ನೆನಪಿನ ಪಯಣ:  ಬಾಗ – 1: ಪಾರ್ಥಸಾರಥಿ ಎನ್

parthasarathy narasingarao
 
ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ !
ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು. 
ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ. 

ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ ಏನು ತಿಂದೆ, ಮಧ್ಯಾನ್ಹದ ಊಟ ,   ಕೆಲಸ ಹೀಗೆ ನೆನೆಯುತ್ತಿರುವಾಗಲೆ ನಿದ್ರೆ ಆವರಿಸುತ್ತ ಇತ್ತು.    

ಕೆಲವು ದಿನ ನನ್ನ ಯೋಚನೆಯನ್ನು ಹಿಂದಕ್ಕೆ ದೂಡುತ್ತ ಹೋದೆ. ನಿನ್ನೆ ಏನಾಯಿತು , ಹಾಗೆ ಕಳೆದ ಬಾನುವಾರ ತಿಂಡಿ ಏನು ?  ಮನೆಗೆ ಯಾರು ಬಂದಿದ್ದರು, ಏನೆಲ್ಲ ಆಯಿತು ಹೀಗೆ. 

ಅಂತಹ ಪ್ರಯೋಗ ಮುಂದುವರೆದು, ಮಲಗುವ ಮುಂಚೆ ನನ್ನ ಮನಸ್ಸು,  ಕಳೆದ ವರ್ಷಗಳು, ಹಿಂದೆಲ್ಲ ಇದ್ದ ಊರು, ಕೆಲಸದ ನಿಮಿತ್ತ ಇದ್ದ ಸ್ಥಳ, ಬೇಟಿ ಮಾಡಿದ ಹಳೆಯ ಸ್ನೇಹಿತರು. ಎಲ್ಲ ಆಗುತ್ತಿರುವಂತೆ, ಮದುವೆ, ಮದುವೆಗೆ ಮುಂಚಿನ ದಿನಗಳು, ಕಾಲೇಜಿನ ದಿನ, ಮತ್ತೂ ಹಿಂದಕ್ಕೆ ಹೋಗಿ ಶಾಲೆಯಲ್ಲಿನ ದಿನಗಳು. ಅಪ್ಪ ಅಮ್ಮ ಅಣ್ಣ ತಮ್ಮಂದಿರ ಒಡನಾಟ. ಆಗಿನ ದಿನಗಳನೆಲ್ಲ ನೆನೆಯುವುದೆ ಒಂದು ಕ್ರಮವಾಯಿತು. ತೀರ ಚಿಕ್ಕ ವಯಸಿನ ಯಾವುದೋ ದಿನಕ್ಕೆ ಹೋಗಿ ನನ್ನ ನೆನಪಿನ ಪಯಣ ನಿಂತು ಬಿಡುತ್ತಿತ್ತು. 

ತುಂಬಾ ಹಿಂದೆ ಅಂದರೆ ನನ್ನ ಹುಟ್ಟಿನ ದಿನ, ಅದನ್ನು ನೆನೆಯಲು ಸಾದ್ಯವಾದರೆ!!  
ಹುಟ್ಟಿನ ದಿನದಿಂದ ಹಿಂದಕ್ಕೆ ಹೋಗಲು ಸಾದ್ಯವಿಲ್ಲವೇನೊ!! 

ಅದು ಹೇಗೆ?  ಹಾಗಾದರೆ, 

ನಾನು ಈ ಭೂಮಿಯ ಮೇಲೆ ಬಂದ ಕ್ಷಣಕ್ಕಿಂತ ಮುಂಚೆ ನನ್ನ ಅಸ್ತಿತ್ವ ಇರಲೇ ಇಲ್ಲವೇ ?  
ಹೌದು! 
ಅದು ಸುಳ್ಳಲ್ಲವೆ ? . 
ನಾನು ಈ ಭೂಮಿಯ ಒಂದು ಭಾಗವಾಗಿರುವೆ ಅನ್ನುವಾಗ, ಈ ಭೂಮಿಬಂದ ಕ್ಷಣದಿಂದಲೂ ನಾನು ಇಲ್ಲಿಯೇ ಇದ್ದೇನೆ ಅನ್ನುವ ಯೋಚನೆ ನನ್ನಲ್ಲಿ ತುಂಬಿಕೊಳ್ಳುತ್ತಿತ್ತು.  ಅಂತಹ ಯೋಚನೆಗೆ ಒಂದು ನಿಶ್ಚಿತವಾದ ರೂಪವನ್ನು ಕೊಡಲು ನನಗೆ ಸಾದ್ಯವಾಗುತ್ತಿರಲಿಲ್ಲ.

