ನೀರೆಂಬ ಟಾನಿಕ್: ಪ್ರಶಸ್ತಿ

ಇವತ್ತಿನ ದಿನಪತ್ರಿಕೆಯಲ್ಲಿ ಜನಪ್ರಿಯ ನಟಿ ಪ್ರಿಯಾಮಣಿ ಅವರ ಸಂದರ್ಶನ ಓದುತ್ತಿದ್ದೆ. ನೀರೇ ನನ್ನ ಫಿಟ್ನೆಸ್ ಮೂಲ.ಚೆನ್ನಾಗಿ ನೀರು ಕುಡಿಯೋದ್ರಿಂದ ಫ್ಯಾಟ್ ಬರ್ನ್ ಆಗುತ್ತೆ. ಆರೋಗ್ಯವೂ ಚೆನ್ನಾಗಿರುತ್ತೆ ಎಂದು ಅವರು ಹೇಳ್ತಾ ಇದ್ದಿದ್ದನ್ನು ಓದುತ್ತಿದ್ದ ನನ್ನ ಮನಸ್ಸು "ನೀರಿನಿಂದ ಫ್ಯಾಟ್ ಬರ್ನ್" ಅನ್ನೋ ವಾಕ್ಯದಲ್ಲಿ ನಿಂತೇ ಹೋಯ್ತು. ಹೆಚ್ಚು ನೀರು ಕುಡಿಯೋದ್ರಿಂದ ದೇಹದ ಕಷ್ಮಲಗಳ ಹೊರಹಾಕೋ ಪ್ರಕ್ರಿಯೆಗೆ ಸಹಾಯವಾಗಿ ದೇಹ ಆರೋಗ್ಯಕರವಾಗುತ್ತೆ ಅಂತ ಬೇರೆಡೆಯೂ ಓದಿದ್ದರೂ ಈ ಫ್ಯಾಟ್ ಬರ್ನಿನ ಸತ್ಯಾಸತ್ಯತೆ ಪರೀಕ್ಷಿಸಲೇ ಬೇಕು ಮತ್ತು ಹೆಚ್ಚು ನೀರು ಕುಡಿಯೋದ್ರಿಂದಾಗೋ ಅನುಕೂಲ-ಅನಾನುಕೂಲಗಳ ಬಗ್ಗೆಯೊಂದಿಷ್ಟು ಮಾಹಿತಿಗಳ ತಡಕಬೇಕೆಂಬ ಕುರೂಹಲ ಕೆರಳಿತು. ಅದರ ಫಲವೇ ಈ ಲೇಖನ.

ನೀರಿಗೂ ಫ್ಯಾಟಿಗೂ ಎಲ್ಲಿಂದೆಲ್ಲಿಂದ ಸಂಬಂಧ ? 
ಫ್ಯಾಟು ಅಥವಾ ಕೊಬ್ಬು ಅಂದ್ರೆ ಎಣ್ಣೆಯಂಶ. ಅದು ನೀರಲ್ಲಿ ಕರಗಲ್ಲ. ಮತ್ತೆ ನೀರಿಂದ ಅದ್ನ ಕರಗಿಸೋದು ಹೇಗೆ ಅಂತ ತಲೆಕೆರದುಕೊಳ್ಳುತ್ತಿದ್ದೀರಾ ? ಸ್ವಲ್ಪ ತಡೀರಿ.ಈ ಪ್ರಶ್ನೆಗೆ ಉತ್ತರಿಸೋ ಮೊದಲು ನಾವು ಬಾಲ್ಯದಲ್ಲಿ ಈಗಾಗಲೇ ಓದಿದ ಕೆಲ ಅಂಶಗಳನ್ನು ಮೆಲುಕು ಹಾಕಬೇಕು.