ಸಣ್ಣವರಿದ್ದಾಗ ಜೂನ್ ಜುಲೈ ಅಂದ್ರೆ ನೆನ್ಪಾಗ್ತಿದ್ದಿದ್ದು ಹಸಿರೋ ಹಸಿರು. ಉಧೋ ಅಂತ ಸುರಿಯುತ್ತಿದ್ದ ಮಳೆಯಲ್ಲೊಂದು ಛತ್ರಿ ಹಿಡಿದು ಹಸಿರ ಹುಲ್ಲ ಮಧ್ಯದ ದಾರಿಯಲ್ಲಿ ಪಚಕ್ ಪಚಕ್ ಅಂತ ನೀರು ಹಾರಿಸ್ತಾ ನಡೀತಿದ್ರೆ ಗಮನವೆಲ್ಲಾ ದಾರಿ ಬದಿಯ ಕುನ್ನೇರಲೆ ಗಿಡಗಳ ಮೇಲೇ. ದೊಡ್ಡ ನೇರಳೇ ಮರದಿಂದ ಬಿದ್ದು ರಸ್ತೆಯಲ್ಲೆಲ್ಲಾ ಹಾಸಿ ಹೋದ ನೇರಲೇ ಹಣ್ಣುಗಳಲ್ಲಿ ಒಂದಿಷ್ಟು ಆರಿಸಿ ತಿಂದ, ಸಂಜೆ ಬಂದು ಇನ್ನೊಂದಿಷ್ಟು ಕೊಯ್ಯೋ ಪ್ಲಾನಿದ್ದರೂ ಕಣ್ಣಿಗೆ ಬಿದ್ದ ಕುನ್ನೇರಲೇ ಹಣ್ಣುಗಳು ಕರೆಯದೇ ಬಿಡುತ್ತಿರಲಿಲ್ಲ. ಮಳೆಗಾಲವೆಂದರೆ ತೋಟದಲ್ಲಿ ಕಾಣುತ್ತಿದ್ದ ನಸುಗುಲಾಬಿ ಮತ್ತು ಬಿಳಿ ಬಣ್ಣದ ನಕ್ಷತ್ರ ನೇರಳೆ ಹಣ್ಣುಗಳು, ಹಳದಿಯ ಪುನ್ನೇರಳೆ ಹಣ್ಣುಗಳೆಲ್ಲಾ syzygium ಎಂಬ ಪ್ರಬೇಧಕ್ಕೆ ಸೇರಿದ್ದು ಅಂತ ಆಮೇಲೆ ಗೊತ್ತಾದ್ದು. ನೇರಳೆ(syzygium cumini) ಹಣ್ಣಿನ ಆಕಾರಕ್ಕೂ, ರುಚಿಗೂ ಸಂಬಂಧವೇ ಇಲ್ಲದಂತಹ ನಕ್ಷತ್ರ ನೇರಳೆ(Syzygium malaccense)ಮತ್ತೆ ಪುನ್ನೇರಳೆ(Syzygium jambos) ಹಣ್ಣುಗಳ ತುದಿಗೂ ನೇರಳೆ ಅಂತ ಸುಮ್ಮಸುಮ್ನೇ ಇಟ್ಟಿಲ್ಲ ಗುರೂ ನಮ್ಮ ಹಿರೀಕರು ಅಂತ ಅವುಗಳ ವೈಜ್ಞಾನಿಕ ಹೆಸರುಗಳನ್ನ ಮತ್ತು ಅವುಗಳ ಕುಟುಂಬಗಳ ಬಗ್ಗೆ ಒಂಚೂರು ಕಣ್ಣು ಹಾಯಿಸಿದ ಮೇಲೇ ಗೊತ್ತಾಗಿದ್ದು.
ನಮ್ಮ ಉಸಿರಾದ ಹಸಿರಿಂದ ದೂರಾಗಿ ಹೊಟ್ಟೆಪಾಡಿಗಂತ ಬೆಂದಕಾಳೂರಿಗೆ ಬಂದ ಮೇಲೂ ಈ ನೇರಳೆ ಹಣ್ಣನ್ನ ಕಂಡಾಗೆಲ್ಲಾ ಅವರ ಬಾಲ್ಯದ ನೆನಪುಗಳನ್ನ ಹಸಿರಾಗಿಸಿಕೊಂಡವರೆಷ್ಟೋ ಜನ. ಸೇರಿನ ಲೆಕ್ಕದಲ್ಲಿ, ಹತ್ರೂಪಾಯಿ, ಇಪ್ಪತ್ರೂಪಾಯಿಗಿಷ್ಟು ಅಂತ ನೇರಳೇ ಹಣ್ಣನ್ನೂ ಮಾರುತ್ತಿದ್ದ ಕಾಲವೊಂದಿತ್ತಿಲ್ಲಿ. ಬರ್ಗರ್, ಪಿಜ್ಜಾಗಳಿಗೆ ನೂರಿನ್ನೂರು ಕೊಟ್ಟೂ ಹೊಟ್ಟೆ ತುಂಬದ ಸಂಕಟದಲ್ಲಿದ್ದಾಗೂ ಪಕ್ಕದ ಬೀದಿಯ ಪಾನಿಪೂರಿಗೆ ಹತ್ರೂಪಾಯೇ ಇದ್ದ ಕಾಲವದು. ಆದ್ರೆ ಈಗ ಮಾರಿಗೊಂದು ಮಧುಲೋಕ, ಬರ್ಗರ್ ಕಾರ್ನರುಗಳು ಬಂದು ಕೂತಿರೋ ಬೆಂಗಳೂರಲ್ಲಿ ಮಿಡಿ, ಬರ್ಮುಡಗಳ ಮಧ್ಯೆ ಫುಲ್ ಪ್ಯಾಂಟಲ್ಲಿ ಹೋಗುವವ ಬಿಕಾರಿಯಾ ಅಂತ ಯೋಚಿಸೋ ಪರಿಸ್ಥಿತಿ ! ಇನ್ನೂರೈವತ್ತರ ಪಿಜ್ಜಾ ತಿನ್ನೋ ಬದ್ಲು ಮೂರು ದಿನ ಮಂಜುನಾಥ ಹೋಟ್ಲಲ್ಲಿ , ಇಲ್ಲಾ ಆಂದ ಮೆಸ್ಸಲ್ಲಿ ಆರಾಮಾಗಿ ಊಟ ಮಾಡೋದು ಲೇಸು ಅಂತ ಯೋಚ್ನೆ ಮಾಡ್ತಾ ಹೆಜ್ಜೆ ಹಾಕುತ್ತಿದ್ದ ಸಾಮಾನ್ಯರಲ್ಲೊಬ್ಬ ಜನಸಾಮಾನ್ಯನ ಕಣ್ಣಿಗೆ ಬಿದ್ದಿದ್ದು ಗಾಡಿ ಮೇಲಿನ ನೇರಳೆ ಹಣ್ಣು. ಊರಿಗೆ ಹೋದಾಗ ಕಂಡೂ ಕಾಣದಂತಿದ್ದ ನೇರಳೆ ಬೆಂದಕಾಳೂರಲ್ಲೇ ಕಂಡರೆ ಖುಷಿಯಾಗದಿರತ್ತಾ ? ಹೊರಟ ಬಸ್ಸಲ್ಲಿ ಎರಡು ಮೂರು ಬಾರಿ ಕಂಡರೂ ಕೊಳ್ಳಲಾಗದ ಸ್ಥಿತಿಗೆ ನೀಲಿಯಾಗದ ನಾಲಿಗೆ ಬೈದುಕೊಂಡಿತ್ತು. ತಡೆಯಲಾಗದ ಮನಸ್ಸಲ್ಲಿ ಕೇಳೇಬಿಟ್ಟ ಎಷ್ಟಪ್ಪಾ ರೇಟು ಅಂತ. ಕೇಜಿಗೆ ಇನ್ನೂರು ಅಂದಾಗವ ನಾಲಿಗೆಯಲ್ಲಿನ ನೀರೇ ಆರೋಯ್ತು.
