ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ ಕಸಾಪದ ಸಾಧನೆ ಹೇಳಿಕೊಳ್ಳುವಷ್ಟು ತೃಪ್ತಿಕರವಾಗಿಲ್ಲ. ಇದರ ಲಾಭವನ್ನು ವೈಯಕ್ತಿಕ ಹಿತಾಸಕ್ತಿಯ ಸಂಘಟನೆಗಳು ಪಡೆಯುತ್ತಿವೆ. ಕರ್ನಾಟಕ, ಕನ್ನಡ ನುಡಿ, ಗಡಿ, ಜಲ ಸಮಸ್ಯೆಗಳ ನಿರ್ಣಾಯಕ ಘಟ್ಟದಲ್ಲಿ ಕಸಾಪ ಮೌನವಹಿಸಿದೆ.
ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳು, ರಾಜಕಾರಣಿಗಳು ಹಾಗೂ ಖಾಸಗಿ ಲಾಭಿಗಳಿಂದ ನಾಡಿನ ಅಪಾರ ಪ್ರಮಾಣದ ವನ ಸಂಪತ್ತು ನಿರ್ನಾಮವಾಗಿದೆ, ಸಾವಿರಾರು ಕೋಟಿ ಅದಿರು ಕಳ್ಳ ಸಾಗಣೆಯಾಗಿದೆ, ಕನ್ನಡಿಗರ ಪಾಲಿನ ನೀರನ್ನು ನೆರೆ ರಾಜ್ಯಗಳು ಸ್ಪರ್ಧೆಗೆ ಬಿದ್ದು ಹೀರಿಕೊಂಡಿವೆ, ಕನ್ನಡವನ್ನು ಇಂದಿಗೂ ಆಡಳಿತ ಭಾಷೆಯಾಗಿ ಜಾರಿಗೆ ತರುವ ಪ್ರಯತ್ನ ಆರಂಭದ ಹಂತದಲ್ಲೇ ಇದೆ, ಕನ್ನಡ ಭಾಷಾ ಮಾಧ್ಯಮವನ್ನು ಜಾರಿಗೆ ತರುವ ಪ್ರಯತ್ನದಲ್ಲಿ ಸರ್ಕಾರ ಸೋಲುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳು ನಿರಂತರ ಹೆಚ್ಚುತ್ತಿವೆ. ಹಾಗಾದರೆ ಕಸಾಪ ಮಾಡಿರುವುದೇನು? ಎಂಬ ಪ್ರಶ್ನೆ ಇಲ್ಲಿ ಎದುರಾಗದಿರದು. ಆಯಾ ಕಾಲದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದವರು ಸಮ್ಮೇಳನಗಳ ಆಯೋಜನೆ, ಪುಸ್ತಕ ಪ್ರಕಟಣೆಗಳಿಗೆ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ನೀಡಿದ ಒತ್ತನ್ನು; ನಾಡು, ನುಡಿ, ಗಡಿ, ನೀರು ವಿಷಯದಲ್ಲಿ ನಿಗದಿತ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ನೀಡಲಿಲ್ಲ. ಸರ್ಕಾರವನ್ನು ಅನುದಾನಕ್ಕಾಗಿ ಆಶ್ರಯಿಸುವ ಕಾರಣದಿಂದಾಗಿ ಅವರ ಕೃಪೆಯಲ್ಲಿ ಕಸಾಪ ನಡೆಯಬೇಕೆಂಬ ತಪ್ಪು ತಿಳುವಳಿಕೆಯನ್ನು ಬಹುತೇಕ ಅಧ್ಯಕ್ಷರು ಅನುಸರಿಸಿರುವಂತೆ ತೋರುತ್ತದೆ. ಆದರೆ, ಕಸಾಪಗೆ ಅನುದಾನ ಕೊಡುವುದು ಅವರು ಕೊಡುವ ಭಿಕ್ಷೆಯಲ್ಲ, ಬದಲಾಗಿ ಅದು ಕನ್ನಡಿಗರ ಸಂಸ್ಥೆಗೆ ಕನ್ನಡಿಗರೆ ಕೊಡುವ ಪ್ರೋತ್ಸಾಹಧನವೆಂದು ತಿಳಿಯಬೇಕಾಗಿದೆ. ಅದಷ್ಟೇ ಅಲ್ಲದೆ ಇನ್ನೆಷ್ಟು ಕಾಲ ಹೀಗೆ ಸಹಾಯಕ್ಕಾಗಿ ಹಸ್ತವನ್ನು ಚಾಚಬೇಕೆಂದು ಇದೇ ಕಾಲಕ್ಕೆ ಕಸಾಪ ಯೋಚಿಸಬೇಕಿದೆ.