ಉದಾಹರಣೆಗೆ ಶಕ್ತಿ ಮತ್ತು ಕ್ಯಾಲರಿ ಎಂದರೇನು ಅನ್ನೋದು. ಕೆಲಸ ಮಾಡೋ ಸಾಮರ್ಥ್ಯವೇ ಶಕ್ತಿ ಅನ್ನೋ ಒಂದು ವಾಕ್ಯದ ಉತ್ತರವನ್ನು ಬಾಲ್ಯದಲ್ಲಿ ಬರೆದಿರುತ್ತೇವೆ. ಅದೇ ತರಹ ಶಕ್ತಿಯನ್ನು ಅಳೆಯೋ ಮಾಪಕಗಳಲ್ಲಿ ಕ್ಯಾಲರಿಯೂ ಒಂದು. ಒಂದು ಗ್ರಾಂ ನೀರಿನ ಉಷ್ಣಾಂಶವನ್ನು ಒಂದು ಡಿಗ್ರಿ ಹೆಚ್ಚಿಸುವುದಕ್ಕೆ ಬೇಕಾಗೋ ಶಕ್ತಿಯನ್ನು ಒಂದು ಕ್ಯಾಲೋರಿ ಎನ್ನುತ್ತಾರೆ. ಈ ಡೆಫಿನಿಷನ್ನು ತುಂಬಾ ಮುಖ್ಯ. ಯಾಕೆಂದರೆ ಈ ಇಡೀ ಲೇಖನಕ್ಕೆ ಇದೇ ಆಧಾರಸ್ಥಂಭ ಅಂದರೂ ತಪ್ಪಾಗಲಾರದು. ಯಾಕೆ ಅಂತ ಗೊಂದಲವಾಗ್ತಿದೆಯಾ ? ಮುಂದೆ ಓದಿ. 

ಫ್ಯಾಟ್/ಕೊಬ್ಬು ಅಂದ್ರೆ ಏನು ? 
ನಮ್ಮ ತಿನ್ನೋ ಆಹಾರದ ಮೂಲಕ ನಮಗೆ ಶಕ್ತಿ ದೊರಕುತ್ತದೆ ಅಂತ ಓದಿದೆವು. ಈಗ ನಮಗೆ ದಿನನಿತ್ಯದ ಕೆಲಸಕ್ಕೆ ಬೇಕಾದಕ್ಕಿಂತಲೂ ಹೆಚ್ಚಿನ ಶಕ್ತಿ ನಮ್ಮ ಆಹಾರದ ಮೂಲಕ ಒಳಸೇರಿದರೆ ? ಆ ಶಕ್ತಿ ಕೊಬ್ಬಿನ ರೂಪಾಂತರವಾಗಿ ನಮ್ಮ ದೇಹದಲ್ಲಿ ಕೂರುತ್ತದೆ. ಈ ಕೊಬ್ಬು ದಿನ ಕಳೆದಂತೆ ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತಾ ಸಾಗುತ್ತದೆ. ನಾವು ತಿಂದ ಆಹಾರಕ್ಕೆ ಸರಿಯಾದ ಚಟುವಟಿಕೆಗಳಲ್ಲಿ, ವ್ಯಾಯಾಯದಲ್ಲಿ ತೊಡಗಿದ್ರೆ ಹೆಚ್ಚಾಗಿದ್ದ ಕೊಬ್ಬು ಆ ಕೆಲಸಕ್ಕೆ ಬೇಕಾದ ಶಕ್ತಿಯಾಗಿ ಕರಗಿ ನಮ್ಮ ದೇಹದ ತೂಕ ಇಳಿಯುತ್ತದೆ. ಯದ್ವಾ ತದ್ವಾ ತಿಂದ್ರೆ ದೇಹದ ತೂಕ ಹೆಚ್ಚೋದು, ಹೆಚ್ಚೆಚ್ಚು ಡಯಟ್,ವ್ಯಾಯಾಮ ಮಾಡಿದಾಗ ಅದು ಇಳಿಯೋದು ಹೇಗೆ ಅಂತ ಯೋಚನೆ ಮಾಡ್ತಿದ್ದೋರಿಗೆ ಸದ್ಯಕ್ಕೊಂದು ಸಮಾಧಾನದ ಉತ್ತರ ಸಿಕ್ಕಿರಬಹುದು. ಹಾಗಾಗಿ ನೀರಿಂದ ಕೊಬ್ಬು ಕರಗಿಸೋದು ಅನ್ನೋದನ್ನ ನೀರಿಂದ ಕ್ಯಾಲೋರಿ ಕರಗಿಸೋದು ಹೇಗೆ ಅಂತಲೂ ಅರ್ಥೈಸಬಹುದು.

