ನೆರಳು-ಬೆಳಕಿನ ಮಾಯಾಲೋಕದ ಮಹಿಳಾ ಭಾರತ: ಹಿಪ್ಪರಗಿ ಸಿದ್ಧರಾಮ, ಧಾರವಾಡ

ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ಜನಸಾಹಿತ್ಯ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಪ್ರದರ್ಶನ ಕಂಡಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಕೆ.ಮಾಧವನ್ ಅವರ ಮಲೆಯಾಳಿ ಮೂಲ ಕೃತಿಯ ಅಭಿಪಾಷ್‍ರವರ ಕನ್ನಡ ರೂಪಾಂತರವಾದ “ಮಹಿಳಾ ಭಾರತ” ನಾಟಕವನ್ನು ಉಡುಪಿಯ ರಥಬೀದಿ ಗೆಳೆಯರು ಡಾ.ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಹವ್ಯಾಸಿ ಕಲಾವಿದರೆಂಬ (ವಿವಿಧ ಕೋರ್ಸಿನ ವಿದ್ಯಾರ್ಥಿಗಳು) ಭಾವನೆ ಬರದಂತೆ ಪ್ರತಿ ಸನ್ನಿವೇಶದಲ್ಲಿ ಕಣ್ಣು ಬಿಟ್ಟು ನೋಡುವಂತೆ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು. 

ಗಾಢವಾದ ಬೆಳಕಿನ ಪರಿಣಾಮದ ಜೊತೆಗೆ ದ್ವನಿಮುದ್ರಿತ ಸಂಗೀತದ ಹಿನ್ನಲೆ ಜೊತೆಗೆ ರಂಗಸಜ್ಜಿಕೆ ಮತ್ತು ವೇಷಭೂಷಣಗಳ ಅಲಂಕಾರ. ಕಲಾವಿದರು ಅನುಭವಿಸಿ ಒಪ್ಪಿಸಿದ ಗಂಭೀರ ಸಂಭಾಷಣೆಯ ಹದಭರಿತ ಅಭಿನಯ. ‘ಮಹಾಭಾರತ ಅಂದರೆ ಒಂದು ಹೆಂಗಸು, ಮತ್ತೊಂದು ಚಕ್ರ’ ಎಂಬ ಮಾದರಿಯ ಸಂಭಾಷಣೆಗಳನ್ನು ಮೆಲುಕು ಹಾಕುವ ಮೂಲಕ ಪ್ರೇಕ್ಷಕರು ಮಹಾಭಾರತವನ್ನು ತಮ್ಮ ಗ್ರಹಿಕೆಗೆ ನಿಲುಕಿದಷ್ಟು ಕುತೂಹಲದಿಂದ ಅನುಭವಿಸಿದರು. ‘ವರ್ತಮಾನದ ಸಂದರ್ಭದಲ್ಲಿ ದೇಶದ ರಂಗಭೂಮಿಯು ತಾಂತ್ರಿಕ ಕೌಶಲಗಳ ಶೋಧದಲ್ಲಿಯೇ ಕಾಲ ಕಳೆಯುತ್ತಿದ್ದು ಸಾಹಿತ್ಯ ಅಗಾಧ ಶಕ್ತಿಯನ್ನು ಧಾರೆ ಎರೆಯುವ ಅಗತ್ಯವಿದೆ ಮತ್ತು ಈ ದೇಶದ ಭಾಷೆಯಾಗಿರುವ ಮಹಾಭಾರತವನ್ನು ಮಹಿಳಾ ನೆಲೆಯಿಂದ ಮುರಿದು ಕಟ್ಟಿದ ಕೆ.ಮಾಧವನ್ ಅವರ ಮಹತ್ವದ ಕೃತಿಯನ್ನು ನಿರ್ದೇಶನ ಮಾಡುವುದು ಆರಂಭದಲ್ಲಿ ಸವಾಲಿನ ಕೆಲಸವಾಗಿತ್ತು. ಇದುವರೆಗಿನ ನಾನು ನಿರ್ದೇಶನ ಮಾಡಿದ ನಾಟಕಗಳಲ್ಲಿಯೇ ಹೆಚ್ಚು ತಲೆ ಕೆಡಿಸಿದ ನಾಟಕವಿದು’ ಎಂದು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುವ ನಾಟಕದ ನಿರ್ದೇಶಕ ಡಾ.ಶ್ರೀಪಾದ ಭಟ್ಟರು ನಾಡಿನಲ್ಲೇಡೆ ರಂಗಭೂಮಿಯಲ್ಲಿ ವಿವಿಧ ಪ್ರಯೋಗಗಗಳ ಮೂಲಕ ಹೆಸರಾದವರು. 

