ಎಲ್ಲಾರ ಜೀವನದೊಳಗು ಈ ಬಾಲ್ಯ ಅನ್ನೊದು ಅಮೂಲ್ಯವಾಗಿದ್ದಿರತದ. ಯಾವ ಕಲ್ಮಷ ಇಲ್ಲದ, ನಾಳಿನ ಚಿಂತೆ, ನೋವು ಇಲ್ಲದ ಆಡಿ ಬೆಳದ ಸಮಯ ಅದಾಗಿರತದ. ಈ ಬಾಲ್ಯದೊಳಗ ಏನೆ ಮಾಡಿದ್ರು ಛಂದನ ಇರತದ.” ಬಾರಾ ಖೂನಿ ಮಾಫ” ಅಂತಾರಲ್ಲಾ ಹಂಗ ಎಂಥಾ ಮಂಗ್ಯಾನಾಟಾ ಮಾಡಿದ್ರು ನಡಿತಿರತದ. ಅದರೊಳಗ ಈ ಹತ್ತರಿಂದ ಹದಿನಾರನೇ ವಯಸ್ಸಿನೊಳಗಿನ ಮನಸ್ಸಂತು ಯಾರ ಕೈಗು ಸಿಗದ ಬೀಸೊಗಾಳಿ ಹಂಗಿರತದ ಬಿಂದಾಸಾಗಿ ಆಡಿಕೊಂಡ ಎದುರಿಗೆ ಸಿಕ್ಕಿದ್ದನ ತನ್ನ ತುಂಟಾಟದ ರಭಸಕ್ಕ ನಡುಗಿಸೊ ಹಂಗ. ಬಾಲ್ಯ ಎಷ್ಟು ದಟ್ಟವಾಗಿರತದೊ ಅಷ್ಟು ಅದ್ಭುತವಾದಂಥಾ ಕಥೆಗಳನ್ನ ಬರೆಬಹುದು ಅಂತ ಹೇಳತಾರ ಅದು ಖರೆ ಅನಿಸ್ತದ. ಇಂಥಾದೊಂದು ಛಂದನೆಯ ಬಾಲ್ಯ ನನ್ನದಿತ್ತು.
ಈಗಿನ ಹುಡುಗುರು ಹಂಗ ನಾವು ನಾಲ್ಕು ಗ್ವಾಡಿಯ ನಡುವ ವೀಡಿಯೊಗೇಮ್, ಕಾರ್ಟೂನ್ ಚಾನಲ್ ಅಂತ ಮನ್ಯಾಗ ಕೂಡತಿದ್ದಿಲ್ಲಾ. ನಮ್ಮದು ಒಂದಹತ್ತ ಹನ್ನೆರಡು ಹುಡುಗುರದು ಟೋಳಿನ ಇತ್ತು. ಕಂಪೌಂಡ ಕಂಪೌಂಡ ಜಿಗದು ಮಾವಿನಕಾಯಿ, ನೆಲ್ಲಿಕಾಯಿ, ಪ್ಯಾರಲಹಣ್ಣು ಹರಕೊಂಡ ತಿನ್ನೊದು ಮತ್ತ ಸರಬಡಗಿ, ಗಿಡಮಂಗ್ಯಾ ನಮಗ ಪ್ರೀತಿಯ ಆಟಗಳಾಗಿದ್ವು. ಹಣಮಪ್ಪನ ಗುಡಿ ಪುಜಾರು ಅಂಬೇಕರ ಆಚಾರ್ರು ಅಂತ ಇದ್ರು ಅವರು ಮಡಿಲೇ ಗುಡಿಗೆ ಹೋಗಬೇಕಾದ್ರ “ ಮುಟ್ತೇವಿ ಮುಟ್ತೇವಿ ಅಂತ ಕಾಡಿಸಿ ಅವರ ಕಡೆ ಅಪದ್ದ ಖೋಡಿಗೊಳ ಅಂತ ಬೈಸಿಕೊಂಡದ್ದು ಇನ್ನು ನಿನ್ನೆ ಮೊನ್ನೆ ಅನ್ನೊಹಂಗ ಅದ. ಹಾರ್ಯಾಡೊ "ಬೋರಂಗಿ" ಹುಳಗೊಳನ್ನ ಹಿಡದು ಅವಕ್ಕ ಧಾರಾ ಕಟ್ಟಿ , ಮಧ್ಯಾಹ್ನ ಹೊತ್ತಿನ್ಯಾಗ ಗುಡಿ ಕಟ್ಟಿ ಮ್ಯಾಲೆ ಮಲ್ಕೊಂಡ ಗುಂಡಾಚಾರ ಚಂಡಕಿಗೆ ಕಟ್ಟಿ ಅವು ಹಾರ್ಯಾಡಲಿಕ್ಕೆ ಶೂರು ಮಾಡಿದ ಕೂಡಲೆ ಚಪ್ಪಾಳಿ ಹಾಕಿ ನಗತಿದ್ವಿ.
ನಮ್ಮನಿಯಿಂದ ನಾಲ್ಕನೆ ಮನಿಯೊಳಗ “ಗಡ” ಅಂತ ಅಡ್ಡಹೆಸರ ಇದ್ದವರೊಬ್ಬರು ಇರತಿದ್ರು. ಅವರ ಮನ್ಯಾಗ ಪ್ರೇಮಕ್ಕ ಅಜ್ಜಿ ಅಂತ ಬಬ್ಬರಿದ್ದರು. ನಾವೆಲ್ಲಾರು ಅವರ ಮನಿಮುಂದಿನಿಂದ ಹಾದು ಹೋಗಬೇಕಾದ್ರ “ ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ‘ಗಡ’ ‘ಗಡ’ ‘ಪ್ರೇಮಕ್ಕ” ಅಂತ ಹಾಡಕೊತ ಹೋಗತಿದ್ವಿ.
ಶಾಲಿಯೊಳಗ ಸುಧ್ಧಾ ಸರ್ ಗೊಳನ ಹಿಂಗ ಕಾಡತಿದ್ವಿ. ಅವರು ಗಾಡಿ ಚಾಲು ಮಾಡ್ಕೊಂಡ ಹೊಂಟಾಗ ಹಿಂದಿಂದ ಸರ್ ಸರ್ ಅಂತ ಜೋರಾಗಿ ಒದರಿಕೋತ ಹೋಗತಿದ್ವಿ. ನಾವೇನರ ಹೇಳೊವರಿದ್ದೇವಿ ಅಂತ ಪಾಪ ಗಾಡಿ ನಿಲ್ಲಿಸಿದ್ರ ನಾವು ಹತ್ರ ಹೋಗಿ " ಗುಡ್ ಇವಿನಿಂಗ್" ಹೇಳಿ ಅವರ ಕಡೆ ಬೈಸಿಕೊತಿದ್ವಿ. ಅವ್ರ ಅತ್ಲಾಕಡೆ ಹೋದ ಕೂಡಲೆ ಕಿಸಿ ಕಿಸಿ ನಗತಿದ್ವಿ. ಇನ್ನೊಂದ ನಮ್ಮ ಪ್ರೀತಿಯ ಆಟಾ ಏನಂದ್ರ ಯಾರೆ ರಸ್ತೆಯೋಳಗ ಹೊಂಟವರನ್ನ ಹಿಂದ ಮರ್ಯಾಗ ನಿಂತು ಹುಶ್ ಹುಶ್ ಅಂತರ ಇಲ್ಲಾಂದ್ರ ಬಾಯಿಂದ ಟಕ್ ಟಕ್ ಆವಾಜ್ ಮಾಡಿ, ಚಪ್ಪಾಳಿ ಹೋಡದು ಅವರ ಲಕ್ಷ ನಮ್ಮ ಕಡೆ ಎಳಕೊಳ್ಳೊದು.