ನೀರಿಂದ ಕ್ಯಾಲೋರಿ ಕರಗೋದೇಗೆ ?
ಒಂದು ಗ್ರಾಂ ನೀರಿನ ಉಷ್ಣಾಂಶವನ್ನು ಒಂದು ಡಿಗ್ರಿ ಹೆಚ್ಚಿಸೋದಕ್ಕೆ ಬೇಕಾಗೋ ಶಕ್ತಿಯನ್ನ ಒಂದು ಕ್ಯಾಲೋರಿ ಅಂತ ಹೇಳುತ್ತೇವೆ ಅಂತ ಅಂದೆವು. ಆದ್ರೆ ನಾವು ಕುಡಿಯೋ ನೀರಿಂದ ನಮ್ಮ ದೇಹದಲ್ಲಿ ಈಗಾಗಲೇ ಕ್ಯಾಲೋರಿ ರೂಪದಲ್ಲಿ ಅಡಗಿರೋ ಶಕ್ತಿ ಖರ್ಚಾಗೋದು ಹೇಗೆ ಅಂದ್ರಾ ? ಅದಕ್ಕೆ ಉತ್ತರ ಒಂದಲ್ಲ, ಎರಡಲ್ಲ, ಬದಲಿಗೆ ಹಲವಿದೆ. ಅವುಗಳಲ್ಲೊಂದೊಂದನ್ನೇ ನೋಡೋಣ.

ಅ)ದೇಹದ ಚಟುವಟಿಕೆ ಹೆಚ್ಚಳ:
ಖಿhe ಎouಡಿಟಿಚಿಟ oಜಿ ಅಟiಟಿiಛಿಚಿಟ ಇಟಿಜoಛಿಡಿiಟಿoಟogಥಿ & ಒeಣಚಿboಟism)(೧) ಎಂಬಲ್ಲಿ ಪ್ರಕಟವಾದ ವರದಿಯ ಪ್ರಕಾರ ೨೦೦೩ರಲ್ಲಿ ವಿಜ್ಞಾನಿಗಳು ಒಂದು ಗುಂಪು ಜನರ ಮೇಲೆ ಪ್ರಯೋಗ ಮಾಡುತ್ತಿದ್ದರಂತೆ. ಆ ಗುಂಪಿನ ಜನರಿಗೆ ೫೦೦ ಮಿ.ಲೀ ನೀರನ್ನು ಕುಡಿಯಗೊಟ್ಟು(ಅಂದಾಜು ಎರಡು ಕಪ್ಪು) ಅದರಿಂದ ಅವರ ದೈಹಿಕ ವ್ಯವಸ್ಥೆಯಲ್ಲಾಗೋ ಬದಲಾವಣೆಗಳನ್ನು ಗಮನಿಸೋದೇ ಅವರ ಪ್ರಯೋಗ. ೫೦೦ ಮಿ.ಲೀ ನೀರು ಅವರ ದೈಹಿಕ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ  ಹೆಚ್ಚಿಸುತ್ತಿತ್ತಂತೆ. ಈ ಹೆಚ್ಚಿದ ಚಟುವಟಿಕೆಗಳಿಂದ ಸರಿ ಸುಮಾರು ೨೪ ಕ್ಯಾಲೋರಿಗಳು ಹೆಚ್ಚು ಖಾಲಿಯಾಗುತ್ತಿತ್ತಂತೆ. ಅಂದರೆ ದಿನಕ್ಕೆ ೨ ಲೀಟರ್ ನೀರು ಕುಡಿಯೋದರಿಂದ ಸುಮಾರು ೧೦೦ ಕ್ಯಾಲೋರಿಗಳು ಖರ್ಚಾದಂತೆ !. ಈ ನೂರು ಕ್ಯಾಲೋರಿ ಅಂದ್ರೆ ಎಷ್ಟು ಅಂದ್ರಾ ? ಒಂದು ಕಿ.