ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ?
ಪಾಪ್ ಗೊತ್ತು ರಾಕ್ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು ಹೊಕ್ಕಬೇಕು. ಅದರ ಮಧ್ಯೆ ಎಲ್ಲಾದರೂ ಹರಿಯುವ ನೀರಿನ ಝರಿ ಇದ್ದರೆ ಹತ್ತಿರ ಕಣ್ಣುಮುಚ್ಚಿ ಸುಮ್ಮನೆ ಕುಳಿತುಬಿಡಿ. ಯಾವ ಅವಸರ, ಚಡಪಡಿಕೆಯೂ ಇಲ್ಲದೆ ತಣ್ಣನೆ ಬಳುಕುತ್ತಾ ಸಾಗುವ ನೀರಿನ ಜುಳು ಜುಳು ಶಬ್ಧ, ಕಚಗುಳಿಯಿಡುವಂತೆ ಅಲೆ ಅಲೆಯಾಗಿ ಬೀಸುವ ತಂಪಾದ ಗಾಳಿ, ಧುಮ್ಮಿಕ್ಕುವ ಜಲಪಾತದ ಸಮುದ್ರದಂತಹ ಭೋರ್ಗರೆತ, ಮಧುರವಾಗಿ ವೀಣೆಯ ತಂತಿಯನ್ನು ಮೀಟಿದಂತೆ ಕೇಳುವ ಪಕ್ಷಿಗಳ ಚಿಲಿಪಿಲಿ, ಮುಂಜಾನೆ ರಾಗವಾಗಿ ಉಲಿಯುವ ಹಾಡುಗಾರ ಹಕ್ಕಿಯ ಹಾಡು, ಎಲ್ಲೋ ದೂರದ ಸಣ್ಣ ಶಬ್ದಕ್ಕೂ ಧ್ಯಾನ ಭಂಗವಾದಂತೆ ಬೆಚ್ಚಿಬೀಳುವ ಪ್ರಾಣಿಗಳ ಗುಟುರು, ನೀರವ ರಾತ್ರಿಗಳಲ್ಲಿ ಹತ್ತಾರು ಗರಗಸಗಳಿಂದ ಒಟ್ಟಿಗೆ ಮರವನ್ನು ಕೊಯ್ದಂತೆ ಭಾಸವಾಗುವ ಜೀರುಂಡೆಗಳ ಶಬ್ದ, ಒಣಗಿದ ಎಲೆಯೊಂದು ಬೀಳುವಾಗ ಕೇಳಿಯೂ ಕೇಳದಂತೆ ಅನ್ನಿಸುವ ಸಣ್ಣ ಶಬ್ದ ಹೀಗೆ ಒಂದೊಂದು ಕೂಡಾ ಲಯಬದ್ಧ ರಾಗ ತಾಳಗಳಿಂದ ಕೂಡಿದ ಸುಶ್ರಾವ್ಯ ಸಂಗೀತ. ಉದ್ವೇಗ ರಕ್ತದ ಒತ್ತಡವನ್ನು ಸಹಜ ಸ್ಥಿತಿಗೆ ತರುವ ಉಚಿತ ಪ್ರಕೃತಿ ಚಿಕಿತ್ಸೆ. ಪ್ರಕೃತಿಯ ಯಾವ ಶಬ್ಧವೂ ಕರ್ಕಶವೆಂಬುದಿಲ್ಲ. ಎದೆ ಬಡಿತವನ್ನೇ ನಿಲ್ಲಿಸುವಂತೆ ಕೇಳುವ ಸಿಡಿಲಿನ ಶಬ್ಧ ಕೂಡ ಬೆಚ್ಚಿ ಬೀಳಿಸಬಹುದೇ ಹೊರತು ಕರ್ಕಶವೆನಿಸುವುದಿಲ್ಲ. ಪ್ರಕೃತಿಯ ಹಾಡು ಅರ್ಥವಾಗಬೇಕಿದ್ದರೆ ನೀವು ಪ್ರಕೃತಿಯನ್ನು ಅದಮ್ಯವಾಗಿ ಪ್ರೀತಿಸುವವರಾಗಬೇಕು. ಬರೇ ನೋಡುಗರಾಗದೆ- ಕೇಳುಗರಾಗದೆ ಅದನ್ನು ಅನುಭವಿಸುವವರಾಗಬೇಕು. ಕಾಡಿನ ಅಂಚಿನ ಹಳ್ಳಿಯ ಓದುಗರಿದ್ದರೆ ಅವರಿಗೆ ತಿಳಿದಿರಬಹುದು ಪ್ರಕೃತಿಯ ಮೇಲೆ ಗೌರವ- ಪ್ರೀತಿ ಇದ್ದರೆ ದಟ್ಟ ಕಾಡಿನಲ್ಲಿ ಒಬ್ಬರೇ ಇದ್ದರೂ ತಾಯಿಯ ಮಡಿಲಲ್ಲಿ ಇದ್ದ ಮಗುವಿನ ಹಾಗೆ ಎಂದೂ ಏಕಾಂಗಿಯೆನಿಸದು.
