ನಿರ್ಮೋಹಿ: ಲಕ್ಷ್ಮೀಶ.ಜೆ.ಹೆಗಡೆ

                                                                                                      

"ತೋಡಾರ್,ಮಿಜಾರ್, ಎಡಪದವು, ಗಂಜಿಮಠ, ಕೈಕಂಬ, ಮಂಗಳೂರಿಗೆ ಹೋಗುವವರು ಬನ್ನಿ, ಇನ್ನು ಐದು ನಿಮಿಷದಲ್ಲಿ ಹೊರಡ್ತದೆ, ಮಂಗ್ಳೂರಿಗೆ ಹೋಗುವವರಿಗೆ ಎಕ್ಸ್ ಪ್ರೆಸ್ ಬರ್ತದೆ, ಅದ್ರಲ್ಲಿ ಹೋಗಿ, ತೋಡಾರ್ ಮಿಜಾರ್ ಹೋಗುವವರು ಈ ಕಡೆ ಬನ್ನಿ" ಎಂದು ವಾಸುದೇವ ಕಾಮತರು ಒಂದೇ ಸಮನೇ ಮೂಡಬಿದ್ರೆಯ ಬಸ್ ಸ್ಟ್ಯಾಂಡ್ ನಲ್ಲಿ ಕೂಗುತ್ತಿದ್ದರು. ವಾಸುದೇವ ಕಾಮತರು ಖಾಸಗಿ ಬಸ್ಸಿನ ಏಜಂಟ್ ಅಂದರೆ ಬಸ್ ಸ್ಟ್ಯಾಂಡ್ ನಲ್ಲಿ ಕೆಲವೊಂದು ಲೋಕಲ್, ಎಕ್ಸ್ ಪ್ರೆಸ್ಸ್ ಬಸ್ ಗಳಿಗೆ ಹತ್ತಿ ಸ್ವಲ್ಪ ದೂರದ ವರೆಗೆ ಹೋಗಿ ಟಿಕೇಟ್ ಕೊಟ್ಟು ಅದಕ್ಕೆ ಕಮಿಷನ್ ಪಡೆಯುತ್ತಾರೆ. ಅನೇಕ ಕಡೆಯ ಖಾಸಗಿ ಬಸ್ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇರುತ್ತದೆ. ಸರ್ಕಾರಿ ಬಸ್ ಗಳಲ್ಲಿ ಇರುವುದಿಲ್ಲ

ವಾಸುದೇವ ಕಾಮತರು ಎಲ್ಲಾ ಬಸ್ ಏಜಂಟರುಗಳಿಗೂ ಮಾದರಿಯಾಗುವಂತಿದ್ದರು. ಅನೇಕರಿಗೆ ಕಾಮತರು ಒಂದು ರೀತಿಯಲ್ಲಿ ಗಾಡ್ ಫಾದರ್ ಆಗಿದ್ದರು. ಕಾಮತರು ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡುತ್ತಿದ್ದರು. ಪ್ರಯಾಣಿಕರು ಚಿಲ್ಲರೆ ಕೊಡಲಿಲ್ಲ ಎಂದು ಯಾರ ಮೇಲೂ ರೇಗುತ್ತಿರಲಿಲ್ಲ, ಬದಲಿಗೆ ನಯವಾಗಿಯೇ ಕೇಳುತ್ತಿದ್ದರು, ಇಲ್ಲವಾದರೆ ಹೇಗಾದರೂ ಮಾಡಿ ಚಿಲ್ಲರೆ ಹೊಂದಿಸಿ ಕೊಡುತ್ತಿದ್ದರು. ಸಾಧ್ಯವಾದಷ್ಟು ತುಳುವಿನಲ್ಲಿಯೇ ವ್ಯವಹರಿಸುತ್ತಿದ್ದರು." ಏ ಆ ಅಮ್ಮಾಗ್ ಒಂಜಿ ಸೀಟ್ ಕೊರ್ಲೆ, ಬಾಲೆ ಪತೋಂದೇರ್ ನಿಕ್ಲೆಗ್ ತೂಜುಜಾ( ಏ ಆ ಅಮ್ಮನಿಗೆ ಒಂದು ಸೀಟ್ ಕೊಡಿ, ಮಗುವನ್ನು ಎತ್ತಿಕೊಂಡಿದ್ದಾರೆ ನಿಮಗೆ ಕಾಣಿಸುವುದಿಲ್ಲವೇ) ಎಂದೆಲ್ಲಾ ತುಳುವಿನಲ್ಲಿ ಮಾತನಾಡುತ್ತಿದ್ದರು. ತಮ್ಮವರು ಯಾರಾದರೂ ಬಂದರೆ ಆತ್ಮೀಯತೆಯಿಂದ ಕೊಂಕಣಿ ಭಾಷೆಯಲ್ಲಿಯೂ ಮಾತನಾಡುತ್ತಿದ್ದರು. ಮಹಿಳೆಯರು, ಮಕ್ಕಳು, ವಯಸ್ಸಾದವರು, ರೋಗಿಗಳು ಬಂದರೆ ಅವರಿಗೆ  ವಿಶೇಷ ಕಾಳಜಿ ತೋರಿಸುತ್ತಿದ್ದರು.ಅವರ ಪ್ರಾಮಾಣಿಕತೆಯ ಕಾರಣದಿಂದಲೋ ಅಥವಾ ಏಜಂಟ್ ಆಗಿ ಅವರಿಗಿರುವ ಅನುಭವದ ಕಾರಣದಿಂದಲೋ, ಅಥವಾ ಅವರ ವಯಸ್ಸಿನಿಂದಾಗಿಯೋ ಏನೋ ಎಲ್ಲರೂ ಅವರ ಮಾತು ಕೇಳುತ್ತಿದ್ದರು. ಅವರು ಬಸ್ ಏಜಂಟ್ ಆಗಿ ೩೫ ವಸಂತಗಳನ್ನು ಕಳೆದಿದ್ದರು.