ಮೀ ನಡೆದರೆ ಸುಮಾರು ೫೦ ಕ್ಯಾಲೋರಿಗಳು ಖರ್ಚಾಗುತ್ತದೆ(೨). ೧೦೦ ಕ್ಯಾಲೋರಿ ಅಂದ್ರೆ ೨ ಕಿ.ಮೀ ನಡೆದಂತೆ. ಇನ್ನೂ ಸುಲಭವಾಗಿ ಹೇಳೊದಾದ್ರೆ ೨ಲೀಟರ್ ನೀರು ಕುಡಿದ್ರೆ ಎರಡು ಕಿ.ಮೀ ನಡೆದಷ್ಟು ಕ್ಯಾಲೋರಿ ಕರಗುತ್ತೆ ! ತೂಕ ಹೆಚ್ಚಿದೆ ಅಂತ ಬೇಜಾರುಪಟ್ಟುಕೊಳ್ಳುವವರು ಇನ್ನು ತೂಕ ಇಳಿಸೋದು ನೀರು ಕುಡಿದಷ್ಟು ಸುಲಭ ಅಂತ ನಿಜಾರ್ಥದಲ್ಲೇ ಹೇಳಬಹುದು !

ನಾವು ವ್ಯಾಯಾಮ ಮಾಡುವಾಗ ಅಥವಾ ಬೇರಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವಾಗ ಅದಕ್ಕೆ ಕ್ಯಾಲೋರಿಗಳು ಖರ್ಚಾಗುತ್ತಿರುತ್ತೆ. ಆ ಸಂದರ್ಭದಲ್ಲಿ ನಿರ್ಜಲೀಕರಣವಾಗದಂತೆ ತಡೀಬೇಕು ಅಂದ್ರೆ ಅಗತ್ಯ ಪ್ರಮಾಣದಲ್ಲಿ ನೀರಿನಂಶ ಇರಲೇಬೇಕು. ನೀರಿನಂಶ ಕಡಿಮೆ ಇದೆ ಅಂದ್ರೆ ಬೇಗ ನಿರ್ಜಲೀಕರಣವಾಗಿ ಚಟುವಟಿಕೆಗಳಲ್ಲಿ ಮುಂದುವರಿಯೋಕೆ ಸಾಧ್ಯವಾಗೋಲ್ಲ. ಹೆಚ್ಚು ನೀರಿನಂಶ ಇದ್ರೆ ಹೆಚ್ಚು ಹೊತ್ತು ಚಟುವಟಿಕೆಗಳಲ್ಲಿ ತೊಡಗಿ ಆ ಮೂಲಕ ಹೆಚ್ಚೆಚ್ಚು ಕ್ಯಾಲೋರಿಗಳನ್ನ ಕರಗಿಸೋಕೆ ಸಾಧ್ಯವೆಂಬ ಮತ್ತೊಂದು ಕಾರಣವೂ ಇದರಲ್ಲಡಗಿದೆ. 

