ಇತ್ತೀಚಿಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು. ಮೋಬೈಲ್ ನೋಡಿದೆ ಅದರ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ ಎಂದು ತಿಳಿಸಿದೆ. ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ ಮರಳಿಸಿರಲಿಲ್ಲ. ಆಫೀಸಿಂದ ಮನೆಗೆ ಬಂದು ಹೆಂಡತಿಯನ್ನು ಅವರ ಮನೆಗೆ ಕಳಿಸಿದೆ. ಅಯ್ಯೋ ಮರೆತೇ ಬಿಟ್ಟಿದ್ದೆವು. ತಗೊಳ್ಳಿ ಎಂದು ಚಾರ್ಜರ್ ಕೊಟ್ಟರಂತೆ. ಅಷ್ಟೇ ಅಲ್ಲ ಮರುದಿನ ನಿನ್ನೆ ಅವರ ಮನೆಗೆ ಬಂದಿದ್ದ ನೆಂಟರೂ ಕೂಡ ಬೆಳಿಗ್ಗೆಯೇ ಊರಿಗೆ ಹೊರಟು ಹೋಗಿರದ್ದರಂತೆ. ಅದೇ ನೆಂಟರು ಮತ್ತೊಂದು ತಿಂಗಳ ನಂತರವೂ ಅವರ ಮನೆಗೆ ಬಂದರು ರಾತ್ರಿ ಸಮಯ ಅವರಿಗೆ ಚಾರ್ಜರ್ ಬೇಕಾಯಿತು. ಇವರೂ ಕೇಳಲು ನಮ್ಮನೆಗೆ ಬಂದರು. ಆಗ ನಾನು ಚಾರ್ಜರ್ ಹಾಕಿರುವೆ ಅರ್ಧ ಗಂಟೆ ಬಿಟ್ಟು ಬಂದು ತಗೆದುಕೊಂಡು ಹೋಗಿ ಎಂದೆ. ಅವರು ಅರ್ಧ ಗಂಟೆ ನಂತರ ಬರಲೇ ಇಲ್ಲ. ಬಹುಶಃ ಕಳೆದ ಸಲ ಚಾರ್ಜರ್ ತಗೆದುಕೊಂಡು ಮರಳಿಸಿದ ಘಟನೆ ಅವರಿಗೆ ನೆಂಟರು ತಿಳಿಸಿರಬಹುದೇನೋ…. . ಇಂಥಹ ಅನೇಕ ಘಟನೆಗಳು ನಮ್ಮ ಬದುಕಿನಲ್ಲಿ ನಡೆಯುತ್ತಿರುತ್ತವೆ.
ಹೊತ್ತಲ್ಲದ ಹೊತ್ತಿನಲ್ಲಿ ಕರೆಗಂಟೆ ಬಾರಿಸಿ, ಬಂದು ಬಟ್ಟಲು ಸಕ್ಕರೆ, ಕಾಫಿ, ಟೀ ಪುಡಿ ಬೇಡುವ ನೆರೆಹೊರೆಯವರು ಪ್ರತಿಯೊಂದು ಮನೆಗಿರುತ್ತಾರೆ. ಸಾಮಾಜಿಕ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ಇಂಥ ಬೇಡಿಕೆಗಳನ್ನು ಪೂರೈಸುವುದು ಅನಿವಾರ್ಯವಾಗಿಬಿಡುತ್ತದೆ.
ಹಾಗೆ ನೋಡಿದರೆ ಆಕಸ್ಮಿಕವಾಗಿ ಯಾವುದೋ ಒಂದು ವಸ್ತು ಮುಗಿದುಹೋಯಿತೆಂದಾಕ್ಷಣ ಪಕ್ಕದ ಮನೆಗೆ ಹೋಗಿ ಕೇಳುವುದು ತಪ್ಪೇನಲ್ಲ. ಆದರೆ, ಕೆಲವರು ಇದನ್ನೇ ಒಂದು ಪದ್ಧತಿಯನ್ನಾಗಿಸಿಕೊಂಡು ಬಿಡುತ್ತಾರೆ.
