ನಲ್ಮೆಯ ಗೆಳತಿಯೇ,
ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು.
ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???
ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ ಕಣ್ಮನ ಸೆಳೆದದ್ದು ನೀವೊಬ್ಬರೇ… ನಿಮ್ಮ ಸೌಂದರ್ಯ ಒಂದೇ…
ಲಂಗ-ದಾವಣಿಯಲ್ಲಿ ನೀವು ಮನೆ ತುಂಬಾ ಎಲ್ಲರೊಂದಿಗೂ ಮಾತಾಡಿಕೊಂಡು ಓಡಾಡುತ್ತಿದ್ದ ರೀತಿಯೇ ಒಂದು ಸೋಜಿಗ. ಅದೇನು ಅಂದ, ಅದೆಂಥಾ ಲಕ್ಷಣ, ಅದೆಷ್ಟು ಲಾವಣ್ಯ, ಅದೆಲ್ಲಿಹ ಚೆಲುವು, ಅದಾವ ಸರಳತೆ, ಅದೇನು ನಯ-ವಿನಯ. ಒಂದೊಂದು ವಿಷಯವೂ, ಒಂದೊಂದು ಕ್ಷಣವೂ ನಾ ಮರೆಯಲಾರೆ.
ಇಷ್ಟು ವರ್ಷಗಳೇ ಕಳೆದಿದ್ದರೂ ಕೂಡ, ಈಗಲೂ ನಿಮ್ಮ ಅದೇ ಸೌಂದರ್ಯ ನನ್ನ ಕಣ್ಣಲ್ಲಿದೆ, ಕ್ಷಣ ಕ್ಷಣವೂ ಕಾಡುತಿದೆ.
ನಿಮ್ಮಮಿಂಚುವ ಕಣ್ಣುಗಳು, ಆ ಕಣ್ಣಿನ ಕಡುಗಪ್ಪು ಹುಬ್ಬುಗಳು, ಸಂಪಿಗೆಯನ್ನೇ ಕೊಲ್ಲುವ ಆ ನಿಮ್ಮ ನಾಸಿಕ, ರೇಶಿಮೆಯೇ ತಲೆಬಾಗುವಂತಹ ನಿಮ್ಮ ಕೇಶರಾಶಿ, ಕೆಂಗುಲಾಬಿಯ ವರ್ಣವನ್ನೇ ಮೂಕವಿಸ್ಮಿತವಾಗಿಸುವ ನಿಮ್ಮ ತುಟಿಗಳು, ಮಗುವಿಗೇ ಹೊಟ್ಟೆಉರಿಸುವಂತಹ ನಿಮ್ಮ ನಗು, ಕುರುಡನೂ ಕೂಡ ನಿಬ್ಬೆರಗಾಗುವಂತಹ ನಿಮ್ಮ ಸೌಂದರ್ಯಸಿರಿ, ಭರತನಾಟ್ಯವನ್ನೇ ಪ್ರದರ್ಶಿಸುವ ಆ ನಿಮ್ಮ ಹಂಸ ನಡಿಗೆ, ಸೊಂಪಾದ ಆ ನಿಮ್ಮ ಪಾದಗಳು. . . ಎಲ್ಲವನ್ನೂ ನೋಡಿ ಮೂಕನಾಗಿದ್ದೆ ನಾನು.
ವ್ಹಾ!!! ಏನು ಹೇಳಿದರೂ, ಎಷ್ಟು ವರ್ಣಿಸಿದರೂ ಕಡಿಮೆಯೇ.
ನಿಮ್ಮ ಸೌಂದರ್ಯವನ್ನು ನಾನು ಅನುಭವಿಸಿ ವರ್ಣಿಸುವಷ್ಟು ಈ ಜಗತ್ತಿನ ಯಾವ ಕವಿಯೂ ವರ್ಣಿಸಲಾರ.
ಏಕೆಂದರೆ – ಮೊದಲನೆಯದಾಗಿ, ನಿಮ್ಮ ಸೌಂದರ್ಯ ವರ್ಣಿಸಲಸದಳ.