ಆ)ಅನಗತ್ಯ ಕ್ಯಾಲೋರಿ ಗಳಿಕೆಯ ತಡೆಗಟ್ಟುವಿಕೆ:
ಈಗ ಬಾಯಾರಿತು ಅಂದ್ರೆ ಏನು ಮಾಡ್ತೀವಿ ? ಇದೂ ಒಂದು ಪ್ರಶ್ನೇನಾ ? ತಕ್ಷಣಕ್ಕೆ ಸಿಕ್ಕಿದ್ದೇನಾದ್ರೂ ಕುಡಿತೀವಪ್ಪಾ ಅಂತೀರಾ ? ಏನು ಕುಡೀತೀರ ಅನ್ನೋದು ಮುಂದಿನ ಪ್ರಶ್ನೆ. ನೀವು ಕೋಲಾ,ಪೆಪ್ಸಿಯೋ ಮತ್ಯಾವುದೋ ಪಾನೀಯ ಅಂದ್ರೆ ಆ ಪೇಯಗಳು ನಿಧಾನವಾಗಿ ನಿಮ್ಮ ಆರೋಗ್ಯ ಹಾಳು ಮಾಡೊದ್ರ ಜೊತೆಗೆ ತಕ್ಷಣಕ್ಕೊಂದಿಷ್ಟು ಕ್ಯಾಲೋರಿಗಳನ್ನಂತೂ ತಂದುಹಾಕಿರುತ್ತೆ ನಿಮ್ಮ ದೇಹದೊಳಗೆ ! ಇದೇ ತರಹ ಕಾಫಿ, ಚಹಾಗಳು ಸಹಾ. ಇವುಗಳ ಬದಲು ನೀವು ನೀರು ಕುಡೀತೀರ ಅಂದ್ರೆ ಅಷ್ಟು ಅನಗತ್ಯ ಕ್ಯಾಲೋರಿಗಳು ನಿಮ್ಮ ದೇಹದ ಭಾರ ಹೆಚ್ಚಿಸೋದನ್ನ ತಪ್ಪಿಸಿಕೊಳ್ಳಬಹುದು !

ಇ)ನೀರಿನ ತಾಪವನ್ನು ದೇಹದ ತಾಪಕ್ಕೆ ತರುವಲ್ಲಿನ ಕ್ಯಾಲೋರಿ ಬಳಕೆ:
ಯಾವುದೇ ವಸ್ತು ನಮ್ಮ ದೇಹವನ್ನು ಸೇರಿತು ಅಂದ್ರೆ ಅದರ ತಾಪವನ್ನು ನಮ್ಮ ದೇಹದ ತಾಪಕ್ಕೆ ತರುವಲ್ಲಿ ಒಂದಿಷ್ಟು ಕ್ಯಾಲೋರಿಗಳ ಶಕ್ತಿ ಖರ್ಚಾಗುತ್ತೆ ಅನ್ನೋ ಸಂಗತಿ ನಿಮಗೆಲ್ಲಾ ತಿಳಿದೇ ಇದೆ. 
ಮುಂದುವರಿಯೋ ನಮ್ಮ ದೇಹದ ಸಾಮಾನ್ಯ ಉಷ್ಣಾಂಶ ೩೭ ಡಿಗ್ರಿ ಎಂದು, ನಾವಿರೋ ನಗರದ ಈಗಿನ ತಾಪಮಾನ ೨೬ ಡಿಗ್ರಿ ಅಂತಲೂ ಇಟ್ಟುಕೊಳ್ಳೋಣ. ಹೊರಗೆಲ್ಲೋ ಸುಮಾರು ಹೊತ್ತಿಂದ ಇಟ್ಟಿರೋ ನೀರಿನ ತಾಪವೂ ಈಗ ೨೬ ಆಗಿದೆ ಎಂದಿಟ್ಟುಕೊಂಡು ಅಂತಹ ಒಂದು ಲೀಟರ್ ನೀರನ್ನು ನಾವು ಕುಡಿಯುತ್ತೇವೆ ಅಂದಿಟ್ಟುಕೊಳ್ಳೋಣ. ಆ ನೀರನ್ನು ನಮ್ಮ ದೇಹದ ತಾಪಕ್ಕೆ ತರೋಕೆ
