ನೆನಪಾಗುತ್ತಾರೆ ಇನ್ನೂ ನಮ್ಮ ಅಪ್ಪಾಜಿ ಮೇಷ್ಟ್ರು : ಜಹಾನ್‍ ಆರಾ. ಎಚ್. ಕೋಳೂರು

ಬೆಳಗ್ಗೆ ಶಾಲೆ ಗಂಟೆ ಹೊಡೆದ ನಿಮಿಷಾರ್ಧದಲ್ಲಿ ಎಲ್ಲರೂ ಪ್ರಾರ್ಥನೆ ಕಡೆಗೆ. ಆಯಸ್ಕಾಂತವು ಕಬ್ಬಿಣದ ವಸ್ತುಗಳನ್ನು ಆಕರ್ಷಿಸಿದಂತೆ ಮೇಷ್ಟ್ರ ವಿಷಲ್ ನಮ್ಮನ್ನು ಆಕರ್ಷಿಸುತ್ತಿತ್ತು. ಗಟ್ಟಿ ಧ್ವನಿಯಲ್ಲಿ “ಸಾವಧಾನ” ಎಂದರೆ ಹುಮ್ಮಸ್ಸಿನಿಂದ “ಏಕ್” ಎನ್ನುವ ಧ್ವನಿ ಒಂದು ಕಡೆಯಾದರೆ ನೂರಾರು ಮಕ್ಕಳ ಕಿವಿಗಳವರೆಗೆ ತರುವ ಮತ್ತೊಂದು ಧ್ವನಿ “ವಿಶ್ರಾಮ್” ಮತ್ತೊಂದು ಕಡೆ,ಇ ದು ನಮ್ಮ ಶಾಲೆಯ ಪಿ.ಟಿ.ಮೇಷ್ಟ್ರಾದ ಅಪ್ಪಾಜಿಗೌಡ್ರ ಶಿಸ್ತಿನ ಪಾಠ.

ಶಿಸ್ತು, ಸಜ್ಜನಿಕೆಗೆ ಮತ್ತೊಂದು ಹೆಸರೇ ಇವರು. ನೀಳಕಾಯದ ಬಿಳಿಗೂದಲಿನ ಇವರು ಯಾವಾಗಲೂ ಸಫಾರಿ ಬಟ್ಟೆ ಮೈಮೇಲೆ, ಎಲ್ಲರ ಮನಗೆಲ್ಲುವ ನಗುವನ್ನು ಮೊಗದ ಮೇಲೆ ಧರಿಸಿ ನಡೆದರೆ ಚಿಕ್ಕವರಿಗೆಲ್ಲ ಕೈಕುಲುಕುವ, ಅಂಗೈಗೆ ಮುತ್ತಿಡುವ ಆಸೆ, ದೊಡ್ಡ್ವರಿಗೆ ನಮಸ್ಕಾರ ಮಾಡುವ ಬಯಕೆ. ಎಲ್ಲರನ್ನೂ ವಿನಯದಿಂದ ಕಾಣುತಿದ್ದ ನಮ್ಮ ಮೇಷ್ಟ್ರು 50-55 ವಯಸ್ಸಿನ ಉತ್ಸಾಹಿ ಯುವಕ. ಇಡೀ ದಿನ ಸೂರ್ಯನ ಬಿಸಿಲಿನಲ್ಲೇ ಇದ್ದರೂ ಮುಖದ ತುಂಬ ತೇಜಸ್ಸು ಹುಮ್ಮಸ್ಸು ಅವರದು. ಅವರ ಜೊತೆ ಖೋ-ಖೋ ಆಟ ಆಡುವುದೇ ಮಜಾ. ಒಂದೊಂದು ದಿನ ಅವರ ನೀತಿ ಕಥೆಗಳ ಪಾಠ ಕೇಳಲು ನಮಗೆ ಅವಕಾಶವೂ ಸಿಗುತ್ತಿತ್ತು. ಅಷ್ಟೇ ಯಾಕೆ ಊರಿನ ಜನರ ಜಗಳ ಬಿಡಿಸಿ, ನ್ಯಾಯ ನೀಡುತ್ತಿದ್ದ ದೃಶ್ಯಗಳೂ ಇರುತ್ತಿತ್ತು.

ಅಂದು ಮಧ್ಯಾಹ್ನ ಶಾಲೆ ಪ್ರಾರಂಭವಾಗಿತ್ತು. ಬಿಸಿಯೂಟ ಸೌಲಭ್ಯ ಇನ್ನೂ ಇದ್ದಿರಲಿಲ್ಲ, ಬುತ್ತಿ ಡಬ್ಬಿ ತರುತ್ತಿದ್ದೆವು.ಇನ್ನೂ ಕೆಲವರು ಮನೆಗೆ ಹೋಗಿ ಚೆನ್ನಾಗಿ ತಿಂದು ನಿಧಾನವಾಗಿ ಬರುತ್ತಿದ್ದರು. ಸಾವಕಾಶವಾಗಿ ಚೆನ್ನಾಗಿ ತಿಂದು ತಡವಾಗಿ ಬಂದವರಿಗೆ ಆಪ್ಪಾಜಿ ಮೇಷ್ಟ್ರ ಪ್ರಸಾದ ಇದ್ದೇ ಇರುತ್ತಿತ್ತು . ಸರಿ ಸುಮಾರು 3 ಘಂಟೆಯಾಗಿತ್ತು ಆಪ್ಪಾಜಿ ಮೇಷ್ಟ್ರು ತರಗತಿಗೆ ಬಂದರು ಯಾಕೋ ಏನೇ ನಮ್ಮ ಶಾಲೆಯ ಸೂರ್ಯನಿಗೆ ಮಂಕು ಬಡಿದಿತ್ತು. ಯಾವಾಗಲೂ ಏ…… ಎಂದು ದೂರದಿಂದಲೇ ಏರುಧ್ವನಿಯಲ್ಲಿಯೇ ಬರುತ್ತಿದ್ದರು, ನಾವು ಖುಷಿಯಿಂದ ಓ…… ಎಂದು ಸ್ವಾಗತಿಸುತ್ತಿದ್ದೆವು ಆದರೆ ಇಂದು ಸದ್ದಿಲ್ಲದೇ ಬಂದು ಕುರ್ಚಿ ಹಿಡಿದು ಕುಳಿತರು ನಾವೆಲ್ಲರೂ ಓ..ಓ.. ಎಂದು ಸುತ್ತ ನಿಂತು ಸರ್ ಸರ್ ಕಥೆ ಹೇಳಿ ಎಂದು ಕುಣಿಯಲು ಪ್ರಾರಂಭಿಸಿದಾಗ ನಿಧಾನವಾಗಿ ಗೋಣು ಹಾಕಿ ಮೆಲ್ಲ ಧ್ವನಿಯಲ್ಲಿ “ಆಮೇಲೆ, ಈಗ ದೂರ ಹೋಗಿ “ ಎಂದರು. ಅವರು ಕೋಲಿನಿಂದ ಬಡಿಯದಿದ್ದರೂ “ದೂರ ಹೋಗಿ” ಎಂದದ್ದು ನೋವಾಯಿತು, ಮುಖ ಸಪ್ಪಗೆ ಮಾಡಿ ಕುಳಿತೆವು. ಗಲಾಟೆಯಿಂದ ತುಂಬಿದ ತರಗತಿ ಸ್ತಬ್ಧವಾಯಿತು ಪುಸ್ತಕ ತೆಗೆದು ಓದಲು ಕುಳಿತೆವು ನೋಡು ನೋಡುತ್ತಿದ್ದಾಗಲೇ ಮೇಷ್ಟ್ರು ಎದೆ ಹಿಡಿದು ಮುಖ ಕಿವುಚಿದಂತೆ ಕಾಣುತಿತ್ತು. ನಮ್ಮ ಮೇಷ್ಟ್ರಿಗೆ ಆರೋಗ್ಯ ಸರಿಯಿಲ್ಲವೇನೋ ಎಂದು ತಿಳಿದೆವು ಅಲ್ಲಲ್ಲಿ ಪಿಸು ಪಿಸು ಗುಸು ಗುಸು ನಡೆಸಿದೆವು. ಆದರೆ ಅವರು ಚೈತನ್ಯ ಮೂರ್ತಿ ಒಮ್ಮೆಯೂ ವೈದ್ಯರ ಬಳಿ ಹೋಗಿದ್ದ ಪ್ರಸಂಗವೇ ಇರಲಿಲ್ಲ, ಒಮ್ಮೆವೂ ಚಳಿಯಲ್ಲಿ ಸೀನಿದ್ದು ಕೆಮ್ಮಿದ್ದು ನೋಡಿರಲಿಲ್ಲ. ಅಂತಹದರಲ್ಲಿ ಎದೆ ನೋವು ಅವರಿಗೆ ಕಾಟ ಕೊಡುತ್ತಿದೆ ಅವರ ನೋವು ನಮ್ಮ ಮೇಲೆ ಪರಿಣಾಮ ಬೀರುತ್ತಿತ್ತು.

ಅಪ್ಪಾಜಿ ಮೇಷ್ಟ್ರು ನಮ್ಮ ಮನೆ ಹತ್ತಿರವೇ ಇದ್ದರು ಆದ್ದರಿಂದ ನನಗೆ ಸ್ವಲ್ಪ ಆತ್ಮೀಯತೆ ಜಾಸ್ತಿನೇ ಇ್ಪವರ ಕಷ್ಟ ನೋಡಲಾಗದೇ “ಏನಾಗುತ್ತಿದೆ ಸಾರ್” ಎಂದು ಕೇಳಿಯೇ ಬಿಟ್ಟೆ “ಏನೂ ಇಲ್ಲ ಮರಿ” ಎಂದು ಸ್ವಲ್ಪ ಮಂದಹಾಸ ಬೀರಿದರು, ಆದರೂ ಅದು ಕ್ಷಣಿಕವಾಗಿತ್ತು. ಜೇಬಿನಿಂದ ಪೆನ್ನು ತೆಗೆದು ಬರೆದ ಹಾಗೆ ಸನ್ನೆ ಮಾಡಿದರು ಓಡಿ ಹೋಗಿ ಕಾಪಿ ಅವರ ಮುಂದೆ ಹಿಡಿದೆ ರಜಾ ಪತ್ರ ಬರೆದಂತಿತ್ತು. ಗೆ ವಿಳಾಸ ಬರೆದು ಮುಂದಿನ ಸಾಲೇ “ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದಿತ್ತು, ಮುಂದುವರೆಸಲು ಅವರ ಕೈಗಳಿಗೆ ಅವರ ಎದೆ ನೋವು ಬಿಡುತ್ತಿರಲಿಲ್ಲ. ಮತ್ತೆ ಸನ್ನೆಯ ಮೂಲಕವೇ “ನೀರು” ಎಂದರು. ಮಧ್ಯಾಹ್ನ ಊಟದ ನಂತರ ನೀರು ಕುಡಿದು ಡಬ್ಬಿ ತೊಳೆದು ಬಹುತೇಕ ಬಾಟಲಿಗಳು ಖಾಲಿಯಾಗಿದ್ದವು. ಹಾಗೋ ಹೀಗೋ ಒಂದು ಬಾಟಲಿ ತಂದು ಗೆಳತಿಯರು ಸರ್‍ಗೆ “ನೀರು” ಕೊಟ್ಟರು. ಶಕ್ತಿ ಸಾಲುತ್ತಿರಲಿಲ್ಲ ಕಾವ್ಯ ಮತ್ತು ನಂದಿನಿ ಮುಂದೆ ಬಂದು ನೀರು ಕುಡಿಸಿದರು. ಬಾಟಲಿಯಲ್ಲಿ ನೀರು ಕಡಿಮೆಯಿತ್ತು. ನಮ್ಮ ಸರ್ ಒಂದೇ ಬಾರಿಗೆ ಒಂದು ಬಾಟಲಿ ನೀರನ್ನು ಗಟಗಟವೆಂದು ಏರಿಸುವ ಮನುಷ್ಯ ಅವರಿಗೆ ಹನಿ ನೀರು ಎಲ್ಲಿ ಸಾಕಾಗಬೇಕೆಂದು ಆಫೀಸ್ ರೂಮ್‍ನಿಂದ ಒಂದು ಲೋಟ ಮತ್ತು ಚರಿಗೆ ನೀರು ತುಂಬಿಕೊಂಡು ಓಡಿ ಬಂದೆ. ನನ್ನ ಗೆಳತಿಯರು ಗಾಳಿ ಹೊಡೆಯುತ್ತಿದ್ದರು, ಮೌನ ಸರ್ ಹಣೆಯ ಮೇಲಿನ ಬೆವರು ಒರೆಸುತ್ತಿದ್ದಳು.

“ ಜಾಗ ಬಿಡಿ ಜಾಗ ಬಿಡಿ ಸರ್ ನೀರು ಕುಡಿಯಿರಿ ಇನ್ನೂ ಸ್ವಲ್ಪ” ಅಂತಾ ಲೋಟಕ್ಕೆ ನೀರು ಸುರಿದು ಕುಡಿಸಲು ಹೋದಾಗ ನನ್ನ ಕಡೆ ಒಂದು ಮಮತೆಭರಿತ ನಗು ಬೀರಿ “ಆ… ಎಂದು ಬಾಯಿ ತೆರೆದರು, ನಿಧಾನವಾಗಿ ನೀರು ಕುಡಿಸಿದೆ ತತಕ್ಷಣವೇ ಅವರ ಕೈ ಕುರ್ಚಿಯಿಂದ ಜಾರಿತು”, ನಾ ಕುಡಿಸಿದ ನೀರು ಬಾಯಿಯಿಂದ ಹೊರ ಹರಿಯಿತು ಗರಬಡಿದವಳಂತೆ ನಿಂತು ಬಿಟ್ಟೆ. ಯಾರೋ ಹೋಡಿ ಹೋಗಿ ಉಳಿದ ಶಿಕ್ಷಕರನ್ನು ಕರೆದು ತಂದರು. ಅಪ್ಪಾಜಿ ಮೇಷ್ಟ್ರ ಕಣ್ಣು ನನ್ನ ಕಡೆ ಹಾಗೆಯೇ ನೋಡುತ್ತಿದ್ದವು. ಕಾವ್ಯ ಮುಖದ ಮೇಲೆ ನೀರು ಎರಚಿದಳು, ಅಷ್ಟರಲ್ಲಿ ಇಡೀ ಕಸ್ತೂರಿಬಾ ಶಾಲೆಯೇ 6 ನೇ ತರಗತಿಗೆ ಬಂದು ಬಿಟ್ಟಿತ್ತು. ವಿಜ್ಞಾನ ಮೇಷ್ಟ್ರು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದರು ಆದರೆ ನಮ್ಮ ಅಪ್ಪಾಜಿ ಮೇಷ್ಟ್ರು ಎಲ್ಲರನ್ನು ಬಿಟ್ಟು ಹೋಗಿಯೇ ಬಿಟ್ಟಿದ್ದರು. ಎಲ್ಲರ ಹೃದಯ ಗೆಲ್ಲುತ್ತಿದ್ದ ನಮ್ಮ ಮೇಷ್ಟ್ರಿಗೆ ಹೃದಯಾಘಾತವಾಯಿತಂತೆ ಅವರು ಇನ್ನು ಶವವಾದರಂತೆ, ಎಲ್ಲರ ಆಕ್ರಂದನ ಅಂದು ಮುಗಿಲು ಮುಟ್ಟಿತ್ತು. ಸರ್ ಸರ್ ಸರ್ ಎಂದು ಎಲ್ಲರೂ ಅತ್ತರು. ಯಾಕೋ ಏನೋ ನನ್ನ ಕಣ್ಣಲ್ಲಿ ನೀರು ಬರಲೇ ಇಲ್ಲ, ನಾನು ನಿರ್ಜೀವದಂತಾಗಿ ಹೋದೆ. ಮೇಷ್ಟ್ರ ಕೈಕಾಲುಗಳನ್ನು ಸರಿ ಮಾಡಿ ಬೆಂಚಿನ ಮೇಲೆ ಮಲಗಿಸಿದ್ದೇ ತಡ ಇಡೀ ಮದ್ದೂರಿಗೆ ಸುದ್ದಿ ತಿಳಿದು ಜನಸಾಗರವೇ ಹರಿದುಬಂತು. ಎಲ್ಲರೂ ಸಾಲಾಗಿ ಮೇಷ್ಟ್ರ ಅಂತಿಮ ದರ್ಶನ ಪಡೆದರು, ಕಾಲುಗಳಿಗೆ ನಮಸ್ಕಾರಮಾಡಿದರು. ನಮ್ಮ ತರಗತಿಯ ನಾವು 5-6 ಜನ ಹುಡುಗಿಯರೆಂದರೆ ಅಪ್ಪಾಜಿ ಮೇಷ್ಟ್ರಿಗೆ ಹೆಮ್ಮೆ ಇತ್ತು. ಕಾವ್ಯ, ನಂದಿನಿ “ ಜಾನು ಬಾರೇ ಹೋಗೋಣ” ಎಂದು ಬಲವಂತವಾಗಿ ಕರೆದರೆ ಏನು ಮಾಡಬೇಕೆಂದು ತೋಚದಾಯಿತು. ಬೆಂಚಿನ ಮೇಲೆ ಅವರ ಕೈ ಕಾಣಿಸುತ್ತಿತ್ತು ನಾವು ಪ್ರತಿದಿನ ಬಂದು ಆ ಕೈಯನ್ನು ಕುಲುಕಿ ಮುತ್ತಿಡುವುದು ಅಭ್ಯಾಸವಾಗಿತ್ತು, ಕೊನೆಯ ಗಮನದಂತೆ ನಾನು ಅವರ ಕೈಗೆ ಗೌರವದಿಂದ ಭಕ್ತಿಯಿಂದ ಮುತ್ತಿಟ್ಟು ಮನೆಗೆ ಹೊರಟುಬಿಟ್ಟೆ. ಪರೀಕ್ಷೆಗಳು ಆಗಲೇ ಮುಗಿದಿತ್ತು, ಇನ್ನು ನಾವು 7ನೇ ತರಗತಿಗೆ ಹೋಗಬೇಕಿತ್ತು. ಹಾಗೋ ಹೀಗೋ ರಜೆ ಕಳೆದುಹೋಯಿತು. ಆದರೆ ಮೇಷ್ಟ್ರ ನೆನಪು ಅದು ಹೇಗೆ ಕಳೆದು ಹೋಗುತ್ತೆ ನೀವೇ ಹೇಳಿ? “ಅಪ್ಪಾಜಿ ಮೇಷ್ಟ್ರು ಇಲ್ಲದ ಶಾಲೆಗೆ ಹೋಗೋದಿಲ್ಲ” ಎಂದು ಹಠ ಹಿಡಿದೆ ವಾರ ಕಳೆಯಿತು, ತಿಂಗಳು ತುಂಬಿತು ನನ್ನ ಹಠ ಕಡಿಮೆ ಆಗಲೇ ಇಲ್ಲ.

ನಮ್ಮ ತಂದೆ ಬಹಳ ಬುದ್ಧಿಜೀವಿ, ಸಮಾಧಾನ ಮಾಡಿ ಬೇರೆ ಶಾಲೆಗೆ ಸೇರಿಸಿದರು. ಪ್ರೌಢಶಾಲೆ ಮುಗಿಸಿದೆ ಕಾಲೇಜು, ಪದವಿ ಎಲ್ಲಾ ಮುಗಿಸಿದೆ ಆದರೂ ಕಸ್ತೂರಿಬಾ ಶಾಲೆಯ ಅಂಗಳದಲ್ಲಿ ನಮ್ಮ ಮೇಷ್ಟ್ರ ಕ್ರೀಡೆಗಳು, ಅವರ ಪಾದರಸದಂತಿದ್ದ ಚಟುವಡಿಕೆಗಳು, ಅವರ ಸಜ್ಜನಿಕೆ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಎಲ್ಲಾ ಕಣ್ಣ ಮುಂದೆಯೇ ಹಾಗೇ ಇವೆ. ಇನ್ನೂ ನನಗೆ ಹಾಗೋ ಹೀಗೋ ಹೇಗೇಗೋ ನೆನಪಾಗುತ್ತಾನೆ ಇದ್ದಾರೆ ನಮ್ಮ ಅಪ್ಪಾಜಿ ಮೇಷ್ಟ್ರು.

-ಜಹಾನ್‍ ಆರಾ. ಎಚ್. ಕೋಳೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x