ಒಲವೇ,
ಎಷ್ಷೊಂದು ಇಷ್ಟ ಪಡುವೆ ಹೀಗೆ ಕರೆದರೇ. ಬಹಳ ದಿನಗಳಾದವಲ್ಲವೇ ನಿನಗೊಂದು ಪತ್ರ ಬರೆಯದೇ. ಒಲವಿನ ಅನುಭೂತಿಗಳನ್ನು ಅಕ್ಷರಗಳಲ್ಲಿ ಮೂಡಿಸುವುದೇ ಸೊಗಸು. ಇಂದೇಕೋ ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನಪು ಸತಾಯಿಸುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಾಡುವ ನೆನಪುಗಳಿಗೇನು ಗೊತ್ತು ನಿನ್ನ ನನ್ನ ನಡುವೆ ಹಗಲು ರಾತ್ರಿಯ ಅಂತರವಿದೆ ಎಂದು. ಕನಸುಗಳಿಗೇಕೋ ವಾಸ್ತವದ ಜೊತೆ ಕ್ರೂರ ಶತ್ರುತ್ವ. ಅರೆಬರೆ ನಿದ್ದೆಯ ಮಗ್ಗುಲಲ್ಲಿ ನಿನ್ನದೇ ನೆನಪುಗಳ ಸದ್ದಿಲ್ಲದ ರಾಜ್ಯಭಾರ. ಪ್ರೀತಿಯೆಂದರೆ. ಇದೇ ಏನೋ. ನಿತ್ಯ ಬೇಸರವಿಲ್ಲದ ಕಾಯುವಿಕೆ. ಪ್ರತಿದಿನ ಕಣ್ಣು ತೆರೆಯುತ್ತಲೇ ಯಾರು ನೆನಪಾಗುತ್ತಾರೋ ಅದುವೇ ಪ್ರೀತಿಯಂತೆ. ಆದರೆ ನನಗಾದರೋ ನೀನು ಮುಚ್ಚಿದ ರೆಪ್ಪೆಯಡಿಯ ಜೊಂಪಿನಲ್ಲೂ ಜೊತೆಗಿರುವೆ. ನೆನಪಿಸಿಕೊಳ್ಳುವ ಧಾವಂತವಾದರೂ ಏನಿದೆ. ಯಾರ ಧ್ವನಿ ಕೇಳಲು ದಿನವಿಡೀ ಕಾಯುತ್ತೇವೋ ಅದುವೇ ಪ್ರೀತಿಯಂತೆ, ನನಗೆ ನನ್ನುಸಿರಿನ ಪಿಸು ದನಿಯೂ ನಿನ್ನದೇ ದನಿಯಂತೆಯೇ ಕೇಳಿಸುತ್ತದೆ.
ನಿನ್ನ ಜೊತೆಗಿನ ಹುಸಿ ಮುನಿಸುಗಳೇ ನಮ್ಮ ಪ್ರೇಮ ಜೀವಂತವಾಗಿರಲು ಕೈ ತುತ್ತುಗಳಲ್ಲವೇ. ನಿನ್ನ ಇರುವಿಕೆಯೇ ನನ್ನ ಮೊಗದಲ್ಲಿ ಮಂದಹಾಸ ಅರಳಿಸುವ ಅದಮ್ಯ ಚೇತನ. ಯಾರಿಗೆ ಗೊತ್ತಿತ್ತು ಇಷ್ಟೊಂದು ನೀನು ನನ್ನನ್ನು ಆವರಿಸಿಕೊಳ್ಳುವೆಯೆಂದು. ಅರೆ ನಿದ್ದೆಯ ಕನಸೂ ಕದ್ದು ಬಿಡುವೆ ಎಂದು. ಎದುರುನಲ್ಲಿ ಇಲ್ಲದೇ ಹೋದರೂ ನೀನು ಅವ್ಯಕ್ತ ಭಾವದಂತೆ ಸದಾ ನನ್ನೊಂದಿಗೇ ಇರುವೆ. ಅಷ್ಟೊಂದು ಸಾಮೀಪ್ಯ. ಬೈಗು ಬೆಳಗು ನಿಶೆಯಲ್ಲೂ ನಿನ್ನದೇ ಕವನಗಳ ತೋರಣ. ನಿತ್ಯ ನೋಡುವ ಕನ್ನಡಿಯೂ ನಿನ್ನನ್ನೇ ತೋರಿಸಲು ಆರಂಭಿಸಿದೆ. ನಾನು ಕಳೆದೇ ಹೋಗಿರುವೆ ನಿನ್ನಲ್ಲಿ. ನೀ ಜತೆಯಿದ್ದಾಗ ಅದೆಷ್ಟು ಚಂದವಿತ್ತು ದಿನಗಳು. ಬೆರಳೆಣಿಕೆಯ ದಿನಗಳಾದರೂ ಅದೆಷ್ಟು ಆನಂದಿಸಿದ್ದೆವೋ. ಒಂದೊಂದು ಕ್ಷಣವೂ ಅಮೂಲ್ಯ ನಿಧಿ ಎಂಬಂತೆ ಅಪ್ಪುಗೆಯಲ್ಲಿ ಮಿಂದೆದ್ದಿದ್ದೆವು. ನೀನು ಜೊತೆಯಲ್ಲಿ ಇರುವಾಗ ಸಮಯಕ್ಕೂ ಸರಿಯಲು ಅವಸರ. ಹೊರಟರೆ ಮತ್ತೆ ಬರುವವರೆಗೂ ಕ್ಷಣಗಳೂ ಯುಗಗಳಾಗುವವು. ಅಗಲುವಿಕೆಯೇ ಶಾಪ ಎಂದೆನಿಸುತ್ತದೆ ನನಗೆ. ನಿನ್ನ ಬಿಟ್ಟಿರಲಾಗದ ಚಡಪಡಿಕೆ ಕಣ್ಣಲ್ಲಿ ದುಃಖದ ಸಾಗರವನ್ನೇ ಹರಿಸುತ್ತದೆ. ಮನದ ತುಂಬಾ ನೋವಿನ ಅಲೆಗಳು. ನೆನಪುಗಳ ಅಂಚು ಬಹಳ ಹರಿತ ಒಲವೇ. ಅದು ನೀಡುವ ನೋವಿಗೆ ಯಾವ ಹೋಲಿಕೆ. ನಿನ್ನ ನೆನಪಿನ ಜ್ವಾಲೆಯಲ್ಲಿ ಇನಿತಿನಿತೇ ದಹಿಸುತ್ತಿರುವೆ.
ನೀನೆಂದರೆ ನನಗೆ ಏನು ಎಂಬುದನ್ನು ಪದಗಳೊಳಗೆ ತಿಳಿಸುವುದಾದರೂ ಹೇಗೆ. ? ನೀನೆಂದರೆ ಊಹೆಗೂ ನಿಲುಕದ ಮಧುರ ಭಾವ. ವ್ಯಾಖ್ಯೆಗೆ ನಿಲುಕದ ಕವಿಯ ಸೋಲು ನನಗೆ. ನನ್ನ ಪಾಲಿಗೆ ನೀನೊಂದು ಪರಿಶುದ್ಧ ದೀಪ. ಸೋಲುಗಳ ಕತ್ತಲಲಿ ಬೆಳಕು ಬೀರಿದ ಅನುಭೂತಿ. ಸಾಗರದಂತೆ ರಾಶಿ ಬಿದ್ದಿವೆ ನೆನಪುಗಳೆಲ್ಲ. ಯಾವುದನ್ನು ಆರಿಸಲಿ ಯಾವುದನ್ನು ಬಿಡಲಿ ಎನ್ನುವ ಗೊಂದಲ. ಎಲ್ಲವೂ ಅತೀ ಅಮೂಲ್ಯ. ಅಗಾಧ ಮುತ್ತಿನ ರಾಶಿಯಲ್ಲಿ ನನಗೆ ದೊರಕಿದ ಅಮೂಲ್ಯ ಮುತ್ತು ನೀನು. ಜಗತ್ತಿನಲ್ಲಿ ಕೇವಲ ನೀನಷ್ಟೇ ‘ನನಗಾಗಿ’ ಪರಿತಪಿಸಿದ್ದು. ಅದಕ್ಕಾಗಿಯೇ ಅಲ್ಲವೇ ನಿನ್ನ ಮೇಲೆ ಇಷ್ಟೊಂದು ಅಗಾಧ ಪ್ರೇಮ. ಆರಾಧನೆ. ನಿನ್ನ ಬಿಸಿಯುಸಿರ ನೆನಪೇ ಸಾಕು ಮತ್ತಿನ ಅಲೆಯಲ್ಲಿ ಕೊಚ್ಚಿ ಹೋಗಲು. ಅಂತಹುದೇ ನೆನಪುಗಳ ಜೋಕಾಲಿಯಲ್ಲಿ ನಿನ್ನನ್ನು ಕೂರಿಸಿ ತೂಗುವ ಆಸೆ.
ಪ್ರೇಮವೆಂದರೆ ತಾನೇ ಉರಿದು ಬೆಳಕು ನೀಡುವ ದೀಪದಂತೆ ಅಲ್ಲವೇ. ಭಾವಸಾಗರದ ಹುಚ್ಚು ಅಲೆಗಳಂತೆ ನೀನು. ಅಪರೂಪದ ಭಾವನಾಜೀವಿಯಲ್ಲವೇ ನೀನು. ಕ್ಷಣ ಕ್ಷಣಕ್ಕೂ ಬದಲಾಗುವ ನಿನ್ನ ಹುಚ್ಚು ತೆರೆಗಳಂತಹ ಭಾವನೆಗಳನ್ನು ಸಂಭಾಳಿಸಲು ತಾಳ್ಮೆಯನ್ನೇ ಹುಟ್ಟು ಮಾಡಬೇಕಾಗಿದೆ ಈಗ. ಪ್ರೇಮದಲ್ಲಿ ಅರುಹಿದ ಮಾತಗಳಿಗಿಂತ ಬಾಕಿಯಾದ ಮಾತುಗಳ ತೂಕವೇ ಹೆಚ್ಚು. ಅಲ್ಲವೇ. ಕವಿತೆಯೂ ನಿನ್ನದೇ ಬಳುವಳಿ ಗೆಳೆಯಾ. ಪ್ರೇಮದ ಅಜ್ಞಾನಿ ನಾನು. ಕನಿಷ್ಠ ಒಲವಿನ ಪದಗಳನ್ನು ಆರಿಸಲೂ ಬಾರದವಳಿಗೆ, ಪ್ರೇಮದ ಮಾಲೆಯನ್ನೇ ಪೋಣಿಸಲು ಕಲಿಸಿದವನಲ್ಲವೇ ನೀನು. ನನ್ನ ಭಾವನೆಗಳ ಹೂಗಳನ್ನು, ನಿನ್ನ ನಲ್ಮೆಯ ದಾರದಲ್ಲಿ ನಾಜೂಕಾಗಿ ಪೋಣಿಸಿದ ಅಧ್ಬುತ ಹಾರವೇ ನಮ್ಮ ಪ್ರೇಮ .
ನನ್ನನ್ನು ನಾನು ಹುಡುಕುತ್ತಲೇ ಇದ್ದೇನೆ
ನಿನ್ನಲ್ಲೇ ಕಳೆದು ಹೋಗಿರುವುದನ್ನು
ಮತ್ತೆ ಮತ್ತೆ ಮರೆಯುತ್ತಲೇ ಇದ್ದೇನೆ.
ಮೇರಿ ರಾಹೇ ತೇರಿ ತಕ್ ಹೇ.
ತುಜ್ ಪೆ ಹೀ ತೋ ಮೇರಾ ಹಕ್ ಹೇ.
ಇಶ್ಕ್ ಮೇರಾ ತೂ ಬೇಶಕ್ ಹೇ.
ತುಜ್ ಪೆ ಹೀ ತೋ ಮೇರಾ ಹಕ್ ಹೇ.
ಕೇವಲ ನಿನ್ನವಳು
-ಶ್ರೀಲಕ್ಷ್ಮೀ ಅದ್ಯಪಾಡಿ