ಇನ್ನೊಂದು ಮಿತಿಯೆಂದರೆ ಸಾಹಿತ್ಯ ಗ್ರಹಿಕೆ, ಸೃಷ್ಟಿಯಲ್ಲಾದ ಬದಲಾವಣೆಯನ್ನು ಕಸಾಪ ಬೆಂಬಲಿಸಲಿಲ್ಲ. ಅದರ ಪರಿಣಾಮದಿಂದ ಕಸಾಪದ ಸಮ್ಮೇಳನವನ್ನು ಧಿಕ್ಕರಿಸುವ ಕೆಲಸವೂ ನಡೆದು ಹೋಯಿತು. ಅದರ ದುಷ್ಪರಿಣಾಮವೆಂದರೆ, ಇಂದಿಗೂ ಕೆಲವು ಸಾಹಿತಿಗಳು ಇದರಿಂದ ಅಂತರವನ್ನು ಕಾಯ್ದುಕೊಂಡಿರುವುದು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಕೇವಲ ಬಾಯಲ್ಲಿ ಹೇಳಿದ ಮಾತ್ರಕ್ಕೆ ಅದು ಸಾಧಿತವಾಗುವುದಿಲ್ಲ. ಅದರ ಬದಲು ಎಲ್ಲ ವರ್ಗ, ಜಾತಿ, ಲಿಂಗ, ವಯೋಮಾನದ ಸಮುದಾಯದವರನ್ನೂ ಒಳಗೊಳ್ಳಬೇಕು. ಇದರ ಕೊರತೆಯ ಪರಿಣಾಮ ಉದ್ದೇಶಿತ ಗುರಿ ಸಾಧಿಸುವಲ್ಲಿ ವಿಫಲವಾಗಿದೆ.
ಅಲ್ಲದೆ, ರಾಜಕೀಯ ಪಕ್ಷಗಳ ನಾಯಕರಿಗಿಂತ ಕಡಿಮೆಯಿಲ್ಲದಂತೆ ಪ್ರಚಾರ ಭರಾಟೆಯನ್ನು ನಡೆಸಿ, ಚುನಾವಣೆಗಳಲ್ಲಿ ಗೆಲ್ಲಬೇಕಾಗಿರುವ ಸ್ಥಿತಿಗೆ ಇಂದಿನ ಕಸಾಪ ತಲುಪಿದೆ. ಇದರಿಂದ ಸಾಹಿತ್ಯಕ ವಾತಾವರಣಕ್ಕಿಂತ ಜಾತಿ, ಹಣ, ಗುಂಪುಗಾರಿಕೆಗಳು ಮೇಲುಗೈ ಸಾಧಿಸುತ್ತಿವೆ. ಪ್ರಜ್ಞಾವಂತರು ಇಂತಹ ಪ್ರಕ್ರಿಯೆಗಳಿಂದ ಕಸಾಪದಿಂದ ವಿಮುಖರಾಗುತ್ತಿದ್ದಾರೆ. ಜತೆಗೆ ಸಾಹಿತಿಗಳ ಕುರ್ಚಿಯ ಆಸೆ ಕೂಡ ಯುವಜನಾಂಗದಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ನಿರಂತರವಾಗಿ ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಹಾತೊರೆಯುವ, ಸತತವಾಗಿ ಹುದ್ದೆಗಳ ಮೇಲೆ ಮಮಕಾರವನ್ನು ಪ್ರದರ್ಶಿಸುವ ಸಾಹಿತಿಗಳಿಂದಾಗಿ ಇವರೆಡೆಗೆ ನಿರುತ್ಸಾಹ ಕಾಣುತ್ತಿದೆ. ಅಲ್ಲದೆ ಕೆಲವು ಸಾಹಿತಿಗಳು ಬೆಂಬಲಿಸುತ್ತಿರುವ ಗುಂಪುಗಾರಿಕೆ, ಅವರ ಹೊಗಳು ಭಟ್ಟರಿಂದ ಆಗುತ್ತಿರುವ ಭಟ್ಟಂಗಿತನಗಳು, ಹೊರಹೊಮ್ಮುತ್ತಿರುವ ಬಹುಪರಾಕ್‌ಗಳೂ ಕೂಡ ಸಾಹಿತ್ಯ ವಲಯದಿಂದ ಯುವಕರು ದೂರವಾಗುವುದಕ್ಕೆ ಕಾರಣವಾಗುತ್ತಿದೆ.
ಇನ್ನು ಸಾಹಿತ್ಯ ಸಮ್ಮೇಳನಗಳು ನಡೆಯುವ ವೇಳೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಜಾರಿಗೆ ತರುವಲ್ಲಿ ಇದುವರೆಗೆ ಕಸಾಪ ಹಾಗೂ ಸರ್ಕಾರಗಳು ಬದ್ಧತೆಯನ್ನು ತೋರಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ, ನಿರ್ದೇಶಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ, ಕರ್ನಾಟಕ ನಾಟಕ, ತುಳು, ಕೊಂಕಣಿ, ಬ್ಯಾರಿ, ಯಕ್ಷಗಾನ ಮತ್ತು ಬಯಲಾಟ, ಲಲಿತ ಕಲಾ ಅಕಾಡೆಮಿಗಳ ಅಧ್ಯಕ್ಷರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಇನ್ನು ಮುಂದೆ ನಿರ್ಣಯಗಳನ್ನು ತೆಗೆದುಕೊಳ್ಳುವ ಮನಸ್ಸನ್ನು ಕಸಾಪ ಮಾಡಬೇಕಾಗಿದೆ. ಅದರ ಜತೆಗೆ ಸರ್ಕಾರಕ್ಕೆ ಸಲ್ಲಿಸಲಾಗುವ ಈ ನಿರ್ಣಯಗಳನ್ನು ನಿದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಒತ್ತಡವನ್ನು ಹೇರಬೇಕಾಗಿದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಎಲ್ಲ ಅಧ್ಯಕ್ಷರಿಂದ ಕರೆಸಿಕೊಳ್ಳುತ್ತಿರುವ ಕಸಾಪ ನಿಜಕ್ಕೂ ಹಾಗಿದೆಯೇ? ಎಂಬ ಪ್ರಶ್ನೆಯನ್ನು ಮೂಡಿಸುತ್ತಿದೆ. ಗದ್ಯಾನುವಾದ, ಅನುವಾದ, ಜೀವನಚರಿತ್ರೆ, ಕತೆ, ಕಾದಂಬರಿ, ಕಾವ್ಯ, ಸಂಶೋಧನೆ, ಜನಪದ, ಪ್ರಬಂಧ, ಚರಿತ್ರೆ, ಸಾಹಿತ್ಯ ಚರಿತ್ರೆ, ಭಾಷೆ, ನಿಘಂಟು ಮೊದಲಾದ ಪ್ರಕಾರದ ಕೃತಿಗಳನ್ನು ಕಸಾಪ ಪ್ರಕಟಿಸಿದೆ. ಇದರಿಂದ ಕನ್ನಡಿಗರಲ್ಲಿ ವಾಚನಾಭಿರುಚಿ ಮೂಡಿರುವುದು ಸುಳ್ಳಲ್ಲ. ಆದರೆ ಇದರಿಂದಷ್ಟೇ ಆಧುನಿಕತೆಯು ಕನ್ನಡದಂತಹ ಭಾಷೆಗಳಿಗೆ ತಂದೊಡ್ಡಿರುವ ಆತಂಕ ಬಗೆ ಹರಿಯುವುದಿಲ್ಲ.
ಉದಾಹರಣೆಗೆ;
೧) ಇಂದು ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಭಾಷೆಯೊಂದರಿಂದಲೆ ಉದ್ಯೋಗವನ್ನು ಪಡೆಯುವುದು ಅಸಾಧ್ಯವಾಗುತ್ತಿದೆ.
೨) ಪ್ರಮುಖ ನಗರಗಳಲ್ಲಿ ಕನ್ನಡದ ವಾತಾವರಣ ಮಾಯವಾಗುತ್ತಿದೆ.
೩) ಕನ್ನಡ ಮಾಧ್ಯಮವನ್ನು ಜಾರಿಗೆ ತರುವುದರಲ್ಲಿ ಎದುರಾಗಿರುವ ವೈಫಲ್ಯ.
೪) ಸರ್ಕಾರಿ ಶಾಲಾಕಾಲೇಜುಗಳನ್ನು ಮುಚ್ಚುತ್ತಿರುವ ಸರ್ಕಾರದ ಕ್ರಮಗಳಿಂದಾಗಿ ಕನ್ನಡ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ.
ಇನ್ನು ಮಾಧ್ಯಮಗಳು ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡಬೇಕಿತ್ತು. ಆದರೆ ಅವು ಸುದ್ದಿದಾಹ ಹಾಗೂ ಟಿಆರ್‌ಪಿಯ ಹಿಂದೆ ಬಿದ್ದಿವೆ. ಸುದ್ದಿಗಳನ್ನು ಆಕರ್ಷಕಗೊಳಿಸುವ ಪ್ರಯತ್ನದಲ್ಲಿ ಕನ್ನಡಿಗರು, ಕನ್ನಡತನ, ಕನ್ನಡಗಳೆಲ್ಲವೂ ಹಂತಹಂತವಾಗಿ ಮಾಯವಾಗುತ್ತಿವೆ. ಇವುಗಳ ಮೂಲಕ ಮೂಡಬೇಕಾಗಿದ್ದ ವೈಚಾರಿಕತೆಯ ಬದಲಿಗೆ ಮೂಢನಂಬಿಕೆಗಳು ಹೆಚ್ಚುತ್ತಿವೆ. ಅದರ ಪರಿಣಾಮ ದಿನದಿಂದ ದಿನಕ್ಕೆ ಕನ್ನಡಿಗರ ಕೋಮುಸೌಹಾರ್ಧ, ಸರ್ವಧರ್ಮ ಸಹಿಷ್ಣುತೆ, ಉದಾರವಾದಿ ಮನೋಧರ್ಮ, ವೈಚಾರಿಕತೆ ಮಾಯವಾಗುತ್ತಿದೆ. ಇಂತಹ ಸವಾಲುಗಳನ್ನೆಲ್ಲ ಯಶಸ್ವಿಯಾಗಿ ಸ್ವೀಕರಿಸಿ, ಅವುಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿ ದೀರ್ಘಕಾಲೀನ ಪರಿಹಾರ ಸೂತ್ರಗಳನ್ನು ಕಸಾಪ ತುರ್ತಾಗಿ ಕಂಡು ಹಿಡಿಯಬೇಕಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಅಕಾಲಿಕ ವೃದ್ಧಾಪ್ಯಕ್ಕೆ ಈಡಾಗುವ ಅವಕಾಶದಿಂದ ಮುನ್ನಡೆದಿದೆ. ಆದರೆ ವಯೋಸಹಜವಾಗಿಯೇ ಅದಕ್ಕೆ ಮುಪ್ಪು ಆವರಿಸಿದೆ. ಇತ್ತ ಯಯಾತಿ, ಅತ್ತ ಪುರು, ಚಿತ್ರಲೇಖ, ಶರ್ಮಿಷ್ಟೆಯಂತವರೆಲ್ಲರ ಸಮಸ್ಯೆಗಳೆಡೆಗೆ ಕಸಾಪ ಇಂದು ಕ್ರಿಯಾಶೀಲವಾಗಬೇಕಾಗಿದೆ. ಇಲ್ಲವಾದಲ್ಲಿ ಕೇವಲ ಹಳಹಳಿಕೆಯ ಮಟ್ಟಕ್ಕೆ ಇದರ ಸಾಧನೆಗಳು ಸೀಮಿತವಾಗುವ ಅಪಾಯವಿದೆ. ಶಾಸ್ತ್ರೀಯ ಭಾಷೆಯ ಸ್ಥಾನದ ನಂತರ ಮುಂದೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸಕ್ಕೆ ಕಸಾಪ ಕೈ ಹಾಕಬೇಕಾಗಿದೆ. ಕನ್ನಡ ನಾಡು, ನುಡಿ, ಗಡಿ, ಜಲ, ಉದ್ಯೋಗ, ವ್ಯವಹಾರ, ಎಲ್ಲ ಬಗೆಯ ಸಮಸ್ಯೆಗಳೆಡೆಗೆ ಕಸಾಪ ಇಂದು ಕ್ರಿಯಾಶೀಲವಾಗಬೇಕಾಗಿದೆ. ಆ ಮೂಲಕ ಮತ್ತೊಂದು ಶತಮಾನಕ್ಕೆ ಸಜ್ಜಾಗಬೇಕು. ಇಲ್ಲವಾದಲ್ಲಿ ಕೇವಲ ಹಳಹಳಿಕೆಯ ಮಟ್ಟಕ್ಕೆ ಇದರ ಸಾಧನೆಗಳು ಸೀಮಿತವಾಗುವ ಅಪಾಯವಿದೆ.
*****