ಲೇಖನ

ನೀನು ಅಣ್ಣನಲ್ವಾ…: ಸಿಂಧು ಭಾರ್ಗವ್ ಬೆಂಗಳೂರು

ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿರಬಹುದು. ಶ್ಯಾಮರಾಯರು ಮನೆಯಿಂದ ಹೊರಬಂದು, ಕಮಲಿಯಲ್ಲಿ ಮಾತಿಗಿಳಿದರು… “ಅಲ್ಲಾ…‌ನಾವೆಲ್ಲ ವಯಸ್ಸಾದವರು. ಊಟ‌ ಮಾಡಿ ಮಲಗೋ ಸಮಯ.. ನಿಮ್ಮ ಮಕ್ಕಳಿಗೆ ಶಾಲೆ ಇಲ್ಲ‌ ನಿಜ… ಆದರೆ ಗಲಾಟೆ ಮಾಡಬಾರದು ಅಂತ‌ ಒಂದು ಮಾತು ಹೇಳಬಾರದಾ?? ನನಗಂತೂ ಈ ಬಿಪಿ ,ಶುಗರ್ ನ ಮಾತ್ರೆ ತಿನ್ನೊದ್ರಿಂದ ಮಲಗಿದ್ರೆ ನಿದ್ದೇನೆ ಬರೋದಿಲ್ಲ… ಈ ಮಕ್ಕಳ ಗಲಾಟೆ ಸದ್ದು ಮಲಗೋಕೂ ಬಿಡೋದಿಲ್ಲ… ಯಾವಾಗಲೋ ಕರೆದು ಹೇಳಬೇಕು ಅಂತ ಎನಿಸಿದ್ದೆ….ಇಂದು ನೀನೇ ಸಿಕ್ಕಿದೆ ನೋಡು….” ಎಂದರು..

ಕಮಲಿಗೆ ಸಿಟ್ಟು ನೆತ್ತಿಗೇರಿತು. ಜೋರಾಗಿ ಬೊಬ್ಬೆ ಹಾಕುತ್ತ ಮನೆಯೊಳಗೆ ನಡೆದಳು. ದೊಡ್ಡ ಮಗ ರಾಜೇಶ್ ನ ಕರೆದು ಚೆನ್ನಾಗಿ ಕೆನ್ನೆಗೆ ನಾಲ್ಕೇಟು ಬಾರಿಸಿದರು. ನಾಲ್ಕು ಬೆರಳಿನ ಕೆಂಪು ದಡಿಕೆ ಅಚ್ಚಾಗಿ ಕೆನ್ನೆ ಮೇಲೆ ಬಂತು. ಅವನಿನ್ನೂ ಏಳು ವರುಷದ ಹುಡುಗ. ಅವನ ತಮ್ಮನಿಗೋ ಮೂರು ವರುಷವಷ್ಟೇ.. ತಂಟೆ ಮಾಡುವ, ಆಟವಾಡುವ ವಯಸ್ಸು
“ನಿನಗೆ ಎಷ್ಟು ಸಲಿ ಹೇಳಿದ್ದೇನೆ.. ಮನೆಯೊಳಗೆ ಆಟವಾಡಿ ಎಂದು.. ಅಕ್ಕ ಪಕ್ಕದ ಮನೆಯವರಿಂದ ಬೈಯಿಸೋ ಹಾಗೆ ಮಾಡ್ತೀರಾ… ಅಮ್ಮನ ಮರ್ಯಾದೆ ಕಳಿತೀರಾ… ಹೊರಗಡೆ ಯಾಕೆ ಹೋಗೋದು…” ಎಂದು ಗದರಿಸಿದಳು. ಅಮ್ಮ ಕೊಟ್ಟ ಏಟಿನ ನೋವಿನಿಂದ, ಭಯದಿಂದಲೇ “ಇಲ್ಲಮ್ಮ , ಚಿಂಟು (ತಮ್ಮ) ಹೋದದ್ದು.. ನಾ ಎಷ್ಟು ಕರೆದರೂ ಬರ್ಲಿಲ್ಲ…. ಅವನೇ ಬೊಬ್ಬೆ ಹಾಕಿದ್ದು…” ಎಂದ…

“ಅವನು ಬೊಬ್ಬೆ ಹಾಕಿದರೆ? ನೀನು ಸುಮ್ಮನೆ ಇದ್ಯಾ… ಅಣ್ಣ ನೀನು… ಒಳಗೆ ಕರ್ಕೊಂಡು ಬರಬೇಕಿತ್ತು… ಅವನನ್ನು ನೋಡ್ಕೋ… ಎಂದು ನಿನಗೆ ಜವಾಬ್ದಾರಿ ಕೊಟ್ಟಿದ್ದೇನಾ ಇಲ್ವಾ…” ಎಂದು ಗದರಿಸಿದರು. ಚಿಂಟು ಯಾವಾಗಲೂ ಹಾಗೆಯೇ ಅಣ್ಣ ಏನು ಕೈಯಲ್ಲಿ ಹಿಡಿದಿರುತ್ತಾನೋ ಅದು ಅವನಿಗೆ ಬೇಕು. ಕೊಡದಿದ್ದರೆ ಅಳುತ್ತಾ ರಚ್ಚೆ ಹಿಡಿಯುತ್ತಾನೆ.. ಕಿರಿಕಿರಿಗೊಳ್ಳುವ ತಾಯಿ.. “ಕೇಳಿದ್ದನ್ನು ಕೊಡು ಅವನಿಗೆ.. ಅಣ್ಣ ನೀನು.. ಅವನಿನ್ನು ಸಣ್ಣವ..” ಎಂದು ಕೈಯಿಂದ ತೆಗೆದು ಕೊಡಿಸುತ್ತಿದ್ದರು‌. ಚಿಂಟು ಅದನ್ನು ಕ್ಷಣಮಾತ್ರಕ್ಕೆ ಉಪಯೋಗಿಸಿ ಎಸೆಯುತ್ತಿದ್ದ. ಅವನಿಗೆ ಅದರ ಅವಶ್ಯಕತೆಯೂ ಇರುವುದಿಲ್ಲ.

ತಿಂಡಿ, ಊಟ, ಬಟ್ಟೆ, ಶಾಲಾ ಸಾಮಾಗ್ರಿಗಳು ಏನೇ ಇದ್ದರು ಸರಿ ಅಣ್ಣನ ಹತ್ತಿರ ಇರುವುದು ತನಗೆ ಬೇಕು ಎಂದು ಎರಡನೇ ಮಗು ಹಟಮಾಡುವುದು ನಾವು ನೋಡಬಹುದು. ಅದರ ಹಿಂದಿನ ಉದ್ದೇಶ “ಆ ವಸ್ತು ಸುಂದರವಾಗಿ ಆಕರ್ಷಕವಾಗಿ ಕಾಣಿಸುತ್ತಿರಬಹುದು, ಅಥವಾ ಮತ್ಸರವೂ ಇರಬಹುದು, ಅಣ್ಣನಿಗೆ ಬೈದು ನಾಲ್ಕೇಟು ಹೊಡೆಯಲಿ ಎಂದಿರಬಹುದು..” ಒಟ್ಟಾರೆ ಏನೆಂದು ಚಿಕ್ಕವನಲ್ಲಿಯೇ ಕೇಳಬೇಕು.
ಆಗೆಲ್ಲ ಅಣ್ಣನಾದವನ ಮನಸ್ಸು ಹೇಗೆ ವರ್ತಿಸುತ್ತದೆ. ಎಷ್ಟು ಬೇಸರವಾಗಬಹುದು? ಒಮ್ಮೆ ಯೋಚಿಸಿ. ತನ್ನೊಳಗೆ ಗೊಣಗುತ್ತಾ ತಮ್ಮನ ಮೇಲೆ ಸಣ್ಣ ಕೋಪ ದ್ವೇಷದ ಕಂದಕ ಸೃಷ್ಟಿಯಾಗಬಹುದು. ಅಳಬಹುದು. ಮಾತುಕಡಿಮೆ ಮಾಡಬಹುದು. ಚಟುವಟಿಕೆ ಚುರುಕುತನ ಕಡಿಮೆಮಾಡಬಹುದು. ಮಂಕಾಗಬಹುದು. ತಾನು ಆಸೆಯಿಂದ ತೆಗೆದುಕೊಂಡದ್ದು ಸಣ್ಣವನು ಹಾಳು ಮಾಡಿದಾಗ ಸಂಕಟಪಡಬಹುದು. ಅದನ್ನು ಹೆತ್ತ ತಾಯಿ ಗಮನಿಸದೇ ಅಲ್ಲಿನ ಸಂದರ್ಭವನ್ನು ತಿಳಿಗೊಳಿಸಿ ಅಣ್ಣ-ತಮ್ಮ ಇಬ್ಬರಿಗೂ ಸಮಾನವಾಗಿ ಹಂಚುವುದೋ ಅಥವಾ “ಇಬ್ಬರಿಗೂ ಬೇಡ” ಎಂದು ಹೇಳಿ ವಿಷಯವನ್ನೇ ಮಾರ್ಪಡಿಸುವುದೋ ಹೀಗೆ ತನ್ನ ಜಾಣ್ಮೆ ಪ್ರದರ್ಶನ ಮಾಡದಿದ್ದರೆ ಸಮಸ್ಯೆ ಬಿಗಡಾಯಿಸುವುದು ಸುಳ್ಳಲ್ಲ.

ಇದರ ಪರಿಣಾಮ: ಅಣ್ಣನಾದವನು ಅಂದರೆ ಹಿರಿ ಮಗನಾದವನ ಮನಸ್ಸು ಸಂಕುಚಿತಗೊಳ್ಳಬಹುದು. ತನಗೇನು ಬೇಡ, ಎಲ್ಲ ಅವನಿಗೇ ಇರಲಿ ಎಂಬ ತ್ಯಾಗಭಾವವೋ ಅಥವಾ ಸರಳತೆಯ ಗುಣ ಮೈಗೂಡಿಸಿಕೊಳ್ಳಬಹುದು‌. ನನ್ನ ಬದುಕನ್ನು , ಬೇಕು-ಬೇಡಗಳನ್ನು ಕಿತ್ತುಕೊಂಡವ ಎಂಬ ದ್ವೇಷ ಮೂಡಬಹುದು. ಚಿಕ್ಕವನಿದ್ದಾಗ ಉಂಟಾಗ ಏಟಿನ ಅಚ್ಚು, ದೊಡ್ಡವನಾದ ಮೇಲೂ ಮನಸ್ಸಿನಾಳಕ್ಕೆ ಬೇರೂರಬಹುದು. ಮಾತನಾಡಿಸದೇ ಇರಬಹುದು.

ಸಹೋದರರು ಆಪ್ತರಾಗಿ ಒಬ್ಬರಿಗೊಬ್ಬರು ಸ್ನೇಹಿತರಾಗಿ ಬದುಕಿ ಬಾಳಬೇಕಾದವರು. ಹಾಗೆಯೇ ಇರಲು ಹೆತ್ತವರ ಪಾತ್ರ ಬಹುಮುಖ್ಯವಾಗುತ್ತದೆ. ಹೋಲಿಕೆ ಮಾಡದೇ, ಮೂದಲಿಸದೇ, ತಾತ್ಸಾರ ಮಾಡದೇ, ಸಣ್ಣ ಸಣ್ಣ ತಪ್ಪಿಗೂ ಶಿಕ್ಷಿಸದೇ, ಸಣ್ಣವನ ತಪ್ಪಿಗೆ ಕ್ಷಮಿಸಿ, ಮುದ್ದಿಸಿ ಹಾಗೆಯೇ ಹಿರಿಯ ಮಗನ ತಪ್ಪಿಗೆ ಅವನೆದುರೇ ಗದರಿಸಿ ಶಿಕ್ಷಿಸುವುದು ಸರಿಯಲ್ಲ. ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಬೇಕು‌. ಮಕ್ಕಳ ಮನಸ್ಸು ತುಂಬಾ ಮೃದು. ನೆನಪಿರಲಿ.

-ಸಿಂಧು ಭಾರ್ಗವ್ ಬೆಂಗಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *