ಎಂದಿನಂಥದೇ ಒಂದು ಬೆಳಗು, ಸುಂದರ ಬೆಳಗು. ನಿನ್ನೆಯೊಡಲಿನೆಲ್ಲ ನೋವಿಗೂ ಮುಲಾಮಾಗಬಲ್ಲ ಮುದ್ದಿಸಿ ಎದ್ದೇಳಿಸುವ ಅಮ್ಮನ ನಗುಮುಖದಂಥ, ಅಪ್ಪನ ಮುಖದ ಆಶ್ವಾಸನೆಯಂಥ ಬೆಳ್ಳಂಬೆಳಗು.
ಯಮುನೆ ಹರಿಯುತ್ತಿದ್ದಾಳೆ ಮಂಜುಳಗಮನೆಯಾಗಿ; ಒಡಲಲ್ಲಿ ಮಾತ್ರ ಅತ್ಯುತ್ಸುಕತೆಯ ಉಬ್ಬರ, ಅದೇ ಪರಿಚಿತ ಸುಖದ ಭಾವ. ಎಂದಾಗಿತ್ತೋ ಈ ಅನುಭವ! ತಕ್ಷಣಕ್ಕೆ ನೆನಪಾಗದು, ಹೆಣ್ಣೊಡಲಿನ ಭರತವಿಳಿತಗಳೆಲ್ಲವನ್ನೂ ಸುಮ್ಮಸುಮ್ಮನೆ ಹೊರಗೆಡಹಿ ಉಕ್ಕಿ ಹರಿಯಬಿಡಲಾದೀತೇ, ಜನ ಏನಂದಾರು? ಹಾಗಾಗಿ ತೋರಗೊಡದೆ ಹೊರಗವಳದು ಅದೇ ಗಂಭೀರ ಹರಿವು, ಆದರೂ ಒಳಗಿನ ಅಲೆಗಳ ಏರಿಳಿತವದೆಷ್ಟು ಹೊತ್ತು ಬಚ್ಚಿಡಬಲ್ಲಳೋ ಆಕೆಗೇ ಗೊತ್ತಿಲ್ಲ.
ದಡದ ಹಸಿರುಮರಕಿಂದು ಮೈಮೇಲೆಲ್ಲ ಕಚಗುಳಿಯಿಟ್ಟ ಅನುಭವ.. ಅಳಿಲುಗಳಾದರೂ ಎಡೆಬಿಡದೆ ಓಡಾಡುತಿವೆ, ಹಕ್ಕಿಗಳೂ ಅಷ್ಟೇ.. ಚಿಲಿಪಿಲಿಗುಟ್ಟುತಾ ಆ ರೆಂಬೆಯಿಂದ ಇದಕ್ಕೆ, ಇದರಿಂದ ಅದಕ್ಕೆ. "ಅಯ್ಯೋ ತುಸುಹೊತ್ತು ಸುಮ್ಮನಿರಿ ನನ್ನೊಡಲವಾಸಿಗಳೇ.. " ಮರಕೆ ಹೇಳುವಾಸೆ. ಆದರೆ ತನಗೇ ತಾನು ತಿಳಿಹೇಳಲಾಗುತಿಲ್ಲ. ಹತ್ತಾರುಬಾರಿ ಹಸುರುಡುಗೆ ಸರಿಪಡಿಸಿಕೊಂಡದ್ದಾಯ್ತು. ಸುಖದ ಯಾವುದೋ ಲಹರಿಯೊಂದಕೆ ಮೈಮುರಿದು ರೆಂಬೆಕೊಂಬೆಯೆಲ್ಲ ಲಟಲಟ ಎನಿಸಿದ್ದಾಯ್ತು. ಬೀಸುವ ಗಾಳಿಗೆ ಮನಸಾರೆ ಹೂಗಂಪನಿತ್ತದ್ದಾಯ್ತು, ಹಾದಿಗುದುರಿಸಿ ಬಣ್ಣದ ನಡೆಹಾಸು ಮೂಡಿಸಿದ್ದಾಯ್ತು.. ಅರೆ! ಮಿಡಿಗಾಯಿ ದೋರ್ಗಾಯಿಗಳೆನದೆ ಎಲ್ಲವೂ ಇಂದೇ ಹಣ್ಣಾಗುವೆಡೆ ಹೆಜ್ಜೆಯಿಕ್ಕುವಂತಿದೆಯಲ್ಲಾ!! ಒಳಗಿನ ಭಾವದುಬ್ಬರಕೆ ನೆಲವಾಕ್ರಮಿಸಿದ ನೆರಳಿನ್ನಷ್ಟು ಅಗಲ ಹರಡಿಕೊಂಡಂತಿದೆ. ಯಾತಕಾಗಿ, ಯಾರಿಗಾಗಿ.. ಅರ್ಥವಾಗುತಿಲ್ಲ.
ಕೋಗಿಲೆಗಿಂದು ವಸಂತವಲ್ಲದೆಯೂ ಕಂಠಕೆ ಇನ್ನಿಲ್ಲದ ಮಾಧುರ್ಯ. ಅಲ್ಲದೇ ಕರೆವ ಕರೆಸಿಕೊಳ್ಳುವ ಯಾವುದೇ ಕಾರಣವಿಲ್ಲದೆಯೂ ಉಲಿ ಹೊರಹೊಮ್ಮುತಲೇ ಇದೆ. ಇನ್ನಿಲ್ಲದ ಸವಿದುಂಬಿದ ತನ್ನ ದನಿ ತನಗೇ ಒಂದು ಅಚ್ಚರಿ. ಯಾಕಿರಬಹುದು?! ಮಾವಿನ ಚಿಗುರು ತಿಂದದೆಷ್ಟೋ ಕಾಲವಾಯ್ತು, ಮನದನ್ನೆಯ ನೆನಪೂ ಅಲ್ಲ, ಅಂದೆಂದೋ ಹೀಗೇ ಅಕಾರಣ ಉಲಿಯಾಲಾಪ ಪ್ರಶ್ನೆಯೆನಿಸಿದ್ದು, ಅತಿ ಸುಂದರವಾದೊಂದು ಉತ್ತರ ದೊರೆತದ್ದು ನೆನಪಾಗುತಿದೆ; ಯಾವಾಗ, ಮತ್ತಾ ಉತ್ತರವೇನಾಗಿತ್ತು ಎಂಬುದಷ್ಟೇ ನೆನಪಾಗುತಿಲ್ಲ.
ನವಿಲು ತನ್ನ ಬಿಚ್ಚಿಕೊಂಡ ಗರಿಯನೊಮ್ಮೆ ಆಗಸವನೊಮ್ಮೆ ನೋಡುತಲೇ ಇದೆ, ಮೋಡದ ಕುರುಹೂ ಇಲ್ಲ. ಮೋಡವಿರಲು ಇದೇನು ಮಳೆಗಾಲವೇ? ಏರುತಿರುವ ಸೂರ್ಯನ ಹಿತಕರ ಎಳೆಬಿಸಿಲು ಬಿರುಸಾಗುತಿದೆ, ಇದು ವೈಶಾಖ. ಕುಣಿಯುತಿರುವ ಹೆಜ್ಜೆ, ನಲಿಯುತಿರುವ ಗರಿಯೆಳೆಯ ಚಲನೆಯಲಿ ಎಂದೂ ಅನುಭವಿಸಿರದ ಧನ್ಯತಾಭಾವ! ಏನನ್ನೋ ನಿರೀಕ್ಷಿಸುತಿರುವ ಉತ್ಸಾಹವೋ, ಅಥವಾ ಏನೋ ಅನನ್ಯ ಸುಖ ದಕ್ಕಿದ ತೃಪ್ತಿಯೋ.. ಒಂದೂ ಅರ್ಥವಾಗುತಿಲ್ಲ, ವಿನಾಕಾರಣ ಸಂತಸ ಮಾತ್ರ ಪ್ರಯತ್ನಿಸಿಯೂ ಅಡಗುತಿಲ್ಲ.
