ನೀ.. ಈ ಬಿಕ್ಕುಗಳ ಹಕ್ಕುದಾರ: ನಳಿನಿ. ಟಿ. ಭೀಮಪ್ಪ

ಪ್ರೀತಿಸುವ ದಿನ ಹತ್ತಿರ ಬರುತ್ತಿದೆ ಅಂತಾದರೂ ಗೊತ್ತಾ ನಿನಗೆ?…ನನ್ನ ಕರ್ಮ, ಅದನ್ನೂ ನಾನೇ ನೆನಪು ಮಾಡಬೇಕು. ಅನುಕ್ಷಣ, ಅನುದಿನ ನನ್ನನ್ನೇ ಆರಾಧಿಸುತ್ತ, ಪ್ರೀತಿಸುವ ನಿನಗೆ ವರ್ಷಕ್ಕೊಮ್ಮೆ ಆಚರಿಸುವ ಈ ಪ್ರೀತಿಯ ದಿನದ ಬಗ್ಗೆ ನಂಬಿಕೆ ಇಲ್ಲವೆಂದು ಗೊತ್ತು. ಆದರೆ ನನಗೆ ಆ ದಿನ ತುಂಬಾ ಅಮೂಲ್ಯವಾದುದು ಗೊತ್ತಾ? ಪ್ರೀತಿ ಎನ್ನುವ ಪದವೊಂದು ಜೀವನದಲ್ಲಿ ನಿನ್ನ ಮೂಲಕ ಅಂಕುರಿಸಿದ ಘಳಿಗೆಯೊಂದು ಚಿರಸ್ಮರಣೀಯವಾಗಿ, ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಅಭಿಲಾಷೆ ನನ್ನದು.

ಅಂದು ನೀ ಕೊಡುವ ಕೆಂಪು ಗುಲಾಬಿಯ ಕಾಣಿಕೆಯನ್ನು, ಕೆಂಪೇರಿದ ಮೊಗದೊಡನೆ ನಾ ನಸು ನಾಚಿ ಸ್ವೀಕರಿಸಿದಾಗ, ಧನ್ಯತೆಯ ಮಂದಹಾಸ ಮೂಡುವ ನಿನ್ನ ಮುಖಾರವಿಂದವನ್ನು ಸಮಯದ ಪರಿವೆಯಿಲ್ಲದೆ ನೋಡುತ್ತಲೇ ಇರುವಾಸೆ ಕಣೋ. ಜೀವನದ ಒಂದು ಘಟ್ಟದಲ್ಲಿ ತಿರುಗಿ ನೋಡುವಾಗ ಹೀಗೆಲ್ಲಾ, ಇಷ್ಟೆಲ್ಲಾ ಪ್ರೀತಿಸಿದ್ದೆವಾ ನಾವು ಎಂದು ಅಚ್ಚರಿಪಡಬೇಕು. ಆಡದ ಮಾತುಗಳು ಹಾಡಾಗಿ ಎದೆಯೊಳಗಿಳಿಯಬೇಕು. ಅಂತಹ ಅವಿಸ್ಮರಣೀಯವಾದ ಜೀವಂತ ಘಳಿಗೆಗಳ ಶ್ರೀಮಂತ ಕ್ಷಣಗಳನ್ನು, ಇಬ್ಬರೂ ನೆನಪಿನ ಬುತ್ತಿಯಲ್ಲಿ ಕೂಡಿಟ್ಟುಕೊಂಡು, ಜೀವನ ಪಯಣದಲಿ ಆಗಾಗ ಗಂಟುಬಿಚ್ಚಿ ಸವಿಯುವ ಸುಸಂದರ್ಭಗಳು ನಮದಾಗಲಿ ಎನ್ನುವ ಹಾರೈಕೆ ಅಷ್ಟೇ.

