ನಿಷೇಧಕ್ಕೊಳಪಟ್ಟ ಆ ಒಂದು ನೋಟು- ವಿಮರ್ಶೆ: ಸಚಿನ್ ಅಂಕೋಲಾ..

ಕವಿತೆಗಳ ಮೂಲಕವೇ ಪರಿಚಿತರಾದ ವಿಲ್ಸನ್ ಕಟೀಲ್ ಅವರ ಚೊಚ್ಚಲ ಕನ್ನಡ ಕವಿತೆಗಳ ಸಂಕಲನವನ್ನು ಓದುವ ಈ ಹೊತ್ತಿಗೆ ಅವರೊಬ್ಬ ಪ್ರಭುದ್ಧ, ವೈಚಾರಿಕ, ಸಾಮಾಜಿಕ ಕಳಕಳಿಯುಳ್ಳ, ಸರಳ ವ್ಯಕ್ತಿತ್ವದ ವಿಶೇಷ ಕವಿಯಾಗಿ ನಮ್ಮೆಲ್ಲರಿಗೂ ಆಪ್ತರಾದವರು.. ಸಮಾಜದಲ್ಲಿ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಘಾಸಿಯಾದಂತೆಲ್ಲಾ ತಾವು ಲೇಖನಿಯ ಮೂಲಕ ತಕ್ಷಣದಲ್ಲಿ ಪ್ರತಿಕ್ರಿಯಿಸುವ ವಿಲ್ಸನ್ ಕಟೀಲ್ ಅವರು ಈ ದಿನಗಳ ಬಹಳ ಅಗತ್ಯದ ಕವಿ ಮತ್ತು ಅವರ ಕವಿತೆಗಳು ಇಂದಿನ ಅತ್ಯಾವಶ್ಯಕ ರಚನೆಗಳಾಗಿವೆ..

ಪ್ರಸ್ತುತ “ನಿಷೇಧಕ್ಕೊಳಪಟ್ಟ ಒಂದು ನೋಟು” ಕವಿತೆಗಳ ಸಂಕಲನ ಯಾವ ನಿರೀಕ್ಷೆಯನ್ನು ಮೊದಲ ನೋಟಕ್ಕೇ ಹುಟ್ಟುಹಾಕುತ್ತದೆಯೋ ಅದನ್ನೂ ಮೀರಿ ಓದಿ ಮುಗಿಸುವ ಹೊತ್ತಿಗೆ ನಮ್ಮೊಳಗೆ ಕಿಡಿಗಳನ್ನು ಹೊತ್ತಿಸಿಬಿಡುತ್ತವೆ.. ಈ ಸಂಕಲನದ ಕವಿತೆಗಳು ವಿಲ್ಸನ್ ಕಟೀಲ್ ಅವರಷ್ಟೇ ಸರಳವಾದ, ಸುಲಲಿತವಾದ ಜನಪರ ಕವಿತೆಗಳು..ಇಲ್ಲಿನ ಕವಿತೆಗಳು ಜನಪದದ ಮಾದರಿಯಲ್ಲಿ ಜನರ ಬಾಯಲ್ಲಿ ಹಾಡಾಗಬಲ್ಲವು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇದು ತನ್ನೊಳಗಿನ ಹಾಡು ಎಂಬ ಭಾವವನ್ನು ಮೂಡಿಸಬಲ್ಲವು.. ವಿಲ್ಸನ್ ಕಟೀಲ್ ಅವರ ಈ ನಿಲುವು “ಕವಿತೆಗೊಂದು ಪ್ರವೇಶ ಪರೀಕ್ಷೆ” ಎಂಬ ಕವಿತೆಯಲ್ಲಿ ಬಹಳ ಸುಂದರವಾಗಿ ನಿರೂಪಣೆಗೊಂಡಿದೆ.. ಔಷಧದ ಚೀಟಿಯಲ್ಲಿ ಬರೆದ ಉಪ್ಪುಪ್ಪು ಸಾಲುಗಳು, ಟಿಕೇಟಿನ ಚೂರಿನಲ್ಲಿ ಬರೆದ ಬೆವರು ನಾರುವ ಪದಗಳು, ಬ್ಯಾಂಡೇಜು ಚಿಂದಿಯಲ್ಲಿ ಬರೆದ ಅಂಟಂಟು ಅಕ್ಷರಗಳು ವಿದ್ವಾಂಸರಿಂದ ತಿರಸ್ಕಾರಗೊಂಡು, ಕಾಗದವನ್ನೇ ಒದ್ದು ತಟ್ಟನೆ ಗಾಳಿಯಲ್ಲಿ ಹಾರಿಹೋಗುತ್ತದೆ.. ಚಿಟ್ಟೆಗಿಂತಲೂ ಹಗುರ ತನ್ನ ಕವಿತೆಗಳು ಎನ್ನುವ ಮೂಲಕ ಈ ಕವಿ ತನ್ನ ಕವಿತೆಗಳು ಯಾರನ್ನು ತಲುಪಬೇಕು, ಏನನ್ನು ಹೇಳಬೇಕು ಎಂಬ ಸ್ಪಷ್ಟ ನಿಲುವನ್ನು ದಿಟ್ಟವಾಗಿ ಈ ಕವಿತೆಯ ಮೂಲಕ ತೆರೆದಿಡುತ್ತಾರೆ…

