ನಾವು ಚಿಕ್ಕವರಿರುವಾಗ ನಮ್ಮ ತುಂಟಾಟಗಳನ್ನು ನಿಭಾಯಿಸುವುದು ಮನೆಮಂದಿಗೆಲ್ಲಾ ಬಲು ಕಷ್ಟವಾಗಿರುತ್ತಿತ್ತು. ನಮ್ಮನ್ನು ನಿಯಂತ್ರಿಸಲು ಭೂತದ ಕಥೆ, ಹುಲಿ, ಚಿರತೆ ಮತ್ತು ಮಂಗಗಳ ಚಿತ್ರಗಳನ್ನು ತೋರಿಸಿಯೋ ಅಥವಾ ಅವುಗಳ ಹೆಸರುಗಳನ್ನು ಹೇಳಿಯೋ ಹೆದರಿಸುತ್ತಿದ್ದರು. ನನ್ನೂರಿನಲ್ಲಿ ಅಜ್ಜಿಯು, ನೀನೊಬ್ಬನೆ ಮನೆಯಿಂದ ಆಚೆ ಹೋದರೆ ನೆಲಗುಮ್ಮ ಬಂದು ನಿನ್ನನ್ನು ನುಂಗಿಬಿಡುತ್ತದೆ ಎಂದು ಒಮ್ಮೆಯಾದರೆ, ನೋಡು ಆಚೆ ಹೋದರೆ ಆ ಗೋಡೆಯ ಪಕ್ಕದಲ್ಲಿ ನೆಲಪಟ್ಟು ಅಡಗಿ ಕುಳಿತಿದೆ ನಿನ್ನನ್ನು ಕಚ್ಚಿ ತಿಂದುಬಿಡುತ್ತದೆ ಎಂದು ಮತ್ತೊಮ್ಮೆಯಾದರೆ, ನಾವು ಊಟಮಾಡದೆ ಹಠಮಾಡುತ್ತಿರುವಾಗ ಒಂದು ಕೊಳವೆಯಾಕಾರದಲ್ಲಿ ಪಿ.ವಿ.ಸಿ ಪೈಪಿನಂತಿರುವ ಗೂಡಿನ ಹತ್ತಿರ ಕರೆದುಕೊಂಡು ಹೋಗಿ ನೋಡು ಮಗು ನೀನು ಈಗ ಊಟ ತಿನ್ನದಿದ್ದರೆ ಆ ಗೂಡಿನಲ್ಲಿ ನೆಲಗಿರುಬ ಇದೆ ನಿನ್ನನ್ನು ತಿಂದುಬಿಡುತ್ತದೆ ಎಂದು ಮಗದೊಮ್ಮೆ ಹೇಳಿ ಹೆದರಿಸಿ ಊಟ ತಿನ್ನಿಸುತ್ತಿದ್ದರು. ಹಾಗೆಯೇ ಹಳ್ಳಗಳಲ್ಲಿ ಹೆಂಗಸರು ಪರಸ್ಪರ ಜಗಳವಾಡಿಕೊಳ್ಳುವಾಗ “ನಿನಗೆ ನೆಲಪಟ್ಟು ಹೊಡೆದು ಸಾಯ” ಎಂಬ ಶಬ್ದವನ್ನು ಬಳಸುತ್ತಿದ್ದರು.
ಆದರೆ ನೆಲದಲ್ಲಿ ಪೈಪಿನಂತೆ ಕೊಳವೆ ರೀತಿಯಲ್ಲಿ ಗೂಡು ಮಾಡಿಕೊಂಡು ಯಾವುದೋ ಆಶ್ಚರ್ಯಕರ ಜೀವಿಯೊಂದು ಇದೆ ಎಂಬುದಷ್ಟೇ ನಮಗೆ ತಿಳಿದಿತ್ತು. ಅಜ್ಜ-ಅಜ್ಜಿಯರು ನಮಗೆ ಆ ಪ್ರಾಣಿ ನೋಡಲು ವಿಚಿತ್ರವಾಗಿದ್ದು, ಮೈಮೇಲೆಲ್ಲಾ ಕಿರುಬಕ್ಕಿರುವಂತೆ ಕೂದಲುಗಳಿರುತ್ತವೆ. ಅದು ಯಾರ ಕಣ್ಣಿಗೂ ಕಾಣುವುದಿಲ್ಲ. ಹತ್ತಿರ ಹೋದರೆ ಚಿಕ್ಕ ಮಕ್ಕಳನ್ನು ನುಂಗಿಬಿಡುತ್ತದೆ ಎಂದು ತಿಳಿಸುತ್ತಿದ್ದರು. ಆಗಿನ ಕಾಲದಲ್ಲಿ ಹಳ್ಳಿಗಳಲ್ಲಿ ದೂರದರ್ಶನ ಇರಲಿಲ್ಲ. ಬೇಸಿಗೆಯ ರಜೆಯಲ್ಲಿ ವಠಾರದ ಮಕ್ಕಳೆಲ್ಲಾ ಒಂದುಕಡೆ ಸೇರಿ ತಿಂಗಳ ಬಳಕಿನೊಂದಿಗೆ ಹಿರಿಯರನ್ನು ಕಥೆಹೇಳಲು ಕೇಳುತ್ತಿದ್ದೆವು. ಬೇಸಿಗೆಯ ಪ್ರತಿದಿನದ ಕಥೆಯಲ್ಲಿ ಈ ನೆಲಗುಮ್ಮನ ಕಥೆಯೂ ಒಂದಾಗಿರುತ್ತಿತ್ತು. ಹೀಗೆ ಒಂದು ಕಾಣದ ಪ್ರಾಣಿಯನ್ನು ಮನದಲ್ಲಿ ಅಚ್ಚಾಗಿಸಿಕೊಂಡಿರುವ ನಮಗೆ, ಎಲ್ಲಿಯಾದರೂ ಬೂದುಬಣ್ಣದ ಕೊಳವೆ ಕಂಡಾಗ, ಥಟ್ಟನೆ ನೆಲಗುಮ್ಮ ಅಥವಾ ನೆಲಕಿರುಬ ಅಥವಾ ನೆಲಪಟ್ಟು ನೆನಪಾಗುತ್ತಿತ್ತು.
ಈ ನೆಲಗುಮ್ಮವು ಒಂದು ಸಾಲಿಗನ ಸಾಲಿಗೆ ಸೇರಿದ ಜೇಡವೆಂದು ತಿಳಿದದ್ದೇ ಕರ್ನಾಟಕದ ಸಾಲಿಗ ತಂಡದ ಒಡನಾಟವನ್ನು ಬೆಳೆಸಿಕೊಂಡಾಗ. ನೆಲಕಿರುಬವೆಂಬುದು ಒಂದು ದೈತ್ಯ ಸಾಲಿಗ. ಇದರ ಪ್ರಬೇಧಗಳು ಕರಾವಳಿ, ಮಲೆನಾಡು ಮತ್ತು ಅರೆಮಲೆನಾಡು ಭಾಗಗಳಲ್ಲಿ ಕಂಡುಬರುತ್ತವೆ. ಇವುಗಳ ಆವಾಸಸ್ಥಾನವು ರಸ್ತೆಬದಿ ಮತ್ತು ಕಾಡಿನ ಬೆಟ್ಟ-ಗುಡ್ಡಗಳ ಕಡಿದಾದ ಇಳಿಜಾರಿನಲ್ಲಿ ಕಂಡುಬರುತ್ತವೆ. ಗೂಡುಗಳು ಪಿ.ವಿ.