ಮೂಡಬಿದ್ರೆ ಬಸ್ ಸ್ಟ್ಯಾಂಡಿನಲ್ಲಿ ವಾಸುದೇವ ಕಾಮತರೇ ಅನೇಕ ನಿಯಮಗಳನ್ನು ಮಾಡಿದ್ದರು. ಎಲ್ಲವೂ ಪ್ರಯಾಣಿಕರ, ಚಾಲಕರ, ನಿರ್ವಾಹಕರ ಅನುಕೂಲಕ್ಕಾಗಿಯೇ. ಬಸ್, ಬಸ್ ನಿಲ್ದಾಣಕ್ಕೆ ಎಂಟ್ರಿ ಆಗುತ್ತಿದ್ದ ಹಾಗೆಯೇ ಅದಕ್ಕೆಂದೇ ನಿಗದಿಪಡಿಸಿದ ಜಾಗಕ್ಕಿಂತಲೂ ಸ್ವಲ್ಪ ಹಿಂದೆಯೇ ನಿಲ್ಲಿಸಬೇಕು. ಅಲ್ಲಿ ಪ್ರಯಾಣಿಕರು ಇಳಿಯಬೇಕು. ನಂತರ ಖಾಲಿ ಬಸ್ ನಿಗದಿತ ಜಾಗಕ್ಕೆ ಹೋಗಿ ನಿಂತಾಗ ಅಲ್ಲಿ ಪ್ರಯಾಣಿಕರು ಹತ್ತುತ್ತಾರೆ. ಆಗ ಇಳಿಯುವವರು ಮತ್ತು ಹತ್ತುವವರ ಮಧ್ಯೆ ನೂಕು ನುಗ್ಗಾಟ ನಡೆಯುವುದಿಲ್ಲ. ಕೆಲವೊಂದು ಬಸ್ ಗಳು ಲೇಟಾಗಿ ಬಂದಾಗ ಆ ಬಸ್ ನ ನಿರ್ವಾಹಕರಿಗೂ, ಇತರೆ ಬಸ್ ಗಳ ನಿರ್ವಾಹಕರಿಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕುರಿತು ಯಾವಾಗಲೂ ಜಗಳ ನಡೆಯುತ್ತಿತ್ತು, ವಾಸುದೇವ ಕಾಮತರು ಇದಕ್ಕೂ ಒಂದು ಪರಿಹಾರ ಹುಡುಕಿದ್ದರು. ಅದೇನೆಂದರೆ ತಡವಾಗಿ ಬಂದ ಬಸ್ ಅದಕ್ಕೆ ನಿಗದಿಪಡಿಸಿದ ಜಾಗದಲ್ಲಿ ನಿಲ್ಲುವಂತಿಲ್ಲ, ಬದಲಿಗೆ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಬೇಕು, ಹಾಗೂ ಆ ಬಸ್ ನ ನಿರ್ವಾಹಕರು ಹಾಗೂ ಏಜಂಟರುಗಳು ಬಸ್ ಹೋಗುವ ಸ್ಥಳಗಳನ್ನು ಕೂಗುತ್ತಾ ಪ್ರಯಾಣಿಕರನ್ನು ಕರೆಯುವಂತಿರಲ್ಲ, ಬದಲಿಗೆ ಪ್ರಯಾಣಿಕರು ತಾವಾಗಿಯೇ ಹೋದರೆ ಹತ್ತಿಸಿಕೊಳ್ಳಬಹುದಾಗಿತ್ತು. ಬಸ್ ಸ್ಟ್ಯಾಂಡಿನಲ್ಲಿರುವ ಬೇಕರಿಯವರ ಬಳಿ ಹೋಗಿ ಕಾಮತರು " ನೀವ್ಯಾಕೆ ಎಳ್ಳು ಜ್ಯೂಸ್, ಪುನರ್ಪುಳಿ ಜ್ಯೂಸ್ ಗಳನ್ನು ಬಸ್ ಒಳಗೇ ತಂದು ಮಾರಬಾರದು"ಎಂದು ಹೇಳಿದ ಮೇಲೆ ಬಸ್ ನಿಲ್ದಾಣದಲ್ಲಿರುವ ಬೇಕರಿಯವರು ಬಸ್ ಒಳಗೇ ಬಂದು ಜ್ಯೂಸ್ ಮಾರಿ ಲಾಭ ಮಾಡಿಕೊಳ್ಳತೋಡಗಿದರು. ಇದರಿಂದಾಗಿ ಬಸ್ ನಿಲ್ದಾಣದಲ್ಲಿ  ನಿರ್ವಾಹಕರು ಏಜ್ಂಟರ ಮಧ್ಯೆ ಜಗಳ ನಡೆಯುವುದು ತೀರಾ ಅಪರೂಪವಾಗಿತ್ತು.

ಕಾಮತರು ಯಾವಾಗ ಬಸ್ ಸ್ಟ್ಯಾಂಡ್ ಗೆ ಬರುತ್ತಾರೆ, ಹೋಗುತ್ತಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಅವರಿಗೆ ಒಂದು ಖಾಸಗೀ ಬದುಕು ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅವರು ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು.ವಾಸುದೇವ ಕಾಮತರಿಗೆ ಒಬ್ಬ ಮಗ, ಮಗಳು ಇದ್ದರು. ಮಗನನ್ನು ಕಷ್ಟಪಟ್ಟು ಇಂಜಿನಿಯರಿಂಗ್ ಓದಿಸಿದ್ದರು. ಆತ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡು ಬೆಂಗಳೂರಿಗೆ ಹೋದ. ಮಗಳಿಗೂ ಸಹ ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡಿದರು.

ನಂತರ ಮನೆಯಲ್ಲಿ ಕಾಮತರು ಹಾಗೂ ಅವರ ಹೆಂಡತಿ ಲಕ್ಷ್ಮಮ್ಮ ಇಬ್ಬರೇ, ಅವರ ಹೆಂಡತಿ ಹಾರ್ಟ್ ಪ್ರಾಬ್ಲಂ ನಿಂದ ನರಳುತ್ತಿದ್ದರು. ನಂತರ ಕಾಮತರು " ನನಗೂ ೬೦ರ ಮೇಲೆ ವಯಸ್ಸಾಯಿತು, ಇನ್ನು ಎಷ್ಟು ದಿನ ಅಂತ ಏಜಂಟ್ ಕೆಲಸ ಮಾಡಲಿ, ಮಗಳ ಮದುವೆ ಆಯಿತು, ಮಗನೂ ಕೆಲಸಕ್ಕೆ ಸೇರಿದ ಆತ ಹೇಗಿದ್ದರೂ ಹಣ ಕಳಿಸುತ್ತಾನೆ. ಇನ್ನು ನಾನು ರಿಟಾರ್ಯ್ಡ್ ಆಗಿ ಆರಾಮಾಗಿ ಇರುತ್ತೇನೆ" ಎಂದು ಆಗಾಗ ಹೇಳುತ್ತಿದ್ದರಾದರೂ ಖಚಿತವಾಗಿ ತಾನು ಇಂತಹ ದಿನ ನಿವೃತನಾಗುತ್ತೇನೆ ಅಂತ ಹೇಳುತ್ತಿರಲಿಲ್ಲ. ಆದರೆ ಒಂದು ದಿನ ಕಾಮತರು ಇದ್ದಕ್ಕಿದ್ದಂತೆಯೇ ಎಲ್ಲ ಬಸ್ ಗಳ ಚಾಲಕರು ನಿರ್ವಾಹಕರನ್ನು ಕರೆದು " ಇವತ್ತು ನಾನು ಕೊನೆಯ ಸಾರಿ ತೋಡಾರ್, ಮಿಜಾರ್, ಎಡಪದವು, ಕೈಕಂಬ ಅಂತ ಕೂಗುತ್ತೇನೆ, ನಾಳೆಯಿಂದ ಏಜಂಟ್ ಕೆಲಸಕ್ಕೆ ಬರುವುದಿಲ್ಲ ಎಂದು ಘೋಷಿಸಿದರು. ಆಯಿತು ಇನ್ನೇನು ಮಾಡುವುದು, ವಾಸುದೇವ ಕಾಮತರು ನಮಗೆಲ್ಲಾ ಗುರುವಾಗಿದ್ದರು, ಮಾರ್ಗದರ್ಶಕರಾಗಿದ್ದರು ಎಂದು ಎಲ್ಲಾ ಬಸ್ ನಿರ್ವಾಹಕರು, ಚಾಲಕರು, ಏಜಂಟರುಗಳು ಸೇರಿಕೊಂಡು ಮೂಡಬಿದ್ರೆ ಬಸ್ ಸ್ಟ್ಯಾಂಡ್ ನಲ್ಲೇ ಸಂಜೆ ಒಂದು ಅಧ್ಧೂರಿ ಸಮಾರಂಭ ಏರ್ಪಡಿಸಿ ಕಾಮತರನ್ನು ಸನ್ಮಾನಿಸಿ ಚಿನ್ನದ ಉಂಗುರ ತೋಡಿಸಿ ಬೀಳ್ಕೊಟ್ಟರು.

ನಿವೃತರಾದ ಮೇಲೆ ಕೆಲವು ದಿನಗಳ ಕಾಲ ಕಾಮತರು ಹಾಯಾಗಿಯೇ ಇದ್ದರು. ಅವರ ಮಗ ಪ್ರೊಜೆಕ್ಟ್ ನಿಮಿತ್ತ ಅಮೇರಿಕಾಗೆ ಹೋದ. ಹೆಂಡತಿಯ ಹೃದಯದ ಪರೀಕ್ಷೆಗಾಗಿ ಆಗಾಗ ಹೆಂಡತಿಯನ್ನು ಕರೆದುಕೊಂಡು ಕಾಮತರು ಬಸ್ ನಲ್ಲಿಯೇ ಮಂಗಳೂರಿಗೆ ಹೋಗುತ್ತಿದ್ದರು. ಎಲ್ಲರೂ ಅತ್ಯಂತ ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದರು.

ಸಾಯುವ ಮೊದಲು ತೀರ್ಥ ಕ್ಷೇತ್ರಗಳ ದರ್ಶನ ಮಾಡೋಣ ಎಂದು ಮಗಳು, ಅಳಿಯನ ಜೊತೆ ಮಾತಾಡಿ "ನಿರ್ಮಲ ಟ್ರಾವೆಲ್ಸ್" ಟೂರಿಂಗ್ ಏಜನ್ಸಿಯಲ್ಲಿ ಭಾರತದ ಎಲ್ಲಾ ಪುಣ್ಯ ಕ್ಷೇತ್ರಗಳ ದರ್ಶನಕ್ಕೆಂದು ೪ ಟಿಕೇಟ್ ಬುಕ್ ಮಾಡಿಸಿದರು. ಕಾಶಿ, ರಾಮೇಶ್ವರ, ಅಯೋಧ್ಯೆ,ಹ್ರಷೀಕೇಶ, ಬದರೀನಾಥ, ಕೇದಾರನಾಥಗಳ ದರ್ಶನ ಮಾಡಿದರು. ಆದರೆ ಕೇದಾರನಾಥ ಕಾಮತರ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಇವರು ಹೋದ ಸಮಯದಲ್ಲಿ ಕೇದಾರನಾಥದಲ್ಲಿ ಭಾರೀ ಮಳೆ ಪ್ರವಾಹ ಉಂಟಾಗಿ ವಾಸುದೇವ ಕಾಮತರ ಮಗಳು ಅಳಿಯ ಅವರ ಕಣ್ಣೆದುರುನಲ್ಲೇ ಜಲಸಮಾಧಿಯಾದರು. ದೇವನೆಲ ರುದ್ರಭೂಮಿಯಾಯಿತು. ಮಗಳು ಅಳಿಯನ ಸಂಸ್ಕಾರವನ್ನೂ ಮಾಡಲಾಗದೇ ಕಾಮತರು ಭಾರವಾದ ಹ್ರದಯದೊಂದಿಗೆ ಹೆಂಡತಿಯನ್ನು ಕರೆದುಕೊಂಡು ಮನೆಗೆ ಬಂದರು. ಇಡೀ ದಿನವೂ  ಗಂಡ ಹೆಂಡತಿ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಿದ್ದರು. ಮಗ ಅಮೇರಿಕಾದಿಂದ ಹಣ ಕಳಿಸುತ್ತಿದ್ದ. ಒಂದು ದಿನ ಮಗ ಫೋನ್ ಮಾಡಿದವನು "ನಾನು ನನ್ನ ಆಫೀಸಿನಲ್ಲೇ ಕೆಲಸ ಮಾಡುತ್ತಿರುವ ಒಬ್ಬ ಅಮೇರಿಕನ್ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆಯಾಗಿ ಇಲ್ಲಿಯೇ ಸೆಟ್ಲ್ ಆಗುತ್ತೇನೆ. ನೀವೂ ಸಹ ಎಷ್ಟು ದಿನ ಅಂತ ಅಲ್ಲೇ ಒದ್ದಾಡಿಕೊಂಡು ಇರುತ್ತೀರಿ, ಅಲ್ಲಿ ನಿಮ್ಮನ್ನು ನೋಡಿಕೊಳ್ಳುವವರು ಯಾರಿದ್ದಾರೆ, ನೀವೂ ಸಹ ಅಮೇರಿಕಾಕ್ಕೆ ಬಂದುಬಿಡಿ, ವೀಸಾ ಪಾಸ್ ಪೋರ್ಟ್ ವ್ಯವಸ್ಥೆ ಮಾಡುತ್ತೇನೆ" ಎಂದ. ಕಾಮತರಿಗೂ ಮತ್ತೊಂದು ಆಘಾತವಾದರೂ ಚೇತರಿಸಿಕೊಂಡು "ತಾಯ್ನಾಡನ್ನು ಯಾವ ಕಾರಣಕ್ಕೂ ಬಿಟ್ಟು ಬರುವುದಿಲ್ಲ, ನೀನು ನಮ್ಮ ಬಗ್ಗೆ ಚಿಂತಿಸಬೇಕಿಲ್ಲ, ನೀನು ಕಳಿಸುವ ಹಣವೂ ಬೇಕಾಗಿಲ್ಲ,ಹೇಗೋ ಇಲ್ಲಿಯೇ ಬದುಕಿ ಸಾಯುತ್ತೇವೆ" ಎಂದು ಆವೇಶದಿಂದ ನುಡಿದು ಕುಸಿದು ಕುಳಿತರು. ಇದಾದ ಕೆಲವು ದಿನಗಳಗಳಲ್ಲಿಯೇ  ಕಾಮತರ ಹೆಂಡತಿಯೂ  ತೀವ್ರ ಹೃದಯಾಘಾತದಿಂದ ತೀರಿಕೊಂಡರು. ನರಕ ಅಂತ ಯಾವುದಾದರೂ ಇದ್ದರೆ, ವಾಸುದೇವ ಕಾಮತರು ಅದನ್ನು ಭೂಮಿಯಲ್ಲಿಯೇ ನೋಡಿ ಅನುಭವಿಸಿಯಾಗಿತ್ತು.

