ನಿ. ರಾಜಶೇಖರ ಅವರ ಜೀವನ ದರ್ಶನ ಹಾಗೂ ಅವರ ‘ಶ್ರೀರಾಮಾಯಣ ದರ್ಶನಂ’ ಗದ್ಯಾನುವಾದ: ಶ್ರೀನಿವಾಸ ಕೃ. ದೇಸಾಯಿ

ಕೃಪೆಗೆಯ್, ತಾಯೆ, ಪುಟ್ಟನಂ! 
ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ (ಶ್ರೀ.ರಾ.ದ. ಆಯೋದ್ಯಾ ಸಂಪುಟಂ – ಸಂಚಿಕೆ 1; 139-140)
ಪುಟ್ಟನನ್ನು, ಕನ್ನಡದ ಹೊಸ ಸುಗ್ಗಿವನದ ಈ ಕೋಗಿಲೆಯನ್ನು ಹರಸು ತಾಯಿ! (ಗದ್ಯಾನುವಾದ – ನಿ. ರಾಜಶೇಖರ)

ಹೊಸಗನ್ನಡದ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯವೆಂದು ಮಹಾಕವಿ ಕುವೆಂಪುರವರ ಮಹಾಛಂದಸ್ಸಿನ ‘ಶ್ರೀರಾಮಾಯನ ದರ್ಶನಂ’ ಪ್ರಸಿದ್ಧಿ ಪಡೆದಿದೆ. ಇದನ್ನು ಪುಷ್ಟೀಕರಿಸುವಂತೆ, ಕನ್ನಡ ಭಾಷೆಯ ಮೊದಲ ‘ಜ್ಞಾನಪೀಠ ಪ್ರಶಸ್ತಿ’ಯನ್ನು, ಈ ಮಹಾಕಾವ್ಯ ತನ್ನದಾಗಿಸಿತು. ಅದರಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಬಿಸಿದ ‘ಪಂಪ’ ಪ್ರಶಸ್ತಿಯು ಸಹ ಮೊದಲಿಗೇ ಈ ಮಹಾ ಕಾವ್ಯಕ್ಕೆ ದೊರೆಯಿತು.

‘ಶ್ರೀರಾಮಾಯಣ ದರ್ಶನಂ’ ಸರಳರಗಳೆಯ ರಚನೆಯಾಗಿದ್ದರೂ, ಸಾಮಾನ್ಯ ಓದುಗರಿಗೆ ಪ್ರಾರಂಬದಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ. ಆದರೆ, ಚಿತ್ರದುರ್ಗದ ನಿವಾಸಿಯಾಗಿದ್ದ ನಿಜಲಿಂಗಪ್ಪ ರಾಜಶೇಖರ (9.9.1932 – 9.10.2008) ಅವರ ಸರಳ ಗದ್ಯಾನುವಾದವು ಮೂಲ ಕಾವ್ಯವನ್ನು ಓದಲು ಹಾಗೂ ಅಧ್ಯಯನ ಮಾಡಲು ಉತ್ಕೃಷ್ಟ ಸಹಾಯಕ ಸಾಧನವಾಗಿದೆ. 

