ಮಧ್ಯಾಹ್ನದ ಬಿಸಿಲಿನಲ್ಲಿ , ಛತ್ರಿ ಹಿಡಿದು ಒಂದಷ್ಟು ದೂರ ಸಾಗಿದ್ದೆ. ರಸ್ತೆ ಬದಿಯಲ್ಲಿ ಟೆಂಟು ಹಾಕಿಕೊಂಡು , ಅರ್ಧ ಹರಿದ ಬಟ್ಟೆಯಲ್ಲಿದ್ದ ಹೆಂಗಸೊಬ್ಬಳು ರೊಟ್ಟಿ ಸುಡುತ್ತಿದ್ದರೆ, ಪಕ್ಕದಲ್ಲಿಯೇ ಇದ್ದ ಮರಳು ರಾಶಿಯಲ್ಲಿ ಅವಳ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.. ಆ ನಗುವು ಬಡತನವನ್ನೆಲ್ಲಾ ಮರೆಮಾಚಿತ್ತು. ಖುಷಿಯಿಂದಿರಲು ದುಡ್ಡು ಬೇಕೆಂಬುದಿಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳುವಂತಿತ್ತು.. ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ನೋಡುತ್ತಿದ್ದವಳಿಗೆ ಎಲ್ಲಾ ಇದ್ದೂ ಖುಷಿಯಿಂದಿರಲು ಸಾಧ್ಯವಿಲ್ಲ.. ಏನೂ ಇಲ್ಲದೇ ಇರುವ ಇವರು ಅದೆಷ್ಟು ನಗುತ್ತಿದ್ದಾರಲ್ಲ ಎಂದೆನಿಸಿದ್ದು ಸುಳ್ಳಲ್ಲ.
ಜೀವನದ ಒಂದೊಂದು ಖುಷಿಗೂ ದುಃಖಕ್ಕೂ ಮನಸ್ಸೇ ಮುಖ್ಯವಾದ ಕಾರಣ.. ಹೇಗಿದ್ದೀರಾ ಎಂಬ ಪ್ರಶ್ನೆಗೆ ಚನ್ನಾಗಿದ್ದೀನಿ ಎಂದು ಹೇಳುವುದು ಒಂದು ತರಹದ ಜನಾಂಗದ ಉತ್ತರವಾಗಿದ್ದರೆ, ಹೇಗೋ ಜೀವನ ನಡೆಸುತ್ತಿದ್ದೇವೆ. ಎಂಬ ಉತ್ತರ ಇನ್ನೊಂದು ಕಡೆಯವರಿಂದ ಬರುತ್ತದೆ..ಖುಷಿ ಎಂಬುದುಒಂದು ಮನಸ್ಥಿತಿ ಎಂದರೆ ತಪ್ಪಾಗಲಾರದು. ಚಿಕ್ಕಪುಟ್ಟ ಸಂಗತಿಗಳಲ್ಲಿ ಮನಸ್‌ಪೂರ್ತಿಯಾಗಿ ಖುಷಿ ಪಡುವ ಜನಾಂಗ ಒಂದು ಕಡೆಯಿದ್ದರೆ, ಕಣ್ಣಮುಂದೆ ಇರುವ ಸಾವಿರಾರು ಖುಷಿಯ ವಿಚಾರಗಳನ್ನೇ ಬಿಟ್ಟು, ಬದುಕು ಬೋರಿಂಗ್ ಎಂದು ಆಗಸವೇ ತಲೆಯ ಮೇಲೆ ಬಿದ್ದಂತೆ ಕುಳಿತುಕೊಳ್ಳುವ ಜನರಿಗೇನೂ ಕಡಿಮೆಯಿಲ್ಲ. ಬದುಕು ಒಡ್ಡುವ ಹಲವಾರು ಪರೀಕ್ಷೆಗಳಲ್ಲಿ ಪಾಸ್ ಆಗುವುದು ಅಷ್ಟು ಸುಲಭವೇನೂ ಅಲ್ಲ.. ಕಷ್ಟಪಟ್ಟುಓದಿದರೆ, ಯಾವ್ಯಾವುದೋ ಕಷ್ಟದ ಪರೀಕ್ಷೆಗಳನ್ನು ಪಾಸ್ ಮಾಡಿಬಿಡಬಹುದಾದರೂ, ಈ ಜೀವನವೆಂಬ ಪರೀಕ್ಷೆ ತಿಳಿದಷ್ಟು ಸುಲಭವಲ್ಲ.. ಮತು ಇಂತಿಷ್ಟೇ ಸಿಲೇಬಸ್ ಎಂಬ ಮಿತಿಯೂ ಈ ಬದುಕಿನ ಪರೀಕ್ಷೆಗಳಿಗಿಲ್ಲ. ರ್‍ಯಾಂಕ್ ಗಳಿಸುವುದು ಹೇಗೆ..೩೦ ದಿನದಲ್ಲಿ ರ್‍ಯಾಂಕ್ ಗಳಿಸಿ ಈ ತರಹದ ಯಾವುದೇ ಪುಸ್ತಕಗಳು, ಇಲ್ಲಿ ಉಪಯೋಗಕ್ಕೆ ಬರಲಾರದು.. ಸಿಗುವ ಸಣ್ಣ ಪುಟ್ಟ ನಲಿವಿನಲ್ಲಿ, ಮನಸ್ಸನ್ನು ಎಷ್ಟು ಖುಷಿಯಾಗಿ ಇರಿಸುತ್ತೇವೆಂಬುದು ನಮ್ಮ ಮೇಲೆ ನಿರ್ಧಾರವಾಗಿರುತ್ತದೆ. .ಖುಷಿಯಾಗಿ ಇರಬೇಕು ಎಂಬುದೊಂದೇ ಇಲ್ಲಿ ಮುಖ್ಯವಾದವುಗಳಾಗಿವೆ..