ಹಾಗೇ ನೆಲ ಸವರಿಕೊಂಡು ನಿಧಾನ ಮೇಲಿದ್ದ ಗಾಳಿಯೊಂದಲೆ ಅನಾಥ ಬಿದ್ದಿದ್ದ ಬಿದಿರ ಕೊಳವೆಯ ಧೂಳೊದರಿ ಅತ್ತಿಂದಿತ್ತ ಅಲ್ಲಾಡಿಸಿ, ಮುಚ್ಚಿದ್ದ ತೂತೊಳ-ಹೊರ ದಾರಿ ಸುಗಮವಾಗಿಸಿ, ತಾ ಶ್ರುತಿಬದ್ಧ ಚಲಿಸಿ, ಅದನ್ನು ಮತ್ತೆ ಕೊಳಲಾಗಿಸಿತು. ಕೊಳಲಿಗೋ ಮರುಜನ್ಮ!! ಸತ್ತಿಲ್ಲದೆಯೂ ಸತ್ತಂತಿದ್ದ ಬಾಳಿಗೆ ಮತ್ತೆ ಅಮೃತವುಣಿಸಿದ ಗಾಳಿಯಲೆ ಆಪ್ಯಾಯಮಾನವೆನಿಸಿದರೂ ಮರುಕ್ಷಣವೇ ಮತ್ತದೇ ತಾನು ತಾನಲ್ಲದ ಸಾವಭಾವದೊಳಹೊಗುವ ಮನಸಾಯಿತು, ಆದರೆ ಏನಾಶ್ಚರ್ಯ!!, ಹೊಗಲಾಗಲಿಲ್ಲ. ಜೀವ ಕುಣಿಯುತಿದೆ, ಧೂಳಲಿ ಮುಚ್ಚಿಕೊಂಡಿದ್ದ ತೂತುಗಳು ದನಿದುಂಬಿಕೊಂಡು ಮೋಹನ ನುಡಿಸುತಿವೆ…" ರಾ.. ರಾ.. ರಾಜೀವಲೋಚನ …" ಜೀವಂತಿಕೆಯೇ ರಾಗವಾಗಿರುವಾಗ ಸಾವಭಾವಕಲ್ಲೆಲ್ಲಿಯ ಜಾಗ? ತಾ ಹೀಗೇ ತುಂಬಿಕೊಂಡು ಸದಾ ಧನ್ಯತೆಯ ಅನುಭೂತಿಯೆತ್ತರದಲಿರುತಿದ್ದ ದಿನಗಳು, ಮತ್ತವನ ತನ್ನ ನೇವರಿಸುವ ಬೆರಳುಗಳ, ತನ್ನಲಿ ಸರಿಗಮಪದನಿಯಲಿ ಜೀವದುಂಬುವ ಅವನ ಹೂಪಕಳೆಯಂಥ ತುಟಿಗಳ, ಅವಳ ಕುಣಿವ ಹೆಜ್ಜೆಗಳ, ಅವರಿಬ್ಬರ ಮತ್ತೆ ತನ್ನೊಂದಿಗಿನ ಅವರ ಅವಿನಾಭಾವ ಸಂಬಂಧದ ಚಂದದ ನೆನಪು ಗಾಳಿಯೆತ್ತಿ ಹಗುರಾಗಿಸಿ ತೇಲಿಸಿ ಕುಣಿಸುತಿದ್ದ ತನಗೆ ವಿರಹದ ಭಾರ ಹೊರಿಸಿ ಮತ್ತೆ ನೆಲಕಿಳಿಸುವ ಪ್ರಯತ್ನದಲಿದ್ದವು, ಆದರೆ ವಿಫಲವಾದವು. ಕೊಳಲ ಸುತ್ತ ಆವರಿಸುತಿದ್ದ ವಿಷಾದಭಾವಕೆ ಕೊಳಲೊಳಗೆ ಮನೆಮಾಡಲಾಗುತಿಲ್ಲ! ಕೊಳಲಿಗೆ ಮತ್ತೆ ತನ್ನೊಳಹೊರಗನಾವರಿಸಿದ ಮಾಧುರ್ಯಕೆ ನಾಲ್ಕು ಸುತ್ತಲೂ ಕಾರಣ ಸಿಕ್ಕುತ್ತಿಲ್ಲ.
ಕರೆಯದ ಹಸುಗಳಿಗೂ ಸುಮ್ಮಸುಮ್ಮನೇ ಕೆಚ್ಚಲ ಬಿಗಿತ! ಕರು ಹುಟ್ಟಿ, ಹಾಲ್ದುಂಬಿದ ಕ್ಷಣಗಳಿಗಿಂತಲೂ ಹೆಚ್ಚಿನ ತುಂಬಿಕೊಂಡ ಸಾರ್ಥಕ್ಯಭಾವ! ಅಲ್ಲ, ಅದು ಹಾಲಷ್ಟೇ ಆಗಿರಲಿಕ್ಕಿಲ್ಲ, ಹಾಲಿಗಿಂತ ಉತ್ಕೃಷ್ಟ ಅಮೃತವೇ ಎದೆದುಂಬಿದೆಯೇನೋ ಅನ್ನುವ ಹಿತಕರ ತೃಪ್ತಿ. ಸುಮ್ಮನೆ ಸಿಕ್ಕಷ್ಟು ಮೇಯುತ್ತಾ ಶಾಂತವಾಗಿರಬೇಕಾದ ಹೊತ್ತಲಿ ಹುಚ್ಚೆದ್ದು ಕುಣಿವ ಆಸೆ ಹುಟ್ಟಿಸುತ್ತಿರುವ ಸುಖದ ಮಹಾಪೂರದ ಅನುಭೂತಿಯುಣುತ್ತಿರುವ ಗುಟ್ಟಾದರೂ ಏನು, ಹಸುಗಳಿಗೂ ತಿಳಿಯುತ್ತಿಲ್ಲ.
ಕರುಗಳಿಗೋ ಬಾಲವೆತ್ತಿ ಚಂಗನೆ ಕುಣಿದು ಕುಪ್ಪಳಿಸುವಾತುರದಲ್ಲಿ ಅಮ್ಮನೆದೆದುಂಬಿದ ಹಾಲು ಬಾ ಅನ್ನುತ್ತಿರುವುದೂ ಅರಿವಾಗುತ್ತಿಲ್ಲ. ಏನೋ ಹುರುಪು, ಏನೋ ಉಲ್ಲಾಸ, ಏನೋ ಅಸೀಮ ಸಂತೋಷ! ದಣಿವು ಮರೆಸುವ ಸಂಭ್ರಮ. ಪುಟ್ಟಕಾಲು ಕುಣಿಕುಣಿದು ಎಬ್ಬಿಸಿದ ಗೋಕುಲದ ಧೂಳು ಗೋಧೂಳಿಯ ಹೊತ್ತಿನ ಭ್ರಮೆ ಹುಟ್ಟಿಸುತ್ತಿದೆ. ಅತ್ತಿಂದಿತ್ತ ಹೋಗಿಬರುವವರಿಗೆಲ್ಲ ದಾರಿಗಡ್ಡವಾಗುತ್ತಾ ಕುಣಿಯುತ್ತಿರುವ ಆ ಮುದ್ದುಕರುಗಳದು ಅಕಾರಣ ಖುಶಿ, ಅಕಾರಣ ಕುಣಿತ, ಅಕಾರಣ ಹುಮ್ಮಸ್ಸು! ಯಾವುದೋ ಅದೃಶ್ಯ ಶಕ್ತಿ ಕುಣಿಸುತ್ತಿರುವಂತೆನಿಸುತ್ತಿತ್ತೇನೋ, ಕಣ್ಣು ಅತ್ತಿತ್ತ ಅದನೇ ಹುಡುಕುತ್ತಿರುವಂತನಿಸುತಿತ್ತು.
ಗಿಡಗಳ ತುಂಬೆಲ್ಲ ಅದೇ ಬಣ್ಣದ ಹೂವರಳಿದ್ದರೂ ಇಂದಿನ ಮೆರುಗು ನಿನ್ನೆಗೆರಡರಷ್ಟು. ಹಾರುತಾ ಬರುವ ದುಂಬಿಗಳ ದನಿಗೂ, ವೇಗಕೂ ನಿನ್ನೆಗಿಂತೆರಡರಷ್ಟು ತೀವ್ರತೆ, ಮಧುವೂ ಎರಡರಷ್ಟು ಸವಿಯಿತ್ತೇನೋ..ಗೋಕುಲವೆಂಬ ಗೋಕುಲವೇ ಚೆಲುವಿನ ತೊಡುಗೆಯುಟ್ಟಂತೆ, ಉಮೇದಿನ ಭಾವವುಟ್ಟಂತೆ.
ಹೆಣ್ಮನಗಳೆಲ್ಲ ಸುಮ್ಮಸುಮ್ಮನೆ ನಗುತ್ತಿವೆ, ಮತ್ತೆಮತ್ತೆ ಕನ್ನಡಿಯೆದುರೊಯ್ಯುತ್ತಿವೆ. ಸಿಂಗರಿಸಿಕೊಂಡು ತಯಾರಾಗುತ್ತಿವೆ, ಬರುತ್ತಿರುವರ್ಯಾರೋ ಗೊತ್ತಿಲ್ಲದೇ ಸ್ವಾಗತಿಸಲು ಅಣಿಯಾಗುತ್ತಿವೆ. ಮನೆ ಮುಂದಿನ ರಂಗೋಲಿ, ತೋರಣ ನಳನಳಿಸುತ್ತಿವೆ. ಕುಬುಸ ಬಿಗಿಯಾಗುತ್ತಿವೆ, ತಾಯೆದೆಗಳಲ್ಲಿ ವಾತ್ಸಲ್ಯವುಕ್ಕಿದ ಧನ್ಯತಾಭಾವ.. ಸುತ್ತಮುತ್ತ ಕರುಳಕುಡಿಗಳಿರದಾಗಲೂ ಅಕಾರಣ ಭಾವತೀವ್ರತೆ, ಆದರೂ ಹಿತವೆನಿಸುತ್ತಿದೆ.. ಪ್ರೀತಿ ಎದೆಯುಕ್ಕಿ ಬಂದು ಯುವತಿಯರಿಗೂ ಕುಬುಸ ಬಿಗಿತ, ತಮ್ಮ ತುಡಿತ-ಮಿಡಿತ ನಿವೇದಿಸಿಕೊಂಡು, ತಮ್ಮನೇ ಒಪ್ಪಿಸಿಕೊಂಡು ಹಗುರಾಗಬಲ್ಲ ಪ್ರೇಮ ಸಾನಿಧ್ಯವೊಂದು ಸಾಕ್ಷಾತ್ಕರಿಸಿದಂತೆ.. ಸುತ್ತ ನೋಡುತ್ತಾರೆ, ಅಂಥದ್ದೇನೂ ಘಟಿಸಿದಂತಿಲ್ಲ.
ಅಲ್ಲೊಬ್ಬಳಿದ್ದಾಳೆ. ಗೋಕುಲದಿಂದ ಹೊರಗೊಯ್ಯುವ ಅದೇ ದಾರಿಯುದ್ದಕೂ ನಿರೀಕ್ಷೆದುಂಬಿದ ಕಂಗಳ ಹಾಸಿ ಕೂತವಳು. ನಿನ್ನೆಯವರೆಗೂ ಅದೇ ಯಮುನೆಯ ತಟದ ಅದೇ ಹಸಿರುಮರದಡಿ, ಅವೇ ನವಿಲು-ಕೋಗಿಲೆಗಳ ನಿರ್ಜೀವ ನಡೆ-ನುಡಿಗೆ, ಅದೇ ಬಿದಿರ ಕೊಳವೆಯ ನಿಶ್ಚಲತೆಗೆ, ಹಸುಗರುಗಳ ನಿರ್ವಿಕಾರ ಬೆಳಗು-ಬೈಗುಗಳಿಗೆ, ಅದೇ ಹೂಗಳ ಅವೇ ದುಂಬಿಗಳ ಅದೇ ನಿರುತ್ಸಾಹಿ ಇರುವಿಕೆಗೆ, ಅದೇ ಗೋಪಿಯರ ಅವನತಮುಖಿ ಮನಗಳ ದಿನಚರಿಗೆ ಸಾಕ್ಷಿಯಾಗುತಾ ನಿರ್ಜೀವ ಮೂರ್ತಿಯಂತಿದ್ದವಳು. ಇಂದಿನ ಬೆಳಗಿನ ಕುಳಿಗಾಳಿಯಲೆಯೊಂದು ಅವಳಿಗೆ ಕಚಗುಳಿಯಿಟ್ಟಿತ್ತು, ಮಲಗಿದ್ದ ಮನವನೆಬ್ಬಿಸಹೊರಟಿತ್ತು, ಆದರೂ ಎದ್ದಂತಿರಲಿಲ್ಲ. ಇನ್ನೊಂದಂಥದ್ದೇ ಲಹರಿ ಸುಮ್ಮನೇ ಬಂದು ಅವಳ ಮುಟ್ಟಿತಷ್ಟೇ.. ಮೈನವಿರೆದ್ದಿತು. ರೋಮಾಂಚಗೊಂಡ ಮನಸು ತಟ್ಟನೆದ್ದಿತು. ಅಷ್ಟೂ ದಿನಗಳ ಧೂಳು ಕೊಡವಿಕೊಂಡಿತು, ಆಲಸ್ಯ ಒದರಿತು, ಒಳಹೊರಗಿಗೆ ಮುಸುಕಿದ ಕೊಳೆ ಅಳಿಯಿತು, ನೋಡನೋಡುತ್ತಿದ್ದಂತೆ ಮೈಮನ ಆವರಿಸಿದ್ದ ನೋವು ನಗುವಾಯಿತು. ಸುಮ್ಮನೇ ನೋಡುತ್ತಿದ್ದವಳು ಎದ್ದು ನಿಂತಳು, ಚೆಲುವುಟ್ಟಿದ್ದ ಗೋಕುಲದ ನೋಟ ಅವಳ ಕಣ್ಣಲಿ ನಿಶ್ಚಿತ ಭಾವವುದಿಸುವಂತೆ ಮಾಡಿತು. ಕೊಳಲ ಕೂಗಿದಳು, "ವೇಣೂ…." ಗಾಳಿಯಲಾಡುತಾ ನಲಿಯುತಾ ನುಡಿಯುತಿದ್ದ ಕೊಳಲನುದ್ದೇಶಿಸಿ ಅಂದಳು, "ಮೋಹನದಲಿ ನೀ "ರಾ ರಾ…" ಅಂದರೆ ಮೋಹನನ, ಬರದುಳಿವುದು ಸಾಧ್ಯವೇ ಅವಗೆ, ಬರುತ್ತಿದ್ದಾನೆ ನೋಡು, ಇನ್ನೇನು ಬಂದೇಬಿಟ್ಟ." ಗೋಕುಲವನಿಷ್ಟು ಹೊತ್ತೂ ಕಾಡುತಿದ್ದ ಪ್ರಶ್ನೆಗೊಂದು ಉತ್ತರ ಹುಟ್ಟಿತ್ತು ಅವಳ ವಿಶ್ವಾಸದಲ್ಲಿ, ಅವಳ ನಂಬಿಕೆಯಲ್ಲಿ, ಅವಳ ಶ್ರದ್ಧೆಯಲ್ಲಿ.. ಅವನ ಸುಳಿವೂ ಇರದ ಆ ಸುತ್ತುಮುತ್ತಲಿ ಮೊಳಗಿದ ಅವಳ ದನಿಯಲೊಂದಿಷ್ಟೂ ಸಂಶಯವಿರಲಿಲ್ಲ. ಅವ ತೆರಳಿದ್ದಷ್ಟೇ ಅವಳೂ ಒಳಗೊಂಡಂತೆ ಗೋಕುಲ ಕಂಡ ಸತ್ಯ. ಆದರೀಗ ಅವ ಬರುತಿರುವುದು ಅವಳ ಈ ದನಿಯ ಖಚಿತತೆಯಲ್ಲಿ, ತಮ್ಮೊಳಗಿನ ಅಕಾರಣ ಸಂತೋಷದಲ್ಲಿ ಅವಳ ಗೋಕುಲ ಕಂಡುಕೊಂಡ ಸತ್ಯ. ಈ ಸತ್ಯದ ಬೆಳಕಲ್ಲಿ ಇದುವರೆಗೂ ಅವರೊಳಹೊರಗಿಗೆ ಕವಿದಿದ್ದ ಆ ಸತ್ಯದ ಕರಿನೆರಳು ಮರೆಯಾಯಿತು. ಬಂದನೋ ಬಾರದುಳಿದನೋ ಮುಂದಿನದು ಗೊತ್ತಿಲ್ಲವೆಂಬುದು ನಾನೂ ಸೇರಿದಂತೆ ಇಂದಿನ ಈ ಜಗದ ಮಾತು. ಆದರೆ ಅಂದು ಅವ ಬರುತಿರುವುದೇ ಸಂತಸದ ಎಳೆಯೆಳೆಯ ಮೂಲವೆಂದರಿತ ಗೋಕುಲ ಸಂತಸವುಕ್ಕಿ ನಕ್ಕೇನಕ್ಕಿತು… "ಅವ ಬರುತಿದ್ದಾನೆ….ಅವ ಬರುತಿದ್ದಾನೆ..ಇನ್ನೇನು ಬಂದೇಬಿಟ್ಟ…"
ತುಂಬಾ ಚೆನ್ನಾಗಿದೆ.