ಕಥಾಲೋಕ

ನೆನಪುಗಳ ಮಾತು ಮಧುರ!: ರುಕ್ಮಿಣಿ ನಾಗಣ್ಣನವರ

ಎಷ್ಟು ಹೊತ್ತಾಯಿತು ಬಸ್ಸಿನಲ್ಲಿ ಕುಳಿತು. ಯಾವಾಗ ಬಿಡುತ್ತೀರಿ? ನಮಗಿನ್ನೂ ತುಂಬ ಮುಂದೆ ಹೋಗಬೇಕಿದೆ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಅಸಮಾಧಾನ ವ್ಯಕ್ತಪಡಿಸುತ್ತ ಕಂಡಕ್ಟರ್ನನ್ನು ದಬಾಯಿಸಿ ಕೇಳುತ್ತಿದ್ದ. ಬೇಗ ಬಿಡಿ ಸರ್ ತುಂಬ ಹೊತ್ತಾಯಿತಲ್ಲ ಎಂದು ಇನ್ನೇನು ನಾನೂ ಹೇಳಬೇಕು ಎನ್ನುವಷ್ಟರಲ್ಲಿ ಅಪ್ಪಯ್ಯನ ಕಾಲು ಬಂತು. ಹೊರಟ್ರ ಅಂತ ಕೇಳುತ್ತಿದ್ದರು. ಹೌದು. ಬಸ್ಸಿನಲ್ಲಿದ್ದೇನೆ. ಅವರಿಗೆ ರಜೆ ಸಿಕ್ಕಿಲ್ವಂತೆ ನಾಳೆ ಬರ್ತಾರೆ ಅಪ್ಪ ಅಂದೆ. ಆಯ್ತು. ಹುಷಾರಾಗಿ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ರು.

ಕಿಟಕಿ ಸೀಟಿಗೆ ಹೊಂದಿ ಕೂತಿದ್ದ ನಾನು ಕಿಟಕಿಯ ಹೊರಗೆ ಮತ್ತೊಮ್ಮೆ ಕಣ್ಣು ಹಾಯಿಸಿದೆ. ಕಾಲು ಗಂಟೆಯಿಂದ ಆ ಹುಡುಗಿ ನನ್ನನ್ನು ಪದೇ ಪದೇ ತನ್ನತ್ತ ಸೆಳೆಯುತ್ತಲೇ ಇದ್ದಳು. ಆಕೆಯ ಕಣ್ಣಲ್ಲಿ ನನ್ನದೇ ಪ್ರತಿಬಿಂಬ. ಆಕೆ ತನ್ನ ಪ್ರೇಮಿಗಾಗಿ ಕಾಯುತ್ತಿದ್ದಾಳೆ ಎಂದುಕೊಂಡೆ. ಅಗೋ, ಅವನು ಧಿಡೀರ್ ಪ್ರತ್ಯಕ್ಷ! ಕೈ ಕೈ ಹಿಡಿದು ತಮ್ಮದೇ ಪ್ರಪಂಚದಲ್ಲಿ ಮುಳುಗುವ ನಮ್ಮಂಥಹ ಪ್ರೇಮಿಗಳನ್ನ ಕಂಡರೆ ವಿಶೇಷ ಅಕ್ಕರೆ ನನಗೆ. ಎವೆಯಿಕ್ಕದೇ ತದೇಕ ಚಿತ್ತದಿಂದ ಅವರನ್ನೇ ನೋಡುತ್ತಿದ್ದೆ. ನಾನು ನೋಡುವುದನ್ನ ಆ ಪೋರಿ ಗಮನಿಸಿದಳು. ಆಕೆಯೆಡೆಗೆ ಸ್ಮೈಲ್ ಮಾಡಿದೆ. ಅವಳೀಗ ನಿಜಕ್ಕೂ ಪೇಚಿಗೆ ಬಿದ್ದಂತೆ ಕಂಡಳು. ಆ ಕಡೆ ಈ ಕಡೆ ನೋಡಿದಳು. ನಾನು ಆಕೆಯನ್ನು ನೋಡಿಯೇ ನಕ್ಕದ್ದು ಎಂದು ಖಾತ್ರಿಯಾಗಿ ನಾಚಿ ನೀರಾಗಿ ನಸುನಗೆ ಬೀರಿದಳು. ಆಕೆ ನನಗೆ ವರುಷಗಳಿಂದ ಪರಿಚಿತಳೇನೋ ಅನಿಸುತ್ತಿತ್ತು. ಆಕೆಯ ಕಣ್ಣುಗಳಲ್ಲಿ ನಾ ಏನನ್ನೋ ಅಗೆಯುತ್ತಿದ್ದೆ.ಆಗಲೇ ನನ್ನ ನೆನಪಿನ ಬುತ್ತಿ ಬಿಚ್ಚುತ್ತ ಹೋಯಿತು.

                     ***
ರಾತ್ರಿ ಹನ್ನೆರಡಾಗುತ್ತಿತ್ತು ಮನೋಜ್ ರಿಂಗಾಯಿಸುವಾಗ. ಜಗತ್ತು ಮಲಗಿದ ನಂತರವಷ್ಟೇ ನಮ್ಮ ಭವಿಷ್ಯದ ಕನಸು ತನ್ನ ನೀಲಿ ನಕಾಶೆಗಾಗಿ ಹಾತೊರೆಯುತ್ತಿತ್ತು.