ಬೆಳಗ್ಗೆಯ ಸೂರ್‍ಯೋದಯದಲ್ಲಿ ಮಸುಕಿನಂತಹ ಖುಷಿಗಳಿವೆ..ಟಿ.ವಿಯಲ್ಲಿ ಬರುವ ಜೋಕುಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಖುಷಿಗಳಿವೆ..ಎಷ್ಟೋ ದಿನದ ನಂತರ ಬಾಲ್ಯದ ಗೆಳತಿ ಸಿಕ್ಕಿದಾಗ, ಸಿಟ್ಟು ಮಾಡಿಕೊಂಡು ಹೋದ ಕ್ಲಾಸುಮೇಟು ಮತ್ತೆ ಬಂದು ಸಾರಿ ಕೇಳಿದಾಗ, ಸಣ್ಣ ಪುಟ್ಟ ಕಾರಣಗಳಲ್ಲಿಯೂ, ನಗುವಿನಂತೆ ಅರಳಿದ ಭಾವಗಳಲ್ಲಿಯೂ ಖುಷಿಯಿದೆ.. ಗುಂಪುಗುಂಪಾದ ಸ್ನೇಹಿತರು ಜೊತೆಗಿದ್ದರೆ, ಬೇಸರಗಳೆಲ್ಲಾ ಒಂದಷ್ಟು ಹೊತ್ತು ಗಫ್‌ಚಿಫ್ ಎಂದು ಕುಳಿತುಕೊಳ್ಳೋದಂತೂ ಸತ್ಯ..ನಾವಂದುಕೊಂಡಂತೆಯೇ ನಮ್ಮಿಷ್ಟದಂತೆಯೇ ಬದುಕು ಸಿಗುತ್ತದೆಯೋ ಇಲ್ಲವೋ, ಆದರೆ ನಮ್ಮ ಪಾಲಿಗೆ ಬಂದಿದ್ದನ್ನು, ಸಿಕ್ಕಿದ್ದನ್ನು ನಮ್ಮದೇ ಎಂದುಕೊಂಡು ಖುಷಿಯಾಗಿರೋದು ಒಂದು ಮನಸ್ಥಿತಿ.. ಬದುಕಿನ ಬಳಿ ಅದನ್ನು ಕೊಡು, ಇದನ್ನು ಕೊಡು ಎಂದು ಕನಸನ್ನು ಕೇಳಿರುತ್ತೇವೆ ನಿಜ.. ಕೇಳಿದ್ದು ಸಿಗದಿದ್ದಾಗ, ಬಯಸಿದ್ದು ದೊರೆಯದಿದ್ದಾಗ ಜೀವನ ಮುಗಿದೇ ಹೋಯಿತೆಂದು ತಿಳಿದುಕೊಳ್ಳುವುದು ಯಾವ ಲೆಕ್ಕದ ನ್ಯಾಯಅಲ್ಲವಾ..? ಬದುಕುಕೊಟ್ಟಿದ್ದೇ ಇಷ್ಟಾದರೂ, ಇದರಲ್ಲಿಯೇ ನೂರು ಪಾಲು ಖುಷಿಯನ್ನು ಕಾಣುತ್ತೇನೆ ಎಂಬ ಖುಷಿಯು, ಮನಸ್ಸಿನ ರೀತಿಯನ್ನು ಮೇಲ್ಮುಖವಾಗಿ ಕರೆದೊಯ್ಯುತ್ತದೆ..