ರಾಷ್ಟ್ರಕವಿ ಪ್ರಖ್ಯಾತಿಯ ಕುವೆಂಪು ಅವರ, ‘ಶ್ರೀರಾಮಾಯಣ ದರ್ಶನಂ’ ಪ್ರಾರಂಬದಲ್ಲಿ ಸಾಮಾನ್ಯರಿಗೆ ಗಡುಚಾಗಿ ತೋರುವ ಕಾರಣಗಳೇನು? ಸಾಮಾನ್ಯ ಓದುಗರಲ್ಲಿ ಸಾಮಾನ್ಯವಾಗಿ ಕಾಣುವ ಕಾವ್ಯ ಕುರಿತ ನಿರಾಸಕ್ತಿ ಹಾಗೂ ವ್ಯಾಕರಣ ಮತ್ತು ಛಂದಸ್ಸಿನ ಜ್ಞಾನದ ಅಭಾವ. ಕಾವ್ಯ ಸಾಹಿತ್ಯ – ಸೌಂದರ್ಯದಲ್ಲಿ ಸಹಜವಾಗಿರುವ ಹಳಗನ್ನಡ ಮತ್ತು ಸಂಸ್ಕೃತ ಭಾಷೆಗಳ ಶಬ್ದಗಳ ಹೆಚ್ಚು ಬಳಕೆ ಸಾಮಾನ್ಯ ಓದುಗರಿಗೆ ಕ್ಲಿಷ್ಟಕರ. ಇವುಗಳ ಜೊತೆ, ಕುವೆಂಪು ಅವರ ಹೊಸ ಹೊಸ ಶಬ್ದ ಸಂಪತ್ತು, ಸಂಧಿ ಸಮಾಸಗಳ ಬಿಗಿ ಬಂಧ, ಸಕಲ ಕಾವ್ಯರಗಳನ್ನೂ ಹೊರಸೂಸುವ ವರ್ಣನೆಯ ವೈಭವ, ಉಪಮೆ – ಅಅಲಂಕಾರಗಳ ಶ್ರೇಷ್ಟ ನಿರೂಪಣೆ ಹಾಗೂ ಶ್ರೀರಾಮಯಣ ದರ್ಶನಂ ಕಾವ್ಯದ ವಿಶೇಷವಾಗಿರುವ ಪಾತ್ರಗಳು ಘಟನೆಗಳು, ಮಹೋಪಮೆಗಳು, ಇವುಗಳ ಬೆಗೆಗಿನ ಕುವೆಂಪು ಅವರ ಅಪೂರ್ವವಾದ ಕಾವ್ಯಕಲ್ಪನೆ, ಹೊಸ ಚಿಂತನೆಯ ಸೃಜನೆ ಈ ಮಹಾಕಾವ್ಯದಲ್ಲಿ ಸಮ್ಮಿಳಿತವಾಗಿವೆ. ಇವೆಲ್ಲವೂ ಆ ಅಪೂರ್ವ ಕಾವ್ಯದ ಅಧ್ಯಯನ ಸ್ವಲ್ಪ ಕಷ್ಟಕರವಾಗಿಸಿದ್ದರೆ, ಇದನ್ನು ರಾಜಶೇಕರ ಅವರ ಸರಳ ಗದ್ಯಾನುವಾದ ಸುಲಭವಾಗಿಸಿದೆ.

 

ಶ್ರೀ ರಾಜಶೇಖರ ಅವರು ಶ್ಋಏಷ್ಟ ಪ್ರಾಮಾಣಿಕ ರಾಜಕಾರಣಿಯಾಗಿದ್ದ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಯೂ ಆಗಿದ್ದ ಶ್ರೀ ನಿಜಲಿಂಗಪ್ಪನವರ ಮೂರನೆಯ ಮಗ. ತಂದೆಯವರ ಪುಸ್ತಕ ಪ್ರೀತಿಯನ್ನು ಬಾಳ್ಯದಿಂದಲೂ ತಮ್ಮದಾಗಿಸಿಕೊಂಡವರು. ನಿಜಲಿಂಗಪ್ಪನವರು ಓದಲು ಕಾರಂತ, ಕುವೆಂಪು ಮುಂತಾದವರ ಪುಸ್ತಕಗಳನ್ನು ಖರೀದಿಸಿ ತಂದು, ತಾವೂ ಓದಿ, ಮಕ್ಕಳಿಗೆಲ್ಲಾ ಓದಲು ಹೇಳುತ್ತಿದ್ದರು. ಚಿತ್ರದುರ್ಗದ ಸಾರ್ವಜನಿಕ ಗ್ರಂಥಾಲದಿಂದಲೂ ಹುಡುಗ ರಾಜಶೇಖರ ಪುಸ್ತಕಗಳನ್ನು ತಂದು ಓದುತ್ತಿದ್ದರು. ಗಳಗನಾಥರ ಎಲ್ಲ ಕಾದಂಬರಿಗಳನ್ನು ಓದಿ ಮುಗಿಸಿದ್ದರು ಎಂದು ರಾಜಶೇಖರ ಅವರ ಅಕ್ಕ, ಹಾಗೂ ಸ್ವತಃ ಸಾಹಿತಿಯಾಗಿರುವ ಶ್ರೀಮತಿ ಪಾರ್ವತಮ್ಮನವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಶ್ರೀ ರಾಜಶೇಖರ ಅವರು, ಶಿಕ್ಷಣ ಪಡೆದಿದ್ದು ಕೇವಲ ಇಂಟರ್ಮೀಡಿಯೇಟ್ವರೆಗೆ ಮಾತ್ರ. ಅವರು ತೋಟಗಾರಿಕೆ, ಕೃಷಿಯಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಈ ಕಾರಣ ಚಿತ್ರದುರ್ಗದ ಹತ್ತಿರ ತೋಟಗಾರಿಕೆ ಮಾಡಿಕೊಂಡಿದ್ದರು. ಆದರ್ಶಜೀವನವನ್ನು ಮೈಗೂಡಿಸಿಕೊಂಡಿದ್ದ ಶ್ರೀಯುತರು ಮದುವೆಯನ್ನೇ ಮಾಡಿಕೊಳ್ಳಲಿಲ್ಲ. ತಾಯಿ ಮುರಿಗೆಮ್ಮ ಹಾಗೂ ತಂದೆ ನಿಜಲಿಂಗಪ್ಪನವರಲ್ಲಿ ಅಪಾರ ಪ್ರೀತಿ ಭಕ್ತಿಯನ್ನಿರಿಸಿಕೊಂಡಿದ್ದ ಅವರು, ತಂದೆ ತಾಯಿಯವರನ್ನು ಅವರ ವೃದ್ಧಾಪ್ಯದಲ್ಲಿ ಮಕ್ಕಳಂತೆ ನೋಡಿಕೊಂಡರು. ಕುಟುಂಬದ ಇನ್ನಿತರ ಅಕ್ಕ, ಅಣ್ಣ ಹಾಗೂ ತಮ್ಮ ಮತ್ತು ಇನ್ನಿತರ ಬಂಧುಗಳಿಗೂ ತಮ್ಮ ವಾತ್ಸಲ್ಯವನ್ನು ಬೀರಿದವರು ಅವರು.

ಸ್ವತಃ ಅಧ್ಯಯನದಿಂದ ಸಾಹಿತ್ಯ ಪ್ರೀತಿ ಬೆಳೆಸಿಕೊಂಡು ಬಂದ ರಾಜಶೇಖರ ಅವರ ಸಾಹಿತ್ಯ ಸಾಧನೆ ಶ್ರೇಷ್ಠ ಮಟ್ಟದ್ದು. ಸಂಸ್ಕೃತ ಭಾಷೆಯನ್ನು ಸಿದ್ಧಲಿಂಗಶಾಸ್ತ್ರಿ ಎಂಬ ವಿದ್ವಾಂಸರಿಂದ ಸತತನ ನಾಲ್ಕು ವರ್ಷಗಳ ಕಾಲ ಅಭ್ಯಾಸ ಮಾಡಿ ಅದರಲ್ಲಿ ಪಾರಂಗತರಾದರು. ತಮ್ಮ ಕೃಷಿ ಚಟುವಟಿಕೆಯ ನಡುವೆಯೇ ಪ್ರತಿದಿನ ಸಾಹಿತ್ಯ ಅಧ್ಯಯನ ಸಾಗುತ್ತಿತ್ತು. ಓರ್ವರೇ ಕುಳಿತು ಗಟ್ಟಿಯಾಗಿ ಕಾವ್ಯಗಳನ್ನು ರಾಗಬದ್ಧವಾಗಿ ಹಾಡಿ ಸಂತೋಷಪಡುತ್ತಿದ್ದರಂತೆ! ಕಾಳಿದಾಸ ಕವಿಯ ಮೇಘದೂತ ಹಾಗೂ ಶಬರ ಶಂಕರವಿಳಾಸ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದರು. ಅಣ್ಣಂದಿರಾದ, ಭೌತಶಾಸ್ತ್ರ ಪ್ರಾಧ್ಯಾಪಕ ಉಮಾಕಾಂತರೊಡನೆ ಇಂಗ್ಲಿಷ್ ಭಾಷೆಯ ನಾಟಕ ‘Blue Bird’ ಅನ್ನು ಕನ್ನಡದಲ್ಲಿ ‘ನೀಲಿಹಕ್ಕಿ’ ಎಂದು ಅನುವಾದಿಸಿದರು. ಇದು ಮೂಲತಃ ಫ್ರೆಂಚ್ ಸಾಹಿತಿ ಮಾರಿಸ್ ಮೇಯರ್ ಎಂಬುವವನಿಂದ ರಚಿತವಾಗಿದ್ದುದು. 1911ರಲ್ಲಿ ನೊಬೆಲ್ ಪಾರಿತೋಷ ಪಡೆದ ಕೃತಿಯೂ ಹೌದು. ಇದಲ್ಲದೆ ಅಣ್ಣ ಉಮಾಕಾಂತ ಹಾಗೂ ಅಕ್ಕ ಸಾಹಿತಿ ಪಾರ್ವತಮ್ಮ ಜೊತೆಗೂಡಿ ಕನ್ನಡ ಭಾಷೆಯಲ್ಲಿ ವರ್ಗೀಕೃತ ಪದಕೋಶವನ್ನು ರಾಜಶೇಖರ ಅವರು ರಚಿಸಿದ್ದು, ಇದನ್ನು 1994ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ತಂದೆ ಶ್ರೀ ನಿಜಲಿಂಗಪ್ಪನವರು 1970ರಲ್ಲಿ ದಿಲ್ಲಿಯಿಂದ ಬಂದು ಚಿತ್ರದುರ್ಗದಲ್ಲಿ ನೆಲೆಸಿದರು. ತಂದೆಯ ತಾಯಿಯವರ ಜೊತೆಯಿರುವುದಕ್ಕಾಗಿ, ಚೆನ್ನಾಗಿ ಅಭಿವೃದ್ಧಿ ಮಾಡಿದ್ದ ತೆಂಗಿನ ತೋಟವನ್ನು ಮಾರಿ, ಚಿತ್ರದುರ್ಗದಲ್ಲಿಯೇ ನೆಲೆಸಿದರು. ಮನೆಗೆ ಬಂದು ತಂದೆ ತಾಯಿಯವರ ಸೇವೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ನಂತರದ ಮೂರು ದಶಕಗಳ ಕಾಲ ತಾಯಿ ತಂದೆಯವರ ಸೇವೆಯೆ ಅವರ ಜೀವನದ ವ್ರತವಾಯಿತು. ಅದನ್ನು ಒಂದು ವ್ರತದಂತೆ ಪಾಲಿಸಿದ ಆದರ್ಶ ಮಗನಾದರು. ತಾಯಿ ಮುರಿಗೆಮ್ಮ 1988ರಲ್ಲಿ ಕಾಲವಶರಾದರು. ನಂತರದ ಹನ್ನೆರಡು ವರ್ಷಗಳ ಕಾಲ ತಂದೆ ನಿಜಲಿಂಗಪ್ಪನವರನ್ನು ಹಗಲು ರಾತ್ರಿ, ಪ್ರೀತಿಯಿಂದ ಭಕ್ತಿಯಿಂದ ಫೊಷಿಸಿ ಧನ್ಯತೆ ಪಡೆದರು. ನಿಜಲಿಂಗಪ್ಪನವರು 2000ದ ಇಸವಿಯಲ್ಲಿ ವಿಧಿವಶರಾದಾಗ, ತಾವು ಯಾರಿಗಾಗಿ ಇನ್ನು ಜೀವಿಸಬೇಕು ಎನ್ನುವ ಭಾವ ರಾಜಶೇಖರ ಅವರನ್ನು ಆವರಿಸಿತ್ತಂತೆ!

ರಾಜಶೇಖರ ಅವರು ಕನ್ನಡ ಕಾವ್ಯ ಸಾಹಿತ್ಯದ ಅಪೂರ್ವ ಪ್ರೇಮಿ. 1962ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಸಹಜವಾಗಿಯೆ ಅವರನ್ನು ಆಕರ್ಷಿಸಿತು. ಮೊದಲು ಅದು ಅವರಿಗೂ ಗಡುಚಾಗಿ ಕಂಡಿತು. ಆದರೆ ಕನ್ನಡ ಕಾವ್ಯ ಪ್ರಿಯರಾಗಿದ್ದ ಅವರು ಸತತ ಅಧ್ಯಯನದಿಂದ ಅದನ್ನು ತಮ್ಮದಾಗಿಸಿಕೊಂಡರು. ಆರೇಳು ಸಲ ಪಾರಾಯಣಗೈತದರಂತೆ! ಈ ಮಹಾಕಾವ್ಯವನ್ನು ಸರಳವಾದ ಗದ್ಯ ರೂಪದಲ್ಲಿ ಏಕೆ ಅನುವಾದಿಸಬಾರದು ಎಂಬ ಯೋಚನೆ ಅವರಲ್ಲಿ ಉದಯಿಸಿತು. ಕೂಡಲೆ ಕಾರ್ಯಪ್ರವೃತ್ತರಾಗಿ, ಸತತ ನಾಲ್ಕು ವರ್ಷಗಳ ಕಾಲ ಗದ್ಯಾನುವಾದ ಮಾಡಿ ಮುಗಿಸಿದರು. ತಮ್ಮ ಅನುವಾದವನ್ನು ಕುವೆಂಪು ಅವರಿಗೆ ತೋರಿಸಿ, ಅವರ ಸಲಹೆಯಂತೆ ಪರಿಷ್ಕರಿಸಿದರು ಕೂಡ.

ರಾಷ್ಟ್ರಕವಿ ಕುವೆಂಪು ಅವರು, ರಾಜಶೇಖರ ಅವರ ಸರಳ ಗದ್ಯಾನುವಾದವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದನ್ನು, ಈ ಸರಳ ಗದ್ಯಾನುವಾದಕ್ಕೆ, ಮುನ್ನುಡಿ ರೂಪದಲ್ಲಿ ಬರೆದ ಹಾರೈಕೆ ಲೇಖನದಲ್ಲಿ ಕುವೆಂಪು ಅವರು “ರಾಜಶೇಖರ ಅವರು ಈ ಕೃತಿಯನ್ನು (ಶ್ರೀರಾಮಾಯಣ ದರ್ಶನಂ) ಮೊದಲಿನಿಂದ ಕೊನೆಯ ತನಕ ಶ್ರದ್ಧಾಗೌರವಗಳಿಂದ ಆಳವಾಗಿ ಅಭ್ಯಾಸ ಮಾಡಿದ್ದಾರೆ……….. ಪದ್ಯಕಥನವನ್ನು ಆಧುನಿಕ ಗದ್ಯಕ್ಕೆ ಅಳವಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆನ್ನುವುದಕ್ಕೆ ಅವರ ಈ ಕೃತಿ ಸಾಕ್ಷಿಯಾಗಿದೆ…… ಮೂಲವನ್ನು ಶರಣಾಗತಿಭಾವದಿಂದ ಅನುಸರಿಸಿರುವುದರಿಂದ ಮೂಲಕೃತಿಯ ಛಾಯೆಯನ್ನಿಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ” ಎಂದು ಅಪೂರ್ವವಾಗಿ ಶ್ಲ್ಯಾಘಿಸಿದ್ದಾರೆ.

ಶ್ರೀರಾಮಾಯಣ ದರ್ಶನಂ ಸರಳ ಗದ್ಯಾನುವಾದ ಮೊದಲು ಪ್ರಕಟವಾಗಿದ್ದು 1987ರಲ್ಲಿ. 1998ರ ಎರಡನೆಯ ಪರಿಷ್ಕೃತ ಮುದ್ರಣದಲ್ಲಿ ರಾಜಶೇಖರ ಅವರು ಸಾಹಿತ್ಯ ದೋಷಗಳನ್ನು ಸರಿಪಡಿಸಿದ್ದರು. ಸಾಮಾನ್ಯ ಓದುಗನೂ ಸಹ ಈ ಮಹಾಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳಲು ಬಹಳ ಸಹಾಯಕವಾಯಿತು. ಎರಡು ಉದಾಹರಣೆಗಳು ಹೀಗಿವೆ:

“ಆರ ವದನಾರವಿಂದಮಂ 
ನೋಡಿ, ಮಕರಂದಮಂ ಹೀರಿ, ಜನ ನಯನಾಳಿ 
ತೃಪ್ತಿಯರಿಯವೊ ಅದನ್ನೊಸೆದು ನೋಳ್ಪೆನ್ನಗಂ 
ಶಾಂತಿಯಿಲ್ಲನೆಗೆ” (ಶ್ರೀ.ರಾ.ದ. ಅಯೋಧ್ಯಾ ಸಂಪುಟಂ – ಸಂಚಿಕೆ 9 ಪದುಕಾಕಿರೀಟಿ; 263-266)

“ಯಾವ ಮುಖಕಮಲವನ್ನು ನೋಡಿ, ಮಧುವನ್ನು ಹೀರಿದರೂ ಜನಗಳ ಕಣ್ಣು ತೃಪ್ತಿಹೊಂದುವುದಿಲ್ಲವೋ, ಅದನ್ನು ಸಂತೋಷದಿಂದ ತೃಪ್ತಿಯಾಗುವಂತೆ ನೋಡುವವರೆಗೆ ನನಗೂ ಶಾಂತಿ ಇಲ್ಲ” (ಶ್ರೀ.ರಾ.ದ. ಸರಳ ಗದ್ಯಾನುವಾದ)

“ಒಳಸೋರದಿರ್,
ಮಾತೆ; ಕಾಣ್, ನಿನ್ನಾಣ್ಮನಂಗುಳೀಯಕಮಲ್ತೆ
ನೀನೆತ್ತಿದರ್ಘ್ಯದೊಳದೊ ಮಹಾರ್ಘ್ಯಮೆಸೆಯುತಿದೆ, 
ಹೇ ಪುಣ್ಯಲಕ್ಷ್ಮೀ” (ಶ್ರೀ.ರಾ.ದ. ಲಂಕಾಸಂಪಟಂ – ಸಂಚಿಕೆ 4 ಅಶ್ರುಗಂಗೋತ್ರಿ; 224-227)

“ತಾಯಿ, ಪುಣ್ಯಲಕ್ಷ್ಮಿ ಚಿಂತಿಸಬೇಡ, ನೋಡು; ನೀನೆತ್ತಿದ್ದ ಅಂಜಲಿಯಲ್ಲಿ ಬಿದ್ದಿರುವುದು ನಿನ್ನ ಪತಿದೇವರ ಮಹಾಪವಿತ್ರವಾದ ಉಂಗುರವಲ್ಲವೆ?” (ಶ್ರೀ.ರಾ.ದ. ಸರಳ ಗದ್ಯಾನುವಾದ)

ರಾಷ್ಟ್ರಕವಿ ಕುವೆಂಪು ಅವರ ಈ ಅಮರ ಕಾವ್ಯಕೃತಿಯ ಈ ಸರಳ ಗದ್ಯಾನುವಾದ ಐದು ಮುದ್ರಣಗಳನ್ನು ಕಂಡಿದೆ. 2007ರಲ್ಲಿ ಪ್ರಕಟವಾದ 3ನೆಯ ಮುದ್ರಣದ ಪ್ರತಿಯನ್ನು ಅವರು ಕಂಡರು. ತಮ್ಮ ಸಾಹಿತ್ಯಾರಾಧನೆಯ ಶ್ರೇಷ್ಟ ಕೃತಿ ಯಾವ ಮುದ್ರಣ ದೋಷಗಳೂ ಇಲ್ಲದೆ ಸುಂದರವಾಗಿ ಮುದ್ರಣಗೊಂಡಿದ್ದನ್ನು ಕಂಡು ಸಂತೋಷಿಸಿದ್ದರು. ನಂಥರ ಕೆಲವೇ ತಿಂಗಳಗಳಲ್ಲಿ (9.1.2008) ವಿಜಯದಶಮಿಯ ದಿವಸ, ಕುಳಿತಲ್ಲಿಯೇ ಹೃದಯಾಘಾತವಾಗಿ ಮರಣಹೊಂದಿದರು. ಅವರ ಮರಣಾನಂತರ 2010 ಮತ್ತು 2011ರಲ್ಲಿ 4 ಮತ್ತು 5ನೆಯ ಮುದ್ರಣ ಹೊರಬಂದವು.