ಅಂತಹ ದಿನಗಳಲ್ಲಿ ನಾನು ಬಾನುವಾರ ಅಥವ ರಜಾದಿನಗಳಲ್ಲಿ ಬೇಟಿ ಮಾಡುತ್ತಿದ್ದ ಸ್ನೇಹಿತರ ಮನೆಯಲ್ಲಿ ಒಮ್ಮೆ ಈ ಬಗ್ಗೆ ಮಾತು ಪ್ರಾರಂಭವಾಯಿತು. 

ಆದಿನ ಇದ್ದದ್ದು ನನ್ನ ಗೆಳೆಯ ಆನಂದನ ಮನೆಯಲ್ಲಿ.

ಅವನು ನನಗೆ ತೀರ ಅತ್ಮೀಯನೆ. ಅವನ ಪತ್ನಿ   ಸಹ ಪರಿಚಿತಳೆ, ಎಷ್ಟು ಅಂದರೆ ಅವನ ಜೊತೆ ಮಾತನಾಡುವಷ್ಟೆ ಸಲುಗೆಯಿಂದ ಆಕೆಯ ಜೊತೆ ಸಹ ಮಾತನಾಡುತ್ತಿದ್ದೆ. ಆಕೆಯ ಹೆಸರು ಜ್ಯೋತಿ. 
ಅವರಿಬ್ಬರಲ್ಲದೆ ಜ್ಯೋತಿಯ ಸ್ನೇಹಿತೆ ಸಂಧ್ಯ ಎನ್ನುವವರು, ಹಾಗು ಆನಂದನ ಗೆಳೆಯ ಆರ್ಯ ಹಾಗು ಅವನ ಪತ್ನಿ ಉಷಾ. ಹಾಗು ನಮ್ಮ   ನಡುವೆ ಸ್ವಲ್ಪ ವಯಸ್ಸಾದ ಶ್ರೀನಿವಾಸಮೂರ್ತಿಗಳು ಸಹ ಇದ್ದರು. 

ಮಧ್ಯಾಹ್ನನ ಊಟದ ನಂತರ ಮಾತನಾಡುತ್ತ ಕುಳಿತಿದ್ದೆವು. ಮಲಗುವಾಗ ನಾನು ಮಾಡುತ್ತಿದ್ದ ಈ ರೀತಿಯ ಪ್ರಯೋಗವನ್ನು ಹೇಳಿದೆ.  
ಕೇಳಿ ಅವರೆಲ್ಲ ಕುತೂಹಲದಿಂದ ನಕ್ಕರು. 

ನಂತರ ನನ್ನ ಪ್ರಶ್ನೆ ಬರುತ್ತಲೆ ಸ್ವಲ್ಪ ಎಲ್ಲರೂ ಗಂಭೀರ.  
ನಮ್ಮ ಹುಟ್ಟಿಗೆ ಮುಂಚೆ ನಮ್ಮ ಅಸ್ತಿತ್ವ ಇರಲಿಲ್ಲವೇ ?

’ ತೀರ ಇರಲೇ ಇಲ್ಲ ಎಂದು ಹೇಳಲ್ಲಿಕ್ಕಾಗದು, ಹಿಂದಿನ ಜನ್ಮ ಅಂತೆಲ್ಲ ಹೇಳ್ತಾರಲ್ಲ’
ಶ್ರೀನಿವಾಸ ಮೂರ್ತಿಗಳು ನುಡಿದಾಗ, ಆರ್ಯ ನಕ್ಕುಬಿಟ್ಟ. 
ಮೂರ್ತಿಗಳು ಕೋಪಗೊಂಡರು.
ನಾನು ಹೇಳಿದೆ 
 ಇಲ್ಲ ನಾನು ಆ ಬಗ್ಗೆ , ಹಿಂದಿನ ಜನ್ಮ.. ಆ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ನಮ್ಮ ಬೌತಿಕ ಅಸ್ತಿತ್ವದ ಬಗ್ಗೆ, ಹಾಗೆ ಹೇಳುವದಾದರೆ , ನಮ್ಮ ಹುಟ್ಟಿಗೆ ಮುಂಚೆ ನಾವು ಅಂಶ ರೂಪದಲ್ಲಿ ನಮ್ಮ ತಂದೆ ತಾಯಿಯರಲ್ಲಿ ಜೀನ್ಸ್ ಅಥವ ಜೀವಕೋಶಗಳ ರೂಪಿನಲ್ಲಿ ಜೀವಿಸಿರುತ್ತೇವೆ, ಹಾಗೆ ನಮ್ಮ ತಂದೆ ಅವರ ತಂದೆಯ ದೇಹದ ಅಂಶವಾಗಿರುತ್ತಾರೆ, ಹಾಗೆ ಹಿಂದಕ್ಕೆ ಹೋದರೆ, ನಮ್ಮ ವಂಶದಲ್ಲಿ ನಾವು ಅಂಶರೂಪವಾಗಿ ಇದ್ದೆ ಇರುತ್ತೇವೆ ಅಲ್ಲವೇ ?

ಉತ್ತರ ಅನ್ನುವಂತೆ.ಶ್ರೀನಿವಾಸಮೂರ್ತಿಗಳು ಮತ್ತೆ ಮಾತಿನ ಜಾಡು ತಪ್ಪಿಸಿದ್ದರು

ಹೌದು , ಅದಕ್ಕೆ ಮೂವತ್ತೆರಡು ತಲೆ ಅನ್ನೋದು, ನಮ್ಮ ಪಿತೃಗಳ ರೂಪದಲ್ಲಿ ನಾವು ಇದ್ದೆ ಇರುವೆವು. ತಿಥಿಮಾಡುವಾಗಲು ಅಷ್ಟೆ, ನಮ್ಮ ತಂದೆ ಹಾಗು ತಾಯಿಯ ಹಿಂದಿನ ಮೂವತ್ತೆರಡು ತಲೆಗಳ ಹೆಸರು ಹೇಳುವೆವು ಅಲ್ಲವೆ?’
 

ನಾನು ಅವರ ಮಾತು ಬಿಟ್ಟು ಪುನಃ ಹೇಳಿದೆ,

ಹಾಗೆ ನೋಡುವದಾದರೆ, ಮನುಷ್ಯ ಎನ್ನುವ ಜೀವಿಯ ಹುಟ್ಟು ಆರು ಮಿಲಿಯನ್  ವರ್ಷಗಳ ಹಿಂದೆ ಆಯಿತು, ಅನ್ನುವದಾದರೆ ನಾವು ಆಗಿನಿಂದಲೇ ಇದ್ದೇವೆ. ನಮ್ಮ ಈ ಸ್ವರೂಪದಲ್ಲಿ ಅಲ್ಲದಿದ್ದರೂ , ನಮ್ಮ ಬೌತಿಕ ಅಂಶರೂಪದಲ್ಲಿ, ಜೀನ್ಸ್ ಗಳ ಕೋಶಗಳಾಗಿ ಇಲ್ಲಿ ನೆಲೆಸೇ ಇದ್ದೇವೆ. ಹಾಗಾಗಿ ನಮ್ಮ ನೆನಪು ಸಹ ನಮ್ಮ ಹುಟ್ಟಿನಿಂದಲೂ ಹಿಂದೆ ಹೋಗುವ ಸಾದ್ಯತೆ ಇದೆ. ಆದರೆ ಹುಟ್ಟಿನ ಹಿಂದೆ ಬಿಡಿ, ನಮ್ಮ ಹುಟ್ಟಿನ ನಂತರದ ದಿನಗಳನ್ನು ಸಹ ವ್ಯವಸ್ಥಿತವಾಗಿ ಜೋಡಿಸಲು ನಮ್ಮಿಂದ ಆಗುವದಿಲ್ಲ’

ಅದಕ್ಕೆ ಆರ್ಯ ಎಂದ, 

ಅದರಲ್ಲೇನು ಕಷ್ಟವಿದೆ, ಸಣ್ಣ ಸಣ್ಣ ಘಟನೆಗಳೆಲ್ಲ ಮರೆತಿರಬಹುದು, ಅದನ್ನೆಲ್ಲ ನೆನಪಿಡಲೂ ಸಾದ್ಯವಿಲ್ಲ, ಆದರೆ ನಮ್ಮ ಜೀವನದ ಪ್ರಮುಖ ಘಟನೆಗಳೆಲ್ಲ ಸಾದಾರಣ ನೆನಪಿನಲ್ಲಿ ಇರುತ್ತೆ, ಅದನ್ನು ಕ್ರಮದಲ್ಲಿ ಜೋಡಿಸಿಕೊಳ್ಳಬಹುದೇನೊ ಅಂದ

ಅದಕ್ಕೆ ನಾನೆಂದೆ 
ಇಲ್ಲ ಅಷ್ಟು ಸುಲುಭವಲ್ಲ, ನಮ್ಮ ನೆನಪು ಅದರಲ್ಲೂ ಗಂಡಸರ ನೆನಪು ಅತೀ ಸೀಮಿತ. ಕೆಲ ಹೆಂಗಸರಲ್ಲಿ ಅಂತಹ ಶಕ್ತಿ ಜಾಸ್ತಿಯೇ ಇರುತ್ತದೆ. ಆದರೆ ಅವರು ಅದನ್ನು ನಿದ್ದೆ ತರಿಸಲು ಮಾತ್ರ ಉಪಯೋಗಿಸುವದಿಲ್ಲ 
ಎಂದು ನಕ್ಕೆ 

ಆನಂದ ಬಾಯಿ ಬಿಟ್ಟ

ನಿನ್ನ ಮಾತು ನಿಜವಪ್ಪ, ನನಗಾದರೆ ಅದೇನೊ ಮದುವೆಯ ದಿನವೇ ಮರೆತುಹೋಗಿರುತ್ತದೆ, ಇವಳಾದರೆ ನೋಡು,( ಎನ್ನುತ ಜ್ಯೋತಿಯತ್ತ ಕೈ ತೋರಿಸಿ ಹೇಳಿದ)  ಮದುವೆಯ ದಿನ ಅವಳ ಚಿಕ್ಕಮ್ಮ ಉಟ್ಟಿದ್ದ ಸೀರೆಯ ಬಣ್ಣ ಸಹ ನೆನಪಿರುತ್ತದೆ. ನೆನಪಿನಲ್ಲಿ ಇವರ ಅಜ್ಜಿಯ ತರಾನೆ. ಅವರು ಅಷ್ಟೆ, ಅವರ ನಾದಿನಿಯ ಅಕ್ಕನ ಮದುವೆಗೆ ಹೋಗಿದ್ದಾಗ ಅಡುಗೆ ಏನೇನು ಮಾಡಿದ್ದರು, ಅದಕ್ಕೆ ಉಪ್ಪು ಕಡಿಮೆಯಾಗಿತ್ತು ಎಂದು ಈಗ ಐವತ್ತು ವರುಷದ ನಂತರವೂ ಹೇಳುತ್ತಾರೆ. 
ಎನ್ನುತ್ತ ಗಹಗಹಿಸಿ ನಕ್ಕ 
ಜ್ಯೋತಿಗೆ ಸ್ವಲ್ಪ ಅವಮಾನ ಆಯಿತೇನೊ ಎಲ್ಲರೆದುರು ಅಂದಿದ್ದು, ಹಾಗಾಗಿ ನಾನು ಅದನ್ನು ಸರಿಪಡಿಸಲು , ಅವಳನ್ನು ಸಮಾದಾನಪಡಿಸಲು ನುಡಿದೆ, 

ಅದೇಕೆ ಹಾಗೆ ಹೇಳುತ್ತಿ, ಹಾಗೆ ನೋಡುವದಾದರೆ ಪ್ರಕೃತಿ ಅವರಿಗೆ ನೀಡಿರುವ ಶಕ್ತಿ ಅದು, ಅವರ ನೆನಪಿನ ಶಕ್ತಿ ಯಾಗಲಿ, ಕಣ್ಣಿನ ಶಕ್ತಿಯಾಗಲಿ ನಮಗೆಲ್ಲಿ, ನಿನಗೆ ಗೊತ್ತ, ಹೆಣ್ಣು ನೂರಾರು ಬಣ್ಣ ವ್ಯತ್ಯಾಸಗಳನ್ನು ಗುರುತಿಸಬಲ್ಲಳು, ಗಂಡಸರು ಬಹುತೇಕ ಅದರಲ್ಲಿ ಸೊನ್ನೆ, ಬಹಳಷ್ಟು ಗಂಡಸರು ಬಣ್ಣಗುರುಡು ಎಂದೆ . 

