ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ ಕಲಿಯಲಾಗಲಿ, ಕೇಳಿ ಖುಷಿಪಡಲಾಗಲಿ…. ನಾನಂತೂ ಸಮಯ ಸಿಕ್ಕಾಗಲೆಲ್ಲಾ ಸಂಗೀತವನ್ನು ಆಸ್ವಾದಿಸದೇ ಇರಲಾರೆ. In fact ನನ್ನ ದು:ಖವನ್ನು ನೀಗಿಸುವುದೂ ಸಂಗೀತವೇ ಮತ್ತು ನನ್ನ ದಟ್ಟ ದರಿದ್ರ, ಸೋಮಾರಿತನದಿಂದ “ಎದ್ದೇಳಾ, ನಿನ್ನ ಸೋಮಾರಿತನಕ್ಕಿಷ್ಟು ಬೆಂಕಿ ಹಾಕ” ಎಂದು ಮತ್ತೆ ಮತ್ತೆ ಪುನಶ್ಚೇತನಗೊಳಿಸುವುದೂ ಸಂಗೀತವೇ…
ಇವತ್ತು, ಬಿಡಿ ಇವತ್ತಲ್ಲ ಸುಮಾರು ಮೂರು ತಿಂಗಳಾಯ್ತೇನೋ ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದರೆ ಸಾಕು, ಯಾಕಾದ್ರೂ ಊಟದ ಸಮಯವಾಗುತ್ತೋ? ಯಾವ ಖಾನಾವಳಿಯ ಸೋಡಾ ಹಾಕಿದ ಅನ್ನ ತಿನ್ನಬೇಕೋ… ಹೊಟ್ಟೆ ಕೆಡಿಸಿಕೊಳ್ಳಲು? ಎಂದು ಬರೀ ಬಾಳೆ ಹಣ್ಣು ತಿಂದು ಹಸಿವು ನೀಗಿಸಿಕೊಂಡ ದಿನಗಳಷ್ಟೋ. ಇವತ್ತು ಅಂಥಹದ್ದೇ ಯೋಚನೆಯಲ್ಲಿದ್ದೆ. ಮದ್ಯಾಹ್ನವಂತೂ ಊಟ ಬೇಡೆನಿಸಿ ಕುರ್ಚಿಗೆ ಆನಿ anxiety ಕಡಿಮೆ ಆಗುವಷ್ಟರಲ್ಲಿ ಮೂರು ಫೋನ್ ಕಾಲು ಮತ್ತು ಊಟಾಯ್ತಾ ಎನ್ನುವ ಪ್ರಶ್ನೆಗಳು.. ಹೂಂ….ಅನ್ಲಾ ಉಹೂಂ ಅನ್ಲಾ ?!!
ಇವತ್ತು ರಾತ್ರಿ ಊಟ ಮಾಡಿ ಬರ್ತಾ ಹೆಡ್ ಫೋನ್ ಕಿವಿಗಾನಿಸಿಕೊಂಡೆ…. Randomly ಬಂದ ಹಾಡು “ನೀನು ನೀನೇ ಇಲ್ಲಿ ನಾನು ನಾನೇ” ಎಂಬ ಎಸ್.ಪಿ.ಬಿ. ಎರಡು ಮಾದರಿಯಲ್ಲಿ ಹಾಡಿದ ರಾಗ ಯಾವ್ದೋ ಗೊತ್ತಿಲ್ಲ.. ಖೇರವಾ ಮತ್ತು ಭಜನ್ ಠೇಕಾ ತಾಳದ ತಬಲಾ ವಾದನ ಅದ್ಭುತವಾಗಿ ಕೇಳುತ್ತಿದ್ದೆ…. ತಬಲಾದ್ದು ಮಾತ್ರ ಯಾಕೆ confirm ಮಾಡ್ಕೊಂಡು ಹೇಳ್ತೇನೆ ಅಂದ್ರೆ ನಾನೂ ಕಲಿತಿದ್ದೆ. ಈಗ ನನ್ನ ಮಗನ ವಯಸ್ಸಿನ ಛೋಟೆ ಉಸ್ತಾದ್ ನನ್ನು ಕೇಳಿದೆ.
ಆ ಸನ್ನಿವೇಶದಲ್ಲಿ ತಾಯ್ ನಾಗೇಶ್ ಎಂಬ ಹಿರಿಯ ನಟರ ಅದ್ಬುತ ನಟನೆ, ಶಾಸ್ತ್ರೀಯ ಸಂಗೀತ ಕಲಿತೇ ಇಲ್ಲ ಎನ್ನುತ್ತಲೇ ಸೌಜನ್ಯದಿಂದಲೇ ಅಷ್ಟು ಚೆಂದಗೆ ಹಾಡುವ ಎಸ್.ಪಿ.ಬಿ ಸರ್, ರವಿಚಂದ್ರನ್ ಸೌಮ್ಯ ನಟನೆ ಹಾಗೂ ಜಗ್ಗೇಶ್ ಹಾಸ್ಯಪ್ರಜ್ಞೆಯ ತಬಲಾ ವಾದನ, ನಾದಬ್ರಹ್ಮ ಹಂಸಲೇಖರ ಉಚ್ಛ್ರಾಯ ದಿನಗಳಂತೆ ಅವರ ಸಾಹಿತ್ಯ ಮತ್ತು ಸಂಗೀತವಂತೂ ಇಷ್ಟವೋ ಇಷ್ಟ. ಈ ಹಾಡಿನಲ್ಲಿನ ಸನ್ನಿವೇಶಕ್ಕೆ ಹೋಲಿಕೆಗೆ ನಿಲುಕಿ ಥಟ್ಟನೇ ಯಾರೋ ನೆನಪಾದರು.
ಯಾವುದೇ ಕಲೆ, ವಿದ್ಯೆ, ಅಧಿಕಾರ , ಕಲಿಕೆ ಸಂಯಮ, ಕಾಳಜಿ, ಮರುಗುವಿಕೆ ಯಾರಲ್ಲೂ ಹುಟ್ಟಿನಿಂದ ಬರುವುದಿಲ್ಲ. ಬಹುಶಃ ಬಂದರೂ ಅದೂ ನೋಡಿ ಕಲಿತಿರಬೇಕು ಅಥವಾ ವಾತಾವರಣದ ರೂಢಿಯಿಂದ ಮಾತ್ರ ಸಾಧ್ಯ…. ..
ಒಬ್ಬ ಗರ್ವಿ ಯಾರೇ ಆಗಲಿ ” ನೀನು ನೀನೇ ಇಲ್ಲಿ ನಾನು ನಾನೇ” ಎನ್ನುವ ಠೇಂಕಾರದಲ್ಲಿ ಅಧಿಕಾರಯುತವಾಗಿ ಹಠಮಾರಿಯಾಗಿದ್ದಲ್ಲಿ “ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಮಾಡಲಯ್ಯ ದಾಸಾನು ದಾಸ…” ಎನ್ನುವ ಸಂಯಮದ ನೌಕರರೂ, ಮನುಷ್ಯರೂ, ದಿನದಂದೇ ದುಡಿದು ಅನ್ನ ಕಾಣುವವರೂ ಇರುತ್ತಾರೆ…
“ಈ ಸ್ವರವೇ ವಾದ” ಎಂದು ತಮ್ಮದೇ ದ್ವೇಷ ಸಾಧನೆ ಮತ್ತು ಅಶಾಶ್ವತ ಗದ್ದುಗೆಯನ್ನೇ ತೆವಲಾಗಿ ತೀರಿಸಿಕೊಳ್ಳುವ ಅಧಿಕಾರಶಾಹಿ, ಜಾತಿವಾದಿ, ಮಾನವೀಯತೆ ಮರೆತ ದೃಷ್ಟಿ ಇದ್ದೂ ಅಮಲಲ್ಲಿರುವ ಅಧಿಕಾರವಂತರೆದುರು “ಈಶ್ವರನೇ ನಾದ” ಎನ್ನುವ ವಿನಯವಂತರೂ ಇರುತ್ತಾರೆ…
ತಮ್ಮನ್ನು ಎದುರು ಹಾಕಿಕೊಂಡರೆ “ಹಾಡುವೆಯಾ ಪಲ್ಲವಿಯಾ?!!!! ಕೇಳುವೆಯಾ? ಮೇಲೆ ಏಳುವೆಯಾ?” ಎಂದು ರಾಗವಾಗೇ ಧಿಮಾಕು ತೋರಿಸುತ್ತಲೇ “ಪಲುಕುಗಳ ವಿಚಾರಣೆ, ಕ್ಷಮಾಪಣೆ, ವಿಮೋಚನೆ ” ಎನ್ನುವ ಮಂದಿಯ ನಡುವೆ ” ಗೆಲುವುಗಳ ಆಲೋಚನೆ, ಸರಸ್ವತಿ, ಸಮರ್ಪಣೆ” ಎನ್ನುವ ಆಶಾವಾದಿಗಳೂ ಇರುತ್ತಾರೆನ್ನುವುದೂ ಸತ್ಯವೇ….
“ನವರಸ ಅರಗಿಸಿ, ಪರವಶ ಪಳಗಿಸಿ, ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾನ್ನ?!!! ಎನ್ನುವ ಧಾಟಿಯಲ್ಲೇ ತಮ್ಮೆಲ್ಲ ಕುಟಿಲ ಮತ್ತು ಬಕೆಟ್ ಬುದ್ಧಿಯಲ್ಲೇ ಜೀವಮಾನ ಕಳೆದು ಸಾಚಾನಂತೆ ತೋರಿಸಿಕೊಳ್ಳುವ ಅಡ್ನಾಡಿಗಳಿಗೆ ” ಗಣಗಣ ಶಿವಗುಣ ನಿಜಗುಣ, ಶಿವಮನ, ನಲಿದರೆ, ಒಲಿದರೆ ಅದೇ ಭಕುತಿಯ ಮುಕುತಿಯ ಪರಮಾನ್ನ” ಪಾಲಸಿಯ ಮಂದಿಯ ಚೂರು ಸೌಜನ್ಯ ಗುಣದ ಯಾವ ಲಕ್ಷಣವೂ ಇರದಿರುವುದನ್ನು ತಾವೇ ತೋರಿಸಿಕೊಳ್ಳುವ ತುರಿಕೆಗೆ ತೃಪ್ತಿ ಎನ್ನುವುದೇ ಇರದು…
ಕೊನೆಗೊಮ್ಮೆ ಸ.ರಿ.ಗ.ಮ.ಪ.ದ ಅಪಶೃತಿಯನ್ನೂ ಅಪದ್ಧತನವನ್ನೂ ಇತರರು ಗುರುತಿಸಿ ಸೂಕ್ಷ್ಮವಾಗಿ ಸನ್ನೆ ಮಾಡಿದರೂ ಸುಗಮ ಶೃತಿಗೆ ತಮ್ಮನ್ನು ಒಗ್ಗಿಸಿಕೊಳ್ಳದ ಯಾರನ್ನೇ ಆದರೂ ಮುಂದೊಂದು ದಿನ ಸರೀರಿ…. ಸರೀರಿ….ಎಂದು ಕುತ್ತಿಗೆಯನ್ನೇ ಹಿಡಿಯದೇ ಸಂಗೀತದ ಸ.ಪ.ಸ.ದಲ್ಲಿ ಪಳಗಿದಂಥ ಪಟುವೊಬ್ಬ ಅಧಿಕಾರದಲ್ಲಿರುವವರನ್ನೂ ಶಾಲು ಹೊದಿಸಿ ನಗುತ್ತಲೇ ಬೀಳ್ಕೊಡುವ ಮಟ್ಟಿಗೆ ಮೂಕ ಶೋತ್ರುಗಳೆಂಬ ನೌಕರ ಸಂತ್ರಸ್ತರ ಎದುರು ಅವರ ಸಿಟ್ಟಿನ “ಅಂತೂ ತೊಲಗಿದ್ನಪಾ” ಎನ್ನುವ ಚಪ್ಪಾಳೆಯನ್ನೇ ಸನ್ಮಾನವೆಂದು ಸ್ವಯಂಭಾವಿಸಿ, ಪಡೆದು ಹೋಗಬೇಕಾದ ಸ್ಥಿತಿಯಲ್ಲಿದ್ದ, ಇರುವ ದೊಡ್ಡ ಸ್ಥಾನದಲ್ಲಿನ ಕೇವಲ ಜ್ಞಾನ, ಅಧಿಕಾರ ಹೊಂದಿದ್ದೇನೆಂಬ ಅಹಂ ಇರುವ ಯಾರಾದರೂ ಅರ್ಥ ಮಾಡಿಕೊಂಡರೆ ಬಹುಶಃ ಒಳ್ಳೆಯದು…..
ಆ ಹಾಡು ಮುಗಿಯುತ್ತಿದ್ದಂತೆಯೇ ಎಸ್.ಪಿ.ಬಿ. ಹೇಳುವಂತೆ “ಪ್ರತಿವಾದಿ ಭಯಂಕರ” ಪಿ.ಬಿ.ಎಸ್. ಅವರು ಹಾಡಿದ ಮತ್ತೊಂದು ಹಾಡು ತೇಲಿ ಬಂತು…… “ನಿನ್ನ ‘ಕಣ್ಣ’ ನೋಟದಲ್ಲೇ ನೂರು ಆಸೆ ಕಂಡೆನು……”
–ಅಮರದೀಪ್.