ದಾರಿಯೊಳಗ ಹೋಗವರು ಹಿಂದ ತಿರುಗಿ ನೋಡಿದಾಗ ಯಾರ ಕರೆದದ್ದು ಅಂತ ಗೊತ್ತಾಗಲಾರದ ಪ್ಯಾ ಪ್ಯಾ ಅಂತ ಬಾಯಿ ಬಿಟಗೊಂಡ ಹುಡಕ್ಯಾಡೊದ ನೋಡಿ ಮಸ್ತ ಮಜಾ ತಗೊತಿದ್ವಿ." ಇದಕ್ಕ ನಮ್ಮ "ಬಾಳಬೋಧ" ಭಾಷಾದಾಗ "ವಿಕೇಟ್ ತಗೊಳ್ಳೊದು ಅಂತಿದ್ವಿ." ಹಿಂಗ ಜಿದ್ದಿಗೆ ಬಿದ್ದ ಯಾರು ಜಾಸ್ತಿ ವಿಕೇಟ್ ತಗೊತಾರೊ ಅವರು "ಮ್ಯಾನ ಆಫ್ ದಿ ಡೇ" ಅಂತ ಅನಿಸ್ಕೊತಿದ್ರು. ಒಂದ ದಿನಾ ನಾನು ನನ್ನ ತಮ್ಮಾ ಮತ್ತ ನಮ್ಮ ಫ್ರೇಂಡ್ಸ್ ಎಲ್ಲಾ ದೇವರಗುಡಿಹಾಳಕ್ಕ ಹೊಂಟಿದ್ವಿ.ಮದಲ ಹಳ್ಳಿ ರಸ್ತೆ ಅದು. ಅದರಾಗ ಬಸ್ಸು ಕುಟು ಕುಟು ಚಕ್ಕಡಿಗಾಡಿ ಹಂಗ ಹೊಂಟಿತ್ತು. ಬಸ್ಸಿನ್ಯಾಗ ಎಲ್ಲಾರು ಒಂಥರಾ ಹೆಂಡ್ತಿ ಓಡಿಹೋದವರಂಘ ಹ್ಯಾಪ ಮಾರಿಮಾಡ್ಕೊಂಡ ಕೂತಿದ್ರು. ಅಷ್ಟರಾಗ ನಮ್ಮ ತಮ್ಮಾ ಮತ್ತ ಆಂವನ ಗೇಳ್ಯಾ ಇಬ್ಬರು ಮಾತಾಡಲಿಕ್ಕೆ ಶೂರು ಮಾಡಿದ್ರು.ನಮ್ಮ ತಮ್ಮಾ ಗೇಳ್ಯಾಗ " ಅಲ್ಲಲೇ ವಾಸ್ಯಾ ಮೊನ್ನೆ ರಾತ್ರಿ ಸುದ್ದಿ ಗೊತ್ತದಯೇನ ನಿಂಗ ಅಂತ ಕೇಳಿದಾ.
ಅದಕ್ಕ ಆಂವಾ ಏನಲೇ ಅದು ನಂಗೊತ್ತಿಲ್ಲಾ ಅಂತ ಅಂದಾ.ಅದಕ್ಕ ನಮ್ಮ ತಮ್ಮಾ " ಮೊನ್ನೆ ರಾತ್ರಿ ಸಿದ್ದಪ್ಪನ ಹೊಲದಾಗ ಆಂವಗ ಮತ್ತ ಆಂವನ ಆಳಿಯಾಗ ಆಸ್ತಿ ಸಂಬಂಧ ದೊಡ್ಡ ಜಗಳನ ಆತು. ಸಿದ್ದಪ್ಪನ ಅಳಿಯಾ ಕಲ್ಲಪ್ಪಾ ಹೆಂಗ ಬೆಳಿ ಬೆಳಿತಿ ನೋಡೆಬಿಡತೇನಿ ಅಂತಂದು ಒಂದ ಟ್ರಕ್ ಉಪ್ಪು ತರಿಸಿ ಸಿದ್ದಪ್ಪನ ಹೊಲದ ತುಂಬ ಹಾಕಿಸಿಬಿಟ್ಟಾ. ತಗೊ ಸಿದ್ದಪ್ಪ ಬಿಡತಾನ, ಎರಡ ಟ್ರ್ಯಾಕ್ಟರ್ ಉಪ್ಪ ಒಯ್ದು ಕಲ್ಲಪ್ಪನ ಹೊಲದಾಗ ಉಗ್ಗಿಸಿಬಂದಾ. " ಅಂತ ಏನೇನೊ ಹೊಡಿ ಬಡಿ ಅಂತ ಮಾತ ಎಬ್ಬಿಸಿ ಮಸ್ತ ಠೋಕಲಿಕತ್ರು (ರೀಲ್ ಬಿಡೊದು) . ಇವರ ಮಾತು ಕೇಳಿ ಹವರಗ ಆಜು ಬಾಜುದ್ದ ಮಂದಿ ಎಲ್ಲಾರದು ಲಕ್ಷ ಇವರಿಬ್ಬರ ಕಡೆ ಹರಿಲಿಕತ್ತು. ಅಂದ್ರ ಒಂದೊಂದ ವಿಕೇಟ್ ಬಿಳಲಿಕತ್ವು. ಅದರಾಗ ಹಿಂದಿನ್ ಸೀಟ್ ನ್ಯಾಗ ಕೂತಾಂವಾ ಒಬ್ಬಾಂವ " ಯಾವ ಊರ ತಮ್ಮಾ? ಏನಾಗೇತಿ? ಯಾರವರು? " ಅಂತ ಕೇಳೆ ಬಿಟ್ಟಾ. ಅದನ್ನ ನೋಡಿ ನಾವೆಲ್ಲಾ ಕಿಸಿ ಕಿಸಿ ನಗಲಿಕತ್ವಿ. ತಮ್ಮ ಮತ್ತ ಆಂವನ ಗೇಳ್ಯಾನ ಮಾರಿ ಮ್ಯಾಲೆ ಗೆದ್ದ ಕಳೆ ಇತ್ತು.