ಆನಂದ, 
’ಸರಿಯಪ್ಪ, ಅವಳನ್ನು ನೀನೆಲ್ಲಿ ಬಿಟ್ಟುಕೊಡುತ್ತೀಯ, ಈಗ ನೀನೆ ಹೇಳುತ್ತಿದ್ದೆಯಲ್ಲ ಅದೇನೊ ನೆನಪಿನಲ್ಲಿ ಹಿಂದೆ ಹೋಗುವ ಪ್ರಯೋಗ ಅದನ್ನು ಅವಳ ಮೇಲೆ ಪ್ರಯೋಗಿಸು ನೋಡೋಣ , ಅವಳ ಶಕ್ತಿ ಗೊತ್ತಾಗುತ್ತದೆ ಎಂದ 

ನಾನು ಹೇಳಿದೆ, 
ಅವಳಿಗೆ ನನ್ನ ರೀತಿ ನಿದ್ದೆಯ ಸಮಸ್ಯೆ ಏನಿಲ್ಲ. ಆದರೂ ಆಕೆ ಒಪ್ಪಿದರೆ ಆಕೆಯ ನೆನಪಿನ ಶಕ್ತಿ, ಹಾಗು ನೆನಪಿನ ಪಯಣ ಎಷ್ಟು ಹಿಂದಕ್ಕೆ ಹೋಗುತ್ತದೆ ಎಂದು ನೋಡಬಹುದೇನೊ  

ಆರ್ಯ ಈಗ ಉತ್ಸಾಹಿತನಾದ, 

ಹೌದು ಸಾರ್, ಈ ಪ್ರಯೋಗ ಏಕೆ ನೀವು ಮಾಡಬಾರದು, ಜ್ಯೋತಿಯವರು ಒಪ್ಪಿದರೆ, ಅವರನ್ನು ಹಿಂದಿನ ಜನ್ಮಕ್ಕೂ ಕಳಿಸಿಬಿಡಿ, ನಂತರ ನೀವು ಟೀವಿಯಲ್ಲಿ ಬರಬಹುದು, ಅದ್ಯಾವುದೋ ಕಾರ್ಯಕ್ರಮ ಬರುತ್ತಲ್ಲ  ಹಾಗೆ.  

ಆಗ ಆನಂದ ಎಂದ 
ಸರಿ ಈಗ ನಿನ್ನ ಉದ್ದೇಶ ಏನು , ಬೇಕಿದ್ದರೆ ನಾವೆ ಪ್ರಯೋಗ ಮಾಡೋಣ, ಜ್ಯೋತಿ ನಿನ್ನ ಪ್ರಯೋಗಕ್ಕೆ ಸಿದ್ದ  (ಎನ್ನುತ್ತ) 
ಅಲ್ಲವೇನೆ ಎಂದ , ಜ್ಯೋತಿ ನಗುತ್ತ ನಾನೇನೊ ಸಿದ್ದ, ಎಂದಳು. 

ನಾನೀಗ ಇಕ್ಕಟ್ಟಿಗೆ ಸಿಕ್ಕಿದೆ, ನಾನೊ ಎಂತದೋ ಒಂದು ಸಮಯ ಕಳೆಯುವ ಚರ್ಚೆಯಲ್ಲಿ ಕಾಲಹರಣ ಮಾಡೋಣ ಎಂದಿದ್ದರೆ, ಇವರೆಲ್ಲರು ನನ್ನನ್ನು ಯಾವುದೋ ಒಂದು ದಿಕ್ಕಿಗೆ ಪ್ರಯೋಗಕ್ಕೆ ನೂಕುತ್ತಿದ್ದರು. ನಾನು ಮಾನಸಿಕವಾಗಿ ಸಿದ್ದನಿರಲಿಲ್ಲ. 