ಮೊನ್ನೆ ಯಾವುದೋ ಜಲಪಾತದ ಅಡಿಯಲ್ಲಿ ಮೈಯೆಲ್ಲಾ ಕಿವಿಯಾಗಿ ನೀರಿನ ಶಬ್ಧವನ್ನು ಆಲಿಸುತ್ತಾ ಕುಳಿತಿದ್ದೆ. ಕಾಲಡಿಯ ಕಲ್ಲುಗಳ ಮಧ್ಯೆ ಕಪ್ಪೆಗಳೆರಡು ವಟರ್ ವಟರ್ ಎಂದು ವೈಯ್ಯಾರದಿಂದ ಹಾಡತೊಡಗಿತು. ಕಪ್ಪೆ ಎಂದರೆ ಅಸಹ್ಯದಿಂದ ಮೂಗು ಮುರಿಯುವವರೇ ಹೆಚ್ಚು. ಆದರೆ ಈ ಉಭಯವಾಸಿ ಕಪ್ಪೆಗಳಿದ್ದಾವಲ್ಲಾ ಅವುಗಳ ವಟರ್ ವಟರ್ ಕೂಗು ಒಂದು ಪ್ರದೇಶದಲ್ಲಿ ಮಾಯವಾಯಿತೆಂದರೆ ಅಲ್ಲಿ ವಾಟರ್ ಗೆ ಬರಗಾಲ ಬಂತು ಎಂದೇ ಅರ್ಥ.
ಜೈವಿಕ ಸರಪಳಿಯಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯ ಪಾಪದ ನಿರುಪದ್ರವಿ, ಯಾವುದೇ ರಕ್ಷಣಾತ್ಮಕ ತಂತ್ರಗಳಿಲ್ಲದೆ ಸುಲಭವಾಗಿ ವೈರಿಗೆ ಬಲಿ ಬೀಳುವ ಜೀವಿ ಎಂದರೆ ಕಪ್ಪೆ. ಪರಿಸರದ ಜೈವಿಕ ಸರಪಳಿಯ ಸಮತೋಲನ ಕಾಪಾಡುವಲ್ಲಿ ಕಪ್ಪೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕೃಷಿಕರಿಗೆ ಉಪಟಳ ಕೊಡುವ ಕೀಟಗಳಿಂದ ಹಿಡಿದು ನೀರಿನಲ್ಲಿ ವಂಶಾಭಿವೃದ್ಧಿ ಮಾಡುವ ಸೊಳ್ಳೆಯ ಲಾರ್ವಾಗಳವರೆಗೆ ಸಣ್ಣ ಸಣ್ಣ ಜೀವಿಗಳು ಅದರ ಮುಖ್ಯ ಆಹಾರ. ಕಪ್ಪೆಗಳ ನಾಶದಿಂದ ಸೊಳ್ಳೆಗಳ ಜೈವಿಕ ನಿಯಂತ್ರಣ ಸಮತೋಲನ ತಪ್ಪಿ ಮಲೇರಿಯಾ ಡೆಂಗ್ಯುವಿನಂತಹ ಖಾಯಿಲೆ ನಿಯಂತ್ರಣ ಮೀರಿ ಹೋಗಿವೆ. ನಾವು ಚಿಕ್ಕವರಿರುವಾಗ ಊರು ತುಂಬಾ ಹಸಿರುಗದ್ದೆ ಹಳ್ಳ ತೋಡುಗಳು ಅಲ್ಲಲ್ಲಿ ಕಾಣಲು ಸಿಗುತಿತ್ತು. ಅದರಲ್ಲಿ ಹೇರಳವಾಗಿ ದೊರೆಯುವ ಸಣ್ಣ ಸಣ್ಣ ಕಪ್ಪೆಗಳು ಮೀನಿನ ಮರಿಗಳನ್ನು ಹಿಡಿದು ತಿನ್ನಲು ಹಿಂಡು-ಹಿಂಡಾಗಿ ಬರುವ ಹಾಲು ಬಿಳುಪಿನ ಕೊಕ್ಕರೆಗಳು, ಕರಿಕಪ್ಪು ನೀರು ಕಾಗೆಗಳು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಮಳೆಗಾಲದ ನೀರಿನ ಹರಿವು ಶುರುವಾಯಿತೆಂದರೆ ಭೂಮಿಯ ಅಡಿಯಿಂದ ಮೇಲೆದ್ದು ಬರುವ ವಿವಿಧ ಜಾತಿಯ ಮೀನುಗಳು, ನರ್ತೆ ಎಂಬ ನೋಡಲು ಬಸವನ ಹುಳದ ರೀತಿಯ ಮೃದ್ವಂಗಿ ಜೀವಿಗಳು ಕೆಲವರಿಗೆ ಮಳೆಗಾಲದಲ್ಲಿ ಪೌಷ್ಟಿಕಾಂಶಯುಕ್ತ ವಿಶೇಷ ಖಾದ್ಯ. ನಮ್ಮ ಸಾಗರ ಕಡೆಯ ಸಹೋದ್ಯೋಗಿ ಮಿತ್ರರೊಬ್ಬರು ಹೇಳುವಂತೆ ಅವರ ಮಲೆನಾಡಿನ ಗದ್ದೆಗಳಲ್ಲಿ ಮಳೆಗಾಲ ಬಂತೆಂದರೆ ಸಣ್ಣ ಏಡಿಗಳು ದಂಡಿಯಾಗಿ ಸಿಗುತಿತ್ತಂತೆ. ಅದರ ರುಚಿಗೆ ಮನಸೋತಿದ್ದ ಬಂಗಾರಪ್ಪನವರು ತಾವು ಮುಖ್ಯಮಂತ್ರಿಗಳಾಗಿದ್ದಾಗ ಆ ಏಡಿಗಳನ್ನು ಬೆಂಗಳೂರಿಗೆ ತರಿಸಿಕೊಂಡು ಬಾಯಿ ಚಪ್ಪರಿಸಿ ತಿನ್ನುತ್ತಿದ್ದರಂತೆ.
ಯಾವಾಗ ಕೃಷಿಕರು ಇಳುವರಿ ಹೆಚ್ಚಿಸಲು ಹಟ್ಟಿಗೊಬ್ಬರದ ಬದಲಿಗೆ ಯೂರಿಯಾ, ಡಿ. ಎ. ಪಿ ಮುಂತಾದ ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಬಿಸಿದರೋ ಅದು ಗದ್ದೆಯ ಮೀನು ಕಪ್ಪೆ ಏಡಿಗಳಿಗೆ, ವಿಶೇಷವಾಗಿ ಕರಾವಳಿಯ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತಿದ್ದ ನರ್ತೆಗಳಿಗೆ ಮರಣ ಶಾಸನ ಬರೆಯಿತು. ನಿಧಾನವಾಗಿ ಕೃಷಿ ಚಟುವಟಿಕೆಯೂ ಕಡಿಮೆಯಾಗಿ ಭೂಮಿಯ ಮೌಲ್ಯ ಗಗನಕ್ಕೇರಿತು. ಅಂದು ಕಣ್ಣು ಹಾಯಿಸಿದಷ್ಟು ದೂರ ಭೂಮಿ ತಾಯಿ ಹಸಿರು ಸೀರೆ ಹೊದ್ದು ಮಲಗಿದಂತೆ ಕಾಣುತಿದ್ದ ಗದ್ದೆಗಳಲ್ಲಿ ಇಂದು ಹಸಿರು ಪೈಂಟ್ ಬಳಿದು ನಿಂತಿರುವ ಮನೆಗಳು ಅಣಕಿಸುತ್ತಿವೆ. ಗುಂಪು ಗುಂಪಾಗಿ ಮೀನುಗಳು ಸಂಚರಿಸುತ್ತಿದ್ದ, ನಾವು ಕಾಗದದ ದೋಣಿಗಳನ್ನು ಬಿಟ್ಟು ಆಡುತ್ತಿದ್ದ ಹರಿಯುವ ನೀರಿನ ತೋಡುಗಳು ಇಂದು ಕಾಂಕ್ರೀಟ್ ಚಪ್ಪಡಿಗಳನ್ನು ಹೊದ್ದು ಮಲಗಿದ ಚರಂಡಿಯಾಗಿದೆ. ನಾವು ಉಯ್ಯಾಲೆಯಾಡುತ್ತಿದ್ದ ದೊಡ್ಡ ಹುಣಸೆ ಮರವು ಯಾರದೊ ಮನೆಯ ಒಲೆ ಸೇರಿ ಆ ಜಾಗದಲ್ಲಿ ಕಾಂಕ್ರೀಟ್ ಕಂಬಗಳು ನಿಂತು ನಗುತ್ತಿವೆ. ಹೈಸ್ಕೂಲ್ ದಿನಗಳಲ್ಲಿ ಈಜುತ್ತಿದ್ದ, ಕೃಷಿಕರಿಗೆ ಆಧಾರವಾಗಿದ್ದ ಹೊಳೆಯೊಂದು ನಗರದ ಒಳಚರಂಡಿಯ ಸಮಸ್ತ ಕಲ್ಮಶಗಳನ್ನು ಜನ ಗಂಟು ಕಟ್ಟಿ ಎಸೆಯುವ ಪ್ಲಾಸ್ಟಿಕ್ ಕಸಗಳನ್ನು ತನ್ನ ಒಡಲೊಳಗೆ ತುಂಬಿಕೊಂಡು ನೀರೆಲ್ಲಾ ಕಪ್ಪಾಗಿ ಮೌನವಾಗಿ ರೋಧಿಸುತ್ತಿದೆ. ಇದೇನೂ ಶತಮಾನದ ಬದಲಾವಣೆಯಲ್ಲ. ನಾವು ಚಿಕ್ಕವರಿದ್ದಾಗ ತೋಡಿನ ನೀರನ್ನು ಕಾಲಿನಿಂದ ಚೆಲ್ಲಿ ಸಣ್ಣ ಸಣ್ಣ ಮೀನುಗಳನ್ನು ಹಿಡಿಯುತಿದ್ದದ್ದು, ಶಾಲೆಗೆ ಹೋಗುವಾಗ ಬೇರೆ ದಾರಿಯಿದ್ದರೂ ಬೇಕೆಂದೇ ಮೊಣಕಾಲಿನ ಗಂಟಿನವರೆಗೆ ನೀರಿನಲ್ಲಿ ತೊರೆಯನ್ನು ದಾಟುತ್ತಿದ್ದದ್ದು ಇಂದು ಮೊನ್ನೆ ನಡೆದ ಹಾಗೆ ಅನ್ನಿಸುತ್ತಿದೆ.
ಇಂದಿನ ಮಕ್ಕಳಂತೂ ಪರಿಸರದ ಮೇಲಿನ ಸಂವೇದನೆಯನ್ನೇ ಕಳಕೊಂಡಿವೆ. ಬೇಕಾದುದನ್ನು ನೋಡಲು ಟಿ. ವಿ, ಮನೆಯೊಳಗೇ ಕುಳಿತು ಆಡಲು ಮೊಬೈಲ್-ಕಂಪ್ಯೂಟರ್ಗಳು, ಮನೆ ಬಾಗಿಲಲ್ಲಿ ಹತ್ತಿಸಿಕೊಂಡು ಸಾಯಂಕಾಲ ಮನೆ ಬಾಗಿಲಿಗೆ ಡ್ರಾಪ್ ಕೊಡುವ ಸ್ಕೂಲ್ ಬಸ್ ಇರುವಾಗ ಕಾಡು ಕೆರೆ-ಗದ್ದೆಗಳನ್ನು ನೋಡುವುದಾದರೂ ಹೇಗೆ?ಅಷ್ಟಕ್ಕೂ ಇದ್ದರೆ ತಾನೆ ನೋಡೋದು?ಇದ್ದರೂ ಆ ನೀರು ಕಾಲಿಡಲೂ ಯೋಗ್ಯವಾಗಿರಲಿಕ್ಕಿಲ್ಲ. ಕೆನೆತ್ ಯ್ಯಾಂಡರ್ಸನ್ ಎಂಬ ಬ್ರಿಟಿಷ್ ಶಿಕಾರಿಗಾರನ ಪುಸ್ತಕಗಳಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿ, ಬೆಳ್ಳಂದೂರು ಸುತ್ತಮುತ್ತಲಿನ ದಟ್ಟ ಕಾಡುಗಳ ಬಗ್ಗೆ ರೋಚಕ ವರ್ಣನೆಯಿದೆ. ಬ್ರಿಟಿಷರ ಆ ಕಾಲದಲ್ಲಿ ನರಭಕ್ಷಕ ಹುಲಿಗಳು ನಡುಹಗಲೇ ಮನುಷ್ಯರನ್ನು ಹೊತ್ತೊಯ್ಯುತ್ತಿದ್ದವಂತೆ. ಅದೇ ಕುತೂಹಲದಿಂದ ಇಂದು ಅಲ್ಲಿ ಹೋಗಿ ನೋಡುವಾಗ ಕಾಡೆಲ್ಲಾ ಬೋಳು ತಲೆಯಂತೆ ಬಟಾಬಯಲಾಗಿ ಜೋಳ, ಶುಂಠಿ, ಅನಾನಾಸು ಬೆಳೆಯುತ್ತಿದ್ದಾರೆ. ಅಂದು ರಾಜಾರೋಷವಾಗಿ ಹುಲಿಗಳು ತಿರುಗುತ್ತಿದ್ದ ಜಾಗದಲ್ಲಿ ಇಂದು ಇಲಿಗಳು ಬಿಲ ಕೊರೆದು ನೆಮ್ಮದಿಯಾಗಿವೆ. ನೆಲೆ ಕಳೆದುಕೊಂಡ ನವಿಲು ಮಂಗಗಳು ತೋಟಗಳಿಗೆ ದಾಳಿಯಿಡುತ್ತಿದೆ. ಅದೇ ರೀತಿಯ ಕಾಡು- ಕ್ರೂರ ಮೃಗಗಳು ಪಶ್ಚಿಮ ಘಟ್ಟಗಳಲ್ಲಿ ಇದ್ದ ಕುರಿತು ತುಳುನಾಡಿನ ಬೇಟೆಗಾರ-ಸಾಹಿತಿ ಕೆದಂಬಾಡಿ ಜತ್ತಪ್ಪ ರೈಗಳ ಕಾದಂಬರಿಗಳಲ್ಲಿ ವಿವರಣೆಯಿದೆ. ಇಂದು ಬಹುತೇಕ ಮೃಗಗಳು ಮನುಷ್ಯ ಪ್ರಾಣಿಯ ನಾಲಗೆಯ ಚಪಲಕ್ಕೆ ಬಲಿಯಾಗಿ ಅಡುಗೆ ಮನೆಯಲ್ಲಿ ಬೆಂದುಹೋಗಿವೆ. ವಿಶ್ವ ಪರಂಪರೆಯ ತಾಣವೆಂದು ಯುನೆಸ್ಕೋ ಮಾನ್ಯತೆ ಪಡೆದ ಪಶ್ಚಿಮ ಘಟ್ಟದಲ್ಲಿ ಅಳಿದುಳಿದ ವಿಶಿಷ್ಠವಾದ ಶೋಲಾ ಕಾಡುಗಳಿಗೆ ನೀರಾವರಿ-ವಿದ್ಯುತ್ ಯೋಜನೆಯ ಹೆಸರಿನಲ್ಲಿ ಸರಕಾರಿ ಹೆಗ್ಗಣಗಳು ಬಿಲ ಕೊರೆಯುತ್ತಿವೆ.
ನಮ್ಮ ಪ್ರಕೃತಿ ಮಾತೆಯಲ್ಲಿ ಒಂದು ಔದಾರ್ಯವಿದೆ ಅವಳು ಮನುಷ್ಯನ ಸಣ್ಣ ಪುಟ್ಟ ಪ್ರಮಾದಗಳನ್ನು ಕ್ಷಮಿಸಿ ಸ್ವಯಂ ಸರಿಪಡಿಸಿಕೊಳ್ಳಬಲ್ಲಳು. ಆದರೆ ಈಗ ನಡೆಯುತ್ತಿರುವುದು ವಿನಾಶಕಾರಿ ಹಸ್ತಕ್ಷೇಪ. ಸರಿಪಡಿಸಲಾಗದ ಪ್ರಮಾದ. ಅದಕ್ಕೆ ನಮ್ಮ ಮುಂದಿನ ಪೀಳಿಗೆ ಬೆಲೆ ತೆರಲೇಬೇಕಿದೆ.
ಉತ್ತಮ ಲೇಖನ.ಊರಲ್ಲಿ ಬಾಲ್ಯ ಕಳೆದದ್ದು ಕಡಿಮೆಯಾದರೂ, ಕಳೆದ ಒಂದೆರಡು ವರ್ಷಗಳ ನೆನಪಾಯಿತು. ನೀವೆಂದಂತೆ, ಈಗ ಊರಿಗೆ ಹೋದರೆ, ಹಸಿರು ಹೊಲದ ಬದಲಿಗೆ, ಅಲ್ಲಲ್ಲಿ ಎತ್ತರಕ್ಕೆ ನಿಂತ ಕಟ್ಟಡಗಳು ಕಾಣ ಸಿಗುತ್ತವೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಹೋದ ಹಾದಿಯಲ್ಲಿ ಅಂದು ಜಿಂಕೆ, ನರಿ, ಮೊಲ, ನವಿಲುಗಳನ್ನು ಕಂಡಿದ್ದರೆ, ಇಂದು ಕೋತಿಗಳು ಸಹ ಸಿಗುವುದು ಅಪರೂಪವಾಗಿದೆ.