ನೆನಪಿನಾಳದಿಂದ (ವಿಷ್ಣು ಸಂದರ್ಶನ): ಗುಂಡೇನಹಟ್ಟಿ ಮಧುಕರ್ ಕುಲಕರ್ಣಿ

ವಿಷ್ಣುವರ್ಧನ ಅವರೊಂದಿಗೆ ನಡೆಸಿದ ಸಂದರ್ಶನ ಸುಮಾರು ಹತ್ತು ವರ್ಷಗಳ ಹಿಂದಿನದ್ದು. ನಾನು ಅವರೊಂದಿಗೆ ಮಾತನಾಡಬೇಕೆಂದು ಕುಳಿತಿದ್ದಾಗ ಅವರು ಸಂಪೂರ್ಣವಾಗಿ ಆಧ್ಯತ್ಮಿಕದತ್ತ ವಾಲಿದ್ದು ಅವರ ಮಾತುಗಳಿಂದ ಗೊತ್ತಾಗುತ್ತಿತ್ತು. ಪ್ರತಿಯೊಂದು ವಿಷಯದ ಬಗ್ಗೆ ಹೇಳುವಾಗಲೂ ಪರಮಾತ್ಮನ ಆಶಿರ್ವಾದ ಇದ್ದರೆ ಆಗುತ್ತದೆ. ಎಲ್ಲವೂ ಅವನದ್ದು ನನ್ನೇನೂ ಇಲ್ಲ ಎಂದು ಆಕಾಶದೆಡೆ ಕೈ ಮಾಡಿ ತೋರಿಸುತ್ತಿದ್ದರು. ಸರಳಜೀವಿ ಸ್ನೇಹ ಜೀವಿ ಎಂಬುದು ಅವರೊಂದಿಗೆ ನಾನು ಮಾತನಾಡಿದ ಮಾತುಕತೆಯಿಂದಾಗಿ ನನ್ನ ಮನಸ್ಸಿಗೆನ್ನಿಸಿತು. 

ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದ ಕ್ಯಾಮರಾಮನ್ ನಿಜವಾಗಿಯೂ ಕ್ಯಾಮರಾಮನ್ ಆಗಿರಲಿಲ್ಲ. ಯಾವುದೋ ಒಂದು ಕ್ಯಾಮರಾ ತೆಗೆದುಕೊಂಡು ಕೇವಲ ವಿಷ್ಣುವರ್ಧನ್‌ರನ್ನು ನೋಡುವ ಸಲುವಾಗಿ ಬಂದಿದ್ದನೆಂಬುದು ನಂತರ ಗೊತ್ತಾಯಿತು. ಕ್ಯಾಮರದಿಂದ ಪೋಟೋ ತೆಗೆಯಲು ಬಾರದೇ ಪರಿದಾಡುತ್ತ ನಿಂತ, ನೂರೆಂಟು ಆಯ್ಕೆಗಳು ಆ ಕ್ಯಾಮರಾಗಳಲ್ಲಿದ್ದವು ಅವು ಯಾವವೂ ಅವನಿಗೆ ಗೊತ್ತಿಲ್ಲ. ಕೊನೆಗೆ ನಮ್ಮ ಪರಿದಾಟವನ್ನು ನೋಡಿದ ನಟ ವಿಷ್ಣುವರ್ಧನ ತಮ್ಮ ಕ್ಯಾಮರಾಮನ್ ರನ್ನು ಕರೆದು ಫೋಟೋ ತೆಗೆಯಲು ಹೇಳಿ ಫೋಟೋ ತೆಗೆಯಿಸಿಕೊಟ್ಟರು. ನನ್ನೊಂದಿಗೆ ಬಂದಿದ್ದ ಕ್ಯಾಮರಾ ಹುಡುಗ ಕೂಡ ತಾನೂ ವಿಷ್ಣುವರ್ಧನ್ ರೊಂದಿಗೆ ನಿಂತು ಪೋಟೋ ತೆಗೆಯಿಸಿಕೊಂಡು ಖುಷಿಯಿಂದ ಮರೆಯಾಗಿದ್ದ! 