ಕೆಲವು ಜನ ಹೇಗಿರುತ್ತಾರೆಂದರೆ, ಬೆಳಗಿನ 6ಗಂಟೆಯಿಂದಲೇ ಕೈಯಲ್ಲಿ ಟೂತ್‍ಬ್ರಷ್ ಹಿಡಿದು ಪಕ್ಕದ ಮನೆಯತ್ತ ಗಮನಿಸುತ್ತ ನಿಂತುಬಿಡುತ್ತಾರೆ. ಪಕ್ಕದ ಮನೆಯಲ್ಲಿ ವರ್ತಮಾನ ಪತ್ರಿಕೆ ಬಂದು ಬೀಳುತ್ತಿದ್ದಂತೆ ಅದನ್ನು ತಮ್ಮದೆ ಎಂಬಂತೆ ತಂದು ಓದುತ್ತಾರೆ. ಅದನ್ನು ಓದಿ ತ್ವರಿತವಾಗಿ ತಂದುಕೊಟ್ಟರೆ ಪಕ್ಕದ ಮನೆಯಾತ ಸುಮ್ಮನಿರುತ್ತಿದ್ದನೇನೋ! ಆದರೆ ಪಕ್ಕದ ಮನೆಯಾತ ನಮ್ಮ ಪತ್ರಿಕೆ ಕೊಡಿ ಎಂದು ಬಂದು ಕೇಳಿದಾಗಲೇ ಅಸ್ತವ್ಯಸ್ತವಾದ ಪತ್ರಿಕೆಯನ್ನು ಅವರ ಕೈಗಿಡುತ್ತಾರೆ.
ಇನ್ನೂ ಕೆಲವು ಜನ ಹೇಗಿದ್ದಾರೆಂದರೆ, ತಮ್ಮ ಅಕ್ಕಪಕ್ಕ ಅಷ್ಟಿಷ್ಟು ಸಂಭಾವಿತ ಜನರಿದ್ದಾರೆಂದರೆ ಸಾಕು, ಪ್ರತಿಯೊಂದು ವಸ್ತುವಿಗೂ ಅವರ ಮನೆಯನ್ನೇ ಅವಲಂಬಿಸಿರುತ್ತಾರೆ. ಇಸ್ತ್ರೀ, ಮಿಕ್ಸಿ ಖರೀದಿಸುವುದು, ತಮಗೆ ಅಗತ್ಯವೇ ಇಲ್ಲವೆಂದುಕೊಂಡು ಪ್ರತಿನಿತ್ಯ ನೆರೆಮನೆಗೆ ಹೋಗಿ ಕೈಯೊಡ್ಡುತ್ತಿರುತ್ತಾರೆ.
ಮತ್ತೆ ಕೆಲವು ಜನ ಹೇಗಿರುತ್ತಾರೆಂದರೆ, ಪಕ್ಕದ ಮನೆಗೆ ನೆಂಟರಿಷ್ಟರು ಬಂದಾಗ ಏನಾದರೂ ನೆಪ ಮಾಡಿಕೊಂಡು ಅವರ ಮನೆಯಲ್ಲಿ ನಡೆದ ಸ್ಥಿತಿಗತಿ ತಿಳಿದುಕೊಳ್ಳಲೆಂದೇ ಹೋಗಿ, ಅವರ ನೆಮ್ಮದಿಯನ್ನು ಹಾಳು ಮಾಡುತ್ತಾರೆ.
ಇಂತಹವರ ಕಾಟಕ್ಕೆ ಬೇಸತ್ತು ಹಲವು ಜನ ಮನೆಯನ್ನೇ ಬದಲಿಸಿಬಿಡುತ್ತಾರೆ. ಕೆಲವರ ಮಾನಸಿಕ ಸ್ಥಿತಿಯೇ ಹಾಗಿರುತ್ತದೆ. ಬೇರೆಯವರಿಂದ ವಸ್ತು ಪಡೆದುಕೊಳ್ಳದೆ ಅವರಿಗೆ ಸಮಾಧಾನವೇ ಇರುವುದಿಲ್ಲ. ತಾವು ಹಾಗೆ ಮಾಡುವುದರಿಂದ ಪಕ್ಕದ ಮನೆಯವರಿಗೆ ಕಿರಿಕಿರಿಯಾಗುತ್ತದೆ ಎಂಬ ಭಾವನೆಯೇ ಅವರಿಗೆ ಬರುವುದಿಲ್ಲ.