ನಿಜ ಹೇಳಬೇಕೆಂದರೆ ಪ್ರೀತಿ ಎಂದರೇನು ಎಂದು ನಿನ್ನನ್ನು ಪ್ರೀತಿಸುವವರೆಗೂ ಗೊತ್ತಾಗಿರಲೇ ಇಲ್ಲ. ಪ್ರತಿದಿನ ನಿನ್ನ ಜೊತೆ ಕೋಳಿ ಜಗಳವಾಡುಬೇಕೆನ್ನುವ ಮನಸು, ನಿನ್ನ ಆಗಮನವನ್ನು ಕಾಯುವಾಗಿನ ಚಡಪಡಿಕೆ, ಭೇಟಿಯಾಗುತ್ತಲೇ ಢವಢವಿಸುವ ಹೃದಯ, ಮೊಗದಲ್ಲಿ ತಂತಾನೇ ಮೂಡಿಬಿಡುವ ಹುಸಿಮುನಿಸು, ನೀ ರಮಿಸಿದಾಗ ಅರಳುವ ಕನಸು, ಎಲ್ಲವೂ ಒಂದು ರೀತಿ ಸೊಗಸು. ನನ್ನೆಲ್ಲಾ ಅಂತರಂಗದ ಭಾವನೆಗಳನ್ನು ನಿನ್ನಲ್ಲಿ ಹೇಳಿಕೊಂಡಾಗಲೇ ಹಗುರಾಗುವ ಆ ಸಮಯ, ನೀ ಕೊಡುವ ಸ್ವಾಂತನಕ್ಕೆ, ಬರಗಾಲದಲ್ಲಿ ಭೂರಮೆ ನೀರಿಗಾಗಿ ಬಾಯ್ಬಿಟ್ಟು, ಆಗಸದತ್ತ ಮುಖ ಮಾಡಿ ಮಳೆಗಾಗಿ ಕಾಯುವಂತಾಗುವ ನನ್ನ ಸ್ಥಿತಿ, ನನಗದು ಅನುಮಾನ, ಇದೇನಾ ಪ್ರೀತಿ?…ಗೊತ್ತಿಲ್ಲ.

ಬೇರೆಲ್ಲದಕ್ಕೂ ಕಿವುಡಾಗಿಹ ಈ ಹೃದಯದ ಬಾಗಿಲು ತೆರೆಯುವುದು ನಿನ್ನ ಒಲವಿನ ಕರೆಗಂಟೆಯ ಸದ್ದಿಗೆ ಮಾತ್ರ. ಆ ಬಾಗಿಲನ್ನು ಗುದ್ದಿಕೊಂಡು, ಒದ್ದುಕೊಂಡು ಬರುವ ಹಕ್ಕು ಇರುವುದು ಸಹ ನಿನ್ನೊಬ್ಬನಿಗೇ ಕಣೋ. ಬಾಗಿಲ ಹಿಡಿಕೆಯ ಮೃದುವಾಗಿ ಹಿಡಿದು, ಮೆಲುವಾಗಿ ನೂಕಿ, ಸದ್ದಿಲ್ಲದೆ ಒಳಗಡಿಯಿಟ್ಟು, ಗೊತ್ತಾಗದಂತೆ ನೀ ನಿಂತಾಗ, ಗಕ್ಕನೆ ಚಿಟ್ಟೆಯೊಂದನ್ನು ಹಿಡಿದಾಗ, ಅದು ಗಾಬರಿಯಿಂದ ತನ್ನ ರೆಕ್ಕೆಗಳನ್ನು ಪಟಪಟನೆ ಬಡಿಯುವಂತೆ, ಹೃದಯದ ಮಿಡಿತ ಕೂಡ ಅಳತೆಗೆ ಮೀರಿ ಹೊಡೆಯಲಾರಂಭಿಸುತ್ತದೆ. ರೆಕ್ಕೆಯ ಬಣ್ಣ ಹತ್ತಿದ ಕೈಯ್ಯನ್ನು ಕಂಗಳರಳಿಸಿ ನೋಡುವಂತೆ, ಓಕುಳಿಯಿಂದ ಮಿಂದೆದ್ದ ನನ್ನ ಮುಖಾರವಿಂದವನ್ನು ನೀ ಕಣ್ತುಂಬಿಕೊಳ್ಳುವಾಗ, ಮೈಮನದಲ್ಲೊಂದು ಸಣ್ಣ ನಡುಕ.

