ಈಗಷ್ಟೇ ನಿನ್ನೊಡನೆ ಮಾತಾಡಿ ಫೋನಿಟ್ಟು ಈಚೆಗೆ ಬರುತ್ತಿದ್ದೇನೆ ಗೆಳೆಯಾ. ಸಣ್ಣಪುಟ್ಟ ಅಲೆ ಸೇರಿ ಹೆದ್ದೆರೆಯಾಗುವಂತೆ ನನ್ನೊಳಗೆ ನಿನ್ನ ಬಗೆಗಿನ ಆಲೋಚನೆಗಳು ದಟ್ಟವಾಗುತಲೇ, "ಮನದಲ್ಲಿ ನೆನೆದವರು ಎದುರಲ್ಲಿ" ಎಂಬಂತೆ ನೀನು ಅಲ್ಲೆಲ್ಲಿಂದಲೋ ಸಂಪರ್ಕಿಸಿರುತ್ತೀಯಾ. ಇದು ಮೊದಲೆಲ್ಲ ತುಂಬ ಅಚ್ಚರಿಯೆನಿಸುತ್ತಿತ್ತು. ಈಗೀಗ ನಿನ್ನ ಕುರಿತಾದ ಒಂದೊಂದೇ ಯೋಚನೆ ಬರುಬರುತಾ ಕಾಡತೊಡಗಿ ತೀವ್ರವಾಗಿ ಆವರಿಸಿಕೊಳುತಲೇ ನಿನ್ನ ಕರೆಯ, ನಿನ್ನ ಸಂದೇಶವೊಂದರ ಅಥವಾ ಸಾಕ್ಷಾತ್ ನಿನ್ನ ಬರುವಿಕೆಯ ಗಾಢನಿರೀಕ್ಷೆಯೊಂದು ತನ್ನಷ್ಟಕ್ಕೆ ಮೂಡಿಬರುತ್ತದೆ. ಅದು ಹೇಗಿರುತ್ತದೆ ಅಂದರೆ, ಕತ್ತಲನ್ನು ಮೆಲ್ಲ ಸರಿಸುತ್ತಾ ನಾಕೂ ದಿಕ್ಕಿಂದ ನಸುಕು ಅಡಿಯಿಡುವಾಗ ಸಮುದ್ರದ ಅದೋ ಆ ಮೂಡಣತೀರದಾಚೆ ಇದ್ದಕ್ಕಿದ್ದಂತೆ ಸೂರ್ಯ ಭರಭರನೆ ಮೂಡಿಬರುತ್ತಾನಲ್ಲಾ, ಥೇಟ್ ಹಾಗೆ! ಒಂದು ವೇಳೆ ಆ ಹೊತ್ತು ನೀನು ಸಂಪರ್ಕಿಸಲಿಲ್ಲ ಅಂದುಕೋ, ನನ್ನ ಪಾಲಿಗೆ ಅಂದು ಸೂರ್ಯ ಹುಟ್ಟಿದ್ದು ಲೆಕ್ಕಕ್ಕಿಲ್ಲದ ಹಾಗೇ ಕಣೋ..
ಇದೋ ನನ್ನ ಮಹಡಿಯ ಬಿಸಿಲುಮಚ್ಚಿನಡಿ ಕೂತು ಕಣ್ಮುಚ್ಚಿ ನಿನ್ನ ನಗು, ಸಣ್ಣಸಿಟ್ಟು, ನಿನ್ನ ಪ್ರಶ್ನೆ-ಸಮಾಧಾನಗಳು, ದೂರು, ಮೆಚ್ಚುಗೆ ಎಲ್ಲ ಮುಖಭಾವಗಳನ್ನು ಅಷ್ಟು ಹೊತ್ತಿಂದಲೂ ನೆನೆಯುತ್ತಿದ್ದೆ. ಮುಚ್ಚಿದ ಪಕಳೆಯಡಿಯಲೇ ರಾತ್ರಿರಾಣಿ ನಕ್ಕಳೇನೋ, ಮೆಲ್ಲ ಒಂದು ಘಮದಲೆ ಹಾಗೇ ನನ್ನ ಮೂಗು ಸವರಿಹೋಯ್ತು. "ಅವನಲ್ಲಿ ಯಾರ ಜೊತೆಗೋ ಲಲ್ಲೆಗರೆಯುತ್ತಿರುವಾಗ ನೀನಿಲ್ಲಿ ಏನೇ ಹೀಗೆ, ಪೆದ್ದಿಯ ಹಾಗೆ, ಅವ ಬರದ ಹೊತ್ತೇ ಅವನ ಸಲುವಾಗಿ ಅರಳುವ ನನ್ನ ಹಾಗೆ?" ಅಂದಳು ಅನ್ನಿಸಿತು ನನಗೆ. ಇಲ್ಲಪ್ಪಾ, ನಿನ್ನ ಗಿಣಿಯ ಬಗ್ಗೆ ನಾನ್ಯಾರಿಗೂ ಹೇಳಿಲ್ಲ. ಜಗತ್ತಿನಲ್ಲಿ ಇನ್ಯಾರ ಜೊತೆಯಲ್ಲೂ ಹೇಳಿಕೊಳ್ಳದ ನಿನ್ನ ಗಿಣಿ ಮತ್ತದರಲ್ಲಿ ಹೊಕ್ಕು