ನೂರನೇ ಕೋತಿ: ಅಖಿಲೇಶ್ ಚಿಪ್ಪಳಿ

ಅತ್ತ ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗತಿಕ ಶೃಂಗ ಸಭೆ ನಡೆಯುತ್ತಿದ್ದಾಗಲೇ ಇತ್ತ ಚೆನೈ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು. ಅಧಿಕೃತ ಲೆಕ್ಕಾಚಾರದಂತೆ ಸುಮಾರು 200 ಜನ ಅತಿವೃಷ್ಟಿಯ ಕಾರಣಕ್ಕೆ ಸತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದವು. ಸಹಿಷ್ಣು-ಅಸಹಿಷ್ಣು ಚರ್ಚೆಗಳು ನಡೆಯುತ್ತಲೇ ಇದ್ದವು. ಮಲೆನಾಡಿನಲ್ಲಿ ಮಳೆಯ ಕೊರತೆಯಿಂದಾಗಿ ಬತ್ತದ ಗದ್ದೆಗಳು ಒಣಗಿಹೋಗುತ್ತಿದ್ದವು. ತೀರಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಲ್ಲದಿದ್ದರೂ, ರೈತರಿಗೆ ಆತಂಕದ ಪರಿಸ್ಥಿತಿ ಏರ್ಪಟ್ಟಿರುವುದು ಬೀಸಾಗಿಯೇ ತೋರುತ್ತಿದೆ. ಈ ಮಧ್ಯೆ ಕಾರ್ಯಕ್ರಮ ನಿಮಿತ್ತ ನಮ್ಮಲ್ಲಿಗೆ ಬಂದಿದ್ದ ಶ್ರೀ ಪ್ರಕಾಶ್ ಭಟ್ ಜೊತೆ ಅರ್ಧಗಂಟೆ ಕಳೆಯುವ ಸುಯೋಗ ಒದಗಿ ಬಂದಿತು. ಪ್ರಕಾಶ್ ಭಟ್ ಬೈಫ್ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಅಲ್ಲೇ ಕೆಲಸ ಮಾಡುತ್ತಿದ್ದರೆ ಆ ಮಿತಿಗಿಂತ ಹೊರಬರಲು ಸಾಧ್ಯವಿಲ್ಲ ಎಂದು ಅನಿಸಿದ್ದರಿಂದ, ಕೆಲಸ ಬಿಟ್ಟು, ತಮ್ಮದೇ ಸಂಸ್ಥೆಯೊಂದನ್ನು ಕಟ್ಟಿಕೊಂಡು, ರೈತರ  ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಧಾರವಾಡದ ಗುಡ್ಡಗಳಲ್ಲಿ ಇವರ ಪ್ರಯತ್ನದಿಂದ ಹಸಿರು ನಳನಳಿಸುತ್ತಿದೆ. ಈ ಬಾರಿ ಇವರಿಗೆ ರಾಜ್ಯಪ್ರಶಸ್ತಿಯೂ ಒಲಿದು ಬಂದಿದೆ. ಯೋಗ್ಯತೆ ಸಿಕ್ಕ ಪ್ರಶಸ್ತಿ ಎಂಬ ಸಂಭ್ರವೂ ನಮಗಿದೆ.

ಜಾಗತಿಕ ಹವಾಮಾನ ಬದಲಾವಣೆ ಜಾಥಾ ಪೂರೈಸಿ, ಲೆಕ್ಕಾಚಾರ ಮುಗಿಸಿ ಕುಳಿತವನಿಗೆ, ಕೆಲವರು ಹೇಳಿದ್ದು, ನೀನೊಬ್ಬ ಬಾಯಿಬಡಿದುಕೊಳ್ಳುತ್ತಿದ್ದರೆ ಏನು ಬದಲಾವಣೆಯಾಗುತ್ತೆ ಎನ್ನುವಂತಹ ಮಾತುಗಳನ್ನಾಡಿದ್ದರು. ಇದನ್ನೇ ಶ್ರೀ ಪ್ರಕಾಶ್ ಭಟ್ ಜೊತೆ ಚರ್ಚಿಸಿದೆ. ಆಗೊಂದು ಕತೆಯೊಂದನ್ನು ಹೇಳಿದರು.

ಒಂದು ದೇಶ ಬೇಕಾದರೆ ಜಪಾನ್ ಎಂದಿಟ್ಟುಕೊಳ್ಳಿ. ದ್ವೀಪದೇಶದ ದ್ವೀಪದಲ್ಲಿ ಒಂದಿಷ್ಟು ಮಂಗಗಳು ವಾಸಿಸುತ್ತಿದ್ದವು. ಅವು ಅಲ್ಲೇ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆಯುವ ಗೆಣಸಿನ ಮೇಲೆ ಅವಲಂಬಿತವಾಗಿದ್ದವು. ಮರಳು ಮಿಶ್ರಿತ ಮಣ್ಣಿನಿಂದ ಗೆಣಸನ್ನು ಕೀಳುವುದು ಅದನ್ನೇ ತಿನ್ನುವುದು. ಹೀಗೆ ತಿನ್ನುವಾಗ  ಒಂದಷ್ಟು ಮರಳು ಕೂಡ ಹೊಟ್ಟೆಗೆ ಹೋಗುತ್ತಿತ್ತು. ಜೊತೆ ತಿನ್ನುವಾಗ ಬಾಯಿಯೆಲ್ಲಾ ಮರಳು-ಮರಳು. ಆದರೂ ಅನಿವಾರ್ಯವಾಗಿ ಗೆಣಸಿನ ಜೊತೆ ಮರಳನ್ನು ತಿನ್ನಬೇಕಿತ್ತು. ಹೀಗೆಯೇ ನಡೆಯುತ್ತಿರಲು, ಒಂದು ಮರಿಕೋತಿ ಗೆಣಸನ್ನು ಕಿತ್ತುಕೊಂಡು ಸಮುದ್ರತೀರಕ್ಕೆ ಆಡುತ್ತಾ ಹೋಯಿತು. ಗೆಣಸನ್ನು ಕೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಆಟವಾಡಿತು. ಸ್ವಲ್ಪ ಹೊತ್ತಿನ ಮೇಲೆ ಅದೇ ಗೆಣಸನ್ನೇ ಕಚ್ಚಿ ತಿಂದಿತು. ಆಶ್ಚರ್ಯ, ಗೆಣಸಿನಲ್ಲಿ ಮರಳಿನ ಅಂಶವಿರಲಿಲ್ಲ. ತಿನ್ನುವಾಗ ಕಿರಿ-ಕಿರಿಯಾಗಲಿಲ್ಲ.  ಈ ವಿಷಯವನ್ನೇ ತನ್ನ ತಾಯಿಗೆ ಹೇಳಿತು. ಹೀಗೆ ಆ ದ್ವೀಪದ  ಎಲ್ಲಾ ಮಂಗಗಳೂ ಗೆಣಸನ್ನು ತೊಳೆದುಕೊಂಡು ತಿನ್ನುವ ರೂಢಿಗೆ ಬಿದ್ದವು. ವಿಷಯ  ಎಲ್ಲಾ ದ್ವೀಪದ ಮಂಗಗಳಿಗೂ ತಿಳಿಯಿತು. ಒಂದು ಹಂತದಲ್ಲಿ ಎಲ್ಲಾ ಮಂಗಗಳೂ ಗೆಣೆಸನ್ನು ತೊಳೆದುಕೊಂಡು ತಿನ್ನಲು ಕಲಿತವು ಹಾಗೂ ಮರಳಿನ ಕಿರಿ-ಕಿರಿಯಿಂದ ತಪ್ಪಿಸಿಕೊಂಡವು. 

ಈ ಕತೆಯ ನೀತಿಯೇನೆಂದರೆ, ಪರಿಸರ ರಕ್ಷಣೆಯ ವಿಷಯವಿರಬಹುದು, ವನ್ಯಜೀವಿಗಳ ಮಾರಣ ಹೋಮವಿರಬಹುದು, ವಾತಾವರಣ ಬದಲಾವಣೆಯ ಚರ್ಚೆಯಿರಬಹುದು. ನಾವು ನಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು. ಹಾಗೆ ಮಾಡುವಾಗ ನಾವು ಒಂದನೇ ಮಂಗನೆಂದೇ ತಿಳಿದಿರಬೇಕು. ಎಂದಾದರೊಮ್ಮೆ ಆ ನೂರನೆಯ ಮಂಗ  ಆಗಮಿಸುತ್ತದೆ, ಆ ಹಂತವೇ ಸಾರ್ವತ್ರಿಕ ಹಂತವಾಗಿ ಮಾರ್ಪಟ್ಟು ಪರಿಸ್ಥಿತಿ ಸುಧಾರಿಸುತ್ತದೆ. ಇದೊಂದು ಆಶಾಭಾವನೆಯ ಹಂತ. ನಾವು ನಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು. ನಮ್ಮ  ಈ ಆಶಾಭಾವನೆಯ ಕೃತಿಯೇ ನೂರನೇ ಕೋತಿಯ ಉಗಮಕ್ಕೆ-ಆಗಮನಕ್ಕೆ ಕಾರಣವಾಗಬಹುದು. ಯಾವುದೇ ಕಾರಣಕ್ಕೂ ಸಿನಿಕತನಕ್ಕೆ ಹೋಗಬಾರದು. ನಿರಾಶಾಭಾವ ಸಲ್ಲ.

ಹಾಗೆಯೇ ನಮ್ಮ ಸ್ನೇಹಿತರೊಬ್ಬರಿದ್ದಾರೆ ಬೆಂಗಳೂರಿನಲ್ಲಿ. ಕಂಪ್ಯೂಟರ್ ಪ್ರಪಂಚದಲ್ಲಿರುವ  ಅವರು ಸದಾ ಚಟುವಟಿಕೆಯಿಂದಿರುವವರು. ಜೀವನದಲ್ಲಿ ಒಂದು ನಿಮಿಷವನ್ನೂ ವೃಥಾ ವ್ಯರ್ಥಮಾಡಬಾರದು ಎಂಬ ಖಚಿತ ನಿಲುವು ಹೊಂದಿರುವವರು. ಉತ್ತಮ  ಆದಾಯವನ್ನು ಹೊಂದಿರುವ  ಅವರು ಸಮಾಜಕ್ಕೊಂದು ಕೊಡುಗೆಯನ್ನು ನೀಡಬೇಕು ಎಂಬ ಮನ:ಸ್ಥಿತಿಯನ್ನು ಹೊಂದಿರುವವರು. ನಮ್ಮ ಊರಿನ ಸಮೀಪದಲ್ಲೇ 20 ಎಕರೆ ಜಾಗವನ್ನು ಖರೀಧಿಸಿದ್ದಾರೆ. ಆ ಜಾಗವನ್ನು ಕೊಳ್ಳುವ ಮೊದಲು ಅಲ್ಲಿ ನೀಲಗಿರಿ ಹಾಗೂ ಅಕೇಶಿಯಾವನ್ನು ಬೆಳೆಯಲಾಗಿತ್ತು. ಅಲ್ಲಿನ ಮಣ್ಣು ಇವೆರೆಡು ಸಸ್ಯಗಳ ಕಾರಣದಿಂದ ಬರಡಾಗಿತ್ತು. ಇಲ್ಲೊಂದು ಕಾಡು ಬೆಳೆಸಿದರೆ ಹೇಗೆ ಎಂಬ  ಅವರ ಆಲೋಚನೆ ನನ್ನ ಕುರಿತೇ ಹೇಳಿದಂತಿತ್ತು. ಹೀಗೆ ಒಂದು ಉತ್ತಮ ಕಾಡನ್ನು ರೂಪಿಸುವ ಹೊಣೆಯನ್ನು ನನ್ನ ಹೆಗಲಿಗೇರಿಸಿದರು.

ಹೋದವರ್ಷವೇ ಕಾಡು ಬೆಳೆಸುವ ತಯಾರಿಯ ಪೂರ್ವದ ಕೆಲಸಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಮೊಟ್ಟಮೊದಲಿಗೆ ನಮ್ಮ ಜಾಗಕ್ಕೊಂದು ಗಡಿಯಾಗಿ ಅಗಳವನ್ನು ತೆಗೆದದ್ದಾಯಿತು. ನಂತರದಲ್ಲಿ ರಕ್ಕಸ ಕುಲದ ನೀಲಗಿರಿ ಕೂಳೆಯನ್ನು ಕೀಳಲಾಯಿತು. ನೀಲಗಿರಿಯನ್ನು ರಕ್ತಬೀಜಾಸುರನಿಗೆ ಹೋಲಿಸಬಹುದು. ಮಣ್ಣಿನಲ್ಲಿ ನೀಲಗಿರಿಯ  ಅಂಶವಿದ್ದರೂ ಸಾಕು, ಮಳೆ ಬಿದ್ದೊಡನೆ ಚಿಗುರೇಳುತ್ತದೆ. ಅಕೇಶಿಯಾದ್ದು ಇನ್ನೊಂದು ತರ. ಮಣ್ಣಿನಲ್ಲಿ ಬೆರೆತ  ಇದರ ಬೀಜಗಳು ಮಳೆ ಬಿದ್ದು ಮಣ್ಣು ಹದವಾದೊಡನೆ ಚಿಗುರಿ ಮೇಲೆಳುತ್ತವೆ. ಕಾಡು ಬೆಳೆಸಲೂ ನಿರಂತರ ಶ್ರಮ ಬೇಕು. ಅದರಲ್ಲೂ ನೀಲಗಿರಿ ಕೂಳೆ ಮತ್ತು ಅಕೇಶಿಯಾ ಬೀಜಗಳು ಇರುವ ಜಾಗದಲ್ಲಿ ನಿತ್ಯದ ನಿರ್ವಹಣೆ ಇರಲೇ ಬೇಕು. ಚಿಗುರಿದ ನೀಲಗಿರಿಯನ್ನು ಚಿವುಟಿ ಹಾಕದಿದ್ದರೆ ಬರೀ ತಿಂಗಳಲ್ಲೇ ಆಳೆತ್ತರೆ ಬೆಳೆದು ಇತರ ಸಸ್ಯಗಳನ್ನು ಕೊಲ್ಲುತ್ತದೆ. ಅಕೇಶಿಯಾ ಬೀಜವನ್ನು ಆರಿಸಿ ತೆಗೆಯುವುದು ಕಷ್ಟ.  ಅದು ಗೇಣುದ್ದದ ಗಿಡವಾಗಿದ್ದಲೇ ಕಿತ್ತೆಸೆಯಬೇಕು. ಇದು ಒಂದೆರೆಡು ದಿನದಲ್ಲಿ ಆಗುವ ಕೆಲಸವಲ್ಲ. ಈ ಎರಡು ಪರದೇಶಿ ಸಸ್ಯಗಳು ನಮ್ಮ ಜಾಗದಲ್ಲಿ ನಿರ್ನಾಮ ಮಾಡುವವರೆಗೂ ವಿರಮಿಸುವಂತಿಲ್ಲ. ಈ ಬಾರಿ ಮಳೆಯ ಪ್ರಮಾಣವೇ ಕಡಿಮೆ ಆದರೂ ಸೂಕ್ತ ಸಮಯದಲ್ಲೇ ಗಿಡಗಳನ್ನು ನೆಟ್ಟಿದ್ದರಿಂದ, ನೆಟ್ಟ 1200 ಗಿಡಗಳೂ ಬದುಕಿವೆ. ಈ ಹೊತ್ತಿಗೊಂದು ಮಳೆಯಾದರೆ ಚೆನ್ನಾಗಿತ್ತು ಎಂದು ಕಾಡು ಬೆಳೆಸಿದವನಿಗೆ ಅನಿಸುತ್ತದೆ. ಅದೇ ಕೊಯಲು ಮಾಡುತ್ತಿರುವ ರೈತನಿಗೆ ಮಳೆ ಬಂದರೆ ತೊಂದರೆಯಾಗುತ್ತದೆ. ಕಾಡು ಬೆಳೆಸಿದ ಚಿಕ್ಕ ವಿವರಗಳನ್ನೂ ದಾಖಲು ಮಾಡುತ್ತಿದ್ದೇನೆ ಪೋಟೊ ಸಮೇತ. ಮುಂದಿನ ದಿನಗಳಲ್ಲಿ ಈ ಅಂಕಣಕ್ಕೊಂದು ಸರಕೂ ಆಗುತ್ತದೆ. ಕೆಲವರಿಗೆ ಸ್ಪೂರ್ತಿಯೂ ಆಗಬಹುದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Anantha Ramesh
8 years ago