ವಿಷ್ಣವರ್ಧನ ಅವರು ೧೯೫೦ ಸೆಪ್ಟಂಬರ್ ೧೮ ರಂದು ಜನಸಿದರು. ಅವರು ಬದುಕಿದ್ದರೆ ಅವರಿಗೀಗ ೬೩ ವರ್ಷಗಳಾಗುತ್ತಿದ್ದವು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕಾಣಿಕೆ ನೀಡಿರುವ ಅವರನ್ನು ಹೀಗೆ ಸುಮ್ಮನೆ ನೆನಿಸಿಕೊಳ್ಳುವುದೇ ನಾವು ನೀವೆಲ್ಲ ಅವರಿಗೆ ಸಲ್ಲಿಸುವ ಒಂದು ಶ್ರದ್ಧಾಂಜಲಿ. ಆದ ಕಾರಣ ಅಂದು ಅವರೊಂದಿಗೆ ಮಾತನಾಡಿದ ಮಾತುಗಳನ್ನೇ ಇಂದು ಮತ್ತೆ ಮೆಲಕು ಹಾಕುತ್ತಿದ್ದೇನೆ.   

ಚಿತ್ರನಿರ್ದೇಶಕ ಎಸ್ ನಾರಾಯಣ ದಯವಿಟ್ಟು, ವಿಷ್ಣುರವರ ಮನಸ್ಸು ಕಲಕುವಂತಹ, ಉದ್ವೇಗಕ್ಕೊಳಗಾಗುವಂತಹ ಪ್ರಶ್ನೆಗಳನ್ನು ಕೇಳಬೇಡಿ, ಅದು ಅವರ ಅಭಿನಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಮುನ್ಸೂಚನೆಯನ್ನು ನೀಡಿ ಸಂದರ್ಶಿಸಲು ಅನುಮತಿಯನ್ನಿತ್ತರು. ಆಗ,  ವಿಷ್ಣುವರ್ಧನರ ವಿರಾಮದ ಸಮಯ ಅದಾಗಿದ್ದರಿಂದ, ಸುಮಾರು ಅರ್ಧ ಗಂಟೆಗಳಿಗಿಂತಲೂ ಹೆಚ್ಚಿನ ಸಮಯ ವಿಷ್ಣುರೊಂದಿಗೆ ಹರಟೆಹೊಡೆಯುತ್ತ ಕುಳಿತೆ.

ಗುಂ.ಮ.:- ಚಿತ್ರರಂಗ ಪ್ರವೇಶದ ಸಮಯದಲ್ಲಿದ್ದ ಚಲನಚಿತ್ರರಂಗ ಹಾಗೂ ಇಂದಿನ ಚಿತ್ರಗಳನ್ನು ನೋಡಿದಾಗ ನೀವು ಕಾಣುವ ಬದಲಾವಣೆಗಳೇನು?

ವಿಷ್ಣುವರ್ಧನ:- ಸಾಕಷ್ಟು ಬದಲಾವಣೆಗಳಿವೆ. ನಮ್ಮ ಪ್ರಯತ್ನಗಳನ್ನು ನಾವು ಮಾಡ್ತಾ ಹೋಗುವುದಷ್ಪೆ,  ಹೀಗೇ ಆಗಬೆಕು, ಹಾಗೇ ಮಾಡಬೇಕು ಅಂತ ನಾವೆಲ್ಲ ಮಾಡೊಲ್ಲ.  ಏನಾದರೂ ಒಳ್ಳೆಯದನ್ನು ಮಾಡಬೇಕು ಅಂತ ಪ್ರಯತ್ನ ಮಾಡ್ತೀವಿ ಅಷ್ಟೆ.  ಒಳ್ಳೆಯದನ್ನು ಮಾಡಬೇಕೆಂದು ಆಸೆ ಪಡ್ತೀವಿ. ಒಳ್ಳೆಯದು ಆಗಬಹುದು, ಆಗದೇ ಇರಬಹುದು. ಮತ್ತೆ ಪ್ರಯತ್ನ ಮಾಡ್ತೀವಿ. ಮೊದಲಿಗಿಂತಲೂ ತಾಂತ್ರಿಕತೆಯಿಂದ ಚಿತ್ರರಂಗ ಸಾಕಷ್ಟು ಮುಂದುವರೆದಿದೆ. ಕಲೆಯಲ್ಲಿ ಕೊನೆಯೆಂಬುದಿಲ್ಲ. ಕಲಿಯುವುದು ಮತ್ತೆ ಕಲಿಯುವುದು ಜೀವನದುಸಿರು. ಇರುವವರೆಗೂ ಕಲಿಯುವುದು ಇದ್ದೇ ಇರುತ್ತದೆ. ಅದಕ್ಕೆ ಕೊನೆಯೆಂಬುದಿಲ್ಲ.