ಕೂತಿರುವ ನಿನ್ನ ಜೀವಂತಿಕೆಯ ಸತ್ಯವೊಂದನ್ನು ನನ್ನ ಜೊತೆ ಹಂಚಿಕೊಂಡಿರುವೆ ನೀನು, ನನ್ನಿಂದಾಚೆ ಅದು ಬರಲಾರದೆಂಬ ನಂಬಿಕೆಯ ಮೇಲೆ. ನಿನ್ನ ನಂಬಿಕೆಯನ್ನು ಕಳೆದುಕೊಳ್ಳುವುದೂ ಒಂದೇ, ನಾನಿಲ್ಲವಾಗುವುದೂ ಒಂದೇ ನನ್ನ ಮಟ್ಟಿಗೆ. ಆ ಹೊತ್ತು ನೀನು ನಿನ್ನ ಗಿಣಿಯ ಮುದ್ದುಮಾತುಗಳಲ್ಲಿ ಕಳೆದುಹೋಗಿರುವುದನ್ನು ನಿನ್ನಂಗಳದಲ್ಲಿರುವ ಇವಳ ಸಖಿಯೇನಾದರೂ ಹೇಳಿದ್ದಳೇನೋ…. ನಿನಗಿಷ್ಟವೆಂದು ರಾತ್ರಿರಾಣಿಯ ಬಳ್ಳಿಯನ್ನು ನಾನೂ ಇಲ್ಲಿ ಹಬ್ಬಿಬಿಟ್ಟದ್ದು. ನನಗಿಷ್ಟವಿರಲಿಲ್ಲವೆಂದಲ್ಲ, ನಿನ್ನ ಅಂಗಳದಲ್ಲಿ ರಾತ್ರಿರಾಣಿಯ ಬಳ್ಳಿ ಪೊಗದಸ್ತಾಗಿ ಹಬ್ಬಿದ ಫೋಟೋ ನೀನು ಕಳಿಸುವವರೆಗೂ ನನ್ನ ಕಣ್ಣೆದುರು ಸದಾ ಇರಬೇಕನಿಸುವಷ್ಟು ರಾತ್ರಿರಾಣಿ ಆಪ್ತಳೆನಿಸಿರಲಿಲ್ಲ.
ನಿನ್ನೆಯಷ್ಟೇ ಇಲ್ಲಿ ತುಂತುರುಮಳೆಯಾಯಿತು! ಮಳೆಗಾಲಕ್ಕೆ ಟಾಟಾ ಬಾಯ್ ಬಾಯ್ ಹೇಳಿ ಕಳಿಸಿ, ಶಿಶಿರನ ಉದುರಿಸುವಾಟ ಬರುಬರುತ್ತಾ ಆಟಾಟೋಪವಾಗುತ್ತಿರುವುದನ್ನ ನೋಡುತ್ತಾ, ವಸಂತನ ಚಿಗುರುಬೆರಳುಗಳ ನೇವರಿಸುವಿಕೆಗೆ ಕಾತುರದಿಂದ ಕಾಯುತ್ತಾ ಇರುವಾಗ ಈ ಹನಿರಾಶಿಗಳ ಅನಿರೀಕ್ಷಿತ ಮಿಂಚುಭೇಟಿ! ಬಂದಷ್ಟೇ ವೇಗವಾಗಿ ಸಾಗಿಹೋಗುತ್ತಿರುವ ಕಾರ್ಮೋಡಗಳು ಮತ್ತು ಅದಕ್ಕಿಂತಲೂ ಆತುರವಾಗಿ ಮೋಡಗಳೆಡೆಯಿಂದ ತಪ್ಪಿಸಿಕೊಂಡು ಬಂದು ಆವರಿಸುತ್ತಿರುವ ಬಿಸಿಲಕಿರಣಗಳ ನಡುವೆಯೇ ಆತುರಾತುರವಾಗಿ ಮೂಡಿಬಂದಿತ್ತೊಂದು ಮಳೆಬಿಲ್ಲು! ನಿನಗೆ ಗೊತ್ತಲ್ಲಾ, ನನಗೆ ಮಳೆಬಿಲ್ಲಂದರೆ ಭಾರೀ ಇಷ್ಟ. ನಿನ್ನ ಪರಿಚಯವಾದಂದಿನಿಂದಲೂ ಒಂದು ಸಲವೂ ನಾನದನ್ನ ನೋಡಿದಾಗಲೆಲ್ಲ ನಿನಗದರ ವರದಿಯೊಪ್ಪಿಸದೆ ಇದ್ದದ್ದಿಲ್ಲ. ನನ್ನ ವಯಸ್ಸು, ಇನ್ನೆಲ್ಲದರ ಪರಿವೆಯೂ ಮರೆತುಹೋಗುತ್ತದೆ ನನಗದರ ಜೊತೆಗಿದ್ದಾಗ. ಅಲ್ಲಿಯೇ ಆಡುತ್ತಿದ್ದ ಮಕ್ಕಳನ್ನೆಲ್ಲ ಕರೆದು ಅವರಿಗೆ ತೋರಿಸುತ್ತಿದ್ದಾಗಲೇ "ಇಲ್ನೋಡಿ ಇನ್ನೊಂದು" ಅಂತ ಸ್ವಲ್ಪವೇ ಸ್ವಲ್ಪ ಆಚೆ ಇರುವ ಇನ್ನೊಂದನ್ನ ತೋರಿಸಿದರು ಮಕ್ಕಳು. ಆ ದೃಶ್ಯ, ಅಬ್ಬಾ! ನನ್ನ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಎರಡೆರಡು ಕಾಮನಬಿಲ್ಲು, ಅದೂ ಅಷ್ಟು ಸ್ಪಷ್ಟ! ಭದ್ರ ನಿನ್ನ ತೋಳನ್ನು ಎರಡೂ ಕೈಗಳಿಂದ ಬಳಸಿ ಹಿಡಿದುಕೊಂಡು, ನಿನ್ನ ಪಾರ್ಶ್ವಕ್ಕೊರಗಿಕೊಂಡು, ನಿನ್ನ ಹೆಗಲಿಗೆ ಕೆನ್ನೆಯಾನಿಸಿ ಕೂತು ಒಂದಷ್ಟು ಹೊತ್ತು, ಹೆಚ್ಚೇನಲ್ಲ, ನೋಡನೋಡುತ್ತಿದ್ದಂತೆಯೇ ಕರಗಿಹೋಗುವ ಅದು ಕಣ್ಮರೆಯಾಗುವಷ್ಟೇ ಹೊತ್ತು, ಇಬ್ಬರೂ ಮೌನವಾಗಿದ್ದು ಅದನ್ನ ನೋಡುತ್ತಿರಬೇಕೆಂದು ಬಲವಾಗಿ ಆಸೆಯಾಯಿತು ಕಣೋ. ಆಸೆ ನೆರವೇರುವ ಸಾಧ್ಯತೆ ದೂರದೂರದವರೆಗೂ ಇರಲಿಲ್ಲ, ನನ್ನೊಳಗೂ ಒಂದಷ್ಟು ಹನಿಕುಟ್ಟಿಹೋಯಿತು ಹೊತ್ತು..
ನಿನಗೆ ಗೊತ್ತಾ, ನಮ್ಮ ಮನೆಯೆದುರಿನ ಮೋರಿಯೊಳಗೆ ಮೂರು ಜೀವನಗಳು ಶುರುವಾದ ಸಂಭ್ರಮ! ಬೆಕ್ಕೊಂದು ಮೂರು ಮರಿ ಹೆತ್ತಿದೆ. ಹಗಲೂ ರಾತ್ರಿ ಅದೆಷ್ಟು ಇಂಪಾಗಿ ಕೂಗುತ್ತವೆಂದರೆ, ನನಗೂ ಒಂದುರಾಶಿ ನಿನ್ನ ಮರಿಗಳನ್ನು ಹೆರುವ ಆಸೆಯಾಗುವಷ್ಟು ಚಂದ! ಆದರೆ ಖುಶಿಯ ಹಿಂದೆಯೇ ಭಯವೂ ಆಗುತ್ತಿದೆ ಕಣೋ, ಬೀದಿನಾಯಿಗಳೂ, ಗಂಡುಬೆಕ್ಕುಗಳೂ ಒಂದಷ್ಟು ಸುಳಿದಾಡುತ್ತವೆ ನಮ್ಮ ಮನೆಯ ಹಿಂದೆಮುಂದೆ. ಈ ಭಯ ಹೇಗಿದೆಯಂದರೆ, ಥೇಟ್ ಅದೆಷ್ಟೋ ದಿನಗಳ ನಂತರವೊಮ್ಮೆ ನೀನಿಲ್ಲಿಗೆ ಬಂದು ನಿನ್ನನ್ನ ನೋಡಿದ ಕ್ಷಣವೇ, ನೀನು ವಾಪಾಸು ಹೊರಡುವ ಗಳಿಗೆ ಕಣ್ಣೆದುರು ಬಂದು ನಾನೊಮ್ಮೆ ಬೆಚ್ಚುವ ಹಾಗೆ. ತಾಯಿಯಾದರೂ ಧೀರ ಗಂಭೀರವಾಗಿ ಬರುತ್ತದೆ, ಸಮಾಧಾನವಾಗಿ ಕೂತು ಮೊಲೆಯೂಡಿಸಿ, ಹೋಗುವಾಗ ಮಾತ್ರ ಸ್ವಲ್ಪ ಆತುರಾತುರವಾಗಿಯೇ ಹೋಗುತ್ತದೆ. ನಿಧಾನಿಸಿದರೆ ಎಲ್ಲಿ ಮರಿಗಳನ್ನ ಬಿಟ್ಟುಹೋಗುವುದು ಬೇಡವೆನಿಸುತ್ತದೆ ಅಂತಲೋ ಏನೋ. ಮರಿಗಳು ತುಂಬ ಮುದ್ದಾಗಿವೆ. ಮೂರಕ್ಕೂ ಮೈಮೇಲೆ ಮೂರು