ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ ಇರುವಂತಾಗಿದ್ದವು! ಅವರ ನಂಬಿಕೆಗಳು, ನೀತಿಯುತ ಬದುಕು ಅಪರಾಧಗಳ ಮಾಡದಂತೆ ತಡೆದಿತ್ತು! ವೇದಗಳು, ರಾಮಾಯಣ, ಮಹಾಭಾರತದ ಮೌಲ್ಯಗಳು, ಭಗವದ್ಗೀತಾ ಸಾರ, ಪುರಾಣಗಳ, ನೀತಿಯ ಕತೆಗಳ ಪ್ರಭಾವಗಳೂ ಅಪರಾಧಗಳ ತಡೆದಿದ್ದವು! ವಚನಕಾರರ ಬದುಕು ಮೌಲ್ಯಗಳ ಆಗರ! ನೈತಿಕತೆಯ ಎರಕ! ಪ್ರಯುಕ್ತ ಅವರ ಬದುಕು ಸರ್ವರಿಗೂ ಆದರ್ಶವಾಗಿತ್ತು! ಅವರು ಸಮಾಜವನ್ನು ಉದ್ಧರಿಸುತ್ತಾ ಜೀವನ ಪಾವನ ಮಾಡಿಕೊಂಡರು! ಎಲ್ಲರಿಗೂ ಆತ್ಮೋದ್ಧಾರದ ಮಾರ್ಗ ಸರಳವಾಗಿ ತೋರಿಸಿಕೊಟ್ಟು ಅವರೆಲ್ಲಾ ಮಾಡಿಕೊಂಡರು ಆತ್ಮೋದ್ಧಾರ! ನಂತರ ದಾಸರು ಸಂಗೀತದ ಮೂಲಕ ನೀತಿಯ ಎರಕ ಹೊಯ್ದರು! ಭಕ್ತಿ ರಸದಲ್ಲಿ ಮೀಯಿಸಿದರು! ಇಂದು ಸಮಾಜ ನೈತಿಕವಾಗಿ ಆದ:ಪತನಗೊಳ್ಳುತ್ತಿರುವುದರಿಂದ ಅಪರಾಧಗಳು ಹೆಚ್ಚುತ್ತಿವೆ! ಮಾನವೀಯತೆಯ ಗಾಳಿ ಗಂಧವಿಲ್ಲದೆ ಮೃಗೀಯತೆ ವಿಜೃಂಭಿಸುವಂತಾಗಿದೆ. ಅಪರಾಧಗಳ ತಡೆಯಿಡಿಯಲು ಕಾನೂನುಗಳ ಮೊರೆ ಹೋಗಿ ಸಾಕಷ್ಟು ಕಾನೂನುಗಳು ರೂಪಿಸಿದ್ದೇ ಸಾಧನೆಯಾಯ್ತೇ ವಿನಾ ಅಪರಾಧಗಳ ತಡೆಗಟ್ಟಲಾಗಲಿಲ್ಲ! ದಿನೇ ದಿನೇ ಅಪರಾಧಗಳು ಹೆಚ್ಚುವುದನ್ನು ಎಲ್ಲರೂ ಮೂಕ ಪ್ರೇಕ್ಷಕರಾಗಿ ನೋಡುವಂತಾಗಿದೆ! ಹಿಂದೆ ಈಗಿನಂತೆ ಸಣ್ಣದಕ್ಕೂ ಪುಟ್ಟದಕ್ಕೂ ಕಾನೂನುಗಳಿಲ್ಲದಿದ್ದರೂ ಈಗಿನಂತೆ ಅಪರಾಧಗಳು ವಿಜೃಂಭಿಸಿರಲಿಲ್ಲ! ನೈತಿಕತೆಯನ್ನು, ಧರ್ಮವನ್ನು, ಮಾನವೀಯತೆಯನ್ನು