ನೀನೆಂಬ ವಿಸ್ಮಯ: ಶ್ರುತಿ ಬಿ.ಆರ್.

ಓಯ್ ತಿಂಡಿ ಪೋತಿ,

ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲೆ, ನೆನಪಾದಾಗಲೆಲ್ಲ ನನ್ನ ಮುಖದ ಮೇಲೆ ಹಾದು ಹೋಗುವ ಸಣ್ಣ ನಗು, ನಿನ್ನತ್ತಲೇ ಎಳೆಯುವ ಹುಚ್ಚು ಮನಸ್ಸು, ನಿನಗೆ ಹೇಳಬೇಕಾಗಿರೋದನ್ನು ಹೇಳಲು ಸಹಕರಿಸದ ಹೇಡಿ ಮಾತುಗಳು, ಆದರೆ ಇನ್ನೂ ನಾನು ತಡಮಾಡಬಾರದೆಂದು ಎಚ್ಚರಿಸುತ್ತಿರುವ ಬುದ್ಧಿ, ಇದೆಲ್ಲವೂ ಸೇರಿ ಪತ್ರವೇ ಸರಿಯಾದ ಮಾರ್ಗ ಅಂತ ಅನ್ನಿಸಿದೆ ಕಣೆ. ಚೆನ್ನಾಗಿ ತಿಂದು ಬಂದಿರುವುದಕ್ಕೆ ಸಾಕ್ಷಿಯಾಗಿ ಇರುವ ಯಾವಾಗಲೂ ಲವಲವಿಕೆಯಿಂದ ಕೂಡಿದ ನಿನ್ನ ನಗುಮುಖ, ಲಾಡುವಿನಂತೆ ಕೆನ್ನೆ, ಲಾಡುವಿನ ಮೇಲಿನ ದ್ರಾಕ್ಷಿಯಂತೆ ಕೆನ್ನೆಯ ಮೇಲಿನ ಪುಟ್ಟ ಗುಳಿ, ಯಾವಾಗಲೂ ತಿಂಡಿ-ತಿನಿಸುಗಳತ್ತಲೇ ನೆಟ್ಟಿರುವ ನಿನ್ನ ಕಣ್ಣುಗಳು, ನಿನ್ನ ಫೇವರಿಟ್ ಕೆ.ಎಫ಼್.ಸಿ ಚಿಕನ್ ನಂತೆ ಗುಂಡಾಗಿರುವ ನಿನ್ನ ಮೂಗು, ಇದ್ಯಾವುದು ನನ್ನನ್ನು ನಿನ್ನತ್ತ ಆಕರ್ಷಿಸಿತು ಅಂತ ನಂಗನಿಸುತ್ತಿಲ್ಲ. ಕಪಟವೇ ಇಲ್ಲದ ಆ ನಿನ್ನ ಮುದ್ದಾದ ನಗು, ಅದರಲ್ಲಿ ತುಂಬಿರುವ ಮುಗ್ಧತೆ, ಸದಾ ಸಂತೋಷವಾಗಿರುವ ನಿನ್ನ ಗುಣ ನನ್ನನ್ನು ಸೆಳೆದಿರಬೇಕು.

ನಿನ್ನನ್ನು ನಾನು ಕ್ಲಾಸ್ ರೂಮಿನಲ್ಲಿ ನೋಡಿದ್ದಕ್ಕಿಂತ ಹೆಚ್ಚಾಗಿ ಕ್ಯಾಂಪಸ್ಸಿನ ಕ್ಯಾಂಟೀನಿನಲ್ಲಿ, ಬೇಕರಿಯಲ್ಲಿ, ಪಾನೀಪುರಿ ಗಾಡಿ ಹತ್ತಿರ, ಪಿಜ್ಜಾ ಹಟ್ ನಲ್ಲಿ, ಚ್ಯಾಟ್ ಸ್ಟ್ರೀಟ್ ನಲ್ಲಿ ನೋಡಿದ್ದೇ ಹೆಚ್ಚು. ಇದೇನು ಈ ಹುಡುಗಿ ಇಷ್ಟೆಲ್ಲಾ ತಿಂತಾಳಲ್ಲ ಅದೆಂಗೆ ಅರಗಿಸಿಕೊಳ್ಳುತ್ತಾಳೋ ಅಂತ ತುಂಬಾ ಆಶ್ಚರ್ಯ ಆಗ್ತಾ ಇತ್ತು. ಒಂದು ದಿನ ಕಾಲೇಜು ಕ್ಯಾಂಟೀನ್ ನಲ್ಲಿ ನೀನು ಆರ್ಡರ್ ಮಾಡಿದ್ದ ಬೇಬಿ ಕಾರ್ನ್ ಮಂಚೂರಿಯನ್ನು ನಾನು ಆರ್ಡರ್ ಮಾಡಿದ ಗೋಬಿ ಮಂಚೂರಿ ಅಂತಾ ತಿಳ್ಕೊಂಡು ಕೌಂಟರ್ ನಿಂದ ತೆಗೆದುಕೊಂಡು ಹೊರಟಾಗ ಮೊದಲ ಬಾರಿ ನೀನು ನನ್ನನ್ನು ಮಾತನಾಡಿಸಿದ್ದೆ, ಸಾರಿ ಅದು ಮಾತಲ್ಲ, ಒಮ್ಮೆಲೆ ಬಯ್ಯಲಾರಂಭಿಸಿದೆ, “ನಿಂಗೇನಾದ್ರು ಕಾಮನ್ ಸೆನ್ಸ್ ಇದ್ಯಾ! ಇನ್ನೊಬ್ರು ಮೊದಲೇ ಆರ್ಡರ್ ಮಾಡಿದ್ದು ಎತ್ಕೊಂಡ್ ಹೋಗ್ತಾ ಇದ್ಯಲ, ಬಿಟ್ಟಿ ಸಿಕ್ಕರೆ ಬಿಡಲ್ಲ ಅಲ್ವಾ?” ಎಂದಾಗ ನನ್ಗೂ ಕೋಪ ನೆತ್ತಿಗೇರಿತ್ತು. ಆದರೂ ಏನಾಗ್ತಾ ಇದೆ ಅಂತ ಒಂದು ಕ್ಷಣ ಯೋಚಿಸಿ ಮಾತಾಡೋ ಅಷ್ಟರಲ್ಲೇ ನೀನು ಒಂದೇ ಬಾರಿಗೆ ನನ್ನ ಕೈಲಿದ್ದ ಪ್ಲೇಟ್ ಕಿತ್ತುಕೊಂಡು ಕೋಪದಿಂದ ಹಲ್ಲು ಕಡಿಯುತ್ತಾ ಹೋಗಿದ್ದೆ. ಇದನ್ನು ನೋಡಿದ್ದ ಕ್ಯಾಂಟೀನ್ ಹುಡುಗ “ಕನ್ಫ಼್ಯೂಸ್ ಆಯ್ತಾ? ಅದು ಬೇಬಿ ಕಾರ್ನ್ ಮಂಚೂರಿ, ನೀವ್ ಆರ್ಡರ್ ಮಾಡಿದ್ದು ಗೋಬಿ ಇಲ್ಲಿದೆ ತಗೊಳೀ” ಎಂದಾಗ ನಿನ್ನ ಕೋಪಕ್ಕೆ ಕಾರಣ ಅರ್ಥ ಆಗಿತ್ತು, ಆದರೂ ಯಾವುದೋ ಒಂದು ಮಂಚೂರಿ ಅದಕ್ಕೆ ಯಾಕ್ ಹಿಂಗಾಡ್ತಾಳೆ ಈ ಡುಮ್ಮಿ ಅಂತ ಬೈಕೊಂಡು ಸುಮ್ಮನಾದೆ.

