ಲೇಖನ

ನೈಸರ್ಗಿಕ ಸಂಪನ್ಮೂಲಗಳ ಬಳಕೆ: ಎಂ.ಎಚ್.ಮೊಕಾಶಿ


ಭೂಮಿಯು ಸೌರವ್ಯೂಹದ ನವಗ್ರಹಗಳಲ್ಲಿ ಒಂದು ವಿಶಿಷ್ಟ ಗ್ರಹವಾಗಿದೆ. ಇದರಲ್ಲಿ ಗಾಳಿ, ನೀರು, ಬೆಳಕು, ಮಣ್ಣು, ತೇವಾಂಶ ಮೊದಲಾದವುಗಳು ಜೀವಿಗಳು ವಾಸಿಸಲು ಅನುಕೂಲವಾದ ವಾತಾವರಣದ ಆವಾಸವನ್ನು ಸೃಷ್ಟಿಸಿವೆ. ಇದುವರೆಗಿನ ಸಂಶೋಧನೆಯಿಂದ ಸೌರವ್ಯೂಹದಲ್ಲಿ ಏಕಕೋಶ ಸೂಕ್ಷ್ಮ ಜೀವಿಯಾದ ಅಮೀಬಾದಿಂದ ಹಿಡಿದು ಜೀವವಿಕಾಸದ ಶೃಂಗದಲ್ಲಿರುವ ಮಾನವನವರೆಗಿನ ಜೀವಿಗಳಿರುವ ಏಕೈಕ ಗ್ರಹವೆಂದರೆ ಭೂಮಿಯೊಂದೇ ಆಗಿದೆ.

ಭೂಮಿಯು ಅನೇಕ ನೈಸರ್ಗಿಕ ಸಂಪನ್ಮೂಲಗಳ ಆಗರ. ಸಾಮಾನ್ಯವಾಗಿ ಮಾನವನ ಅಭಿವೃದ್ಧಿಗಾಗಿ ಮಾನವರ ಉತ್ಪಾದನಾ ಕ್ರಿಯೆಗಳಲ್ಲಿ ಬಳಕೆಯಾಗುವ ನೈಸರ್ಗಿಕ ಪದಾರ್ಥಗಳನ್ನೆಲ್ಲಾ ನೈಸರ್ಗಿಕ ಸಂಪನ್ಮೂಲಗಳೆನ್ನುವರು. ಗಾಳಿ, ನೀರು, ಸೂರ್ಯನರಶ್ಮಿ, ಅರಣ್ಯ, ಪ್ರಾಣಿಸಂಪತ್ತು ಮೊದಲಾದವುಗಳು ಮೂಲ ನೈಸರ್ಗಿಕ ಸಂಪನ್ಮೂಲಗಳಾಗಿದ್ದು ಇವುಗಳನ್ನು ನೇರವಾಗಿ ಬಳಸಬಹುದಾಗಿದೆ. ಆದರೆ ಕೆಲವನ್ನು ಬೇರೆ ರೂಪಕ್ಕೆ ಪರಿವರ್ತಿಸಿಕೊಳ್ಳಬೇಕಾಗುತ್ತದೆ. ಉದಾಃ ನೀರಿನಿಂದ ವಿದ್ಯುತ್, ಕಟ್ಟಿಗೆಯಿಂದ ಇದ್ದಿಲು, ಮೊದಲಾದವುಗಳು.
ನಮ್ಮ ಭೂಗ್ರಹವೂ ಸಮಸ್ತ ಜೀವ ಕೋಟಿಗಳ ಅಸ್ತಿತ್ವಕ್ಕೆ ಅವಶ್ಯಕವಾಗಿ ಬೇಕಾದ ನೆಲ, ಜಲ, ವಾಯು, ಆಹಾರ, ಮೊದಲಾದ ಮೂಲಭೂತ ವಸ್ತುಗಳನ್ನು ಒದಗಿಸಿ ಜೀವಿಗಳಿಗೆಲ್ಲಾ ಆಶ್ರಯದ ತಾಣವಾಗಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. 1)ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳು 2)ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲಗಳು.

ಇಂದು ನೈಸರ್ಗಿಕ ಸಂಪನ್ಮೂಲಗಳು ಹಾಳಾಗುತ್ತಿವೆ. ಅವುಗಳನ್ನು ಬೇಜವಬ್ದಾರಿಯಿಂದ ನಿರ್ವಹಣೆ ಮಾಡಲಾಗುತ್ತದೆ. ಆದುದರಿಂದ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಪದ್ದತಿ ಬದಲಾಗಬೇಕಾಗಿದೆ. ಭೂಮಿಗೆ ಅರಣ್ಯವೇ ನೈಸರ್ಗಿಕ ಹೊದಿಕೆಯಾಗಿದೆ. ಉತ್ತಮ ನೈಸರ್ಗಿಕ ಸಂಪನ್ಮೂಲವಿದೆಯೆಂದರೆ ಪರಿಸರವೆಲ್ಲವೂ ಸರಿಯಾಗಿದೆ ಎಂದರ್ಥ. ನೈಸಗಿಕ ಸಂಪನ್ಮೂಲಗಳನ್ನು ಈಗಾಗಲೇ ನಾವು ರಕ್ಷಿಸಲು ಮುಂದಾದರೆ ಮುಂದಿನ ಹಲವು ವರ್ಷಗಳಲ್ಲಿ ನೈಸರ್ಗಿಕ ಸಂರಕ್ಷಣೆಯು ಸ್ವಯಂ ನೆರವೇರಿದಂತಾಗುವುದು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಲ್ಲಿ ನಮ್ಮೆಲ್ಲರದ್ದು ಬಹು ಮುಖ್ಯ ಪಾತ್ರವಿದೆ. ಸ್ಥಳೀಯ ಗ್ರಾಮಸ್ಥರನ್ನೊಳಗೊಂಡ ಗ್ರಾಮ ಅರಣ್ಯ ಸಮಿತಿ ಅವುಗಳನ್ನು ನಿರ್ವಹಣೆ ಮಾಡಬೇಕಿದೆ. ಈ ನೆಲ, ಜಲ, ಅರಣ್ಯ, ಖನಿಜಸಂಪತ್ತು ನಮ್ಮದೆನ್ನುವ ಭಾವನೆ ನಮಗೆ ಬರಬೇಕು. ನಾವು ಈ ಅನ್ಯಾಯದ ವಿರುದ್ಧ ಹೋರಾಟ ಮಾಡಿದಾಗ ನಿಜವಾದ ಸ್ವರಾಜ್ಯ ನಮಗೆ ದೊರೆತಂತಾಗುವುದು.
ಮಹಾತ್ಮ ಗಾಂಧೀಜಿಯವರು “ ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯವನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ” ಎಂದು ಹೇಳಿದ್ದಾರೆ. ನಾವು ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ. ಕಲ್ಲಿದ್ದಲು ತೈಲ ಮತ್ತು ನೈಸರ್ಗಿಕ ಅನಿಲಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವ ಇವುಗಳು ರೂಪುಗೊಳ್ಳಲು ಸಾವಿರಾರು ವರ್ಷಗಳು ತಗಲುತ್ತವೆ.

ನಾವು ಹಿಂದಿನ ಎಲ್ಲ ಯುದ್ಧಗಳನ್ನು ಗಮನಿಸಿದಾಗ ಅವುಗಳಿಗೆಲ್ಲ ಭೂಮಿ ಅಥವಾ ನೈಸರ್ಗಿಕ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳಬೇಕೆನ್ನುವ ಆಸೆಯೇ ಕಾರಣವೆನ್ನುವುದು ಸ್ಪಸ್ಟವಾಗಿದೆ. ಮಹಾಭಾರತದಲ್ಲಿ ಪಾಂಡವರು 12 ವರ್ಷಗಳ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸದ ನಂತರ ಹಿಂತಿರುಗುತ್ತಾರೆ. ನಮ್ಮ ಪಾಲಿನ ರಾಜ್ಯ/ಭೂಮಿಯನ್ನು ಶಾಂತಿಯುತವಾಗಿ ಪಡೆಯುವ ಸಲುವಾಗಿ ತಮ್ಮ ರಾಯಭಾರಿಯನ್ನಾಗಿ ಶ್ರೀ ಕೃಷ್ಣನನ್ನು ಹಸ್ತಿನಾಪುರಕ್ಕೆ ಕಳಿಸುತ್ತಾರೆ. ದುರ್ಯೊಧನನದು ಛಲಬಿಡದ ಹಠ ಪಾಂಡವರಿಗೆ ಕನಿಷ್ಟ 5 ಗ್ರಾಮವಾದರೂ ಕೊಡುವಂತೆ ಶ್ರೀಕೃಷ್ಣನು ಸಂಧಾನಕ್ಕೆ ಯತ್ನಿಸಿದಾಗ ದುರ್ಯೋಧನನು ಖಡಾಖಂಡಿತವಾಗಿ “ಸೂಜಿ ಮೊನೆಯ ಭಾಗದಷ್ಟು ಭೂಮಿಯನ್ನು ಕೊಡಲಾರೆ, ಬೇಕಾದರೆ ಯುದ ್ಧಮಾಡಲಿ” ಎಂದು ಹೇಳುತ್ತಾನೆ. ಅಲ್ಲಿಗೆ ಶಾಂತಿ ಸಂಧಾನ ಮುರಿದು ಬೀಳುತ್ತದೆ. ಇದು ಅಪಾರ ಪ್ರಾಣಿ, ಆಸ್ತಿ, ಪಾಸ್ತಿಗಳ ನಾಶಕ್ಕೆ ಕಾರಣವಾಗುತ್ತದೆ.

ಪ್ರಾಕೃತಿಕ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಯ ಸಾಧನವೆಂದು ಮಾತ್ರ ಪರಿಗಣಿಸಿದರೆ ಮೂರ್ಖತನವಾದೀತು. ದೇಶದ ಅಭಿವೃದ್ಧಿಗೆ ಪ್ರಾಕೃತಿಕ ಸಂಪನ್ಮೂಲಗಳು ಬೇಕೆ ಬೇಕು ಎನ್ನುವುದು ನಿರ್ವಿವಾದ ವಿಷಯವಾಗಿದೆ. ಪ್ರಾಕೃತಿಕ ಸಂಪತ್ತಿನಲ್ಲಿ ಸರ್ವರಿಗೂ ಸಮಪಾಲುದೊರಕಬೇಕೆಂಬ ಆಶಯವಿದ್ದರೂ ಗಣತಂತ್ರ ಒಕ್ಕೂಟ ವ್ಯವಸ್ಥೆಯಲ್ಲಿ ನಿರ್ವಹಣೆಯ ವಿಚಾರ ಬಂದಾಗ ಜವಾಬ್ದಾರಿ ಪ್ರಧಾನವಾಗುತ್ತದೆ. ಒಟ್ಟಾರೆ ಸಾಮಾಜಿಕ ವ್ಯವಸ್ಥೆಯಲ್ಲಿ ನಿಸರ್ಗದಿಂದ ಪಡೆಯುವಷ್ಟೇ ಆಸ್ಥೆಯನ್ನು ಅದರ ವಿವೇಚನಾ ಪೂರ್ಣ ನ್ಯಾಯಯುತವಾದ ಬಳಕೆಯಲ್ಲಿ ಹಾಗೂ ಸಂಪನ್ಮೂಲದ ರಕ್ಷಣೆಯಲ್ಲಿಯೂ ತೋರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಅಕ್ರಮ ಗಣಿಗಾರಿಕೆ, ಅರಣ್ಯ ನಾಶ, ಮೊದಲಾದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ ಕೈಗೊಳ್ಳುತ್ತಿರುವ ಕ್ರಮಗಳು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮನುಷ್ಯ ನಿರಂತರವಾಗಿ ಮಿತಿಮೀರಿ ಕ್ರೌರ್ಯ ಮಾಡುತ್ತಿದ್ದರೆ ಪರಿಸರದ ಸಮತೋಲನ ತಪ್ಪಿ ಚೇತರಿಸಿಕೊಳ್ಳಲಾಗದೆ ಸಮೃದ್ಧ ಭೂಮಿ ಮರುಭೂಮಿಯಾಗಬಹುದು. ಜೀವಿಗಳ ಬದುಕು ಸರ್ವನಾಶವಾಗಬಹುದು ಎಚ್ಚರವಿರಲಿ..!

-ಎಂ.ಎಚ್.ಮೊಕಾಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನೈಸರ್ಗಿಕ ಸಂಪನ್ಮೂಲಗಳ ಬಳಕೆ: ಎಂ.ಎಚ್.ಮೊಕಾಶಿ

  1. ನಿಜ ಸರ್,
    ಇಂದು ನಾವೆಲ್ಲರೂ ಸಂಪನ್ಮೂಲಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ.ಇಲ್ಲದಿದ್ದರೆ ಬರುವ ದಿನಗಳು ತುಂಬಾ ಕಷ್ಟಕರವಾಗಲಿವೆ.

Leave a Reply

Your email address will not be published. Required fields are marked *