‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ …: ಡಾ. ಹೆಚ್ಚೆನ್ ಮಂಜುರಾಜ್

ಮೋಸ ವಂಚನೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಆತ್ಮವಂಚನೆ ಎಂಬುದು. ಅಂದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುವ ವೈಖರಿಯೇ ಕಂಗೆಡಿಸುವ ವಿಚಾರ. ಆತ್ಮವಂಚನೆಯನ್ನೇ ರೂಢಿಸಿಕೊಂಡವರು ಕ್ರಮೇಣ ಬಂಡತನವನ್ನು ಬೆಳೆಸಿಕೊಂಡು ಸಂವೇದನಾಶೂನ್ಯರಾಗುವರೋ? ಅಥವಾ ಸಂವೇದನಾಶೀಲತೆ ಕಡಮೆಯಾದ ಮೇಲೆ ಆತ್ಮವಂಚನೆಗೆ ಇಳಿಯುತ್ತಾರೋ? ಸದಾ ಗೊಂದಲ ನನಗೆ.

ನಾವೆಲ್ಲ ಒಂದಲ್ಲ ಒಂದು ಸಲ, ಒಂದಲ್ಲ ಒಂದು ದಿನ ಇಂಥ ಆತ್ಮವಂಚನೆಗೈದವರೇ! ಮನುಷ್ಯರಾದ ಮೇಲೆ ಇದೆಲ್ಲ ಮಾಮೂಲು ಎಂದು ಕೈ ತೊಳೆದುಕೊಂಡು ಬಿಡದೇ ಸೀರಿಯಸ್ಸಾಗಿ ಯೋಚಿಸಿದಾಗ ನನಗೆ ಹೊಳೆದದ್ದು: ಇದೊಂದು ಮನೋಬೇನೆ ಎಂದು. ಮಾತು ಮತ್ತು ವರ್ತನೆಯ ದೋಷವೆಂದು ಮೇಲ್ನೋಟಕ್ಕೆ ಅನಿಸಿದರೂ ಇದು ನಮ್ಮ ವ್ಯಕ್ತಿತ್ವವನ್ನೇ ಬದಲಿಸಿ ಬಿಡುವ ಮತ್ತು ಎಲ್ಲರಿಂದ ಹಗುರವಾಗಿ, ನಿರ್ಲಕ್ಷ್ಯಕ್ಕೆ ಪಕ್ಕಾಗಿ ಥೂ….., ಛೀ……ಎನಿಸಿಕೊಂಡು ‘ಯಾರೂ ನನ್ನನ್ನು ಇಷ್ಟಪಡುತಿಲ್ಲ, ಯಾರಿಗೂ ನನ್ನನ್ನು ಕಂಡರಾಗುತಿಲ್ಲ, ಯಾರೂ ಸರಿಯಿಲ್ಲ’ ಎಂಬ ನಕಾರಾತ್ಮಕತೆಯನ್ನು ಬೆಳೆಸಿಕೊಂಡು ನರಳುತ್ತೇವೆ. ಇಂಥ ಸಂದರ್ಭದಲ್ಲಿ ಆತ್ಮಾವಲೋಕನ ಮತ್ತು ಅರಿವನ್ನು ಬೆಳೆಸಿಕೊಳ್ಳುವ ವಿನಯವಂತಿಕೆ ಇದ್ದರೆ ಈ ವ್ಯಕ್ತಿತ್ವದ ದೋಷದಿಂದ ಹೊರಗೆ ಬರಬಹುದು. ಆದರೆ ಅದು ಹಾಗಾಗುವುದಿಲ್ಲ; ಏಕೆಂದರೆ ‘ಯಾರೋ ನಮ್ಮನ್ನು ಇಷ್ಟಪಡದಿದ್ದರೆ ಅದು ಅವರ ಸಮಸ್ಯೆ’ ಎಂಬುದನ್ನು ಇನ್ನೊಬ್ಬರಿಗೆ ಅನ್ವಯಿಸಿ, ಸಿನಿಕರಾಗಿ ತಮ್ಮನ್ನು ತಾವೇ ವಂಚಿಸಿಕೊಂಡು ಬದುಕುವ ಭಂಡತನ ಅದಾಗಲೇ ಅಭ್ಯಾಸವಾಗಿ ಬಿಟ್ಟಿರುತ್ತದೆ.