ಹಿಂಗ ಏನರೆ ಕಿತಬಿ ಮಾಡಕೊತ ಮಜಾ ತಗೊತಿದ್ವಿ. ಇಂಥಾದ್ದ ಇನ್ನೊಂದು ಪ್ರಸಂಗ ನೆನಪಿಗೆ ಬರತದ. ಏನಂದ್ರ ಆವಾಗ ನಮ್ಮ ತಮ್ಮ ಎಸ್.ಎಸ್.ಎಲ್.ಸಿ ಇದ್ದಾ. ಈ ಧನುರ್ಮಾಸದಾಗ ಹಂಪಿಯೊಳಗ ಯಂತ್ರೊಧ್ಧಾರಕ ಪ್ರಾಣದೇವರು ಮತ್ತ ಕೋದಂಡ ರಾಮದೇವರ ಗುಡಿಯೋಳಗ ಉತ್ಸವ ನಡಿತದ. ಪ್ರತಿವರ್ಷ ಸೇವಾಕ್ಕಂತ ದಾಸಕೂಟದ ಜೋಡಿ ನಮ್ಮ ತಮ್ಮ ಮತ್ತ ಆಂವನ ಗೇಳ್ಯಾರು ಹೋಗಿರತಾರ. ಆದ್ರ ಆ ಸಲಾ ತಮ್ಮ ಮತ್ತ ಆಂವನ ಗೇಳ್ಯಾ ವಾಸ್ಯಾ ಅವರಜೋಡಿ ಹೋಗಲಿಕ್ಕಾಗಲಿಲ್ಲಂತ ಇಬ್ಬರ ಬ್ಯಾರೆ ಹೋದ್ರು. ಹೊಸಪೇಟ ನ್ಯಾಗ ಇವರು ಟ್ರೇನ್ ಇಳದಾಗ ಮುಂಝಾನೆ ನಸಿಕಲೇ ನಾಲ್ಕೂವರಿ ಆಗಿತ್ತು. ಬಸಸ್ಟ್ಯಾಂಡಿಗೆ ಬಂದು ವಿಚಾರ ಮಾಡಿದ್ರ ಹಂಪಿಗೆ ಬಸ್ ಆರು ಗಂಟೆಕ್ಕ ಅದ ಅಂತ ಗೊತ್ತಾತು. ಇನ್ನ ತಾಸ ದೀಡ ತಾಸು ಹೊತ್ತ ಕಳಿಬೇಕಲ್ಲಾ ಮತ್ತ, ಹವರಗ ಇವರ ಮನಸ್ಸಿನ್ಯಾಗಿನ ಮಂಗ್ಯಾ ಹೊರಗ ಹಣಿಕಿ ಹಾಕಲಿಕ್ಕೆ ಶೂರು ಮಾಡಿತ್ತು. ಅಲ್ಲೆ ಇದ್ದ ಒಂದ ಸ್ವೀಟ್ ಮಾರ್ಟ್ ನ ಬಾಗಲಾ ಅದ ಇನ್ನ ತಗಿಲಿಕತ್ತಿತ್ತು.