ವಸ್ತುವೊಂದರ ರೇಟು ವರ್ಷಕ್ಕೆ ಎಷ್ಟು ಏರಬಹುದಪ್ಪಾ ? ಬೆಲೆಯೇರಿಕೆ ಪ್ರಮಾಣದ ಮೇಲೆ ನಿರ್ಧಾರಿತವಾಗಿರುತ್ತೆ ಅದು ಅಂದ್ರಾ ? ಇರ್ಬೋದೇನೋ. ಹಿಂದಿನೆರಡು ವರ್ಷಗಳನ್ನೇ ತಗೊಂಡ್ರೆ ೨೦೧೪-೧೫ರಲ್ಲಿ ೭.೮ ರಷ್ಟಿದ್ದ ಬೆಲೆಯೇರಿಕೆ ೨೦೧೫-೧೬ ರ ಸಾಲಿನಲ್ಲಿ ೫.೦೧ ರಷ್ಟಿದೆ ಅನ್ನುತ್ತೆ ಅಂಕಿ ಅಂಶಗಳು. ಸ್ವಲ್ಪ ಹೆಚ್ಚು ಕಮ್ಮಿಯಿರುತ್ತೆ ಅಂದ್ಕೊಂಡ್ರೂ ಎರಡು ವರ್ಷಗಳಲ್ಲಿ ನೂರು ರೂಪಾಯಿಯಿದ್ದ ವಸ್ತುವೊಂದ್ರ ಬೆಲೆ ಅಬ್ಬಬ್ಬಾ ಅಂದ್ರೆ ನೂರಾ ಹದಿನೈದು ರೂಪಾಯಿ ಆಗಿರಬಹುದು ಅಂತ ಅಂದ್ಕೋಬೋದು. ಆದ್ರೆ ನೇರಳೆಹಣ್ಣಿನ ಕತೆ ನೋಡಿ. ಹಿಂದಿನ ವರ್ಷ ಕೇಜಿಗೆ ನೂರು ಅಂತಿದ್ದೋರು ಈಗಾಗ್ಲೇ ಇನ್ನೂರು ಅನ್ನೋಕೆ ಶುರುಮಾಡಿದಾರೆ ! ನೇರಳೇ ಹಣ್ಣುಗಳಿಂದ ಚರ್ಮದ ಸುಕ್ಕುಗಳು ಹೋಗತ್ತೆ ಅಂತ, ಹಣ್ಣಿರಲಿ, ಬೀಜಗಳನ್ನೂ ಆಯುರ್ವೇದದ ಔಷಧಿಗಳಲ್ಲಿ, ಜೀರ್ಣಕ್ರಿಯೆಯ ಸಮಸ್ಯೆಗಳಿರೋ ಆಹಾರಗಳಲ್ಲಿ, ತೆಳ್ಳಗಾಗಬೇಕು ಅಂತಿರೋರ ಆಹಾರಕ್ರಮದಲ್ಲಿ ಬಳಸೋಕೆ ಶುರುವಾಗಿದೆ. ಹೀಗೆ ತನ್ನ ಹಲವಾರು ಔಷಧೀಯ ಗುಣಗಳಿಂದ ಪ್ರಖ್ಯಾತವಾಗಿದ್ದೇ ಆಗಿದ್ದು ಇದರ ರೇಟೂ ಗಗನಕ್ಕೇರಿಬಿಟ್ಟಿದೆ. ಅದ್ರಲ್ಲೇನು ಮಹಾ ? ಎರಡು ವರ್ಷದ ಹಿಂದೆ ನೂರೈವತ್ತು-ಇನ್ನೂರು ಅಂತಿದ್ದ ಹಲಸಿನ ಹಣ್ಣಿಗೂ ಈಗ ಮುನ್ನೂರು ಅಂತಿದಾರೆ , ಮೂರು ರೂ ಇದ್ದ ಪಚಬಾಳೆಗೆ ಈಗ ಐದಾಗಿದೆ ಅಂದ್ರಾ ? ನೋ ಕಮೆಂಟ್ಸ್. ಹಲಸಿನ ಹಣ್ಣಿಗೆ ಮುನ್ನೂರಾ ? ನಮ್ಮ ಹಳ್ಳಿ ಕಡೆಗೆ ಬರ್ರಪ್ಪ, ಕೊಯ್ಯೋರಿಲ್ಲದೇ ಮರದಲ್ಲೇ ನೇತಾಡಿ ಕೊಳೆತು ಹೋಗತ್ತವು. ಯಾರಾದ್ರೂ ಕೊಯ್ದರೂ ಮೂವತ್ತರಿಂದ ನಲವತ್ತಕ್ಕೆ ಮಾರಬಹುದಷ್ಟೆ. ಪೇಟೆಯಲ್ಲಿ ಕೇಳಿದಷ್ಟು ಕೊಡ್ತೀರಾ ಅಂತ ಮಂಗ ಮಾಡ್ತಾರೆ ನಿಮ್ಮನ್ನ ಅಂದ್ರಾ ? ಅದಕ್ಕೂ ನೋ ಕಾಮೆಂಟ್ಸ್.
