ನೆನಪಾಗುವರು: ಶೈಲಜ ಮಂಚೇನಹಳ್ಳಿ

ಈ ಹಿಂದೆ ಸಂಕ್ರಾಂತಿಯ ಮುನ್ನಾದಿನ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‍ಗೆ ಒಂದು ಪ್ರಿಂಟರನ್ನು ಕೊಂಡು ತರಲು ಎಸ್.ಪಿ. ರಸ್ತೆಗೆ ಹೋಗಿದ್ದೆ, ಜೊತೆಯಲ್ಲಿ ನನ್ನಕ್ಕನ ಕಿರಿ ಮಗನನ್ನು ಕರೆದುಕೊಂಡು ಹೋಗಿದ್ದೆ. ಹಲವಾರು ಅಂಗಡಿಗಳಲ್ಲಿ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಅವುಗಳ ಗುಣ-ಲಕ್ಷಣಗಳನ್ನು, ಬೆಲೆಗಳನ್ನು ಕೇಳಿ ತಿಳಿದುಕೊಂಡು ಅಲ್ಲಿರುವ ಒಂದು ಕಾಂಪ್ಲೆಕ್ಸ್‍ನಲ್ಲಿದ್ದ ಕೆಲವು ಅಂಗಡಿಯಲ್ಲಿ ಕೆಲವು ಪ್ರಿಂಟರ್‍ಗಳನ್ನು ವಿಚಾರಿಸಿ ಕಡೆಗೆ ಒಂದು ಅಂಗಡಿಯಲ್ಲಿ, ನಾನು ತೆಗೆದುಕೊಳ್ಳಬೇಕೆಂದಿದ್ದ ಪ್ರಿಂಟರ್ ಮತ್ತು ಇನ್ನೂ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಮಾಲೀಕ ಕುಳಿತುಕೊಳ್ಳುವ ಜಾಗವನ್ನು ಸುತ್ತುವರೆದು ಪಟ್ಟಿಯಂತಿದ್ದ, ಸ್ವಲ್ಪ ಎತ್ತರವಾದ ಮತ್ತು ವಿಶಾಲವಾದ ಮೇಜಿನ ಮೇಲೆ ಇಟ್ಟು ತೋರಿಸುತ್ತಿದ್ದರು. ಅವುಗಳ ಕಾರ್ಯ ಮತ್ತು ಮಾಹಿತಿಗಳ ಬಗ್ಗೆ ವಿಚಾರಿಸಿ ನೋಡುತ್ತಿದ್ದೆ. ಹಾಗೇ ಕಣ್ಣಾಡಿಸುತ್ತಿದ್ದಾಗ ಅಟ್ಟದ ಮೇಲೆ ಪ್ಯಾಕ್ ಮಾಡಿದ ರಟ್ಟಿನ ಪೆಟ್ಟಿಗೆಯ ಒಳಗಿದ್ದ ಒಂದು ಮಾದರಿಯ ಪ್ರಿಂಟರ್‍ನ ಚಿತ್ರ ಹೊರ ನೋಟಕ್ಕೆ ಸುಂದರವಾಗಿ ಕಾಣಿಸಿತು ಅದರ ಬಗ್ಗೆ ವಿಚಾರಿಸಿ ಅದನ್ನು ತೋರಿಸುವಂತೆ ಕೇಳಿದೆ. ಆಗ ಆ ಅಂಗಡಿ ಮಾಲೀಕನ ಸಹಾಯಕ ಇರಲಿಲ್ಲ ಹೊರಗೆ ಹೋಗಿದ್ದ. ಈತನಿಗೆ ಯಾವುದೋ ಒಂದು ಫೋನ್ ಕರೆ ಬಂತು ಅದರೊಡನೆ ಸಂಭಾಷಣೆಯಲ್ಲಿ ತೊಡಗಿದ್ದ ಆದ್ದರಿಂದ ನಾನು ಕೇಳಿದ್ದು ಆತನಿಗೆ ಕೇಳಿಸಲಿಲ್ಲವೆಂದು ಮತ್ತೊಮ್ಮೆ ಅದನ್ನು ತೋರಿಸುವಂತೆ ಕೇಳಿದೆ, ಆದರೆ ಆತ ತನ್ನ ಛೇರನ್ನು ಬಿಟ್ಟು ಬರಲಿಲ್ಲ ಅದೇನು ಅಂತಹ ಒಳ್ಳೆಯ ಪ್ರಿಂಟರ್ ಅಲ್ಲವೆಂದು ಅಲ್ಲಿಂದಲೇ ಹೇಳತೊಡಗಿದ, ಆದರೂ ಅದನ್ನೂ ಒಮ್ಮೆ ನೋಡುವೆ ಎಂದು ಕೇಳಿದೆ ಆದರೂ ಆತ ತನ್ನ ಜಾಗ ಬಿಟ್ಟು ಕದಲಲಿಲ್ಲ, ಆತನ ಸಹಾಯಕನೂ ಇನ್ನೂ ಬಂದಿರಲಿಲ್ಲ, ಆ ಪ್ರಿಂಟರ್ ಮೇಲೆ ಇದ್ದುದರಿಂದ ನನ್ನ ಅಕ್ಕನ ಮಗ ನಾನೇ ಪ್ರಿಂಟರನ್ನು ತೆಗೆದುಕೊಡುವೆ ಎಂದು ಕೇಳಿದಾಗ ನೀನಿನ್ನು ಚಿಕ್ಕವನು ನಿನ್ನಿಂದಾಗುವುದಿಲ್ಲ ಎಂದು ಅದಕ್ಕೂ ನಿರಾಕರಿಸಿದ. ಒಂದು ಕ್ಷಣ ಈತನದೇನು ಅಹಂಕಾರ ಬೇರೆ ಅಂಗಡಿಗೆ ಹೋಗೋಣ ಎಂದು ನಿರ್ಧರಿಸಿದೆ, ಆದರೆ ಇಷ್ಟಕ್ಕೆ ದುಡುಕುವುದು ಬೇಡ ಎಂದು ಕಡೆಗೆ ನಾನು ತೆಗೆದುಕೊಳ್ಳಬೇಕೆಂದಿದ್ದ ಪ್ರಿಂಟರ್ ಅನ್ನು ಸ್ವಲ್ಪ ಬೆಲೆ ಕಡಿಮೆ ಮಾಡಿಸಿ ತೆಗೆದುಕೊಂಡೆ. (ಬಹುಶಃ ನನ್ನ ಈ ನಿರ್ಧಾರ ಆತನ ಬಗ್ಗೆ ತಿಳಿಯುವಂತೆ ಮಾಡಿತು ಎನ್ನಬಹುದು).

ಬಿಲ್ಲಿನ ಹಣ ಪಾವತಿಸಿ ಇನ್ನೂ ಕೆಲವು ಸಾಮಾನುಗಳನ್ನು ಕೊಳ್ಳುವುದು ಇದ್ದುದರಿಂದ ಬೇರೆ ಅಂಗಡಿಗಳಿಗೆ ಹೋಗಲು ಅನುವಾದೆವು, ಆಗ ನನ್ನಕ್ಕನ ಮಗ ಹೊಟ್ಟೆ ಹಸಿಯುತ್ತಿದೆ ಯಾವುದಾದರೂ ಹೋಟೆಲ್ ಹೋಗಿ ಬಂದು ಆಮೇಲೆ ಬೇರೆ ಸಾಮಾನುಗಳನ್ನು ಕೊಳ್ಳೊಣ ಎಂದು ಹೇಳಿದವನು,  ಎಲ್ಲಾ ಕಡೆ ಪ್ರಿಂಟರನ್ನು ತೆಗೆದುಕೊಂಡು ಹೋಗುವುದು ಬೇಡ ಇಲ್ಲೇ ಇಟ್ಟು ಎಲ್ಲಾ ಕೆಲಸ ಮುಗಿದ ಮೇಲೆ ಬಂದು ತೆಗೆದುಕೊಂಡು ಹೋಗೋಣ ಎಂದ ನನಗೂ ಅದೇ ಸರಿಯೆನಿಸಿತು. ಆ ಅಂಗಡಿಯ ಮಾಲೀಕನಿಗೆ ಈ ಪ್ರಿಂಟರನ್ನು ಇಲ್ಲಿಯೇ ಇಟ್ಟು ವಾಪಸ್ಸು ಹೋಗುವ ಸಮಯದಲ್ಲಿ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದೇಳಿ ಮೊದಲು ಹೋಟೆಲಿನ ಕಡೆಗೆ ಹೋದೆವು.