ಎಂದಿನಂತೆ, ಆ ದಿನವೂ  ಕಣ್ಣಂಚಲ್ಲಿ ತೇಲಿ ಬರುತ್ತಿದ್ದ ನಿದ್ದೆಯನ್ನು ಎಳೆದೆಳೆದು ಕೂಡಿಸಿ ಅವನೊಂದಿಗೆ ಮಾತಿಗಿಳಿದಿದ್ದೆ. ಕಿವಿಗೆ ಫೋನಿಡಿದು ತಾಸು ಹೊತ್ತಾಗಿದ್ದರೂ ಮಾತಾಡಿದ್ದು ಮಾತ್ರ: 'ದಿನಕ್ಕ ಒಂದು ಸರಿಯಾದರೂ ಕಾಲ್ ಮಾಡ್ತಿರು,  ಬಿಸಿಲಲ್ಲಿ ಜಾಸ್ತಿ ಮನೆ ಮನೆ ಸುತ್ತಬೇಡ. ಆದಷ್ಟು ಬೇಗ ಅಲ್ಲಿಂದ ಹೊರಟು ಬಿಡು. ಬರೋವಾಗ ಮಾವಯ್ಯನದೊಂದು ಫೋಟೋ ತರುವುದನ್ನ ಮರಿಬೇಡ. ಬೆಳಿಗ್ಗೆ ಶೇಖರ್ ನಿನ್ನ ಬಸ್ ಸ್ಟಾಪಿಗೆ ಬಿಡ್ತಾನೆ. ಅವನ ಕೈಗೆ ನಿನ್ನದೊಂದು ಪಾಸ್ಪೋರ್ಟ್ ಸೈಜಿನ ಫೋಟೋ ಕೊಟ್ಟಿರು". ಎಂಬುದಷ್ಟೆ. ಯೌವನಕ್ಕೆ ಕಾಲಿಟ್ಟ ಆ ಘಳಿಗೆಯಿಂದಲೂ ಅವನ ಪ್ರತಿ ಮಾತೂ ಈಗಿನಂತೆ ಆಗಲೂ ನನಗೆ ಮುತ್ತಂತೆ ರುಚಿಸುತ್ತಿತ್ತು. ಮನೋಜ್ ಹೇಳಿದಕ್ಕೆಲ್ಲ ಆಗಲಿ ಎಂಬಂತೆ ಹೂಂಗುಟ್ಟಿದ್ದೆ.

ಊರಿಗೆ ಹೋಗುತ್ತಿರುವ ವಿಷಯ ಮನೋಜನಿಗೆ ತಿಳಿಸಿ ವಾರ ಕಳೆದಿತ್ತು. ಲೆಸೆನ್ ಪ್ಲ್ಯಾನ್, ಬ್ಲಾಕ್ ಟೀಚಿಂಗ್  ಅದು ಇದು ಅಂತ ಅವನು ತುಂಬ  ಬಿಜಿ ಇರುತ್ತಿದ್ದ ದಿನಗಳವು. ಕಳೆದ ಒಂದು ವಾರದಿಂದ ಗುಂಜಿ ಹೆಚ್ಚೇ ಮಾತಾಡುವುದನ್ನ ಅವನು ರೂಢಿಸಿಕೊಂಡಿದ್ದ. ಅಷ್ಟೊಂದು ಪ್ರೀತಿನಾ ನನ್ನ ಮೇಲೆ? ಮನಸ್ಸು ಮನಸ್ಸನ್ನು ಮೌನದಲೇ ಕೇಳುತ್ತಿತ್ತು. ಊರಲ್ಲಿದ್ದರೆ ಜಾಸ್ತಿ ಮಾತಾಡೋಕೆ ಆಗಲ್ಲವಲ್ಲ. ಅದು ಕಾರಣವಿರಬಹುದೇ? ಮನಸ ಪರೆಯ ಮೇಲೆ ಮೊಡಿದ್ದು ತೋಚಿದ್ದು ಎಲ್ಲವನ್ನೂ ಯೋಚಿಸಿ ಯೋಚಿಸಿ  ತೂಗಿ ಅಳೆದು ಸುರಿದು ಲೆಕ್ಕ ಹಾಕುವಾಗ ಅದು ಥಟ್ಟನೇ ಹೊಳೆಯಿತು. ಅಹಹಹ ಮಹಾರಸಿಕ! ನನ್ನ ಅನುಮತಿಗೂ ಕಾಯದ ಅಧರಗಳು ಅದಾಗಲೇ ಮಧುರಾಲಾಪದಿ ಅರಳಿ ಕಿಲಕಿಲನೆ ನಗೆ ಹೊಳೆ ಹರಿಸಿದ್ದವು. ಫೋನಲ್ಲೇ ಆದರೂ, ದಿನ ನಾ ಕೊಡುವ ಮುತ್ತು ಸಿಗುವುದಿಲ್ಲ ಎಂಬ ಕೊರಗು ಅವನಿಗಿರುವುದು ನನಗೆ ಸ್ಪಷ್ಟವಾಗಿತ್ತು. ನಾ ಮುತ್ತು ಕೊಟ್ಟ ಕೊಟ್ಟಂತೆಲ್ಲ ಇನ್ನೊಂದು ಇನ್ನೊಂದು ಇನ್ನೊಂದು ಇನ್ನೊಂದು ಎಂದು ದೈನಾಸಿ ಬೇಡುವುದು. ಕೊಡದೇ ಇದ್ದಲ್ಲಿ ಮಗುವಿನ ಹಾಗೆ ರಚ್ಚೆ ಹಿಡಿಯುವ ಅವನ ಪರಿ ನನ್ನಲ್ಲಿ ಪ್ರೀತಿಯನ್ನು ಪುಸುಪುಸನೇ ಹಬ್ಬಿಸಿ ಜಗದಗಲ ಮುಗಿಲಗಲ ಮಾಡುತ್ತಿದ್ದುದು ನೆನೆಯುತ್ತ ಕನಸ ಪರದೆಯ ಮೇಲೆ ಅವನನ್ನು ಸೇರಿಕೊಳ್ಳುತ್ತ ನಿದ್ದೆಗೆ ಜಾರಿದೆ.

ಬೆಳಿಗ್ಗೆ ಏಳುವುದು ಕೊಂಚ ತಡವಾಗಿತ್ತು.  ಅವಸರವಸರವಾಗಿ ತೊಳದು ಬಳೆದು ತಿಂದು ರೆಡಿ ಆದೆ. ಥೇಟು ದಿವಾನ್ ದಿಂಬಿನ ಆಕಾರದಂತಿದ್ದ ಬ್ಯಾಗನ್ನು ಹೆಗಲಿಗೆ ಹಾಕುವಷ್ಟರಲ್ಲಿ ದೊಡ್ಡಪ್ಪ ಫೋನಿನಲ್ಲಿ ಕೂಗಲು ಶುರುವಿಟ್ಟಿದ್ದರು.
"ಹೂಂ ಹೊರಡ್ತಾ ಇದ್ದೀನಿ ಅಪ್ಪಯ್ಯ. ಮನೆ ತಲುಪುವಷ್ಟರಲ್ಲಿ ಸಂಜೆ ಐದಾಗಬಹುದು. ದೊಡ್ಡವ್ವಗ ಹೇಳಿಡಿ". ಎಂದು ಮಾತು ತುಂಡರಸಿ  ಕಾಲ್ ಕಟ್ ಮಾಡಿದೆ.

ಎರೆಡೇ ಎರಡು ಸೆಕೆಂಡುಗಳಲ್ಲಿ, ಮುಜಕೋ ಪೆಹಚಾನ್ ಲೋ ಮೈ ಹೂಂ ಡಾನ್ ಅಂತ ಮೋಬೈಲ್ ಸ್ಕ್ರೀನ್ ಮೇಲೆ ಶೇಖರ ದಣಿಯದೇ ಕುಣಿಯತೊಡಗಿದ. "ಜಸ್ಟ್ ಎರಡ ನಿಮಿಷ ಬಂಗಾರ. ವೈಟ್ ಮಾಡು ನಾನೇ ಬಸ್ ಸ್ಟಾಪಿಗೆ ಬರ್ತಿದಿನಿ" ಎನ್ನುವಾಗ ನನ್ನ ಹೆಜ್ಜೆಗಳ ವೇಗ ತೀವ್ರವಾಗಿತ್ತು.

ನಾನಿರುವ ಹಾಸ್ಟೆಲ್ ನಿಂದ ಮೇನ್ ರೋಡ್ ಸೇರ್ಕೊಂಡು ಐದು ನಿಮಿಷ ನಡೆದರೆ ಬಸ್ ಸ್ಟಾಪ್ ಸಿಗುತ್ತಿತ್ತು. ಅಷ್ಟೇನೂ ವಜನ್ ಇಲ್ಲದ ಬ್ಯಾಗ್ ಎತ್ತಿಕೊಂಡು ಕಾಲ್ನಡಿಗೆಯಲ್ಲಿಯೇ ಬಸ್ಟಾಪಿಗೆ ದೌಡಾಯಿಸಿದ್ದೆ.

ಅವಸರ ಕಟ್ಕೊಂಡು ಬಸ್ ಸ್ಟಾಪ್ ತಲುಪುವಷ್ಟರಲ್ಲಿ ಮೈಯೆಲ್ಲ ಬೆವೆತುಹೋಗಿತ್ತು. ಹ್ಯಾಂಡ್ ಬ್ಯಾಗ್ನಿಂದ ಟಿಶ್ಯೂ ಪೇಪರ್ ತೆಗೆದು ನಾಜೂಕಾಗಿ ಮುಖ ಒರೆಸಿಕೊಂಡು ನೀಟಾಗಿ ಕೈ ಕಟ್ಟಿ, ಕೊಂಚ ಗಂಭೀರತೆ ಪ್ರದರ್ಶಿಸುತ್ತ ಬಸ್ಸಿಗಾಗಿ ಕಾಯುತ್ತಿರುವಂತೆ ನಟಿಸಿದೆ.

ಬಸ್ಟಾಪಿನ ಎಡ ಮೂಲೆಯಲ್ಲಿ ಕಟ್ಟಿಸಿದ ಶೌಚಾಲಯದಿಂದ ಶೇಖರ್ ಹೂರಬರುವುದು ಕಾಣಿಸಿತು. ಅದೇನೋ ಮಹಾನ್ ಘನಕಾರ್ಯ ಮಾಡಿ ಬರುತ್ತಿರುವವನಂತೆ ಎದೆ ಸೆಟೆಸಿ ಬರುತ್ತಿದ್ದ. ನನಗೋ, ಗೊಳ್ಳೆನ್ನುವ ದೊಡ್ಡ ನಗೆಯೊಂದು ಉಮ್ಮಳಸಿ ಬರುತ್ತಿರುವಂತೆ ತೋರಿದರೂ, ಸಾವಧಾನದಿಂದ ನಯವಾಗಿಯೇ ನನ್ನ ಗಂಭೀರತೆಗೆ ಒಂದು ಪೂರ್ಣವಿರಾಮ ಹಾಕಿ ಮಂದಸ್ಮಿತಳಾಗಿದ್ದೆ.

ಅರೆರೆ! ಶೇಖರನೊಟ್ಟಿಗೆ ಮತ್ತೋರ್ವ ಬರುತ್ತಿರುವನಲ್ಲ? ಅವನಾರು? ನನ್ನೆರಡೂ ಹುಬ್ಬುಗಳು ಗಂಟಿಕ್ಕಿ ಪರಸ್ಪರ ಕೇಳತೊಡಗಿದ್ದವು. ಸರಿಯಾಗಿ ನೋಡೋಣವೆಂದರೆ ಕತ್ತೆತ್ತಿ ಕೂಡ ನೋಡುತ್ತಿಲ್ಲ ಭೂಪ. ಎಂದು ಮನಸ್ಸು ಇಂದೇಕೋ ಕೀಟಲೆ ಮಾಡುತ್ತಿತ್ತು.  
ಶೀ! ಎಂದೂ ಇಲ್ಲದ ತುಂಟತನ ಇಂದೇಕೆ? ರಾತ್ರಿ ಮುದ್ದು (ಮನೋಜ್)ವಿನೊಂದಿಗೆ ಸವಿದ ಪ್ರೀತಿಯ ಡೋಸ್ ಜಾಸ್ತಿ ಆಯಿತೆ? ನನ್ನ ಹುಚ್ಚುತನದ ವಿಚಾರಗಳನು ಅಲ್ಲಿಗೇ ಮೊಟಕುಗೊಳಿಸಿದೆ. ಯಾರೋ ಶೇಖರನ ಸ್ನೇಹಿತ ಇರಬಹುದೆಂದು ಊಹಿಸಿ ತಾನಿದ್ದಲ್ಲಿಯೇ ಶೇಖರನಿಗೆ ಬರುವಂತೆ ಸನ್ನೆಯಲ್ಲಿ ಹೇಳಿದ್ದೆ.

ಶೇಖರ್ ಆ ಹುಡುಗನೊಂದಿಗೆ ಏನೇನೋ ಗುಸುಗುಸು ಎಂದುಕೊಳ್ಳುತ್ತ, ನಗಾಡಿಕೊಳ್ಳುತ್ತಲೇ ನನ್ನತ್ತ ಬರುವುದನ್ನು  ಕಂಡು ಒಂದರಗಳಿಗೆ  ಕಸಿವಿಸಿಗೊಂಡಂತವಳಾದೆ. ಡ್ರೆಸ್ ಸರಿ ಮಾಡಿಕೊಳ್ಳುತ್ತ ಹಣೆಯ ಮೇಲೆ ಮೂಡುತ್ತಿದ್ದ ಬೆವರ ಗೆರೆಗಳನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನಿರತಳಾದೆ. ಕಣ್ಣುಗಳು ಅವರ ಮೇಲಿನ ನೋಟ ಕಿತ್ತಿ ನೆಲದ ಮೇಲೆ ಹರಿದಾಡುವಲ್ಲಿ ಧಾವಿಸಿದವು.

ಒಂಥರಾ ಮುಜುಗರ ಮತ್ತು  ಸಂಕೋಚ ಇದ್ದಕ್ಕಿದ್ದಂತೆ ಶುರುವಾಗತೊಡಿತು. ಅದೇ ಮೊದಲ ಬಾರಿ, ಒಂದು ವಿಚಿತ್ರವಾದ ಮುಜುಗರ ನನಗೆ ಅನಿಸಿದ್ದು. 
ಅಪ್ಪಟ ಹಳ್ಳಿಯಲ್ಲಿ ಬೆಳೆದ ನನಗೆ ಇತರರೊಡನೆ ಅದರಲ್ಲಿಯೂ ಈ ಸಿಟಿ  ಹುಡುಗರೊಡನೆ ಮಾತಾಡುವುದು ಎಂದರೆ ನುಂಗಲಾರದ ತುತ್ತು. ಇಂಥಹದೇ ಮುಜುಗರ ಶೇಖರ ಪರಿಚಯವಾಗುವ ಸಂದರ್ಭದಲ್ಲೂ ಇತ್ತು. ಆದರೆ ನಾನವತ್ತು ಇಷ್ಟೊಂದು ಪೇಚಿಗೆ ಬಿದ್ದಿರಲಿಲ್ಲ. ಬಾಲ್ಯದ ಗೆಳತಿ ಗೌರಿ ನನ್ನ ಪಕ್ಕದಲ್ಲೇ ಇದ್ದದ್ದು ಕಾರಣವಿರಬಹುದು.
             
                 ***
ನಾನಾಗ ಎರಡೊರುಷದ ಕೂಸಂತೆ. ನಮ್ಮ ಅಜ್ಜ ವಿಠಲನ ಪರಮ ಭಕ್ತ. ರಟ್ಟೆಯಲ್ಲಿ ಬಲ  ಇರುವವರೆಗೂ ಪ್ರತಿವರ್ಷವೂ ಪಂಡರಾಪುರಕ್ಕೆ ಹೋಗಿ ಅವನ ಸನ್ನಿಧಾನೋಲ್ಲಿ ಹಾಡಿ, ಕುಣಿದು ನೆಮ್ಮದಿ ಪಡೆದು ಬರುತ್ತಿದ್ದ. ಅಜ್ಡ ಹಾಸಿಗೆ ಹಿಡಿದ ಮೇಲೆ ಅಜ್ಜನ ಕೋರಿಕೆ ಸಲ್ಲಿಸಲು ಅವ್ವ-ಅಪ್ಪ ಪಂಡರಾಪುರಕ್ಕೆ ಹೋಗಿ ಬರುತ್ತಿದ್ದರು. ಬಹುಶಃ ಆ ವಿಠ್ಠಲನಿಗೆ ಅಜ್ಜನಿಗಿಂತ ನಮ್ಮವ್ವ ಅಪ್ಪನ ಮೇಲೆ ಅತಿಯಾದ ಮೋಹವಿತ್ತು ತೋರುತ್ತದೆ. ಅವರನ್ನು ಅಪ್ಪಿಕೊಂಡು ತನ್ನ ಸಾನಿಧ್ಯದಲ್ಲೇ ಇರಿಸಿಕೊಂಡುಬಿಟ್ಟ. ಅವ್ವ ಅಪ್ಪನ ಜೊತೆಗೆ ತಾನೂ ಬರುತ್ತೇನೆಂದು ಅಜ್ಜ ಅವರ ಹಿಂದೆಯೇ ಓಡಿದನಂತೆ.

ಇತ್ತ ಅನಾಥಳಾದ ನನ್ನನ್ನು ಎದೆಗೊತ್ತಿಕೊಂಡು  ಎಲ್ಲರಿಗಿಂತ ಹೆಚ್ಚು ಪ್ರೀತಿಯನ್ನು ಧಾರೆ ಎರೆದವರು ದೊಡ್ಡಪ್ಪ. ದೊಡ್ಡಪ್ಪ ತಾನು, ಶಾಲೆಯ ಹಿಂದೆ ಮುಂದೆ ಹಾಯದಿದ್ದರೂ ತನ್ನೆರಡು ಮಕ್ಕಳನ್ನು ಓದಿಸಿ ಅವರಿಗೊಂದು ಭವಿಷ್ಯ ರೂಪಿಸಿ ಮದುವೆ ಮಾಡಿಕೊಟ್ಟಿದ್ದರು. ಉಳಿದವಳೇ ನಾನು. ಚಿನ್ನಾಟವಾಡುವ ಪುಟ್ಟ ಹೆಣ್ಗರು.

ಮೀರಾಳ ಭವಿಷ್ಯ ರೂಪುಗೊಂಡರೆ ಎಲ್ಲ ಮಕ್ಕಳ  ಜವಾಬ್ಧಾರಿಯಿಂದ ಮುಕ್ತರಾಗಿ ನಿಶ್ಚಿಂತೆಯಿಂದ ಇರಬಹುದು ಎನ್ನುವುದು ಅಪ್ಪಯ್ಯನ ಅಕಲು. ನಾನೂ ಕೂಡ ಅಕ್ಕ-ಅಣ್ಣನಂತೆ ಬಿ.ಕಾಮ್. ಎಮ್. ಕಾಮ್. ಮಾಡಿ ಬ್ಯಾಂಕಿನಲ್ಲಿ ಮ್ಯಾನೇಜರ ಹುದ್ದೆ ಅಲಂಕರಿಸುವುದು ದೊಡ್ಡಪ್ಪನ  ಮಹದಾಸೆ. ಸಿಟಿಯಲ್ಲಿ ಓದಿಸಿದರೆ ಚುರುಕಾಗುತ್ತಾಳೆ ಎಂದು ಈ ಮಹಾ ನಗರದ ಕಾಲೇಜಿಗೆ ಬಿ.ಕಾಮ್ ಓದಲು ಸೇರಿಸಿದ್ದರು.

               ***

ನನ್ನ, ಶೇಖರನ ಗೆಳೆತನ ಶುರುವಾಗಿದ್ದು ಹೀಗೆ: ಶೇಖರ ನನ್ನ ಪಿ.ಯೂ ಗೆಳತಿ ಗೌರಿಯ ಗೆಳೆಯ. ಇಬ್ಬರೂ ಒಂದೇ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದರು. ಇತ್ತಿಚೆಗೆ ಅವರಿಬ್ಬರ ಸ್ನೇಹ ಪ್ರೇಮದಲ್ಲಿ ಅಂಕುರುಸಿದೆ. ಶಹರಿನ ಎಲ್ಲ ಗಾರ್ಡನ್ಗಳ ಮರ ಸುತ್ತಿರುವುದನ್ನು ಮತ್ತೋರ್ವ ಗೆಳತಿ ಮನಿಷಾ ತನ್ನ ಹರೆಯದ ಕರೆಗೆ ಕಿವಿಗೊಡಲು ಯಾವೊಬ್ಬ ಗೆಳೆಯನಿಲ್ಲದ ಕಾರಣ ಹೊಟ್ಟೆ ಕಿಚ್ಚಿಗೋ ಅಥವಾ ಅವರ ಪ್ರಣಯದಾಟವನ್ನು ನನ್ನೊಟ್ಟಿಗೆ ಹೇಳಿ ತನ್ನ ನಾಲಿಗೆ ಚಪಲ ತೀರಿಸಿಕೊಳ್ಳುತ್ತಿದ್ದಳೋ ಕಾಣೆ.  ಅವರಿಬ್ಬರ ಪ್ರಣಯ ಪ್ರಸಂಗಗಳನ್ನೆಲ್ಲ ಇಂಚಿಂಚೂ ಬಿಡದೆ ನನ್ನ ಕಿವಿಯಲ್ಲಿ ಊದಿ ಬಿಡುತ್ತಿದ್ದಳು. ಹೀಗೆಯೇ ಒಂದು ದಿನ ಅಚಾನಕ್ಕಾಗಿ ಗೌರಿ ನನ್ನ ಕಣ್ಣಿಗೆ ಬಿದ್ದಿದ್ದಳು. ಅಚಾನಕ್ಕಾಗಿ ಅಂದರೆ ಹುಡುಗನ ಸಮೇತ  ಸಿಕ್ಕಿ ಬಿದ್ದಿದ್ದಳು ಕಳ್ಳಿ. ಆ ಹುಡುಗ ಶೇಖರನೇ ಎಂದು ಮನೀಷಾಳ ಜೊತೆಗಿನ ಕಾನ್ವರ್ಜೇಷನ್ ಆಧಾರದ ಮೇಲೆ ನನಗೆ ತಿಳಿದುದಾಗಿತ್ತು. ಗೌರಿ ಪೇಚಿಗೆ ಬಿದ್ದವಳಂತೆ ಕಂಡರೂ ಸಾವಕಾಶವಾಗಿ ಸಾವರಿಸಿಕೊಂಡು ಶೇಖರನನ್ನು ನನಗೆ ಪರಿಚಯಿಸಿದಳು. ಶೇಖರ ತುಂಬ ಒಳ್ಳೆಯ ಹುಡುಗ. ಆಪ್ತವಾಗಿ ಮಾತಾಡಿದ. ಒಬ್ಬ ಹೊಸಬನೊಡನೆ ಮಾತಾಡುತ್ತಿರುವೆನೆಂದು ನನಗೆ ಒಂದು ಕ್ಷಣಕ್ಕೂ ಅನಿಸಲಿಲ್ಲ. ಅವನ ಸಜ್ಜನಿಕೆ, ಆತ್ಮೀಯ ನಡುವಳಿಕೆ,  ಕಾಳಜಿಭರಿತ ಮಾತುಗಳು ಹಿತವೆನಿಸಿ ನನಗ್ಯಾಕೋ ಅಣ್ಣ ಎಂದು ಕರೆಯಬೇಕೆನಿಸಿತು.ಅಂದಿನಿಂದ ನಾನು ಮತ್ತು ಶೇಖರ ಸಹೋದರತೆಯ ಒಂದು ಮಧುರ ಬಂಧನದಲ್ಲಿ ಒಳಗಾಗಿದ್ದೆವು. ಶೇಖರ್ ನನಗೆ ಹೊರಗಿನವ ಎಂದು ಇವತ್ತಿನವರೆಗೂ ಅನ್ನಿಸಲಿಲ್ಲ.

ಆದರೆ, ಈ ಹೊತ್ತು ಶೇಖರ ಒಬ್ಬ ಅಪರಿಚಿತ ಹುಡುಗನ ಜೊತೆಯಾಗಿ ಬಂದಿದ್ದ. ನನ್ನ ಮುದ್ದು(ಮನೋಜ್) ವಿಷಯ ಆ ಅಪರಿಚಿತ ಹುಡುಗನ ಎದುರಿಗೆ ಹೇಗಪ್ಪ ಮಾತಾಡೋದು? ಅಲ್ಲದೇ ಮುದ್ದು ಬೇರೆ ನನ್ನ ಫೋಟೋ ಶೇಖರ್ ಹತ್ರ ಕೊಟ್ಟಿರು ಅಂದಿದ್ದಾನೆ. ಹೇಗೆ ಕೊಡೋದು? ಒಳ್ಳೆ ಸಂಕಟಕ್ಕೆ ಸಿಲುಕಿದ್ದೆ. 
ಪ್ರೀತಿ ಮಾಡಿದೀನಿ ಅದಕ್ಕ್ಯಾಕೆ ಹೆದರಿಕೊಳ್ಳುವುದು? ಭಂಡ ಧೈರ್ಯ ತೋರಿ ಮಾತಾಡಿಸಿಯೇ ಬಿಟ್ಟೆ.
ಹಾಯ್ ಶೇಖರ್, ಹೇಗಿದ್ದಿಯಪ್ಪ? ಗೌರಿ ಹೇಗಿದ್ದಾಳೆ? 
ಎಂದು ವಿಚಾರಿಸುತ್ತ ನನ್ನ ಫೋಟೋ ಇರುವ ಎನ್ವಲಪ್ಪನ್ನ ಅವನ ಕೈಗಿಟ್ಟೆ. ಶೇಖರ್ ಕೂಡ ಅಷ್ಟೇ ಆತ್ಮೀಯತೆಯಿಂದ ನಾನ್ ಸೂಪರ್ ಕಣೇ. ಗೌರಿನೂ ಚೆನ್ನಾಗಿದ್ದಾಳೆ. ನೀನು ಒಂದು ಕಾಲ್ ಕೂಡ ಮಾಡ್ತಿಲ್ವಂತೆ. ಯಾವಾಗ್ಲೂ ಅದನ್ನೇ  ಗೊಣಗ್ತಾ ಇರ್ತಾಳೆ.  
"ಅವಳು ಮನೋಜ್ ಜೊತೆ ಬಿಜಿ ಇರುವಾಗ ನಿಂದೇನೇ ಬೇಳೆಕಾಳು"? ಅಂತ ನಾನೇ ಸಮಜಾಯಿಷಿ ಹೇಳಿರ್ತೀನಿ ಎನ್ನುತ್ತ ತನ್ನ ಎಡಗಣ್ಣನ್ನ ಹೀಗೆಯೇ ಒಮ್ಮೆ ಮಿಟುಕಿಸಿ ದೊಡ್ಡದಾಗಿ ನಕ್ಕುಬಿಟ್ಟ. ಸಂಜೆಯ ಸೂರ್ಯ ನನ್ನ ಕೆನ್ನೆಯ ಮೇಲೆ ಅಸುನೀಗುತ್ತಿರುವುದು ಸ್ಪಷ್ಟವಾಗಿ ಕೆಲ ನಿಮಿಷಗಳವರೆಗೆ ನನ್ನ ದೃಷ್ಟಿ ನೆಲದ ಮೇಲೆ ತೆವಳಾಡುತ್ತಿತ್ತು. ಕಾಲುಗಳು ಅದಾವುದೋ ಹೊಸ ರಂಗೋಲಿ ತೀಡುತ್ತಿತ್ತು.

ಮೀರಾ, ಇವರು ನನ್ನ ಫ್ರೆಂಡ್ ಅರುಣ್. ನಾನೂ ಇವರು ಒಂದೇ ಕಾಲೇಜಿನಲ್ಲಿ ಓದ್ತಿದ್ದೀವಿ. ಇವರು ನನಗೆ ಮನೋಜನಷ್ಪೇ ಆಪ್ತರು ಎನ್ನುತ್ತು ಅಪರಿಚಿತ ವ್ಯಕ್ತಿಯ ಪರಿಚಯ ಮಾಡಿಸಿದ. ಅರುಣ ಕಡೆ ನೋಡುತ್ತ:'ಅರುಣ್, ಇವರು ಮೀರಾ. ದೇವರು ನನಗೆ ಕೊಟ್ಟ ತಂಗಿ. ಮನೋಜ್ ಒಳ್ಳೊಳ್ಳೆ ಪಾಠ ಮಾಡಿ ಸ್ಕೂಲ್ ಮಕ್ಕಳ ಮನ್ಸು ಕದ್ದರೆ, ಆ ಟೀಚರ್ ಮನೋಜನ ಮನ್ಸನ್ನೆ ಕದ್ದು ಬಿಟ್ಟಿದ್ದಾಳೆ ಈ ನನ್ನ ಮುದ್ದು ತಂಗಿ ಎಂದು ಶೇಖರ್ ತುಂಟು ತುಂಟಾಗಿ ನನ್ನ  ಪರಿಚಯ ಮಾಡಿಸಿದ.

ಬಿಳಿ ಬಣ್ಣದ ಕಾರ್ಗೋ ಪ್ಯಾಂಟ್ ಧರಿಸಿದ್ದ ಅವರನ್ನು ಆವರೆಗೂ ಮೊಳಕಾಲಿಗೂ ಕೆಳಗಷ್ಟೇ ನೋಡಿದ್ದ ನಾನು ಅವರ ಕಣ್ಣುಗಳಿಗೆ ಕಣ್ಣು ಮಿಲಾಯಿಸುತ್ತ: ಹಾಯ್! ಹೇಗಿದ್ದೀರಾ? ಎಂದು ಔಪಚಾರಿಕವಾಗಿ ಎರಡು ಮಾತಾಡಿದ್ದೆ. ಅವರು ಕೂಡ, ಅಷ್ಟೇ ನಸುನಗೆ ಬೀರುತ್ತ ಮಾತಾಡುತ್ತಿದ್ದರು. ಬಿಜಾಪೂರದ ಬಸ್ಸು ದೊಡ್ಡದಾದ ಸೌಂಡಿನಲ್ಲಿ ಹಾರ್ನ್ ಹಾಕುತ್ತ  ಎದೆಯ ಮೇಲೆ ನಿಂತಂತೆ ತನ್ನ ಸ್ಟ್ಯಾಂಡಿನಲ್ಲಿ ನಿಂತುಬಿಟ್ಟಿತು. ಗಡಿಬಿಡಿಯಿಂದ ಈಗಷ್ಟೇ ರಿಲಾಕ್ಸ್ ಆಗಿ ನಿಂತುಕೊಂಡಿದ್ದೆ.  ಅವಸರ ಎನ್ನುವುದು ಮತ್ತೆ ಕಾಲು ತೊಡಕಿದಂತಾಯಿತು. ದೂರದ ಪ್ರಯಾಣ. ಸೀಟು ಸಿಗದೇ ಹೋದರೆ ಕಷ್ಟವೆಂದು ಶೇಖರನಿಗೆ ಬೈ ಹೇಳಿ ಬಸ್ ಹತ್ತಿ ಕಿಟಕಿಯ ಸೀಟಿಗೆ ತಲೆ ಆಣಿಸಿ ಕುಳಿತುಬಿಟ್ಟೆ. ಶೇಖರ್ ತನಗೂ ಏನೋ ಕೆಲಸವಿದೆ ಎಂದು ಅರುಣ್ ಜೊತೆ ಹೊರಟು ನಡೆದ.

ಹತ್ತು ನಿಮಿಷಗಳ ನಂತರ ಬಸ್ ಹೊರಡಲು ಸಿದ್ಧವಾದಾಗ ನನ್ನವ ರಿಂಗಿಸುತ್ತಿದ್ದ. ಅರಳುಗಣ್ಣಿಂದ ಫೋನ್ ರಿಸೀವ್ ಮಾಡಿ ಹೇಳು ಎನ್ನುವ ಮೊದಲೇ, ಕೆಟ್ಟ ಕೋಪ ಬರ್ತಿದೆ ಕಣೆ ನಿನ್ನ ಮೇಲೆ. ನನಗೊಂದು ಬೈ ಕೂಡ ಹೇಳದೇ ಹಾಗೆ ಹೋಗಿಬಿಡುವುದ?!  ಆವಾಜ್ ಜೋರು ಮಾಡಿದ. ನನ್ನವ ಸ್ವಲ್ಪ ಮುಂಗೋಪಿ. ಮೆತ್ತಗೆ ಮಾತಾಡ್ತ ನೈಸ್ ಮಾಡಿದ್ರೆ ಕರಗಿ ಬಿಡ್ತಾನೆ.

ನೀನೆಲ್ಲಿದಿಯ? ನಿನ್ನೆ ರಾತ್ರಿ ಫೋನಲ್ಲಿ, ಬ್ಲಾಕ್ ಟೀಚಿಂಗ್ ಇದೆ. ಲೆಸನ್ ಪ್ಲಾನ್ ಬರೆಯೋದಿದೆ ಅಂತೆಲ್ಲ ಹೇಳ್ತಿದ್ದಲ್ಲ. ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು. ಸಾಯಂಕಾಲ ರೀಚ್ ಆದ್ಮೇಲೆ ನಾನೇ ಕಾಲ್ ಮಾತಾಡಿದ್ರಾಯಿತು ಅಂತ ಸುಮ್ಮನಿದ್ದೆ ಅಂದೆ.

ನಿಜ.ಅದೆಲ್ಲ ಇದೆ. ಏನೋ ಕೆಲಸ ಇತ್ತು ಬಸ್ ಸ್ಟಾಪಿಗ್ ಬಂದಿದಿನಿ. ನೀನಿರುವ ಬಸ್ ಗೊತ್ತಾಯಿತು. ನಿನ್ನ ಕಿಟಕಿಯಿಂದ ನೇರವಾಗಿ ನೋಡು ಅಂದ. ಆ ದಿನ ನನಗಾಗಿಯೇ ಒಂದು ಪರಮಾಶ್ಚರ್ಯ ಕಾದಿತ್ತು. ಬೆಳಿಗ್ಗೆಯಿಂದ ಶೇಖರನ ಪಕ್ಕಕ್ಕೆ ನಿಂತು ಅರುಣ ಎನ್ನುವವನ ಹೆಸರಿನಲ್ಲಿ ನನ್ನನ್ನ ಮುಖಃತ ಭೇಟಿ ಮಾಡಿದ ಹುಡುಗ ಬೇರೆ ಯಾರೂ ಆಗಿರಲಿಲ್ಲ ನನ್ನ ಹೃದಯದರಸ ಮನೋಜ್ ಆಗಿದ್ದ. ಅವನು ನನಗೆ ಇಂಥದ್ದೊಂದು ಸರ್ಪ್ರೈಸ್ ಕೊಡುತ್ತಾನೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಒಟ್ಟಿನಲ್ಲಿ ನನಗಾದಿನ ಹಬ್ಬವೋ ಹಬ್ಬ.

ಶೇಖರನ ಮೂಲಕ ಮನೋಜನ ಫೋನ್ ಕಾಂಟಾಕ್ಟ್ ಆಗಿ ಸ್ನೇಹ ಬೆಳೆದು ಸ್ನೇಹ ಪ್ರೀತಿಗೆ ರೂಪಾಂತರಗೊಂಡಿತ್ತು. ಯಾರೆ ನೀನು ಚೆಲುವೆ ಫಿಲ್ಮಿ ಸ್ಟೈಲ್ ಥರಾನೇ ಫೋನಲ್ಲೇ ಲವ್ ಲೈಫ್ ನಡೆಸುತ್ತ ಭವಿಷ್ದ ನೀಲಿ ನಕಾಶೆಯನ್ನು ರೆಡಿ ಮಾಡುವಲ್ಲಿ ತಲ್ಲೀನರಾಗಿದ್ದೆವು. ಆ ದಿನದ ಮೊದಲ ಭೇಟಿ ಆಶ್ಚರದೊಟ್ಟಿಗೆ ಸಂತಸವನ್ನೂ ತಂದಿತ್ತು. ನಮ್ಮಿಬ್ಬರ ಬದುಕು ಅಂದು ಮತ್ತೊಂದು ಮಜಲಿಗೆ ಕಾಲಿಟ್ಟಿದ್ದು ನನಗೆ ಕಾಣಿಸುತ್ತಿತ್ತು.

ನನ್ನಿಷ್ಟದ ಬಣ್ಣ ತಿಳಿನೀಲಿ. ಅದೇ ಬಣ್ಣದ ಶರ್ಟ್ ನೀ ಹಾಕಿದ್ದನ್ನು ನಾ ಗುರಿತಿಸದೇ ಹೋದೆನಲ್ಲ. ಮನಸಲ್ಲಿ ಅರಣ ನನ್ನ ಮನೋಜ್ ಎಂದು ನನಗೇಕೆ ಅನಿಸಲಿಲ್ಲ ಎಂದು ಈಗಲೂ ಮನಸ್ಸನ್ನು ಕೇಳುತ್ತೇನೆ.  ಮಾತುಗಳ ಮಧ್ಯ ಭಾವಲಹರಿಗೆ ತಾಳ ಹಾಕುತ್ತಿದ್ದ ಕಡುದಟ್ಟ ಹುಬ್ಬು ಅಗಲವಾದ ಹಣೆಯನ್ನು ಕುಣಿಯುವ ಮೈದಾನ  ಮಾಡಿಕೊಂಡಂತಿತ್ತು. ಮುದ್ದು ಮುದ್ದಾದ ಗಿಣಿ ಮೂಗು ಹೀಗೆಯೇ ಒಮ್ಮೆ ಜಗ್ಗಿ ತುಂಟಾಟವಾಡು ಎಂಬಂತಿತ್ತು. ಹಸನ್ಮುಖಿಯಾದ ಅವನ ಮುಖವಂತೂ ಆಪ್ತತೆಯ ಕೊಂಡಿ. ಆ ದಿನ ಖುಷಿ ನೂರ್ಮಡಿಸಿತ್ತು. ಮನಸ್ಸು ಹರಿಣಿಯಂತೆ ನರ್ತಿಸುತ್ತಿತ್ತು.

ಎಷ್ಟು ಬೇಗ ಬೆಸೆದುಹೋಗಿದ್ದೆವು ನಾವು ಮದುವೆ ಎನ್ನುವ ಬಂಧನದಲ್ಲಿ. ನಿಜಕ್ಕೂ ಅವನು ದ್ರವ ಜೀವಿ! ನನ್ನ ಉಸಿರೊಳಗೆ ಲೀನವಾದ ದ್ರವಜೀವಿ. ಮದುವೆಯಾಗಿ ಐದು ವರ್ಷವಾದರೂ ಎಲ್ಲವೂ ನಿನ್ನೆ ನಿನ್ನೆ ಘಟಿಸಿದಂತಿದೆ. ನೆನಪುಗಳ ಮಾತು ನಿಜಕ್ಕೂ ಮಧು ಮಧುರ.

"ಹ್ಯಾಪಿ ಆನಿವರ್ಸಿರಿ ಗಂಡ ಎಂದು ಸಂದೇಶ ಟೈಪಿಸಿ ಕೆಳಗಡೆ ವೆಲ್ ಇನ್ ಅಡ್ವಾನ್ಸ್. ನಾಳೆ ಬೇಗ ಹೊರಟು ಬನ್ನಿ". ಅಂತಲೂ ಬರೆದು ಕಳುಹಿಸಿದೆ. ಆ ಕಡೆಯಿಂದ: ಹೆ ಹೆ ಹೆ ಆಯ್ತು. ಲವ್ ಯೂ ಬಂಗಾರಿಯರ ಎಂದು ಮೆಸೆಜ್ ಬಂತು.

ಅವನು ಕೊಟ್ಟ ಅತೀ ಸುಂದರ ಉಡುಗೊರೆ ನನ್ನ   ಮಡಿಲಲ್ಲಿ ಪಿಳಿಪಿಳಿ ನಗುತ್ತಿತ್ತು. ರಾಶಿ ಪ್ರೀತಿ ಉಕ್ಕಿ ಎದೆಗಪ್ಪಿ ಮುದ್ದಿಸಿದೆ. ಕಣ್ಣು ಮುಚ್ಚುತ ನಾನೂ ಅವನ ಎದೆಗೆ ಒರಗಿದೆ. ಬಸ್ಸು ಓಡುತ್ತಿತ್ತು.

-ರುಕ್ಮಿಣಿ ಎನ್.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ನೆನಪುಗಳ ಮಾತು ಮಧುರ!: ರುಕ್ಮಿಣಿ ನಾಗಣ್ಣನವರ

Leave a Reply

Your email address will not be published. Required fields are marked *