ತೊದಲು ನುಡಿಯಿಂದ ಮೊದಲುಗೊಂಡು ನನ್ನ ಜೀವನ ರೂಪಿಸಿಕೊಳ್ಳುವವರೆಗೂ ನನ್ನನ್ನು ತಿದ್ದಿ ತೀಡಿ ನನಗೆ ವಿದ್ಯಾದಾನ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೂ ಹಾಗು ತಂದೆ ತಾಯಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ಒಬ್ಬ ಶಿಕ್ಷಕನಾಗಿ ಈ ದಿನ ನನ್ನ ನೆಚ್ಚಿನ ಶಿಕ್ಷಕರೊಬ್ಬರನ್ನು ನೆನೆ ನೆನೆದು ನನ್ನ ಪೂಜ್ಯ ಪ್ರಣಾಮಗಳನ್ನು ತಿಳಿಸಲು ಇಚ್ಚಿಸುತ್ತೇನೆ.
ಸಾವಿರದ ಒಂಬೈನೂರ ಎಂಬತ್ತೇಳರಲ್ಲಿ ನಾನು ಶಾಲೆಗೆ ಸೇರಿದ್ದು. ಶಿಕ್ಷಕರು ನಿವೃತ್ತಿಯ ಹಂತ ತಲುಪಿದ್ದರೂ ಬೆಳಿಗ್ಗೆ ನನ್ನ ಸ್ಲೇಟಿನಲ್ಲಿ ಮೂರು ಅಕ್ಷರಗಳನ್ನು ಬರೆದುಕೊಟ್ಟರೆ ಸಂಜೆಯವರೆಗೂ ಅದೇ ಅಕ್ಷರಗಳ ಕಲಿಕೆ ಅಷ್ಟೆ. ಮನೆಗೆ ಬಂದ ನಂತರ ಸಂಜೆ ಅಪ್ಪನವರು ಅಕ್ಷರಗಳನ್ನು ಅಕ್ಷರಗಳನ್ನು ಕಲಿಸುತ್ತಿದ್ದರು. ಶಾಲೆಯ ಕಲಿಕೆ ಅಷ್ಟಕಷ್ಟೆ. ಎರಡನೇ ತರಗತಿಯ ಮಧ್ಯ ಭಾಗದವರೆಗೂ ಅಕ್ಷರ, ಅಂಕಿಗಳ, ಜ್ಞಾನವಿದ್ದರೆ (ಅದೂ ತಂದೆ ತಾಯಿ ಕಲಿಸಿದ್ದಕ್ಕೆ) ಬೇರೇನೂ ಗೊತ್ತಿರಲಿಲ್ಲ. ಇಂತಹ ಸಂಧರ್ಭದಲ್ಲಿ ಇದ್ದ ಶಿಕ್ಷಕರು ನಿವೃತ್ತರಾಗಿ ಅವರ ಜಾಗದಲ್ಲಿ ನನ್ನ ಕಲಿಕಾ ಜೀವನದಲ್ಲಿ ಬಂದ ಶಿಕ್ಷಕರು ಕೆಎನ್ ಬೆಟ್ಟಯ್ಯನವರು.