ಗುಂ.ಮ.:- ಸರಕಾರ ಕೊಡ್ತಾ ಇರೋ ತೆರಿಗೆ ವಿನಾಯಿತಿ, ಸಹಾಯಧನಗಳು ಚಿತ್ರೋದ್ಯಮ ಬೆಳವಣಿಗೆಗೆ ಸಹಾಯವಾಗಬಹುದೆ? ಅದರ ಉಪಯೋಗ ಸರಿಯಾದ ರೀತಿಯಲ್ಲಿ ಆಗ್ತಾಯಿದೆಯೆ?

ವಿಷ್ಣುವರ್ಧನ:- ಸರಕಾರ ಕೊಡ್ತಾಯಿರೋ ಸಹಾಯ ತಕ್ಕ ಮಟ್ಟಿಗೆ ಅನುಕೂಲಕರವಾಗಿದೆ. ಯಾವುದೋ ಒಂದು ಸದುದ್ದೇಶ ಇಟ್ಟುಕೊಂಡು ಸರಕಾರದವರು ಮಾಡ್ತಾಯಿದಾರೆ. ಅದನ್ನು ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸದುಪಯೋಗ ಮಾಡಿಕೊಳ್ಳಬೇಕು. ಬೆಂಕಿ ಕಡ್ಡಿನಾ ಯಾವುದಕ್ಕೂ ಉಪಯೋಗಿಸಿಕೊಳ್ಳಬಹುದು ಅಲ್ವೆ? ದೀಪಾನೂ ಹಚ್ಚಬಹುದು, ಒಂದು ಮನೇನೂ ಸುಟ್ಟು ಹಾಕಬಹುದು. ಆ ತರಹ ಯಾವುದಕ್ಕೆ ಉಪಯೋಗಿಸಿಕೊಳ್ಳಬೇಕೆಂಬ ಒಳ್ಳೆಯ ಧ್ಯೇಯೋದ್ದೇಶಗಳು ನಮ್ಮಲ್ಲಿರಬೇಕು ಅಷ್ಟೆ.

ಗುಂ.ಮ.:- ತೆಲಗು ಚಿತ್ರಗಳಿಗೆ ಕನ್ನಡ ಚಿತ್ರಗಳನ್ನು ಹೋಲಿಸಿ ನೋಡಿದಾಗ ನಾವೇನೋ ಹಿಂದೆ ಬಿದ್ದಿದ್ದೇವೆಂದು ಅನ್ನಿಸುವುದಿಲ್ಲವೆ?

ವಿಷ್ಣುವರ್ಧನ:- ಆ ಥರ ಹೋಲಿಸಿ ನೋಡಲೇ ಬಾರ್‍ದು. 

ಗುಂ.ಮ.:- ನಾವು ಬೇರೆಯವರೊಂದಿಗೆ ತುಲನೆ ಮಾಡಿಕೊಂಡು ನಮ್ಮನ್ನು ನಾವು ವಿಮರ್ಶೆ ಮಾಡಿಕೊಂಡಾಗಲೇ ಬೆಳೆಯುವುದು ಸಾಧ್ಯವಲ್ಲವೆ?

ವಿಷ್ಣುವರ್ಧನ:- ಹೋಲಿಕೆ ಸರಿ. ಆದರೆ ಅದೆ ಅಂತ ಯಾಕೆ? ನಾವೂ ಬೆಳೀತಾ ಇದ್ದೇವಲ್ಲ.  ಲೋಕೋಭಿನ್ನರುಚಿಃ ಎಂದು ಹೇಳುತ್ತಾರಲ್ಲ ಹಾಗೆ. ನಿಮಗೆ ಒಂದು ಚಿತ್ರ ಇಷ್ಟವಾಗಬಹುದು, ಅದೇ ಚಿತ್ರ ಬೇರೆಯವರಿಗೆ  ಆಗದೇ ಇರಬಹುದು. ನೀವು,  ಇದೇ ತರಹ ಅಂತ ಹೇಳೊಕ್ಕಾಗೊಲ್ಲ. ಯಾರೂ ಹೇಳೊಕ್ಕಾಗಲ್ಲ. ಯಾವ ವಿಷಯದಲ್ಲೂ ಹೇಳೋಕ್ಕಾಗೊಲ್ಲ.

ಗುಂ.ಮ.:- ನಿಮ್ಮ ವೃತ್ತಿ ನಿಮಗೆ ಖುಷಿ ಕೊಟ್ಟಿದೆಯೆ?

ವಿಷ್ಣುವರ್ಧನ:- ಖಂಡಿತವಾಗಿಯೂ, ನನ್ನ ವೃತ್ತಿ ನನಗೆ ತುಂಬಾನೆ ಖುಷಿ ಕೊಟ್ಟಿದೆ.

ಗುಂ.ಮ.:- ಉತ್ತರ ಕರ್ನಾಟಕದ ಮತ್ತೆ ಬೇರೆ, ಬೇರೆ ಯಾವ ಪ್ರದೇಶಗಳಲ್ಲಿ ನಿಮ್ಮ ಚಿತ್ರಗಳು  ಚಿತ್ರೀಕರಣಗೊಂಡಿವೆ?

ವಿಷ್ಣುವರ್ಧನ:- ಅವಕಾಶ ಸಿಕ್ಕಾಗಲೆಲ್ಲ ಈ ಕಡೆ ಬರ್‍ತಾನೇ ಇರ್‍ತೀವಿ. ಬೀದರ, ಬಿಜಾಪುರ, ಬಾದಾಮಿ ಈ ಕಡೆಯಲ್ಲೆಲ್ಲ ನನ್ನ ಹಲವಾರು ಚಿತ್ರಗಳು ಚಿತ್ರೀಕರಣಗೊಂಡಿವೆ.

ಗುಂ.ಮ.:- ಇಲ್ಲಿಯ ಜನರಿಗೆ ನಿಮ್ಮನು ಗಂಡುಗಲಿ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ನೋಡಬೇಕೆಂಬ ಆಸೆ ಇದೆ………..?

ವಿಷ್ಣುವರ್ಧನ:- ನೋಡೋಣ, ಪ್ರತಿಯೊಂದೂ ಆ ಪರಮಾತ್ಮ ಮಾಡಿಸೋನು, ನನ್ನದೇನೂ ಇಲ್ಲ. ಹಿಂದೆಯೂ ಇಲ್ಲ, ಮುಂದೆಯೂ ಇರೋದಿಲ್ಲ. ಅವನು ಏನು ಹೇಳ್ತಾನೋ ಅದ್ನ ಮಾಡೋದು. ಮಾಡಿಸೋದೆಲ್ಲ ಅವ್ನು, ಅವನು ಹೇಳಿದ್ಹಾಗೆ ನಾವು ಮಾಡೋದು. ಅವಕಾಶ ದೈವೇಚ್ಛೆ ಇದ್ರೆ ಆಗಬಹುದು. ಪರಮಾತ್ಮ ’ಹ್ಞು’ ಅಂದ್ರೆ ಏನ ಬೇಕಾದ್ರೂ ಆಗಬಹುದು.

ಗುಂ.ಮ.:-  ಇಂದಿನ ಈ ದಿನಗಳಲ್ಲಿ ಕಲಾತ್ಮಕ ಚಿತ್ರಗಳ ಅವಶ್ಯಕತೆ ಎಷ್ಟರ ಮಟ್ಟಿಗಿದೆ?

ವಿಷ್ಣುವರ್ಧನ:- ಯಾವ ಚಿತ್ರಗಳಲ್ಲಿ ಕಲೆಯಿಲ್ಲ? ಎಲ್ಲ ಚಿತ್ರಗಳಲ್ಲೂ ಕಲೆಯಿದೆ. ವಾಣಿಜ್ಯ ಚಿತ್ರಗಳು, ಕಲಾತ್ಮಕ ಚಿತ್ರಗಳೆಂದು ವಿಂಗಡಿಸಿದವರ್‍ಯಾರು? ಚಿತ್ರ ಬಿಡುಗಡೆಗೊಂಡು ಅದು ಸಾಕಷ್ಟು ದುಡ್ಡು ಮಾಡಿದಾಗ ಅದು ವಾಣಿಜ್ಯ ಚಿತ್ರ,  ದುಡ್ಡು ಮಾಡದೇ ಹೋದ್ರೆ ಅದು ಕಲಾತ್ಮಕ ಚಿತ್ರ; ಇಷ್ಟೆ ನನಗೆ ಗೊತ್ತು.

ಗುಂ.ಮ.:-  ಕಲಾತ್ಮಕ ಚಿತ್ರ ’ವಂಶವೃಕ್ಷ’ ದಲ್ಲಿ ನೀವು ನಟಿಸಿದ್ದೀರಿ……..?

ವಿಷ್ಣುವರ್ಧನ:- ’ವಂಶವೃಕ್ಷ’ ಕಲಾತ್ಮಕ ಚಿತ್ರ ನ್ಯಾಷನಲ್ ಅವಾರ್ಡ ಬಂತು ಎಂದು. ಹಾಗಾದರೆ ’ನಾಗರಹಾವು’  ಅದಕ್ಕೂ ನ್ಯಾಷನಲ್ ಅವಾರ್ಡ ಬಂತು. ಹಾಗಾದರೆ ಅದು ವಾಣಿಜ್ಯಾನಾ, ಕಲಾತ್ಮಕನಾ?

ಗುಂ.ಮ.:- ಹಣಗಳಿಸುವ ದೃಷ್ಟಿಯನ್ನಿಟ್ಟುಕೊಂಡು ಹಾಡು, ಡಾನ್ಸು, ಫೈಟಿಂಗ್ ಎಲ್ಲ ಮಸಾಲೆಗಳನ್ನೇ ಕೇಂದ್ರೀಕರಿಸಿ ತೆಗೆಯುವ ಚಿತ್ರಗಳು ವಾಣಿಜ್ಯ ಚಿತ್ರಗಳೆಂದು ಜನ ಅಂದ್ಕೊಂಡಿದ್ದಾರೆ.

ವಿಷ್ಣುವರ್ಧನ:- ’ಜನುಮದ ಜೋಡಿ’ ಚಿತ್ರದಲ್ಲಿ ಹಾಡು, ಕುಣಿತ ಎಲ್ಲ ಇದೆ. ನ್ಯಾಷನಲ್ ಅವಾರ್ಡ ಬಂದಿದೆ. ಸ್ಟೇಟ ಅವಾರ್ಡ ಬಂದಿದೆ. ಹಾಗಾದರೆ ಇದು ಕಲಾತ್ಮಕ ಚಿತ್ರಾನಾ? ವಾಣಿಜ್ಯ ಚಿತ್ರಾನಾ ನೀವೆ ಹೇಳಿ? ನನಗಂತೂ ವ್ಯತ್ಯಾಸವೇ ಕಂಡು ಬರೋದಿಲ್ಲ. ಚಿತ್ರ ಚೆನ್ನಾಗಿದ್ರೆ ನೋಡತಾರೆ, ಇಲ್ದಿದ್ರೆ ನೋಡೋಲ್ಲ ಅಷ್ಟೆ. ನಾನು ’ವಂಶವೃಕ್ಷ’ದಲ್ಲೂ ನಟಿಸಿದ್ದೀನಿ, ’ನಾಗರಹಾವು’ ದಲ್ಲೂ ನಟಿಸಿದ್ದೀನಿ. ಎಲ್ಲ ಚಿತ್ರಗಳಲ್ಲೂ ಕಲಾವಿದರಿರ್‍ತಾರೆ, ಕಲೆ ಇರ್‍ತದೆ ಅಂತಾ ನಾ ತಿಳ್ಕೊಂಡಿದ್ದೀನಿ.

