ಅಚಾನಕ್ಕಾಗಿ ನಾಗೇಶ ಉಸುರಿದ. ಅವರ ಕಣ್ಣ ಮುಂದಿದ್ದ ರಸ್ತೆಯಲ್ಲಿ ಬೆಳಕು ಮೆಲ್ಲಗೆ ಬೆಳೆಯುತ್ತಿತ್ತು. ನೋಡು ನೋಡುತ್ತಿದಂತೆ ಹಳದಿ ಬಣ್ಣದೊಂದಿಗೆ ಕೆಂಪು ನೀಲಿ ಬಣ್ಣಗಳು ಮಿಶ್ರವಾಗಿ ಮಿನುಗುತ್ತಿದ್ದವು. ಪೊಲೀಸ್ ಗ್ಯಾಂಗಿನ ಸದಸ್ಯನೊಬ್ಬ ಗಾಬರಿಯಾಗಿ ಒದರಿದ. ಮುಚ್ಕೊಂಡು ಕೂರು! ನಾಗೇಶ ಹೇಳಿದ. ಶನಿವಾರವಾದ್ದರಿಂದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ವ್ಯಾನು ಮುಂದೆ ಹಾದುಹೋಯಿತು. ಎಲ್ಲರೂ ನಿಟ್ಟುಸಿರು ಬಿಟ್ಟರು.

ನಾಗೇಶ ಕಾದಿದ್ದ ಘಳಿಗೆ ಬೇಗ ಬಂತು. ಲಾರಿಯೊಂದು ಇವರ ಕಡೆಯೇ ಬರುತ್ತಿತ್ತು. ಬಹುಶಃ ಚಾಲಕ ಕುಡಿದಿದ್ದನೆಂದು ಕಾಣುತ್ತದೆ. ಲಾರಿ ಅತ್ತಿಂದಿತ್ತ ವಾಲುತ್ತಿತ್ತು. ಈ ಕ್ಷಣಕ್ಕೆ ಕಾದಿದ್ದ ಇವರು ಕೆಲಸಕ್ಕೆ ತಂದಿದ್ದ ಟಾರ್ಚಿನಲ್ಲಿ ಲಾರಿಯ ಕಡೆಗೆ ಬೆಳಕು ಹರಿಸಿದರು. ಸುಳಿವು ಸಿಕ್ಕಂತೆ ಲಾರಿ ಚಾಲಕ ವಾಹನವನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ. 

ಇಳಿದವನೇ ಬೆಳಕು ಬಂದ ಕಡೆಗೆ ನಡೆದ. ಅಮಲಿನಲ್ಲಿ ಅಪರತಪರ ಹೆಜ್ಜೆ ಹಾಕುತ್ತಿದ್ದ. ಮೊದಲೇ ಗಾಢವಾದ ಕತ್ತಲು. ಗಿಡಗಂಟಿಗಳ ಮುಂದೆ ನಿಂತು ಹಿಂದಿಯಲ್ಲಿ ಏನೋ ಗೊಣಗುತ್ತಿದ್ದ. ಕೈನಲ್ಲೊಂದು ರ್‍ಯಾಡೋ ವಾಚು. ಕುತ್ತಿಗೆಯಲ್ಲಿ ಸುಮಾರು ತೂಕವಿದ್ದ ಚಿನ್ನದ ಸರ. ಕಿತನಾ ಹೇ? (ಎಷ್ಟು ರೇಟು?) ಎಂದ. ಸ್ವಲ್ಪ ಹೊತ್ತು ನಿಶ್ಶಬ್ಧ. ಯಾರೊಬ್ಬರು ಮಾತನಾಡಲಿಲ್ಲ. ಇನ್ನೂರು! ನೀನೊಬ್ಬನೇನಾ ಇಲ್ಲ ಬೇರೆ ಯಾರದ್ರೂ ಇದಾರ? ಇದ್ರೆ ಡಬಲ್ ನಾಗೇಶ ಹೆಣ್ಣಿನ ಧ್ವನಿಯಲ್ಲಿ ಉತ್ತರಿಸಿದ. ನಹೀ ಮೇ ಆಕೇಲಾ ಹೂ! ಯೇ ಕ್ಲೀನರ್ ಮಾದರಚತ್ ನಹೀ ಆಯಾ ಆಜ್ (ನಾನೊಬ್ಬನೇ ಇರೋದು. ಈ ಕ್ಲೀನರ್ ಇವತ್ತು ಬರಲಿಲ್ಲ) ಎಂದವನೇ ಜೇಬಿನಿಂದ ಸಾವಿರದ ನೋಟೊಂದನು ಧ್ವನಿ ಬಂದ ಕಡೆಗೆ ಎಸೆದ. ಸರಸರ ಸದ್ದಾಯಿತು.