ನಮ್ಮ ನೆರೆಹೊರೆಯವರೊಂದಿಗೆ ನಾವು ಹೇಗಿರಬೇಕು ಎಂಬುದಕ್ಕೆ ನಿಮಗೆ ಇಲ್ಲಿ ಕೆಲವು ಸಲಹೆ-ಸೂಚನೆಗಳಿವೆ. . . .
1. ಪ್ರತಿನಿತ್ಯ ಮುಂಜಾನೆ ನಿಮಗೆ ದಿನ ಪತ್ರಿಕೆ ಓದುವ ಹವ್ಯಾಸ ಇದೆಯೆಂದರೆ ನೀವೇ ಒಂದು ಪತ್ರಿಕೆ ತರಿಸಿಕೊಳ್ಳಿ. ಹಾಗೊಂದು ವೇಳೆ ನಿಮಗೆ ಆ ಪತ್ರಿಕೆಯ ಹಣ ಭರಿಸಲು ಸಾಧ್ಯವಿಲ್ಲವೆಂದಾದರೆ ಮಧ್ಯಾಹ್ನದ ಸಮಯ ಇಲ್ಲವೆ ಸಂಜೆಯ ಹೊತ್ತು ನೆರೆಮನೆಯಾತ ಓದಿ ಮುಗಿಸಿದ ನಂತರ ಕೇಳಿ ಪಡೆದುಕೊಳ್ಳಿ. ಆತ ಸಂತಸದಿಂದ ಕೊಟ್ಟಲ್ಲಿ ನಿಮಗೂ ಓದಲು ಹಿತ. ಇಲ್ಲವೆಂದಾದಲ್ಲಿ ನಿಮ್ಮೂರಿನಲ್ಲಿ ವಾಚನಾಲಯ ಸೌಲಭ್ಯವಿದ್ದಲ್ಲಿ ಹೋಗಿ ಓದಿ ಬನ್ನಿ.
2. ನಿಮಗೆ ನೆರೆಮನೆಯಿಂದ ಏನೇ ಬೇಕೆಂದರೂ ಸಮಯ ಪಾಲಿಸಿ, ಬೆಳಗಿನ ಜಾವ, ಮಧ್ಯಾಹ್ನ ಮಲಗಿದ ಹೊತ್ತಿನಲ್ಲಿ, ಪಕ್ಕದ ಮನೆಯವರ ಬಾಗಿಲು ತಟ್ಟಬೇಡಿ. ಅವರ ಮನೆಯಲ್ಲಿ ನೆಂಟರಿಷ್ಟರು ಬಂದಿದ್ದಲ್ಲಿ ಅಂತಹ ಸಮಯದಲ್ಲೂ ನೀವು ಅವರ ಮನೆಗೆ ಹೋಗಬೇಡಿ. ಪಕ್ಕದವರ ಗೌಪ್ಯತೆಗೆ ಬೆಲೆ ಕೊಡಿ.
3. ಇನ್ನು ನಿಮ್ಮ ಮನೆಯಲ್ಲಿ ಫೋನ್ ಇರದಾಗ, ಪಕ್ಕದ ಮನೆಯ ನಂಬರನ್ನು ನಿಮಗೆ ಬೇಕಾದವರಿಗೆ, ಸಂಬಂಧಿಗಳಿಗೆ ಕೊಟ್ಟಿರುತ್ತೀರಿ. ಆದರೆ, ಅವರಿಗೆ ಫೋನ್ ಮಾಡಲು ನಿಗದಿತ ವೇಳೆ ನೀಡಿ. ರಾತ್ರಿ ಹೊತ್ತಿನಲ್ಲಿ ಅನವಶ್ಯಕವಾಗಿ ಫೋನ್ ಮಾಡಿ, ನಿಮ್ಮನ್ನು ಅವರ ಮನೆಗೆ ಕರೆಸುವಂತೆ ಮಾಡಬೇಡಿ. ಅಷ್ಟೇ ಅಲ್ಲ, ಅನವಶ್ಯಕ ಸಂಗತಿಗಳಿಗೂ ಫೋನ್ ಮಾಡಬೇಡಿ ಎಂದು ನೀವು ಪೋನ್ ನಂಬರ ಕೊಟ್ಟ ನಿಮ್ಮ ಸಂಬಂಧಿಕರಿಗೆ ಹೇಳಿ. ಅಂದಾಗ ಪಕ್ಕದವರ ಮನೆಗೆ ನಿಮ್ಮ ಫೋನ್ ಕರೆ ಬಂದರೂ ಅವರು ನಿಮ್ಮನ್ನು ಸೌಜನ್ಯಯುತವಾಗಿ ಕರೆಯುತ್ತಾರೆ.