"ಏ ವಿಷಯ ಗೊತ್ತಾಯ್ತಾ, ಕಾಮತರ ಹೆಂಡತಿಯೂ ತೀರಿಕೊಂಡರಂತೆ, ಪಾಪ ಅವರಿಗೆ ಹೀಗಾಗಬಾರದಾಗಿತ್ತು.ನಾವಾದರೂ ಸೇರಿ ಏನಾದರೂ ಸಹಾಯ ಮಾಡಬೇಕು ಅವರಿಗೆ" ಎಂದು ಒಬ್ಬ ಬಸ್ ನಿರ್ವಾಹಕ ಮಾತಾಡುತ್ತಿದ್ದ, ಅಷ್ಟರಲ್ಲೇ ಮತ್ತೊಬ್ಬ " ಕಾಮತರು ಹಾಗೆಲ್ಲಾ ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ ಅವರು ಸ್ವಾಭಿಮಾನಿ, ಜೀವ ಇರುವ ತನಕ ಇನ್ನೊಬ್ಬರ ಬಳಿ ಬೇಡುವುದಿಲ್ಲ, ದುಡಿದು ತಿನ್ನುತ್ತಾರೆ" ಎಂದ. ಅಷ್ಟರಲ್ಲಿ ಯಾರೋ "ತೋಡಾರ್, ಮಿಜಾರ್,ಎಡಪದವು,ಕೈಕಂಬ ಹೋಗುವವರು ಬನ್ನಿ. ಡೈರೆಕ್ಟ್ ಮಂಗ್ಳೂರಿಗೆ ಹೋಗುವವರಿಗೆ ಎಕ್ಸ್ ಪ್ರೆಸ್ ಬರ್ತದೆ, ಅದ್ರಲ್ಲಿ ಹೋಗಿ, ಇನ್ನು ಐದು ನಿಮಿಷದಲ್ಲಿ ಹೊರಡ್ತದೆ, ಒಬ್ಬೊಬ್ಬರಾಗಿ ಮೇಲೆ ಹತ್ತಿ, ಬಸ್ ಖಾಲಿ ಉಂಟು" ಎಂದು ಜೋರಾಗಿ ಕೂಗುತ್ತಿದ್ದುದು ಕೇಳಿಸಿತು. ತಿರುಗಿ ನೋಡಿದಾಗ ವಾಸುದೇವ ಕಾಮತರು ಏನೂ ಅಗಿಲ್ಲವೇನೋ ಎಂಬಂತೆ ಜನರನ್ನು ಕೂಗಿ ಕರೆದು ಬಸ್ಸಿಗೆ ಹತ್ತಿಸಿಕೊಳ್ಳುತ್ತಾ ಟಿಕೇಟ್ ಕೊಡುವುದರಲ್ಲಿ ಮಗ್ನರಾಗಿದ್ದರು…

*****                   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಉತ್ತಮವಾಗಿದೆ.

Gaviswamy
9 years ago

ಕಾಮತರ ಸ್ವಾಭಿಮಾನಿ ವ್ಯಕ್ತಿತ್ವವನ್ನು ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದೀರಿ.. ಕಥೆ ಚೆನ್ನಾಗಿದೆ .. ಅಭಿನಂದನೆಗಳು .

ವನಸುಮ
9 years ago

ವಿಧಿಯ ಆಟ ಬಲ್ಲವರಾರು ಹೇಳಿ, ಆದರೆ ಅದಕ್ಕೆ ಎದುರಾಗಿ ನಿಂತು ಧೈರ್ಯದಿಂದ ಬಾಳಿದರೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಈ ಬರಹ ನಿದರ್ಶನವಾಗಿದೆ, ಸರಳ, ಸಜ್ಜನರ ಬಾಳಿನಲ್ಲಿ ಈ ಥರಹದ ತಿರುವುಗಳು ಬಂದು ಆತನ ತಾಳ್ಮೆಯನ್ನ ಪರೀಕ್ಷಿಸುತ್ತಲೇ ಇರುತ್ತದೆ. ಇದು ವಿಪರ್ಯಾಸವೇ ಸರಿ. ತುಂಬಾ ಚೆನ್ನಾಗಿದೆ ಬರಹ, ಹಿಡಿಸಿತು.

ಶುಭವಾಗಲಿ.

Shiela
Shiela
9 years ago

ನಿರೂಪಣೆ ಚೆನ್ನಾಗಿದೆ. ಕತೆಯ ಮುಕ್ತಾಯವೂ ಇಷ್ಟವಾಯಿತು. 

 

4
0
Would love your thoughts, please comment.x
()
x