                   ಪೋಟೊ : ರಾಮಚಂದ್ರ ಕುಲಕರ್ಣಿ (ಆರ್‍ಕೆ)

ಎಂಟು ಮಹಿಳಾ ಕಲಾವಿದರು ಮತ್ತು ಇಬ್ಬರು ಪುರುಷ ಕಲಾವಿದರನ್ನೊಳಗೊಂಡ ಈ ನಾಟಕವು ತಾಯಿಯೊಬ್ಬಳು ಮಹಾಭಾರತದ ಕಥೆಯನ್ನು ತನ್ನ ಮಗಳಿಗೆ ಹೇಳುತ್ತಿರುವಾಗ ಆ ಕಥೆಯಲ್ಲಿನ ವಿರೋಧಾಭಾಸಗಳನ್ನು ಮಗಳು ಪ್ರಶ್ನಿಸುತ್ತಲೇ ಆ ಪಾತ್ರಗಳನ್ನು ಮೈಮೇಲೆ ಆವಾಹಿಸಿಕೊಂಡು ಭೂತಕಾಲದ ಘಟನೆಗಳು ವರ್ತಮಾನದಲ್ಲಿ ಎದುರು-ಬದುರಾಗುವಂತೆ ಸಂವಹನ ನಡೆಸುತ್ತಾಳೆ. ಮಹಾಭಾರತದ ಅಂಬಿಕೆ, ಅಂಬಾಲಿಕೆ, ದ್ರೌಪದಿ, ಕುಂತಿ, ಸುಭದ್ರೆ, ಗಾಂಧಾರಿ, ಸತ್ಯವತಿ, ಹಿಡಿಂಬೆ ಮುಂತಾದ ಪಾತ್ರಗಳು ತಮಗಾದ ನೋವು, ಅನ್ಯಾಯಗಳನ್ನು ವಿವರಿಸುತ್ತಲೇ ‘ನಮ್ಮನ್ನು ಸಂತೈಸುವವರು ಯಾರು?’ ಎನ್ನುವ ಮಹಿಳಾ ಆಕ್ರಂಧನಕ್ಕೆ ಕೊನೆಯೇ ಇಲ್ಲವೇ? ಎಂಬುದು ಇಂದಿಗೂ ಮುಂದುವರೆಯುತ್ತಿರುವ ಭಾಗವಾಗಿ ಗೋಚರಿಸುವ ಭಾವನೆಯನ್ನು ಹುಟ್ಟಿಸುತ್ತದೆ. ನಾಟಕದ ಆರಂಭದಿಂದಲೂ ರಂಗದ ಒಂದು ಕಡೆಗೆ ನೇತಾಡುವ ತೊಟ್ಟಿಲು, ತಾಯಿ ಮಡಿಲ ತಣ್ಣಗಿನ ಅನುಭವದ ಸಂಕೇತವಾಗಿ ನಾಟಕದ ಕೊನೆಯವರೆಗೂ ನೇತಾಡುತ್ತಿತ್ತು. ಅಳಿದುಳಿದ ಮನೆಯೊಂದರ ಮುಖ್ಯದ್ವಾರದ  ಮುರಿದು ನಿಂತ ಬಾಗಿಲ ತುಂಡುಗಳು ಮಹಿಳಾ ಆಕ್ರಂಧನದ ಅವಶೇಷಗಳಂತೆ ಕಂಡು ಬಂದವು. ಪ್ರೇಕ್ಷಕರೊಡನೆ ಸಂವಾದಕ್ಕಿಳಿಯುವ ‘ಮಹಿಳಾ ಭಾರತ’ ನಾಟಕ ಪ್ರದರ್ಶನ ಧಾರವಾಡದ ಪ್ರೇಕ್ಷಕರಿಗೆ ತಣ್ಣಗಿನ ಚಳಿಯಲಿ ಕುತೂಹಲದ ಗ್ರಹಿಕೆಯೊಂದಿಗೆ ಬೆಚ್ಚನೆಯ ಅನುಭವ ನೀಡಿದ್ದು ಸುಳ್ಳಲ್ಲ. ಈ ನಾಟಕವು ಮುಂದಿನ ದಿನಗಳಲ್ಲಿ ಮಹಿಳಾವಾದಿ ನೆಲೆಯ ಒಂದು ಅಪರೂಪದ ರಂಗಪ್ರಯೋಗವಾಗುತ್ತಾ, ಹೆಚ್ಚು ಸಂವಾದಗೊಂಡು ದಾಖಲೆಯಾಗಲಿ ಎಂಬುದು ನಿರ್ದೇಶಕರಾದಿಯಾಗಿ ಸರ್ವ ಸಂಘಟಕರ ಆಶಯ. 

* * * * *

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x