ಕಾಮೆಂಟಿಲ್ಲದೆ ಬರೆಯೋದು, ಚಪ್ಪಾಳೆಯಿಲ್ಲದೆ ಹಾಡೋದು ಸಾಧ್ಯಾನಾ ಅಂತ ಅಂದ್ಕೊಳ್ಳೋ ಜನರ ಮಧ್ಯೆಯೇ , ಏನೇನೋ ಬರೆದು , ಅದಕ್ಕೆ ಬರೋ ಪ್ರತಿಕ್ರಿಯೆಗಳಿಗೆ ಉತ್ತರಿಸಲಾರೆ ಅಂದ್ರೆ ಅದು ಹೇಗೆ ಸರಿ ಅಂತ ಮತ್ತೆ ಸ್ವಲ್ಪ ಕೋಪದಿಂದಲೇ ಪ್ರಶ್ನಿಸೋಕೆ ರೆಡಿಯಾಗಿರೋ ಜನರೂ ಇರಬಹುದು. ಆ ವಿಷ್ಯಕ್ಕೇ ಬರುತ್ತೀನೀಗ. ಬೇಡಿಕೆ ಹೆಚ್ಚಿದ್ದಾಗ ಬೆಲೆ ಹೆಚ್ಚುತ್ತೆ, ಕಮ್ಮಿಯಾದಾಗ ಇಳಿಯುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇರುವ ಮಾರುಕಟ್ಟೆಯ ನಿಯಮ. ಇಂದು ಮಾರುಕಟ್ಟೆಗೆ ಬರೋ ಹಣ್ಣುಗಳನ್ನೆಲ್ಲಾ ಹಣ್ಣು ಮಾಡಲು ಅಂತ್ಲೋ, ಚೆಂದ ಕಾಣಲಿ ಅಂತ್ಲೋ ವಿಪರೀತ ಔಷಧಿ ಹೊಡಿತಾರೆ ಅನ್ನೋದು ಅವುಗಳನ್ನು ಕೊಳ್ಳುವ ಗ್ರಾಹಕರ ಬೇಸರ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೇದು ಅಂತ ತಿಂದ್ರೂ ಆ ಹಣ್ಣುಗಳ ಒಳಗಿನ ಔಷಧಿಗಳು ನಮ್ಮ ಹೊಟ್ಟೆ ಸೇರಿ ನಮ್ಮ ಆರೋಗ್ಯ ಇನ್ನಷ್ಟು ಹಾಳಾಗೋ ಸಾಧ್ಯತೆಯೇ ಹೆಚ್ಚಾಗಿರೋದ್ರಿಂದ ಜನರ ಚಿತ್ತ ಹೆಚ್ಚು ಔಷಧಿ ಕಾಣದಿರುವ ಅಥವಾ ನೈಸರ್ಗಿಕವಾಗಿ ಬೆಳೆದ ಹಣ್ಣುಗಳತ್ತ ಹರೀತಾ ಇದೆ. ಹಾಗಾಗೇ ನೇರಳೆ ಹಣ್ಣು, ಹಲಸಿನ ಹಣ್ಣು, ಪೇರಳೆ ಹಣ್ಣುಗಳತ್ತ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಜನ ತಗೊಳ್ತಾರೆ ಅಂದಾಗ ಮಾರೋರೂ ಹುಷಾರಾಗ್ತಾರಲ್ವಾ ? ಪರಿಣಾಮ : ಹಳ್ಳಿ ಕಡೆ ಹತ್ತು ರೂಪಾಯಿಗೆ ಮೂರು ಅಂತ ಮಾರಲ್ಪಡೋ ಪೇರಲೇಕಾಯಿ ಬೆಂಗ್ಳೂರಲ್ಲಿ ಕೇಜಿಗೆ ಅರವತ್ತು ಅಂತ ಮಾರಲ್ಪಡುತ್ತೆ !
ನೇರಳೆ ಹಣ್ಣು ನಂಗಿಷ್ಟವಾಗೋಕೆ ಅದ್ರ ಹಿಂದೀ ಹೆಸ್ರೂ ಕಾರಣ ಅಂದ್ರೆ ನಂಬ್ತೀರಾ ? ಹಿಂದಿಯಲ್ಲಿ ಜಾಮೂನ್, ಇಂಗ್ಲೀಷಲ್ಲಿ ಜಂಬೂಲ್ ಆಗಿರುವ ನೇರಳೆಗೆ ಅದರ ಸಂಸ್ಕೃತ ಹೆಸರೇ ಕಾರಣ ಅಂತಾರೆ ಅನೇಕರು. ಚಿಕ್ಕಂದಿನಲ್ಲಿ ಪ್ರತೀ ಹುಟ್ಟಿದಬ್ಬದಲ್ಲೂ ನಂಗಿಷ್ಟ ಅಂತ ಅಮ್ಮ ಮಾಡ್ತಿದ್ದ ಜಾಮೂನನ್ನ ನೆನಸ್ಕಂಡ್ರೆ ಈಗ್ಲೂ ಬಾಯಲ್ಲಿ ನೀರೂರತ್ತೆ. ಸಿಹಿ ತಿಂದ್ರೆ ಹಂಗಾಗುತ್ತೆ, ಅದ್ರಲ್ಲಿ ಅಷ್ಟು ಶರ್ಕರಪಿಷ್ಟಗಳಿರುತ್ತೆ ಅಂತ ಆಫೀಸಲ್ಲಿ ಬೋರ್ಡ್ ಹಾಕಿದ್ರೂ ಜಾಮೂನ್ ಕಂಡಾಗೆಲ್ಲಾ ಬಾಲ್ಯದ ನೆನಪಾಗಿ ಮತ್ತೊಂದು ಸಲ ತಗೊಂಡೇ ತಗೊಂಡಿರ್ತೀನಿ ! ಇನ್ನು ಆ ಸ್ವೀಟಿನ ಹೆಸರೇ ಇಟ್ಕೊಂಡಿರೋ ನೇರಳೆ ಹಣ್ಣು ಇಷ್ಟವಾಗ್ದೇ ಇರುತ್ತಾ ? ನೇರಳೆಯಿಂದ ಜಾಮೂನ್ ಇಷ್ಟ ಆಯ್ತಾ ? ಜಾಮೂನಿಂದ ನೇರಳೆ ಇಷ್ಟ ಆಯ್ತಾ ? ಅಥವಾ ಅವೆರಡರ ನಡುವಿನ ಭಾಷೆಗಳಾಚೆಗಿನ ಕಾಕತಾಳೀಯ ಹೊಂದಿಕೆಯಿಂದ ಅವೆರಡೂ ಇಷ್ಟವಾಯ್ತಾ ? ಅಥವಾ ಅವುಗಳೆರಡೋ ಹೊತ್ತು ತರೋ ಬಾಲ್ಯದ ಮಧುರ ನೆನಪುಗಳಿಂದ ಅವೆರಡೂ ಇಷ್ಟವಾಯ್ತಾ ಅಂದ್ರಾ ? ಉತ್ತರಕ್ಕಂತ ಯೋಚ್ನೆ ಮಾಡ್ತಾ ಇರಿ, ಒಂದಿಷ್ಟು ನೇರಳೆ ಹಣ್ಣು ತಿಂದ್ಕೊಂಡು ಬರ್ತೀನಿ ಅಲ್ಲೀವರೆಗೆ.
*****
ನಮ್ಮಲ್ಲಿ ಈ ಬಾರಿನೂ ನೇರಳೆ ಫಸಲು ಕಡಿಮೆ ಪ್ರಶಸ್ತಿ
Oh. yaake ?
nerale hannugalannu bengalurina beedigalalli nodidaga inthadde bhava nannalluu…. tumba chennagide !!