ಈ ದಿಸೆಯಲ್ಲಿ ನಿಜವಾದ ಗೆಳೆಯರು, ಗುರುಗಳು (ಅವರ ಪಾಲಿಗೆ ಇದ್ದರೆ) ಈ ದುರಭ್ಯಾಸವನ್ನು ಮೀರಲು ನೆರವೀಯಬಹುದು. ವಿಚಿತ್ರವೆಂದರೆ, ತನ್ನಂಥವರನ್ನೇ ಹುಡುಕಿಕೊಂಡು, ಜೈಕಾರ ಹಾಕುವ ಪಡೆಯನ್ನು ಕಟ್ಟಿಕೊಂಡ ನಾವು ಸ್ವ ಸಮರ್ಥನೆಯಿಂದ ಮತ್ತಷ್ಟು ಆಳ ಪಾತಾಳಕ್ಕೆ ಪಯಣಿಸಿರುತ್ತೇವೆ. ಪ್ರಪಂಚ ಸರಿಯಿಲ್ಲ ಎಂತಲೋ ವ್ಯವಸ್ಥೆ ಕೆಟ್ಟಿದೆ ಎಂತಲೋ ತನ್ನ ಮೇಲಿನ ಅಧಿಕಾರಿಗಳು ಒಳ್ಳೆಯವರಲ್ಲ ಎಂತಲೋ ಸದಾ ದೂರುವ ದೌಲತ್ತಿನ ಮಾಲೀಕರು ಇವರು. ಕೆಲಸಗಳ್ಳರಾದ ಇಂಥವರು ತಮಗಿರುವ ವಿಶೇಷವಾದ ಪ್ರತಿಭೆ ಮತ್ತು ಸೃಷ್ಟಿಶೀಲತೆಗಳಿಗಾಗಿ (ಅದೇನು ಎಂಬುದನ್ನು ಅವರೇ ಹುಡುಕಿ ಹೇಳಬೇಕಷ್ಟೇ!) ಯಾವ ಕಾರ್ಯಗಳನ್ನು ಮಾಡದಿದ್ದರೂ ವ್ಯವಸ್ಥೆಯು ತಮ್ಮನ್ನು ಸಾಕಬೇಕು; ಗೌರವಿಸಬೇಕು ಎಂದು ಬಯಸುವ ದ್ರೋಹಿಗಳಾಗಿ ತಂತಮ್ಮ ಕಮೆಂಟು ಮತ್ತು ಕ್ಯಾತೆಗಳಿಂದ ಭಯಗ್ರಸ್ಥ ವಾತಾವರಣವನ್ನು ಸೃಷ್ಟಿಸಿ, ತನ್ನಂಥವರಲ್ಲದವರ ಮನದಲ್ಲಿ ಅಪರಾಧೀ ಪ್ರಜ್ಞೆಯನ್ನು ಹುಟ್ಟು ಹಾಕಲು ಹಾತೊರೆಯುತ್ತಿರುತ್ತಾರೆ. ಹೀಗಾಗಿ, ಅಸ್ವಸ್ಥರಾದವರ ಇಂಥವರ ನುಡಿ ಮತ್ತು ನಡೆಗಳೆರಡೂ ಸಮತೂಕದಲ್ಲಿ ಬೆರೆಯದೇ, ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಾಣಬಹುದಷ್ಟೇ. ಈ ನಯವಂಚನೆಯನ್ನು ತನಗೆ ತಾನು ಮಾಡಿಕೊಳ್ಳುವ ಆತ್ಮಘಾತುಕತೆ ಎಂದು ಕರೆದು ಕನಿಕರಿಸಬೇಕು. ಈ ವಂಚಕರು ಕೆಲಸ ಮಾಡುವ ಜಾಗಗಳಲ್ಲಿ ಇರಬಹುದು, ಸಮಾಜಘಾತುಕರಾಗಿ ಒಂದು ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರಬಹುದು, ನನ್ನ ಮನೆಯಲ್ಲಿಯೇ ಇರಬಹುದು, ನನ್ನ ಗೆಳೆಯರಲ್ಲೇ ಇಂಥವರಿರಬಹುದು ಅಷ್ಟೇಕೆ? ಅದು ನಾನೇ ಆಗಿರಬಹುದು! ಆತ್ಮವಂಚನೆಯು ಕೊನೆಗೆ ಸ್ಯಾಡಿಸ್ಟು (ವಿಘ್ನ ಸಂತೋಷಿ)ಗಳನ್ನು ಬಿತ್ತಿ ಬೆಳೆಯುವ ಪಾರ್ಥೇನಿಯಂ ಪಾಳುಭೂಮಿಯಾಗಿ ಬಿಡುತ್ತದೆ.