ಗಕ್…ಗಕ್… ಅಂತಾ ಬಿಕ್ಕುಗಳ ಒಂದರ ಹಿಂದೊಂದು ಶುರುವಾಗುತ್ತಿದ್ದ ಹಾಗೆ ಗೊತ್ತಾಗಿಬಿಡುತ್ತದೆ ಕಣೋ, ನೀನು ನನ್ನನ್ನು ನೆನಪು ಮಾಡಿಕೊಳ್ತಿದ್ದೀಯಾ ಎಂದು. ಒಂದೊಂದು ಬಿಕ್ಕಿಗೂ, ಅದೆಷ್ಟು ಗುಕ್ಕು ನೀರು??? ಎಷ್ಟೇ ಸುರಿದರೂ ತಣಿಯದ ದಾಹವದು, ತಲೆ ಎತ್ತಿ, ನೆತ್ತಿ ತಟ್ಟಲು ಕಣ್ಗಳಿಂದ ಭೋರ್ಗರೆಯುತ ಧುಮ್ಮಿಕ್ಕುವ ಒಲವಿನ ಜಲಪಾತದಂತೆ ನಿಲ್ಲುವ ಸೂಚನೆಯನ್ನೇ ಕೊಡುವುದಿಲ್ಲ ನೋಡು. ಮನಸ್ಸಿನಲ್ಲಿ ಅಷ್ಟೊಂದು ನನ್ನನ್ನು ತುಂಬಿಕೊಂಡರೆ ಮತ್ತಿನ್ನೇನಾಗಬೇಡ?, ಮನಸಿನ ಭಾವಗಳನ್ನು ಹೇಳಲಾಗದೆ ಗಂಟಲಿನಲ್ಲೇ ತೊಳಲಾಡುವ ನಿನ್ನ ಮಾತುಗಳನ್ನು ಸದ್ದಿಲ್ಲದೆ ನನ್ನೆದೆಗೆ ದಾಟಿಸುವುದೇ ಈ ಬಿಕ್ಕುಗಳ ಮೂಲಕ ಎಂದು ಗೊತ್ತು ನನಗೆ. ಈ ಬಿಕ್ಕುಗಳ ಹಕ್ಕುದಾರ ನನ್ನವನೆಂಬ ಸೊಕ್ಕು ಮೂಡಿ ಮನದೊಳಗೆ, ತುಟಿಗಳು ಬಿರಿಯುತಲಿವೆ ತುಂಟತನದಿ ನಕ್ಕು.

ಮತ್ತೇನು ಹೇಳಲಿ?…ಪ್ರೀತಿಯ ದಿನದಂದು ಕಾಯುವ ಈ ಮನಕ್ಕೆ ನೀಡು ನಿನ್ನಾಗಮನದ ಸಿಂಚನ, ರಂಗೇರಲಿ ನಮ್ಮ ಕನಸುಗಳ ತೋರಣ, ಒಲವ ಹುಟ್ಟು ಹಾಕುತ ಸಾಗಲಿ ಪಯಣ, ಆ ಪ್ರೀತಿಯ ನಾವೆಗೆ ರಾಯಭಾರಿಗಳು ನಾವಾಗೋಣ ಎಂದು ಹಾರೈಸೋಣ…

-ನಳಿನಿ. ಟಿ. ಭೀಮಪ್ಪ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ARIHANT BIRADARPATIL
ARIHANT BIRADARPATIL
3 years ago

super lines.

1
0
Would love your thoughts, please comment.x
()
x