" ನೋಡಿ ನಾನು ಯಾವ ಪ್ರಯೋಗಕ್ಕೂ ಬಂದಿಲ್ಲ, ಸುಮ್ಮನೆ ಚರ್ಚೆಯ ಮಾತಿಗೆ ಹೇಳಿದೆ ಅಷ್ಟೆ. ನಾನೇನು  ಆ ರೀತಿಯ ಪ್ರಯೋಗಗಳನ್ನು ಮಾಡುವ ಪರಿಣಿತಿ ಹೊಂದಿಲ್ಲ'  ಎಂದೆ

ಅದಕ್ಕೆ ಪರಿಣಿತಿ ಯಾಕಪ್ಪ,  ಜ್ಯೋತಿಯವರನ್ನು ಹಿಂದಿನದೆಲ್ಲ ನೆನಪಿಸಿಕೊಳ್ಳಿ ಎನ್ನುವುದು ಅಷ್ಟೆ ತಾನೆ ? ಅವರು ಎಷ್ಟು ನೆನಪಿಸಿಕೊಳ್ಳುತ್ತಾರೆ ಅನ್ನುವುದಷ್ಟೆ ಕುತೂಹಲ ಎಂದ ಆರ್ಯ. 

ಇರಬಹುದು, ಆದರೆ ನಾವು ಏನಾದರು ಮಾಡಲು ಹೋಗಿ, ಜ್ಯೋತಿ ಅಕ್ಕನಿಗೆ ತೊಂದರೆ ಆದರೆ '  
ಆರ್ಯನ ಹೆಂಡತಿ ಉಷಾ ಅನ್ನುವಾಗ , ಸಂದ್ಯಾ ಸಹ ದ್ವನಿಗೂಡಿಸಿದರು

'ಇಂತಹುದೆಲ್ಲ ನಾವು ಗೊತ್ತಿಲ್ಲದೆ ಮಾಡಲು ಹೋಗುವುದು ತಪ್ಪು, ಒಂದುಹೋಗಿ ಒಂದು ಆದರೆ ಕಷ್ಟವೇ ಅಲ್ಲವೇ ? 

ಆದರೆ ಆನಂದ , ಮತ್ತು ಜ್ಯೋತಿ ನಿಶ್ಚಿಂತರಾಗಿದ್ದರು.

ಅಯ್ಯೋ ಎಲ್ಲರೂ ಎಷ್ಟು ಹೆದರುವಿರಪ್ಪ, ನಾವೇನು ಹಿಪ್ನಾಟಿಸಂ  ಪ್ರಯೋಗ ಮಾಡುತ್ತಿದ್ದೇವೆಯೆ , ಇವಳ ಮೇಲೆ , ಇವಳ ಮನಸ್ಸು ನನಗೆ ಗೊತ್ತಿದೆ, ತುಂಬಾನೆ ಸ್ಟ್ರಾಂಗ್ , ಯಾತಕ್ಕೂ, ಯಾವುದಕ್ಕೂ ಕೇರ್‍ ಮಾಡೋಲ್ಲ, ಯಾರ ಮಾತು ಕೇಳಲ್ಲ 
ಆನಂದ ನಗುತ್ತಿದ್ದ. ಜ್ಯೋತಿ ನುಡಿದಳು 

ಹೌದಪ್ಪ ನಾನು ಸ್ಟ್ರಾಂಗೆ , ಹಾಗೆಲ್ಲ ನನ್ನ ಮನಸ್ಸು ಒಬ್ಬರ ವಶವಾಗೋಲ್ಲ. ಅದೆಲ್ಲ ವೀಕ್ ಇರುವವರ ಮನಸ್ಸಿನ ಕಷ್ಟ ಅಷ್ಟೆ ಅಂದಳು. 

ಹೀಗೆ ಸ್ವಲ್ಪ ಹೊತ್ತು ಮಾತುಗಳು, ವಾದಗಳು ನಡೆದವು. ಕಡೆಗೆ ಜ್ಯೋತಿಯನ್ನು ನೆನಪಿನ ಪಯಣದ ಪರೀಕ್ಷೆಗೆ ಒಳಪಡಿಸುವದೆಂದು ನಿರ್ಧಾರವಾಯಿತು. 
ನಂತರ ಜ್ಯೋತಿ ಹಾಗು ಸಂದ್ಯಾ ಹೋಗಿ ಕಾಫಿ ಮಾಡಿ ತಂದ ನಂತರ ಎಲ್ಲರ ಕಾಫಿ ಕಾರ್ಯಕ್ರಮ ಮುಗಿಯಿತು.  
ಪ್ರಯೋಗಕ್ಕೆ ಸಜ್ಜಾದೆವು
    



ಮುಂದುವರೆಯುವುದು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x