ಪ್ರವಾಸ-ಕಥನ

ನಿಸರ್ಗದ ಮಡಿಲು ಸೆವೆನ್ ಸಿಸ್ಟರ್ಸ್ ಮತ್ತು ಬ್ರೈಟನ್: ಅರ್ಪಿತಾ ಹರ್ಷ


ಲಂಡನ್ ಎಂದ ತಕ್ಷಣ ಎಲ್ಲರ ಕಣ್ಣಿಗೆ ಕಾಣುವುದು ದೊಡ್ಡ ದೊಡ್ಡ ಬಿಲ್ಡಿಂಗ್,ಒಂದಿಷ್ಟು ಸಣ್ಣ ಪುಟ್ಟ ನದಿ, ಎಲೆಕ್ಟ್ರೋನಿಕ್ ಟ್ರೈನ್,ಸುಂದರ  ಮತ್ತು ಸುಸಜ್ಜಿತವಾದ ಪಾರ್ಕ್ ಮತ್ತು ಹಳೇ ವಿಕ್ಟೋರಿಯನ್ ಕಾಲದ ಮನೆಗಳು.ಕರ್ನಾಟಕದಂತ ಹಸಿರು,ಗದ್ದೆ,ಕೆರೆ,ತೋಟಗಳನ್ನು ನೋಡಿ ಬೆಳೆದವರಿಗೆ ಈ ರೀತಿಯ ಹೈ ಟೆಕ್ ಜೊತೆಗೆ ಹಳೇ ಮನೆಗಳ ನಡುವೆ ಇರುವಾಗ ನಮ್ಮ ಊರಿನ ನೆನಪು ಸದಾ ಕಾಡುತ್ತದೆ.ಆ ಹಸಿರನ್ನು ನೋಡಬೇಕು ಅಲ್ಲಿ ಕುಳಿತು ಊಟ ಮಾಡಬೇಕು,ನಮ್ಮ ನೆಚ್ಚಿನವರೊಂದಿಗೆ ಕುಳಿತು ಒಂದಿಷ್ಟು ಹರಟೆ ಹೊಡೆಯಬೇಕು,ಪ್ರಕೃತಿಯ ಸೊಬಗನ್ನು ಸವಿಯಬೇಕು,ನಿಸರ್ಗದ ಮಡಿಲಲ್ಲಿ ಕುಳಿತು ಒಂದಿಷ್ಟು ಹೊತ್ತು ಪ್ರಪಂಚವನ್ನೇ ಮರೆತುಬಿಡಬೇಕು ಹೀಗೆ ಸಾಕಷ್ಟು ಆಸೆಗಳು ಆಗಾಗ ಗರಿಗೆದರುತ್ತವೆ.ನಮ್ಮವರೆಲ್ಲರಿಂದ ದೂರ ಇರುವವರಿಗಂತೂ ಇವುಗಳೆಲ್ಲ ಇನ್ನೂ ಹೆಚ್ಚು ಅನಿಸುತ್ತದೆ. ಹಾಗೆ ಅನ್ನಿಸಿದಾಗಲೇ ನಾವು ಹುಡುಕಲು ಪ್ರಾರಂಭ ಮಾಡಿದ್ದು ಒಂದು ದಿನದ ಪ್ರವಾಸ ಕೈಗೊಳ್ಳಲು ಸೂಕ್ತವಿರುವ ಇಂಗ್ಲೆಂಡ್ ನ ಸೆವೆನ್ ಸಿಸ್ಟರ್ಸ್ ಮತ್ತು ಬ್ರೈಟನ್.