ಮೂಲತಃ ತುಮಕೂರು ಜಿಲ್ಲೆಯ ಹಿರೇಹಳ್ಳಿ ಬಳಿಯ ಕೋಳೀಹಳ್ಳಿಯವರು. ಇವರು ಬಂದ ನಂತರವೇ ನನ್ನ ಕಲಿಕೆಯಲ್ಲಿ ಮಹತ್ತರವಾದ ಬದಲಾವಣೆಯಾದದ್ದು. ನನ್ನ ಕಲಿಕೆಯ ದಾಹಕ್ಕೆ ಸೂಕ್ತ ಪ್ರೋತ್ಸಾಹ ನೀಡಿ ಸಲಹಿ ಇಂದು ನಾನು ಇರುವ ಸ್ಥಿತಿಗೆ ಅಂದು ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ಶಿಕ್ಷಕರಿವರು. ನಾನು ಮಾತ್ರವಲ್ಲ. ಮೂರು ವರ್ಷ ಅವರ ಬಳಿ ಕಲಿತ ಎಲ್ಲಾ ವಿದ್ಯಾರ್ಥಿಗಳು ಇಂದು ಅವರನ್ನು ನೆನೆಯುತ್ತಾರೆ. ಬರೀ ಅಕ್ಷರ ಅಂಕಿಗಳ ಜ್ಞಾನವಿದ್ದ ನಮಗೆ ನಾಲ್ಕನೇ ತರಗತಿ ಉತ್ತೀರ್ಣರಾಗುವ ವೇಳೆಗೆ ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಹಾಗೂ ಪಠ್ಯೇತರ ವಿಷಯಗಳ ಅರಿವು ಮೂಡಿಸುವಲ್ಲಿ, ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ಕೈಗೊಂಡ ಕ್ರಮ ಪಟ್ಟ ಶ್ರಮ ಪೂಜಿಸಲರ್ಹವಾದದ್ದು.
ಇನ್ನೂ ಗೃಹಾಸ್ಥಾಶ್ರಮ ಪ್ರವೇಶ ಮಾಡದೆ ಇದ್ದ ಅವರು ಶಾಲೆ ಮುಗಿದ ನಂತರವೂ ಕೆಲ ಮಕ್ಕಳೊಂದಿಗೆ ನನ್ನನ್ನು ರಾತ್ರಿಯೆಲ್ಲಾ ಅವರ ಜೊತೆಯಲ್ಲೇ ಉಳಿಸಿಕೊಳ್ಳುತ್ತಿದ್ದರು. ಸಂಜೆ ಆರು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ವೇಳಾ ಪಟ್ಟಿ ಸಿದ್ದಪಡಿಸಿ ಅದರಂತೆಯೇ ನಮಗೆ ಭೋದಿಸುತ್ತಿದ್ದರು. ಒಟ್ಟಾರೆ ನನಗೆ ಅವರು ನೀಡಿದ ಮೂರು ವರ್ಷಗಳ ಕ್ರಮ ಶಿಕ್ಷಣವೇ ಇಂದು ನಾನು ನಮ್ಮ ಮಕ್ಕಳಿಗೆ ಭೋದಿಸಲು ಪ್ರೇರಣೆಯಾಗಿದೆ. ಅವರು ಹಾಕಿಕೊಟ್ಟ ನಡೆದು ತೋರಿಸಿಕೊಟ್ಟ ದಾರಿಯಲ್ಲಿಯೇ ನಾನು ನಡೆದು ಅವರಂತೆಯೇ ಮುಂದೆ ನಾನು ನನ್ನ ಮಕ್ಕಳ ಬಾಯಲ್ಲಿ ಒಬ್ಬ ಉತ್ತಮ ಶಿಕ್ಷಕನೆಂಬ ಹೆಸರು ಗಳಿಸಬೇಕೆಂಬ ಹಂಬಲದಿಂದ ಭೋದಿಸುತ್ತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದಲೂ ನಾನು ಅವರನ್ನು ಪತ್ರ, ದೂರವಾಣಿಯಲ್ಲಿ ಮತ್ತು ಮುಖಾ ಮುಖಿ ಭೇಟಿ ಮಾಡುತ್ತಾ ಅವರ ಮೆಚ್ಚಿನ ಶಿಷ್ಯನಾಗಿ ಇಂದಿಗೂ ಉಳಿದಿದ್ದೇನೆ.
ಸರ್, ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ನನ್ನ ಪೂಜ್ಯ ನಮನಗಳೊಂದಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಇತಿ
ಟಿ ಕೆ ನಾಗೇಶ್
ನಿಮ್ಮ ಗುರುಗಳ ಮೇಲಿನ ಅಭಿಮಾನ ಕಂಡು ಖುಶಿ ಆಯಿತು. ನೀವು ಸಹ ಉತ್ತಮ ಶಿಕ್ಷಕನಾಗಿ, ಹಲವಾರು ಉತ್ತಮ ಪ್ರಜೆಗಳನ್ನು ತಯಾರು ಮಾಡಿ.