ಇವರಿಬ್ಬರು ಅಲ್ಲೆ ಹೋಗಿ ಅಂಗಡಿಯಾಂವನ್ನ ಜೋಡಿ ಹಿಂದಿಯೋಳಗ " ಅರೆ ಭಯ್ಯಾ ಹಮ್ ಮುಂಬೈ ಸೆ ಆಯೆ ಹೈ. ಹಂಪಿ ಕೊ ಜಾನಾ ಹೈ. ಸುನಾ ಹೈ ಕರ್ನಾಟಕ ಮೇ ಲೋಗ ಬಹೊತ ಅಚ್ಛೆ ಹೈ. ಔರ ಹಂಪಿ ಹೊಸಪೇಟ ಕೆ ಲೋಗ ತೊ ಭಗವಾನ ಕೆ ಮಾಫಿಕ ಹೈ. ಅಂತ ಅಂದ್ರು. ಅಷ್ಟಕ್ಕ ಅಂಗಡಿಯಾಂವಾ ಹಿರಿ ಹಿರಿ ಹಿಗ್ಗಿ ಹೀರಿಕಾಯಿ ಆಗಿ ಆವಾಗಿನ್ನ ತಯಾರಾದ ಶ್ಯಾವಿಗಿಪೇಣೆ ಮತ್ತ ಬಿಸಿ ಬಿಸಿ ಹಾಲು ಹಾಕಿ ಕೊಟ್ಟಾ. ಇವರಿಬ್ಬರು ಕೂತು ಶಿಸ್ತ ಎರಡೆರಡ ಪ್ಲೇಟ್ ಕಟದ್ರು (ತಿಂದ್ರು). ಹಿಂಗ ತಮಗ ಕನ್ನಡ ಬರುದಿಲ್ಲಾ ಅಂತ ಹೇಳಿ ಹಿಂದಿಯೋಳಗ ಏನೊನೊ ಠೊಕಲಿಕತ್ತಾಗ ಹಂಪಿಗೆ ಹೋಗೊ ಬಸ್ಸ ಬಂದದ್ದ ನೋಡಿ ನಮ್ಮ ತಮ್ಮಾ " ವಾಸ್ಯಾ ಬಸ್ಸ್ ಬಂತ ಓಡಲೇ " ಅಂತ ಅಚ್ಚ ಕನ್ನಡದಾಗ ಒದರಿ ಇಬ್ಬರು ಓಡಿ ಹೋಗಿ ಬಸ್ಸ ಹತ್ತಿ ಹಲ್ಲ ಕಿಸಗೋತ ಸ್ವೀಟ್ ಅಂಗಡಿಯಾಂವಗ ಟಾಟಾ ಮಾಡಿದ್ರು. ಮುಂಝ ಮುಂಝಾನೆ ಎದ್ದಕೂಡಲೆ ಮಂಗ್ಯಾ ಆದ ಅಂಗಡಿಯಂವಾ ಹ್ಯಾಪ್ ಮಾರಿ ಹಾಕ್ಕೊಂಡ ಇವರನ್ನ ನೋಡಲಿಕತ್ತಿದ್ದಾ.
ಧನುರ್ಮಾಸ ಅಂದ್ರ ಮುಂಝಾನೆ ಲಗೂನ ಊಟ ಇರತದ. ಹಂಪಿಯೊಳಗ ಮುಂಝಾನೆ ಊಟಾ ಮುಗಿಸಿಕೊಂಡ ಬಂದು ಕೊದಂಡರಾಮದೇವರ ಗುಡಿ ಕಟ್ಟಿಗೆ ತಮ್ಮ ಮತ್ತ ವಾಸ್ಯಾ ಮಲ್ಕೊಂಡಿದ್ರು. ಶಿಸ್ತ ಹೆಸರಬ್ಯಾಳಿ ಹುಗ್ಗಿ, ಗೊಜ್ಜು ಕಟದ ಹೊಟ್ಟಿ ಒಂದ ನಮೂನಿ ಭಾರ ಆಗಿತ್ತು. ಅಷ್ಟರಾಗ ಅಲ್ಲೆ ಒಂದ ಹದಿನೈದ ಇಪ್ಪತ್ತ ಹಳ್ಳಿ ಮಂದಿ ಬಂದರು. ಅದೊಂದ ಲವ್ ಮ್ಯಾರೇಜ್ ಕೇಸ್. ಗುಡಿ ಕಟ್ಟಿ ಮ್ಯಾಲೆ ಪಂಜಾ ಉಟಗೊಂಡ, ಅಕ್ಷಂತಿ ,ಮುದ್ರಾ, ಅಂಗಾರಾ, ಜನಿವಾರ ಇವನ್ನೆಲ್ಲಾ ನೋಡಿ ಇವರಿಬ್ಬರು ಗುಡಿ ಪೂಜಾರ ಇರಬೇಕಂತ ತಿಳಕೊಂಡ ತಾವು ಕರಕೊಂಡ ಬಂದಿದ್ದ ಹುಡಗಾ ಹುಡಗಿನ್ನ ತೋರಿಸಿ ಇವರಿಬ್ಬರ ಮದವಿ ಮಾಡಸಬೇಕಿತ್ತರಿ ಸ್ವಾಮೇರಾ ಅಂದ್ರು. ಇದನ್ನ ಕೇಳಿ ಹುಗ್ಗಿ ಉಂಡ ಗಪ್ಪನೆ ಮಲಗಿದ್ದ ಮನಸಿನ್ಯಾಗಿನ ಮಂಗ್ಯಾ ಮತ್ತ ಎದ್ದ ಕೂತ್ಕೊಂಡತು. ಇವರಿಬ್ಬರು ಆತು ನಾವ ಮದವಿ ಮಾಡಸತೇವಂತ ಹೇಳಿ ಲಗ್ನದ್ದ ಸಾಮಾನ ತರಲಿಕ್ಕೆ ಒಂದ ಲಿಸ್ಟ ಬರದಕೊಟ್ರು.