ಇದನ್ನು ತಮ್ಮ ಸ್ವಭಾವವನ್ನಾಗಿ ರೂಢಿಸಿಕೊಂಡವರು ಬಹಳ. ಜೊತೆಗೆ ಇದೊಂದು ಧನಾತ್ಮಕ ವ್ಯಕ್ತಿತ್ವದ ಒಂದಂಶವೆಂದೂ ಪ್ರತಿಪಾದಿಸುವರು ಕೂಡ. ಇದೇ ನನಗೆ ಗಾಬರಿಯಾಗಿದ್ದು. ಎದುರಿಗಿರುವವರ ಮುಂದೆ ಹಲ್ಲು ಕಿಸಿದು ಮಾತಾಡಿ, “ನೀವೇ ಇಂದ್ರ ; ಚಂದ್ರ ; ನೀವು ಹೇಳಿದ್ದು, ಮಾಡಿದ್ದು ಖಂಡಿತ ಸರಿ!” ಎಂದು ಉಗ್ಘಡಿಸಿ, ಅವರು ‘ಪಾಸಾದ’ ಮೇಲೆ “ಇವನದೆಲ್ಲ ಬಡಾಯಿ; ಇವನ ಬಂಡವಾಳ ನನಗೆ ಗೊತ್ತಿಲ್ಲವೆ? ಸುಮ್ಮನೆ ಹರ್ಕೊತಾನೆ, ಕೇಳಿಸ್ಕೊಳೋಕೆ ನಾನೇನು ದಡ್ಡಾನಾ……” ಎಂದು ವರಸೆ ಬದಲಿಸುವ ಮಂದಿಯನ್ನು ನಾನು ಅಚ್ಚರಿ ಮತ್ತು ದಿಗಿಲುಗಳಿಂದ ನೋಡುತ್ತೇನೆ! “ಈಗ ಯಾಕೆ ಹೀಗೆ ಹೇಳುತ್ತೀರಿ; ಅವರ ಮುಂದೆಯೇ ಹೇಳಬಹುದಿತ್ತಲ್ಲ?” ಎಂದು ನಾನು ಕೇಳಿದರೆ ಬರುವ ಉತ್ತರ ಇನ್ನಷ್ಟು ಕಂಗೆಡಿಸುವಂಥದು:
“ಹಾಗೆಲ್ಲ ಹೇಳೋಕಾಗುತ್ತಾ ಸರ್, ಹೇಳಿ ಯಾಕೆ ನಿಷ್ಠುರ ಕಟ್ಕೋಬೇಕು; ಅವ್ನು ಮಾಡಿದ್ದನ್ನು ಅವನೇ ಅನುಭವಿಸ್ತಾನೆ; ಇಷ್ಟಕ್ಕೂ ಮನುಷ್ಯ ಸಂಬಂಧ ಮುಖ್ಯ ನೋಡಿ, ನೀವೇ ಹೇಳಿ, ಎಲ್ಲರೊಂದಿಗೆ ನಗುನಗುತ್ತಾ ಇರಬೇಕು, ನಮಗ್ಯಾಕೆ ಬೇಕು!”

ಈ ಸ್ವಭಾವ, ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಪಾಸಿಟಿವ್ ಅಂತೀರೋ? ನೆಗಟಿವ್ ಅಂತೀರೋ? ಅಂತಿಮವಾಗಿ ಅವರು ಮನುಷ್ಯ ಸಂಬಂಧವನ್ನು ಕಾಯ್ದುಕೊಳ್ಳುವವರು ಅಂತ ತೀರ್ಮಾನಿಸಿ ಬಿಡಬಹುದೆ? ಅಥವಾ ಊಸರವಳ್ಳಿಯಂತೆ ಬಣ್ಣ ಬದಲಿಸುವ ಸ್ವಂತಿಕೆ ಇಲ್ಲದ ಮಖೇಡಿಗಳೆಂದು ಜರಿಯೋಣವೇ? ಇಂಥ ಸಂದರ್ಭದಲ್ಲಿ ನನಗೆ ನಮ್ಮ ‘ಸತ್ಯಂ ಭ್ರೂಯಾತ್………’ ಸತ್ಯವನ್ನು ಹೇಳು; ಪ್ರಿಯವಾಗಿ ಹೇಳು; ಅಪ್ರಿಯವಾದ ಸತ್ಯವನ್ನು ಹೇಳದಿರು ಎಂಬ ದರ್ಶನೋಕ್ತಿ ನೆನಪಾಗುತ್ತದೆ.