ಉಸಿರಾಗಿಸಿಕೊಂಡ ಸಮಾಜ ಇತ್ತು! ಅದೇ ಅಪರಾಧಗಳ ತಡೆಗಟ್ಟಿತ್ತು! ನೈತಿಕತೆ, ಧರ್ಮ, ಮಾನವೀಯತೆಯನ್ನು ಯಾರೂ ಬಲವಂತವಾಗಿ ಏರಿರಲಿಲ್ಲ! ಎಲ್ಲರಲ್ಲೂ ಹುಟ್ಟಿದಾಗ ಚರ್ಮ ಬಂದಂತೆ ಮನೆಯಿಂದ, ಸಮಾಜದಿಂದ ಬಂದಿತ್ತು! ನೈತಿಕತೆ ಎಲ್ಲರ ಆತ್ಮವಾಗಿತ್ತು! ಇಷ್ಟಪಟ್ಟು ಶ್ರದ್ಧೆ, ಭಕ್ತಿ, ಗೌರವದಿಂದ ನೈತಿಕತೆಯನ್ನು ಅಳವಡಿಸಿಕೊಂಡಿದ್ದರಿಂದ ಅಪರಾಧಗಳು ಅಪರೂಪವಾಗಿದ್ದವು! ಹಿಂದೆ ಕಾನೂನು ಸ್ಥಾನದಲ್ಲಿ ಧರ್ಮ ಇತ್ತು! ನೈತಿಕತೆಯು, ಧರ್ಮ ಯಾವ ಕಾನೂನು ತರದ ಶಿಸ್ತು ತಂದು ಅಪರಾಧಗಳು ಆಗದಂತೆ ನೋಡಿಕೊಂಡಿತ್ತು!

ಇಂದಿನ ನಂಬಿಕೆಗಳು, ಜೀವನದ ಉದ್ಧೇಶಗಳು ಪೂರ್ಣ ಭಿನ್ನ! ಹಿಂದೆ ಪುರುಷಾರ್ಥ ಸಾಧನೆ ಜೀವನದ ಗುರಿಯಾಗಿದ್ದರೆ ಇಂದು ಹಣ, ಆಸ್ತಿ ಅಧಿಕಾರವನ್ನು ಯಾವ ಮಾರ್ಗದಿಂದಲಾದರೂ ಗಳಿಸುವುದು ಜೀವನದ ಮುಖ್ಯ ಉದ್ಧೇಶವಾಗಿದೆ! ಹಣಕಾಸಿನ ಲಾಭ ಅಥವಾ ಲಂಚವನ್ನು ಸೀಮಿತ ಅರ್ಥದಲ್ಲಿ ಭ್ರಷ್ಟಾಚಾರವೆಂದು ಹೇಳಬಹುದು ಖಾಸಗಿ ಉದ್ದೇಶಕ್ಕಾಗಿ ಅಧಿಕಾರ ಸ್ಥಾನ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ವಿಶಾಲಾರ್ಥದಲ್ಲಿ ಭ್ರಷ್ಟಾಚಾರ ಅಂತ ಹೇಳಬಹುದು. ಭ್ರಷ್ಟಾಚಾರ ಮಿತಿ ಮೀರಿದ್ದರಿಂದಾಗಿ ಇನ್ನಿಲ್ಲದಂತೆ ಅದನ್ನು ತಡೆಯಲು ಹೊಸ ಹೊಸ ಕಾನೂನು ಕಾಯ್ದೆ ಮಾಡಿದರೂ ತಡೆಯಲಾಗಿಲ್ಲ! ಅಪರಾಧಗಳು ವಿಜೃಂಭಿಸಿದರೂ ಅಪರಾಧಿಗಳು ಸಿಗುತ್ತಿಲ್ಲ! ಸಿಕ್ಕರೂ ಅಪರಾಧ ಸಾಬೀತುಪಡಿಸಲಾಗುತ್ತಿಲ್ಲ!