4. ಏನನ್ನಾದರೂ ಬೇಡಿ ತರುವುದಷ್ಟೇ ಅಲ್ಲ, ಅದನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದನ್ನು ನಿಮ್ಮ ಹವ್ಯಾಸವಾಗಿಸಿಕೊಳ್ಳಿ.
5. ಒಂದು ಬಟ್ಟಲ ಟೀ, ಸಕ್ಕರೆ, ಎಣ್ಣೆ, ಹಾಲು, ಏನೇ ಆಗಲಿ ತಂದಿದ್ದರೆ ನಿಮ್ಮ ಮನೆಗೆ ನೀವು ಆ ವಸ್ತು ತಂದ ತಕ್ಷಣ ಅವರಿಗೆ ಮರಳಿಸಿ, ಜೊತೆಗೆ ಏನೇ ವಸ್ತು ನಿಮ್ಮ ಮನೆಯಲ್ಲಿ ಮುಗಿಯುವ ಮುಂಚೆಯೇ ಸಂಗ್ರಹಿಸುವ ಪ್ರವೃತ್ತಿ ನಿಮ್ಮಲ್ಲಿರಲಿ. ಅಂದರೆ ಇನ್ನೊಂದು ಸಲ ಬೇಡಲು ನಿಮಗೆ ಸಂಕೋಚವಾಗಬಹುದು.
6. ಬೇಡುವುದೇ ನಿಮ್ಮ ಹವ್ಯಾಸವಾಗಬಾರದು. ಯಾವಾಗಲಾದರೊಮ್ಮೆ ಬೇಡಿದರೆ ಅದು ಅನಿವಾರ್ಯ. ಅವರೂ ಬೇಡಿದಾಗ ಕೊಡಿ, ಹೀಗೆ ಕೊಡುವ – ಪಡೆದುಕೊಳ್ಳುವ ಉತ್ತಮ ಬಾಂಧವ್ಯ ನಿಮ್ಮದಾಗಿಸಿಕೊಳ್ಳಿ.
7. ನೀವು ಮೋಬೈಲ್ ಬಳಸುತ್ತಿದ್ದರೆ ಬೇರೆ ಊರಿಗೆ ಹೋಗುವಾಗ ಅದಕ್ಕೊಂಡು ಚಾರ್ಜರ್ ಜೊತೆಗಿರಿಸಿಕೊಳ್ಳಿ. ನೀವು ಹೋಗಿರುವ ಸ್ಥಳದಲ್ಲಿ ನಿಮ್ಮ ಮೋಬೈಲ್‍ಗೆ ಬೇಕಾದ ಚಾರ್ಜರ್ ಲಭ್ಯವಾಗಬಹುದು ಅಥವ ಲಭ್ಯವಾಗಲಿಕ್ಕಿಲ್ಲ. ಸಂಪರ್ಕ ಸಾಧನ ನಮಗೆ ಅವಶ್ಯಕವಿರುವಾಗ ಅದಕ್ಕೆ ಪೂರಕ ವಸ್ತುಗಳು ನಮ್ಮ ಬಳಿ ಇರುವಂತೆ ನೋಡಿಕೊಳ್ಳುವುದೂ ನಮ್ಮ ಕರ್ತವ್ಯವಾಗಲಿ.
ಬೇರೆಯವರಿಗೆ ನೆರವು ಪಡೆಯುವುದಷ್ಟೇ ಜೀವನವಲ್ಲ. ಸಮಯ ಬಂದಾಗ ನೆರೆಹೊರೆಯವರಿಗೆ ನೆರವಾಗುವುದು ಸಹ ನಿಮ್ಮ ಕರ್ತವ್ಯವೆಂದು ಭಾವಿಸಿ. ಅದನ್ನು ಸಾಮಾಜಿಕ ಋಣವೆಂದು ಭಾವಿಸಿಕೊಳ್ಳಿ. ಸಹಕಾರವಿರಲಿ, ಅದು ಅಸಹಕಾರವಾಗದಿರಲಿ.
ವೈ. ಬಿ. ಕಡಕೋಳ(ಶಿಕ್ಷಕರು)