ಇಲ್ಲೇ ನನ್ನ ತಗಾದೆ ಇರುವುದು: ಎದುರಿನವರನ್ನು ಪ್ರಸನ್ನಗೊಳಿಸಲು ಮತ್ತು ಸ್ನೇಹ ಸಂಬಂಧವನ್ನು ಕಾಯ್ದುಕೊಳ್ಳಲು ಸೈ ಎಂದು, ಆನಂತರ ಕ್ಯಾತೆ ತೆಗೆಯುವ ಸ್ವಭಾವ ಇದೆಯಲ್ಲ, ಅಲ್ಲಿ. ಇದನ್ನು ಸಹ ಆತ್ಮವಂಚನೆ ಎಂದೇ ಕರೆಯಬೇಕಿದೆ. ಇಂಥವರು ಯಾರನ್ನು ವಂಚಿಸುತ್ತಿದ್ದಾರೆ? ಯಾರನ್ನು ಸಂತುಷ್ಟಗೊಳಿಸುತ್ತಿದ್ದಾರೆ? ಇಷ್ಟಕ್ಕೂ ಹೀಗೆ ವರ್ತಿಸಿ ಯಾರಿಂದ ಒಳ್ಳೆಯವರೆನಿಸಿಕೊಳ್ಳಲು ಸಾಧ್ಯ? ಆಡಿಯೊ ಮತ್ತು ವಿಡಿಯೊ ರೆಕಾರ್ಡಿಂಗ್‍ಗಳಂಥ ಆಧುನಿಕ ತಂತ್ರಜ್ಞಾನ ಸೌಲಭ್ಯಗಳಿಂದಾಗಿ ಪ್ರಸ್ತುತ, ‘ನಾನು ಹಾಗೆ ಹೇಳಲೇ ಇಲ್ಲ’ ಎಂತಲೋ, ‘ನಾನು ಆ ಅರ್ಥದಲ್ಲಿ ಹೇಳಲಿಲ’್ಲ ಅಂತಲೋ ಮತ್ತೂ ವಾದಿಸುವ ವ್ಯಕ್ತಿಗಳು ತಮ್ಮಾತ್ಮವನೇ ವಂಚಿಸುವ ವಿದ್ಯೆಯಲಿ ಡಾಕ್ಟರೇಟು ಪಡೆದಿರುವವರು. ನಮಗೆ ನಾವೇ ವಂಚಿಸಿಕೊಳ್ಳುತ್ತಿದ್ದೇವೆಂಬುದೂ ಈ ರೋಗಿಷ್ಠರ ಅರಿವಿಗೆ ಬರುವುದಿಲ್ಲ; ಏಕೆಂದರೆ ಅಂಥವರಲ್ಲಿ ಆತ್ಮವಿರುವುದೇ ಡೌಟು.

ನನಗೆ ನಾನೇ ಮೋಸ ಮಾಡಿಕೊಳ್ಳುವುದು ಅಭ್ಯಾಸವಾಗಿ ಹೋದರೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆಂಬ ಸಾಮಾನ್ಯ ಜ್ಞಾನವೂ ಇಂಥವರಿಗೆ ಇರುವುದಿಲ್ಲ. ಎಲ್ಲರಿಗೂ ಒಳ್ಳೆಯವನಾಗಬೇಕೆಂಬ ಆಸೆಯಿಂದ ಮತ್ತು ಆತುರದಿಂದ ಎಲ್ಲರಿಗೂ ಕೆಟ್ಟವನಾಗಿ ಹೋಗುವ ದುರಂತವಿದು. ಹೀಗಾದರೆ ನಾನು ಕ್ರಮೇಣ ಅಪ್ರಾಮಾಣಿಕನಾಗುತ್ತೇನೆಂಬ ಕಿಂಚಿತ್ತೂ ಅರಿವು ಇವರಲ್ಲಿಲ್ಲದಿರುವುದೇ ಆತಂಕದ ಸಂಗತಿ.

ಅಂದರೆ ನಾನಿಲ್ಲಿ ವಿವರಿಸಲು ಯತ್ನಿಸುತ್ತಿರುವುದು ವ್ಯಕ್ತಿಯ ವರ್ತನೆಯ ವಿರೋಧಾಭಾಸವನ್ನು ಕುರಿತು. ಒಂದು ವಿಚಾರದ ಬಗ್ಗೆ, ಒಬ್ಬ ವ್ಯಕ್ತಿಯ ಬಗ್ಗೆ ನನಗೆ ಗೊತ್ತಿರುವುದಷ್ಟನ್ನು ಸಂದರ್ಭ ಬಂದಾಗ ಸ್ಪಷ್ಟವಾಗಿ ಹೇಳುವುದೂ ಪ್ರಾಮಾಣಿಕತೆಯ ಒಂದಂಶ. ಅದರ ಬಗ್ಗೆ ಮತ್ತು ಅವರ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದು ನನಗೆ ಗೊತ್ತಾದರೂ ನಾನು ಖಂಡಿಸದೇ ತಲೆದೂಗುವ ಜಾಯಮಾನ ನಮ್ಮದಾದರೆ ನಾವು ಆ ಮಟ್ಟಿಗೆ ಅಪ್ರಾಮಾಣಿಕ ಕ್ರೂರಿಗಳು ಎಂದೇ ಅರ್ಥ. ಇಂಥಲ್ಲಿ ಮೌನವಾಗುವುದು ಕೆಲವೊಮ್ಮೆ ಸರಿ ಹೋಗಬಹುದು; ಬಹಳೊಮ್ಮೆ ತಪ್ಪಾಗಿ ಬಿಡುವುದು.

ಯಾವಾಗ ಮೌನವಾಗಿರಬೇಕು; ಯಾವಾಗ ಮಾತಾಡಲೇ ಬೇಕು ಎಂದು ತಿಳಿಯದವರು ಹೇಗೆ ತಾನೇ ತಮ್ಮ ಸಾಮಾಜಿಕತೆಯನ್ನು ಸಂವಹನಿಸುತ್ತಾರೆ? ಭೋಳೇತನ ಎಂದು ಕರೆಯುವುದೇ ಇಂಥದನ್ನು. ಎಲ್ಲವನೂ ನಿರಾಕರಿಸುವುದು ಹೇಗೆ ಸಿನಿಕತನವೋ ಹಾಗೇ ಎಲ್ಲಕೂ ತಲೆದೂಗುವುದು ಮೂರ್ಖತನ. ಅದರಲ್ಲೂ ವೃತ್ತಿ ಜೀವನದಲ್ಲಿ ಆರೋಪ, ಪ್ರತ್ಯಾರೋಪ, ಸ್ಪಷ್ಟೀಕರಣ, ಸಂವಾದ, ಚರ್ಚೆ, ಸಮರ್ಥನೆ, ಸಮಜಾಯಿಷಿ, ತಪ್ಪೊಪ್ಪಿಗೆ, ಸಾಬೀತು, ಮಾತು-ಕತೆ ಎಲ್ಲವೂ ಸಹಜ ಮತ್ತು ಸಾಮಾನ್ಯ. ಇವಿಲ್ಲದೆ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಆಡಳಿತ ಯಂತ್ರಗಳು ಚಾಲನೆಯಾಗುವಾಗ ಇಂಥವನ್ನೆಲ್ಲ ಲೂಬ್ರಿಕೆಂಟ್‍ಗಳಂತೆ ಬಳಸಿಕೊಳ್ಳಬೇಕಾದ ಅನಿವಾರ್ಯ ಇದ್ದೇ ಇರುತ್ತದೆ. ವೃತ್ತಿ ಜೀವನದಲ್ಲಿ, ಕುಟುಂಬದಲ್ಲಿ ಮತ್ತು ಸಾಮಾಜಿಕ-ಸಾಂಸ್ಕøತಿಕ ರಂಗಗಳಲ್ಲಿ ನಮ್ಮ ಮಾತು ಮತ್ತು ವರ್ತನೆಗಳಿಂದಾಗಿ ನಮ್ಮ ವ್ಯಕ್ತಿತ್ವ ನಿರ್ಧಾರವಾಗಿರುತ್ತದೆ. ಒಂದು ಇಮೇಜ್ ಬೆಳೆದು ಬಿಟ್ಟಿರುತ್ತದೆ. ಆ ಇಮೇಜನ್ನು ನಾವೇ ಬೆಳೆಸಿಕೊಂಡಿರುತ್ತೇವೆಯೋ ಸಮಾಜವೇ ಬೆಳೆಸಿ, ಇನ್ನಿದನ್ನು ನೀನು ಪೋಷಿಸಬೇಕೆಂದು ಹಕ್ಕೊತ್ತಾಯ ಮಾಡಿರುತ್ತದೋ ಅದು ಬೇರೆ ವಿಷಯ.

ಇಮೇಜಿಗೆ ಧಕ್ಕೆಯಾಗದಂತೆ ಬದುಕುವ ಕಲೆ ನಿಜವಾಗಿ ಒಂದು ವಿಜ್ಞಾನ. ಅಂದರೆ ಲೆಕ್ಕಾಚಾರ ಮತ್ತು ಪ್ರಮೇಯಗಳು ಇಲ್ಲಿ ತಳುಕು ಹಾಕಿಕೊಂಡಿರುತ್ತವೆ. ನಮ್ಮದಲ್ಲದ ಮಾತು ಮತ್ತು ವರ್ತನೆಗಳನ್ನು ಸಮಾಜವು ಗ್ರಹಿಸುವ ರೀತಿನೀತಿಗಳು ನಾವಂದುಕೊಂಡಂತಿರುವುದಿಲ್ಲ. ಜವಾಬ್ದಾರಿಯರಿತು ಕೆಲಸ ಮಾಡುವವರು ಸುಮ್ಮನಾದರೆಂದರೆ, ಅವರು ಹೊಣೆಗೇಡಿಯಾದರೆಂದೇ ಜನಮಾನಸ ನಿರ್ಧರಿಸಿ ಬಿಡುತ್ತದೆ. ಅದೇ ಹೊಣೆಗೇಡಿಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡವರು ಜವಾಬ್ದಾರಿಯರಿತು ಕೆಲಸ ಮಾಡಿದಾಗ ಅನುಮಾನದಿಂದ ನೋಡುತ್ತದೆ. ಅಂದರೆ ಇಮೇಜೆಂಬುದು ಒಂದು ಭಾವಬಿಂಬ. ಆ ಭಾವಗಳ ಸಂವಹನತೆ ಹಲವು ಸಂಕೀರ್ಣ ವಿಷಯಗಳ ಸರಪಳಿಯಿಂದ ನೇಯ್ದ ಕಬ್ಬಿಣದ ಬೇಡಿ. ನಮಗೆ ನಾವೇ ಹಾಕಿಕೊಂಡಿರಲೂ ಬಹುದು; ಸಮಾಜವೇ ತೊಡಿಸಿರಲೂ ಬಹುದು. ‘ಕಾಲಲ್ಲಿ ಕಟ್ಟಿದ ಗುಂಡು; ಕೊರಳಲ್ಲಿ ಕಟ್ಟಿದ ಬೆಂಡು; ತೇಲಲೀಯದು ಗುಂಡು; ಮುಳಗಲೀಯದು ಬೆಂಡು…..’ ಎಂಬುದಾಗಿ ಬಸವಣ್ಣನವರು ಸಂಸಾರ ಶರಧಿಯನ್ನು ಕುರಿತು ತಮ್ಮೊಂದು ವಚನದಲ್ಲಿ ಹೇಳಿರುವುದು ಇಲ್ಲಿ ಆಯಾಚಿತವಾಗಿ ನೆನಪಾಯಿತು.

ಆತ್ಮವಂಚನೆಗೂ ಇಮೇಜಿಗೂ ಸಂಬಂಧವಿದೆ. ಇಮೇಜಿಗೆ ಧಕ್ಕೆಯಾಯಿತೆಂದಾಗ ಅಂತರಾತ್ಮವು ಎಚ್ಚರಿಸುತ್ತದೆ. ‘ಇದು ನೀನಲ್ಲ; ಇದು ನಿನ್ನ ದನಿಯಲ್ಲ; ಇದು ನಿನ್ನಂಥವರು ಆಡುವ ಮಾತಲ್ಲ; ನೀನು ಮಾಡಬಾರದ್ದನ್ನು ಮಾಡಿರುವೆ’ ಎಂಬ ಎಚ್ಚರಿಕೆಯ ಗಂಟೆ ನನಗಷ್ಟೇ ಕೇಳಿಸುವಂತೆ ಬಾರಿಸ ತೊಡಗುತ್ತದೆ. ಹಾಗಾಗಿ, ನಮ್ಮ ಪ್ರಾಚೀನ ಪರಂಪರೆಯು ಆತ್ಮದ್ರೋಹವನ್ನು ಮಹಾಪಾಪವೆಂದು ಪರಿಗಣಿಸಿ, ಅದರಿಂದ ಹೊರಬರಲು ಹಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಸೃಷ್ಟಿಸಿ, ಸಂವೇದನೆ ಮತ್ತು ಭಾವನೆಗಳಿಗೆ ಬೆಲೆ ಕೊಟ್ಟು ಬದುಕುವವರಿಗೊಂದು ಊರುಗೋಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಪಾಪ ನಿವೇದನೆಯನ್ನೂ ಪಾಪ ಪರಿಹಾರ ಮಾರ್ಗಗಳನ್ನೂ ಗಮನಿಸಿದಾಗ ಇವೆಲ್ಲ ನಮಗೆ ಅರ್ಥವಾಗುತ್ತದೆ. ಇದು ಶುದ್ಧ ಸೈಕಾಲಜಿಯಲ್ಲದೇ ಬೇರಲ್ಲ!

ಅಂತಿಮವಾಗಿಯೂ ನನಗೆ ನಾನು ಕೊಟ್ಟುಕೊಳ್ಳುವ ಸಮರ್ಥನೆ ಅಥವಾ ಸಮಜಾಯಿಷಿಯು ಆತ್ಮವಂಚನೆಯಿಂದ ಕೂಡಿರಬಾರದು ಅಷ್ಟೇ. ನನಗೆ ನಾನು ಮೋಸ ಮಾಡಿಕೊಳ್ಳುವುದು ಇದೆಯಲ್ಲ ಅದು ಪಾಪದ ವ್ಯಾಪ್ತಿಗೆ ಬರುವಂಥದು; ಧರ್ಮಶಾಸ್ತ್ರಗಳು ಪಟ್ಟಿ ಮಾಡಿಟ್ಟಿರುವುದಲ್ಲ!

‘ನಾನು ಹಾಗೆ ಹೇಳಬಾರದಿತ್ತು; ಹಾಗೆ ಮಾಡಬಾರದಿತ್ತು; ಹಾಗೆ ವರ್ತಿಸಬಾರದಿತ್ತು’ ಎಂಬ ‘ಜ್ಞಾನೋದಯ’ ಎಲ್ಲರಿಗೂ ಆಗುವಂಥದೇ. ಆಗೆಲ್ಲ ನಾವು ಬಂಡತನ ಬೆಳೆಸಿಕೊಂಡು, ನನ್ನ ಮಾತು ಮತ್ತು ವರ್ತನೆಗಳಿಗೆ ಪೂರಕವಾಗುವ ದೃಷ್ಟಿಕೋನದಲ್ಲಿ ಸಮರ್ಥಿಸಿಕೊಂಡು, ‘ನನ್ನದೇನೂ ತಪ್ಪಿಲ್ಲ; ತಪ್ಪೆಲ್ಲ ಅವರದೇ’ ಎಂಬ ಜಾಣತನವನ್ನು ಪ್ರದರ್ಶಿಸುವ ವಿದ್ಯೆಯನ್ನು ನಾವು ‘ಸುಶಿಕ್ಷಿತ ನಾಗರಿಕರು’ ಡೀಸೆಂಟಾಗಿ, ವ್ಯಕ್ತಿತ್ವದ ಕೌಶಲ್ಯವೆಂದು ಕರೆದುಕೊಂಡಿದ್ದೇವೆ.

ಸಾಕ್ಷ್ಯಾಧಾರಗಳ ಸಬಲ ಅಥವಾ ದುರ್ಬಲಗಳ ಸಹಾಯದಿಂದ ಕೋರ್ಟಿನಲ್ಲೇ ಕೇಸು ಗೆದ್ದು ನಿರಪರಾಧಿಯೆಂದು ತೀರ್ಮಾನವಾಗಿ ಗೆಲುವಿನ ನಗೆ ಬೀರಿರಬಹುದು; ಆದರೆ ನಮ್ಮಂತರಾತ್ಮಕ್ಕೆ ಗೊತ್ತು; ನಾನೇನು ಅಂತ. ನಾನು ಒಬ್ಬನೇ ಇದ್ದಾಗ ಕಾಡುತ್ತದೆ: ‘ನೀನು ಮಾಡಿದ್ದು ಸರಿಯೇ? ನಿನ್ನ ತಪ್ಪಿಗೆ ಅಥವಾ ಪಾಪಕ್ಕೆ ಶಿಕ್ಷೆಯಾಗಬೇಕಿತ್ತಲ್ಲವೆ?’ ಈ ರೀತಿ ನನ್ನನ್ನು ಕಾಡುವುದೇ ಇಲ್ಲ ಎನ್ನುವವರದು ಹಸಿ ಸುಳ್ಳು. ಹೀಗೆನ್ನುವುದೇ ಆತ್ಮವಂಚನೆ.

ಇದರಿಂದ ತಪ್ಪಿಸಿಕೊಳ್ಳಲು ಸದಾ ಬಯಸುವ ಮನಸ್ಸು ಒಂದಲ್ಲ ಒಂದು ನೆಪಗಳನ್ನು ಹುಟ್ಟು ಹಾಕಿಕೊಂಡು ಒಂದಷ್ಟು ಜನರನ್ನು ಗುಡ್ಡೆ ಹಾಕಿಕೊಂಡು ತನ್ನನ್ನು ಅರ್ಥ ಮಾಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿರುತ್ತದೆ. ಏಕಾಂತವನ್ನು ದ್ವೇಷಿಸುತ್ತದೆ; ಸಕಲ ಲೋಕ ವ್ಯವಹಾರಗಳಲ್ಲಿ ಮುಳುಗಿ ಸದಾ ಜನಜಂಗುಳಿಯಲ್ಲಿ ಕರಗಿ ತನ್ನತನವನೂ ಸೂಕ್ಷ್ಮತೆಯನೂ ಕಳೆದುಕೊಂಡು ಬಂಡುಕೋರವಾಗುತ್ತದೆ. ಅದರದೇ ಆದ ವಲಯವೊಂದನ್ನು ನಿರ್ಮಿಸಿಕೊಂಡು ‘ಹೌದಪ್ಪ’ಗಳ ಕಟ್ಟಿಕೊಂಡು ನಿರ್ಲಜ್ಜದಿಂದ ಬದುಕುತ್ತದೆ. ಹೀಗೆ ಗಳಿಸಿಕೊಂಡದ್ದು ಹುಸಿವ್ಯಕ್ತಿತ್ವ; ಮರಳಿನ ಮನೆ, ಭ್ರಮಾಜಗತ್ತು. ಸಾಯುವ ಕೊನೆಗಳಿಗೆಯಲ್ಲೂ ಇಂಥವರಿಗೆ ಪಾಪ ನಿವೇದನೆಯಾಗದೇ ಅಸಹಜತೆಯಲ್ಲೇ ಮರಣಿಸಬಹುದು ಅಥವಾ ಆ ಕ್ಷಣದಲ್ಲಿ ಬಡಬಡಿಸಿ, ತಪ್ಪೊಪ್ಪಿಗೆಯನ್ನು ಮುಂದಿಡಬಹುದು!