ಬಣ್ಣದ ಪಟ್ಟೆ. ತಾಯಿ ಕಪ್ಪುಬಿಳಿ ಬೆಕ್ಕು. ಬಹುಶಃ ತಂದೆಗೆ ಹುಲಿಯ ತರಹದ ಚರ್ಮವೋ ಏನೋ. ನೋಡುತ್ತಿದ್ದರೆ, ನಿನ್ನ ತುಂಟತನ-ನನ್ನ ಪುಕ್ಕಲುತನ, ನಿನ್ನ ಚೂಪು ಮೂಗು-ನನ್ನ ಕಂದುಕಣ್ಣು, ನಿನ್ನ ಬುದ್ಧಿವಂತಿಕೆ-ನನ್ನ ಮೆದುತನ ಎಲ್ಲ ಮಿಳಿತವಾದ ಜೀವವೊಂದನ್ನು ಹಗಲೂ ರಾತ್ರಿ ಮಡಿಲಲ್ಲಿಟ್ಟುಕೊಂಡು ಆ ಎಳೆತನವನ್ನು ಇನ್ನಿಲ್ಲದ ಹಾಗೆ ಅನುಭವಿಸಿಬಿಡಬೇಕೆಂಬ ಆಸೆಯಾಗುವಷ್ಟು ಮುದ್ದು ಅವು! ಮನಸಿಗೆ ವಯಸಾಗುವುದೇ ಇಲ್ಲ ನೋಡು. ಸಲೀಸು ಆಸೆಗಳನ್ನ ಹೆರುತ್ತಲೇ ಸಾಗುತ್ತದೆ. ಆಸೆಗಳಾದರೂ ಎಷ್ಟೆಂದು ಬಾಳಿಬದುಕಿ ಗುರಿ ಮುಟ್ಟಿಯಾವು ಹೇಳು. ಕೆಲವು ಹುಟ್ಟುತ್ತಿದ್ದಂತೆಯೇ ಸಾಯುತ್ತವೆ, ಈ ಜಗತ್ತಿನ ಋಣ ಹೆಚ್ಚಿಲ್ಲದವುಗಳು. ಈ ಆಸೆಯೂ ಅಷ್ಟೇ, ಹುಟ್ಟುತಲೇ ಸದ್ದಿಲ್ಲದೆ ಸತ್ತುಹೋಯಿತು.
ಕಳೆದವಾರ ಒಂದು ಸಿನೆಮಾಗೆ ಹೋಗಿದ್ದೆ. ತುಂಬ ಸಂತೋಷದಲ್ಲಿರುವ ಒಂದು ಜೋಡಿಯದರಲ್ಲಿ. ಅಕಾಸ್ಮಾತ್ ಅವನ ಬಾಳಲ್ಲಿ ಇನ್ನೊಬ್ಬಾಕೆ ಬರುತ್ತಾಳೆ. ಇವಳನ್ನು ನೋಡುತ್ತಲೇ ಅವನಿಂದ ಅಡಗಿಕೂತಿದ್ದ ಅವಳಲ್ಲಿನ ಕೊರತೆಗಳು ಒಂದೇಬಾರಿ ಅವನೆದುರಿಗೆ ಮೇಲೆದ್ದು ಬಂದು ಹಬ್ಬಿಸಿದ ಧೂಳಿಗೆ ಅವನ ಕಣ್ಣುಗಳು ಮಂಜಾಗಿಹೋಗುತ್ತವೆ. ಊದಿ ಕಣ್ಣುಗಳನ್ನು ಧೂಳಿನ ಉರಿಯಿಂದ ಮುಕ್ತವಾಗಿಸಿದ ಇವಳು ಎದುರಿರುತ್ತಾಳೆ ಮತ್ತು ಸಂಗಾತಿಯಿಂದ ಅವನಿಗೇ ಗೊತ್ತಿಲ್ಲದ ಅವನ ಯಾವಯಾವ ನಿರೀಕ್ಷೆಗಳಿದ್ದವೋ, ಎಲ್ಲವನ್ನೂ ಮೊಗೆಮೊಗೆದು ತನ್ನೊಳಗಿಂದ ತೆಗೆದು ತುಂಬಿಕೊಡುತ್ತಾಳೆ, ಅವ ಹಿಂದೆಂದೂ ಆಗದಷ್ಟು ತೃಪ್ತನಾಗುತ್ತಾನೆ, ಇವಳನ್ನು ಮನಸಾರೆ ಅಪ್ಪಿಕೊಳ್ಳುತ್ತಾನೆ. ಅವಳು ನೋಯುತ್ತಾಳೆ, ಬೇಯುತ್ತಾಳೆ ಅದರ ಬೇಗೆಗೆ ಇವನು ಹೈರಾಣಾಗುತ್ತಾನೆ. ಹಾಗೇ ಮುಂದುವರೆದ ಸಿನೆಮಾ ಕೊನೆಗೆ ಥೇಟ್ ನಿಜಜೀವನದ ಹಾಗೆ ಒಂದಷ್ಟು ಸಾವುಗಳಲ್ಲಿ ಕೊನೆಯಾಗುತ್ತದೆ. ಹಿಂತಿರುಗುತ್ತಾ ಜೊತೆಗಿದ್ದವರು ಎಕ್ಕಮಕ್ಕಾ ಅವನನ್ನು ಮತ್ತು ನಂತರ ಬಂದ ಆ ಅವಳನ್ನು ಬಯ್ಯುತ್ತಾ "ಎಲ್ಲ ಮರೆತು ಆ ಅವಳ ಕೂಡಿಕೊಂಡವನಿಗೆ ಇವಳ ಪಾಡಿಗಿವಳು ಕಣ್ಣೀರಿಟ್ಟರೆ ಸಂಕಟ ಯಾಕಪ್ಪ? ಈ ಗಂಡಸರೇ ಹೀಗೆ. ಬಿಟ್ಟೂ ಹೋಗಲೊಲ್ಲರು, ಪೂರ್ತಿಯಾಗಿ ಜೊತೆಗೂ ಇರಲೊಲ್ಲರು" ಅಂತೆಲ್ಲ ಹೇಳುತ್ತಿದ್ದರು. ನಾನು ಮೌನವಾಗಿದ್ದೆ, ನನ್ನ ಇವಳು ಅವರಿಗೆಲ್ಲ ಅವಳಾದ ಮತ್ತು ನನ್ನ ಅವಳು ಅವರ ಮಟ್ಟಿಗೆ ಇವಳಾದ ಪರಿಯ ಬಗ್ಗೆ ಯೋಚಿಸುತ್ತಿದ್ದೆ. ಬಿಡಲಿಲ್ಲ, ಮಾತಿಗೆಳೆದೇಬಿಟ್ಟರು. ನಾ ಅಂದೆ, "ಅವನಿಗೆ ಪ್ರೀತಿಯೆಂದರೆ ಈ ಇವಳಷ್ಟೇ ಅಲ್ಲ, ಅವಳೂ ಮತ್ತವಳೊಳಗೆ ಅರಳಿದ ತನ್ನ ಕುಡಿಗಳೂ ಹೌದು. ಇವಳ ಸಮೃದ್ಧಿಯೆದುರು ಅವನೊಳಗೆ ಬಾಯಾರಿ ಕೂತಿದ್ದ ಒಂದಷ್ಟು ಚಕೋರಗಳು ಹಾಡಿದವು, ಅವನು ಅವುಗಳ ಕತ್ತು ಹಿಚುಕಲಿಲ್ಲ ಅಷ್ಟೇ.. ಅವನೊಳಗು ಇವಳೆದುರು ಹಾಡುತ್ತಿದೆಯೆಂದರೆ ಅವಳೆದುರು ಮೂಕವಾಗಿಯಂತೂ ಇರಲಿಲ್ಲವಲ್ಲಾ? ಪ್ರೀತಿಯೇ ಹಾಗೆ. ಅದು ಒಂದೊಂದೇ ಖಾಲಿ ಬೊಗಸೆ ಕಂಡಹಾಗೆ ಅದನ್ನು ತುಂಬುವ ಸಲುವಾಗಿ ಚಕಚಕನೆ ರೆಂಬೆಯೊಡೆಯುತ್ತದೆ, ಹಸಿರಾಗಿ, ಹೂವಾಗಿ ಬೊಗಸೆದುಂಬುತ್ತದೆ. ಇದರ ಪಾಲಿನದು ಇದಕ್ಕೇ ಮತ್ತದರದು ಅದಕ್ಕೇ ದಕ್ಕುವ ಹಾಗೆ. ಒಂದಿಷ್ಟೂ ಮಿಳಿತಗೊಳ್ಳದೆ, ಒಂದಿಷ್ಟೂ ಕಲುಷಿತಗೊಳ್ಳದ ಹಾಗೆ ಅಕ್ಷಯವಾಗುತ್ತಲೇ ಹೋಗುತ್ತದೆ. ಅದು ಅಮಿತ ವಿಸ್ತಾರದ್ದು. ಮಿತಿಗಳಿರುವುದು ಕಣ್ಣಿಗೆ ಕಾಣುವ ದೇಹಕ್ಕೆ, ಆಸ್ತಿಗೆ, ಸಂಪತ್ತಿಗೆಯೇ ಹೊರತು ಪ್ರೀತಿಗಲ್ಲ…." ಇನ್ನೂ ಏನೇನೋ ಹೇಳುತ್ತಲೇ ಇದ್ದೆ, ನನಗೇ ನನ್ನ ಮಾತುಗಳು ಹೇಳಹೊರಟದ್ದು ದೂರ ದೂರ ಹೋದಹಾಗನ್ನಿಸುವಂಥ ಅಸ್ಪಷ್ಟತೆಯಲ್ಲಿ. "ಅದ್ಯಾವ ವಿತಂಡವಾದಿಯ ಸಹವಾಸ ದೋಷವೋ ಏನೋ, ತೀರಾ ನಮ್ಮಿಂದ ದೂರವಾಗಿಬಿಟ್ಟೆ, ಬೇರೆಯಾಗಿಬಿಟ್ಟೆ.." ಅಂತ ನೊಂದುಕೊಂಡರು. ತುಂಬಾ ಅಂದರೆ ತುಂಬಾ ಅನಿಸಿತು ಆ ಹೊತ್ತು ನೀನು ನನ್ನ ಜೊತೆಗಿರಬೇಕಿತ್ತು ಅಂತ. ಅವರ ಹಾಗೆಲ್ಲಾ ಅಂದರು ಅಂತಲ್ಲ, ಖಂಡಿತಾ ನಾನು ಹೇಳಹೊರಟದ್ದು ಎಲ್ಲ ಅಸ್ಪಷ್ಟತೆಗಳ ಹೊರತಾಗಿಯೂ ನಿನಗೆ ಅರ್ಥವಾಗುತ್ತಿತ್ತು ಅಂತ.
ಎಲ್ಲ ಹೇಳುತ್ತಾರೆ, ಹುಡುಗಿ ತನ್ನ ಸಖನಲ್ಲಿ ಅಪ್ಪನನ್ನು ಹುಡುಕುತ್ತಾಳೆ ಅಂತ. ನಿನ್ನಲ್ಲಿ ನನಗೆ ಅಪ್ಪ, ಗುರು, ಕಂದ ಒಮ್ಮೊಮ್ಮೆ ಒಬ್ಬೊಬ್ಬರು, ನೀನು ಪ್ರೇಮಿಯಾಗಿ ಕಂಡದ್ದಕ್ಕಿಂತ
ಹೆಚ್ಚುಬಾರಿ ಹುಡುಕದೆಯೇ ಕಾಣಿಸುತ್ತಾರೆ ಗೊತ್ತಾ? ನೀನೇನೋ ಆವತ್ತೊಂದು ಮಧ್ಯರಾತ್ರಿಯಲ್ಲಿ ನಿನ್ನ ಜೊತೆಗಿದ್ದವರು ಯಾರಿಗೋ ತಡೆಯಲಾರದಷ್ಟು ಮೇಲುಹೊಟ್ಟೆನೋವೆಂದಾಗ ಜೀರಿಗೆ ಕಷಾಯ ಮಾಡಿಕೊಡು ಅಂತ ವಿಧಾನ ವಿವರಿಸುತ್ತಿದ್ದೆ. ಮೌನವಾಗಿ ಕೇಳಿಸಿಕೊಂಡವನು ಕೊನೆಯಲ್ಲಿ ನನ್ನ ಕೇಳಿದ್ದೇನು ನೆನಪಿದೆಯಾ? "ಇನ್ನೊಮ್ಮೆ ನಾನೂ ನೀನೂ ಹುಟ್ಟಿಬರುವುದಾದರೆ ನೀನು ನನ್ನ ಮಗಳಾಗ್ತೀಯಾ, ತಾಯಾಗ್ತೀಯಾ?" ಅಂತ. ನಾನೂ ತಟ್ಟನೆ ಉತ್ತರಿಸಿದ್ದೆ, "ಮಗಳಾಗ್ತೀನಿ." ನನ್ನ ಪ್ರಶ್ನಿಸುವಾಗ ನಿನಗೆ, ನಿನ್ನ ಪ್ರಶ್ನಿಸುವಾಗ ನನಗೆ ಹೆಚ್ಚು ಯೋಚಿಸಬೇಕಿರುವುದಿಲ್ಲ. ಯಾಕೆಂದರೆ ಪರಸ್ಪರರಲ್ಲಿ ಉತ್ತರ ಸಿಗುವುದು ತಡವಾಗುವುದಿಲ್ಲ ಅನ್ನುವದು ನಮಗೇ ಗೊತ್ತಿಲ್ಲದ ಹಾಗೆ ನಮಗೆ ಗೊತ್ತು. ಹಾಗೇ ಉತ್ತರಿಸುವಾಗಲೂ ಹೆಚ್ಚುಹೊತ್ತು ಬೇಕಾಗುವುದಿಲ್ಲ. ಯಾಕೆಂದರೆ, ಆ ಪ್ರಶ್ನೆ ಆಗಲೇ ಉತ್ತರದ ಬೀಜವನ್ನು ಅದು ಹುಟ್ಟಬೇಕಾದಲ್ಲಿ ಬಿತ್ತಿಯಾಗಿರುತ್ತದೆ. ನನಗೆ ನೀನು ಅನಿಸುವಷ್ಟೇ ಅಥವಾ ಅದಕ್ಕೂ ಹಳೆಯ ಅನುಬಂಧವೆಂದು ನಿನಗೂ ಅನಿಸುತ್ತದೆಯಾ, ತಿಳಿದುಕೊಳ್ಳುವಾಸೆಯಿದೆ, ಆದರೆ ಕೇಳುವ ಧೈರ್ಯವಿಲ್ಲ. ನೂರರಲ್ಲಿ ತೊಂಬತ್ತೊಂಬತ್ತರಷ್ಟು ಅದೇ, ಇದೇ ಅನ್ನುವ ಸ್ಪಷ್ಟತೆಯಿಲ್ಲದಿದ್ದರೂ, ಯಾವುದೋ ಒಂದು ಅತೀವ ವಿಶ್ವಾಸ ನನ್ನ ಪಾಲಿಗಿದೆಯಾದರೂ ನೂರರಲ್ಲೊಂದು ನನಗೆ ನಿರಾಕರಣೆಯ ಭಯವೂ ಇದೆ.