ಬ್ರೈಟನ್ ಮತ್ತು ಸೆವೆನ್ ಸಿಸ್ಟರ್ಸ್ ಒಂದಕ್ಕೊಂದು ಹತ್ತಿರದಲ್ಲೇ ಇವೆ.ಬ್ರೈಟನ್ ನಿಂದ ಸೆವೆನ್ ಸಿಸ್ಟರ್ಸ್ ಗೆ ಬಸ್ ನಲ್ಲಿ ಪ್ರಯಾಣಿಸಿದರೆ ಕೇವಲ ಅರ್ಧ ಗಂಟೆ.ನಿಸರ್ಗ ಸೌಂದರ್ಯವನ್ನು ಸವಿಯಲು ಹಾತೊರೆಯುವವರಿಗೆ ಇದು ಸರಿಯಾದ ತಾಣ.ಲಂಡನ್ ನಿಂದ ಟ್ರೈನ್ ನಲ್ಲಿ ಕೇವಲ ಒಂದು ಗಂಟೆಯ ಪ್ರಯಾಣವಾಗಿದ್ದು ಬ್ರೈಟನ್ ಗೆ ನೇರ ಟ್ರೈಲಿನ ಸಂಪರ್ಕವಿದೆ.

ಸೆವೆನ್ ಸಿಸ್ಟರ್ಸ್ :

ಸೆವೆನ್ ಸಿಸ್ಟರ್ಸ್ ಎಂಬುದು ದಕ್ಷಿಣ ಇಂಗ್ಲೆಂಡ್ ನ ಸೀಫೋರ್ಡ್ ಮತ್ತು ಈಸ್ಟ್ ಬೋರ್ನ್ ಸಿಟಿ ನಡುವೆ ಇರುವ ಸುಂದರ ಸ್ಥಳ.ಸುಮಾರು 280 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಹಸಿರು ಬೆಟ್ಟದ ತುದಿಯನ್ನು ಹತ್ತಿದರೆ ಅಲ್ಲಿ ಸಿಗುವುದು 7 ಕಣಿವೆಗಳು. ಇಂಗ್ಲಿಷ್ ನದಿಯ ರಬಸಕ್ಕೆ ಕೊರೆದು ಸೀಮೆ ಸುಣ್ಣದ 7 ಕಣಿವೆಗಳು ನೈಸರ್ಗಿಕವಾಗಿ ನಿರ್ಮಾಣವಾಗಿವೆ.ಇವುಗಳಿಂದಲೇ ಈ ಸ್ಥಳಕ್ಕೆ ಸೆವೆನ್ ಸಿಸ್ಟರ್ಸ್ ಎಂಬ ಹೆಸರು ಬಂತು ಎನ್ನಲಾಗುತ್ತದೆ.ಈ 7 ಕಣಿವೆಯನ್ನು ನೋಡಲು ಸುಮಾರು 3 ಮೈಲಿಗಳಷ್ಟು ನಡೆದು ಬೆಟ್ಟ ಹತ್ತಿ ತಲುಪಬೇಕಾಗುತ್ತದೆ. ಈ 7 ಸುಣ್ಣದ ಬಿಳಿಯ ಕಣಿವೆಗಳಿಗೆ 7 ಬೇರೆಬೇರೆ ಹೆಸರುಗಳಿವೆ ಎಂದು ಕೂಡ ಹೇಳಲಾಗುತ್ತದೆ.ಇವುಗಳಲ್ಲಿ ಅತಿ ಎತ್ತರದ ಕಣಿವೆ 253 ಅಡಿ ಇದೆ.ಟ್ರೆಕಿಂಗ್ ನಲ್ಲಿ ಆಸಕ್ತಿ ಇರುವವರಿಗೆ ಇದು ಅತಿ ಸಂತೋಷವನ್ನು ನೀಡಬಲ್ಲದು.ಸುಮಾರು 2 ಗಂಟೆಗಳ ಕಾಲ ನಡೆದರೂ ಕೂಡ ಸುತ್ತಲಿನ ಆ ಕಂಗೊಳಿಸುವ ಹಸಿರು,ಅಲ್ಲಲ್ಲಿ ಕಾಡುವ ಹಸುಗಳ ಹಿಂಡು ಮತ್ತು ಸಣ್ಣಪುಟ್ಟ ನೀರಿನ ಹರಿವು ಇವುಗಳೆಲ್ಲ ನಮ್ಮ ಮಲೆನಾಡಿನ ನೆನಪನ್ನು ಹಸಿರಾಗಿಸುತ್ತದೆ. ಕೊನೆ ತಲುಪಿದ ಮೇಲೆ ಕಾಡುವ ಸಮುದ್ರದ ಅಪ್ಪಳಿಕೆ ಮಾತ್ತು ಸುಂದರ ಕಣಿವೆಗಳ ದೃಶ್ಯಗಳು ಪದಗಳಲ್ಲಿ ನಿಲುಕುವುದಿಲ್ಲ.


ಬೆಟ್ಟವನ್ನು ಏರದೇ ನೇರವಾಗಿ ಪಕ್ಕದಲ್ಲಿ ಸಮತಟ್ಟಾದ ನೆಲದಲ್ಲಿ ನಡೆದುಕೊಂಡು ಹೋದರೆ ಸಮುದ್ರದ ದಡಕ್ಕೆ ಹೋಗಿ ತಲುಪುತ್ತದೆ.ಸಾಕಷ್ಟು ಶೂಟಿಂಗ್ ಗಳನ್ನೂ ಕೂಡ ಈ ಸ್ಥಳದಲ್ಲಿ ಮಾಡಲಾಗುತ್ತದೆ ಎನ್ನಲಾಗುತ್ತದೆ.ಇಲ್ಲಿ ಹೋಗುವ ದಾರಿಯಲ್ಲಿ ಹರಿಯುವ ಸಣ್ಣ ಕೆರೆಯಲ್ಲಿ ಬೋಟಿಂಗ್ ಕೂಡ ಮಾಡಬಹುದು,ಜೊತೆಗೆ ಸೈಕ್ಲಿಂಗ್,ಕ್ಯಾನೋಯಿಂಗ್ ಮತ್ತು ನಿಸರ್ಗದ ಮಡಿಲಲ್ಲಿ ಇರುವುದರಿಂದ ವಿವಿಧ ಜಾತಿಯ ಹಕ್ಕಿಗಳಿದ್ದು ಪಕ್ಷಿ ವೀಕ್ಷಕರಿಗೆ ಕೂಡ ಇದು ಸೊಗಸಾದ ತಾಣ.ಮೀನು ಹಿಡಿಯಲು ಆಸಕ್ತಿ ಇದ್ದರೆ ಅದಕ್ಕೂ ಅವಕಾಶವಿದೆ.

ಸೆವೆನ್ ಸಿಸ್ಟರ್ಸ್ ಬಸ್ ಸ್ಟಾಪ್ ನಲ್ಲಿ ಇಳಿದುಕೊಂದರೆ ಅಲ್ಲೊಂದು ವಿಸಿಟರ್ ಸೆಂಟರ್ ಕೂಡ ಇದೆ.ಇಲ್ಲಿ ಕಣಿವೆಗಳ ಬಳಿ ಹೇಗೆ ಹೋಗಬೇಕು ಮತ್ತು ಅಲ್ಲಿ ಏನೆಲ್ಲಾ ನೋಡಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ಲ್ಯಾಂಡ್ ಮಾರ್ಕ್ ಅನ್ನು ಕೂಡ ನೀಡುತ್ತಾರೆ.ಅದನ್ನು ಪಡೆದು ಹೋದರೆ ಎಲ್ಲಿ ಹೋಗಬೇಕು ಎಂಬುದು ಸರಿಯಾಗಿ ತಿಳಿಯಬಹುದು. ಜೊತೆಗೆ ಇಲ್ಲೊಂದು ಸಣ್ಣ ಕಾಟೇಜ್ ಮನೆಯಿದ್ದು ಸಾಂಪ್ರದಾಯಿಕ ಆಹಾರಗಳು ದೊರೆಯುತ್ತವೆ.ಜೊತೆಗೆ ಸುಂದರವಾದ ಹೂವುಗಳಿಂದ ಕೂಡಿದ ಗಾರ್ಡನ್ ಕೂಡ ನೋಡುಗಳ ಮನ ತಣಿಸುತ್ತದೆ.