ಹಲವು ಸಂದರ್ಭಗಳಲ್ಲಿ ನಾವೆಲ್ಲಾ ‘ಅಕ್ಷರಸ್ಥ ಅವಿದ್ಯಾವಂತ’ರಾಗಿ ವರ್ತಿಸಿರುತ್ತೇವೆ. ನನ್ನ ಬದುಕು, ನನ್ನ ಸಮಯ, ನನ್ನ ಸ್ವಾರ್ಥಗಳೇ ಮುಂದಾಗಿ ಮಾನವತೆಯನ್ನೂ ಸುಶಿಕ್ಷಿತ ನಾಗರಿಕತೆಯನ್ನೂ ಮರೆತು ಜೀವಿಸಿರುತ್ತೇವೆ. ಅವುಗಳೆಲ್ಲ ನನ್ನನ್ನು ಕಾಡಬೇಕು; ಕಣ್ಣಿಗೆ ನಿದ್ರೆ ಹತ್ತುವಾಗ ಕೊರಗಬೇಕು; ತುತ್ತು ಅನ್ನ ತಿನ್ನುವಾಗ ಕಂಗಾಲಾಗಬೇಕು. ನನ್ನ ಬದುಕು ಮಾಗಬೇಕು; ಘನತೆ ಮತ್ತು ಮಮತೆಗಳನ್ನು ಸಮತೆಯಲ್ಲಿಟ್ಟು ಪ್ರಪಂಚವನ್ನು ನೋಡಬೇಕು.

‘ಗುಡ್ ಹ್ಯೂಮನ್’ ಆಗದ ಯಾವ ಸಾಧನೆಯೂ ಸಾಧಕನೂ ಏನೇ ಅಪರೂಪವಾದುದನ್ನು ಸಾಧಿಸಿದ್ದರೂ ಅದು ಬರೀ ಧೂಳು. ಏನು ಮಾಡದಿದ್ದರೂ ಕಲಿತ ವಿದ್ಯೆಯಿಂದ ಸರಿಯಾದ ದಾರಿಯನ್ನು ಕಂಡುಕೊಂಡು, ಘನತೆ ಮತ್ತು ಪ್ರಬುದ್ಧತೆಗಳಿಂದ ಇರುವಷ್ಟು ಕಾಲ ಮಾನವಂತ ಮಾನವೀಯ ವ್ಯಕ್ತಿಯಾಗಿ ಬಾಳ್ವೆ ನಡೆಸುವುದಿದೆಯಲ್ಲ, ಅದು ಎಲ್ಲಕಿಂತ ಶ್ರೇಷ್ಠ. ‘ಏನಾದರೂ ಆಗು; ಮೊದಲು ಮಾನವನಾಗು’ ಎಂದಿದೆ ಕವಿನುಡಿ. ಈ ಮಾನವತ್ವವೇ ಸಹೃದಯತೆ. ಇದುವೇ ದೇವರಿಗೂ ಪ್ರೀತಿಪಾತ್ರ. ಕುವೆಂಪು ನೆನಪಾಗುತ್ತಾರೆ: ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು; ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ನಿನ್ನೆದೆಯ ದನಿಯೆ ಋಷಿ; ಮನು ನಿನಗೆ ನೀನು.’ ಅಂಥ ಶ್ರೀ ಕೃಷ್ಣ ಪರಮಾತ್ಮನು ತನ್ನ ಮನೆಗೆ ಬಂದರೂ ಭಕ್ತ ಸುಧಾಮನು ತನಗಾಗಿ ಸ್ವಂತಕ್ಕೆ ಏನನ್ನೂ ಬೇಡಲಿಲ್ಲ; ತನ್ನ ಗುಡಿಸಲಲ್ಲಿಯೇ ಇದ್ದ ಹಿಡಿ ಅವಲಕ್ಕಿಯನ್ನು ನೀಡಿ ಸತ್ಕರಿಸುತ್ತಾನೆ. ಇದಲ್ಲವೇ: ಮಮತೆ ಮತ್ತು ಘನತೆಗೆ ನಿದರ್ಶನ!

ಹಾಗಾಗಿ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ಮೆಚ್ಚ; ಆಗುವುದಿಲ್ಲ ಬಾಳ್ವೆ ಸ್ವಚ್ಛ.

-ಡಾ. ಹೆಚ್ಚೆನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Tulasi
Tulasi
3 years ago

ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್.

ಹೆಚ್ ಎನ್ ಮಂಜುರಾಜ್
ಹೆಚ್ ಎನ್ ಮಂಜುರಾಜ್
3 years ago

ಧನ್ಯವಾದಗಳು ಮೇಡಂ

2
0
Would love your thoughts, please comment.x
()
x