ಆವತ್ತಿಂದ ನನಗೆ ನಿನ್ನ ಕಾಟ ಶುರುವಾಯ್ತು ನೋಡು, ಕ್ಯಾಂಪಸ್ ನಲ್ಲಿ, ಕ್ಲಾಸಿನಲ್ಲಿ ಎಲ್ಲಿ ನಿನ್ನ ಕಣ್ಣಿಗೆ ನಾನು ಬಿದ್ದರೂ ಮಂಚೂರಿ ಕಳ್ಳ ಅಂತ ಕೂಗಿ ಅಣಕಿಸುತ್ತಿದ್ದೆ, ನಾನೇನು ಕಡಿಮೆ ಡುಮ್ಮಿ, ತಿಂಡಿಪೋತಿ ಅಂತ ಕೂಗ್ತಿದ್ದೆ. ಈ ಕೋಳಿ ಜಗಳಗಳೆಲ್ಲ ನಮ್ಮಿಬ್ಬರನ್ನು ಹತ್ತಿರ ತಂದದ್ದು ಸುಳ್ಳಲ್ಲ. ನಮ್ಮಿಬ್ಬರ ನಡುವೆ ಇದ್ದ ಕೋಪ ಕ್ರಮೇಣ ಕರಗಿ ಸ್ನೇಹವಾಗಿದ್ದು ಹೇಗೆ ಅಂತಾನೆ ತಿಳಿಲಿಲ್ಲ, ಆ ಸ್ನೇಹ ಪ್ರೀತಿಯಾಗಿ ಮೊಳೆಯುವ ಸುಳಿವೂ ಸಿಕ್ಕಿರಲಿಲ್ಲ, ಅದು ಹೇಗೋ ಈ ಪ್ರೀತಿ ನನ್ನೊಳಗೆ ಹೆಮ್ಮರವಾಗಿದೆ. ಯಾರ ಬಗ್ಗೆಯೂ ಕೊಂಕು ಮಾತಾಡದ ನಿನ್ನ ಒಳ್ಳೆಯತನ, ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುವ ರೀತಿ, ಜೊತೆಯಲ್ಲಿರುವ ಎಲ್ಲರನ್ನೂ ಸಮಾನವಾಗಿ ಕಾಣುವ ಸ್ವಭಾವ, ಯಾರನ್ನೂ ನೋಯಿಸದ ನಿನ್ನ ತಮಾಷೆಗಳು, ಒಳ್ಳೆಯದನ್ನು ಮುಕ್ತವಾಗಿ ಹೊಗಳುವ ನಿನ್ನ ಸಹೃದಯತೆ, ಇನ್ನೊಬ್ಬರ ಕಷ್ಟಕ್ಕೆ ಬೇಗನೆ ಸ್ಪಂದಿಸುವ ನಿನ್ನ ಶುದ್ಧವಾದ ಮನಸ್ಸು ಎಲ್ಲವೂ ಹತ್ತಿರದಿಂದ ಕಂಡಾಗ, ನನಗೆ ನಿನ್ನ ಬಗ್ಗೆ ಮೊದಲು ಇದ್ದ ’ಈ ಡುಮ್ಮಿಗೆ ಬರೀ ತಿನ್ನುವುದೇ ಕೆಲಸ’ ಅನ್ನೊ ಅಭಿಪ್ರಾಯ ಬದಲಾಯಿಸಿತು. ನಿನ್ನೊಂದಿಗಿದ್ದರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ನಿನ್ನ ವ್ಯಕ್ತಿತ್ವ ಎಷ್ಟು ಆಹ್ಲಾದಕರ, ಹಾಗೆಯೆ ಎಷ್ಟು ತಿಳಿದುಕೊಂಡರೂ ಇನ್ನೂ ಏನೋ ತಿಳಿದಿಲ್ಲವೆಂಬಷ್ಟು ಆಳ. ನಾನಂತೂ ನಿನ್ನ ಅಸಂಖ್ಯಾತ ಸದ್ಗುಣಗಳ ನಿರಂತರ ಕುತೂಹಲಿ ವೀಕ್ಷಕ.

ನೀನಿದ್ದಲ್ಲಿ ಬಾಯಿಗೆ ಪುರುಸೊತ್ತಿಲ್ಲದೆ ತಿನ್ನುವುದಂತೂ ಇದ್ದೇ ಇರುತ್ತದೆ, ಅದರ ಜೊತೆ ಹರಟೆ, ನಗು, ತಮಾಷೆ ತುಂಬಿರುತ್ತದೆ. ಎಲ್ಲೆಡೆ ಖುಷಿ ತುಂಬುವ ನೀನು ಒಮ್ಮೊಮ್ಮೆ ಮೈ ಮರೆತು ಧೀರ್ಘಾಲೋಚನೆಯಲ್ಲಿ ಮುಳುಗುವುದೇಕೆ? ವಟವಟ ಎಂದು ಮಾತನಾಡುತ್ತಲೇ ಇರುವ ನೀನು ಒಮ್ಮೊಮ್ಮೆ ತೀರಾ ಡಲ್ ಆಗಿ ಕುಳಿತುಬಿಡುವುದೇಕೆ? ಕಾರಣವಿಲ್ಲದೆ ಒಮ್ಮೊಮ್ಮೆ ನನ್ನ ಮೇಲೆ ಕೋಪಿಸಿಕೊಳ್ಳುವುದೇಕೆ? ಇಷ್ಟು ಆತ್ಮೀಯತೆ ಇದ್ದಾಗಲೂ ನಿನ್ನೊಳಗಿನ ಯಾವುದೋ ಬೇಸರ, ಕಾಡುತ್ತಿರುವ ದುಃಖಗಳನ್ನು ಬಚ್ಚಿಡುತ್ತಿರುವುದೇಕೆ? ಒಟ್ಟಿನಲ್ಲಿ ನೀನು ನನಗೊಂದು ವಿಸ್ಮಯ… ನಿನ್ನ ಬಗ್ಗೆ ಸಂಪೂರ್ಣವಾಗಿ ಅರಿತಿಲ್ಲ ಎನಿಸಿದ್ದರೂ, ನಿನ್ನ ನಗುಮೊಗದ ಹಿಂದಿನ ವಿಷಾದದ ಛಾಯೆಯನ್ನು ಗುರುತಿಸಬಲ್ಲ ಕಾಳಜಿಯಿರುವ ನನಗೆ ನಿನ್ನ ನೋವನ್ನು ಆಲಿಸುವ ಕಿವಿಯಾಗಿ, ಸಂತೈಸುವ ಮನಸ್ಸಾಗಿ, ಎಂದೆಂದೂ ಕೈ ಹಿಡಿದು ನಡೆವ ಗಳೆಯನಾಗುವ ಆಸೆ. ನಿನ್ನ ಪ್ರತಿಕ್ರಿಯೆ ಹೇಗಿರುತ್ತದೆಂಬ ಸಣ್ಣ ಕಲ್ಪನೆಯೂ ಇಲ್ಲದಿದ್ದರೂ ಪ್ರೀತಿಯೆಂಬ ಸೆಳೆತ ದಿನ ದಿನಕ್ಕೂ ಗಾಢವಾಗಿ ಆವರಿಸುತ್ತಿದೆ, ಬದುಕಿರುವವರೆಗೂ ನೀನು ತಿನ್ನಬೇಕೆನಿಸಿದ್ದನ್ನೆಲ್ಲ ಕೊಡಿಸಿ, ನೀನು ಆಸ್ವಾದಿಸುತ್ತಾ ತಿನ್ನುವಾಗ ನಿನ್ನ ಮುದ್ದು ಮುಖ, ಹೊಳೆಯುವ ಕಣ್ಣುಗಳನ್ನೇ ನೋಡುತ್ತಾ ಕೂರುವ ಹಂಬಲ ಹೆಚ್ಚಾಗುತ್ತಲೇ ಇದೆ. ಹೇಳು ನನ್ನ ಮುದ್ದಿನ ತಿಂಡಿಪೋತಿ ನಿನ್ನ ಒಳ್ಳೆ ಮನಸ್ಸನ್ನು ಈ ಮಂಚೂರಿ ಕಳ್ಳ ಕದ್ದಿದ್ದಾನಾ???

ನಿನ್ನವನಾಗೋಕೆ ಬಯಸುತ್ತಿರೋ
ಮಂಚೂರಿ ಕಳ್ಳ

-ಶ್ರುತಿ ಬಿ.ಆರ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x