ನಮ್ಮ ಭೇಟ್ಟಿ ಎಷ್ಟು ಅನಿರೀಕ್ಷಿತವಾಗಿ ಆಯಿತು. ಆದರೆ ಪ್ರೀತಿ ತುಂಬಾ ವಿಚಿತ್ರ. ನಿನಗೆ ನೆನಪಿದೆಯಾ ನನ್ನ ಸುಂದರ ಫೋಟೋ ಅದೆಲ್ಲಿ ನೋಡಿದೆಯೋ… ನೀ. ನಿನ್ನಿಂದ ನನ್ನ ಮೇಲಗೆ ಮೆಸ್ಸೇಜ ಬಂತು. ಪ್ಲೀಜ ಮೊಬೈಲ ನಂಬರ ಕಳಿಸಿ ನಿಮಗೆ ಅರ್ಜೆಂಟ ಮಾತಾಡೋದು ಇದೆ ಅಂತ. ನೀನ್ಯಾರೋ ತಿಳಿಯದ ನಾನು ನಿರ್ಲಕ್ಷ್ಯ ಮಾಡಿದೆ. ಮತ್ತೆ ಮತ್ತೆ ನೀ ರಿಪೀಟ ಮಾಡಿದೆ. ಕೂತೂಹಲದಿಂದ ಅಂದು ನನ್ನ ನಂಬರ ಕಳಿಸಿದೆ. ನೀ ಸಣ್ಣಗೆ ನನ್ನೊಳಗೆ ನುಗ್ಗಿದೆ. ಮನಸಲಿ ನೆಲೆ ನಿಂತೆ. ಜೊತೆಯಿಲ್ಲದ ಒಂಟಿ ಪಯಣಕೆ ನೀ ಜಂಟಿಯಾದೆ. ಬದುಕು ಅದೆಷ್ಟು ಸುಂದರ ಅಂತ ಅನಿಸಿದ್ದು ಸತ್ಯ. ನೀನಿಲ್ಲದೆ ನಾನ್ಹೇಗೆ ಇದ್ದೆ ಅಂತ ಈಗ ಯೋಚಿಸುವಂತಾಗಿದೆ. ಹೃದಯದಲಿ ಸದಾ ನಿನ್ನದೆ ಕಲರವ. ನೀನಿಲ್ಲದ ಬಾಳು ಊಹಿಸಲು ಅಸಾಧ್ಯ ಕಣೋ. ಅದೇನು ಜಾದು ಜಾಲವೋ ತಿಳಿದಿಲ್ಲ ನೀನೇ ಸರ್ವಸ್ವ ಆಗಿದಿಯಾ. ನಿನಗೇನು ಸಿಹಿ ಇಷ್ಟ ಅಂದರೆ ನಾ ನಿನ್ನ ಹೆಸರನೇ ಹೇಳುವಂತಾಗಿದೆ ಮಾರಾಯಾ.
ನಿನ್ನ ಈ ಸೌಂದರ್ಯಕೆ ನೀ ಅದೇನು ತಿಂತಿಯಾ ಅಂತ ನೀ ಕೇಳಿದಾಗಿನಿಂದ ನೆನೆಸಿಕೊಂಡು ನಗುವೆ ಕಣೋ. ನಾವಿಬ್ಬರೂ ಪರಸ್ಪರರಿಗಾಗಿಯೇ ಹುಟ್ಟಿದ್ದೆವೆ. ಇದಕೆ ಆ ದೇವನು ರುಜು ಹಾಕುತ್ತಾನೆ ಅಂತ ನಂಬಿಕೆ ಇದೆ. ಬಂಗಾರದ ಬದುಕು ನಮ್ಮದು, ಯಾರ ಕಾಕ ದೃಷ್ಟಿ ತಾಗದಿರಲಿ ಅಂತ ಅನುದಿನ, ಅನುಕ್ಷಣ. ಪ್ರಾರ್ಥಿಸುವೆ. ನಿನ್ನೊಲವ ರಾಗದಲಿ ಅರಳಿದ ಪುಷ್ಪ ನಾನು ಗೆಳೆಯಾ. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ. ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ. ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಚಟ ಇದೆ. ಡ್ಯೂಟಿಯಲಿ ನಿರತನಾದರೆ ನನ್ನ ಮರೆತು ತನ್ಮಯನಾಗಿ ಬಿಡತಿ. ಅನೇಕ ಸಲ ಫೋನಾಯಿಸಿದರೂ ರಿಸಿವ್ ಮಾಡಲ್ಲ. ನಾನು ಸಿಟ್ಟಿನಿಂದ ಮುಖ ಉಬ್ಬಿಸಿ ಕೂತರೆ ಸಂಜೆ ನೇರ ಬಂದವನೇ ಕೊರಳಿಗೆ ಬೆರಳಹಾರ ಹಾಕಿ ಕೆನ್ನೆ ಚುಂಬಿಸಿ ನಿನ್ನ ಬೆವರು ಘಮಲಿನಲ್ಲಿ ಮೀಯಿಸಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತವಾಗಿದೆ.