1 ಭಾರತ ದಂಡ ಸಂಹಿತೆ ಇದರ ಪ್ರಕಾರ ಭ್ರಷ್ಟಾಚಾರಗಳಲ್ಲಿ ತೊಡಗಿದ ಯಾವುದೇ ನೌಕರರಿಗೆ ಮೂರು ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವನ್ನು ಈ ಸಂಹಿತೆ ಒದಗಿಸಿದೆ

2 ಭ್ರಷ್ಟಾಚಾರಕ್ಕೆ ತಡೆ ಕಾಯ್ದೆ ಅಪರಾಧ ಸಾಬೀತಾದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಮಾಡಿಕೊಟ್ಟಿದೆ

ಲೋಕಪಾಲ, ಕರ್ನಾಟಕ ಲೋಕಾಯುಕ್ತ, ಕೇಂದ್ರ ತನಿಖಾ ದಳ, ಕೇಂದ್ರ ಜಾಗೃತ ಆಯೋಗ, ಎಸಿಬಿ , IT, ED ಮುಂತಾದ ಸಂಸ್ಥೆಗಳನ್ನು ಭ್ರಷ್ಟಾಚಾರ ತಡೆಗಟ್ಟಲು, ಇನ್ನಿತರ ಉದ್ದೇಶಗಳಿಗೆ ಸ್ಥಾಪಿಸಿದ್ದರೂ ಸಾಧ್ಯವಾಗದ ಪ್ರಯುಕ್ತ ಇನ್ನೂ ಹೊಸ ಹೊಸ ಕಾನೂನು ಕ್ರಮಗಳ ಕೈಗೊಳ್ಳಲು ಯೋಜಿಸಲಾಗುತ್ತಿದೆ. ಇವೆಲ್ಲಾ ಕಾನೂನು, ಕಾಯ್ದೆ, ಸಂಹಿತೆ, ಸಂಸ್ಥೆಗಳು, ಸಾಕಷ್ಟು ಅಧಿಕಾರಿ ವರ್ಗವಿದ್ದರೂ ಭ್ರಷ್ಟಾಚಾರವನ್ನು ತಡೆಯುವುದಿರಲಿ ನಿಯಂತ್ರಿಸಲಾಗಿಲ್ಲ ಎಂಬುದು ದುಃಖದ ವಿಚಾರ. ನಿಯಂತ್ರಿಸುವ ವ್ಯವಸ್ಥೆಯ ಬಲ ಹೆಚ್ಚಿದಷ್ಟು ಅದನ್ನು ಮೀರಿ ಭ್ರಷ್ಟಾಚಾರ ಬ್ರಹ್ಮಾಂಡ ರೂಪ ತಾಳುತ್ತಿದೆ ಎಂದ ಮೇಲೆ ಆ ಕಾನೂನುಗಳಿಂದ ಏನು ಪ್ರಯೋಜನ? ಕಾನೂನುಗಳು ನಿರ್ಜೀವಿಗಳೆಂದು ಎಲ್ಲರಿಗೆ ಗೊತ್ತು! ಅದನ್ನು ರೂಪಿಸಿದವರ, ಕಾರ್ಯಗತಗೊಳಿಸುವವರ ವೈಫಲ್ಯ ವಿನಃ ಕಾನೂನುಗಳ ವೈಫಲ್ಯ ಅಲ್ಲ ಅಂತ ಎಲ್ಲರಿಗೂ ಗೊತ್ತು! ಹಾಗಾದರೆ ಕಾರ್ಯಗತಗೊಳಿಸುವವರ ಅಸಮರ್ಥವಾಗಿಸಿ ಸುಮ್ಮನೆ ಕಾನೂನುಗಳ ಸಾಕಷ್ಟು ರೂಪಿಸುವುದೂ ಅನೈತಿಕತೆಯಲ್ಲವೇ? ಇದೆಲ್ಲಾ ವ್ಯವಸ್ಥೆಯ ನೈತಿಕ ಅದ:ಪತನವಲ್ಲವೇ?

ಭಾರತಕ್ಕೊಬ್ಬ ಚುನಾವಣಾ ಮುಖ್ಯ ಆಯುಕ್ತರು ಇರುತ್ತಾರೆ ಎಂಬುದು ಗೊತ್ತೇ ಇರದಿದ್ದಾಗ ಟಿ ಎನ್ ಶೇಷನ್ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಕೇಂದ್ರ ಸರ್ಕಾರಕ್ಕೆ, ಘಟಾನು ಘಟಿ ನಾಯಕರಿಗೆ ಸಿಂಹಸ್ವಪ್ನವಾದದ್ದು ಇದ್ದ ಕಾನೂನು, ನಿಯಮಗಳಿಗೆ ಜೀವ ತುಂಬಿ ನೀತಿಯುತವಾಗಿ ಬದುಕಿದ್ದರಷ್ಟರಿಂದಲೇ ಎಂಬುದು ಅಚ್ಚರಿಯಲ್ಲವೇ? ಆದರೆ ಇಂದು ಅದಕ್ಕೆ ಬಲವಿಲ್ಲದಂತೆ ಮಾಡಿದ್ದು, ಕರ್ನಾಟಕ ಲೋಕಾಯುಕ್ತರಾದ ನಿವೃತ್ತ ನ್ಯಾಯ ಮೂರ್ತಿಗಳಾದ ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆ ಇವರ ಹೆಸರು ಕೇಳಿದರೇ ದುಸ್ವಪ್ನ ಕಂಡವರಂತೆ, ಬಾಂಬುಗಳ ಸದ್ದು ಕೇಳಿದವರಂತೆ, ಭೂಕಂಪ ಅನುಭವಿಸಿದವರಂತೆ ಬಯಭೀತರಾಗುತ್ತಿದ್ದ ಭ್ರಷ್ಟರು ಕರ್ನಾಟಕ ಲೋಕಾಯುಕ್ತವ ಬುಲಟ್ ಗಳಿಲ್ಲದ AK 47 ಮಾಡಿದ್ದು ಅನೈತಿಕತೆಯ ವಿಜೃಂಭಣೆಯಲ್ಲವೇ? ನೋಟಿನ ಅಮಾನ್ಯವಾದಾಗ ರಾಶಿ ರಾಶಿ ಭ್ರಷ್ಟ ಹಣಕ್ಕೆ ಒಡೆಯರಾದ ಭ್ರಷ್ಟರ, ದೇಶದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ವಿದೇಶಗಳಲ್ಲಿ ವಿಹರಿಸುತಿರುವ ವಿಜಯ ಮಲ್ಯ, ನೀರವ್ ಮೋದಿಯಂತಹವರ ಶಿಕ್ಷಿಸಲು ಸಾಧ್ಯವಾಗದಿರುವುದು? ವ್ಯವಸ್ಥೆಯ ವೈಪಲ್ಯವಲ್ಲವೇ? ನೈತಿಕತೆ, ಬದ್ಧತೆ, ಜವಾಬ್ದಾರಿ, ರಾಷ್ಟ್ರಾಭಿಮಾನದ ಕೊರತೆಯಿಂದಲ್ಲವೇ?

