ಪ್ರೀತಿ ಪ್ರೇಮ

ನೀನಿಲ್ಲದೆ ನನಗೇನಿದೆ … : ಟಿ . ಜಿ. ನಂದೀಶ್

 

ಜೀವದ ಗೆಳತಿ ,

ಆ ದಿನಗಳು, ಆ ಕ್ಷಣಗಳು ನನ್ನ ಪಾಲಿಗೆ ಸದಾ ಹಸಿರು. ಯಾಕಂದ್ರೆ ನನ್ನ ಉಸಿರು ನಿನ್ನ ತಾಕುವಷ್ಟು ಹತ್ತಿರದಲ್ಲಿದ್ದೆ ನೀನು, ನನ್ನುಸಿರು ನಿನ್ನ ಹೆಸರನ್ನೇ ಉಸಿರಾಗಿಸಿಕೊಂಡು ಉಸಿರಾಡುತ್ತಿದ್ದ ದಿನಗಳವು. ನಿನ್ನ ಮುದ್ದು ಮುಖ ನೋಡದೆ ಹತ್ತಿರತ್ತಿರ ಎರಡು ವರುಷಗಳೇ ಸರಿದು ಹೋದವು . ಕಾಲಗಳು ಬದಲಾದವು , ವ್ಯಕ್ತಿಗಳು ಬದಲಾದರೂ , ಕೊಂಚ ಮಟ್ಟಿಗೆ ಬದುಕು ಬದಲಾಯಿತಾದರೂ , ನಿನ್ನ ಮೇಲಿನ ನನ್ನ ಪ್ರೀತಿ ಒಂದಿನಿತು ಬದಲಾಗಲಿಲ್ಲ, ಬಡವಾಗಲಿಲ್ಲ , ಅದರ ಬದಲಿಗೆ ಮತ್ತಷ್ಟು ಬಲವಾಯಿತು , ಮತ್ತೆ ಮತ್ತೆ ನಿನ್ನ ಮೇಲೆ ಒಲವಾಯಿತು.

ನೀ ನನಗೆ ಇಂದು ನಿನ್ನೆ ನೋಡಿದ ಹುಡುಗಿಯಲ್ಲ, ನಿನಗೆ ನನ್ನೊಲವ ಮೊದಲ ಬಾರಿಗೆ ನಿವೇದಿಸಿಕೊಳ್ಳಲು, ಒಂದು ಕಾಲಕ್ಕೆ ಸಂಗಾತಿಯಾಗಿದ್ದವಳು, ಈ ಕ್ಷಣಕ್ಕೂ ಮನದೊಡತಿಯಾಗಿರುವವಳು. ನಾವು ಜೊತೆಗಿದ್ದ ದಿನಗಳು ಬೆರಳೆನಿಕೆಯಷ್ಟಾದರೂ , ಜೊತೆಯಾಗಿ ಕಂಡ ಕನಸುಗಳು ಎಣಿಕೆಗೆ ನಿಲುಕದಷ್ಟು . ಬಂಗಾರ ,ಚಿನ್ನ , ಪುಟ್ಟ, ಪಾಪು, ಡಿಯರ್ , ಡಾರ್ಲಿಂಗ್ ,ಸ್ವೀಟ್ ಹಾರ್ಟ್ , ಜಾನು ಎಂಬೆಲ್ಲ ಪದಗಳು ನನ್ನ ಬಾಯಲ್ಲಿ ಬಂದದ್ದು ನಿನ್ನ ಕೂಗಿ ಕರೆಯಲ್ಲಿಕ್ಕಾಗಿಯೇ …..

ಅದರಲ್ಲಿಯಂತು ನಾನು ನಿನ್ನ ಬಂಗಾರಿ … ! ಎಂದು ಕರೆದಾಗ ನೀ ಹೂ ನಗು ಬೀರುತ ಹೂಂ ಗುಡುತ್ತಿದ್ದೆಯಲ್ಲ, ಆಗೆಲ್ಲಾ ಈ ನನ್ನ ಉಸಿರಾಡೋ ಯಂತ್ರಕ್ಕೆ ಅದೇನೋ ಖುಷಿ, ಸುಮ್ಮನೆ ಒಲ್ಲದ ಮನಸಿನಲ್ಲಿ ಕೈ ಚಾಚಿದವನಿಗೆ, ನಕ್ಷತ್ರವೇ ಕೆಳಗಿಳಿದು ಕೈ ಬೆರಳಿಗೆ ಎಡ ತಾಕಿದರೆ ಹೇಗಾಗಬೇಡ …. ಹಾಗೆ ನನಗೂ ಆಗಿತ್ತು .

ನಿಂಗೆ ನೆನಪಿದೆಯಾ …..ನೀನು ನನ್ನ ಜೊತೆ ಇರುವಾಗ ನಾ ಯಾವಾಗ್ಲೂ ನಿಂಗೊಂದು ಪ್ರಶ್ನೆ ಕೇಳ್ತಾ ಇದ್ದೆ   “ಬಂಗಾರ ನನ್ನ ಯಾವತ್ತು ಒಂಟಿ ಮಾಡೋಲ್ಲ ಅಲ್ವಾ” …..? ಅಂತ ನಾ ಕೇಳಿದಾಗ ,ಅದಕ್ಕೆ ಪ್ರತಿಯಾಗಿ ನೀನು “ಕೋತಿ ನಿನ್ನ ಬಿಟ್ಟು ನಾನೀರ್ತಿನೇನೋ” ಅಂದಾಗ ನಾ ಮೌನಿಯಾಗ್ತಿದ್ದೆ . ಮನಸೊಳಗೆ ದೇವ್ರೇ ಪ್ಲೀಸ್ ಇವಳನ್ನ ನಂಗೆ ಕೊಡಪ್ಪ ಅಂತ ನೂರು ಅಪ್ಲಿಕೇಶನ್ ಹಾಕ್ತಿದ್ದೆ .

ನನ್ನ ಮನಸು ಒಂಥರಾ ….. ಯಾವುದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ್ದು ,  ನಿನ್ನನ್ನು ಕಂಡ ಕ್ಷಣ ಮಾತ್ರದಲ್ಲೇ  ಬಿಗಿದಪ್ಪಿಕೊಂಡಿತ್ತು .

ನಮ್ಮ ಮೊದಲ ಭೇಟಿ, ಮೊದಲ ಅಪ್ಪುಗೆ , ಮೊದಲ ಮುತ್ತು ಇವೆಲ್ಲವುಗಳ ಅದೇಗೆ ತಾನೇ ಮರೆಯಲಾದೀತು. ಫಸ್ಟ್ ಟೈಮ್ ನಾನು ನಿನ್ನ ಹಗ್ ಮಾಡಿದಾಗ , ಒಂದಿಷ್ಟು ಗಾಳಿ ಕೂಡ ನುಸುಳೋಕೆ ಗ್ಯಾಪ್ ಕೊಡದೇ ತಬ್ಕೊಂಡಿದ್ದೆ . ಅದಕ್ಕೆ ನೀನು “ಕೋತಿ ನೀನು ಇಷ್ಟು ಬಿಗಿಯಾಗಿ ಅಪ್ಪಿಕೊಂಡ್ರೆ ನಾನು ಸತ್ತೋಗ್ತೀನಿ” ಅಂತಾ ಹುಸಿ ಮುನಿಸು ತೋರಿದ್ದನ್ನ ನಾನಿನ್ನು ಮರೆತಿಲ್ಲಾ ,ಅಂಡ್ ಐ ನೋ ನೀನು ಮರೆತಿರೋದಿಲ್ಲ . ಇನ್ನು ಮೊದಲ ಮುತ್ತು ವಿನಿಮಯವಾದ ಆ ಕ್ಷಣ ಅದು ವರ್ಣಿಸಳದಲ ….! ನಾಲ್ಕು ತುಟಿಗಳು ಏಕವಾಗಿದ್ದವು , ಅದರೊಳಗಣ ಮತ್ತಿಗೆ ನಮ್ಮಿಬ್ಬರ ಮಾತುಗಳು ಮೌನಿಯಾಗಿದ್ದವು . ಅಲ್ಲೂ ಕೂಡ ಹೋಗೋ ನಿನ್ನ ಮೀಸೆ ಚುಚ್ಚತ್ತೆ ಅಂತಾ ನೀ ತಕರಾರು ತೆಗೆದಿದ್ದೆ . ಮರು ದಿನ ನಾನು ನಿನ್ನ ಎದುರು ಕ್ಲೀನ್ ಶೇವ್ ನಲ್ಲಿ ನಿಂತು “ಇದೆಂಗೆ” ಎನ್ನುವ ರೀತಿಯಲ್ಲಿ ಕಣ್ ಸನ್ನೆ ಮಾಡಿದಾಗ “ಛೀ ಪೋಲಿ” ಅಂದವಳು ನೀನೆ ಅಲ್ವಾ……..?

ಆ ನಿಷ್ಕಲ್ಮಶ ಪ್ರೀತಿ , ಆ ಆತ್ಮೀಯತೆ , ಈಗೆಲ್ಲಿ ಮರೆಯಾಯ್ತು ..? ನನ್ನ ಕಾಲಿಗೆ ಒಂದು ಕಲ್ಲು ತಾಗಿದರೂ ಕಣ್ಣೀರಾಗುತ್ತಿದ್ದ ನೀನು ಈಗೇಕೆ ಮನಸನ್ನು ಕಲ್ಲು ಮಾಡಿಕೊಂಡೆ…? “ಹೇಳಿ ಹೋಗು ಕಾರಣ” ಕಾದಂಬರಿಯ ಕಥಾನಾಯಕಿಯ ಪ್ರತಿರೂಪವೇ ನೀ ಎಂಬಂತೆ ಏನೊಂದು ಕಾರಣ ನೀಡದೆ ನನ್ನೆಡೆಗೆ ಬೆನ್ನು ಹಾಕಿ ನಡೆದದ್ದು ಎಷ್ಟು ಸರಿ … ? ಯಾರದೋ ನಂಬಿಕೆ ಗಳಿಸಲು ನಿನ್ನನ್ನೇ ನಂಬಿದ ಜೀವವ ತೊರೆವುದು ನ್ಯಾಯವ ….?

ಪ್ರತಿ ಬಾರಿ ನನಗೆ ಬಿಕ್ಕಳಿಕೆ ಬಂದಾಗ ನೀನೆ ನನ್ನ ನೆನೆದಿರಬೇಕು ಎಂದುಕೊಳ್ಳುತ್ತೀನಿ , ಆಕಳಿಕೆ ಬಂದಾಗ ಕನಸಲಿ ಭೇಟಿಯಾಗಲು ನೀನೆ ಕರೆಯುತ್ತಿದ್ದೀಯಾ ಅಂದುಕೊಳ್ಳುತ್ತೀನಿ .

ನೀನೀರದೆ ಬದುಕೋಕೆ ನನ್ನ ಕೈಯಲ್ಲಿ ಆಗೋಲ್ಲ . ನಾವು ಒಟ್ಟಾಗಿ ಕಂಡ ಕನಸುಗಳಿಗೆ ನಾ ಒಬ್ಬಂಟಿ ಪೋಷಕನಾಗಿ ಉಳಿಯಲಾರೆ, ಮತ್ತಾವುದೋ ಹೆಣ್ಣ ಸಂಗ ಮಾಡಿ ಬಾಳಲಾರೆ, ಬಯಸಿದ್ದೆಲ್ಲ ಕಣ್ಮುಂದೇ ಇರುವಾಗ “ಸಮ್ ಥಿಂಗ್ ಇಸ್ ಮಿಸ್ಸಿಂಗ್” ಅನ್ನೋ ಮನಸು , ನೀ ಜೊತೆಯಲಿದ್ದಾಗ “ಐ ಹ್ಯಾವ್ ಎವೆರಿ ಥಿಂಗ್” ಅನ್ನತ್ತೆ ಕಣೇ ..

ಈ ಪುಟ್ಟ ಕವನ ನಿನಗಾಗಿ …..

 

ನಿನ್ನ ಮುತ್ತಿನ ಅಮಲು

ನಿನ್ನ ಬೆವರಿನ ಘಮಲು

ನನ್ನದೇ , ನನ್ನದೇ . …..

 

ನಿನ್ನ ಕಣ್ಣೋಳಗಣ ನಿರೀಕ್ಷೆ

ನಿನ್ನ ತೋಳೋಳಗಣ ಸಾಂತ್ವನ

ನನಗಾಗೇ , ನನಗಾಗೇ …..

 

ನನ್ನೆದೆಯೊಳಗಿನ ಹೆಸರು

ನನ್ನೆದೆಯೊಳಗಿನ ಉಸಿರು

ನೀನೇ, ಬರಿ ನೀನೇ ………

 

ಐ ಲವ್ ಯು ಕಣೇ …………

ನಿನ್ನ ಆಗಮನದ ನಿರೀಕ್ಷೆಯಲ್ಲಿ

ನಿನ್ನ ಇನಿಯ

 

-ಟಿ . ಜಿ. ನಂದೀಶ್ .

ತೀರ್ಥಹಳ್ಳಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ನೀನಿಲ್ಲದೆ ನನಗೇನಿದೆ … : ಟಿ . ಜಿ. ನಂದೀಶ್

 1. ಬಂಗಾರಿ!
  ಬರ್ತಾರೆ ಬಿಡಿ. 🙂
  "ಬಯಸಿದ್ದೆಲ್ಲ ಕಣ್ಮುಂದೇ ಇರುವಾಗ “ಸಮ್ ಥಿಂಗ್ ಇಸ್ ಮಿಸ್ಸಿಂಗ್” ಅನ್ನೋ ಮನಸು , ನೀ ಜೊತೆಯಲಿದ್ದಾಗ “ಐ ಹ್ಯಾವ್ ಎವೆರಿ ಥಿಂಗ್” ಅನ್ನತ್ತೆ ಕಣೇ .."
  ಇಷ್ಟ ಆಯ್ತು, ಚೆನ್ನಾಗಿದೆ ಸರ್. ಧನ್ಯವಾದಗಳು.

 2. ಹುಚ್ಚು ಹರೆಯದ ಪ್ರೇಮ ನಿವೇದನೆ. ಇಷ್ಟ ಆಯ್ತು. 'ನೀನೀರದೆ ಬದುಕೋಕೆ ನನ್ನ ಕೈಯಲ್ಲಿ ಆಗೋಲ್ಲ' ಅನ್ನೋದು 'ನೀನಿಲ್ಲದೆ ನನಗೇನಿದೆ'ಗಷ್ಟೇ ಸೀಮಿತವಾಗಿರ್ಲಿ, ನಂದೀಶಾ… Like it 🙂

 3. ಚನ್ನಾಗಿದೆ ನಿಮ್ಮ ಪ್ರೇಮ ನಿವೇದನೆ….ನಿಮ್ಮ ನಿರೀಕ್ಷೆ ಫಲಿಸಲಿ 

 4. ಈ ಲೇಖನ ಅತಿಮಧುರ ಅನುರಾಗ ಎನ್ನುವ ಮಾತಿನಂತೆ ನೀತಿ ತಿಳಿಸುತ್ತದೆ ಒಬ್ಬ ಭಗ್ನ ಪ್ರೇಮಿಯ ಚಿತ್ರಣ ತಿಳಿಸುತ್ತದೆ ಓದುತ್ತಾ ಹೋದರೆ ಅತಿ ಸಂತೋಷವೆನಿಸುತ್ತದೆ ಹೀಗೆ ಓದಿ ಹಾಗೆ ಬಿಡುವುದು ಆಗುವುದಿಲ್ಲ ಪ್ರೀತಿಯ ನೈಜತೆ ಕೊಡುವ ನಿಮ್ಮ ಈ ಲೇಖನ ಸುಂದರವಾಗಿದೆ ಈ ಪ್ರೀತಿಯ ಲೇಖನ ಓದಿ ಮನಸ್ಸಿಗೆ ಅತಿ ಆನಂದವಾಯಿತು

 5. ನಿಮ್ಮ ಸಲಹೆಯನ್ನು ಸ್ವೀಕರಿಸುವೆ ಧನ್ಯವಾದಗಳು ಉಪೇಂದ್ರ ಅವರೇ 

Leave a Reply

Your email address will not be published. Required fields are marked *