ಒಂದು ಡಿಗ್ರಿಗೆ ಒಂದು ಗ್ರಾಂಗೆ ೧ ಕ್ಯಾಲೋರಿ ಅಂದ್ಕೊಂಡ್ರೂ ೧೧ ಡಿಗ್ರಿ ಹೆಚ್ಚಳಕ್ಕೆ ೧೧ ಕ್ಯಾಲೋರಿ.ಒಂದು ಲೀಟರಿಗೆ ೧೧೦೦ ಕ್ಯಾಲೋರಿ ಖರ್ಚಾಗುತ್ತೆ ಅಂತ ಲೆಕ್ಕ ಹಾಕೋಕೆ ಹೊರಟ್ರಾ ? !! ತಲೆ ಬಿಸಿ ಮಾಡ್ಕೋಬೇಡಿ .ಆ ತರಹ ಎಲ್ಲಾ ಆಗೋಲ್ಲ. ಕಮ್ಮಿ ತಾಪದ ನೀರನ್ನು, ಉದಾಹರಣೆಗೆ ಐಸಿನ ನೀರನ್ನು ಕುಡಿದ್ರೆ ಹೆಚ್ಚು ಕ್ಯಾಲೋರಿ ಬರ್ನಾಗುತ್ತೆ ಅನ್ನೋದು ಪ್ರಮಾಣೀಕರಿಸಿದ ಸತ್ಯವೇ ಆಗಿದ್ರೂ ಅದರಿಂದ ಯದ್ವಾತದ್ವಾ ಕ್ಯಾಲೋರಿಗಳೇನು ಖರ್ಚಾಗೊಲ್ಲ ಅನ್ನುತ್ತೆ ಮತ್ತೊಂದು ವರದಿ(೩). ಅದರಲ್ಲಿನ ವರದಿಯ ಪ್ರಕಾರ ೧೦ ಗ್ಲಾಸು ಐಸ್ ನೀರು ಕುಡಿಯೋದ್ರಿಂದ ಅಬ್ಬಬ್ಬಾ ಅಂದ್ರೆ ೮೦ ಹೆಚ್ಚು ಕ್ಯಾಲೋರಿಗಳು ಖರ್ಚಾಗಬಹುದು(ಮೊದಲಿನ ಲೆಕ್ಕಾಚಾರಕ್ಕಿಂತ ಹೆಚ್ಚು) ಅಷ್ಟೇ.

ಈ)ಹಾಗಾದ್ರೆ ಬಿಸಿನೀರು ಕುಡಿದ್ರೆ ಕ್ಯಾಲೋರಿ ಕರಗಲ್ವಾ ? 
ಈಗ ನನಗೆ ತಣ್ಣನೆಯ ನೀರು ಕುಡಿಯೋಕೆ ಇಷ್ಟವಾಗೋಲ್ಲ.  ಉಗುರುಬೆಚ್ಚಗಿನ ನೀರು ಕುಡಿತೀನಪ್ಪ.ಅದ್ರಿಂದ ಕ್ಯಾಲೋರಿ ಕರಗಲ್ವಾ ಅಂತಿದೀರಾ ? ಹಾಗೇನೋ ಇಲ್ಲ. ಮತ್ತೊಂದು ವರದಿ(೪)ರ ಪ್ರಕಾರ ಬೆಚ್ಚನೆಯ ನೀರು ಕುಡಿಯೋದ್ರಿಂದಲೂ ಕ್ಯಾಲೋರಿಗಳು ಕರಗುತ್ತೆ. ಇನ್ನೂರೈವತ್ತು ಮಿ.ಲೀ ನೀರು ಕುಡಿಯೋದ್ರಿಂದ ಸುಮಾರು ೮ ಕ್ಯಾಲೋರಿ ಕರಗುತ್ತೆ ಅನ್ನುತ್ತೆ ಈ ಅಧ್ಯಯನ. ಇದು ತಣ್ಣನೆಯ, ಐಸಿನ ನೀರಿಗೆ ಹೋಲಿಸಿದ್ರೆ ಕಮ್ಮಿಯೇ ಆದ್ರೂ ತೂಕ ಇಳಿಸಬೇಕು ಅಂತ ಕನಸಿಲ್ಲದ ಸಾಮಾನ್ಯ ವ್ಯಕ್ತಿಯ ಆರೋಗ್ಯದ ದೃಷ್ಠಿಯಿಂದ ಖುಷಿಯ ವಿಷಯವೇ.
 
ಉ)ಹೊಟ್ಟೆಬಾಕತನಕ್ಕೆ ಪರಿಹಾರ:
ಕೆಲವರಿಗೆ ಯಾವಾಗಲೂ ಏನಾದ್ರೂ ತಿನ್ನುತ್ತಿರಬೇಕು ಅನ್ನೋ ಹಂಬಲ. ಹೀಗೇ ಸಿಕ್ಕ ಜಂಕ್ ಫುಡ್ಗಳನ್ನ ತಿಂದು ತಿಂದೇ ದೇಹದ ಬೊಜ್ಜು ವಿಪರೀತವಾಗಿ ಬೆಳೆಯೋಕೆ ಶುರುವಾಗುತ್ತೆ. ಹೀಗೆ ಏನಾದ್ರೂ ತಿನ್ನಬೇಕೆಂಬ ಬಯಕೆಯಾದಾಗಲೆಲ್ಲಾ ನೀರು ಕುಡಿಯಿರಿ ಅನ್ನುತ್ತಾರೆ ವಿಜ್ಞಾನಿಗಳು ! ಜಂಕ್ ಫುಡ್ಡಿನಿಂದ ಬರೋ ಜಮೆಯಾಗೋ ಕ್ಯಾಲೋರಿಗಳನ್ನ ತಪ್ಪಿಸೋದ್ರ ಜೊತೆಗೆ ಹಾಳಾಗೋ ಆರೋಗ್ಯವನ್ನೂ ಉಳಿಸಿಕೊಂಡಂತಾಯ್ತು, ನೀರಿನಿಂದಾಗೋ ಲಾಭವನ್ನು ಪಡೆದಂತೂ ಆಯ್ತು. ಒಂದೇ ಏಟಿಗೆ ಮೂರು ಹಕ್ಕಿ. ಹೇಗೆ ? ! ಇನ್ನೂ ಮುಂದುವರಿದು ಊಟಕ್ಕಿಂತ ಸ್ವಲ್ಪ ಮುಂಚೆ ನೀರು ಕುಡಿದ್ರೆ ತಿನ್ನೋ ಆಹಾರದ ಪ್ರಮಾಣ ಕಡಿಮೆಯಾಗುತ್ತೆ(೫) ಅಂತಾರೆ ಆಹಾರ ತಜ್ಞರಾದ ಮೆಲಿನಾ ಜಂಪೋಲಿಸ್ ಮುಂತಾದವರು. ಅಮೇರಿಕಾ ಆಹಾರ ಒಕ್ಕೂಟದ ನಡೆಸಿದ ಅಧ್ಯಯನದ ಪ್ರಕಾರ ಊಟಕ್ಕಿಂತ ಮುಂಚೆ ನೀರು ಕುಡಿಯೋ ಜನ ಸುಮಾರು ೭೫ ಕ್ಯಾಲೋರಿಯಷ್ಟು ಕಡಿಮೆ ಆಹಾರ ಸೇವಿಸುತ್ತಾರಂತೆ. 

ಊ)ನನಗೆ ಕ್ಯಾಲೋರಿ ಕಳೆದುಕೊಳ್ಳಬೇಕಂತೇನಿಲ್ಲ. ನೀರಿಂದ ಅದ್ರ ಹೊರತು ಬೇರೆನಾದ್ರೂ ಲಾಭಗಳಿವೆಯೇ ?
ನೀರಿನಿಂದ ಇನ್ನೂ ಹಲವು ಪ್ರಯೋಜನಗಳಿವೆ. ನೀರಿನಿಂದ ದೇಹದಲ್ಲಿನ ಕಲ್ಮಷಗಳ ಹೊರತಳ್ಳುವಿಕೆ ಹೆಚ್ಚಾಗುವುದಲ್ಲದೇ ಮೂತ್ರಪಿಂಡದ ಕಲ್ಲುಗಳು, ಮೂತ್ರಕೋಶದ ಕ್ಯಾನ್ಸರ್ ಆಗೋ ಅಪಾಯಗಳನ್ನು ತಡೆಗಟ್ಟಬಹುದು(೬) ಎನ್ನುತ್ತೆ ಅಧ್ಯಯನ. ಇದರಿಂದ ಚರ್ಮದ ಆರೋಗ್ಯ , ಮಾನಸಿಕ ಸಂತುಲನ, ಕೀಲುಗಳ, ದೇಹ ಕೋಶಗಳ ಆರೋಗ್ಯವನ್ನು ಕಾಪಾಡೋಕೆ ಸಹಕರಿಸುತ್ತೆ ಎನ್ನುತ್ತೆ ಆ ಅಧ್ಯಯನ. ಅಂದ ಹಾಗೆ ಬರೀ ನೀರು ಕುಡಿದರಷ್ಟೇ ಆರೋಗ್ಯವಲ್ಲ. ಈಜು, ದೋಣಿ ನಡೆಸೋದು, ಮೊದಲಾದ ನೀರಲ್ಲಿನ ವ್ಯಾಯಾಮಗಳಿಂದ ದೇಹಕ್ಕಾಗೋ ಒಟ್ಟಾರೆ ಪ್ರಯೋಜನಗಳ ಬಗ್ಗೆಯೂ ಅಧ್ಯಯನ ನಡೆದಿದೆ(೭). ಇದರಲ್ಲಿನ ಕೆಲವು ವ್ಯಾಯಾಮಗಳು ಘಂಟೆಗೆ ೭೦೦ ಕ್ಯಾಲೋರಿಯಷ್ಟು ಕರಗಿಸುತ್ತೆ ಅನ್ನುತ್ತೆ ಅದು. ಸುಲಭವಾಗಿ ಹೇಳಬೇಕಂದ್ರೆ ಘಂಟೆಗೆ ಸುಮಾರು ೬ ಕಿ.ಮೀ ಸ್ಪೀಡಿನಲ್ಲಿ ಒಂದು ಕಿ.ಮೀ ಓಡಿದರೆ ಕರಗೋ ಕ್ಯಾಲೋರಿಗಳು(೨) ಸುಮಾರು ೭೬. ಅಂದ್ರೆ ಘಂಟೆಗೆ ೭೬೦. ನೀರಿನಲ್ಲಿನ ಒಂದು ಘಂಟೆ ವ್ಯಾಯಾಮ ಘಂಟೆಗೆ ಸುಮಾರು ಹತ್ತು ಕಿ.ಮೀ ಓಡಿದಷ್ಟು ಅಂದಂತೆ !

ಮುಗಿಸೋ ಮೊದಲು:
ನೀರಿನಿಂದ ಆರೋಗ್ಯಕ್ಕೆ ಲಾಭಗಳಿವೆಯೆಂದ ಮಾತ್ರಕ್ಕೆ ಯದ್ವಾತದ್ವಾ ನೀರು ಕುಡಿಬೇಕು ಎಂದಲ್ಲ. "ಅತಿಯಾದರೆ ಅಮೃತವೂ ವಿಷ" ಅನ್ನೋದು ನೆನಪಿರಲಿ ! ನಮ್ಮ ವಯಸ್ಸು, ದೇಹದ ತೂಕ,ಎತ್ತರಗಳ ಆಧಾರದ ಮೇಲೆ ಎಷ್ಟು ನೀರಿನ ಅಗತ್ಯವಿದೆ ಎಂದು ನಿರ್ಧರಿಸಬಹುದು. ಒಬ್ಬ ಸಾಮಾನ್ಯ ವಯಸ್ಕ ೨ರಿಂದ ೩ ಲೀಟರ್ ನೀರು ಕುಡಿಯೋದು ಅವನ ಆರೋಗ್ಯದ ದೃಷ್ಠಿಯಿಂದ ಸಹಾಯಕ ಎನ್ನುತ್ತೆ ಅಧ್ಯಯನಗಳು. ಹಾಗಾಗಿ ಅಗತ್ಯವಾದಷ್ಟು ನೀರನ್ನು ಕುಡಿದು ನೀರು ಕುಡಿದಷ್ಟೇ ಸುಲಭವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ನೀರ ಯೋಗಿಗಳಾಗಿ, ನಿರೋಗಿಗಳಾಗಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Chaithra
Chaithra
8 years ago

Super !!

1
0
Would love your thoughts, please comment.x
()
x