ಬೇಸರಗಳು, ದುಃಖಗಳು ನಮ್ಮೊಳಗಿನ ಖುಷಿಗಳು ಇವೆಲ್ಲವೂಒಂದುರೀತಿಯಲ್ಲಿ ಮನಸ್ಸಿನ ಮೇಲೆ ಸವಾರಿ ನಡೆಸುತ್ತಿದ್ದರೂ, ಅದರೆಲ್ಲವನ್ನೂ ಹಿಡಿತದಲ್ಲಿರಿಸುವ ವಾರಸುದಾರರೂ ಕೂಡ ನಾವೇ ಆಗಿದ್ದೇವೆ. ೧ ರೂಪಾಯಿ ನಮ್ಮ ಬಳಿಯಿದೆ ಎಂದಾದರೆ ೨ ರೂಪಾಯಿ ಇರುವವನನ್ನು ನೋಡಿ ಅಸೂಯೆ ಪಟ್ಟುಕೊಳ್ಳುವುದಕ್ಕಿಂತ, ೫೦ ಪೈಸೆ ಇರುವವನನ್ನು ನೋಡಿ ಖುಷಿಪಡುವುದು ಒಂದು ರೀತಿಯಲ್ಲಿ ದೊಡ್ಡ ಗುಣ. ಬಹು ಜನರು ದೇವರನ್ನು ದೇವರೇ ನನಗೆ ಕಷ್ಟವನ್ನೇ ಕೊಡಬೇಡ ಎಂದು ಬೇಡಿಕೊಂಡರೆ, ಅಸಾಮಾನ್ಯ ವ್ಯಕ್ತಿ ಮಾತ್ರ ದೇವರೇ ನನಗೆ ಕಷ್ಟವನ್ನು ಎದುರಿಸುವ ಶಕ್ತಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಾನಂತೆ… ಸಾಮಾನ್ಯರಲ್ಲಿಯೇ ಸಾಮಾನ್ಯನಾದರೂ ಖುಷಿಯಾಗಿರಲು, ಅಸಾಮಾನ್ಯ ವ್ಯಕ್ತಿಯಾಗಬೇಕೆಂಬುದೇನೂ ಇಲ್ಲವಲ್ಲ.. ಖುಷಿಯೆಂಬುದೊಂದು ಭಾವ.. ರಸ್ತೆಯ ಬಳಿಯಲ್ಲಿ ಡಾಂಬರು ಹಾಕುವವರ ಮಕ್ಕಳು ಖುಷಿಯಾಗಿ ಆಟವಾಡುವುದನ್ನು ನೋಡಿದರೆ, ಖುಷಿ ಎಂಬುದೊಂದು ಮನಸ್ಥಿತಿ ಎಂದು ಎನಿಸದೇ ಇರಲಾರದು.. ಹುಟ್ಟುವಾಗಲೇ ಚಿನ್ನದ ತೊಟ್ಟಿಲಲ್ಲಿ ತೂಗಿಸಿಕೊಳ್ಳುವವರೂ ಇಷ್ಟು ಖುಷಿಯಿಂದ ಇರಲಾರರೇನೋ..
ಎಲ್ಲ ಇಲ್ಲಗಳ ನಡು ಇದೆಯೆಂಬ ಭರವಸೆಯ ಭಾವವೊಂದು ಕಿಡಿಯಾಗಿ ಎದ್ದು ಬರುತ್ತದೆ.
ಬರಹ: ಪದ್ಮಾ ಭಟ್.
ಎಸ್.ಡಿ.ಎಂ ಕಾಲೇಜ್ ಉಜಿರೆ..
*****
ನಿಜ. ಖುಷಿ ಅಂಗಡಿಯಲ್ಲಿ ಯಾ ಇತರರಿಂದ ಪಡೆದು ಕೊಳ್ಳುವ ಸೊತ್ತಲ್ಲ. ಅದು ನಮ್ಮಲ್ಲಿ ಮೊಳಕೆಯೋಡೆಯಬೇಕು. ಏರು ಗದ್ದೆಯಲ್ಲಿ ಒಂದು ಬೆಳೆ ತಗ್ಗು ಗದ್ದೆಯಲ್ಲಿ ಮೂರು ಬೆಳೆ ಅನ್ನುವ ಮಾತೊಂದಿದೆ. ನಾವು ಯಾವತ್ತೂ ಕೆಳಗೆ ಅಂದರೆ ನಮ್ಮ ಕೈಯಲ್ಲಿ ಇರುವುದನ್ನು ನೋಡ ಬೇಕೇ ಹೊರತು ಮೇಲೆ ಇನ್ನೊಬ್ಬರ ಕೈಯಲ್ಲಿ ಇದ್ದದ್ದನ್ನು ಅಲ್ಲ. ಬರಹದ ವಿಷಯ ಆಶಯ ಎರಡೂ ಚೆನ್ನಾಗಿದೆ.