ತಾವು ಜೀವಿಸಿದ್ದಾಗಲೇ ತಮ್ಮ ಕಣ್ಣು ಮತ್ತು ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನಮಾಡಿದ್ದ ತ್ಯಾಗ ಜೀವಿ ರಾಜಶೇಕರ ಅವರು ತಮ್ಮ ಬದುಕಿನುದ್ದಕ್ಕೂ ಕೃಷಿಯಲ್ಲಿ, ತಂದೆ ತಾಯಿಯ ಸೇವೆಯಲ್ಲಿ, ಸಾಹಿತ್ಯಾರಾಧನೆಯಕ್ಕಿ ತೊಡಗಿಸಿಕೊಂಡಿದ್ದ ಸಾರ್ಥಕ ಜೀವಿ. ಕನ್ನಡ ಸಾಹಿತ್ಯದ ಅಪೂರ್ವ ಪ್ರೇಮಿಯಾಗಿದ್ದ ಅವರು, ತಾವು ಇಷ್ಟಪಟ್ಟ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಸರಳ ಗದ್ಯಾನುವಾದ ಮಾಡಿ ಅಮರರಾಗಿದ್ದಾರೆ. ಈ ಸುಕಾರ್ಯಕ್ಕಾಗಿ ಕನ್ನಡ ಸಾಹಿತ್ಯ ಪ್ರಿಯರು ರಾಜಶೇಖರ ಅವರಿಗೆ  ಉಪಕೃತರಾಗಿದ್ದಾರೆ.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಇಂಗ್ಲಿಷ್ ಭಾಷೆಗೆ ಸಮರ್ಪಕವಾಗಿ ಅನುವಾದಿಸಿದ ಸಾರ್ಥಕತೆ ಪಡೆದವರು ಕನ್ನಡದ ಮತ್ತೋರ್ವ ಶ್ರೇಷ್ಠ ಸಾಹಿತಿ ಶ್ರೀ ಶಂಕರ ಮೊಕಾಶಿ ಪುಣೇಕರರು. ಈ ಇಂಗ್ಲಿಷ್ ಅನುವಾದವೂ ಸಹ ಕುವೆಂಪು ಅವರ ಅವಗಾಹನೆಗೆ ಒಳಪಟ್ಟ ಕೃತಿ. ಕೇಂದ್ರಸಾಹಿತ್ಯ ಅಕಾಡೆಮಿ ಅದನ್ನು ಪ್ರಕಟಿಸಿದೆ. ಅದೇ ರೀತಿಯಾಗಿ ನಿ. ರಾಜಶೇಖ ಅವರ ಕನ್ನಡ ಭಾಷೆಯ ಈ ಸರಳ ಗದ್ಯಾನುವಾದವೂ ಸ್ವತಃ ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಶಂಸೆಗೊಳಪಟ್ಟ ಹೆಗ್ಗಳಿಕೆ ಪಡೆದಿದೆ.

ಮಹಾಕವಿಯ ಮಹಾಛಂದಸಿನ, ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ’ ಮೂಲಕೃತಿಯ ಸಂಗಡ, ರಾಜಶೇಖರ ಅವರ ಸರಳ ಗದ್ಯಾನುವಾದವೂ ಸಹ ಕನ್ನಡ ಸಾಹಿತ್ಯದಲ್ಲಿ ಯಾವಾಗಲು ರಾರಾಜಿಸುವ ವಿಶಿಷ್ಟ ಕೃತಿಯಾಗಿ ಉಳಿದು, ಹೆಚ್ಚು ಹೆಚ್ಚು ಜನಪ್ರಿಯತೆ ಪಡೆಯುತ್ತಾ ಸಾಗುತ್ತಿರುವುದು ಅದರ ಶ್ರೇಷ್ಟತೆಗೆ ಸಾಕ್ಷಿಯಾಗಿದೆ.

(ಈ ಲೇಖನವನ್ನು ಲಿಖಿತಪಡಿಸಲು ಸಾಹಿತಿ ಶ್ರೀಮತಿ ಪಾರ್ವತಮ್ಮ ಮಹಲಿಂಗಶೆಟ್ಟಿ -ನಿ. ರಾಜಶೇಖರ ಅವರ ಸಹೋದರಿ- ಅವರು ನೀಡಿದ ವಿವರಗಳನ್ನುಗೌರವದಿಂದ ಕೃತಜ್ಞತಾಪೂರ್ವಕ ಸ್ಮರಿಸುತ್ತೇನೆ)
-ಶ್ರೀನಿವಾಸ ಕೃ. ದೇಸಾಯಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x