ಹೀಗಾಗಿ ನನ್ನ ಸಿಟ್ಟು ಗಾಳಿಗಿಟ್ಪ ದೀಪದಂತೆ ಆಗುತ್ತದೆ. ಹೆ ರಾಣಿ ಪ್ಲೀಜ್ ಕ್ಷಮಿಸು ಅಂತ ನನ್ನ ಮುದ್ದು ಮಾಡುವಾಗ ನನಗೆ ಸಿಟ್ಟಿನಲ್ಲಿಯೇ ಒಲವು ಹೆಚ್ಚು ಲವಲವಿಕೆ ನೀಡುತ್ತದೆ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕದ ಚೆಲುವೆ ಎಂದು ರಾಗವಾಗಿ ಹಾಡುವ ನಿನ್ನ ದನಿಗೆ ಸೋತು ಶರಣಾಗಿ ಬಿಡುವೆ. ನನಗೆ ಕೊಂಚ ಆರಾಮ ತಪ್ಪಿದರೂ ನಿನ್ನ ಜೀವ ಬಾಡಿ ಬಸವಳಿಯುತ್ತೆ. ಅತಿಯಾದ ಕಾಳಜಿ ಮಾಡಿ ನನ್ನ ಆರಾಮ ಮಾಡುವೆ. ಕಣ್ಣ ರೆಪ್ಪೆಯಂತೆ ಕಾಯುವ ನಿನ್ನ ಹೃದಯ ಅನುರಾಗಕೆ ಬಣ್ಣಿಸಲು ಪದಗಳೇ ಇಲ್ಲ ಗೆಳೆಯ. ಟೆಲಿಫೋನ್ ಗೆಳತಿ ನೀನಿಲ್ಲದೆ ಇರಲಾರೆ ಎಂದು ಛೇಡಿಸಿ ಕಾಡುವ ನೀ ಹಿಂಗ ಅಚಾನಕ್ ದೂರಾಗಿ ಹೋಗತಿ ಅಂದುಕೊಂಡಿರಲಿಲ್ಲ ಗೆಳೆಯಾ…
ಯಾಕೆ ದೂರಾದೆ ಏನಾಯ್ತು ನಿನ್ನ ಒಲವು. ಬೊಗಸೆ ಕಂಗಳ ನಿನ್ನ ಗೆಳತಿಯನ್ನು ಮರೆಯಲು ನಾ ಮಾಡಿದ ತಪ್ಪಾದರೂ ಏನು? ನೀನಿಲ್ಲದೆ ಅರೆ ಜೀವವಾಗಿರುವೆ. ಚಂದ್ರನ ತಂಪು ಬಿಸಿಲಾಗಿದೆ. ಸುಳಿಯುವ ಗಾಳಿಯಲೂ ನಿನ್ನನೇ ಹುಡುಕುವಂತಾಗಿದೆ. ನೀನಿಲ್ಲದೆ ಈ ಜನ್ಮದಲ್ಲಿ ನನಗೆ ಬದುಕುವ ಆಸೆಯಿಲ್ಲ. ನಿನ್ನ ಸಾನ್ನಿಧ್ಯ, ಆಲಿಂಗನ, ಬಿಸಿಯುಸಿರು ಆ ಮಿಂಚು ಕಂಗಳಲ್ಲಿ ವ್ಯಕ್ತವಾಗುವ ಮಾತು ಗಳಿಗೆ ಮೀರಿದ ಭಾವನೆಗಳನ್ನು ಹೆಂಗೆ ಮರೆಯಲಿ ದೇವರಂಥ ಗೆಳೆಯಾ… ವರ್ಷ ದ ಮೂರೂ ಕಾಲಗಳಲ್ಲಿಯೂ ಧೋ….. ಎಂದು ಒಲವಿನ ಮಳೆ ಸುರಿಸುತ್ತಿದ್ದರೆ ಈ ನಿನ್ನ ಗೆಳತಿ ಪುನೀತಳಾಗಿ ಅರಳುತ್ತಿದ್ದಳು. ಮತ್ತೆ ಬಂದಿದೆ ಗುಲಾಬಿಯಲ್ಪಿ ರಂಗಾಗುವ ಸುದಿನ ಮರೇಯದೆ ಬಾ. ಅಂದಿನ ದಿನ ಸಂಭ್ರಮಿಸಲು ತಾಜಮಹಲಿನಲಿ ಮುತ್ತಿನ ಘಮ ಸವಿಯಲು….. ಇದು ಮೂರನೆಯ ವರುಷ ನಮ್ಮ ಪ್ರೀತಿ ಹುಟ್ಟಿ. ಸಂಗಮಮರ ಹಾಲಿನ ಜೇನ ಮಹಲಿನ ಎದುರಲಿ ಚುಂಬನ ವಿನಿಮಯ.. ಎತ್ತ ನೋಡಿದರೂ ನೀನೇ ಕಾಣುವ ಕಂಗಳ ಬಿಂಬವೇ ಬಾ ಬೇಗ….
ಪ್ರೀತಿಯ ಅಮೃತಧಾರೆ ಉಣಿಸಿ ದೂರ ಹೋದೆ. ನೀ ಬರುವ ದಾರಿಯಲಿ ಕಂಗಳ ಹಾಸಿ ಕಾಯುತಿರುವ…..
ನಿನ್ನ ಕಪ್ಪು ಕಂಗಳ ಚೆಲುವೆ…
–ಜಯಶ್ರೀ ಭಂಡಾರಿ.