ಕಾನೂನುಗಳ, ಕಾಯ್ದೆಗಳ ರೂಪಿಸಿ ಅವಕ್ಕೆ ಜೀವತುಂಬದಂತಿರುವುದು ಜೀವ ತುಂಬ ಹೊರಟವರ ಕೈ ಕಟ್ಟುವುದು ಅದನ್ನು ಮೀರಲು ಪ್ರಯತ್ನಿಸಿದವರ ಹರಹರಾ ಅನ್ನಿಸಿಬಿಡುವುದು ಅಪರಾಧದ ಪರಮಾವಧಿ! ಅನೈತಿಕತೆಯ ಗೌರೀಶಂಕರ ಶಿಖರ! ಅಪರಾದ ತಡೆಯಲು ಸಾಕಷ್ಟು ಕಾನೂನುಗಳ ರೂಪಿಸಲಾಗಿದೆ. ಬಾಲ ಕಾರ್ಮಿಕರ ಅಪರಾಧಕ್ಕೇ ಬೇರೆ, ಸ್ತ್ರೀ ಶೋಷಣೆಗೇ ಬೇರೆ, ಜಾತಿ ನಿಂದನೆಗೇ ಬೇರೆ, ಬಾಲ್ಯ ವಿವಾಹಕ್ಕೇ ಬೇರೆ, ಕೊಲೆಗೇ ಬೇರೆ ಕಾನೂನುಗಳ, ಕಾಯ್ದೆಗಳ ರಚಿಸಿದ್ದರೂ, ಅಪರಾಧ ಪತ್ತೆ ದಳಗಳು, ಅಪರಾಧಿ ಪತ್ತೆ ಸಂಸ್ಥೆ, ಸಂಘಟನೆಗಳು, ಸಿಬ್ಬಂದಿ ಸಾಕಷ್ಟಿದ್ದರೂ ಅಪರಾಧಗಳ ನಿಯಂತ್ರಿಸಲಾಗಿಲ್ಲ! ದಿನೇ ದಿನೇ ಇವುಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಅಪರಾಧಗಳು ನಿಯಂತ್ರಣಕ್ಕೆ ಬರದೆ ಸೈಬರ್ ಕ್ರೈಂನಂತಹ ಹೊಸ ಹೊಸ ಅಪರಾಧಗಳು ಸೃಷ್ಟಿಯಾಗುವಂತಾಗಿ ಹೊಸ ಹೊಸ ಅಪರಾಧೀ ತಡೆ ವ್ಯವಸ್ಥೆಗಳ ಉದಯಿಸಲು ನಾಂದಿಯಾಗಿದೆಯಷ್ಟೆ!

ಜೈಲಿಗೆ ಹೋಗಿ ಬಂದವರು, ಜೈಲಿಗೆ ಹೋಗದಿದ್ದರೂ ಅಪರಾಧದ ಅರೋಪ ಹೊತ್ತವರು, ಅಪರಾದ ಸಾಬೀತಾಗದಿರುವವರು, ಮಹಾನ್ ಅಪರಾಧಗಳ ಮಾಡಿದ್ದರೂ ಸಿಕ್ಕಿ ಹಾಕಿಕೊಳ್ಳದಿರುವವರು ಸಮಾಜದಲ್ಲಿ ಗೌರವಾಧರಗಳ ಪಡೆಯುತ್ತಿದ್ದಾರೆ! ಇಂತಹವರಿಗೇ ಜನ ಜೈ ಕಾರ ಹಾಕುತ್ತಿದ್ದಾರೆ! ಕೆಲವರನ್ನು ಅಪರಾಧಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಕೈಲಿ ಆಡಳಿತದ ಚುಕ್ಕಾಣಿ ಇಂದು ಇರುವಂತಾಗಿದೆ ಆದ್ದರಿಂದ ಸಮಾಜವನ್ನು ಹೇಗೆ ಮೇಲಕ್ಕೆತ್ತಲು ಸಾಧ್ಯ! ನೈತಿಕತೆಯೇ ಗೊತ್ತಿಲ್ಲದವರ ಸರಿದಾರಿಗೆ ತರಬಹುದು! ಇವರೆಲ್ಲಾ ಗೊತ್ತಿರುವವರು, ನೈತಿಕವಾಗಿ ಬದುಕಬಾರದೆಂದು ತೀರ್ಮಾನಿಸಿದವರು! ಇವರನ್ನು ಹೇಗೆ ಸರಿಪಡಿಸಲು ಸಾಧ್ಯ!

ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದವು ಅಪರಾಧಗಳೆಂದು ತಿಳಿದೂ ಅದರಲ್ಲಿ ತೊಡಗಲಾಗುತ್ತಿದೆ! ಮಾನಿನಿಯರ ಮಾಂಗಲ್ಯಗಳ ನಿರಂತರ ಅಪಹರಣವಾಗುತ್ತಿದೆ! ಅಪರಾದಗಳು ಒಬ್ಬ ವ್ಯಕ್ತಿ ಅಲ್ಲ, ಒಂದು ಶಕ್ತಿ,, ಹಲವು ಸಂಘಟನೆಗಳು ಇದರಲ್ಲಿ ಕ್ರೀಯಾಶೀಲವಾಗಿವೆ! ಇವರು ಹಾಡ ಹಗಲೇ ರಾಜಾರೋಷಾಗಿಯೇ ಮಾಡಿದರೂ ತಡೆಯಲಾಗುತ್ತಿಲ್ಲ! ಕಾನೂನುಗಳು ಅತ್ಯಾಚಾರವನ್ನು ತಡೆಗಟ್ಟಬಹುದಾಗಿದ್ದರೆ ಎಂದೋ ಆ ಮೃಗೀಯ ವರ್ತನೆಗೆ ತಡೆಯುಂಟಾಗುತ್ತಿತ್ತು! ಎಲ್ಲಿ ಸ್ತ್ತೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಬಲವಾದ ನಂಬಿಕೆ ಇರುವ ಭಾರತದಲ್ಲಿ ಈ ಹೇಯ ಘಟನೆಗಳು! ಮುತ್ತಜ್ಜಿ, ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಸಹೋದರಿಯರು, ಸಂಗಾತಿ, ಅತ್ತೆ, ಅತ್ತಿಗೆ, ಸೊಸೆ ಮುಂತಾದ ಪಾತ್ರಗಳ ಧರಿಸಿ ಪುರುಷನ ಜೀವನ ಪಾವನ ಮಾಡುವ, ವಂಶೋದ್ಧಾರಕನಿಗಾಗಿ ಹಂಬಲಿಸಿ ವ್ರತ, ನಿಯಮಗಳ ಪಾಲಿಸುವ ಭಾರತೀಯ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರ ನಿಲ್ಲದ ಅತ್ಯಾಚಾರ! ಹಸುಳೆ ಮಕ್ಕಳೆನ್ನದೆ ಹೆಣ್ಣೆಂಬ ಎಲ್ಲಾ ವಯೋಮಾನದವರ ಮೇಲೆ ಗಂಡೆಂಬ ಎಲ್ಲಾ ಸಂಬಂಧೀಕರು, ಆತ್ಮೀಯರು, ಸ್ನೇಹಿತರು, ಹಿತವರು, ಪರಿಚಿತರು, ಅಪರಿಚಿತರು, ಸಹೋದ್ಯೋಗಿಗಳು, ಶಿಕ್ಷಕರು, ಡ್ರೈವರ್ ಮನೆ, ಶಾಲೆ, ಹೊಲ, ಗದ್ದೆ, ಕಂಪನಿ, ಕಛೇರಿ, ದೇವಾಲಯ, ವಾಹನ ಎಂಬ ಭೇಧಭಾವ ಮಾಡದೆ ಅತ್ಯಾಚಾರ ಮಾಡುತ್ತಿದ್ದಾರೆ! ಪುರುಷ ಮೃಗಗಳ ಕ್ಷಣಿಕ ಸುಖಕ್ಕೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಯಮ ಯಾತನೆ ಅನುಭವಿಸುವಂತಾಗುತ್ತದೆ. ಮಾನಸಿಕವಾಗಿ ಘಾಸಿ ಹೊಂದಿ ಪುರುಷ ದ್ವೇಷಿಯೋ, ಸಮಾಜ ದ್ವೇಷಿಯೋ, ವ್ಯವಸ್ಥೆಯ ದ್ವೇಷಿಯೋ, ಅನಾರೋಗ್ಯವಂತಳೋ ಮನೋ ರೋಗಿಯೋ ಹುಚ್ಚಿಯೋ ಆಗುವಂತಾಗಿ ಜೀವಮಾನ ಪೂರ್ತಿ ಕುಂಟುಂಬಕ್ಕೆ ಸಮಾಜಕ್ಕೆ ದೇಶಕ್ಕೆ ಹೊರೆಯಾಗುತ್ತಾಳೆ! ಹೀಗೆ ಮಾಡಿದವರು ಮತ್ತೊಂದು ಇಂತಹ ಕೃತ್ಯಕ್ಕೆ ಹವಣಿಸುತ್ತಾ ದಿಲ್ದಾರಾಗಿ ಬದುಕುತ್ತಿರುವುದು ಭಾರತೀಯತೆಗೆ, ಭಾರತೀಯ ಕಾನೂನುಗಳಿಗೆ, ಭಾರತೀಯ ದಂಡ ಸಂಹಿತೆಗೆ, ಅಪರಾದ ತಡೆಪಡೆಗೆ, ಸರಕಾರಗಳಿಗೆ, ಪುರುಷ ಸಮಾಜಕ್ಕೆ ಅವಮಾನ!

ಅಪರಾಧಗಳಿಗೆಲ್ಲಾ ಸಾಕಷ್ಟು ಕಾನೂನುಗಳಿವೆ. ಆದರೂ ಶಿಕ್ಷಿಸಲಾಗಿಲ್ಲ ಅನ್ನುವುದಕ್ಕಿಂತ ಕೊನೆಪಕ್ಷ ನಿಯಂತ್ರಿಸಲಾಗಿಲ್ಲ! ಯಾರೋ ಕೆಲವು ದುರ್ಬಲರ ಅಪರಾಧಗಳು ಸಾಬೀತಾಗುತ್ತವೆ! ದುರ್ಬಲರಿಗೆ ಶಿಕ್ಷೆಗಳು ಅಗುತ್ತವೆ ಅನ್ನಿಸುತ್ತದೆ! ಅಪರಾಧಿಗಳೆಲ್ಲಾ ಸಿಕ್ಕಿಹಾಕಿಕೊಳ್ಳದಿರಲು ಅವರ ಅಪರಾಧ ಸಾಬೀತಾಗಿ ಶಿಕ್ಷೆಯಾಗದಿರಲು ಅನೈತಿಕತೆಯ ಅಗಾಧತೆಯೇ ಕಾರಣ! ಪ್ರತಿಯೊಬ್ಬರಿಗೂ ಆತ್ಮ, ಕಾನ್ಸಿಯಸ್ ಅಂತಕ್ಕಂತಹದು ಇರುತ್ತೆ. ಮಾನವೀಯತೆ ಇರುತ್ತದೆ. ಯಾವುದು ಯೋಗ್ಯವಾದುದು, ಯಾವುದು ಯೋಗ್ಯವಲ್ಲದ್ದು, ಯಾವುದು ಸರಿ, ಯಾವುದು ತಪ್ಪು. ಯಾವುದು ಮಾಡಬಾರದ್ದು, ಯಾವುದು ಮಾಡಬೇಕಾಗಿರುವುದು. ಯಾವುದ ಮಾಡಿದರೆ ಬೆಲೆ ಇರಲ್ಲ! ಯಾವುದು ಮಾಡಿದರೆ ಬೆಲೆ ಬರುತ್ತೆ, ಯಾವುದು ಹಿಂಸೆ ಯಾವುದು ಹಿಂಸೆಯಲ್ಲ ಅಂತ ತಿಳಿದಿರುತ್ತೆ! ಆದರೂ ಅಪರಾಧ ಮಾಡುತ್ತಿರುವುದು ನೈತಿಕತೆಯ ಕೊರತೆಯಿಂದಲ್ಲವೇ? ಸಣ್ಣದಕ್ಕೂ ಪುಟ್ಟದಕ್ಕೂ ನಿಯಮಗಳ ರೂಪಿಸುತ್ತಿರುವುದು ಅಂದರೆ ಮಾನಿನಿಯರ ಯಾವ ಅಂಗಗಳ ಮುಟ್ಟಿದರೆ ಲೈಂಗಿಕ ಕಿರುಕುಳವಾಗುತ್ತದೆ ಅಂತ, … ಇಂತಹ ಪದ ಬಳಕೆ ಇಂತಹ ಜಾತಿ ನಿಂದನೆಯಾಗುತ್ತದೆ ಅಂತ, ಗಂಡ ಹೆಂಡತಿಯನ್ನು ಅವಳ ಇಷ್ಟದ ವಿರುದ್ದ ಒಂದಾಗುವಂತೆ ಬಲವಂತ ಮಾಡುವುದು ಅತ್ಯಾಚಾರ ಆಗುತ್ತದೆ ಅಂತ. ಹೀಗೆ ನಿಯಮ ಮಾಡುವುದು ನೈತಿಕತೆಯ ಅದೋಗತಿ ಸೂಚಕ! ಇಂತಹ ಮನುಷ್ಯತ್ವ, ಸದಾಚಾರ, ಸಂಸ್ಕಾರ, ಸದ್ಗುಣಗಳಂತಹ ವಿಷಯಕ್ಕೆ ಕಾನೂನುಗಳ ರೂಪಿಸುತ್ತಿರುವುದರಿಂದ ಕಾನೂನುಗಳ ಸಂಖ್ಯೆ ಜಾಸ್ತಿಯಾಗಿ ಅವುಗಳ ಮೀರುವ ಪ್ರಕರಣಗಳು ಹೆಚ್ಚಿ ನಿರ್ವಹಣೆ ಕಷ್ಟವಾಗುತ್ತದೆ ಹೊರತು ಅಪರಾಧಗಳು ಕಡಿಮೆಯಾಗವು! ಇದು ಸಮಾಜ ನೈತಿಕ ದಿವಾಳಿಯಾದ ಸೂಚನೆ!

ಕಾನೂನುಗಳು ಬಡವವರಿಗೆ ಬಯ ಹುಟ್ಟಿಸಿ ಸರಿ ದಾರಿಯಲ್ಲಿ ನಡೆಯುವಂತೆ ಮಾಡುತ್ತವೆ ಶ್ರೀಮಂತರನ್ನಲ್ಲ ಎನ್ನುವುದಕ್ಕಿಂತ ಸದಾಚಾರಿಗಳಿಗೆ ಬಯ ಹುಟ್ಟಿಸಿ ಸನ್ಮಾರ್ಗವನ್ನು ಬಿಡದಂತೆ ನೋಡಿಕೊಳ್ಳುತ್ತವೆ ಹೊರತು ದುರಾಚಾರಿಗಳನ್ನಲ್ಲ!!! ಇದರಿಂದ ಕಾನೂನುಗಳಿಗಿಂತ ನೈತಿಕತೆ, ಸದ್ವರ್ತನೆಗಳು ಅಪರಾಧವನ್ನು ಬಲವಾಗಿ ತಡೆಹಿಡಿಯಲು ಸಹಕಾರಿ! ಆದ್ದರಿಂದ ಮಕ್ಕಳಿಗೆ ಮನೆ, ಶಾಲೆ, ಸಮಾಜದಲ್ಲಿ ಸದಾಚಾರದ ಕಲಿಕೆಗೆ ಮೊದಲ ಆದ್ಯತೆ ಸಿಗುವಂತೆ ನೋಡಿಕೊಂಡು ಉತ್ತಮ ಸಮಾಜ ನಿರ್ಮಿಸಿದರೆ ಅನೇಕ ಕಾನೂನುಗಳ, ಶಿಕ್ಷಿಸುವ ವ್ಯವಸ್ಥೆಯ ಅವಶ್ಯಕತೆ ಇರದೆ ಅಪರಾಧಗಳು ಕಡಿಮೆಯಾಗುತ್ತವೆ! ಪ್ರಯುಕ್ತ ನೈತಿಕತೆ ಮಹತ್ವ ಅರಿತು ಅದು ಸಮಾಜದಲ್ಲಿ ನೆಲೆಸುವಂತೆ ಮಾಡಬೇಕಿದೆ!

-ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x