ಎಲ್ಲಾ ಕೆಲಸ ಮುಗಿದ ಮೇಲೆ ಪುನಃ ಆ ಅಂಗಡಿಗೆ ಬಂದು ನಾವಿಟ್ಟಿದ್ದ ಪ್ರಿಂಟರನ್ನು ತೆಗೆದುಕೊಳ್ಳಲು ಹೋದೆವು, ಅಂಗಡಿಯಲ್ಲಿ ಇಣುಕಿ ನೋಡಿದಾಗ ಪ್ರಿಂಟರ್ ಎನೋ ಎದುರಲ್ಲೇ ಕಾಣಿಸಿತು ಆದರೆ ಅಂಗಡಿಯ ಮಾಲೀಕ ಮತ್ತು ಆತನ ಸಹಾಯಕ ಸಹ ಕಾಣಿಸಲಿಲ್ಲ. ಅವರಿಗೆ ಹೇಳದೆ ತೆಗೆದುಕೊಂಡು ಹೋಗುವುದು ಸರಿಯಲ್ಲವೆಂದು ಅವರಿಗಾಗಿ ಕಾಯುತ್ತ ನಿಂತಿದ್ದೆವು. ಅಷ್ಟರಲ್ಲಿ ಒಬ್ಬ ಅಂಗವಿಕಲ ವ್ಯಕ್ತಿ ಕಾಂಪ್ಲೆಕ್‍ನಲ್ಲಿನ ಈ ಅಂಗಡಿಯ ಕಡೆಗೆ ಒಂದು ಹಲಗೆಯ ಮೇಲೆ ಕುಳಿತು ನೆಲವನ್ನು ಎರಡೂ ಕೈಗಳಿಂದ ತೆವಳುತ್ತಾ, ದೇಕುತ್ತಾ ಬರುತ್ತಿದ್ದ, ಯಾರೋ ಬಿಕ್ಷುಕನಿರಬೇಕು ಎಂದು ಆತನನ್ನು ಸರಿಯಾಗಿ ಗಮನಿಸಲಿಲ್ಲ, ಸುಮ್ಮನೆ ಕಾಂಪ್ಲೆಕ್ಸ್‍ನಲ್ಲಿನ ಚಟುವಟಿಕೆಗಳನ್ನು ಅವಲೋಕಿಸುತ್ತಾ ನಿಂತೆ. ಆತ ಈ ಅಂಗಡಿಯ ಸಮೀಪಕ್ಕೆ ಬರುತ್ತಿರುವಾಗ ನನ್ನ ಅಕ್ಕನ ಮಗ ಆ ವ್ಯಕ್ತಿಯೇ ಈ ಅಂಗಡಿಯ ಮಾಲೀಕ ಎಂದಾಗ ಅದನ್ನು ನಂಬದೇ ಆ ವ್ಯಕ್ತಿಯನ್ನು ಈಗ ಸರಿಯಾಗಿ ಗಮನಿಸಿ ನೋಡಿದೆ. ಹೌದು, ಸುಮಾರು ಸೊಂಟದ ಕೆಳಗಿನ ಅಂಗಾಂಗಗಳೆಲ್ಲ ನಿಶ್ಚೇಷ್ಟವಾಗಿ ನಡೆಯಲೂ, ನಿಲ್ಲಲೂ ಆಗದೆ ಇರುವ ಅಂಗವಿಕಲ ವ್ಯಕ್ತಿಯೇ ನನ್ನ ಅಕ್ಕನ ಮಗ ಹೇಳಿದ ಹಾಗೆ ಈ ಅಂಗಡಿಯ ಮಾಲೀಕ ಎನ್ನುವುದರಲ್ಲಿ ಸಂದೇಹವೇ ಇಲ್ಲ, ನಿಜ ಗೊತ್ತಾದಾಗ ನನ್ನ ಮನಸ್ಸಿಗೆ ಏನೋ ಒಂದು ತರಹ ಎನಿಸಿತು. ಹಾಗೆಯೇ, ಆತ ನಮ್ಮ ಸನಿಹ ಬಂದಾಗ ನಮ್ಮನ್ನು ನೋಡಿ ಆತನಿಗೂ ಒಂದು ರೀತಿಯ ಮುಜುಗರವಾದದ್ದನ್ನು ಆತನ ಮುಖಚರ್ಯೆಯಿಂದಲೇ ತಿಳಿಯಿತು. ಏನನ್ನೂ ಮಾತಾಡದೇ ಅಂಗಡಿಯ ಮುಖ್ಯ ಬಾಗಿಲಿನ ಒಳಗೆ ತೆವಳಿಕೊಂಡು ಹೋಗುವುದಲ್ಲಿದ್ದ ಆತನಿಗೆ ನಮ್ಮ ಪ್ರಿಂಟರನ್ನು ತೆಗೆದುಕೊಂಡು ಹೋಗುತ್ತೇವೆ, ಥ್ಯಾಂಕ್ಸ್ ಎಂದೇಳಿ ಪ್ರಿಂಟರನ್ನು ತೆಗೆದುಕೊಂಡು ಬಂದೆವು.