ಹುಣ್ಣಿಮೆಯಂದು ಇರುಳಾವರಿಸುತ್ತಲೇ "ಆಕಾಶ ನೋಡು, ಈಗ ನೋಡು, ಈಗೊಮ್ಮೆ ನೋಡಿಬಿಡು" ಅಂತ ರಾತ್ರಿಯುದ್ದಕ್ಕೂ ಹತ್ತಾರು ಬಾರಿ ಫೋನ್ ಮಾಡಿ ತಲೆಕೆಡಿಸುವ ನನ್ನ ಹುಚ್ಚಿಗೆ "ಆಗಸದವನಲ್ಲದೆ ನೆಲದ ಮೇಲೂ ಇಷ್ಟು ಆವರಿಸಿರುವ ನಿನ್ನ ಚಂದ್ರ ಯಾರಾದರೂ ಇದ್ದಾನೇನೇ?" ಅಂತೀಯಲ್ಲಾ? ಹೇಳುತ್ತೇನೆ ಕೇಳು, ಕತ್ತಲೆಯ ಅಸ್ಪಷ್ಟತೆ ಮನಸಿನ ಶಾಂತಿ ಕಲಕುವ ಹೊತ್ತು ನಿದ್ದೆಯ ಮಬ್ಬಿನೊಳಗೆ, ಕನಸಿನ ಭ್ರಮೆಯೊಳಗೆ ಮುಳುಗಿಸಿ ಮತ್ತೆ ಮನದ ಮೇಲ್ಮೈ ನಿರಾಳವಾಗುವಂತಿರಿಸುವ ರಾತ್ರಿಯ ಆಸ್ತಿ ಚಂದ್ರನೂ, ಮತ್ತೆಲ್ಲವೂ ಸಹಜ, ನೇರ ಮತ್ತು ಸ್ಪಷ್ಟವೆನುವ ಅಭಯ ನೀಡುವ ಹಗಲಿನಾಸ್ತಿ ಸೂರ್ಯನೂ ನನ್ನೊಳಗೆ ಹುಟ್ಟಿಸುವ ಎಲ್ಲ ಸಂವೇದನೆಗಳ ಹಿಂದೆಯೂ ಇರುವುದು ನಿನ್ನದೇ ಮುಖ.
"ನಾಟಕದ ಅಂಕಗಳು, ಪಾತ್ರ-ಹಾವಭಾವ-ರಸಾಭಾಸಗಳು ಎಲ್ಲ ಬದಲಾಗುತಲೇ ಸಾಗಿದವು ಗೆಳೆಯಾ,
ಹಿಂದಿರುವ ಅಂಕದ ಪರದೆಯಷ್ಟೇ ಬದಲಾಗದುಳಿಯಿತು; ಮತ್ತದರಲಿ ನಿನದೊಂದೇ ಚಿತ್ರವಿತ್ತು."
ನೋಡಿಲ್ಲಿ ಆಗಲೇ ಸಂಜೆ ನಾಲ್ಕರ ಬಿಸಿಲುಕೋಲು ನನ್ನ ಹಜಾರದಲ್ಲಿ ಮೂಡಿದೆ. ನೇರ ಬಿಸಿಲಿನ, ಬೆಳ್ಳಂಬೆಳಕಿನ ಅಡಿಯಲ್ಲಿ ಒಂದಿಷ್ಟೂ ಹರಡಿಕೊಳ್ಳದ ನಿಜ ಹೇಳಬೇಕಂದರೆ ಮೂಕವಾಗಿಬಿಡುವ ನನ್ನ ಮನಸಿನ ಲಹರಿ, ಅದೇ ಬಿಸಿಲು ಅಲ್ಲೆಲ್ಲೋ ಮರೆಯಾಗಿದ್ದುಕೊಂಡು ಕಳಿಸುವ ಕಿರಣ ಹುಟ್ಟಿಸುವ ಬಿಸಿಲುಕೋಲು ನೋಡುತ್ತಾ ನಾನಾ ತರಹದ ಚಿತ್ತಾರ ಬರೆಯುತ್ತದೆ ಮನಸಿನ ತುಂಬೆಲ್ಲ. ನಿನ್ನೊಡನೆಯೂ ಹೀಗೆಯೇ. ನೀನು ನೇರ ಸಂಪರ್ಕದಲ್ಲಿದ್ದಾಗ ನನ್ನನ್ನ ಮೌನ ಆವರಿಸುತ್ತದೆ, ಒಂದು ಮೂರ್ತತೆಯಿಲ್ಲದ ಮೌನ, ಒಂದು ಸಂತುಷ್ಟ ಮೌನ, ಒಂದು ತುಂಬುಮೌನ, ಒಂದು ತೃಪ್ತ ಮೌನ, ಒಂದು ಚಂದದ ಮೌನ! ಆಗೆಲ್ಲ ನೀ ಕೇಳಿಸಿಕೊಂಡದ್ದಷ್ಟೂ ಮೌನವನ್ನು ಹಿಂಡಿಹಿಂಡಿ ತೆಗೆದ ಅಳಿದುಳಿದ ಹನಿಗಳು ಅಂದುಕೋ. ಅದೇ ನೀನು ಮತ್ತು ನಿನ್ನ ಗಮನ ಅಲ್ಲೆಲ್ಲೋ ಇದ್ದಾಗ ನಿನ್ನ ಬಗೆಗಿನ ಚಿಂತನೆ ಹುಟ್ಟಿಸುವ ಲಹರಿ ಇದೆಯಲ್ಲಾ, ಅದು ಪಸೆದುಂಬಿದೊಂದು ಮೌನ ಹುಟ್ಟಿಸುತ್ತದೆ ನನ್ನೊಳಗೆ, ಅದರೊಳಗಿಂದ ಪುಂಖಾನುಪುಂಖ ಚಿಮ್ಮುತ್ತವೆ ಅಮೂರ್ತ ಮಾತು! ಅದಕ್ಕೇ ನೀನು ಫೋನ್ ಇಟ್ಟ ಮೇಲಷ್ಟೇ ನೋಡು ಇಷ್ಟೆಲ್ಲ ಹಸಿಚಿತ್ತಾರಗಳು ಚಿತ್ತಭಿತ್ತಿಯಲ್ಲಿ! ಇನ್ನೂ ಒಂದಷ್ಟು ಅಮೂರ್ತಗಳು ರೂಪು ತಳೆಯುತ್ತಲೇ ಇವೆ, ಆದರೆ ಮೂರ್ತಲೋಕದ ಕೆಲಸ ಕರೆಯುತ್ತಿದೆ ಕಣೋ..
ಕರೆಯುವ ಹೊತ್ತನ್ನು ಹೆಚ್ಚು ಕಾಯಿಸಬಾರದಂತೆ. ಬಲವಂತವಾಗಿ ಮೌನದಿಂದ ಮಾತಿನೆಡೆಗೆ, ಅಮೂರ್ತದಿಂದ ಮೂರ್ತದೆಡೆಗೆ ತಿರುಗುತ್ತಿದ್ದೇನೆ. ಇನ್ನೊಮ್ಮೆ ನಿನ್ನ ಫೋನ್ ಕರೆಗಾಗಿಯೋ ಅಥವಾ ಸೀದಾ ಬಂದು ಎದುರು ನಿಂತುಬಿಡುವ ನಿನಗಾಗಿಯೋ ಕಾಯುತ್ತೇನೆ. ಯಾಕೆಂದರೆ ನಿನ್ನ ನೆನಪಿನ, ನಿನ್ನ ವಿರಹದ ಕಾರ್ಮೋಡದಡಿ ಹೀಗೆ ಗರಿಬಿಚ್ಚಿ ನವಿಲಾಗುವುದು ನನಗಿಷ್ಟ!
ನಿಜ – ಮನಸಿಗೆ ವಯಸಾಗುವುದೇ ಇಲ್ಲ…
ನಿಮ್ಮ ಮಾತಿಗೆ ಪೂರಕವಾಗಿಯೇ ಇದೆ ನಿಮ್ಮೀ ಬರಹ…
ಒಂದು ಬೆಚ್ಚನೆ ಮೌನ ಅಷ್ಟೇ ನನ್ನಲ್ಲಿ…
ಧನ್ಯವಾದ ಶ್ರೀವತ್ಸ!
ಬರಹ ಆಪ್ತವಾಗಿದೆ. ಅಭಿನಂದನೆಗಳು ಮೇಡಂ