ನಮ್ಮ ತಮ್ಮ ಮತ್ತ ವಾಸ್ಯಾ ಊರಿಂದ ಬರಬೇಕಾದ್ರ ಗಡಿ ಬಿಡಿಯೊಳಗ ಎಕ್ಸಟ್ರಾ ಪಂಜಾ ತರೊದನ್ನ ಮರೆತಿದ್ರು. ಹಿಂಗಾಗಿ ಸಾಮಾನಿನ ಲೀಸ್ಟ್ ನ್ಯಾಗ ಮದಲ ದೊಡ್ಡು ದೊಡ್ಡುವು ಎರಡ ಪಂಜಾ ಬರೆದ್ರು. ಅಂತರ ಪಟಕ್ಕಂತ ಹಿಡದ ಪಂಜಾ ಮದವಿ ಮಾಡಿಸಿದ ಮ್ಯಾಲೆ ತಮಗ ಕೋಡಬೇಕಂತ ಮದಲ ಕರಾರ ಮಾಡಿದ್ರು. ಮತ್ತ ಅಕ್ಕಿ,ಅರಿಷಿಣಾ ಕುಂಕಮಾ ಹೂವು ಅಂತ ಎಲ್ಲ ಬರೆದುಕೊಟ್ಟ್ರು. ಇನ್ನ ಮದವಿ ಮಾಡಸಬೇಕಂದ್ರ ಮಂತ್ರಾ ಹೇಳಬೇಕಲ್ಲಾ. ಹುಡಗಾ ಹುಡಗಿನ್ನ ಎದರಾ ಬದರಾ ನಿಂದ್ರಿಸಿ ನಡುವ ಅಂತರ ಪಟಾ ಹಿಡದು ತಮಗ ಬಂದ ಹಣಪ್ಪನ ಸ್ತೋತ್ರ " ಬುಧ್ಧಿರ ಬಲಂ , ಯಶೋಧೈರ್ಯಂ, ನಿರ್ಭಯಕತ್ವಂಮರೋಗತಾ, ಅಜಾಡ್ಯಂ ವಾಕಪಟುತ್ವಂಚ ಹನುಮದಸ್ಮರಣಾತ ಭವೇತ್." ಅಂತ ಜೋರಾಗಿ ಹನ್ನೊಂದಸಲಾ ಅಂದು, ಅದರ ಜೋಡಿ ಇನ್ನು ಒಂದಿಷ್ಟ ಸಣ್ಣ ಸಣ್ಣ ಸ್ತೋತ್ರಗೊಳನ ಅಂದು ಇನ್ನ ಅಕ್ಷತಾ ಹಾಕಬೇಕಾದ್ರ ದೇವರ ಪೂಜಾ ಆದಮ್ಯಾಲೇ ಅಂತಾರಲ್ಲ ಮಂಗಳಾಷ್ಟಕ " ರಾಜಾಧಿ ರಾಜಾಯ….
ಅದನ್ನ ಅಂದು ಮದವಿ ಮಾಡಿಸಿ ಮುಗಿಸಿದ್ರು.. ಹಳ್ಳಿ ಮಂದಿ ಮದವಿ ಮಸ್ತ ಮಾಡಿದ್ರ ಅಂತ ಹೇಳಿ ಖುಷ ಆಗಿ ಎರಡನೂರ ರೂಪಾಯಿ ದಕ್ಷಿಣಿ ಕೊಟ್ಟು ಕಾಲಿಗೆ ಬಿದ್ದು ಹೋದ್ರು. ಇವರಿಬ್ಬರು ದಕ್ಷಿಣಿ ಕೈಯ್ಯಾಗ ಬಂದದ್ದ ತಡಾ ಹೊಸಪೇಟಿಗೆ ಜಿಗದು ಸಿನೇಮಾ ನೋಡಿ, ಇಡ್ಲಿವಡಾ ತಿಂದು ಸಂಜಿಕೆ ಪಾಲಕಿ ಸೇವಾದಷ್ಟೊತ್ತಿಗೆ ಮತ್ತ ಗುಡಿಯೊಳಗ ಹಾಜರಾದ್ರು. ಮದಲ ಹಣಮಪ್ಪ ಹೇಳಿಕೇಳಿ ಬ್ರಹ್ಮಚಾರಿ. ಇನ್ನ ಆಂವನ್ನ ಮತ್ರಾ ಹೇಳಿ ಮದವಿ ಮಾಡಿದ್ದ ನೆನಿಸಿಕೊಂಡ ಈಗ ಆದ್ರು ಬಿದ್ದ ಬಿದ್ದ ನಗತಿರತೇವಿ. ಆವತ್ತ ಮದವಿ ಮಾಡಿಸಿಕೊಂಡವರು ಇಗ ಎಲ್ಲಿದ್ದಾರೊ ಹೇಂಗಿದ್ದಾರೊ ಆ ಕೋದಂಡರಾಮನಿಗೆ ಮಾತ್ರ ಗೊತ್ತು.
ಇವನ್ನೆಲ್ಲಾ ಈಗ ನೆನಿಸಿಕೊಳ್ಳಿಕತ್ರ ಒಂಥರಾ ಮಜುಗರ ಆಗತದ. ಆದ್ರ ಆ ಹೊತ್ತಿನ್ಯಾಗ ಎಷ್ಟ ಮಜಾಶಿರ ಇವನ್ನೆಲ್ಲಾ ಎಂಜಾಯ್ ಮಾಡತಿದ್ವಿ. ಇವೆಲ್ಲಾ ಒಂಥರಾ ಜೀವನದ ಸವಿ ನೆನಪುಗಳು. ಎಲ್ಲಾರು ಒಂದಕಡೆ ಸೇರಿದಾಗ ಇವನ್ನೆಲ್ಲಾ ನೆನಪು ಮಾಡ್ಕೊಂಡು ನೆನಪಿನ ಜೋಕಾಲಿಯೊಳಗ ಜೀಕಿಕೋತ ನಕ್ಕು ನಲಿಯುವದರೊಳಗ ಎಷ್ಟ ಹಿತಾ ಇರತದ. ನೆನಪಿನ ಹಂದರದೊಳಗ ಇನ್ನು ಭಾಳ ಛಂದ ಛಂದ ಹೂವುಗಳವ. ಅವನ್ನೆಲ್ಲಾ ಪೋಣಿಸಿ ಛಂದನೆಯ ಹಾರ ಮಾಡಿ ಮತ್ತ ನಿಮ್ಮ ಮುಂದ ಇಡ್ತೇನಿ.
ಮೇಡಂ ನಿಮ್ಮ ಲೇಖನ ಓದಿ ನನಗೆ ತುಂಭಾ ಖುಷಿಯಾಯಿತು ಹೀಗೆ ನಿಮ್ಮ ನೆನಪಿನ ಬುತ್ತಿಯನ್ನು ನಮಗೆ ಯಾವಗಲೂ ಬಡಿಸ್ತಾಇರ್ರೀ ನಿಮ್ಮ ಸಿಹಿ ಬುತ್ತಿಗಾಗಿ ಕಾಯಿತಾಇರತ್ತೀನಿ
ಇಡಬೇಕರೀ ಮತ್ತ ಮೇಡಂ ಅವರ,ಬರೇ ಠೋಕಲಿಕತದರಾಗಂಗಿಲ್ಲ, ಸುಮ್ ಸುಮನಾ ನೀವೊಂದೊದೇ ಹೂ ಇಟಕೋತ ಹೋಗರಿ ನಾವೋದಕೋತ ಹೋಗತೀವ, ಖರೆ, ಅಗದೀ ಛಲೋ ಅದ.