ನಿಜಕ್ಕೂ ಈ ಓದು ಸ್ಪೂರ್ತಿದಾಯಕ. ಮುಂದಿನ ಸಂಚಿಕೆ ಕಾಯುತ್ತಿದ್ದೇನೆ.

Akhilesh Chipli
Akhilesh Chipli
8 years ago
Reply to  Anantha Ramesh

ಧನ್ಯವಾದಗಳು ಅನಂತ್ ಜೀ. ಕಾಡಿನ ಕತೆಯನ್ನು
ಆಗಾಗ ಬರೆಯುತ್ತೇನೆ.

ಪಾರ್ಥಸಾರಥಿ

ನಿಜಕ್ಕು ಆಸಕ್ತಿಧಾಯಕ. 
ಅಂತಹ ಕಾಡು ಬೆಳೆಯಲು ನೀವು ಪ್ರತ್ಯೇಕ ಪರವಾನಗಿ ಪಾರೆಸ್ಟ್ ಡಿಪಾರ್ಟ್ ಮೆಂಟಿನಿಂದ ತೆಗೆದುಕೊಳ್ಳುವ ಅಗತ್ಯ ಬಿದ್ದಿತ್ತೆ ? 

Akhilesh Chipli
Akhilesh Chipli
8 years ago

ಪ್ರತ್ಯೆಕ ಪರವಾನಿಗೆ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಗಿಡ ಬೇಕಾದಲ್ಲಿ ಕನಿಷ್ಟ ದರದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೀಡುತ್ತದೆ. ಕೃ‍ಷಿ-ಯೋಜನೆಯಡಿಯಲ್ಲಿ ಮೂರು ವರ್ಷದ ನಿರ್ವಹಣೆ ವೆಚ್ಚವನ್ನು (ಬದುಕಿದ ಗಿಡಗಳಿಗೆ ಮಾತ್ರ) ಭರಿಸುವ ಸರ್ಕಾರಿ ಯೋಜನೆಯಿದೆ. ಗಿಡ ಬೆಳೆಸಲು ಸ್ಥಳ ಬೇಕಲ್ಲ? ಅದನ್ನು ಸ್ನೇಹಿತರೊಬ್ಬರು ಖರೀದಿಸಿದ್ದಾರೆ. ಸಾಮಾಜಿಕ ಕಾಳಜಿ ಹೊಂದಿದ ಅವರಿಗೆ ಅರಣ್ಯ ಬೆಳೆಸುವ ಯೋಜನೆ ಹಿಡಿಸಿದೆ. ವಿವರಗಳನ್ನು ಮುಂದೆ ಯಾವಾತ್ತಾದರೂ ಬರೆಯುವೆ. ಧನ್ಯವಾದಗಳು ಪಾರ್ಥಸಾರಥಿ ಸರ್.

4
0
Would love your thoughts, please comment.x
()
x