ಗುಂ.ಮ.:- ನಟ ಹಲವಾರು ಚಿತ್ರಗಳಲ್ಲಿ ನಟಿಸ್ತಾನೆ. ಆದರೆ ನೆನಪಿನಲ್ಲುಳಿಯುವಂಥ ಚಿತ್ರಗಳು ಬೆರಳಣಿಕೆಯಷ್ಟವು ಮಾತ್ರ, ಹೀಗೇಕೆ? 

ವಿಷ್ಣುವರ್ಧನ:- ಹತ್ತು ಚಿತ್ರಗಳನ್ನು ಮಾಡಿದಾಗಲೇ ಒಂದು ಚಿತ್ರ ಎದ್ದು ಕಾಣುತ್ತದೆ. ಒಂದು ಯಶಸ್ವಿ ಚಿತ್ರ ಬರಬೇಕಾದರೆ ಹತ್ತಿಪ್ಪತ್ತು ಮಾಡ್ತಾನೇ ಇರಬೇಕು. ಇದೊಂದು ಸರ್ಕಲ್. ಇದರೊಂದಿಗೆ ನಾವು ಸುತ್ತತಾನೇ ಇರ್‍ತೀವಿ. ನಮ್ಮ ಕೈಯಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ತೃಪ್ತಿ ಪಡಿಸ್ತಾ ಹೋಗ್ತೀವಿ. ನಾವೊಂದು ರೀತಿ ಅಡಿಗೆಯವರಿದ್ದ ಹಾಗೆ. ಯಾರ್‍ಯಾರಿಗೆ ಏನು ಇಷ್ಟವಾಗುತ್ತೊ ಅದನ್ನು ಮಾಡಿ ಹಾಕ್ತೀವಿ. ನಾವು ಮಾಡಿದ್ದಕ್ಕೆ ಫಲ ಸಿಗಬಹುದು ಸಿಗದೇ ಇರಬಹುದು.

ಗುಂ.ಮ.:- ಚಿತ್ರರಂಗದಲ್ಲಿ  ನೀವು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೀರಿ. ಇದರಿಂದ ನೀವು ಕಲಿತ ಪಾಠ?

ವಿಷ್ಣುವರ್ಧನ:- ಮನುಷ್ಯನ ಜೀವನದಲ್ಲಿ ಏಳುಬೀಳುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಏಳುಬೀಳುಗಳೇ ಮನುಷ್ಯಲ್ಲಿ ಪೂರ್ಣತೆಯನ್ನು ತಂದುಕೊಡುತ್ತವೆಂದು ಹೇಳಬಹುದು. ಇವೆಲ್ಲವೂ ಜೀವನದಲ್ಲಿ ಬೇಕೇಬೇಕು. ಉಳಿಪೆಟ್ಟು ಬೀಳದೇ ಮೂರ್ತಿಯಾಗಲಾರದು. ಬಾಳಿನಲ್ಲಿ ಪಕ್ವತೆ ಕಾಣಬೇಕಾದರೆ ಇವೆಲ್ಲವುಗಳಿಂದ ದಾಟಿ ಬರುವುದು ಅನಿವಾರ್‍ಯ.

ಗುಂ.ಮ.:- ನಿಮ್ಮ ಕೈಯಲ್ಲಿ ಯಾವಾಗಲೂ ಕಡಗ ಕಾಣತದೆ. ಇದರ ಹಿಂದಿರುವ ವಿಶೇಷತೆಯೇನು?