ಸಿ ಪೈಪುಗಳಂತೆ ಗೋಚರವಾಗುತ್ತವೆ. ಗೂಡಿನ ಗಾತ್ರ ಮತ್ತು ಕೊಳವೆಯ ಉದ್ದ ಜೇಡದ ಗಾತ್ರ ಮತ್ತು ವಯಸ್ಸನ್ನು ಸೂಚಿಸುತ್ತದೆ. ಒಂದು ದೊಡ್ಡ ಗೂಡು ನಮಗೆ ಸಿಕ್ಕಲ್ಲಿ, ಅದರ ಸುತ್ತಮುತ್ತ ಸಣ್ಣ ಗೂಡುಗಳೂ ಸಹ ದೊರೆಯುತ್ತವೆ. ಹೆಚ್ಚು ಗೂಡುಗಳು ಕಂಡಲ್ಲಿ ಹೆಚ್ಚು ಜೇಡಗಳಿವೆ ಎಂದಾಯ್ತು. ನೆಲಕಿರುಬನೆಂಬ ಹೆಸರು ಅದರ ಮೈಮೇಲಿರುವ ಕೂದಲು ಮತ್ತು ಬೇಟೆಯಾಡುವ ರೀತಿಗೋ, ನೆಲಗುಮ್ಮನೆಂಬ ಹೆಸರು ನೆಲದ ಬಿಲದಲ್ಲಿ ಅಡಗಿ ಕುಳಿತುಕೊಳ್ಳುವ ಗುಣಲಕ್ಷಣಗಳಿಂದಾಗಿ ಬಂದಿರಬಹುದು. ಸ್ಥಳೀಯರ ಪ್ರಕಾರ ನೆಲಗುಮ್ಮವು ಅನೇಕ ಪ್ರಬೇಧಗಳನ್ನು ಒಳಗೊಂಡಿದೆ. ಸ್ಥಳೀಯರ ಸಹಾಯ ಪಡೆದು ನೆಲಕಿರುಬದ ಗುಂಪಿಗೆ ಸೇರಿದ ಎಲ್ಲಾ ಪ್ರಬೇಧಗಳನ್ನು ಗುರುತಿಸುವ ಕೆಲಸ ಇನ್ನೂ ಯಶಸ್ವಿಯಾಗಿಲ್ಲ. ಅವುಗಳಲ್ಲಿ ಒಂದು ಥ್ರಿಗ್ಮೋಪಿಯಸ್ ತರುಚುಲೆನತುಸ್ ಎಂಬುದೂ ಕೂಡ. ನಮ್ಮ ಪಶ್ಚಿಮಘಟ್ಟ ಭಾಗದ ಸ್ಥಾನೀಕ ಜೀವಿ ಇದಾಗಿರುತ್ತದೆ. ರಾತ್ರಿ ಸಮಯದಲ್ಲಿ ಬೇಟೆಯಾಡುವ ಈ ಜೇಡವು ಕಪ್ಪೆ, ಹಲ್ಲಿ, ಇಲಿ, ಸಣ್ಣ ಪಕ್ಷಿಗಳು, ಕೀಟಗಳು ಮುಂತಾದವುಗಳನ್ನು ನಾಜೂಕಾಗಿ ಹಿಡಿಯುತ್ತದೆ. ಇದರ ದೇಹವು ಇತರೆ ಜೇಡಗಳಿಗಿಂತ ದೊಡ್ಡದಾಗಿರುವ ಕಾರಣ ಅಪಾಯ ಬಂದಾಗ ಗೂಡಿನಲ್ಲಿ ಅಡಗುವುದು ಮತ್ತು ಪರ್ಯಾಯ ಮಾರ್ಘದಲ್ಲಿ ತಪ್ಪಿಸಿಕೊಳ್ಳುವುದನ್ನು ಬಿಟ್ಟರೆ, ದೂರದ ಪ್ರದೇಶಕ್ಕೆ ಫಲಾಯನ ಮಾಡುವುದು ಕಷ್ಟಸಾಧ್ಯ. ಸಣ್ಣ-ಪುಟ್ಟ ತೊಂದರೆಯ ಸಂಭವವು ಕಂಡುಬಂದಾಗ ಮೈಕೂದಲುಗಳನ್ನು ನೇರಮಾಡಿಕೊಂಡು, ವಿಶೇಷ ಸದ್ದುಗಳನ್ನು ಮಾಡುವ ಮೂಲಕ ರಕ್ಷಿಸಿಕೊಳ್ಳುತ್ತದೆ.
ನೆಲಕಿರುಬಗಳಿಗಿರುವ ತೊಂದರೆಗಳು :-
ಇತ್ತೀಚಿನ ಅರಣ್ಯ ನಾಶದ ಜೊತೆಯಲ್ಲಿ ಆವಾಸಸ್ಥಾನ ನಾಶ, ದ್ವಿಪಥ, ಚತುಷ್ಪಥಗಳಂತಹ ರಸ್ತೆಗಳ ನಿರ್ಮಾಣದ ಅಭಿವೃದ್ಧಿ ಯೋಜನೆಗಳೇ ಈ ನೆಲಕಿರುಬಗಳಿಗೆ ಮುಖ್ಯ ಮಾರಕಗಳಾಗಿವೆ. ಇವು ಕಣ್ಣಿಗೆ ಕಾಣುವ ತೊಂದರೆಗಳಾದರೆ, ನಮಗೆ ನಿಮಗೆಲ್ಲರಿಗೂ ಗೊತ್ತಿರದ ನಿಗೂಡಗಳಿ ನೆಲಕಿರುಬಗಳ ಸುತ್ತ-ಮುತ್ತ ಇವೆ. ಈ ಸಾಲಿಗಗಳನ್ನು ಸ್ಥಳೀಯವಾಗಿ ಬಲಿಪೀಠದ ಪೂಜೆಗಳಲ್ಲಿ ಬಳಸಲಾಗುತ್ತದೆಯಂತೆ. ಕೆಲವು ರೋಗಗಳನ್ನು ಗುಣಪಡಿಸಲು, ಈ ಜೇಡವನ್ನು ಕೊಂದು ಅದರ ಮುಂದೆ ಖಾಯಿಲೆಗೊಳಪಟ್ಟ ವ್ಯಕ್ತಿಯನ್ನು ಕೂರಿಸಿ ಪೂಜೆ ಮಾಡಿದರೆ ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ. ಇನ್ನು ಕೆಲವರು ಇದು ವಿಷಕಾರಿ, ಮಕ್ಕಳಿಗೆ ತೊಂದರೆ ಕೊಡುತ್ತದೆ ಎಂಬ ಕಾರಣವನ್ನಿಟ್ಟುಕೊಂಡು ಇವುಗಳನ್ನು ಕಂಡಲ್ಲಿ ಕೊಲ್ಲುತ್ತಾರೆ. ಕೊಲ್ಲುವಾಗಲೂ ತುಂಬಾ ಕ್ರೂರವಾಗಿ ಕೊಲ್ಲುತ್ತಾರೆ. ಜೀವಂತ ನೆಲಕಿರುಬವನ್ನು ಹಿಡಿದು, ಎರಡು ಚಪ್ಪಟೆಯಾಕಾರದ ಕಲ್ಲುಗಳನ್ನು ತೆಗೆದುಕೊಂಡು, ಒಂದು ಕಲ್ಲನ್ನು ನೆಲದ ಮೇಲಿಟ್ಟು ಆ ಕಲ್ಲಿನ ಮೇಲೆ ಜೇಡವನ್ನಿರಿಸಲಾಗುತ್ತದೆ. ಜೇಡವನ್ನು ಮನಷ್ಯ ಹಿಡಿದಾದ ಅದು ಹೆದರಿ ತನ್ನೆಲ್ಲಾ ಕಾಲುಗಳನ್ನು ಮುದುರಿಕೊಂದಿರುತ್ತದೆ. ಕಲ್ಲಿನಮೇಲೆ ಜೇಡವನ್ನಿಡುವಾಗ ಅದರ ಕಾಲುಗಳನ್ನು ಬಲವಂತವಾಗಿ ನೇರಗೊಳಿಸಲಾಗುತ್ತದೆ. ನಂತರ ಅದರ ಮೇಲೆ ಇನ್ನೊಂದು ಚಪ್ಪಟೆಯಾಕಾರದ ಕಲ್ಲನ್ನು ಇಡಲಾಗುತ್ತದೆ. ಇಲ್ಲಿ ಜೇಡವು ಅಲುಗಾಡಲೂ ಸಹ ಸಾಧ್ಯವಾಗದೆ ಪ್ರಾಣಬಿಡುತ್ತದೆ. ಸ್ಥಾನೀಕ ಜೀವಿಯಾಗಿರುವ ಈ ಜೇಡವನ್ನು ಹೀಗೆ ಅಮಾನುಷವಾಗಿ ಕೊಲ್ಲುವುದು ವಿಷಾಧಕರ.ಹೆಚ್ಚಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಆವಾಸಸ್ಥಾನಗಳ ನಾಶ ಇವುಗಳು ವಿರಳಗೊಳ್ಳಲು ಕಾರಣವಾಗುತ್ತವೆ. ಇವುಗಳನ್ನು ಸಂರಕ್ಷಿಸಲು ತಿಳುವಳಿಕೆ ಮತ್ತು ಜನರ ಸಹಭಾಗಿತ್ವ ಬಹು ಮುಖ್ಯ ಎಂಬುದು ಮುಂದಿನ ಅಂಕಣದಲ್ಲಿ.
–ಚರಣಕುಮಾರ್
Super guru neenu ,, tumba talent ide ninnatra , idne continue madkond hogu , devru olled madli
ಕುತೂಹಲಕಾರಿಯಾಗಿದೆ. ಧನ್ಯವಾದಗಳು.
Thank you
Jedada bagge innu kutuhalakari vishayagalive. Mundina dinagalalli bareyuve