ಎರಡನೆಯದಾಗಿ, ಹಾಗೊಮ್ಮೆ ವರ್ಣಿಸಲೆತ್ನಿಸಿದರೂ ಕೂಡ ಆ ಕವಿಗೆ ನನ್ನ ಪ್ರೀತಿಯ ಆಳವೇ ತಿಳಿದಿರವುದಿಲ್ಲ. ನಿಜ ಹೇಳುತ್ತೇನೆ, ನನ್ನ ಜೀವನದಲ್ಲಿ ನಾನು ನೋಡಿರುವ ಅತ್ಯಂತ ಸುಂದರ ಕಣ್ಣುಗಳು ಎಂದರೆ ಅವು ನಿಮ್ಮ ಕಣ್ಣುಗಳು, ನಿಮ್ಮ ಕಣ್ಣುಗಳು ಮಾತ್ರವೇ.
“ಇಡೀ ಜಗಕೇ ಬೆಳಕು ನೀಡುತ್ತಿದ್ದವು ನಿನ್ನ ಮುದ್ದು ಕಣ್ಣುಗಳು.
ಅವನ್ನು ಕಂಡು ದಂಗಾದವು ಉರಿಯಿತ್ತಿದ್ದ ಜೋಡಿ ದೀಪಗಳು.”
ಈ ಮೇಲಿನ ವಾಕ್ಯವನ್ನು ನಾನು ನಿಮಗೆ ಎಂದೋ ಹೇಳಿದ್ದೇೆೆನೆ, ಅದು ನಿಮಗೂ ಗೊತ್ತು ಎಂದು ನಂಬಿರುತ್ತೇನೆ.
ಅಂದು, ಪೂಜೆ ಮುಗಿದ ಬಳಿಕ ಎಲ್ಲರೂ ಊಟಕ್ಕೆ ಕುಳಿತರು. ಆ ಪಂಕ್ತಿಯಲ್ಲಿ ನಾನೂ ಕುಳಿತಿದ್ದೆ. ಹೆಂಗಸರೆಲ್ಲರೂ ಪಲ್ಯ, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ ಇತ್ಯಾದಿಗಳನ್ನು ಬಡಿಸುತ್ತಿದ್ದರು. ಏತನ್ಮಧ್ಯೆ, ನೀವು ಪಾಯಸ ತಂದು ಬಡಿಸಲು, ನಾನು ಬೇಡವೆಂದೆ. ಆದರೆ, ನೀವು ಆ ನಿಮ್ಮ ಹೊಳೆಯುವ ಕಣ್ಗಳಿಂದ ಮಾತನಾಡಿ, “ಇಲ್ಲ ಸ್ವಲ್ಪ ಹಾಕ್ತಿನಿ, ಚೆನಾಗಿದೆ ತಿನ್ನಿ” ಎಂದು ಒಂದು ಬಾರಿಯಲ್ಲ ಎರಡು ಬಾರಿ ಬಡಿಸಿದಿರಿ. ಇನ್ನೂ ನೆನಪಿದೆ! ಅಂದಾಜು ಎರಡು ಸೆಕೆಂಡುಗಳ ಕಾಲು ನೀವು ನನ್ನನ್ನು ನೋಡುತ್ತಲೇ ಬಡಿಸಿದಿರಿ. ನಾನಂತು ನಿಮ್ಮ ಕಣ್ಣುಗಳನ್ನಷ್ಟೇ ದಿಟ್ಟಿಸುತ್ತಿದ್ದೆ. ಪಾಯಸದ ಬಗ್ಗೆ ಯೋಚನೆಯೂ ಇರಲಿಲ್ಲ.
ಆ ದೃಶ್ಯ ಈಗಲೂ ಆಗಾಗ್ಗೆ ನನ್ನ ಕಣ್ಣುಗಳಲ್ಲಿ ಓಡಾಡುತ್ತಲೇ ಇರುತ್ತದೆ.
ನಾನಾಗ ಕೇವಲ ನಿಮ್ಮ ಬಗ್ಗೆಯೇ ಯೋಚಿಸುತ್ತಿದ್ದೆ. ನೀವು ನನಗೆ ಪಾಯಸ ಬಡಿಸಿದಿರೋ ಪ್ರೀತಿಯನ್ನೇ ಬಡಿಸಿದಿರೊ ಎಂಬ ಗೊಂದಲ ಶುರವಾಗಿದ್ದಾಗಲೀ ಅಥವಾ ಪ್ರಶ್ನೆ ಮೂಡಿದ್ದಾಗಲೀ ಆ ಕ್ಷಣದಿಂದಲೇ. ಅದಕ್ಕೇ ನಾನು ಮೊದಲೆ ಕೇಳಿದ್ದು, ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ? ಎಂದು.
ಅಂದೇ, ಆ ಕ್ಷಣವೇ, ನನಗೂ ಹೇಳದೇ ಕೇಳದೇ ನೀವು ನನ್ನೆದೆಯ ಗೂಡು ಸೇರಿದಿರಿ. ಆ ಕ್ಷಣದಿಂದಲೂ ಈ ಕ್ಷಣದವರೆಗೂ ನಾನು ನಿಮ್ಮನ್ನೇ ಪ್ರೀತಿಸುತ್ತಿದ್ದೇನೆ, ಎಣಿಸುತ್ತಿದ್ದೇನೆ, ಆರಾಧಿಸುತ್ತಿದ್ದೇನೆ…
ನಿಮಗೆ ಗೊತ್ತೂ-ಗೊತ್ತಿರದ ವಿಷಯವನ್ನು ಹೇಳುತ್ತೇನೆ, ಕೇಳಿ.
ನಾನು ಕುಡಿಯುವುದಿಲ್ಲ. ಬದಲಿಗೆ – ಹಾಡು, ಕವಿತೆ, ಕತೆ ಇತ್ಯಾದಿ ಬರೆಯುತ್ತೇನೆ.
ಬೀಡಿ-ಸಿಗರೇಟ್ ಅಂತೂ ಸೇದುವುದೇ ಇಲ್ಲ. ಬದಲಿಗೆ – ಪೇಯಿಂಟ್ ಮಾಡುತ್ತೇನೆ. ಯಾವ ಹುಡುಗಿಯ ಜತೆಗೂ ಸೇರಿಲ್ಲ. ಬದಲಿಗೆ – ಫೋಟೋಗ್ರಫಿ ತುಂಬಾ ಇಷ್ಟ, ಆದರೆ ನಿಮ್ಮಷ್ಟಿಲ್ಲ. ನಿಮ್ಮನ್ನು ಮೆಚ್ಚಿಸುವ ಸಲುವಾಗಲೀ ಅಥವಾ ನಂಬಿಸುವ ಸಲುವಾಗಲೀ ಈ ಮಾತುಗಳನ್ನು ಹೇಳುತ್ತಿಲ್ಲ. ನಿಜ ವಿಷಯಗಳನ್ನು ಹೇಳಿದೆನಷ್ಟೆ.
ನಾನು ನಡೆವ ಪ್ರತೀ ಹೆಜ್ಜೆಯಲ್ಲೂ, ಕಾಣುವ ಪ್ರತೀ ಕನಸಿನಲ್ಲೂ, ಬಿಡಿಸುವ ಪ್ರತೀ ಚಿತ್ರದಲ್ಲೂ, ಬರೆವ ಪ್ರತೀ ಹಾಡಿನಲ್ಲೂ ಸಹ ನಿಮ್ಮದೇ ಜಪವಿರುತ್ತದೆ, ನಿಮ್ಮದೇ ನೆನಪಿರುತ್ತದೆ. ತುಂಬಾ ಇಷ್ಟವಾದ ವ್ಯಕ್ತಿ ಕೇವಲ ನೆನಪಾಗಿ ಉಳಿಯಲು ಸಾಧ್ಯವೇ ಇಲ್ಲ. ಬದಲಾಗಿ, ಇನ್ನೂ ಹೆಚ್ಚು ಇಷ್ಟವಾಗುತ್ತಲೇ ಹೋಗುತ್ತಾರೆ ಎನ್ನುವುದು ನನ್ನ ನಂಬುಗೆ. ಒಂದಂತೂ ನಿಜ – ಈ ಜಗತ್ತಿನಲ್ಲಿ ನಿಮ್ಮನ್ನು ಅತೀ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಗಳ ಪಟ್ಟಿಯಲ್ಲಿ ನಾನೆಂದಿಗೂ ಮೂರನೆಯ ಸ್ಥಾನದಲ್ಲೇ ಇರುತ್ತೇನೆ. ನಿಮ್ಮ ತಂದೆ-ತಾಯಿಯ ಪ್ರೀತಿಗೆ ನನ್ನ ಪ್ರೀತಿ ಸಾಟಿಯಾಗಲಾಗದಿದ್ದರೂ ಕೂಡ, ಕೇವಲ ಒಂದಿಂಚು, ಅದರ ಒಂದಿಂಚು ಕಡಿಮೆಯಷ್ಟು ಪ್ರೀತಿಯನ್ನಂತೂ ಕೊಟ್ಟೇ ಕೊಡತ್ತೇನೆ. ನೀವು ಎಂದರೆ ನನಗೆ ಅಷ್ಟು ಇಷ್ಟ, ಅಷ್ಟು ಪ್ರೀತಿ, ಅಷ್ಟು ಹುಚ್ಚು.
ಕೊನೆಯದಾಗಿ, ನಿಮ್ಮ ಸ್ಥಾನದಲ್ಲಿ ಯಾವುದೇ ಮತ್ತೊಂದು ಹೆಣ್ಣನ್ನು ನಾನು ಊಹಿಸಲಾರೆ ಅಥವಾ ಕೂರಿಸಲಾರೆ. ಏಕೆಂದರೆ, ಆ ಹೆಣ್ಣಿಗೆ ಅಂತಹ ಅದೃಷ್ಟವಾಗಲೀ ಅಥವಾ ಪುಣ್ಯವಾಗಲೀ ಇಲ್ಲ ಎಂದಲ್ಲ. ಬದಲಿಗೆ, ಯಾವುದೇ ಹೆಣ್ಣಿಗೂ ನಿಮ್ಮನ್ನು ಸರಿದೂಗುವ ಸಾಧ್ಯತೆಯಾಗಲೀ ಅಥವಾ ಅರ್ಹತೆಯಾಗಲೀ ಇಲ್ಲವೇ ಇಲ್ಲ ಎನ್ನುವ ಬಲವಾದ ನಂಬಿಕೆ ನನ್ನದು. ಇಷ್ಟಾದರೂ, ಇನ್ನೂ ಕೂಡ ನಿಮ್ಮ ಒಲವಿಗಾಗಿಯೇ ಮಿಡಿಯುತ್ತಾ, ತುಡಿಯುತ್ತಾ ಹಾಗೂ ಕಾಯುತ್ತಿರುತ್ತೇನೆ.
ಹನಿಯುತಿದೆ ಕಣ್ಣು ಒಳಗಡೆ
ಸಿಗದಿರಲು ನಿಮ್ಮ ನಿಲುಗಡೆ
ಜೀವವಿರದ ಜೀವ ನಾನು – ನೀವು ಇರದೇ…
ಒಂದಂತೂ ನಿಜ…
ಯಾವ ಕ್ಷಣ, ನಿಮ್ಮ ಹೃದಯದ ಬಿಡಿ ಮೌನ ನನ್ನ ಕಣ್ಣಂಚಲ್ಲಿ ಹನಿಯುತ್ತದೋ,
ಅದಾವ ಕ್ಷಣ, ನನ್ನ ಅಂತರಂಗದ ಆಪ್ತಸ್ವರ ನಿಮ್ಮ ಕೊರಳಲ್ಲಿ ದನಿಯಾಗುತ್ತದೋ, ಅದೇ ನಿಜವಾದ ಪ್ರೀತಿ ಎಂದು ನಂಬಿರುತ್ತೇನೆ.
ಇಲ್ಲಿಯವರೆಗೂ, ಯಾರನ್ನೂ ಯಾವುದಕ್ಕೂ ಬೇಡದ ನಾನು, #ನಿಮ್ಮ ಪ್ರೀತಿಯ ಭಿಕ್ಷೆ ನೀಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಒಂದಂತೂ ಸತ್ಯ – ಖಂಡಿತವಾಗಿಯೂ ನಾನಿರುವವರೆಗೂ ನಿಮ್ಮನ್ನು ಎಂದಿಗೂ ಕ್ಷಣಮಾತ್ರಕ್ಕೂ ನೋಯಿಸುವುದಿಲ್ಲ, ಯಾವುದೇ ಕಾರಣಕ್ಕೂ ಬೇಸರಗೊಳಿಸುವುದಿಲ್ಲ, ಯಾವ ಸಂದರ್ಭದಲ್ಲೂ ನಾನು ನಿಮ್ಮ ಕೈ ಬಿಡುವುದಿಲ್ಲ,
ನಿಮ್ಮನ್ನು ಬಲು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ, ನನ್ನೆಲ್ಲಾ ಖುಷಿಯಲ್ಲೂ ನಿಮಗೆ ಪಾಲು ನೀಡುತ್ತೇನೆ, ನಿಮ್ಮ ನೆರಳಂತೆ ಎಂದೂ ಜತೆಗಿರುತ್ತೇನೆ, ನಿಮಗಾಗಿ ಕೊನೆಯವರೆಗೂ ನನ್ನ ಉಸಿರನ್ನು ಮುಡಿಪಿಟ್ಟಿರುತ್ತೇನೆ.
ಇನ್ನೂ ಒಮ್ಮೆ ಹೇಳುತ್ತೇನೆ, ಈ ಮಾತುಗಳನ್ನು ನಿಮ್ಮನ್ನು ಒಲಿಸಿಕೊಳ್ಳುವ ಸಲುವಾಗಲೀ ಅಥವಾ ನಿಮ್ಮನ್ನು ನಂಬಿಸುವ ಸಲುವಾಗಲೀ ಹೇಳಿದ್ದಲ್ಲ. ನಾನು ಇವೆಲ್ಲವುಗಳನ್ನು ಖಂಡಿತ ನೆರವೇರಿಸುತ್ತೇನೆ. ನನಗೆ ಗೊತ್ತು, ನಿಮಗೆ ಬೇರೆ ಕನಸುಗಳಿವೆ, ಬೇರೆ ಆಸೆಗಳಿವೆ ಎಂದು. ನಿಜ ಹೇಳುತ್ತೇನೆ, ಅದಾವುದೇ ಆಸೆ, ಕನಸುಗಳಿದ್ದರೂ ಖಂಡಿತ ನಾನು ಅವೆಲ್ಲವನ್ನೂ ಈಡೇರಿಸುತ್ತೇನೆ. ನಿಮ್ಮನ್ನು ಕೊನೆಯವರೆಗೂ ಅತ್ಯಂತ ಪ್ರೀತಿಯಿಂದ ನೋಡುತ್ತೇನೆ, ಪ್ರೀತಿಯೇ ನೀವು ಎಂದು ನಂಬಿರುತ್ತೇನೆ.
ನಿಮ್ಮ ಹೃದಯವೆಂಬ ಗರ್ಭದಲಿ
ನನ್ನ ಪ್ರೀತಿಯ ಕೂಸಿದೆ.
ಕೂಸಿಗೆ ಜನ್ಮವೋ
ಅಥವಾ ಗರ್ಭಪಾತವೋ
ಎರಡೂ ನಿಮ್ಮ ಕೈಯ್ಯಲ್ಲಿದೆ.
ಕೊನೆಯ ಸಾಲುಗಳು…
ಪ್ರ – ತೀಕ್ಷಣವೂ ನಾನು ನಿಮ್ಮನ್ನು
ತೀ – ವ್ರವಾಗಿ ಪ್ರೀತಿಸುತ್ತಾ, ನಿಮ್ಮ ಪ್ರೀತಿಗಾಗಿ ಕಾಯುತ್ತಿರುತ್ತೇನೆ,,, ನಾ ಸಾಯುವವರೆಗೂ
ಕ್ಷ – ಮಿಸಿ ಬಿಡಿ.
ಈ ಭೂಮಿ ಮೇಲೆ ಸುಳ್ಳು ಪ್ರೀತಿ ಇದ್ದಿರಬಹುದು. ಆದರೆ, ನನ್ನ ಪ್ರೀತಿ ಎಂದಿಗೂ ಸುಳ್ಳಲ್ಲ.
ಇತಿ,
ನಿಮ್ಮ ಪ್ರೀತಿಯ
ಮಾಲಿ-ಕ