ಏನಾಗುತ್ತಿದೆ ಎಂಬುದರ ಅರಿವು ಬರುವಷ್ಟರಲ್ಲಿ ಲಾರಿ ಚಾಲಕನ ಕುತ್ತಿಗೆ ಬಳಿ ಹರಿತವಾದ ಚಾಕು. ಆತ ಕಿರುಚುವಷ್ಟರಲ್ಲಿ ನಾಗೇಶ ಅವನ ಬಾಯಿಗೆ ಬಟ್ಟೆ ತುರುಕಿದ. ಲಾರಿಯಲ್ಲಿ ಏನೇನಿದೆ? ಎಲ್ಲಿಂದ ಬರ್‍ತಿರೋದು? ಇನ್ನೂ ಏನೇನೋ ಪ್ರಶ್ನೆಗಳನ್ನು ಅವಸರವಾಗಿ ಕೇಳುತ್ತಿದ್ದ. ಬಾಯಿಗೆ ಬಟ್ಟೆ ತುರುಕಿ ಪ್ರಶ್ನೆ ಕೇಳಿದ್ರೆ ಹ್ಯಾಗೆ ಹೇಳ್ತಾನೆ ಇನೊಬ್ಬ ನಾಗೇಶನಿಗೆ ಹೇಳಿದ. ನಂತರ ಅವನನ್ನು ನೋಡಿಕೊಳ್ಳಲು ಒಬ್ಬನನ್ನು ಬಿಟ್ಟು ಎಲ್ಲರೂ ಲಾರಿ ಕಡೆ ಹೆಜೆ ಹಾಕಿದರು.

ಡ್ರೈವರ್ ಗೋಗರೆಯುತ್ತಿದ್ದ. ಸುಮಾರು ಹೊತ್ತಿನಿಂದ ಅಲ್ಲಿ ಯಾರ ಸುಳಿಹು ಇರಲಿಲ್ಲ. ಬಾಯಿಗೆ ತುರುಕಿದ್ದ ಬಟ್ಟೆ ತೆಗೆದಿತ್ತು. ಹೆಂಡತಿ ಮಕ್ಕಳಿದ್ದಾರೆ ದಯವಿಟ್ಟು ಬಿಟ್ಟುಬಿಡಿ. ದುಡ್ಡು ಬೇಕಾದರೆ ಲಾರಿಯಲ್ಲಿದೆ. ನೀನು ಹೇಳಲಿಲ್ಲವೆಂದ್ರೂ ನಾವು ತಗೋಳೋದು ನಮಗೆ ಗೊತ್ತು. ಬದುಕು ಬೇಕೆಂದರೆ ಮುಚ್ಕೊಂಡು ಕೂರು. ಹೆಂಡತಿ ಇರೋನು ಇಲ್ಯಾಕೆ ನಿಲ್ಲಿಸಿದೆ. ನಿಯತ್ತಿಲ್ಲದ ನಾಯಿ ನನ್ಮಕ್ಳು ಅವನ ಕಪಾಳಕ್ಕೆ ಒಂದು ಬಿಗಿದು ಹೇಳಿದ. ಆಳುತ್ತಾ ಗೋಗರೆಯುವುದನ್ನು ಮುಂದುವರೆಸಿದ.

ಕೆಲಸ ಮುಗಿಯಿತು. ಲಾರಿಯಿದ್ದ ಕಡೆಯಿಂದ ಯಾರೋ ಕರೆದರು. ಡ್ರೈವರ್ ಬಳಿಯಿದ್ದವನು ಇನ್ನುಳಿದವರನ್ನು ಸೇರಿದ. ಕತ್ತಲಲ್ಲಿ ಮರೆಯಾದರು. ಬಂಪರ್ ಹೊಡೆದಿತ್ತು. ಲಾರಿಯವನ ಮೂಗಿನಲ್ಲಿ ರಕ್ತ ಒಸರುತ್ತಿತ್ತು. ಕುಂಟುತ್ತ ಲಾರಿ ಹತ್ತಿ ಕೀ ತಿರುಗಿಸಿ ತನ್ನ ದುರಾದೃಷ್ಟವನ್ನು ಹಳಿಯುತ್ತಾ ತನ್ನೂರಿನ ಕಡೆಗೆ ತಿರುಗಿಸಿದ. ಮುಖದಲ್ಲಿ ನಾಚಿಕೆ ನೀರಾಡುತ್ತಿತ್ತು.

ಸೋ ಹೀಗೆ ತಿಂಗಳಿಗೆ ಏನಿಲ್ಲವೆಂದರೂ ಒಬ್ಬಬ್ಬರಿಗೆ ಐವತ್ತು ಸಾವಿರ ಸಿಗುತ್ತೆ ಸಾರ್. ಕೆಲವೊಮ್ಮೆ ತಪ್ಪು ಅನ್ನಿಸುತ್ತೆ. ಆದರೆ ಬದುಕಬೇಕಲ್ಲ ಸಾರ್. ನೀವು ಹೇಳಬಹುದು ನ್ಯಾಯವಾಗಿ ಸಂಪಾದನೆ ಮಾಡಬಹುದಲ್ವಾ ಅಂತ. ಆದರೆ ಅಲ್ಲಿ ಬೆಳಕು ಕಂಡೊಡನೆ ನಿಲ್ಲೋರದ್ದು ತಪ್ಪಲ್ವಾ ಸಾರ್? ಎಂದು ನನ್ನನ್ನು ಪ್ರಶ್ನಿಸಿದ. ಸುಮ್ಮನಿದ್ದೆ. ತಪ್ಪು ಯಾವುದು ಸರಿ ಯಾವುದು ಗೊಂದಲವೇ ಸರಿಯೆನಿಸಿತು. ಬೇರೆಯವರ ಜೀವನದ ಬಗ್ಗೆ ಮಾತನಾಡಲು ನಾನ್ಯಾರು?. ಬಿಡಿ ಸರ್. ನಾವೇನು ಕೊಲೆ ಮಾಡಿಲ್ಲ. ಅವನು ಮುಂದೊಮ್ಮೆ ಅದೇ ರಸ್ತೆಯಲ್ಲಿ ಬೆಳಕು ಕಂಡರೆ ನಿಂತೇ ನಿಲ್ಲುತ್ತಾನೆ. ನಾವಿದ್ದ ಜಾಗದಲ್ಲಿ ಒಂದು ಹೆಣ್ಣು ಜೀವವಿರುತ್ತೆ. ಅವಳಿಗೂ ಒಂದು ಬದುಕಿರುತ್ತೆ. ಸಿಕ್ಕ ಹಣದಲ್ಲಿ ಎಷ್ಟು ಜೀವಗಳ ಹೊಟ್ಟೆ ತುಂಬುತ್ತೋ ನಮಗೆ ಹೇಗೆ ಗೊತ್ತಾಗುತ್ತೆ ಹೀಗೆ ಇನ್ನೂ ಏನೇನೋ ಹೇಳುತ್ತಾ ಸಾಗಿದ. ತಡವಾಯಿತು. ನಾಳೆ ಮಾತನಾಡೋಣ ಇದಿಷ್ಟೇ ಹೇಳಿ ಅವನ ಉತ್ತರಕ್ಕೆ ಕಾಯದೇ ಎದ್ದು ಹೊರಟೆ. 

ಮತ್ತೆಂದೂ ಅವನನ್ನು ಭೇಟಿ ಮಾಡಲಿಲ್ಲ. ಕೆಲಸ ಬಿಟ್ಟನೆಂಬ ಸುದ್ದಿ ಬಂತು. ಇದಾದ ಸುಮಾರು ದಿನಗಳ ನಂತರ ಪತ್ರಿಕೆಯಲ್ಲಿ ಸುದ್ದಿಯೊಂದು ಬಂದಿತ್ತು. ನೈಸ್ ರೋಡ್ ಮತ್ತು ಹೈವೇ ಕಳ್ಳರ ಬಂಧನ ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು. ವರದಿಯಲ್ಲಿ ನಾಗೇಶನ ಗಾಡಿ ಚಿತ್ರವಿತ್ತು. ತಂಗಿ ಬಾವನ ಆಶೀರ್ವಾದ ವೆಂದು ಬರೆಸಿದ್ದ. ನಾನದನ್ನು ಗಮನಿಸಿಯೇ ಇರಲಿಲ್ಲ.

ವೀರ್ ಸಂತೋಷ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ನೈಸ್ ರೋಡ್ ಮತ್ತು ಹೈವೇ ಕಳ್ಳರು: ವೀರ್ ಸಂತೋಷ್

  1. ಹೊಸತೊಂದು ಲೋಕಕ್ಕೆ ಕರೆದೊಯ್ಯುವ ಕತೆ. ಚೆನ್ನಾಗಿದೆ.

Leave a Reply

Your email address will not be published. Required fields are marked *