ಬ್ರೈಟನ್ :
ಬ್ರೈಟನ್ ಒಂದು ಬೀಚ್.  ಬ್ರೈಟನ್ ಕಲ್ಲಿನ ಬೀಚ್ ಇಲ್ಲಿನ ಜನರ ಆಕರ್ಷಣೆಗಳಲ್ಲಿ ಒಂದು.ವರ್ಷದ ಹೆಚ್ಚು ಕಾಲ ಇಲ್ಲಿ ಅತಿ ಹೆಚ್ಚು ಚಳಿ ಇರುವುದರಿಂದ ಬೇಸಿಗೆ ಬಂತೆಂದರೆ ಜನ ಮನೆಯಿಂದ ಹೊರಹೊರಟು ಬೀಚ್ ನಲ್ಲಿ ಸನ್ ಬಾತ್ ಮಾಡಲು ಇಷ್ಟಪಡುತ್ತಾರೆ.ಜೊತೆಗೆ ಇಲ್ಲಿ ಸಾಕಷ್ಟು ಮನೋರಂಜನಾ ರೈಡ್ಸ್ ಗಳು ಇರುವುದರಿಂದ ಸಂಜೆಯ ಸಮಯವನ್ನು ಕಳೆಯಲು ಇದು ಸೂಕ್ತ ಸ್ಥಳ. ಬೀಚ್ ಪ್ರಿಯರಿಗೆ ಬ್ರೈಟನ್ ಪೆಬಲ್ ಬೀಚ್ ಸುಂದರ ಸಂಜೆ ನೀಡುವುದು ಖಂಡಿತ. ಸೆವೆನ್ ಸಿಸ್ಟರ್ಸ್ ನಿಂದ ಲಂಡನ್ ತಲುಪಲು ಇದೇ ಮಾರ್ಗವಾಗಿ ಬರಬೇಕಾದ್ದರಿಂದ ಇದು ಕೂಡ ಭೇಟಿ ನೀಡಲೇಬೇಕಾದ ಸ್ಥಳ.

ತಲುಪುವ ಮಾರ್ಗ :ಲಂಡನ್ ನಿಂದ ಕೇವಲ ಒಂದೂವರೆ ಗಂಟೆಯ ಪ್ರಯಾಣವಾದ್ದರಿಂದ ನೇರ ರೈಲಿನಲ್ಲಿ ಬ್ರೈಟನ್ ತಲುಪಬಹುದು.ಅಲ್ಲಿಂದ ಸೆವೆನ್ ಸಿಸ್ಟರ್ಸ್ ಗೆ ಸಾಕಷ್ಟು ಬಸ್ಸುಗಳ ಸಂಪರ್ಕ ಸೌಲಭ್ಯವಿದ್ದು ಅರ್ಧ ಗಂಟೆಯಲ್ಲಿ ಸೆವೆನ್ ಸಿಸ್ಟರ್ಸ್ ಬಸ್ಸು ನಿಲ್ದಾಣ ತಲುಪಬಹುದು.ಅಲ್ಲಿಂದ ಟ್ರಕ್ಕಿಂಗ್ ಅಥವಾ ನಡುಗೆ ಮೂಲಕ ಕಣಿವೆಯ ತುದಿ ತಲುಪಲು  ಸುಮಾರು 3  ಗಂಟೆಯ ಕಾಲ ಬೇಕಾಗುವುದು. ಜೊತೆಗೆ ಟ್ರೆಕಿಂಗ್ ಗೆ ಬೇಕಾಗುವ ಶೂ ಮತ್ತು ಗಾಳಿ ಅತಿ ಹೆಚ್ಚು ಇರುವುದರಿಂದ ಜಾಕೆಟ್ ಕೊಂಡೊಯ್ಯುವುದು ಅನಿವಾರ್ಯ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *