ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ ಗೆಳತಿಯ ನೆನಪುಗಳು.. ಬಸ್ಸಿನಲ್ಲಿ ಯಾವತ್ತೋ ಒಂದಿನ ಪಕ್ಕದಲ್ಲಿ ಕೂತು, ಒಂದಷ್ಟು ದೂರಗಳ ಕಾಲ ಪಯಣಿಸಿದ ವ್ಯಕ್ತಿಯ ನೆನಪೂ ಇನ್ಯಾವತ್ತೋ ಒಂದಿನ ಆಗುತ್ತದೆ. ಒಂಟಿಯಾಗಿ ಕುಳಿತಾಗ, ನೆನಪಿನ ಲೋಕಕ್ಕೆ ಪಯಣಿಸಿದರೆ ಸಾಕು, ಅದೊಂದು ಅದ್ಭುತ ಲೋಕ.. ಅಲ್ಲಿ ನಮ್ಮ ಭಾವನೆಗಳ ಹೆಸರಿನಲ್ಲಿ ಹಲವು ಜೀವಗಳ ಕುಣಿದಾಟವಿರುತ್ತದೆ.. ಕಾಲೇಜಿನಿಂದ ಬಿಟ್ಟು ಹೊರಡುವಾಗ ಆತ್ಮೀಯತೆ ಭಾವದಿಂದ, ನಿನ್ನ ನಾ ಹ್ಯಾಂಗ ಮರೆಯಲಿ ಎಂಬ ಮಾತುಗಳಿಗೂ ಈ ನೆನಪುಗಳೆಂಬುದು ಜಾಗಮಾಡಿಕೊಟ್ಟುಬಿಟ್ಟಿರುತ್ತದೆ..ಎಂತಹ ವಿಚಿತ್ರವೆಂದರೆ ಯಾವುದೋ ಒಬ್ಬ ವ್ಯಕ್ತಿಯ ನೆನಪಾದರೆ ಸಾಕು, ಅವರ ಜೊತೆ ಕಳೆದ, ಮಾತನಾಡಿದ ಎಲ್ಲಾ ಕ್ಷಣಗಳೂ ಒಮ್ಮೆ ಕಣ್ಣ ಮುಂದೆ ಹಾದುಹೋಗಿಬಿಡುತ್ತದೆ.
ಮನದ ಪರದೆಯಲಿ, ಯಾರ್‍ಯಾರದೋ ಹೆಜ್ಜೆ ಗುರುತುಗಳು ನೆನಪಾಗಿ ಉಳಿದುಬಿಡುತ್ತದೆ.. ಒಂದಷ್ಟು ಜನರ ನೆನಪುಗಳು ವಾಕರಿಕೆ ಬಂದಂತಾದರೆ, ಇನ್ನೊಂದಿಷ್ಟು ಜನರ ನೆನಪುಗಳು ಮತ್ತೆ ಮತ್ತೆ ಬರಲೆಂಬ ಆಸೆ.. ಬೇಡವಾದ ನೆನಪುಗಳ ನಂಟು ಯಾಕೆ ಎಂದು ಕಿತ್ತು ಬಿಸಾಕಲು ಪ್ರಯತ್ನಿಸಿದರೂ, ಜೀವನವೆಂಬುದು ಸಿಹಿಕಹಿಗಳ ಮಿಲನ ಎಂಬುದನ್ನು ಹೃದಯ ತಿಳಿಸಿ ಹೇಳುತ್ತಿರುತ್ತದೆ..ಎಂದೋ ಒಂದಿನ ಬಿದ್ದ ಕೆಟ್ಟ ಕನಸುಗಳ ನೆನಪೂ ಕೂಡ, ಎಷ್ಟೋ ದಿನಗಳ ಕಾಲ ಮುಖದಲ್ಲೇನೋ ಅಭದ್ರತೆಯ ಭಾವವನ್ನು ತೋರ್ಪಡಿಸುವುದು..ಬಾಲ್ಯದಲ್ಲಿ ತಿನ್ನುತ್ತಿದ್ದ ’ಆಸೆ’ ಚಾಕಲೇಟಿನಿಂದ ಹಿಡಿದು, ಮೊನ್ನೆ ಮೊನ್ನೆಯಷ್ಟೇ ತಿಂದ ಫಿಜ್ಜಾಗಳ ನೆನಪುಗಳೂ ಕುಂತಿರುತ್ತದೆ.. ಎಲ್ಲಾ ನೆನಪುಗಳು ಎಲ್ಲಾ ಸಮಯದಲ್ಲಿ ಬರದಿದ್ದರೂ, ಯಾವಾಗಲೋ ಒಂದಿನ ಬಂದೇ ಬರುತ್ತದೆ.. ಏನನ್ನೋ ಯೋಚಿಸುತ್ತಿರುವಾಗ ಥಟ್ಟಂತೆ, ಬೇರ್‍ಯಾವುದೋ ನೆನಪುಗಳಾಗಿಬಿಡುತ್ತದೆ.. ಈ ನೆನಪುಗಳಿದ್ಯಲ್ಲ.. ಅದೊಂಥರಾ ಕ್ರೇಜಿ.. ಒಮ್ಮೆಮ್ಮೆ ಸತಾಯಿಸುತ್ತೆ.. ಅಳಿಸುತ್ತೆ.. ಬೇಡವೆಂದು ದೂಡಿ ಹಾಕಿದರೂ ಮತ್ತೆ ಬಂದು ತಬ್ಬಿಕೊಳ್ಳುತ್ತದೆ.. ಇನ್ಯಾವುದೋ ಸಂದರ್ಭಕ್ಕೆ ಬಾ ಎಂದು ಕರೆದರೂ ಬರುವುದಿಲ್ಲ..
ಒಂದಷ್ಟು ಸ್ನೇಹಿತರ ನೆನಪುಗಳು, ಬಾಲ್ಯದಲ್ಲಿ ಮನೆಯ ಡಬ್ಬಿಯಲ್ಲಿರುವ ಉಂಡೆಯನ್ನು ಅಮ್ಮನಿಗೆ ಗೊತ್ತಾಗದಂತೆ ತಿನ್ನುವ ನೆನಪುಗಳು ಜೋರಾಗಿ ನಗಿಸುವುದಂತೂ ಹೌದು.. ಪಕ್ಕದ ಮನೆಯ ಪುಟ್ಟ ಹುಡುಗಿಯ ಹಠ ನೋಡಿದಾಗ, ಒಂದೇ ಬಾರಿ ನಮ್ಮ ಬಾಲ್ಯವೂ ನೆನಪಾಗಿ, ಛೇ ಪಾಪ ನಾನು ಅಮ್ಮನಿಗೆ ಎಷ್ಟು ಕಷ್ಟ ಕೊಡುತ್ತಿದ್ದೆ ಎಂದೂ ಅನಿಸಿದ್ದುಂಟು..ಜೋರು ಮಳೆ ಬಂದಾಗ ಹಿಂದಿನ ವರುಷದ ಮಳೆಗಾಲದಲ್ಲಿ ಛತ್ರಿ ತೆಗೆದುಕೊಂಡು ಕಾಲೇಜಿಗೆ ಹೋಗದೇ, ಒದ್ದೆಯಾಗಿ ಬಂದ ದಿನಗಳೂ ನೆನಪಾಗುತ್ತದೆ. ಎಷ್ಟೋ ಬಾರಿ ಪರೀಕ್ಷೆಗೆಂದು ಓದಿದ್ದ ವಿಷಯಗಳು, ಪರೀಕ್ಷೆಯಲ್ಲಿ ನೆನಪಾಗದೇ, ಪರೀಕ್ಷೆ ಮುಗಿದಮೇಲೆ ನೆನಪಾಗಿ ಉರಿಸಿದ್ದುಂಟು.. ಬೆಂಗಳೂರಿನ ದೊಡ್ಡ ಹೋಟೇಲ್‌ಗಳಿಗೆ ಹೋಗಿ, ಪಾನೀಪುರಿ ತಿಂದಾಗ, ಚನ್ನಾಗೇ ಇಲ್ಲ.. ರಸ್ತೆ ಬದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವವನೇ ಚನ್ನಾಗಿ ಮಾಡುತ್ತಿದ್ದ ಎಂದು ಅವನನ್ನೂ ಆ ಸಮಯಕ್ಕೆ ಸ್ಮರಿಸುತ್ತೇವೆ.. ನೆನಪುಗಳೆಂದರೆ, ಕೇವಲ ನಮ್ಮ ಆತ್ಮೀಯರು ಮಾತ್ರ ಆಗಬೇಕೆಂದಿಲ್ಲ.. ಒಂದು ಐದು ನಿಮಿಷ ಚನ್ನಾಗಿ ಮಾತನಾಡಿದ ವ್ಯಕ್ತಿಯೂ ಕೂಡ ನೆನಪಿನಂಗಳದಲ್ಲಿ ಸ್ಥಾನ ಪಡೆದುಕೊಂಡುಬಿಟ್ಟಿರುತ್ತಾನೆ..
ಎಲ್ಲರ ಪಾಲಿಗೂ ಈ ನೆನಪೆಂಬುದು ಕಾಡುವ, ಬೇಡುವ, ಸಂತೈಸುವ, ಸಮಾಧಾನಿಸುವ ಬುತ್ತಿ.. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ, ಬಡತನದಲ್ಲಿ ಕಳೆದ ವ್ಯಕ್ತಿಗೆ ಆ ನೆನಪೇ ಚಂದ.. ಬದುಕು ಎಲ್ಲ ನೆನಪುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಕೊಡುತ್ತಿರುತ್ತದೆ.. ಸಿಹಿಯೋ ಕಹಿಯೋ, ಒಂದೊಮ್ಮೆ ಬೇರೆ ಲೋಕಕ್ಕೆ ಕೊಂಡೊಯ್ಯುವುದಂತೂ ಹೌದು..
*****
ಮಧುರ ನೆನಪುಗಳು
ಯಾವಾಗಲೂ ಆಹ್ಲಾದಕರ.
ನೆನಪಿನ ದೋಣಿಯಲ್ಲಿ
ಸಾಗುವುದು ಖುಷಿ-ಖುಷಿ.
ಚೆನ್ನಾಗಿದೆ ಪದ್ಮಾ ಭಟ್.
ಚೆನ್ನಾಗಿದ್ದು ಪದ್ಮಾ.. ಸವಿ ಸವಿ ನೆನಪು, ಸಿಹಿಸಿಹಿ ನೆನಪು, ಸಾವಿರ ನೆನಪು… ಹಾಡು ನೆನಪಾಯ್ತು