ವಿಷ್ಣುವರ್ಧನ:- ೧೯೮೦ರಲ್ಲಿ ಗುರುದ್ವಾರದಲ್ಲಿ ನನ್ನ ಗುರುಗಳೊಬ್ಬರು ಈ ಕಡಗವನ್ನಿರಿಸಿದ್ದಾರೆ. ಇದೊಂದು ವಿಶೇಷವಾದಂತಹ ಕಡಗ. ಇದರಿಂದ ನಿಮ್ಮ ಶ್ರೇಯೋಭಿಲಾಶೆಗಳೆಲ್ಲ  ಈಡೇರುತ್ತವೆ. ಯಾವುದೇ ಕಾರಣಕ್ಕೂ ಈ ಕಡಗವನ್ನು ನಿಮ್ಮ ಕೈಯಿಂದ ತೆಗೆಯಕೂಡದು, ಇದು ನಿಮ್ಮೊಂದಿಗೆ ಇರಬೇಕು., ನಿಮ್ಮೊಂದಿಗೇ ಹೋಗಬೇಕೆಂದಿದ್ದಾರೆ. ಗುರುಗಳ ಮಾತಿನಂತೆ ಈ ಕಡಗ ಯಾವಾಗಲೂ ನನ್ನೊಂದಿಗೆ ಇರುತ್ತದೆ. ಪಂಜಾಬದ ಸ್ನೇಹಿತರು ಯಾವಾಗಲಾದರೂ ಸಿಕ್ಕಾಗ ’ಈ ವಿಶೇಷವಾದಂತಹ ಕಡಗ ನಿಮಗೆಲ್ಲಿ ಸಿಕ್ಕಿತು!’ ಎಂದು ಅಚ್ಚರಿಯಿಂದ ಕೇಳುತ್ತಾರೆ.

ಗುಂ.ಮ.:- ’ಸಿನೇಮಾ ನೋಡಿ ಇಂದಿನ ಯುವಪೀಳಿಗೆ ಹಾಳಾಗ್ತಾಯಿದೆ’ ಎಂಬ ಅಪಸ್ವರವಿದೆಯಲ್ಲ?

ವಿಷ್ಣುವರ್ಧನ:- ಸಿನೇಮಾ ನೋಡದೇನೆ ಹಾಳಾಗತಾರಲ್ಲ, ಆವಾಗ? ಅದೂ ಅವರವರ ಯೋಚನೆ  ಅಷ್ಟೆ. ಸಿನೆಮಾ ಕಂಡರೆ ಅವರಿಗಾಗದಿರಬಹುದು. ಮನುಷ್ಯ ಕೆಡಬೇಕು ಅಂತ ಅವನ ಹಣೇಲಿ  ಬರೆದಿದ್ದರೆ ಸಿನಿಮಾ ಏಕೆ ಬೇಕು. ಕೆಟ್ಟ ಸಾಹಿತ್ಯವಿರಬಹುದು, ಕೆಟ್ಟ ಪತ್ರಿಕೆಗಳಿರಬಹುದು. ಯಾವುದೇ ಮಾಧ್ಯಮವಿರಬಹುದು. ಕೆಟ್ಟದ್ದಕ್ಕೆ ಆಸೆ ಪಟ್ಟು, ಮುಂದೆ ಅದು ಅವನಿಗೆ ಕೆಟ್ಟದ್ದು ಅಂತಾ ಗೊತ್ತಾದ ಮೇಲೆ ಒಳ್ಳೆಯವನಾಗಬಹುದು. ಹಾಳಾಗುವವನು ಹೇಗಿದ್ದರೂ ಹಾಳಾಗುವವನೇ.  ಸಿನಿಮಾ ನೋಡಿ ಹಾಳಾಗ್ತಾರೆನ್ನುವುದೊಂದು ಕುಂಟು ನೆಪವಷ್ಟೆ.

ಗುಂ.ಮ.:- ನೀವು ಬಹಳ ಮುಂಗೋಪಿಗಳೆಂದು ಅಂತಾರೆ?

ವಿಷ್ಣುವರ್ಧನ:- ಇರಬಹುದು. ಅದು ಒಂದು ಮನುಷ್ಯನ ಗುಣ ತಾನೆ? ಮುಂಗೋಪ ಇರಬಹುದು  ಯಾರಿಗೆ ಗೊತ್ತು? ಮನುಷ್ಯನಿಗೆ ಇರಬಹುದಾದ ಸಕಲ, ಒಳ್ಳೆ-ಕೆಟ್ಟ ಗುಣಗಳೂ ನನ್ನಲ್ಲಿವೆ. ನಿಮಗೆ ಸ್ವಲ್ಪ ಕಡಿಮೆಯಿರಬಹುದು. ನನ್ನಲ್ಲಿ ಜಾಸ್ತಿ ಇರಬಹುದು.