ಈ ಜೀವಪರ ನಿಲುವಿನ ಕವಿ ಜಗತ್ತನ್ನೇ ತನ್ನ ಮಮಕಾರದ ಕಣ್ಣುಗಳಿಂದ ನೋಡಬಲ್ಲರು ಎಂಬುದಕ್ಕೆ “ಪುಟ್ ಪಾತ್” ಕವಿತೆ ಸಶಕ್ತ ನಿದರ್ಶನವಾಗಿದೆ..ಈ ಪುಟ್ ಪಾತನ್ನು/ ಪಾದಗಳಿಗಿಂತಲೂ ಹೆಚ್ಚು/ ಬೆನ್ನುಗಳು ಸ್ಪರ್ಶಿಸಿವೆ ಎನ್ನುತ್ತಾ ಮುಂದುವರೆದು ಈ ಪುಟ್ ಪಾತನ್ನು/ ನಗರಪಾಲಿಕೆಗಿಂತಲೂ ಹೆಚ್ಚು/ ಅನಾಥರು ಪ್ರೀತಿಸಿದ್ದಾರೆ ಎನ್ನುತ್ತಾರೆ ಮತ್ತು ಈ ಅನಾಥರನ್ನು ವಿಲ್ಸನ್ ಕಟೀಲ್ ತಮ್ಮ ಮಾತೃ ಹೃದಯದಿಂದ ಪ್ರೀತಿಸಬಲ್ಲರು ಅವರ ನೋವನ್ನು ಕವಿತೆಯಲ್ಲಿ ಕಟ್ಟಿಕೊಡಬಲ್ಲರು…

ಮುನ್ನುಡಿಯಲ್ಲಿ ಆರಿಫ್ ರಾಜಾ ಅವರು ಹೇಳುವಂತೆಯೇ ‘ನಿಷೇಧಕ್ಕೊಳಪಟ್ಟ ಒಂದು ನೋಟು’ ಕವಿತೆ ಇತ್ತೀಚಿನ ಕನ್ನಡದ ಬಹಳ ಉತ್ತಮ ಕವಿತೆ.. ನೋಟು ಅಮಾನ್ಯಗೊಂಡ ಅಥವಾ ಅಮಾನ್ಯಗೊಳಿಸಿದ ರಾಜಕಾರಣ ಜನಸಾಮಾನ್ಯನಿಗೆ ಹೇಗೆ ಸಹಿಸಲಾರದ ಭರೆಯಾಯಿತು ಎಂಬುದನ್ನು ಎಳೆಎಳೆಯಾಗಿ ಈ ಕವಿತೆ ಕಣ್ಮುಂದೆ ಕಟ್ಟಿಕೊಡುತ್ತದೆ.. ನೋಟು ಶ್ರಮದ ರೂಪಕವಾಗಿ ಆ ಶ್ರಮವನ್ನು ಎಂದೂ ಅಮಾನ್ಯಗೊಳಿಸದ ಹಾಗೆ ತಡೆಹಿಡಿವ ಈ ಕವಿತೆ ಮೀನು ಮಾರುವ ಹೆಂಗಸಿನಿಂದ ಹಿಡಿದು ಸೆರಗ ಗಂಟಿನಲ್ಲಿ ನೋಟು ಕಟ್ಟಿಟ್ಟುಕೊಳ್ಳುತ್ತಿದ್ದ ನನ್ನವ್ವನ ವರೆಗೆ ಎಲ್ಲರ ನೋವಿನ ಕಥೆ ಇದು…ಪ್ರಭುತ್ವದ ಸೊಕ್ಕಿಗೆ ಅಕ್ಷರಗಳ ಪ್ರತಿರೋಧದ ಕವಿತೆಯಿದು…

