ಲೇಖನ

ನೆನಪುಗಳ ಮಾಲೀಕ………: ರಘು ಕ.ಲ.,


ಶಿಕ್ಷಣ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಪಡೆದರೆ ಬಹಳ ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ, ಸೃಜನಶೀಲತೆ, ನೃತ್ಯ, ಸಂಗೀತ …… ಹೀಗೆ ಇನ್ನೂ ಹತ್ತಾರು ವಿಚಾರಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಬಹಳ ಹತ್ತಿರವಾದದ್ದು, ಅನುಕೂಲವಾದದ್ದು ನಗರ ಪ್ರದೇಶ ಎಂಬ ಹಂಬಲದಲ್ಲಿಯೋ, ಬೆಂಬಲದಲ್ಲಿಯೋ ಏನೋ ಗ್ರಾಮೀಣ ಪ್ರದೇಶದ ಕೆಲವರು ನಗರದೆಡೆಗೆ ಮೊರೆ ಹೋಗುತ್ತಿದ್ದಾರೆ. ಎಲ್ಲವೂ ಸಿಗುತ್ತದೆಂಬುದು ಅವರ ಕಲ್ಪನೆಯಷ್ಟೇ ಸರಿ. ಸರಿಯೋ? ತಪ್ಪೋ? ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅವರವರ ಮನಸ್ಸಿನಂತೆ ಅವರವರ ಆಲೋಚನೆಗಳು. ಅಲ್ಲವೇ? ನಗರ ಪ್ರದೇಶದ ಅನುಭವ ಹೇಗೋ ಏನೋ ಆದರೆ ಗ್ರಾಮೀಣ ಪ್ರದೇಶದಲ್ಲಿ ನನಗಾದ ಅನುಭವವನ್ನು ಹಂಚಿಕೊಳ್ಳುತ್ತೇನೆ.

ಸುತ್ತಲೂ ಗವ್ವೆನ್ನುವಷ್ಟು ಒತ್ತಾದ ಮರಗಳ ಸಾಲು, ಜುಂಯ್ ಎನ್ನುವ ಜೀರುಂಡೆ ಶಬ್ಧಗಳು, ಸುಂಯ್ ಎಂದು ಬೀಸುವ ಗಾಳಿಯ ಶಬ್ಧ, ನೀಲಗಿರಿ ತೋಪಿನೊಳಗಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕೂಗುವ ನವಿಲುಗಳು ಮತ್ತು ನರಿಗಳು, ಡಾಂಬರಿಲ್ಲದೆ ನಡೆದಾಡಲು ಯೋಗ್ಯವಾದ, ಮೋಟಾರು ಸೈಕಲ್‍ಗಳಿಗೆ ಅಯೋಗ್ಯವಾದ ರಸ್ತೆ ನಮ್ಮೂರಿನ ಹಾದಿ. ಸೈಕಲ್‍ನಲ್ಲಿ ತುಳಿದುಕೊಂಡು ಬರುವುದು ಸಹ ಕಷ್ಟವೇ. ತುಳಿದುಕೊಂಡು ಬಂದಿರುವುದಕ್ಕಿಂತ ಬರೀ ತಳ್ಳಿಕೊಂಡು ಬಂದದ್ದೇ ಹೆಚ್ಚು ನೆನಪು. ಏಕೆಂದರೆ ಎಲ್ಲಿ ಪಂಕ್ಚರ್ ಆಗುವುದೋ ಎಂಬ ಭಯ ಅಷ್ಟೇ ಅಲ್ಲದೇ “ಲಡ್ಕ ಲಡ್ಕ” ಎಂಬ ಶಬ್ಧ ಬೇರೆ. ಕಲ್ಲಿನ ಹಾದಿಯಲ್ಲವೇ? ಅಪರೂಪಕ್ಕೆ ಓಡಾಡುವವರ ಹಾದಿಯಲ್ಲಿ ಇಂತಹ ಶಬ್ಧಗಳೇ ಜೊತೆಗಾರರು. ಹಾದಿ ಕಲ್ಲಾದರೇನಂತೆ ದಾರಿಯ ಅಕ್ಕಪಕ್ಕದ ಅಲ್ಲಲ್ಲಿ ನೇರಳೆ, ಸೀತಾಫಲ, ಕಾರೇಹಣ್ಣು, ಮಜ್ಜಿಗೆ ಹಣ್ಣು, ಕುಲ್ಡಿ ಹಣ್ಣು, ಮಿಲ್ಡಿ ಹಣ್ಣು, ಈಚಲು ಹಣ್ಣು ಇನ್ನೂ ಅದೆಂಥೆಂಥವೋ. ಗೆಳೆಯರೊಡನೆ ಕೂಡಿ ತಿಂದು ಆಡಿದ ಅದೆಷ್ಟೋ ಶನಿವಾರ ಮತ್ತು ಭಾನುವಾರದ ರಜೆಗಳನ್ನು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.

ನಮ್ಮೂರ ಮಗ್ಗುಲಲ್ಲೇ ಒಂದು ಚಿಕ್ಕದಾದ ಜಾಗವಿತ್ತು.ಅಲ್ಲಿ ಆಡುತ್ತಿದ್ದ ಕ್ರಿಕೆಟ್ ಆಟದ ದಿನಗಳಿಗೆ ಲೆಕ್ಕವೇ ಇಲ್ಲ. ಆ ಜಾಗದ ಮಾಲೀಕರು ಒಬ್ಬ ತಾತ, ನಮ್ಮೂರಿನವರೇ. ನಾವು ಆಡುವಾಗಲೆಲ್ಲಾ ಬಂದು ಬೈಯುತ್ತಲೇ ಇದ್ದರು. ನಮ್ಮ ಕ್ರಿಕೆಟ್ ತಂಡವೆಲ್ಲಾ ಅವರನ್ನು “ಚಿಂಪಾಂಜಿ” ಎಂದು, ಅವರ ಜಾಗಕ್ಕೆ “ಚಿಂಪಾಂಜಿ ಎಸ್ಟೇಟ್” ಎಂದು ಹೆಸರೇ ಇಟ್ಟುಬಿಟ್ಟರು. ಗಿಡಗಳನ್ನು ಹಾಳು ಮಾಡುತ್ತಾರೆ ಎಂಬ ಉದ್ದೇಶದಿಂದ ಪಾಪ ಆ ತಾತ ನಮ್ಮನ್ನು ಗದರುತ್ತಿದ್ದರಷ್ಟೆ ಎಂದು ಯಾರಿಗೂ ಹೊಡೆದಿರಲಿಲ್ಲ. ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಆ ಜಾಗ ಒಂದು ದೊಡ್ಡ ಮೈದಾನದಂತೆ ಕಾಣುತ್ತಿತ್ತು. ಅಷ್ಟು ಜಾಗದಲ್ಲಿಯೇ ತಂಡಗಳನ್ನು ಮಾಡಿ ಅಂಪೈರನ್ನು ನಿಲ್ಲಿಸಿ ಕ್ರಿಕೆಟ್ ಆಡುತ್ತಿದ್ದುದ್ದು ಕಣ್ಣ ಮುಂದೆಯೇ ಇದೆ. ಆ ಜಾಗ ಈಗಲೂ ಇದೆ. ಆದರೆ! ಬರಿದಾಗಿದೆ. ಆ ಕಡೆಗೆ ನೋಡುವವರಾಗಲಿ, ಆಡುವವರಾಗಲಿ ಇಲ್ಲ, ಜೊತೆಗೆ ಗದರುತ್ತಿದ್ದ ಆ ತಾತನೂ ಇಲ್ಲ.

ಹೇ ಕೆರೆ ಹತ್ರ ಹೋಗ್ಬೇಡಿ, ಹೋದ್ರೇ ಕಾಲ್ ಮುರ್ದು ಕೈಗೆ ಕೊಟ್‍ಬಿಡ್ತೀನಿ, ಕ್ರಿಕೆಟ್ ಆಡ್ಬೇಡಿ, ಆಡೋಕೋದ್ರೇ ಮೆಣ್‍ಸಿನ್‍ಕಾಯಿ ಊದ್ರ ಹಾಕ್‍ಬಿಡ್ತೀನಿ, ಗಿಡಗಳಿಗೆ ಕೈ ಹಾಕ್ಬೇಡಿ ಹುಳ ಹುಟ್ಟೆ ಇದ್ದಾವು, ಹಾಳಾದ್ ಕುಲ್ಡಿ ಹಣ್ಣು ಮಿಲ್ಡಿ ಹಣ್ಣು ಅವನ್ನೆಲ್ಲ ತಿನ್ಬೇಡಿ ಕೆಮ್ಮು ಬಂದಾತು ಎಂಬ ಅಪ್ಪ ಅಮ್ಮನ ಬೆದರಿಕೆಯ ಮಾತುಗಳನ್ನು ಕೇಳುತ್ತಿದ್ದುದ್ದು ಕೆಲವೊಮ್ಮೆ ಮಾತ್ರ. ಹಾಗೆಯೇ ಇಷ್ಟು ಹೇಳಿದ ಮೇಲೂ ಮಾಡಿದ್ದಕ್ಕೆ, ಬೈದು ನಾಲ್ಕು ಕೊಟ್ಟು, ಊಟ ನೀಡದೆ ಸತಾಯಿಸಿರುವ ನಿದರ್ಶನಗಳೂ ಉಂಟು.

ಕೆರೆಯಲ್ಲಿ ಈಜಾಡುತ್ತಿದ್ದದ್ದು, ಮೀನು ಹಿಡಿದದ್ದು, ಕೆರೆ ಏರಿಯ ಪಕ್ಕದಲ್ಲಿ ಮಜ್ಜಿಗೆ ಹಣ್ಣು ತಿಂದದ್ದು, ಈಚಲು ಹಣ್ಣು ತಿಂದದ್ದು, ಹಲಸಿನ ಹಣ್ಣು ತಿಂದದ್ದು, ಜೋಳ ಸುಟ್ಟು ತಿಂದದ್ದು, ಜೇನು ಕಿತ್ತು ತಿಂದದ್ದು, ಗೆಳೆಯರೆಲ್ಲಾ ಸೇರಿ ಹೊಲದ ಹತ್ರ ಅನ್ನ ಮಾಡಿ ತಿಂದದ್ದು, ಜ್ಯಾಮಿಟ್ರಿ ಬಾಕ್ಸಿನಲ್ಲಿ ಕಾರೇಕಾಯಿ ಇಟ್ಟು ಹಣ್ಣು ಮಾಡಿಕೊಂಡು ತಿಂದದ್ದು, ಕಾಲಿಗೆ ಮುಳ್ಳು ಚುಚ್ಚಿದಾಗ ಪಿನ್ನಿನಲ್ಲಿ ತೆಗೆದು ಎಕ್ಕದ ಹಾಲನ್ನು ಬಿಟ್ಟಿದ್ದು, ಊರ ಮುಂದಿನ ಕಟ್ಟೆಯಲ್ಲಿ ಏಡಿಕಾಯಿ ಹಿಡಿದದ್ದು, ಜೀರ್ ಜಿಂಬೆ ಹಿಡಿದು ಆಟ ಆಡಿದ್ದು, ಬೇಸಿಗೆ ರಜೆಯಲ್ಲಿ ಬೇವಿನ ಬೀಜವನ್ನು ಆಯ್ದದ್ದು, ಅದನ್ನು ಕೂಡಿಟ್ಟು ಸಂತೆಯಲ್ಲಿ ಮಾರಿದ್ದು, ಅದರಿಂದ ಬಂದ ಕೆಲವು ರೂಪಾಯಿಗಳಲ್ಲಿ ತಿಂಡಿ ತಿಂದಿದ್ದು, ರಿಫಿಲ್ ಕೊಂಡಿದ್ದು, ಉಳಿದ ರೂಪಾಯಿಗಳನ್ನು ಬೆಂಕಿ ಪೊಟ್ಟಣದಲ್ಲಿ ಮಡಗಿದ್ದು ……… ಹೀಗೆ, ಒಂದೇ ….., ಎರಡೆ….., ಒಂದೊಂದು ದಿನವೂ ನೆನಪುಗಳನ್ನು ಕೊಡುತ್ತಲೇ ಇದ್ದವು.
ಬೆಳಗ್ಗೆಯಿಂದ ಸಂಜೆಯವರೆಗಿನ ಶಾಲೆಯ ಆಟ ಪಾಠ ನಮ್ಮಲ್ಲಿ ಎಂದಿಗೂ ದ್ವೇಷದ ಬೀಜವ ಭಿತ್ತಲೇ ಇಲ್ಲ ಹಾಗೆಯೇ ಶಾಲೆಗೆ ಚಕ್ಕರ್ ಹಾಕಬೇಕೆಂತಲೂ ಅನಿಸಲೇ ಇಲ್ಲ. ಶಾಲೆಯ ಪಕ್ಕದಲ್ಲಿದ್ದ ಹಲಸಿನ ಮರದಿಂದ ಹಣ್ಣು ಕಿತ್ತು ನಮ್ಮೊಡನೆಯೇ ಕೊಯ್ದು ಹಂಚಿ ತಿಂದ ನಮ್ಮ ನೆಚ್ಚಿನ ಶಿಕ್ಷಕರು ನಿಜವಾಗಿಯೂ ಸ್ನೇಹಿತರಂತೆ. ಅವರ ದಿಟ್ಟ ನೋಟ ಸಂದರ್ಭೋಚಿತವಾಗಿ ಗದರುತ್ತಿದ್ದ ಆ ಸನ್ನಿವೇಶಗಳು ಇಂದಿಗೂ ನಮ್ಮಲ್ಲಿ ಶಿಸ್ತಿನ ಗೌರವ ಸೂಚಿಸುವಂತೆ ಮಾಡಿದೆ.

ಊರಲ್ಲಿ ನಮ್ಮ ಮನೆಯವರಿಗೂ ಕೆಲವೊಮ್ಮೆ ಹೆದರದ ನಾವು ಒಬ್ಬರಿಗೆ ಮಾತ್ರ ಹೆದರುತ್ತಿದ್ದೆವು. ಅವರೇ ನಮ್ಮ ಪುಟ್ಟರಂಗಜ್ಜ. ಇವರು ಒಂದು ದಿನವೂ ಶಾಲೆಗೆ ಹೋದವರಲ್ಲವಂತೆ. ಲೆಕ್ಕದಲ್ಲಿ ಮಾತ್ರ ಲೆಕ್ಕದ ಮಾಸ್ತರರಿಗಿಂತಲೂ ಹೆಚ್ಚು. ಮಗ್ಗೆ ಹೇಳುವುದರಲ್ಲಂತೂ ಎತ್ತಿದ ಕೈ. ತಿರುಗ ಮರುಗ ಉಲ್ಟಾ ಸೀದಾ, ಹುರುಳಿಕಾಳು ಉರಿದಂಗೆ ಪಟ ಪಟ ಹೇಳೋರು. ನಾವೆಲ್ಲಾದ್ರೂ ಕಂಡ್ರೆ ಸಾಕು ಹೇ ಬಾ ಇಲ್ಲಿ ಮಗ್ಗಿ ಹೇಳು, ಉಲ್ಟಾ ಮಗ್ಗಿ ಹೇಳು, ಸೀದಾ ಮಗ್ಗಿ ಹೇಳು, ಹದಿನಾರೊಂಭೋತ್ಲಿ ಎಷ್ಟು, ಹನ್ನೆರಡಾರ್ಲಿ ಎಷ್ಟು ಹಿಂಗೆ ಕೇಳ್ತಾ ಕೇಳ್ತಾ ನಮಗೆಲ್ಲಾ ಮಗ್ಗಿ ಅಂದ್ರೆ ರಸಗುಲ್ಲಾ ಅನ್ನೋ ಅಷ್ಟು ಸುಲಭ ಮಾಡಿಕೊಟ್ಟು ಮಗ್ಗೆ ಮೇಷ್ಟ್ರು ಆದ್ರು. ಇಂದು ಅವರಿಲ್ಲ ಆದ್ರೆ ಕಲಿಸಿದ ಪಾಠ ನಮ್ಮ ಇಡೀ ಜೀವನದುದ್ದಕ್ಕೂ ಜೊತೆಯಾಗಿದೆ.

ಈ ಎಲ್ಲಾ ನೆನಪುಗಳಿಗಿಂತಲೂ ಮರೆಯಲಾಗದ ಒಂದು ನೆನು ಅಂದ್ರೆ ಅದು “ಸ್ಕೂಲಿಗೆ ಬಂದು ಯಾವ್ದೋ ಮಾಯದಲ್ಲಿ ಸ್ಕೂಲಿಂದ ಆಚೆ ಓಡೋಗ್ತಿದ್ದ ನಮ್ಮ ಸ್ನೇಹಿತ ನಿಂಗನ ನೆನಪು.” ನಿಂಗ ನಮ್ಮ ನಾಲ್ಕನೇ ತರಗತಿಯ ಸ್ನೇಹಿತ. ಅದು ಯಾಕೋ ಏನೋ ಗೊತ್ತಿಲ್ಲ, ಸ್ಕೂಲಿಗೆ ಬರೋಕೆ ಇಷ್ಟನೇ ಆಗ್ತಿರಲಿಲ್ಲ ಅವ್ನಿಗೆ. ಒಂದ್ ದಿವ್‍ಸ ಸ್ಕೂಲಿಗೆ ಬಂದು ಆಚೆ ಓಡೋಗ್ ಬಿಟ್ಟಿದ್ದ. ನಮ್ ಮೇಷ್ಟ್ರು ನನ್ನೂ ಮತ್ತೆ ಕುಮಾರನ್ನೂ ಕಳ್ಸಿ ಹೋಗಿ ಅವ್ನ ಕರ್ಕೋಂಡು ಬರ್ರಿ ಅಂದ್ರು. ನಾವು ಅವನ ಮನೆ ಹತ್ರ ಓದ್ವಿ. ಆದರೆ ಅವನು ಅಲ್ಲಿರ್ಲಿಲ್ಲ. ಅವನ ಮಾಮನಿಗೆ ವಿಷಯ ತಿಳ್ಸುದ್ವಿ. ಅವ್ರು ಬರ್ರಿ ನನ್ ಜೊತೆಗೆ ಅಂತ ಹೇಳಿ ಕೆರೆ ಹತ್ರದ ಹಾದೀಲಿ ಕರ್ಕೋಂಡು ಹೋದ್ರು. ನಾವು ಬರೋದ್ನೆ ನೋಡಿ ನಿಂಗ ಓಡೋಕೆ ಶುರು ಮಾಡ್ಬಿಟ್ಟ. ಅವನ ಮಾಮನೋ ಓಡುದ್ರು. ಕೊನೆಗೆ ಸಿಕ್ಕಿ ಅವನ ಮಾಮ ಅವ್ನಿಗೆ ಚೆನ್ನಾಗಿ ಹೊಡುದ್ರು. ಅಷ್ಟು ಹೊಡೀತಿದ್ರು “ ಮಾಮಾ ನೀನು ಎಚ್ಚು ಹೊಡುದ್ರೂ ನಾನ್ ಇಚ್ಚೂಲಿಗೆ ಹೋಗಲ್ಲ ಮಾಮಾ” ಅಂದ್ಬಿಟ್ಟ ನಿಂಗ. ಸ್ಕೂಲಿನ ಭಯವೋ ಏನೋ, ಮೇಷ್ಟ್ರೂ ಭಯವೋ ಏನೋ, ಇಲ್ಲ ಅವನ ಮಾಮನ ಭಯವೋ ಏನೋ ಪಾಪ ನಿಂಗ ನಾಲ್ಕನೇ ತರಗತಿ ಪೂರ್ತಿ ಮಾಡಲೇ ಇಲ್ಲ. ಸ್ಕೂಲು ಬಿಟ್ಟೇ ಬಿಟ್ಟ. ಅವತ್ತಿನ ನಿಂಗ ಇಂದು ಎರಡು ಹೆಣ್ಣು ಮಕ್ಕಳ ತಂದೆ ಆಗಿದ್ದಾನೆ. ಹೊಲದ ಕೆಲಸಗಳನ್ನು ಅತ್ಯುತ್ತಮವಾಗಿ ಮಾಡಿಕೊಂಡು ಊರಲ್ಲಿಯೇ ಅಪ್ಪ ಅಮ್ಮನ ಜೊತೆ ಇದ್ದು ಉತ್ತಮ ರೈತನಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ.

ಹೀಗೆ ಬಾಲ್ಯದ ನೆನಪುಗಳನ್ನು ಮತ್ತೆ ಮತ್ತೆ ನೆನೆಯುತ್ತಾ ನೆನಪುಗಳ ಮಾಲೀಕನಾಗಿಯೇ ಉಳಿಯುವ ಹಂಬಲದಲ್ಲಿ..

-ರಘು ಕ.ಲ.,


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.