ಗುಂ.ಮ.:- ರಾಜಧಾನಿಯಲ್ಲಿ ಚಿತ್ರೀಕರಣಗೊಳ್ಳುವಂತೆ, ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಚಿತ್ರೀಕರಣಗೊಳ್ಳುವುದು ವಿರಳ. ಇದರಿಂದ ಎಲ್ಲರೂ ಚಿತ್ರೀಕರಣ ನೋಡಲು ಬರುವವರೇ. ಈ ಜನರ ಗದ್ದಲ, ನೂಕು ನುಗ್ಗಲಿನಿಂದ ನಿಮಗೆ ಹಿಂಸೆಯಾಗುವುದಿಲ್ಲವೆ?

ವಿಷ್ಣುವರ್ಧನ:- ಈ ಜನಸ್ತೋಮ, ಅಭಿಮಾನಿಗಳೆ ನಮ್ಮ ಆಕ್ಸಿಜನ್. ಜೀವನದುಸಿರು ಇದ್ದ ಹಾಗೆ ಅವರಿಂದೇನೂ ತೊಂದರೆಯಾಗಿಲ್ಲ. ಅವರಿಲ್ಲದೇ ನಾನು ಇಲ್ಲವೇ ಇಲ್ಲ.

ವಿಷ್ಣುವರ್ಧನರೊಂದಿಗೆ ಎಲ್ಲ ಮಾತುಗಳನ್ನು ಮುಗಿಸುವಷ್ಟರಲ್ಲಿ ಸಾಯಂಕಾಲದ ಚಹದ ಸಮಯವಾಗಿತ್ತು. ’ಚಹ ತೆಗೆದುಕೊಂಡು ಹೋಗಿ’ ಎಂಬ ಆತ್ಮೀಯ ಮಾತುಗಳಿಂದ  ಅವರು ನಮ್ಮನ್ನು ಬೀಳ್ಕೊಟ್ಟರು.

(ಜುಲೈ ೧೯೯೮)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
11 years ago

 
 
ಈ ಚಿತ್ರ ನೋಡಿದಾಗ ಮತ್ತು  ನಿರ್ದೇಶಕರ ಹೆಸರು ಕೇಳಿದಾಗ ಇದು 'ವೀರಪ್ಪ ನಾಯ್ಕ' ಚಿತ್ರದ ಚಿತ್ರೆಕರಣದಲ್ಲಿ ತೆಗೆದ ಚಿತ್ರ ಅನ್ಸುತ್ತೆ ಅಲ್ಲವೇ ?
ಸಂದರ್ಶನ ಸೂಪರ್ /.. 
 
ಸಂಗೊಳ್ಳಿ ರಾಯಣ್ಣನಾಗಿ ಅವರು  ಅಭಿನಯಿಸಬೇಕಿತ್ತು .. 
ಚಿತ್ರ ರಂಗ – ಇತ್ಯಾದಿ ಬಗ್ಗೆ ಅವರ ನುಡಿಗಳು  ಸತ್ಯ ..!
 
ಶುಭವಾಗಲಿ 
\।/
 
ವೆಂಕಟೇಶ ಮಡಿವಾಳ ಬೆಂಗಳೂರು 

ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
11 years ago

ಹೌದು ನೀವು  ಉಹಿಸಿದಂತೆ ಇದು "ವೀರಪ್ಪ ನಾಯಿಕ" ಚಿತ್ರದ ಚಿತ್ರಿಕರಣ ಸಂದರ್ಭದಲ್ಲಿ ನಡೆಸಿದ್ದು. ಬೈಲಹೊಂಗಲ ತಾಲೂಕಿನ ಕುರುಗುಂದ ಕ್ರಾಸ್ ಬಳಿ ಚಿತ್ರಿಕರಣ ನಡೆದಿತ್ತು. ನಮ್ಮ ಸಂದರ್ಶನ ಮುಗಿದ ನಂತರ ಚಿತ್ರದಲ್ಲಿ ಬರುವ ತಂದೆ ಮಗನ ಕೈಯನ್ನು ಕಡಿಯುವ ದೃಶ್ಯದ ಚಿತ್ರಿಕರಣವಿತ್ತು  ಆ ಚಿತ್ರಿಕರಣವನ್ನು ನೋಡಿ ನಾವು ಮನೆಗೆ ಮರಳಿದ್ದೇವು.

2
0
Would love your thoughts, please comment.x
()
x