ಈ ಸಂಕಲನದಲ್ಲಿ ನನ್ನನ್ನು ಅತ್ಯಂತ ಕಾಡಿದ ಕವಿತೆಯೆಂದರೆ ‘ಶವಸಂಸ್ಕಾರವೆಂದರೆ’ ಎಂಬ ಕವಿತೆ.. ಕವಿತೆಯ ತುಂಬಾ ಶವಸಂಸ್ಕಾರದ ನಯನಾಜೂಕು ವಿಧಿ ವಿಧಾನಗಳನ್ನು ಬಹಳ ಸರಳವಾಗಿ ವಿವರಿಸುತ್ತಾ ಹೋಗುತ್ತಾರೆ ಕವಿ. ಅಲ್ಲಿಗೆ ಈ ಕವಿತೆ ಒಂದು ಸಾಮಾನ್ಯ ಕವಿತೆಯಾಗಿ ಮುಗಿದುಬಿಡುತ್ತದೆಯೋ ಎಂಬ ಭಾವ ಆವರಿಸಿಕೊಳ್ಳುತ್ತಿರುವಾಗಲೇ ಕವಿತೆಯ ಅಂತ್ಯ “ತಾನೂ ಹೆಣವಾಗದ್ದಕ್ಕೆ/ತೀವ್ರ ಸಂಕಟ ಪಡುತ್ತಿದ್ದಾಳೆ- ಕ್ರೂರವಾಗಿ / ಅತ್ಯಾಚಾರಕ್ಕೊಳಪಟ್ಟಾಕೆ..!” ಎನ್ನುವ ಮೂಲಕ ಒಂದು ಕ್ಷಣ ಮೂಕವಾಗಿಸಿಬಿಡುತ್ತದೆ.. ಆತ್ಯಾಚಾರಕ್ಕೊಳಪಟ್ಟು ಕೊಲೆಯಾದ ಆಸೀಫಾಳೋ, ದಾನಮ್ಮಳೋ ಅಥವಾ ಅಂತಹ ನೂರಾರು ಸಾವಿರಾರು ಹೆಣ್ಣು ಮಕ್ಕಳು ನಮ್ಮ ಕಣ್ಮುಂದೆ ಮೆರವಣಿಗೆ ಹೊರಟಂತೆ; ಆಳದಲಿ ನೋವುಕ್ಕಿ ಕಣ್ಣಂಚು ಹನಿಗಳಾಗಿಬಿಡುತ್ತದೆ..

‘ಗಾಂಧಿ ನನಗಿಷ್ಟ’ ಕವಿತೆ ನನಗೂ ಇಷ್ಟವಾದ ಕವಿತೆ.. ನಾವೆಲ್ಲಾ ಗಾಂಧಿಯನ್ನು ಇಷ್ಟಪಡುತ್ತೇವೆ ಮತ್ತು ಗಾಂಧಿಯಂತೆ ಆಗಲು ಇಷ್ಟಪಡುವುದಿಲ್ಲ; ಇಷ್ಟಪಟ್ಟರೂ ಅಂತಹ ತಪಸ್ಸಿನ ಬದುಕನ್ನು ಬದುಕಲು ನಾವು ಕಷ್ಟ ಪಡುವುದಿಲ್ಲ.. ವಿಲ್ಸನ್ ಕಟೀಲ್ ಅವರ ಈ ಕವಿತೆ ಖಂಡಿತವಾಗಿಯೂ ನಮ್ಮೊಳಗಿನ ನಮ್ಮನ್ನು ವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ..

‘ಸಂಸ್ಕಾರಗಳು’ ಕವಿತೆ ಶೋಷಿತ ಸಮುದಾಯದ ನೋವನ್ನು ಬಿಚ್ಚಿಡುತ್ತಾ ಅವರ ಎದೆಯಾಳದ ಆಕ್ರೋಶಕ್ಕೆ ದನಿಯಾಗುತ್ತದೆ.. “ಮಲದ ಗುಂಡಿಯಲ್ಲಿ ಬಿದ್ದಾಗಲೇ/ ನನ್ನವರ ದೇಹ ಕೊಳೆತು ಹೋಗಿದೆ/ ನೀವು ಮುಚ್ಚಬೇಕಾಗಿರುವುದು / ನಿಮ್ಮದೇ ಹೊಲಸನ್ನು! ಎನ್ನುತ್ತಾ ಕವಿತೆ ಅಂತ್ಯದಲ್ಲಿ ಬಂದೂಕು ಸಿಡಿದಾಗಲೇ/ ನನ್ನವರ ವಿಚಾರ ಅಮರವಾಗಿದೆ/ ನೀವು ಸಂಭ್ರಮಿಸಬೇಕಾಗಿರುವುದು/ ನಿಮ್ಮದೇ ಸಾವುಗಳನ್ನು! ಎನ್ನುವ ಮೂಲಕ ಮತೀಯವಾಧಿಗಳ ಹೇಡಿತನದ ಕೃತ್ಯಗಳನ್ನು ಟೀಕಿಸುತ್ತದೆ, ಮತ್ತು ಅವರ ಹುಚ್ಚು ಸಂಭ್ರಮವನ್ನು ನಗಣ್ಯವಾಗಿಸುತ್ತದೆ..

‘ಭೂಕಂಪ’ ಮತ್ತು ‘ ರಾಮ ರಾಮ’ ಎಂಬ ಎರಡೂ ಕವಿತೆಗಳು ಧರ್ಮ ಧರ್ಮಗಳ ನಡುವಿನ ಸಾಮರಸ್ಯವನ್ನು ನೆನಪಿಸುವ ಮತ್ತು ಅವು ಈ ಹೊತ್ತಿಗೆ ಸಾಗುತ್ತಿರುವ ದಾರಿಯ ಬಗ್ಗೆ ಎಚ್ಚರಿಸುವ ಕವಿತೆ.. ಭೂಕಂಪದಲ್ಲಿ ಮಂದಿರ, ಮಸೀದಿ, ಚರ್ಚು ನೆಲಸಮವಾಗಿ ಜನರೆಲ್ಲಾ ಬಯಲಿನೆಡೆಗೆ ಓಡುತ್ತಾರೆ, ಅಲ್ಲಿದ್ದ ದೇವರು ಎಲ್ಲರ ಪ್ರಾರ್ಥನೆಯನ್ನು ಅಡೆತಡೆಯಿಲ್ಲದೇ ಆಲಿಸುತ್ತಾನೆ ಎನ್ನುವ ಮೂಲಕ ದೇವರು ಧರ್ಮವನ್ನು ಬಯಲಲ್ಲಿ ಲೀನವಾಗಿಸಿ ಎಲ್ಲರಿಗೂ ಸಾರ್ವತ್ರಿಕರಣಗೊಳಿಸುತ್ತಾರೆ ಸರಳೀಕರಿಸುತ್ತಾರೆ..ಮತ್ತು ಎಲ್ಲರೊಳಗಿನ ದೇವರೂ ಬಯಲಲ್ಲಿ ಚೆಲ್ಲಿದ ಬೆಳಕಂತೆ ಒಂದೇ ರೂಪದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸುತ್ತಾರೆ..’ರಾಮ ರಾಮ’ ಕವಿತೆಯೂ ರಾಮ ಮತ್ತು ಕ್ರಿಸ್ಥನ ನಡುವೆ ಆತ್ಮೀಯತೆಯನ್ನು ಚಿತ್ರಿಸುವ ಮೂಲಕ, ಮಂದಿರ ಮಸೀಧಿಗಳನ್ನು ಒಟ್ಟೊಟ್ಟಿಗೆ ಕಟ್ಟಿಸಿದ ರೂಪಕಗಳ ಮೂಲಕ ಧರ್ಮ ಧರ್ಮಗಳನ್ನು ಬೆಸೆಯುತ್ತದೆ.., ಮತ್ತು ಈ ಧರ್ಮಗಳ ನಡುವೆ ಎದ್ದಿರುವ ಕಲಹಗಳನ್ನು ಕಂಡು ರಾಮನೂ ಲಂಕೆಗೆ ಪಲಾಯನ ಗೈದನೇ ಎಂದು ಪ್ರಶ್ನಿಸುವ ಮೂಲಕ ಧರ್ಮದ ಹೆಸರಲ್ಲಿ ಹಿಂಸೆಗಿಳಿದಿರುವವರ ಎದುರು ಅರಿವಿನ ಬೆಳಕು ಚೆಲ್ಲಲು ಪ್ರಯತ್ನಿಸುತ್ತದೆ..

ಈ ಸಂಕಲನದ ತುಂಬೆಲ್ಲಾ ಪ್ರಭುತ್ವದ ನಡೆಯನ್ನು ವಿಮರ್ಶಿಸುವ, ಅದರ ಜನವಿರೋಧಿ ನೀತಿಗಳನ್ನು ಟೀಕಿಸುವ, ಮತೀಯವಾದವನ್ನು ವಿರೋಧಿಸುವ ಅತ್ಯಂತ ಪರಿಣಾಮಕಾರಿಯಾದ ಅನೇಕ ಕವಿತೆಗಳು ಓದಿಗೆ ದಕ್ಕುತ್ತವೆ.. ‘ನಿರ್ಬಂಧ’, ‘ ಸಾರ್ವಜನಿಕರಿಗೆ ಕೆಲವು ಸೂಚನೆಗಳು’, ‘ಧರ್ಮ ಮತ್ತು ಮರ’, ‘ಕಿತ್ತಳೆಯ ಅಚ್ಛೆ ದಿನ್’, ‘ಅಕ್ಕನ ಪಾರ್ಥನೆ’, ‘ಆಯುಧಗಳನ್ನು ದಿಕ್ಕರಿಸಿ’, ‘ಸಾಕ್ಷಿ’ ಹೀಗೆ ಅನೇಕ ಸಶಕ್ತ ಕವಿತೆಗಳು ಸಮಾಜವನ್ನು ಕಾಡುತ್ತಿರುವ ಪ್ರಭುತ್ವದ ನಿಲುವುಗಳನ್ನು ಕಟುವಾಗಿ ವಿಮರ್ಶಿಸುತ್ತದೆ..ಇಲ್ಲಿನ ಅನೇಕ ಕವಿತೆಗಳು ಬಿಡಿ ಬಿಡಿ ರಚನೆಗಳಿಂದಾಗಿ ಸುಂದರ ಕವಿತೆಗಳಾಗಿವೆ.. ಚಿಕ್ಕ ಚಿಕ್ಕ ಕವಿತೆಗಳ ಮೂಲಕ ವಿಲ್ಸನ್ ಕಟೀಲ್ ಅವರು ಅಪಾರ ಆಳಕ್ಕೆ ಇಳಿಯಬಲ್ಲ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ..ಅದು ಅವರ ಬರವಣಿಗೆಯ ವಿಶೇಷತೆಯೂ ಹೌದು..ಮತ್ತು ಓದುಗರನ್ನು ತಲುಪುವಲ್ಲಿ ಅತ್ಯಂತ ಪರಿಣಾಮಕಾರಿಯೂ ಹೌದು ಎನಿಸುತ್ತದೆ.. ಅಂತಹ ಕೆಲವು ಆಪ್ತವೆನಿಸುವ ರಚನೆಗಳು ಇಲ್ಲಿವೆ..

“ಬಿಚ್ಚಿಡಲಾಗದ
ಹುಟ್ಟುಡುಗೆಯ ಮೇಲೆ
ನಾಚಿಕೆಯ ಕಸೂತಿ!”(ಸ್ವತಂತ್ರ ಸಾಲುಗಳು)

“ಮೊದಲ ಮಳೆಗೆ
ತೊಯ್ದ ಮಣ್ಣಿಗೆ
ಅದೆಂಥಾ ಕಂಪು
ಬೇಸಿಗೆಯಲ್ಲಿ ಅಸಂಖ್ಯಾತ ಹೂಗಳು
ಕಾಲ್ತುಳಿತಕ್ಕೊಳಪಟ್ಟಿರಬೇಕು!”
(ಮಳೆ ಹೂಗಳು)”

ಗಡಿಯಾಚೆಯವನು ಗಾಯಗೊಂಡರೂ
ದುಖಃಪಡುವೆ
ಸೇನೆಯ ಸಮವಸ್ತ್ರ
ಕಳಚಿದಲ್ಲಿ
ಇಬ್ಬರೂ ಮನುಷ್ಯರೇ!”
(ಗಡಿ ನುಸುಳಿದ ಕವಿತೆ)

“ಮೊದಲ ಪ್ರೇಮದ ತ್ಯಾಗ
ಉಕ್ಕಿ ಬಂದ ಕಣ್ಣೀರು
‘ಇನ್ಯಾರನ್ನೂ ಪ್ರೀತಿಸಲ್ಲ’ ಮಾಡಿದ ಶಪಥ;
ಸೇದಿದ ಮೊದಲ ಸಿಗರೇಟು
ಬಿಕ್ಕಿ ಬಂದ ಕೆಮ್ಮು
‘ಇನ್ನೆಂದೂ ಸೇದಲ್ಲ’ ಕೊಟ್ಟ ಮಾತು-
ಬೆಂಬಿಡದೇ ಕಾಡುತ್ತವೆ-
ಮತ್ತೆ ಮತ್ತೆ ಮುದ್ದಿಸುವಾಗ
ಮತ್ತೆ ಮತ್ತೆ ಸೇದುವಾಗ!”
(ಉರಿವ ಸಾಲುಗಳು)

ಈ ಸಂಕಲನದ ಉತ್ತಮ ಕವಿತೆಗಳ ಬಗ್ಗೆ ಬರೆಯಹೊರಟರೆ ಎಲ್ಲಾ ಕವಿತೆಗಳನ್ನೂ ಇಲ್ಲಿ ಪರಿಗಣಿಸಬೇಕಾಗಹುದು.. ಅಷ್ಟರಮಟ್ಟಿಗೆ ಇಲ್ಲಿನ ಕವಿತೆಗಳು ಆಪ್ತವಾಗುತ್ತವೆ.. ಆದರೂ ಇಲ್ಲಿನ ಒಂದು ಕವಿತೆಯ ಬಗ್ಗೆ ಬರೆಯದೇ ಹೋದರೆ ಅದು ಖಂಡಿತ ಸಮಂಜಸವಾಗದು.. “ನೀರು-ಮುಂದೊಂದು ದಿನ” ಎಂಬ ಕವಿತೆ ಅಕ್ಷರಶಃ ನಮ್ಮ ಭವಿಷ್ಯದ ದಿನಗಳನ್ನು ಚಿತ್ರಿಸುತ್ತದೆ. ನೀರಿನ ಬಗೆಗಿನ ನಮ್ಮ ನಿರ್ಲಕ್ಷವನ್ನೂ, ಭವಿಷ್ಯದಲ್ಲಿ ನಮಗೆ ಬರಬಹುದಾದ ಕರಾಳ ಸನ್ನಿವೇಶವನ್ನೂ ಕಣ್ಣಮುಂದೆ ಕಟ್ಟಿಕೊಡುತ್ತದೆ..

“ಹಾ! ಗಂಟಲು ಒಣಗಿದೆ
ತಗೋ ಈ ಬಂಗಾರದ ಚೈನು
ಬದಲಾಗಿ
ಒಂದು ಗುಟುಕು ನೀರು ಕೊಡು!
*
ಕಂಬನಿಯನ್ನು ಶುದ್ಧೀಕರಿಸಿ
ಕುಡಿಯಲು ಯೋಗ್ಯ ನೀರನ್ನಾಗಿಸುವ
ಪ್ರಯೋಗ ನಡೆಯುತ್ತಿದೆ
ಜನಗಳೇ-
ನೀರಿಗಾಗಿ ಸಾಧ್ಯವಾದಷ್ಟೂ ಅಳಿರಿ!
*
ಹಕ್ಕಿಯೊಂದು
ಸರ್ರನೆ ಹಾರಿಬಂದು
ಅಳುತ್ತಿದ್ದ ಮಗುವಿನ
ಕಂಬನಿಯನ್ನು ಕುಕ್ಕಿ
ಹಾರಿ ಹೋಯಿತು!”

ಖಂಡಿತವಾಗಿಯೂ ಈ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸದೇ ಹೋದರೆ ಅವರೇ ಹೇಳುವಂತೆ ಕಲ್ಲು ನೀರಾಗುವುದನ್ನು ಕಾಯಬೇಕಾದ ಕಾಗೆಯ ಸಂತತಿಯ ಕೊನೆಯ ಮರಿಗಳಾಗುವುದು ಖಂಡಿತ…

ತಮ್ಮ ಆಪ್ತ , ಸರಳ, ಜೀವಪರವಾದ ಕವಿತೆಗಳ ಮೂಲಕ ವೈಚಾರಿಕ ಮುನ್ನೋಟ, ಪ್ರಗತಿಪರ ನಿಲುವಿನ ಈ ಕಾಲಕ್ಕೆ ಬಹು ಮುಖ್ಯವೆನಿಸಬಲ್ಲ ಸಂಕಲನವನ್ನು ನೀಡಿದ ವಿಲ್ಸನ್ ಕಟೀಲ್ ಅವರಿಗೆ ಅಭಿನಂದನೆಗಳು..ಅವರಿಂದ ಭವಿಷ್ಯದಲ್ಲಿ ಇನ್ನಷ್ಟು ಜೀವಪರ ಕೃತಿಗಳನ್ನು ನಿರೀಕ್ಷಿಸುವಂತೆ ಈ ಕೃತಿ ಮಾಡಿದೆ ಎಂಬುದನ್ನು ಉಲ್ಲೇಕಿಸುತ್ತಾ ಅವರು ಎಚ್ಚರಿಸಿರುವ ಒಂದು ಕವಿತೆಯ ಮೂಲಕ,ಅದನ್ನು ನಾವೆಲ್ಲಾ ನಮ್ಮ ಬದುಕಿನ ಎಚ್ಚರವನ್ನಾಗಿಸಿಕೊಳ್ಳುವ ಎಂಬ ಹಂಬಲದಿಂದ ಈ ಲೇಖನವನ್ನು ಮುಗಿಸುತ್ತೇನೆ..

“ಕವಿತೆಯನ್ನು ಓದುತ್ತಾ
ಬೆಟ್ಟದ ತುದಿ ತಲುಪಿದ್ದೇ
ಗೊತ್ತಾಗಲಿಲ್ಲ
ಇಣುಕಿ ನೋಡುತ್ತೇನೆ
ಪ್ರಪಾತದಲ್ಲಿ ಕವಿ!”

ನಮಸ್ಕಾರ….

ಸಚಿನ್ ಅಂಕೋಲಾ..


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x