ಹೌದು ಆ ಅಂಗಡಿಯ ಮಾಲೀಕನೇ ನನಗೆ ಆಗಾಗ ನೆನಪಾಗುವ ವ್ಯಕ್ತಿ, ಆ ನೆನಪಿಗೆ ಪುಟಿಗೊಡುವಂತೆ ಇನ್ನೂ ನನ್ನ ಬಳಿ ಇರುವ ಪ್ರಿಂಟರ್ ಸಹ ಕಾರಣ. ಅಂದ ಹಾಗೇ ಆ ವ್ಯಕ್ತಿ ನನಗೇನು ಪ್ರಿಂಟರನ್ನು ಕಡಿಮೆ ದರದಲ್ಲಿ ಕೊಟ್ಟಿರಲಿಲ್ಲ (ಎಲ್ಲಾ ವ್ಯಾಪಾರಿಗಳು ಮಾರುವ ಹಾಗೆ ನಿಮಗೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದೇವೆ ಎನ್ನುವ ಭ್ರಮೆ ಬರುವ ರೀತಿಯಲ್ಲಿ  ಮಾತ್ರ ಮಾರಿದ್ದ) ಆ ವ್ಯಕ್ತಿಯು ಯಾವುದೇ ಕೆಲಸದಲ್ಲಿ ಹೆಸರು ಮಾಡಿದ್ದ ವ್ಯಕ್ತಿಯೇನೂ ಅಲ್ಲ, ಬಾಕಿಂಗ್ ಹ್ಯಾಂ ತರಹ ಯಾವುದೇ ಅನ್ವೇಷಣೆಯನ್ನು ಮಾಡಿದವನಾಗಿರಲಿಲ್ಲ ಆದರೂ ಆ ವ್ಯಕ್ತಿ ನನಗೆ ಆಗಾಗ ನೆನಪಾಗುವ ಕಾರಣವೇನು? ಎಂದುಕೊಂಡಾಗ ಅದಕ್ಕೆ ಉತ್ತರ ನಾನೇ ವಿಮರ್ಶೆಮಾಡಿಕೊಳ್ಳುವಂತಹುದಾಗಿರುತ್ತದೆ. ಎಷ್ಟೊ ಜನರ ಹಾಗೆ ಈತನು ಕಾಯಕವೇ ಕೈಲಾಸ ಎಂದು ಕಾಯಕ ಮಾಡಿಕೊಂಡಿರುವವನಾದರೂ ಎಷ್ಟೋ ಜನರಲ್ಲಿ ಅವನು ಒಬ್ಬನಾಗಿ ಕಾಣಿಸುತ್ತಿಲ್ಲ ಏಕೆ? ಎನ್ನುವ ಪ್ರಶ್ನೆಗೆ ಉತ್ತರ ಬಹುಶಃ ಆತನ ಅಂಗವಿಕಲತೆಯಲ್ಲಿಯೂ ಕ್ರಿಯಾಶೀಲವಾದ ಕಾಯಕ ಕಾಣಿಸುತ್ತಿರುವುದು ಇರಬಹುದು!. ಪ್ರಿಂಟರನ್ನು ಕೊಳ್ಳುವಾಗ ಆತನ “ಅಸಹಾಯಕತೆಯನ್ನು ಅಹಂಕಾರ” ಎಂದು ತಿಳಿದು ಬೇರೆ ಅಂಗಡಿಗೆ ಹೋಗುವುದನ್ನು ತಡೆದ ನನ್ನ ಆಗಿನ ವಿವೇಕಕ್ಕೆ ತಲೆಬಾಗಬೇಕು ಇಲ್ಲದಿದ್ದರೆ ಈ ವ್ಯಕ್ತಿಯ ನಿಜ ರೂಪು ನನಗೆ ತಿಳಿಯದೆ ನೆನಪಿಡುವಂತಹ ವ್ಯಕ್ತಿಯಾಗಿ ಈ ಬರಹ ಬರೆಯಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ ಅನಿಸುತ್ತದೆ. 

ಆ ವ್ಯಕ್ತಿಯು ಕನ್ನಡ ಮಾತನಾಡುವ ಮಾತಿನ ಶೈಲಿಯಿಂದ ಆತ ಮಾರ್ವಾಡಿ ಕುಟುಂಬಕ್ಕೆ ಸೇರಿದವನಾಗಿರಬಹುದು ಎಂದು ಊಹಿಸಬಹುದು. ಬಹುಶಃ ಈ ವ್ಯಕ್ತಿ ಮಾರ್ವಾಡಿ ಕುಟುಂಬದವ -ನಾದ್ದರಿಂದಿರಬೇಕು ಸುಮ್ಮನೆ ಕೂಡದೇ (ಅಥವಾ ಮನೆಯವರು ಆತನನ್ನು ಸುಮ್ಮನೆ ಕೂಡಲು ಬಿಡದೆ) ಕಾಯಕ ನಿರತನಾಗಿ ಹಣಸಂಪಾದನೆ ಮಾಡುತ್ತಿರಬೇಕು ಎಂದೆನಿಸಿತು, ಏಕೆಂದರೆ ಆ ತರಹದ ವ್ಯಕ್ತಿಯೇನಾದರೂ ನಮ್ಮಂತಹವರ ಮನೆಯಲ್ಲೇನಾದರೂ ಇದ್ದರೆ ಅಂತಹ ವ್ಯಕ್ತಿ ಪರಿಚ್ಯುತನಾಗಿ ಮೂಲೆ ಗುಂಪಾಗಿ ಕೂಡಬೇಕಾಗಿತ್ತು ಎನಿಸುವುದರಲ್ಲಿ ಸಂಶಯವಿಲ್ಲ. ಬಹುಶಃ ಈ ತರಹದ ವೈಪರೀತ್ಯಕ್ಕೆ ಮೂಲ ಕಾರಣ ಮಾರ್ವಾಡಿಗಳಿಗೆ ರಕ್ತಗತವಾಗಿ ಬಂದಿರುವ  ವ್ಯಾಪಾರ ಮನೋಬಾವದ ಜೀವನ ಕ್ರಮ ಇರಬೇಕು. ನಮ್ಮಂತವರ, ಈ ತರಹದ ವ್ಯಕ್ತಿಗಳಿಗೆ ಹೇಗೆ? ಬಂಡವಾಳ ಹೂಡಿಕೆ ಮಾಡುವುದು ಎನ್ನುವ ಮನೋಧರ್ಮವಿರಬಹುದು.

ಈ ವ್ಯಕ್ತಿಯು ನೆನಪಾಗುವ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯ ಅಂದರೆ ಒಬ್ಬ ಅಂಗವಿಕಲ ಹುಡುಗನನ್ನು ಆಗಾಗ ನೆನಸುವಂತಾಗುತ್ತದೆ. ಅಂದರೆ ಎರಡು ಕೈಗಳು ಮಾತ್ರ ಸ್ವಾಧೀನವಿಲ್ಲದೆ, ಸೊಟ್ಟಗೆ ತಿರುಗಿದಂತಿರುವ ಆ ಹುಡುಗನ ಶರೀರದ ಬೇರೆಲ್ಲ ಭಾಗಗಳು ಚೆನ್ನಾಗಿಯೇ ಇವೆ. ಈ ಹುಡುಗ ನನ್ನ ಕಂಪ್ಯೂಟರ್ ಸೆಂಟರ್‍ಗೆ ಆಗಾಗ ಬರುತ್ತಿದ್ದ. ಈ ತರಹದ ಕೈಗಳಿಂದ ಈ ಹುಡುಗ ಕೆಲಸವನ್ನು ಮಾಡಲು ಅಸಮರ್ಥ ಎನಿಸಿದರೂ ಕೆಲವೊಂದು ಕೆಲಸಗಳನ್ನು ಮಾಡಬಹುದು ಅನಿಸುತ್ತದೆ. ಇವನ ಬಗ್ಗೆ ಇವನ ಸ್ನೇಹಿತರು ಹೇಳಿದ ಹಾಗೆ ಈ ಹುಡುಗ ನಮ್ಮ ಬಡಾವಣೆಯಲ್ಲಿರುವ ಒಂದು ಪ್ರಸಿದ್ಧವಾದ ದೇವಸ್ಥಾನದ ಬಳಿ ಬೆಳಿಗ್ಗೆ ಮತ್ತು ಸಂಜೆ               ಕೈ-ಕಾಲುಗಳೆರಡು ಸ್ವಾಧೀನವಿಲ್ಲದವನ ಹಾಗೆ ಒಂದು ಕಡೆ ಕುಳಿತು ಬಿಕ್ಷೆ ಬೇಡುತ್ತಾನಂತೆ, ಅದರಿಂದ ಅವನು ಸಾಕಷ್ಟು ಗಳಿಸುತ್ತಾನಂತೆ. ಹಾಗೆ, ಗಳಿಸಿದ ಹಣದಲ್ಲಿ ಮುಕ್ಕಾಲು ಭಾಗ ಹಣವನ್ನು ಮನೆಯ ಖರ್ಚಿಗೆಂದು ಕೊಟ್ಟು ಇನ್ನುಳಿದ ಹಣವನ್ನು ಇವನು ಬಳಸುತ್ತಾನಂತೆ. ಈ ರೀತಿ ಗಳಿಸಿದ ಹಣವನ್ನು ಇವನು ಸಿನಿಮಾ ಹೋಟೆಲ್, ಕಂಪ್ಯೂಟರ್ ಗೇಮ್ಸ್ ಮುಂತಾದವುಗಳಿಗೆಂದು ಖರ್ಚು ಮಾಡಿ ಮಜಾ ಮಾಡುತ್ತಿರುತ್ತಾನೆ. ಇವನು ಈ ರೀತಿ ದುಡಿಯಲು ಅವನ ತಂದೆ-ತಾಯಿಗಳೇ ಕಾರಣವಂತೆ, ಅವರೇ ಅವನು ಆ ರೀತಿ ನಾಟಕವಾಡಿ ಸಂಪಾದನೆ ಮಾಡಲು ಬಲವಂತ ಮಾಡುತ್ತಾರಂತೆ. 

ಮೇಲ್ಕಂಡ ಎರಡೂ ನಿದರ್ಶನಗಳಲ್ಲಿಯೂ ಕಾಣುವುದು ಅಂಗವಿಕಲತೆಯೇ ಆದರೂ ಅವರ ಜೀವನ ಶೈಲಿಯಲ್ಲಿ ಎಷ್ಟೊಂದು ವ್ಯತ್ಯಾಸ ಇದೆಯಲ್ಲವೆ? ಒಬ್ಬನದು ಅಂಗವಿಕಲತೆಯನ್ನು ಬದಿಗಿಟ್ಟು ಸ್ವಾವಲಂಬನೆಯಿಂದ ದುಡಿದು ಸಂಪಾದಿಸುವ ಕಾಯಕವಾದರೆ, ಇನ್ನೊಬ್ಬನದು ಅಂಗವಿಕಲತೆಯನ್ನೇ ಬಂಡವಾಳ ಮಾಡಿಕೊಂಡು ಬಿಕ್ಷೆ ಬೇಡಿ ಪರಾವಲಂಬಿಯಾಗಿ! (ಆದರೆ ಇವನ ಮನೆಯವರು ಇವನ ಮೇಲೆ ಅವಲಂಬಿತರಾಗಿದ್ದಾರೆ) ಸಂಪಾದಿಸುವ ಕಾಯಕ. ಈ ರೀತಿಯ ಜೀವನ ಶೈಲಿಗೆ “ಪ್ರಾಕಾರ”ವಾಗಿರುವುದು ಬಡತನವೇ, ಹಣವೇ, ಆರ್ಥಿಕ ಸ್ಥಿತಿಯೆ? ನೈತಿಕ ಸ್ಥೈರ್ಯವೇ, ಧೈರ್ಯ ವಾ ಅಧೈರ್ಯವೇ, ಅವರ ವಾ ಮನೆಯವರ ಮನೋಧರ್ಮವೇ, …. ಉತ್ತರ! ನಿಮ್ಮ ನಿಲುಕಿಗೆ ಬಿಟ್ಟದ್ದು.

(ನಾನು ಈ ಬರಹವನ್ನು ಬರೆಯುತ್ತಿರುವ ಉದ್ದೇಶ, ಆ ಅಂಗಡಿಯನ್ನು ಮತ್ತು ಪ್ರಿಂಟರ್‍ನ ಮಾದರಿಯನ್ನು ಪಬ್ಲಿಸಿಟಿ ಮಾಡುವ ಉದ್ದೇಶವಲ್ಲವಾದ್ದರಿಂದ ಬೇಕಂತಲೇ ಅಂಗಡಿಯ ಹೆಸರನ್ನು ಮತ್ತು ಪ್ರಿಂಟರ್‍ನ ಮಾದರಿಯ ಹೆಸರನ್ನು ಹೇಳಿಲ್ಲ.)
-ಶೈಲಜ ಮಂಚೇನಹಳ್ಳಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x