ಸಾಹಿತಿ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ನಮ್ಮನ್ನು ಅಗಲಿ ಇದೇ ಜೂನ ೨೧ಕ್ಕೆ ಒಂದು ವರ್ಷವಾಯಿತು. ಈ ಪ್ರಯುಕ್ತ ಒಂದು ಲೇಖನ.
ಪ್ರಿಯ ಈಶ್ವರ…..ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹೀಗಂತಾ ನೆನಪಿಸಿದವನು ನಿನ್ನ ಮಗ ರಾಜಶೇಖರ. ಅಪ್ಪನ ಪುಣ್ಯಸ್ಮರಣೆ ಲೇಖನ ಬರೆಯಿರಿ ಅಂಕಲ್ ಅಂತಾ ಮೆಸೇಜ ಮಾಡಿದ್ದ. ನೀನು ಹೋಗಿ ಇಷ್ಟು ಬೇಗ ಒಂದು ವರ್ಷವಾಯಿತೇ? ನಂಬಲಾಗುತ್ತಿಲ್ಲ. ನೀನು ಅಲ್ಲಿ-ಇಲ್ಲಿ, ಹಿಂದೆ-ಮುಂದೆ ಸದಾ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳೆಂದರೆ ಕೊನೆಯಿಲ್ಲದ ಒರತೆ. ಈ ನೆನಪುಗಳೇ ನಮ್ಮ ಮನದ ಖಾಲಿತನ ತುಂಬಿದರೂ ಮನದ ಅದ್ಯಾವುದೋ ಮುಲೆಯಲ್ಲಿ ತಬ್ಬಲಿತನ ಮಾತ್ರ ತಪ್ಪದೆ ಕಾಡುತ್ತದೆ. ಅದೇನೋ ಅಮೂಲ್ಯವಾದದ್ದು ಕಳೆದುಕೊಂಡ ಭಾವನೆ ಯಾವತ್ತಿಗೂ ಇರುವಂಥದ್ದು. ಜೀವನದ ಪ್ರತಿ ಹೆಜ್ಜೆಗೂ ಜೊತೆಯಾಗಿ ನಮ್ಮೊಂದಿಗೆ ನೀನಿದ್ದೆ ಎನ್ನುವುದೇ ನಮಗೆ ಸಾಕಿತ್ತು. ಅದೆಂಥದೋ ನೆಮ್ಮದಿ ಭರವಸೆ ಆತ್ಮಸ್ಥೆರ್ಯ ಜೀವನದ ಸವಾಲಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿ ನೂರು ಆನೆಗಳ ಬಲ ಅನಾಯಾಸವಾಗಿಯೇ ನಮ್ಮಲ್ಲಿ ಬಂದು ಬಿಡುತ್ತಿತ್ತು. ನಾವು, ನಮಗೆ ಎನ್ನುವ ಬಹುವಚನ ಪದಗಳು ನಾನು ಉದ್ದೇಶಪೂರ್ವವಾಗಿಯೇ ಬಳಸುತ್ತಿದ್ದೇನೆ. ಕಾರಣ ನಾನು ಅನುಭವಿಸುತ್ತಿರುವ ಭಾವನೆಗಳನ್ನೆ ನಿನ್ನದೊಂದಿಗೆ ಒಡನಾಡಿದ ಬಹಳಷ್ಟು ಜೀವಗಳು ಕೂಡ ಇಲ್ಲಿ ಅನುಭವಿಸುತ್ತಿರುವದು ನನಗೆ ಗೊತ್ತು. ಹೌದು ಎಲ್ಲರಂತೆ ನನಗೂ ಸಹ ನಿನ್ನ ಅಗಲಿಕೆಯ ನೋವು ಕಾಡಿದೆ. ನಿನ್ನ ಹೆಸರೇ ನನಗೊಂದುಶಕ್ತಿಯಾಗಿತ್ತು.
ಆದರೆ ಈಗ ಅದನ್ನೆಲ್ಲ ಕಳೆದುಕೊಂಡು ಏಕಾಂಗಿಯಾದ ನೋವು, ಮೂಕವೇದನೆ. ನೀನು ಪದೇ ಪದೇ ನನ್ನ ಮುಂದೆ ನಿಂತು “ಬರಿ ಬರಿ” ಎಂದು ಪ್ರೇರೆಪಿಸುತ್ತಿರುವಂತೆ, ಪ್ರೋತ್ಸಾಹಿಸುತಿರುವಂತೆ ಅನಿಸುತ್ತದೆ. ನೀನು “ನನಗೆ ನಿನ್ನ ಬರವಣಿಗೆ ರವಿ ಬೆಳೆಗೆರೆಯವರ ಬರವಣಿಗೆ ಅನಿಸುತ್ತದೆ. ಹೀಗೆ ಬರೆಯುತ್ತಿರು ಒಂದು ದಿನ ದೊಡ್ಡ ಸಾಹಿತಿಯಾಗುತ್ತಿಯಾ ಅನ್ನುತ್ತಿದ್ದೆ”. ಆಗ ನಾನು ನಿನಗೆ “ನಾನು ಬರೆಯುವುದು ನನ್ನ ಮನಸ್ಸಿನ ನೆಮ್ಮದಿಗೊಸ್ಕರ ಹೊರತು ದೊಡ್ಡ ಸಾಹಿತಿಯಾಗಲು ಅಲ್ಲ” ಎಂದು ಉತ್ತರಿಸಿದಾಗ ನೀನು “ನೀನಗೊಸ್ಕರವೇ ಬರೆಯುತ್ತ ಹೋಗು ಅದು ಒಂದು ದಿನ ನಿನ್ನ ಆ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ” ಹೇಳುತ್ತಿದ್ದಾಗ ನಾನು ಹೇಳುತ್ತಿದ್ದೆ. “ಇಲ್ಲದ ಊರ ಉಸಾಬರಿ ಬಿಟ್ಟ ಒಂದು ಕಡೆ ಕುಳಿತು ನೀನು ಬರೆಯುತ್ತ ಹೋಗು ನೀನು ನಿನ್ನ ಬರಹದ ಮೂಲಕ ಎಂಥ ಕ್ರಾಂತಿ ಮಾಡ್ತೀಯಾ ನೋಡು” ಎಂದು ಹೇಳುತ್ತಿದ್ದೆ. ಅದಕ್ಕೆ ನೀನು ಬರೆಯಲಾಗದ ನಿನ್ನ ಅಸಹಾಯಕತೆಯ ಬಗ್ಗೆ ಶುಷ್ಕವಾಗಿ ನಕ್ಕು ಸುಮ್ನಾಗುತ್ತಿದ್ದೆ.. ಹೌದು ನನ್ನ ಲೇಖನಿ ಮೇಲೆ ನಿನಗೆ ಹೇಗೆ ಭರವಸೆ ಇತ್ತೋ ಹಾಗೇ ನಿನ್ನ ಬರವಣಿಗೆಯ ಶಕ್ತಿಯ ಬಗ್ಗೆ ನನಗೆ ಆ ನಂಬಿಕೆ ಇತ್ತು. ಕಾಲೇಜು ದಿನಗಳಲ್ಲಿ ನೀನು ಬರೆದಿದ್ದ ಕಥೆಗಳು,ಕವಿತೆಗಳು ಸಾಹಿತ್ಯಲೋಕದಲ್ಲಿ ಸಂಚಲನ ಸೃಷ್ಠಿಸಿದ್ದು ಮರೆಯುವಂತ್ತಿಲ್ಲ. ದೇವರ ಹೆಸರಿನಲ್ಲಿ, ಸರೋಜಾ ಸತ್ತಳು ಮುಂತಾದ ಕಥೆಗಳು, ಅನೇಕ ಕವಿತೆಗಳು ಇನ್ನೂ ನನ್ನಂಥ ಸಾಹಿತ್ಯಾಸಕ್ತರ ಸ್ಮ್ರತಿಪಟಲದಲ್ಲಿ ಜೀವಂತವಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ನೀನು ನಿನ್ನ ಪತ್ರಿಕೆಗೆ ಸಂಪಾದಕೀಯವಾಗಿ ಬರೆಯುತ್ತಿದ್ದ “ಅಂತರಂಗದ ಅಲೆಗಳು” ಅಂಕಣ ಹೃದಯ ಸ್ಪರ್ಶಿಯಾದ ಬರಹಗಳು.
ನೀನು ಏನೇ ಬರೆದರು ಅದು ಸಮಾಜ ಮತ್ತು ಸಮಾನತೆಯ ಕುರಿತು ಬರಿಯುತ್ತಿದ್ದೆ. ಸಾಮಾಜಿಕ ಬದಲಾವಣೆಗಳು ಬಯಸುತ್ತಿದ್ದ ನಿನ್ನ ಬರಹಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ, ಶೋಷಣೆಗೊಳಗಾದವರ ಪರವಾದ ಧ್ವನಿಯಾಗಿದ್ದವು. ಅವುಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ತರೋಣ ಎಂದು ಎಷ್ಟೋ ಬಾರಿ ಮಾತಾಡಿದೆವು ಆದರೆ ನೀನು ಸದಾ ನಿನ್ನ ವೈಯಕ್ತಿಕ ಸಮಸ್ಯೆಗಳಲ್ಲಿ, ದೌರ್ಬಲ್ಯಗಳಲ್ಲಿ ಮುಳುಗಿ ಬಿಡುತ್ತಿದ್ದರಿಂದ ನಿನ್ನ ಬರಹದ ಒಂದೇ ಒಂದು ಸಂಚಿಕೆ ಕೂಡ ಸಂಗ್ರಹಿಸಿ ಇಡದಷ್ಟು ನಿರ್ಲಕ್ಷ್ಯದ ಜೀವನ ಸಾಗಿಸಿದೆ. ಈಶ್ವರ ಪತ್ರಿಕೆ ಮತ್ತು ಬೆವರಿನ ಪತ್ರಿಕೆಗಳು ಕೂಡ ಇದೇ ಕಾರಣಕ್ಕೆ ಹಳ್ಳ ಹಿಡಿದವು. ಒಂದು ಕಾಲದಲ್ಲಿ ಆ ಪತ್ರಿಕೆಗಳು ಜಿಲ್ಲಾಮಟ್ಟದ ಹಾಯ್ ಬೆಂಗ್ಳೂರ್ ಪತ್ರಿಕೆಯಾಗಿ ರೂಪಿಸಲು ನಾವೆಲ್ಲಾ ಶ್ರಮ ಪಟ್ಟಿದ್ದೆವು. ಈ ಪತ್ರಿಕೆಗಳಿಗಾಗಿ ಹಗಲಿರುಳು ಶ್ರಮಿಸಿದ ಬೆವರ ಸುರಿಸಿದ ನಿನ್ನ ಸಂಗಾತಿಗಳ ಸಾವು ಕೂಡ ನಿನಗೆ ಭಾದಿಸಿದ್ದು ಸುಳ್ಳಲ್ಲ ಶ್ರೀಶೈಲ ಬೂದಿಹಾಳ, ಬಸವರಾಜ ಬೊರಶಟ್ಟಿ, ಈರಪ್ಪ ತಟಗಾರರಂತಹ (ಸಮಾಜದ ದೃಷ್ಟಿಯಲ್ಲಿ ನಿಷ್ಪ್ರಯೋಜಕ) ಸಂಗಾತಿಗಳನ್ನು ಕಟ್ಟಿಕೊಂಡು ಪತ್ರಿಕೆ ನಡೆಸಲು ಹೋಗುತ್ತಿದ್ದ ನೀನು ಈ ಗೆಳೆಯರು ನಿನ್ನ ಅಗಲಿ ಹೋದಾಗ ನೀನು ಒಳಗೊಳಗೆ ತುಂಬಾ ನೊಂದುಕೊಂಡಿದ್ದೆ. ಅದರ ನಂತರ ಮಹಲಿಂಗಯ್ಯಾ ನಂದಗಾಂವಮಠ, ಅಲ್ತಾಪ ಹವಾಲ್ದಾರ, ಅಕ್ಬರ ಪೀರಜಾದೆ ಅವರಂಥ ಪತ್ರಕರ್ತ ಮಿತ್ರರೊಂದಿಗೆ ಸೇರಿ ಪತ್ರಿಕೆಗೆ ಶಕ್ತಿ ಸಂಪಾದಿಸಲು ಪ್ರಯತ್ನಿಸಿದೆ. ಆದರೆ ಕೊನೆಗೂ ನಿನ್ನ ಇಚ್ಛಾಶಕ್ತಿಯ ಕೊರತೆಯ ಕಾರಣವೊ, ಆರ್ಥಿಕ ಸಮಸ್ಯೆಯ ಕಾರಣವೊ ಪತ್ರಿಕೆಗಳನ್ನು ನಿಯಮಿತವಾಗಿ ತೆಗೆಯಲು ಆಗಲಿಲ್ಲ ಎನ್ನುವುದು ಕೂಡ ನಿನ್ನ ಜೀವನದ ಒಂದು ಸೋಲಿನ ಅಧ್ಯಾಯವೇ ಆಗಿತ್ತು. ಹೌದು ಇನ್ನೂ ಹತ್ತಾರು ವಿಷಯಗಳ ಬಗ್ಗೆ ಬಹಳಷ್ಟು ಬರೆಯೋದಿದೆ. ನೀನು ನನಗೆ ಆಗಾಗ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತಿದೆ. ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ ಮನತಟ್ಟುವ ವಸ್ತು ಸಿಗುತ್ತಿಲ್ಲ ಎಂದು ಹೇಳಿದಾಗ ನೀನು “ನನ್ನ ಜಿವನವನ್ನೆ ನೋಡಿ ಬರೆಯುತ್ತ ಹೋಗು,ನಿನಗೆ ಸಾಕಷ್ಟು ವಸ್ತುಗಳು ಸಿಗುತ್ತವೆ” ಎಂದು ಹೇಳುತ್ತಿದ್ದೆ.
ಹೌದು ಅವನು ಹೇಳಿದಂತೆ ಅವನ ಜೀವನ ನನ್ನ ಸಾಕಷ್ಟು ಕತೆಗಳಿಗೆ ವಸ್ತು ಆಗಿದೆ. ನೀನೇ ನಿಂತು ಪ್ರಕಟಿಸಿ ಬಿಡುಗಡೆಗೊಳಿಸಿದ ಪ್ರವೆಂದರೆ… ಸಂಕಲನದ ಸಂಬಂಧಗಳು ಫಲಿತಾಂಶ ಕತೆಗಳು, ಜನ್ನತ್ ಸಂಕಲನದ ಅಪೂರ್ಣ ಹೋರಾಟ ಕತೆ, ಕೊನೆಯದಾಗಿ ನಾನು ಬರೆದ “ಬದಲಾಗುವ ಬಣ್ಣಗಳು” ನೀಳ್ಗತೆ ಕೂಡ ನಿನ್ನ ಜೀವನವನ್ನು ಆಧರಿಸಿ ಬರೆದಿದ್ದು. ಆದರೆ ನಿನ್ನ ಸಾವಿನ ನಂತರ ಏನೂ ಬರೆಯಲು ಆಗುತ್ತಿಲ್ಲ. ಬರೆಯುವುದಾದರು ಏನು? ನೀ ನಿರದ ಜಗತ್ತೇ ಶೂನ್ಯ ಅನಿಸುತ್ತಲಿದೆ. ನನ್ನ ಬರಹದಲ್ಲಿ ಶೂನ್ಯವನ್ನೇ ತುಂಬಿ ಬಿಡಲೇ ಅಥವಾ ಕಲ್ಲು ಹೃದಯಗಳ ಈ ಜಗದಿಂದ ನಿನ್ನಂತೆ ಹೇಳದೆ ಕೇಳದೆ ಸದ್ದಿಲ್ಲದೆ ಹೊರಟು ಬಿಡಲೇ? ಪ್ರೀತಿಪ್ರೇಮ ಸ್ನೇಹಗಳಂತ ಪದಗಳು ಮನಸ್ಸಿಗೆ ತುಂಬಾ ಹಿತ ಮತ್ತು ಮುದ ನೀಡುವ ಪದಗಳು, ಆದರೆ ಇವೆ ಪದಗಳು ಹೃದಯಕ್ಕೆ ವೇದನೆಯಾಗುವುದು ವಿಪರ್ಯಾಸದ ಸಂಗತಿ. ಜೀವನದ ಯಾವುದೋ ತಿರುವಿನಲ್ಲಿ ಆಕಸ್ಮಿಕವಾಗಿ ಹುಟ್ಟುವ ಸ್ನೇಹ ಪ್ರೇಮವೆಂಬ ಭಾವನೆಗಳು ಕಳೆದುಕೊಂಡಾಗ ಬೀಸುವ ಬಿರುಗಾಳಿ….ಸುನಾಮಿ…ಜ್ವಾಲಾಮುಖಿ ಇವೆಲ್ಲದಕ್ಕೂ ಮೀರಿದ ಯಾವುದಾದರು ಪದವಿದ್ದರೆ ಅದು ಪ್ರಳಯ ಒಂದೇ. ಅಂತಹ ಪ್ರಳಯವನ್ನೇ ನಿನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ಒಂದು ಜ್ವಾಲಾಮುಖಿಯೇ ನೀನಾಗಿದ್ದೆ. ನನ್ನಂಥ ಅದೆಷ್ಟೋ ಅಭಿಮಾನಿಗಳು, ಆತ್ಮೀಯರು, ಪ್ರೀತಿಸಿದವರು ಈ ಜ್ವಾಲಾಮುಖಿಯ ಬಿಸಿ ಅನುಭವ ನೀನು ಹೋದಮೇಲೆಯೂ ಅನುಭವಿಸುತ್ತಿದ್ದಾರೆ. ಪ್ರೀತಿ ಪ್ರೇಮ ಅನ್ನುವುದು ಕೆಲವರಿಗೆ ತಮ್ಮ ಸ್ವಾರ್ಥ ಸಾಧನೆಯ, ವ್ಯಾಪಾರದ ಸಾಧನವಾಗುತ್ತದೆ. ಇನ್ನೂ ನಿನ್ನಂಥ ಕೆಲವರಿಗೆ ಅದೇ ದೌರ್ಬಲ್ಯವಾಗುತ್ತದೆ. ನಿನ್ನಂಥವರು ಇಂಥ ನಿರ್ದಯಿ ವಿಶ್ವದಲ್ಲಿ ಒಂದು ಹನಿ ಪ್ರೀತಿಗಾಗಿ ಪರಿತಪಿಸುತ್ತಾರೆ.
ನೀನು ಕೂಡ ನಿನ್ನ ಪ್ರೀತಿಸಿದವರಿಗಾಗಿ ನಿನ್ನ ಜೀವನವನ್ನೇ ಸಮರ್ಪಿಸಿದ್ದೆ. ನಿನ್ನಲ್ಲಿದ್ದ ಜಾಣ್ಮೆ ಮತ್ತು ನಿನ್ನ ಜನ್ಮಕ್ಕೆ ಅಂಟಿಕೊಂಡು ಬಂದಿದ್ದ ಜಾತಿ ಬಳಸಿಕೊಂಡು ಬೆಳೆದಿದ್ದರೆ ನೀನೊಬ್ಬ ದೊಡ್ಡ ರಾಜಕಾರಣಿಯೋ, ನಾಯಕನೋ ಆಗಿ ಹೆಸರು ಮಾಡಬಹುದಿತ್ತು. ಆದರ ನೀನ್ಯಾವತ್ತೂ ಇಂಥ ಅಗ್ಗದ ಹೆಸರಿಗೆ, ಜನಪ್ರಿಯತೆಗೆ ಆಸೆ ಪಡಲಿಲ್ಲ. ನೀನು ನಿನ್ನದೆ ಲೋಕದಲ್ಲಿ ಮುಳಗಿ ಹೋದರೂ ನಿನ್ನಲ್ಲಿನ ಸಾಮಾಜಿಕ ತುಡಿತ ದೀನದಲಿತರ ಕುರಿತಾದ ಕಾಳಜಿ ಕಡಿಮೆಯಾಗಲಿಲ್ಲ. ಅಂಥವರನ್ನು ಕಂಡಾಗ ಬಹುವಾಗಿ ನೊಂದುಕೊಳ್ಳುತ್ತಿದ್ದ ನೀನು ಅವರ ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಟಕ್ಕೆ ಸಿದ್ದನಾಗಿರುತ್ತಿದ್ದೆ. ನಿನ್ನಿಂದ ಏನೂ ಆಗದಿದ್ದರೂ ಕೊನೆಗೆ ಪತ್ರಿಕೆಗಳಿಗೆ ಬರೆದು ಅಂತಹವರ ಕುರಿತು ಧ್ವನಿಯಾಗುತ್ತಿದ್ದೆ. ನಾನು ನಿನ್ನ ಬಗ್ಗೆ ಒಂದು ಪರಿಚಯ ಲೇಖನ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದ ನೆನಪು. “ಲೇಖನಿ ಖಡ್ಗಕಿಂತಲೂ ಹರಿತವಾದದ್ದು ನಿಜ ಅದರೆ ಯುದ್ಧ ಕಲೆ ಬಲ್ಲ ಶೂರನ ಕೈಯಲ್ಲಿ ಆ ಖಡ್ಗ ಇದ್ದರನೇ ಅದಕ್ಕೊಂದು ಬೆಲೆ”. ಎಂದು ಬರೆದಿದ್ದೆ ತನ್ನ ಕೈಯಲ್ಲಿರುವ ಪೆನ್ನು ನಿನಗೆ ಕೇವಲ ಒಂದು ಪೆನ್ನಾಗದೆ,ಅದೊಂದು ಖಡ್ಗವಾಗಿತ್ತು ಮತ್ತು ಅದನ್ನು ಹೇಗೆ ಬಳಸಬೇಕೆಂಬ ಕಲೆ ನಿನಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಬಹಳಷ್ಟು ಜನ ನಿನ್ನನ್ನು ಕಂಡರೆ ಹೆದರುತ್ತಿದ್ದರು. ಆದರೆ ಈ ಎಲ್ಲದರ ಕುರಿತು ನಾನು ನಿನಗಿಂತ ಚಿಕ್ಕವನಾದರು ನಿನಗೆ ಬಹಳಷ್ಟು ಬಾರಿ ಬುದ್ದಿವಾದ ಹೇಳಲು ಪ್ರಯತ್ನಿಸಿದ್ದೆ. ಕುಡಿದು ವ್ಯರ್ಥ ಕಾಲಾಹರಣ ಮಾಡುವ ಬದಲು ಏನಾದರು ಸಾಧಿಸು ಎಂದು ಹೇಳುತ್ತಿದ್ದೆ. ನಿನಗೆ ನೀನೇ ಸಮಸ್ಯೆಯಾದರೂ ವೈಯಕ್ತಿಕವಾಗಿ ನನ್ನ ಮತ್ತು ನನ್ನಂಥವರ ಎಲ್ಲ ಸಮಸ್ಯೆಗಳಿಗೆ ನೀನೇ ಪರಿಹಾರವಾಗಿದ್ದೆ. ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ಸಮಯ ಬಂದಾಗ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಸಿಗುತ್ತದೆ.
ಅಲ್ಲಿಯವರೆಗೂ ಮನುಷ್ಯ ತಾಳ್ಮೆಯಿಂದಿರಬೇಕು ಎಂದು ಮಾತಿನಲ್ಲೆ ಪರಿಹಾರ ಮಾಡುತ್ತಿದ್ದದ್ದು ನನಗಂತೂ ನನ್ನಲ್ಲಿ ತುಂಬಾ ಧೈರ್ಯ ತುಂಬಿದಂತಾಗುತ್ತಿತ್ತು. ನನ್ನ ಜೀವನದ ಒಂದು ತಿರುವು ನಾನು ಗೋಕಾಕದಿಂದ ವರ್ಗಾವಣೆಗೊಂಡು ಧಾರವಾಡಕ್ಕೆ ಬಂದು ನೆಲೆಸಿದೆ ನಿನ್ನ ಜೀವನದ ಕೊನೆ ದಿನಗಳಲ್ಲಿ ನಾವು ಜೊತೆಯಲ್ಲಿ ಇರಲಿಲ್ಲ ಎನ್ನುವ ಕೊರಗು ನನಗೆ ಸದಾ ಕಾಡುವಂಥದ್ದು. ನನ್ನ ತಮ್ಮನ ಸಾವಿನ ಸಂದರ್ಭದಲ್ಲಿ ನಾನು ನೀನು ಕೊನೆಯಬಾರಿ ಭೇಟಿಯಾಗಿದ್ದು. ತದನಂತರ “ನಿನ್ನೊಂದಿಗೆ ಮಾತಾಡುವುದು, ನಿನ್ನಿಂದ ಬರಿಸುವ ವಿಷಯ ಬಹಳವಿದೆ ಒಂದು ದಿನ ಧಾರವಾಡಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ನೀನು ಬರಲೇ ಇಲ್ಲ. ನಾನು ಈಗಲೂ ನಿನ್ನ ಬರುವಿಕೆಯನ್ನು ಎದುರುನೋಡುತ್ತಿದ್ದೆನೆ. ಭ್ರಷ್ಟರ ಪಾಲಿನ ಸಿಂಹ ಸ್ವಪ್ನವಾಗಿರುತ್ತಿದ್ದ ನೀನು ನನ್ನಂಥ ಸ್ನೇಹಿತರ ಪಾಲಿಗೆ ಪ್ರೀತಿಯ ಜೀವವಾಗಿದ್ದೆ. ನಿನ್ನ ಬಗ್ಗೆ ಎಷ್ಟು ಬರೆದರೂ ಸಾಲದು ನಿನ್ನ ಅಂತರಂಗ- ಬಹಿರಂಗ ಅರಿತವನಾದ ನಾನು ನಿನ್ನ ಬಗ್ಗೆ ಒಂದು ಪುಸ್ತಕವನ್ನೆ ಬರೆಯಬೇಕು. ಆದರೆ ಈ ಯಾಂತ್ರಿಕ ದ್ವಂದ್ವದಿಂದ ಕೂಡಿದ ಈ ಬದುಕಿನಲ್ಲಿ ಅದು ಸಾಧ್ಯವಾಗುತ್ತಿಲ್ಲ. ಮುಂದೆ ಸಾಧ್ಯವಾದರೆ ಖಂಡಿತ ಬರೆಯುತ್ತೇನೆ. ಈಗ ಸಧ್ಯ ನಿನ್ನೊಂದಿಗೆ ಒಡನಾಡಿದ ಕ್ರಾಂತಿಕಾರಿ, ಸಾಹಿತಿ ಮಿತ್ರರು ಒಂದೊಂದು ಲೇಖನ ಬರೆದು ಕೊಟ್ಟರೆ ಸಂಪಾದನೆ ಮಾಡಬಹುದು. ಇದಕ್ಕೆಲ್ಲ ರಾಜಶೇಖರನೇ ಖುದ್ದಾಗಿ ಓಡಾಡಿ ಲೇಖನಗಳನ್ನು ಸಂಗ್ರಹಿಸಬೇಕು. ಏಕೆಂದರೆ ನಿನ್ನಂತೆ ಅವನು ಪತ್ರಿಕೋದ್ಯಮದಲ್ಲಿ ತನ್ನ ಭವಿಷ್ಯ ಕಂಡುಕೊಳ್ಳುತ್ತಿದ್ದಾನೆ ಎನ್ನುವುದು ನನಗೆ ತುಂಬಾ ಸಂತಸದ ಸಂಗತಿ. ನಿನ್ನಲ್ಲಿರುವ ಧೈರ್ಯ, ಪ್ರಾಮಾಣಿಕತೆ ಅವನಿಗೆ ರಕ್ತಗತವಾಗಿ ಬಂದಿದೆ. ಅವನ ಭವಿಷ್ಯ ಉಜ್ವಲವಾಗಲಿ, ನಿಂತು ಹೋದ ನಿನ್ನ ಪತ್ರಿಕೆಗಳು ಮತ್ತೇ ಆರಂಭವಾಗಲಿ, ಅವನ ಕನಸುಗಳು ಸಹ ಸಾಕಾರಗೊಳ್ಳಲಿ ಎಂದು ಆಶೀರ್ವದಿಸು. ನಿನ್ನ ಪತ್ನಿ, ಮಕ್ಕಳು, ಸಂಬಂಧಿಗಳು, ಸ್ನೇಹಿತರು, ಅಭಿಮಾನಿಗಳೆಲ್ಲ ನಿನ್ನ ನೆನಪಿನಲ್ಲಿ ಕೊರಗುತ್ತಿದ್ದಾರೆ. ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬಾ.ನಮಗಾಗಿ ಅಲ್ಲದಿದ್ದರು ಈ ಡೊಂಕು ಸಮಾಜಕ್ಕೆ ನಿನ್ನ ಅಗತ್ಯವಿದೆ. ಹಿಂದೊಮ್ಮೆ ನಿನ್ನ ಬಗ್ಗೆ ಬರೆದ ಕವನ ನಿನ್ನ ಪ್ರೀತಿಸಿದ ಮನಸ್ಸುಗಳಿಗೆ ಓದಲು ಇಲ್ಲಿ ಮತ್ತೊಮ್ಮೆ ನೀಡುತ್ತಿದ್ದೇನೆ.
ನನಗೆ ನೀನು !
ನನಗೆ ನೀನು ಏನೇನೂ ಅಲ್ಲ
ಏನೆಲ್ಲವೂ ಹೌದು!
ಜೀವನದುಸಿರು ನೀನು
ಒಮ್ಮೊಮ್ಮೆ ಜೀವಕ್ಕೆ ಮಾರಕವಾಗುವ
ಅಲರ್ಜಿಯಂತೆ ನೀನು
ಒಮ್ಮೊಮ್ಮೆ ಸವಿಜೇನಿನಂತೆ
ಮಗದೊಮ್ಮೆ ವಿಷಪಾನದಂತೆ
ಅಲೆದಾಡುವ ನಾಯಿಯಂತೆ
ಆಗೊಮ್ಮೆ ಮದಬಂದ ಗಜದಂತೆ
ಮೃಷ್ಟಾಣದಂತೆ ಒಮ್ಮೊಮ್ಮೆ
ಹಸಿದ ನಾಯಿಯ ಮುಂದೆ ಹಾಕಿದ
ಅರ್ಧರೊಟ್ಟಿ ಹಳಚಿದ ಅನ್ನದಂತೆ
ಬೆಳಗುವ ಸೂರ್ಯನಂತೆ
ಚೂರಾದ ಚಂದಿರನಂತೆ
ಅಮೀರನಂತೆ, ಗರೀಬನಂತೆ
ರಾಜನಂತೆ, ಪಕೀರನಂತೆ
ಒಮ್ಮೊಮ್ಮೆ ರಾಜ ಘೋಷಾರದಂತೆ
ಮತ್ತೊಮ್ಮೆ ಹರಿದು ಚಿಂದಿಯಾದ
ಬಿಕ್ಷುಕನ ಮೈಮೇಲಿನ ಅಂಗಿಯಂತೆ
ಸುಂದರವಾಗಿ ಹೆಣೆದ ಹೆಣ್ಣಿನ ನೀಳಜಡೆಯಂತೆ
ಇನ್ನೊಮ್ಮೆ ಬುದ್ದಿ ಜೀವಿಯ ಕರಡಲು ಗಡ್ಡದಂತೆ
ಗುಡ್ಡದಂತೆ ಬೆಟ್ಟದಂತೆ ಬಯಲಿನಂತೆ
ನದಿಯಂತೆ, ಸಾಗರದಂತೆ
ಒಮ್ಮೊಮ್ಮೆ ಪವಿತ್ರ ಭಾವನೆ ಬರಿಸುವ
ಗಂಗಾಜಲದಂತೆ, ಮತ್ತೋಮ್ಮೆ ಮತ್ತೇರಿಸುವ ಸರಾಯಿಯಂತೆ
ಹಗಲುಹೊತ್ತು ವಾಸ್ತವದ ಕನ್ನಡಿಯಂತೆ
ರಾತ್ರಿ ಜಖಂಗೊಂಡ ಕನಸಿನಂತೆ
ಹೂಮುಳ್ಳಿನಂತೆ, ಇಲಿ ಹುಲಿಯಂತೆ
ಕಗ್ಗಲಿನಂತೆ, ಕಲ್ಲಿನಿಂದ ಪುಡಿಪುಡಿಯಾದ ಗಾಜಿನಂತೆ
ಆಕಾಶದಂತೆ, ಭೂಮಿಯಂತೆ
ಭೂಮಿಯನ್ನೆ ನುಂಗುವ ಸುನಾಮಿಯಂತೆ
ಕೋಗಿಲೆಯ ಮಧುರವಾದ ಕಂಠದಂತೆ
ಕಿರಾತನ ಕೂಗಿನಂತೆ……..
ಅದೆಷ್ಟು ಉಪಮೇಯ, ಹೋಲಿಕೆಗಳು
ಕೊಟ್ಟರೂ ಕಡಿಮೆಯೇ ನಿನೆಂದರೆ ನನಗೆ
ಸರ್ವಸ್ವವೂ ಹೌದು…. ಶೂನ್ಯವೂ ಹೌದು!
–ಅಶ್ಫಾಕ್ ಪೀರಜಾದೆ